ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನವರಿ 16, 17ರಂದು ಆಂಧ್ರ ಪ್ರದೇಶ ಮತ್ತು ಕೇರಳಕ್ಕೆ ಪ್ರಧಾನ ಮಂತ್ರಿ ಭೇಟಿ


ಭಾರತದ ಬಂದರುಗಳು, ಹಡಗು ಮತ್ತು ಜಲಮಾರ್ಗ ಕ್ಷೇತ್ರವನ್ನು ಪರಿವರ್ತಿಸುವ ಮಹತ್ವದ ಹೆಜ್ಜೆಯಾಗಿ, ಕೊಚ್ಚಿಯಲ್ಲಿ 4,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್ಎಲ್)ನಲ್ಲಿ 'ಹೊಸ ಡ್ರೈ ಡಾಕ್' ಮತ್ತು 'ಅಂತಾರಾಷ್ಟ್ರೀಯ ಹಡಗು ದುರಸ್ತಿ ಸೌಲಭ್ಯ (ಐಎಸ್ಆರ್ ಎಫ್)' ಉದ್ಘಾಟಿಸಲಿರುವ ಪ್ರಧಾನ ಮಂತ್ರಿ

ಹೊರರಾಷ್ಟ್ರಗಳ ಮೇಲೆ ದೇಶದ ಅವಲಂಬನೆ ತೊಡೆದುಹಾಕಲು, 'ಹೊಸ ಡ್ರೈ ಡಾಕ್' ಸಿಎಸ್ಎಲ್ ನಲ್ಲಿ ದೊಡ್ಡ ವಾಣಿಜ್ಯ ಹಡಗುಗಳ ಡಾಕಿಂಗ್ (ನಿಲುಗಡೆ)  ಸಕ್ರಿಯಗೊಳಿಸುತ್ತದೆ.

ಕೊಚ್ಚಿಯ ಪುತ್ತುವೈಪೀನ್‌ನಲ್ಲಿ ಐಒಸಿಎಲ್‌ನ ಎಲ್‌ಪಿಜಿ ಆಮದು ಟರ್ಮಿನಲ್ ಉದ್ಘಾಟಿಸಲಿರುವ ಪ್ರಧಾನಿ

ಕೇರಳದ ಗುರುವಾಯೂರ್ ದೇವಾಲಯ ಮತ್ತು ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದರ್ಶನ ಪಡೆದು ದೇವಾಲಯದಲ್ಲಿ ಪೂಜೆ ನೆರವೇರಿಸಲಿರುವ ಪ್ರಧಾನ ಮಂತ್ರಿ

ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪಾಲಸಮುದ್ರಂನಲ್ಲಿ ಕಸ್ಟಮ್ಸ್, ಪರೋಕ್ಷ ತೆರಿಗೆಗಳು ಮತ್ತು ಮಾದಕ ದ್ರವ್ಯಗಳ ರಾಷ್ಟ್ರೀಯ ಅಕಾಡೆಮಿಯ ಹೊಸ ಕ್ಯಾಂಪಸ್ ಲೋಕಾರ್ಪಣೆ ಮಾಡಲಿರುವ ಪ್ರಧಾನಿ

Posted On: 14 JAN 2024 8:35PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ಜನವರಿ 16-17ರಂದು ಆಂಧ್ರ ಪ್ರದೇಶ ಮತ್ತು ಕೇರಳಕ್ಕೆ ಭೇಟಿ ನೀಡಲಿದ್ದಾರೆ

ಪ್ರಧಾನ ಮಂತ್ರಿ ಅವರು ಜನವರಿ 16ರಂದು ಮಧ್ಯಾಹ್ನ 3.30ರ ಸುಮಾರಿಗೆ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪಾಲಸಮುದ್ರ ತಲುಪುತ್ತಾರೆ. ಕಸ್ಟಮ್ಸ್, ಪರೋಕ್ಷ ತೆರಿಗೆಗಳು ಮತ್ತು ಮಾದಕ ದ್ರವ್ಯಗಳ ರಾಷ್ಟ್ರೀಯ ಅಕಾಡೆಮಿಯ(NACIN) ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಪ್ರಧಾನ ಮಂತ್ರಿ ಅವರು ಭಾರತೀಯ ಕಂದಾಯ ಸೇವೆಯ(ಕಸ್ಟಮ್ ಮತ್ತು ಪರೋಕ್ಷ ತೆರಿಗೆಗಳು) 74 ಮತ್ತು 75ನೇ ತಂಡದ  ಅಧಿಕಾರಿ ಟ್ರೈನಿಗಳು ಮತ್ತು ಭೂತಾನ್‌ನ ರಾಯಲ್ ಸಿವಿಲ್ ಸರ್ವಿಸ್‌ನ ಅಧಿಕಾರಿ ತರಬೇತಿದಾರರೊಂದಿಗೆ ಸಂವಾದ ನಡೆಸಲಿದ್ದಾರೆ.

ಜನವರಿ 17ರಂದು ಬೆಳಗ್ಗೆ 7.30ರ ಸುಮಾರಿಗೆ ಪ್ರಧಾನ ಮಂತ್ರಿ ಅವರು ಕೇರಳದ ಗುರುವಾಯೂರ್ ದೇವರ ದರ್ಶನ ಮಾಡಿ, ದೇವಾಲಯದಲ್ಲಿ ಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ 10:30ರ ಸುಮಾರಿಗೆ ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದರ್ಶನ ಪಡೆದು, ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಿದ್ದಾರೆ. ಅದರ ನಂತರ, ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಅವರು ಬಂದರುಗಳು, ಹಡಗು ಮತ್ತು ಜಲಮಾರ್ಗ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

 

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ವಲಯಕ್ಕೆ ಪ್ರಮುಖ ಉತ್ತೇಜನ

 

ಕೊಚ್ಚಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು 4,000 ಕೋಟಿ ರೂ. ಗಿಂತ ಹೆಚ್ಚಿನ ಮೌಲ್ಯದ ಪ್ರಮುಖ 3 ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅಂದರೆ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್ಎಲ್)ನಲ್ಲಿ ಹೊಸ ಡ್ರೈ ಡಾಕ್ (ಎನ್ ಡಿ ಡಿ), ಸಿಎಸ್ಎಲ್ ನ ಅಂತಾರಾಷ್ಟ್ರೀಯ ಹಡಗು ದುರಸ್ತಿ ಸೌಲಭ್ಯ(ಐಎಸ್ಆರ್ ಎಫ್) ಮತ್ತು ಕೊಚ್ಚಿಯ ಪುತ್ತುವೈಪೀನ್‌ನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಎಲ್ಪಿಜಿ ಆಮದು ಟರ್ಮಿನಲ್. ಈ ಪ್ರಮುಖ ಮೂಲಸೌಕರ್ಯ ಯೋಜನೆಗಳು ಭಾರತದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ವಲಯವನ್ನು ಪರಿವರ್ತಿಸುವ ಮತ್ತು ಅದರಲ್ಲಿ ಸಾಮರ್ಥ್ಯ ಮತ್ತು ಸ್ವಾವಲಂಬನೆ ನಿರ್ಮಿಸುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿವೆ.

ಕೊಚ್ಚಿಯ ಸಿಎಸ್‌ಎಲ್‌ನ ಅಸ್ತಿತ್ವದಲ್ಲಿರುವ ಆವರಣದಲ್ಲಿ ಸುಮಾರು 1,800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನ್ಯೂ ಡ್ರೈ ಡಾಕ್, ಹೊಸ ಭಾರತದ ಎಂಜಿನಿಯರಿಂಗ್ ಸಾಮರ್ಥ್ಯ ಪ್ರತಿಬಿಂಬಿಸುವ ಪ್ರಮುಖ ಯೋಜನೆಯಾಗಿದೆ. 75/60 ಮೀಟರ್ ಅಗಲ, 13 ಮೀಟರ್ ಆಳ ಮತ್ತು 9.5 ಮೀಟರ್ ವರೆಗಿನ ಡ್ರಾಫ್ಟ್ ಹೊಂದಿರುವ ಈ ಒಂದು ರೀತಿಯ 310-ಮೀಟರ್ ಉದ್ದದ ಮೆಟ್ಟಿಲ ಡ್ರೈ ಡಾಕ್ ಈ ಪ್ರದೇಶದ ಅತಿದೊಡ್ಡ ಸಮುದ್ರ ಮೂಲಸೌಕರ್ಯಗಳಲ್ಲಿ ಒಂದಾಗಿದೆ. ಹೊಸ ಡ್ರೈ ಡಾಕ್ ಯೋಜನೆಯು ಭಾರವಾದ ನೆಲದ ಲೋಡಿಂಗ್ ಅನ್ನು ಹೊಂದಿದೆ. ಇದು ಭವಿಷ್ಯದ ವಿಮಾನವಾಹಕ ನೌಕೆಗಳಂತಹ 70,000 ಟನ್ ಸ್ಥಳಾಂತರದವರೆಗೆ ಮತ್ತು ದೊಡ್ಡ ವಾಣಿಜ್ಯ ಹಡಗುಗಳಂತಹ ಕಾರ್ಯತಂತ್ರದ ಸ್ವತ್ತುಗಳನ್ನು ನಿರ್ವಹಿಸಲು ಸುಧಾರಿತ ಸಾಮರ್ಥ್ಯಗಳನ್ನು ಹೊಂದಿದೆ. ಹೀಗಾಗಿ ತುರ್ತು ರಾಷ್ಟ್ರೀಯ ಅಗತ್ಯಗಳಿಗಾಗಿ ವಿದೇಶಿ ರಾಷ್ಟ್ರಗಳ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಸುಮಾರು 970 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಇಂಟರ್ನ್ಯಾಷನಲ್ ಶಿಪ್ ರಿಪೇರಿ ಫೆಸಿಲಿಟಿ (ISRF) ಯೋಜನೆಯು ತನ್ನದೇ ಆದ ವಿಶಿಷ್ಟ ಸೌಲಭ್ಯವಾಗಿದೆ. ಇದು 6000 ಟನ್ ಸಾಮರ್ಥ್ಯದ ಹಡಗು ಲಿಫ್ಟ್ ವ್ಯವಸ್ಥೆಯನ್ನು ಹೊಂದಿದೆ. ವರ್ಗಾವಣೆ ವ್ಯವಸ್ಥೆ, 6 ಕಾರ್ಯಸ್ಥಳಗಳು ಮತ್ತು ಸರಿಸುಮಾರು 1,400 ಮೀಟರ್ ಬೆರ್ತ್ ಇದು 130 ಮೀಟರ್ ಉದ್ದದ 7 ಹಡಗುಗಳಿಗೆ ಏಕಕಾಲದಲ್ಲಿ ಅವಕಾಶ ಕಲ್ಪಿಸುತ್ತದೆ. ಐಎಸ್ಆರ್ ಎಫ್ ಸಿಎಸ್ಎಲ್ ನ ಅಸ್ತಿತ್ವದಲ್ಲಿರುವ ಹಡಗು ದುರಸ್ತಿ ಸಾಮರ್ಥ್ಯಗಳನ್ನು ಆಧುನೀಕರಿಸುತ್ತದೆ ಮತ್ತು ವಿಸ್ತರಿಸುತ್ತದೆ. ಇದು ಕೊಚ್ಚಿಯನ್ನು ಜಾಗತಿಕ ಹಡಗು ದುರಸ್ತಿ ಕೇಂದ್ರವಾಗಿ ಪರಿವರ್ತಿಸುವತ್ತ ಒಂದು ದಿಟ್ಟ ಹೆಜ್ಜೆಯಾಗಿದೆ.

ಕೊಚ್ಚಿಯ ಪುತ್ತುವೈಪೀನ್‌ನಲ್ಲಿರುವ ಇಂಡಿಯನ್ ಆಯಿಲ್‌ನ ಎಲ್‌ಪಿಜಿ ಆಮದು ಟರ್ಮಿನಲ್ ಸುಮಾರು 1,236 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ, ಇದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. 15,400 ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯದೊಂದಿಗೆ, ಟರ್ಮಿನಲ್ ಈ ಪ್ರದೇಶದಲ್ಲಿ ಲಕ್ಷಾಂತರ ಮನೆಗಳು ಮತ್ತು ವ್ಯವಹಾರಗಳಿಗೆ ಎಲ್ಪಿಜಿಯ ಸ್ಥಿರ ಪೂರೈಕೆಯನ್ನು ಖಚಿತಪಡಿಸುತ್ತದೆ. ಈ ಯೋಜನೆಯು ಎಲ್ಲರಿಗೂ ಪ್ರವೇಶಿಸಬಹುದಾದ ಮತ್ತು ಕೈಗೆಟುಕುವ ಇಂಧನ ಖಾತ್ರಿಪಡಿಸುವ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ.

ಈ 3 ಯೋಜನೆಗಳ ಕಾರ್ಯಾರಂಭದೊಂದಿಗೆ, ರಾಷ್ಟ್ರದ ಹಡಗು ನಿರ್ಮಾಣ ಮತ್ತು ದುರಸ್ತಿ ಸಾಮರ್ಥ್ಯಗಳು ಮತ್ತು ಪೂರಕ ಕೈಗಾರಿಕೆಗಳು ಸೇರಿದಂತೆ ಇಂಧನ ಮೂಲಸೌಕರ್ಯಗಳ ಬೆಳವಣಿಗೆಗೆ ಉತ್ತೇಜನ ಸಿಗುತ್ತದೆ. ಯೋಜನೆಗಳು ರಫ್ತು, ಆಮದು ವ್ಯಾಪಾರವನ್ನು ಉತ್ತೇಜಿಸುತ್ತದೆ, ಸರಕು ಸಾಗಣೆ ವೆಚ್ಚಗಳನ್ನು ಕಡಿಮೆ ಮಾಡುತ್ತದೆ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಸ್ವಾವಲಂಬನೆ ತರುವ ಮೂಲಕ ಹಲವಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ.

 

ಕಸ್ಟಮ್ಸ್, ಪರೋಕ್ಷ ತೆರಿಗೆಗಳು ಮತ್ತು ಮಾದಕ ವಸ್ತುಗಳ ರಾಷ್ಟ್ರೀಯ ಅಕಾಡೆಮಿ (NACIN)

ನಾಗರಿಕ ಸೇವಾ ಸಾಮರ್ಥ್ಯ ನಿರ್ಮಾಣದ ಮೂಲಕ ಆಡಳಿತ ಸುಧಾರಿಸುವ ಪ್ರಧಾನ ಮಂತ್ರಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪಾಲಸಮುದ್ರಂನಲ್ಲಿರುವ ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಪರೋಕ್ಷ ತೆರಿಗೆಗಳು ಮತ್ತು ಮಾದಕ ದ್ರವ್ಯಗಳ (NACIN) ಹೊಸ ಅತ್ಯಾಧುನಿಕ ಕ್ಯಾಂಪಸ್ ಪರಿಕಲ್ಪನೆ ಮಾಡಿ, ನಿರ್ಮಿಸಲಾಗಿದೆ. 500 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿರುವ ಈ ಅಕಾಡೆಮಿಯು ಪರೋಕ್ಷ ತೆರಿಗೆ (ಕಸ್ಟಮ್ಸ್, ಕೇಂದ್ರೀಯ ಅಬಕಾರಿ ಮತ್ತು ಸರಕು ಮತ್ತು ಸೇವಾ ತೆರಿಗೆ) ಮತ್ತು ಮಾದಕ ದ್ರವ್ಯ ನಿಯಂತ್ರಣ ಆಡಳಿತ ಕ್ಷೇತ್ರದಲ್ಲಿ ಸಾಮರ್ಥ್ಯ ನಿರ್ಮಾಣದ ಭಾರತ ಸರ್ಕಾರದ ಉನ್ನತ ಸಂಸ್ಥೆಯಾಗಿದೆ. ರಾಷ್ಟ್ರೀಯ ಮಟ್ಟದ ವಿಶ್ವ ದರ್ಜೆಯ ತರಬೇತಿ ಸಂಸ್ಥೆಯು ಭಾರತೀಯ ಕಂದಾಯ ಸೇವೆಯ ಅಧಿಕಾರಿಗಳಿಗೆ (ಕಸ್ಟಮ್ ಮತ್ತು ಪರೋಕ್ಷ ತೆರಿಗೆಗಳು) ಹಾಗೂ ಕೇಂದ್ರೀಯ ಸಂಬಂಧಿತ ಸೇವೆಗಳು, ರಾಜ್ಯ ಸರ್ಕಾರಗಳು ಮತ್ತು ಪಾಲುದಾರ ರಾಷ್ಟ್ರಗಳಿಗೆ ತರಬೇತಿ ನೀಡುತ್ತದೆ.

ಈ ಹೊಸ ಕ್ಯಾಂಪಸ್‌ ಸೇರ್ಪಡೆಯೊಂದಿಗೆ, NACIN, ಹೊಸ ಯುಗದ ತಂತ್ರಜ್ಞಾನಗಳಾದ ಆಗ್ಮೆಂಟೆಡ್ ಮತ್ತು ವರ್ಚುವಲ್ ರಿಯಾಲಿಟಿ, ಬ್ಲಾಕ್-ಚೈನ್ ಜತೆಗೆ ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳನ್ನು ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಬಳಸುವ ಮೇಲೆ ಗಮನ ಕೇಂದ್ರೀಕರಿಸುತ್ತದೆ.

 

 

***

 


(Release ID: 1996448) Visitor Counter : 108