ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 12ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿಗಳು


ಮಹಾರಾಷ್ಟ್ರದಲ್ಲಿ 30,500 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

ಸುಗಮ ಸಾರಿಗೆಗೆ ಅನುವುಮಾಡುವ ಮಹತ್ವದ ಹೆಜ್ಜೆಯಾಗಿ ʻಅಟಲ್ ಬಿಹಾರಿ ವಾಜಪೇಯಿ ಸೇವಾರಿ - ನಾವ ಶೇವಾ ಅಟಲ್ ಸೇತುʼ ಉದ್ಘಾಟಿಸಲಿರುವ  ಪ್ರಧಾನಿ

ಸುಮಾರು 17,840 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ʻಅಟಲ್ ಸೇತುʼ ಭಾರತದ ಅತಿ ಉದ್ದದ ಸೇತುವೆ ಮತ್ತು ದೇಶದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ

ʻಈಸ್ಟರ್ನ್ ಫ್ರೀವೇʼಯ ʻಆರೆಂಜ್ ಗೇಟ್ʼನಿಂದ ʻಮರೀನ್ ಡ್ರೈವ್ʼಗೆ ಸಂಪರ್ಕ ಕಲ್ಪಿಸುವ ಭೂಗತ ರಸ್ತೆ ಸುರಂಗಕ್ಕೆ ಪ್ರಧಾನಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ರತ್ನ ಮತ್ತು ಆಭರಣ ವಲಯವನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ, ʻಎಸ್ಇಇಪಿಝಡ್ ಎಸ್ಇಝಡ್‌ʼನಲ್ಲಿ 'ಭಾರತ ರತ್ನಂ' ಹಾಗೂ ʻಹೊಸ ಉದ್ಯಮಗಳು ಮತ್ತು ಸೇವೆಗಳ ಗೋಪುರ (ಎನ್ಇಎಸ್‌ಟಿ) 01ʼ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ

ರೈಲು ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ

ಮಹಿಳಾ ಸಬಲೀಕರಣದ ಮತ್ತೊಂದು ಉಪಕ್ರಮವಾಗಿ, ಮಹಾರಾಷ್ಟ್ರದಲ್ಲಿ ʻನಮೋ ಮಹಿಳಾ ಸಶಕ್ತೀಕರಣʼ ಅಭಿಯಾನಕ್ಕೂ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ

27ನೇ ರಾಷ್ಟ್ರೀಯ ಯುವ ಉತ್ಸವ ಉದ್ಘಾಟಿಸಲಿರುವ ಪ್ರಧಾನಿ

ಈ ಉತ್ಸವದ ವಿಷಯವಸ್ತು- ʻವಿಕಸಿತ ಭಾರತ@ 2047: ಯುವಕರಿಗಾಗಿ ಯುವಕರಿಂದʼ


Posted On: 11 JAN 2024 11:12AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜನವರಿ 12ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12:15ಕ್ಕೆ ಪ್ರಧಾನಮಂತ್ರಿಯವರು ನಾಸಿಕ್ ತಲುಪಲಿದ್ದು, ಅಲ್ಲಿ ಅವರು 27ನೇ ʻರಾಷ್ಟ್ರೀಯ ಯುವ ಉತ್ಸವʼವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3:30ರ ಸುಮಾರಿಗೆ ಮುಂಬೈನಲ್ಲಿ ಪ್ರಧಾನಮಂತ್ರಿಯವರು ʻಅಟಲ್ ಬಿಹಾರಿ ವಾಜಪೇಯಿ ಸೇವಾರಿ - ನಾವಶೇವಾ ಅಟಲ್ ಸೇತುʼವನ್ನು ಉದ್ಘಾಟಿಸಲಿದ್ದಾರೆ ಮತ್ತು ಪ್ರಯಾಣಿಸಲಿದ್ದಾರೆ. ಸಂಜೆ 4:15 ರ ಸುಮಾರಿಗೆ ಪ್ರಧಾನಮಂತ್ರಿಯವರು ನವೀ ಮುಂಬೈನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ಅಟಲ್ ಬಿಹಾರಿ ವಾಜಪೇಯಿ ಸೇವಾರಿ - ನಾವ ಶೇವಾ ಅಟಲ್ ಸೇತು ನಗರ ಸಾರಿಗೆ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಬಲಪಡಿಸುವ ಮೂಲಕ ನಾಗರಿಕರ 'ಸುಗಮ ಸಂಚಾರ' ಸುಧಾರಿಸುವುದು ಪ್ರಧಾನ ಮಂತ್ರಿಯವರ ಆಶಯವಾಗಿದೆ. ಈ ಆಶಯಕ್ಕೆ ಅನುಗುಣವಾಗಿ, ಈಗ 'ಅಟಲ್ ಬಿಹಾರಿ ವಾಜಪೇಯಿ ಸೇವಾರಿ - ನವಾ ಶೇವಾ ಅಟಲ್ ಸೇತು' ಎಂದು ಹೆಸರಿಸಲಾದ ʻಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ʼ (ಎಂಟಿಎಚ್‌ಎಲ್) ಅನ್ನು ನಿರ್ಮಿಸಲಾಗಿದೆ. ಈ ಸೇತುವೆಗೆ ಪ್ರಧಾನಮಂತ್ರಿಯವರು 2016ರ ಡಿಸೆಂಬರ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

ʻಅಟಲ್ ಸೇತುʼವನ್ನು ಒಟ್ಟು 17,840 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 21.8 ಕಿ.ಮೀ ಉದ್ದದ 6 ಪಥದ ಸೇತುವೆಯಾಗಿದ್ದು, ಸಮುದ್ರದ ಮೇಲೆ ಸುಮಾರು 16.5 ಕಿ.ಮೀ ಉದ್ದ ಮತ್ತು ಭೂಮಿಯಲ್ಲಿ ಸುಮಾರು 5.5 ಕಿ.ಮೀ ಉದ್ದವಿದೆ. ಇದು ಭಾರತದ ಅತಿ ಉದ್ದದ ಸೇತುವೆ ಮತ್ತು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಇದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವೀ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಒದಗಿಸುವುದರ ಜೊತೆಗೆ ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಇದು ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರಿನ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.

ನವೀ ಮುಂಬೈನಲ್ಲಿ ಸಾರ್ವಜನಿಕ ಕಾರ್ಯಕ್ರಮ ಪ್ರಧಾನಮಂತ್ರಿಯವರು ನವೀ ಮುಂಬೈನಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ 12,700 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ  ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ʻಈಸ್ಟರ್ನ್ ಫ್ರೀವೇʼಯ ಆರೆಂಜ್ ಗೇಟ್‌ನಿಂದ ʻಮರೀನ್ ಡ್ರೈವ್ʼಗೆ ಸಂಪರ್ಕ ಕಲ್ಪಿಸುವ ಭೂಗತ ರಸ್ತೆ ಸುರಂಗಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 9.2 ಕಿ.ಮೀ ಉದ್ದದ ಸುರಂಗವನ್ನು 8700 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುವುದು.ಇದು ಮುಂಬೈನಲ್ಲಿ ಮಹತ್ವದ ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ, ಇದು ʻಆರೆಂಜ್ ಗೇಟ್ʼ ಮತ್ತು ʻಮರೈನ್ ಡ್ರೈವ್ʼ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.

ಪ್ರಧಾನಮಂತ್ರಿಯವರು ʻಸೂರ್ಯʼ ಪ್ರಾದೇಶಿಕ ಬೃಹತ್ ಕುಡಿಯುವ ನೀರಿನ ಯೋಜನೆಯ ಮೊದಲ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 1975 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಮಹಾರಾಷ್ಟ್ರದ ಪಾಲ್ಘರ್ ಮತ್ತು ಥಾಣೆ ಜಿಲ್ಲೆಗೆ ಕುಡಿಯುವ ನೀರು ಸರಬರಾಜು ಮಾಡುತ್ತದೆ, ಸುಮಾರು 14 ಲಕ್ಷ ಜನಸಂಖ್ಯೆಗೆ ಪ್ರಯೋಜನವನ್ನು ನೀಡುತ್ತದೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಸುಮಾರು 2000 ಕೋಟಿ ರೂ.ಗಳ ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ನವೀ ಮುಂಬೈಗೆ ಸಂಪರ್ಕವನ್ನು ಹೆಚ್ಚಿಸುವ 'ಉರಾನ್-ಖಾರ್ಕೋಪರ್ʼ ರೈಲ್ವೆ ಮಾರ್ಗದ 2 ನೇ ಹಂತದ ಸಮರ್ಪಣೆಯೂ ಇದರಲ್ಲಿ ಸೇರಿದೆ. ನೆರೂಲ್ / ಬೇಲಾಪುರದಿಂದ ಖಾರ್ಕೋಪರ್ ನಡುವೆ ಚಲಿಸುವ ಉಪನಗರ ಸೇವೆಗಳನ್ನು ಈಗ ಉರಾನ್‌ವರೆಗೆ ವಿಸ್ತರಿಸಲಾಗಿದೆ. ಪ್ರಧಾನಮಂತ್ರಿಯವರು ಉರಾನ್ ರೈಲ್ವೆ ನಿಲ್ದಾಣದಿಂದ ಖಾರ್ಕೋಪರ್ ವರೆಗಿನ ʻಇಎಂಯುʼ ರೈಲಿನ ಮೊದಲ ಸಂಚಾರಕ್ಕೂ ಹಸಿರು ನಿಶಾನೆ ತೋರಲಿದ್ದಾರೆ.
ರಾಷ್ಟ್ರಕ್ಕೆ ಸಮರ್ಪಿಸಲಿರುವ ಇತರ ರೈಲು ಯೋಜನೆಗಳಲ್ಲಿ ಥಾಣೆ-ವಾಶಿ / ಪನ್ವೇಲ್ ಟ್ರಾನ್ಸ್-ಹಾರ್ಬರ್ ಮಾರ್ಗದಲ್ಲಿ ಹೊಸ ಉಪನಗರ ನಿಲ್ದಾಣ 'ದಿಘಾ ಗಾಂವ್' ಮತ್ತು ಖಾರ್ ರಸ್ತೆ ಮತ್ತು ಗೋರೆಗಾಂವ್ ರೈಲ್ವೆ ನಿಲ್ದಾಣದ ನಡುವಿನ ಹೊಸ 6ನೇ ಮಾರ್ಗ ಸೇರಿವೆ. ಈ ಯೋಜನೆಗಳು ಮುಂಬೈನ ಸಾವಿರಾರು ದೈನಂದಿನ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತವೆ.

ಪ್ರಧಾನಮಂತ್ರಿಯವರು ʻಸಾಂತಾಕ್ರೂಜ್ ಎಲೆಕ್ಟ್ರಾನಿಕ್ ರಫ್ತು ಸಂಸ್ಕರಣಾ ವಲಯ- ವಿಶೇಷ ಆರ್ಥಿಕ ವಲಯʼದಲ್ಲಿ(ಎಸ್ಇಇಪಿಜೆಡ್ ಎಸ್ಇಝಡ್) ರತ್ನ ಮತ್ತು ಆಭರಣ ವಲಯಕ್ಕೆ 'ಭಾರತ ರತ್ನಂ'(ಬೃಹತ್‌ ಸಾಮಾನ್ಯ ಸೌಕರ್ಯ ಕೇಂದ್ರ-ಮೆಗಾ ಸಿಎಫ್‌ಸಿ) ಅನ್ನು ಉದ್ಘಾಟಿಸಲಿದ್ದಾರೆ. ಇದು ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳು ಸೇರಿದಂತೆ ಈ ವಲಯದ ಕಾರ್ಯಪಡೆಯ ಕೌಶಲ್ಯಕ್ಕಾಗಿ ತರಬೇತಿ ಶಾಲೆಯನ್ನು ಹೊಂದಿರುತ್ತದೆ. ʻಮೆಗಾ ಸಿಎಫ್‌ಸಿʼಯು ರತ್ನ ಮತ್ತು ಆಭರಣ ವ್ಯಾಪಾರದಲ್ಲಿ ರಫ್ತು ವಲಯದಲ್ಲಿ ಪರಿವರ್ತನೆಗೆ ದಾರಿ ಮಾಡಲಿದೆ ಮತ್ತು ದೇಶೀಯ ಉತ್ಪಾದನೆಗೂ ಸಹಾಯಕವಾಗಲಿದೆ.

ಪ್ರಧಾನಮಂತ್ರಿಯವರು ʻಎಸ್ಇಇಪಿಝಡ್-ಎಸ್ಇಝಡ್‌ʼನಲ್ಲಿ ʻಹೊಸ ಉದ್ಯಮಗಳು ಮತ್ತು ಸೇವೆಗಳ ಗೋಪುರ(ಎನ್ಇಎಸ್‌ಟಿ)-01ʼ ಅನ್ನು ಉದ್ಘಾಟಿಸಲಿದ್ದಾರೆ. ಎನ್ಇಎಸ್‌ಟಿ - 01ʼ ಪ್ರಾಥಮಿಕವಾಗಿ ರತ್ನ ಮತ್ತು ಆಭರಣ ವಲಯದ ಘಟಕಗಳಿಗೆ ಮೀಸಲಾಗಿದ್ದು, ಇದನ್ನು ಅಸ್ತಿತ್ವದಲ್ಲಿರುವ ʻಸ್ಟ್ಯಾಂಡರ್ಡ್ ಡಿಸೈನ್ ಫ್ಯಾಕ್ಟರಿ -1ʼ ರಿಂದ ಸ್ಥಳಾಂತರಿಸಲಾಗುವುದು. ಹೊಸ ಗೋಪುರವನ್ನು ದೊಡ್ಡ ಪ್ರಮಾಣದ ಉತ್ಪಾದನೆಗಾಗಿ ಮತ್ತು ಉದ್ಯಮದ ಬೇಡಿಕೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು ʻನಮೋ ಮಹಿಳಾ ಸಶಕ್ತಿಕರಣʼ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉದ್ಯಮಶೀಲತೆ ಅಭಿವೃದ್ಧಿಗೆ ಒಡ್ಡಿಕೊಳ್ಳಲು ಅವಕಾಶ ನೀಡುವ ಮೂಲಕ ಮಹಾರಾಷ್ಟ್ರ ರಾಜ್ಯದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಈ ಅಭಿಯಾನದಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳ ಸಂಯೋಜನೆ ಮತ್ತು ಶೇ. 100 ಅನುಷ್ಠಾನ ಪ್ರಯತ್ನವನ್ನು ಸಹ ನಡಸಲಾಗುವುದು.

27ನೇ ರಾಷ್ಟ್ರೀಯ ಯುವ ಉತ್ಸವ
ದೇಶದ ಅಭಿವೃದ್ಧಿಯ ಪಯಣದಲ್ಲಿ ಯುವಕರನ್ನು ಪ್ರಮುಖ ಭಾಗವನ್ನಾಗಿ ಮಾಡಲು ಪ್ರಧಾನಿಯವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ಪ್ರಯತ್ನದ ಮತ್ತೊಂದು ಪ್ರಯತ್ನವಾಗಿ, ಪ್ರಧಾನ ಮಂತ್ರಿ ಅವರು ನಾಸಿಕ್‌ನಲ್ಲಿ 27ನೇ ʻರಾಷ್ಟ್ರೀಯ ಯುವ ಉತ್ಸವʼವನ್ನು (ಎನ್‌ವೈಎಫ್)ಉದ್ಘಾಟಿಸಲಿದ್ದಾರೆ.

ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12ರಂದು ಈ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಜನವರಿ 16ರವರೆಗೆ ನಡೆಯಲಿದೆ. ಈ ವರ್ಷದ ಉತ್ಸವದ ಆತಿಥ್ಯ ರಾಜ್ಯ ಮಹಾರಾಷ್ಟ್ರ. ಈ ವರ್ಷದ ಉತ್ಸವದ ವಿಷಯವಸ್ತು: ʻವಿಕಸಿತ ಭಾರತ@2047:ಯುವಕರಿಂದ, ಯುವಕರಿಗಾಗಿʼ. 

ʻಏಕ್ ಭಾರತ-ಶ್ರೇಷ್ಠ ಭಾರತʼದ ಆಶಯದಡಿ ಭಾರತದ ವಿವಿಧ ಪ್ರದೇಶಗಳ ಯುವಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಏಕೀಕೃತ ರಾಷ್ಟ್ರದ ಅಡಿಪಾಯವನ್ನು ಬಲಪಡಿಸಲು ಒಂದು ವೇದಿಕೆಯನ್ನು ರಚಿಸಲು ಈ ಯುವ ಉತ್ಸವವು ಪ್ರಯತ್ನಿಸುತ್ತದೆ. ನಾಸಿಕ್‌ನಲ್ಲಿ ನಡೆಯಲಿರುವ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 7500 ಯುವ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಪ್ರದರ್ಶನಗಳು, ದೇಶೀಯ ಕ್ರೀಡೆಗಳು, ಡಿಕ್ಲಾಮೇಷನ್ ಮತ್ತು ವಿಷಯಾಧಾರಿತ ಪ್ರಸ್ತುತಿ, ಯುವ ಕಲಾವಿದರ ಶಿಬಿರ, ಪೋಸ್ಟರ್ ತಯಾರಿಕೆ, ಕಥೆ ಬರೆಯುವುದು, ಯುವ ಸಮಾವೇಶ, ಆಹಾರ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಇದರ ಭಾಗವಾಗಿ ಆಯೋಜಿಸಲಾಗುವುದು.

******



(Release ID: 1995158) Visitor Counter : 73