ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 18 ರಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಮಂತ್ರಿ


ದೇಶಾದ್ಯಂತದ ಸಾವಿರಾರು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Posted On: 17 JAN 2024 5:13PM by PIB Bengaluru

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ನಾಳೆ (18 ಜನವರಿ 2024 ರಂದು ) ಮಧ್ಯಾಹ್ನ 12:30 ಕ್ಕೆ ವಿಡಿಯೊ ಸಮಾವೇಶ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಾದ ನಡೆಸಲಿದ್ದಾರೆ. ಈ ಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.


ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಾವಿರಾರು ಫಲಾನುಭವಿಗಳ ಜೊತೆಗೆ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಜನ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.


ನವೆಂಬರ್ 15, 2023 ರಂದು ಪ್ರಾರಂಭವಾದಾಗಿನಿಂದ, ಪ್ರಧಾನಮಂತ್ರಿಯವರು ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸಿದ್ದಾರೆ. ಈ ವರೆಗೆ, ವಿಡಿಯೊ ಸಮಾವೇಶ ಮೂಲಕ ಸಂವಾದವು ಐದು ಬಾರಿ (30ನೇ ನವೆಂಬರ್, 9ನೇ ಡಿಸೆಂಬರ್ 16ನೇ ಡಿಸೆಂಬರ್, 27ನೇ ಡಿಸೆಂಬರ್ ಮತ್ತು 8ನೇ ಜನವರಿ, 2024) ಸಮಾವೇಶ ನಡೆದಿದೆ. ಅಲ್ಲದೆ, ಕಳೆದ ತಿಂಗಳು ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ದಿನಗಳ ಕಾಲ (ಡಿಸೆಂಬರ್ 17-18) ಸತತ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರು ವೈಯ್ಯಕ್ತಿಕವಾಗಿ ಸಂವಾದ ನಡೆಸಿದರು.


ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶದಾದ್ಯಂತ ಕೈಗೊಳ್ಳಲಾಗುತ್ತಿದ್ದು, ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಸಮಯಕ್ಕೆ ಅನುಗುಣವಾಗಿ ತಲುಪುವುದನ್ನು ಖಾತ್ರಿಪಡಿಸುವ ಮೂಲಕ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಕೂಡಾ ಹೊಂದಿದೆ.


ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದವರ ಸಂಖ್ಯೆ 15 ಕೋಟಿ ದಾಟಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಲಮಟ್ಟದಲ್ಲಿ ಆಳವಾದ ಪ್ರಭಾವವನ್ನು ಉಂಟುಮಾಡುವಲ್ಲಿ ಯಾತ್ರೆ ಕಂಡ ಯಶಸ್ಸಿಗೆ ಈ ಸಂಖ್ಯೆ ಸಾಕ್ಷಿಯಾಗಿದೆ. ವಿಕಸಿತ ಭಾರತದ ದೃಷ್ಠಿಕೋನದ ಕಡೆಗೆ ರಾಷ್ಟ್ರದಾದ್ಯಂತ ಜನರನ್ನು ವಿಕಸಿತ ಭಾರತ ಸಂಕಲ್ಪ ಯಾತ್ರೆ ಒಂದುಗೂಡಿಸುತ್ತದೆ.

****



(Release ID: 1997094) Visitor Counter : 91