ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024 ಇದರ ಭಾಗವಾಗಿ ಭಾರತ-ಯುಎಇ ವ್ಯಾಪಾರ ಶೃಂಗಸಭೆ ನಡೆಯಿತು


ಶೃಂಗಸಭೆಯಲ್ಲಿ ಯುಎಇ - ಇಂಡಿಯಾ ಸಿಇಪಿಎ ಕೌನ್ಸಿಲ್ ವೆಬ್ಸೈಟ್ ಅನ್ನು ಉದ್ಘಾಟಿಸಲಾಯಿತು

"ಅನ್ಲಾಕಿಂಗ್ ಆಪರ್ಚುನಿಟೀಸ್: ಇಂಡಿಯಾ-ಯುಎಇ ಸ್ಟಾರ್ಟ್-ಅಪ್ ಇಕೋಸಿಸ್ಟಮ್ ಕನ್ವರ್ಜೆನ್ಸ್" ಶೀರ್ಷಿಕೆಯ ಸಿಐಐ ಇಂಡಿಯಾ-ಯುಎಇ ಸ್ಟಾರ್ಟ್-ಅಪ್ ಉಪಕ್ರಮದ ವರದಿಯನ್ನು ಸಹ ಬಿಡುಗಡೆ ಮಾಡಲಾಯಿತು

ಭಾರತ-ಯುಎಇ ನಡುವೆ ಸಿ.ಇ.ಪಿ.ಎ. ಜಾರಿಗೆ ಬಂದ ನಂತರ ದ್ವಿಪಕ್ಷೀಯ ವ್ಯಾಪಾರವು 15% ರಷ್ಟು ಹೆಚ್ಚಾಗಿದೆ

Posted On: 11 JAN 2024 11:57AM by PIB Bengaluru

ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024 ರ ಭಾಗವಾಗಿ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಭಾರತ-ಯುಎಇ ವ್ಯಾಪಾರ ಶೃಂಗಸಭೆಯನ್ನು 10 ನೇ ಜನವರಿ 2024 ರಂದು ನಡೆಸಲಾಯಿತು.

ಯುಎಇ ಅಧ್ಯಕ್ಷ ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024 ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದು ಎರಡು ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಸಹಕಾರ ಮತ್ತು ಬಲವರ್ಧನೆಯ ಸಂಬಂಧವನ್ನು ಮತ್ತಷ್ಟು ಒತ್ತಿಹೇಳುತ್ತದೆ. ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್  ಅವರಿಗೆ ಆತ್ಮೀಯ ಸ್ವಾಗತವನ್ನು ನೀಡಿದರು ಮತ್ತು ಭಾರತ-ಯುಎಇ ಬಾಂಧವ್ಯವನ್ನು ಹೆಚ್ಚಿಸಲು ಅವರ ಆಲೋಚನೆಗಳು ಮತ್ತು ಪ್ರಯತ್ನಗಳನ್ನು ಭಾರತವು ಗೌರವಿಸುತ್ತದೆ ಎಂದು ಹೇಳಿದರು.

ಭಾರತ-ಯುಎಇ ವ್ಯಾಪಾರ ಶೃಂಗಸಭೆಯ ಉದ್ಘಾಟನಾ ಅಧಿವೇಶನವು ಭಾರತದ ಪ್ರತಿನಿಧಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್  ಮತ್ತು ಯುಎಇ ಪ್ರತಿನಿಧಿ ಘನತೆವೆತ್ತ ಯುಎಇ ವಿದೇಶಾಂಗ ವ್ಯಾಪಾರದ ರಾಜ್ಯ ಸಚಿವ ಡಾ. ಥಾನಿ ಬಿನ್ ಅಹ್ಮದ್ ಅಲ್ ಝೆಯೋದಿಯವರಿಂದ ಪ್ರಧಾನ ಭಾಷಣಗಳನ್ನು, ಜೊತೆಗೆ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ರಜನಿಕಾಂತ್ ಪಟೇಲ್ ಅವರ ವಿಶೇಷ ಟಿಪ್ಪಣಿ ಭಾಷಣವನ್ನು ಒಳಗೊಂಡಿತ್ತು.

ಉದ್ಘಾಟನಾ ಅಧಿವೇಶನದ ಭಾಗವಾಗಿ ಯುಎಇ - ಇಂಡಿಯಾ ಸಿಇಪಿಎ ಕೌನ್ಸಿಲ್ (ಯುಐಸಿಸಿ) ವೆಬ್ಸೈಟ್ ಅನ್ನು ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್, ಘನತೆವೆತ್ತ ಡಾ. ಥಾನಿ ಬಿನ್ ಅಹ್ಮದ್ ಅಲ್ ಝೆಯೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ರಜನಿಕಾಂತ್ ಪಟೇಲ್ ಅವರು ವಿಧ್ಯುಕ್ತವಾಗಿ ಉದ್ಘಾಟನೆ ಮಾಡಿದರು. ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ರಾಷ್ಟ್ರೀಯ ಸ್ಟಾರ್ಟ್ಅಪ್ ಕೌನ್ಸಿಲ್ ಅಧ್ಯಕ್ಷ ಮತ್ತು ಸ್ನ್ಯಾಪ್ಡೀಲ್ ಮತ್ತು ಟೈಟಾನ್ ಕ್ಯಾಪಿಟಲ್ ಇದರ ಸಹ-ಸಂಸ್ಥಾಪಕ ಶ್ರೀ ಕುನಾಲ್ ಬಹ್ಲ್ ಅವರ ಭಾಷಣವು, ಈ ಅಧಿವೇಶನವು  ಭಾರತವು ಪ್ರವರ್ಧಮಾನಕ್ಕೆ ಬರುತ್ತಿರುವುದರ ಸಂಕೇತವಾಗಿ, ಸ್ಟಾರ್ಟ್ಅಪ್ ಗಳನ್ನು ಗುರುತಿಸಿ ಗೌರವಿಸುತ್ತಿದೆ ಎಂಬುದನ್ನು ತೋರಿಸಿಕೊಟ್ಟಿತು.

ಸಿಐಐ ಇಂಡಿಯಾ-ಯುಎಇ ಸ್ಟಾರ್ಟ್-ಅಪ್ ಇನಿಶಿಯೇಟಿವ್ ಕುರಿತು "ಅನ್ಲಾಕಿಂಗ್ ಆಪರ್ಚುನಿಟೀಸ್: ಇಂಡಿಯಾ-ಯುಎಇ ಸ್ಟಾರ್ಟ್-ಅಪ್ ಇಕೋಸಿಸ್ಟಮ್ ಕನ್ವರ್ಜೆನ್ಸ್" ಎಂಬ ವರದಿಯನ್ನು ಸಹ ಶೃಂಗಸಭೆಯಲ್ಲಿ ಬಿಡುಗಡೆ ಮಾಡಲಾಯಿತು. ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆಯನ್ನು ಸಿಐಐ ಅಧ್ಯಕ್ಷ ಮತ್ತು ಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್ ಲಿಮಿಟೆಡ್ನ ಅಧ್ಯಕ್ಷರಾದ ಶ್ರೀ ಆರ್. ದಿನೇಶ್ ವಹಿಸಿದ್ದರು ಮತ್ತು ಘನತೆವೆತ್ತ  ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರ ಭಾಷಣಗಳನ್ನು ಒಳಗೊಂಡಿತ್ತು. ಡಿಪಿ ವರ್ಲ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಲುಲು ಗ್ರೂಪ್ ಇಂಟರ್ನ್ಯಾಷನಲ್ ಅಧ್ಯಕ್ಷ ಎಂ.ಎ. ಯೂಸಫ್ ಆಲಿ ಅವರು ಭಾರತದಲ್ಲಿ ಆಹಾರ ಸಂಸ್ಕರಣಾ ಉದ್ಯಮದಲ್ಲಿ ಹೂಡಿಕೆಯನ್ನು ಹೆಚ್ಚಿಸುವ ತಮ್ಮ ಆಸಕ್ತಿಯನ್ನು ಪ್ರಸ್ತಾಪಿಸಿದರು.
 
ಭಾರತ-ಯುಎಇ ವ್ಯಾಪಾರ ಶೃಂಗಸಭೆಯು ವ್ಯಾಪಾರ ಹಣಕಾಸು, ಹೂಡಿಕೆ ಸುಗಮಗೊಳಿಸುವಿಕೆ ಮತ್ತು ವಲಯದ ಸಹಯೋಗದಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರಕ್ಕಾಗಿ ಕೇಂದ್ರೀಕೃತ ಚರ್ಚೆಗಳನ್ನು ಒಳಗೊಂಡಿತ್ತು.  ಭಾರತ ಮತ್ತು ಯುಎಇ ನಿಯೋಗಗಳು ಸರ್ಕಾರ ಮತ್ತು ಉದ್ಯಮದ ಪ್ರತಿನಿಧಿಗಳನ್ನು ಒಳಗೊಂಡಿತ್ತು. ಭಾರತೀಯ ರಫ್ತುದಾರರನ್ನು ಬೆಂಬಲಿಸಲು ಯುಎಇಯಲ್ಲಿ ಭಾರತವು ಸ್ಥಾಪಿಸಲು ಪ್ರಸ್ತಾಪಿಸಿದ ಉಗ್ರಾಣ ಸೌಲಭ್ಯವಾದ “ಭಾರತ್ ಮಾರ್ಟ್” ಸಂಕಲ್ಪದ ಪ್ರಸ್ತುತಿಯನ್ನು ಕೂಡಾ ಅಧಿವೇಶನವು ಒಳಗೊಂಡಿತ್ತು.

ಭಾರತ-ಯುಎಇ ವ್ಯಾಪಾರವು 2022 ರಲ್ಲಿ 85 ಶತಕೋಟಿ ಡಾಲರ್ ಗೆ ಏರಿಕೆ ಕಂಡಿತು. 2022-23 ವರ್ಷಕ್ಕೆ ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಭಾರತದ ಎರಡನೇ ಅತಿದೊಡ್ಡ ರಫ್ತು ತಾಣವಾಗಿದೆ. ಫೆಬ್ರವರಿ 2022 ರಲ್ಲಿ, ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಸಹಿ ಹಾಕಿದ ಮೊದಲ ದೇಶವಾಯಿತು. 1 ಮೇ 2022 ರಂದು ಸಿಇಪಿಎ ಜಾರಿಗೆ ಬಂದ ನಂತರ ದ್ವಿಪಕ್ಷೀಯ ವ್ಯಾಪಾರವು ಸರಿಸುಮಾರು 15% ರಷ್ಟು ಹೆಚ್ಚಾಗಿದೆ.

ಸಿ.ಇ.ಪಿ.ಎ.ಯು ಎರಡು ರಾಷ್ಟ್ರಗಳ ನಡುವಿನ ಸಹಕಾರದ ಹೊಸ ಯುಗವನ್ನು ಹುಟ್ಟುಹಾಕಲು ಮತ್ತು ದೀರ್ಘಕಾಲದ ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ ಒಂದು ಹೆಗ್ಗುರುತಾಗಿದೆ. ಇದು 80% ಕ್ಕಿಂತ ಹೆಚ್ಚು ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ, ವ್ಯಾಪಾರಕ್ಕೆ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಹೂಡಿಕೆ ಮತ್ತು ಜಂಟಿ ಉದ್ಯಮಗಳಿಗೆ ಹೊಸ ಮಾರ್ಗಗಳನ್ನು ಹಾಗೂ ಅವಕಾಶಗಳನ್ನು ಸೃಷ್ಟಿಸುತ್ತದೆ. ಸಿ.ಇ.ಪಿ.ಎ. ಅನುಷ್ಠಾನದ ಮೊದಲ 12 ತಿಂಗಳುಗಳಲ್ಲಿ, ದ್ವಿಪಕ್ಷೀಯ ತೈಲೇತರ ವ್ಯಾಪಾರವು 50.5 ಶತಕೋಟಿ ಡಾಲರ್ ಅನ್ನು ತಲುಪಿತು, ಇದು ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ 5.8% ರಷ್ಟು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. 2030 ರ ವೇಳೆಗೆ 100 ಬಿಲಿಯನ್ ಡಾಲರ್ ತೈಲೇತರ ವ್ಯಾಪಾರದ ಗುರಿಯತ್ತ ಉಭಯ ದೇಶಗಳು ವೇಗಗತಿಯಲ್ಲಿ ಚಲಿಸುತ್ತಿವೆ.

ದೇಶಗಳ ಗಡಿಯಾಚೆಗಿನ ವಹಿವಾಟುಗಳಿಗಾಗಿ ಸ್ಥಳೀಯ ಹಣ(ಕರೆನ್ಸಿ)ಗಳ (ಐ.ಎಲ್.ಆರ್.-ಎ.ಇ.ಡಿ) ಬಳಕೆಯನ್ನು ಉತ್ತೇಜಿಸಲು ಸೂಕ್ತ ಚೌಕಟ್ಟನ್ನು ಸ್ಥಾಪಿಸಲು ತಿಳುವಳಿಕೆ ಒಪ್ಪಂದವನ್ನು ಜುಲೈ 2023 ರಲ್ಲಿ ಆಯಾ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ಗಳು ಸಹಿ ಮಾಡಿದ್ದಾರೆ. ಸ್ಥಳೀಯ ಹಣದಲ್ಲಿ ವ್ಯವಹಾರ(ಕರೆನ್ಸಿ ಸೆಟಲ್ಮೆಂಟ್)ವನ್ನು ಅಭಿವೃದ್ಧಿಪಡಿಸುವುದು ದ್ವಿಪಕ್ಷೀಯ ವ್ಯಾಪಾರವನ್ನು ಇತ್ಯರ್ಥಪಡಿಸುವ ಈ ಉಪಕ್ರಮವು ಎರಡು ದೇಶಗಳ ನಡುವಿನ ವ್ಯವಸ್ಥೆಗಳ ನಡುವಿನ ಪರಸ್ಪರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಮತ್ತು ಎರಡೂ ದೇಶಗಳಲ್ಲಿನ ಆರ್ಥಿಕತೆಯ ದೃಢತೆಯನ್ನು ಒತ್ತಿಹೇಳುತ್ತದೆ.

ಯುಎಇ-ಭಾರತ ವ್ಯಾಪಾರ ಶೃಂಗಸಭೆಯು ಪರಸ್ಪರ ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಭಾರತ-ಯುಎಇ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ವೇಗಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ.

***


(Release ID: 1995234) Visitor Counter : 115