ಪ್ರಧಾನ ಮಂತ್ರಿಯವರ ಕಛೇರಿ

​​​​​​​ಅಖಿಲ ಭಾರತ ಮಹಾನಿರ್ದೇಶಕರು/ ಪೊಲೀಸ್ ಮಹಾನಿರೀಕ್ಷಕರ ಸಮ್ಮೇಳನದಲ್ಲಿ ಪ್ರಧಾನಮಂತ್ರಿ  ಭಾಗಿ


2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು, ಭಾರತೀಯ ಪೊಲೀಸರು ಆಧುನಿಕ ಮತ್ತು ವಿಶ್ವ ದರ್ಜೆಯ ಪೊಲೀಸ್ ಪಡೆಯಾಗಿ ಬದಲಾಗಬೇಕು: ಪ್ರಧಾನಿ

ಹೊಸ ಪ್ರಮುಖ ಕ್ರಿಮಿನಲ್ ಕಾನೂನುಗಳ ಜಾರಿಯು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಒಂದು ಮಾದರಿ ಬದಲಾವಣೆಯಾಗಿದೆ: PM

‘ನಾಗರಿಕ ಮೊದಲು, ಘನತೆ ಮೊದಲು ಮತ್ತು ನ್ಯಾಯ ಮೊದಲು’ ಎಂಬ ಮನೋಭಾವದಿಂದ ಹೊಸ ಕ್ರಿಮಿನಲ್ ಕಾನೂನುಗಳನ್ನು ರೂಪಿಸಲಾಗಿದೆ: ಪ್ರಧಾನಿ

ಮಹಿಳೆಯರು ನಿರ್ಭೀತಿಯಿಂದ ‘ಕಭಿ ಭಿ ಔರ್ ಕಹೀಂ ಭಿ’ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಮಹಿಳಾ ಸುರಕ್ಷತೆಯತ್ತ ಗಮನ ಹರಿಸುವಂತೆ ಪೊಲೀಸರಿಗೆ ಪ್ರಧಾನಮಂತ್ರಿ ಸಲಹೆ ನೀಡಿದರು.

ನಾಗರಿಕರ ಅನುಕೂಲಕ್ಕಾಗಿ ಸಕಾರಾತ್ಮಕ ಮಾಹಿತಿ ಮತ್ತು ಸಂದೇಶಗಳನ್ನು ಪ್ರಸಾರ ಮಾಡಲು ಪೊಲೀಸ್ ಠಾಣೆಗಳು ಸಾಮಾಜಿಕ ಮಾಧ್ಯಮವನ್ನು ಬಳಸಬೇಕು: ಪ್ರಧಾನಮಂತ್ರಿ

Posted On: 07 JAN 2024 8:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ಜನವರಿ 6 ಮತ್ತು 7 ರಂದು ಜೈಪುರದ ರಾಜಸ್ಥಾನ ಇಂಟರ್‌ ನ್ಯಾಷನಲ್‌ ಸೆಂಟರ್‌ನಲ್ಲಿ ಡೈರೆಕ್ಟರ್ ಜನರಲ್‌ಗಳು / ಇನ್‌ಸ್ಪೆಕ್ಟರ್ ಜನರಲ್‌ಗಳ 58 ನೇ ಅಖಿಲ ಭಾರತ ಸಮ್ಮೇಳನದಲ್ಲಿ ಭಾಗವಹಿಸಿದರು.

ಹೊಸ ಕ್ರಿಮಿನಲ್ ಕಾನೂನುಗಳ ಜಾರಿ ಕುರಿತು ಚರ್ಚಿಸಿದ ಪ್ರಧಾನಿ, ಈ ಕಾನೂನುಗಳ ಜಾರಿಯು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಒಂದು ಮಾದರಿ ಬದಲಾವಣೆಯಾಗಿದೆ ಎಂದು ಹೇಳಿದರು. ಹೊಸ ಕ್ರಿಮಿನಲ್ ಕಾನೂನುಗಳನ್ನು ‘ನಾಗರಿಕ ಮೊದಲು, ಘನತೆ ಮೊದಲು ಮತ್ತು ನ್ಯಾಯ ಮೊದಲು’ ಎಂಬ ಮನೋಭಾವದಿಂದ ರೂಪಿಸಲಾಗಿದೆ ಮತ್ತು ಪೊಲೀಸರು ‘ದಂಡಾ’ದಿಂದ ಕೆಲಸ ಮಾಡುವ ಬದಲು ಈಗ ‘ಡೇಟಾ’ದೊಂದಿಗೆ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು. ಹೊಸದಾಗಿ ಜಾರಿಗೆ ತಂದಿರುವ ಕಾನೂನುಗಳ ಹಿಂದಿನ ಭಾವನಾತ್ಮಕ ಮನೋಭಾವವನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸಲು  ಯೋಚಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಪ್ರಧಾನಮಂತ್ರಿ ಸಲಹೆ ನೀಡಿದರು. ಹೊಸ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಒದಗಿಸಲಾದ ಅವರ ಹಕ್ಕುಗಳು ಮತ್ತು ರಕ್ಷಣೆಯ ಬಗ್ಗೆ ಮಹಿಳೆಯರು ಮತ್ತು ಯುವತಿಯರನ್ನು, ಬಾಲಕಿಯರನ್ನು ಸಂವೇದನಾಶೀಲಗೊಳಿಸಲು ವಿಶೇಷ ಗಮನಹರಿಸಬೇಕು ಎಂದು ಹೇಳಿದರು. ಮಹಿಳೆಯರು ನಿರ್ಭೀತಿಯಿಂದ ‘ಕಭಿ ಭಿ ಔರ್ ಕಹೀಂ ಭಿ’ (ಯಾವುದೇ ಸಮಯದಲ್ಲಿ ಎಲ್ಲಿಯಾದರೂ) ಕೆಲಸ ಮಾಡಬಹುದೆಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಮಹಿಳಾ ಸುರಕ್ಷತೆಯತ್ತ ಗಮನ ಹರಿಸುವಂತೆ ಪೊಲೀಸರಿಗೆ ಸೂಚಿಸಿದರು.

ನಾಗರಿಕರಲ್ಲಿ ಪೊಲೀಸರ ಸಕಾರಾತ್ಮಕ ಚಿತ್ರಣವನ್ನು ಬಲಪಡಿಸುವ ಅಗತ್ಯವಿದೆ. ನಾಗರಿಕರ ಅನುಕೂಲಕ್ಕಾಗಿ ಧನಾತ್ಮಕ ಮಾಹಿತಿ ಮತ್ತು ಸಂದೇಶಗಳನ್ನು ಪ್ರಸಾರ ಮಾಡಲು ಪೊಲೀಸ್ ಠಾಣೆ ಮಟ್ಟದಲ್ಲಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವಂತೆ ಪ್ರಧಾನಮಂತ್ರಿ ಸಲಹೆ ನೀಡಿದರು. ನೈಸರ್ಗಿಕ ವಿಕೋಪಗಳು ಮತ್ತು ವಿಪತ್ತು ಪರಿಹಾರದ ಬಗ್ಗೆ ಮುಂಗಡ ಮಾಹಿತಿಯನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸಲು ಅವರು ಸಲಹೆ ನೀಡಿದರು. ನಾಗರಿಕ-ಪೊಲೀಸ್ ಸಂಪರ್ಕವನ್ನು ಬಲಪಡಿಸುವ ಮಾರ್ಗವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲು ಸಲಹೆ ನೀಡಿದರು. ಈ ಗಡಿ ಗ್ರಾಮಗಳು ಭಾರತದ ಮೊದಲ ಗ್ರಾಮಗಳಾಗಿರುವುದರಿಂದ ಸ್ಥಳೀಯ ಜನರೊಂದಿಗೆ ಉತ್ತಮ 'ಸಂಪರ್ಕ' ಸ್ಥಾಪಿಸಲು ಗಡಿ ಗ್ರಾಮಗಳಲ್ಲಿ ಉಳಿಯುವಂತೆ ಅವರು ಸರ್ಕಾರಿ ಅಧಿಕಾರಿಗಳನ್ನು ಒತ್ತಾಯಿಸಿದರು.

ಭಾರತದ ಮೊದಲ ಸೌರ ಮಿಷನ್ - ಆದಿತ್ಯ-ಎಲ್ 1 ಮತ್ತು ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ಅಪಹರಣಕ್ಕೊಳಗಾದ ಹಡಗಿನಿಂದ 21 ಸಿಬ್ಬಂದಿಯನ್ನು ಶೀಘ್ರವಾಗಿ ರಕ್ಷಿಸಿದ್ದು ಸ್ವಾಗತಾರ್ಹ. ಇಂತಹ ಸಾಧನೆಗಳು ಭಾರತವು ವಿಶ್ವದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು. . ಆದಿತ್ಯ-ಎಲ್1 ಯಶಸ್ಸು ಚಂದ್ರಯಾನ-3 ಮಿಷನ್‌ನ ಯಶಸ್ಸಿನಂತೆಯೇ ಇದೆ. ಭಾರತೀಯ ನೌಕಾಪಡೆಯ ಯಶಸ್ವಿ ಕಾರ್ಯಾಚರಣೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಸುಧಾರಿತ ಜಾಗತಿಕ ಪ್ರೊಫೈಲ್ ಮತ್ತು ದೇಶದ ಹೆಚ್ಚುತ್ತಿರುವ ರಾಷ್ಟ್ರೀಯ ಶಕ್ತಿಗೆ ಅನುಗುಣವಾಗಿ, 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಭಾರತೀಯ ಪೊಲೀಸರು ಆಧುನಿಕ ಮತ್ತು ವಿಶ್ವ ದರ್ಜೆಯ ಪೊಲೀಸ್ ಪಡೆಯಾಗಿ ಬದಲಾಗಬೇಕು ಎಂದು ಅವರು ಹೇಳಿದರು.

ವಿಶೇಷ ಸೇವೆಗಳಿಗಾಗಿ ಪೊಲೀಸ್ ಪದಕವನ್ನು ಪ್ರಧಾನಮಂತ್ರಿ ವಿತರಿಸಿದರು. ಜೈಪುರದಲ್ಲಿ ಮೂರು ದಿನಗಳ DGsP/IGsP ಸಮ್ಮೇಳನ ಸಮಾಪ್ತಗೊಂಡಿತು.

ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಗೃಹ ಖಾತೆಯ ರಾಜ್ಯ ಸಚಿವರು, ಕೇಂದ್ರ ಗೃಹ ಕಾರ್ಯದರ್ಶಿ, ರಾಜ್ಯಗಳು/ಕೇಂದ್ರಾಡಳಿ ಪ್ರದೇಶಗಳ ಡಿಜಿಎಸ್‌ಪಿ/ಐಜಿಎಸ್‌ಪಿ ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳು/ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮುಖ್ಯಸ್ಥರು, ಇತರರು ಭಾಗವಹಿಸಿದ್ದರು. ಹಿಂದಿನ ವರ್ಷಗಳಂತೆ, ಸಮ್ಮೇಳನವನ್ನು ಹೈಬ್ರಿಡ್ ಮೋಡ್‌ನಲ್ಲಿ ನಡೆಸಲಾಗಿದ್ದು, ದೇಶದಾದ್ಯಂತ ವಿವಿಧ ಸ್ಥಳಗಳಿಂದ ವಿವಿಧ ಶ್ರೇಣಿಯ 500 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಹೊಸದಾಗಿ ಜಾರಿಗೆ ತಂದ ಪ್ರಮುಖ ಕ್ರಿಮಿನಲ್ ಕಾನೂನುಗಳು, ಭಯೋತ್ಪಾದನೆ ನಿಗ್ರಹ ತಂತ್ರಗಳು, ಎಡಪಂಥೀಯ ಉಗ್ರವಾದ, ಉದಯೋನ್ಮುಖ ಸೈಬರ್ ಬೆದರಿಕೆಗಳು, ವಿಶ್ವಾದ್ಯಂತ ಆಮೂಲಾಗ್ರ ಉಪಕ್ರಮಗಳು ಸೇರಿದಂತೆ ರಾಷ್ಟ್ರೀಯ ಭದ್ರತೆಯ ನಿರ್ಣಾಯಕ ಅಂಶಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಯಿತು.

****(Release ID: 1994144) Visitor Counter : 81