ಸಹಕಾರ ಸಚಿವಾಲಯ
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಹೊಸದಿಲ್ಲಿಯಲ್ಲಿ ನವ ದೆಹಲಿಯಲ್ಲಿ ಹೆಸರು ಕಾಳು ಉತ್ಪಾದಿಸುವ ರೈತರಿಗಾಗಿ ಎನ್‌ಎಎಫ್‌ಇಡಿ ಮತ್ತು ಎನ್ ಸಿಸಿಎಫ್ ನಿಂದ ನೋಂದಣಿ, ಖರೀದಿ ಮತ್ತು ಪಾವತಿಗಾಗಿ ಅಭಿವೃದ್ಧಿಪಡಿಸಿದ ಪೋರ್ಟಲ್ ಗೆ ಚಾಲನೆ ನೀಡಿದರು.
ಇಂದಿನ ಆರಂಭವು ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ನಾಂದಿಯಾಗಿದೆ
ಉತ್ಪಾದನೆಗೂ ಮುನ್ನವೇ ಈ ಪೋರ್ಟಲ್ ನಲ್ಲಿ ನೋಂದಾಯಿಸಿದ ಎಲ್ಲ ರೈತರಿಂದ ಬೇಳೆಕಾಳುಗಳನ್ನು ಖರೀದಿಸುತ್ತೇವೆ...ಇದು ಪ್ರಧಾನಿ ಮೋದಿಯವರ ಗ್ಯಾರಂಟಿ
ಯಾವುದೇ ಭ್ರಷ್ಟಾಚಾರವಿಲ್ಲದೆ ರೈತರ ಉತ್ಪನ್ನಗಳ ಮೌಲ್ಯ ನೇರವಾಗಿ ಅವರ ಖಾತೆಗೆ ಬರಲಿದೆ
10 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೆಚ್ಚಿಸಿದಷ್ಟು ಎಂಎಸ್‌ಪಿಯನ್ನು ಯಾವುದೇ ಸರ್ಕಾರಗಳು ಹೆಚ್ಚಿಸಿಲ್ಲ.
“ಸಹಕಾರದಿಂದ ಸಮೃದ್ಧಿ” ಎಂದರೆ “ಸಹಕಾರದ ಮೂಲಕ ರೈತರ ಸಮೃದ್ಧಿ”
ಈ ಪೋರ್ಟಲ್‌ನಲ್ಲಿ ನೋಂದಾಯಿಸಿದ ನಂತರ, ರೈತರು ತಮ್ಮ ಎರಡೂ ಕೈಗಳಲ್ಲಿ ಲಡ್ಡುಗಳನ್ನು ಹೊಂದಿರುತ್ತಾರೆ
ಹೆಸರು ಕಾಳು ಮತ್ತು ಕಡಲೆ ಕಾಳುಗಳಲ್ಲಿ ಆತ್ಮನಿರ್ಭರ ಆದ ನಂತರ ಈಗ ಭಾರತವು ಬೇಳೆಕಾಳುಗಳಲ್ಲಿಯೂ ಆತ್ಮನಿರ್ಭರ ಆಗಬೇಕಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 20 ಪ್ರತಿಶತ ಎಥೆನಾಲ್ ಅನ್ನು ಪೆಟ್ರೋಲ್‌ಗೆ ಬೆರೆಸುವ ಗುರಿಯನ್ನು ಹೊಂದಿದ್ದಾರೆ, ಇದಕ್ಕಾಗಿ ಲಕ್ಷ ಟನ್‌ಗಳಷ್ಟು ಎಥೆನಾಲನ್ನುಉತ್ಪಾದಿಸಬೇಕಾಗುತ್ತದೆ.
ಮೆಕ್ಕೆಜೋಳ ಬೆಳೆಯುವ ರೈತರ ಹೊಲಗಳು ಪೆಟ್ರೋಲ್ ಬಾವಿಗಳಂತೆ ಆಗಲಿವೆ
ಭಾರತ್ ಬ್ರಾಂಡ್ ಬೇಳೆ ಕೇವಲ 7 ತಿಂಗಳಲ್ಲಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್ ಎನಿಸಿಕೊಂಡಿದೆ
Posted On:
04 JAN 2024 5:53PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್‌ಇಡಿ) ಮತ್ತು ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ ಸಿಸಿಎಫ್) ಹೆಸರು ಕಾಳು ಉತ್ಪಾದಿಸುವ ರೈತರಿಗಾಗಿ ನೋಂದಣಿ, ಖರೀದಿ ಮತ್ತು ಪಾವತಿಗಾಗಿ ಅಭಿವೃದ್ಧಿಪಡಿಸಿದ ಪೋರ್ಟಲ್ ಗೆ ಇಂದು ನವದೆಹಲಿಯಲ್ಲಿ ಚಾಲನೆ ನೀಡಿದರು.
ನವದೆಹಲಿಯಲ್ಲಿ ಇಂದು. ಶ್ರೀ ಅಮಿತ್ ಶಾ ಅವರು 'ಬೇಳೆಕಾಳುಗಳಲ್ಲಿ ಸ್ವಾವಲಂಬನೆ' ಕುರಿತು ಆಯೋಜಿಸಲಾದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಅರ್ಜುನ್ ಮುಂಡಾ, ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅಶ್ವಿನಿ ಚೌಬೆ, ಸಹಕಾರ ರಾಜ್ಯ ಸಚಿವ ಶ್ರೀ ಬಿ.ಎಲ್.ವರ್ಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ತಮ್ಮ ಭಾಷಣದಲ್ಲಿ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು, ಇಂದು ನಾವು ಪೋರ್ಟಲ್ ಮೂಲಕ ಇಂತಹ ಉಪಕ್ರಮವನ್ನು ಕೈಗೊಂಡಿದ್ದೇವೆ, ಇದು ರೈತರು ಎನ್‌ಎಎಫ್‌ಇಡಿ ಮತ್ತು ಎನ್ ಸಿಸಿಎಫ್ ಮೂಲಕ ಮುಂಗಡವಾಗಿ ನೋಂದಾಯಿಸುವ ಮೂಲಕ ತೊಗರಿ ಬೇಳೆ ಮಾರಾಟ ಮಾಡಲು ಅನುಕೂಲವಾಗುತ್ತದೆ ಮತ್ತು ಡಿಬಿಟಿ ಮೂಲಕ ಅವರು ಮಾರುಕಟ್ಟೆ ಬೆಲೆಯನ್ನು ಎಂಎಸ್ ಪಿ ಅಥವಾ ಹೆಚ್ಚಿನ ದರದಲ್ಲಿ ಪಡೆಯುತ್ತಾರೆ. ಈ ಆರಂಭವು ರೈತರ ಏಳಿಗೆಗೆ, ಬೇಳೆಕಾಳುಗಳ ಉತ್ಪಾದನೆಯಲ್ಲಿ ದೇಶದ ಸ್ವಾವಲಂಬನೆಗೆ ಕಾರಣವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ಪೌಷ್ಟಿಕಾಂಶ ಅಭಿಯಾನವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. ಇದರೊಂದಿಗೆ, ಬೆಳೆ ಮಾದರಿಯ ಬದಲಾವಣೆಯ ನಮ್ಮ ಅಭಿಯಾನವು ವೇಗವನ್ನು ಪಡೆಯುತ್ತದೆ ಮತ್ತು ಭೂಸುಧಾರಣೆ ಮತ್ತು ಜಲ ಸಂರಕ್ಷಣೆಯ ಕ್ಷೇತ್ರಗಳಲ್ಲಿಯೂ ಬದಲಾವಣೆಗಳಾಗುತ್ತವೆ. ಇಂದಿನ ಆರಂಭ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬದಲಾವಣೆ ತರಲು ನಾಂದಿಯಾಗಿದೆ ಎಂದರು.
ಶ್ರೀ ಅಮಿತ್ ಶಾ ಅವರು ಇಂದು ದೇಶವು ಬೇಳೆಕಾಳುಗಳ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿಲ್ಲ, ಆದರೆ ನಾವು ಹೆಸರು ಕಾಳು ಮತ್ತು ಕಡಲೆ ಕಾಳಿನಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದೇವೆ ಎಂದು ಹೇಳಿದರು. ಕೃಷಿ ಪ್ರಧಾನವಾದ ಭಾರತದಂತಹ ದೇಶದಲ್ಲಿ ನೀರಿನ ಲಭ್ಯತೆ ಹೆಚ್ಚುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿನ ವಿಭಿನ್ನ ಹವಾಮಾನ ಕೃಷಿಗೆ ತುಂಬಾ ಉಪಯುಕ್ತವಾಗಿದೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2027ರ ವೇಳೆಗೆ ಬೇಳೆ ಕಾಳುಗಳ ವಲಯದಲ್ಲಿ ಭಾರತವನ್ನು 'ಆತ್ಮನಿರ್ಭರ' ಮಾಡಲು ಬೇಳೆಕಾಳುಗಳನ್ನು ಉತ್ಪಾದಿಸುವ ರೈತರ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊರಿಸಿದ್ದಾರೆ. ರೈತರ ಸಹಕಾರದಿಂದ 2027ರ ಡಿಸೆಂಬರ್‌ಗಿಂತ ಮೊದಲು ಬೇಳೆಕಾಳು ಉತ್ಪಾದನೆಯಲ್ಲಿ ಭಾರತವು ಆತ್ಮನಿರ್ಭರವಾಗಲಿದ್ದು, ಒಂದು ಕೆಜಿಯಷ್ಟನ್ನೂ ಆಮದು ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೇಳೆಕಾಳುಗಳ ಕ್ಷೇತ್ರದಲ್ಲಿ ದೇಶವನ್ನು ʼಆತ್ಮನಿರ್ಭರʼಗೊಳಿಸಲು ಸಹಕಾರ, ಕೃಷಿ ಸಚಿವಾಲಯ ಮತ್ತು ಇತರ ಪಕ್ಷಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಲಾಗಿದ್ದು, ಈ ಗುರಿಯನ್ನು ಸಾಧಿಸಲು ಬರುವ ಅಡೆತಡೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು.. ಅನೇಕ ಬಾರಿ ಬೇಳೆಕಾಳುಗಳನ್ನು ಉತ್ಪಾದಿಸುವ ರೈತರಿಗೆ ಊಹಾಪೋಹ ಅಥವಾ ಇನ್ನಾವುದೇ ಪರಿಸ್ಥಿತಿಯಿಂದ ನ್ಯಾಯಯುತ ಬೆಲೆ ಸಿಗಲಿಲ್ಲ, ಇದರಿಂದಾಗಿ ಅವರು ಭಾರಿ ನಷ್ಟವನ್ನು ಅನುಭವಿಸಿದರು. ಇದರಿಂದ ರೈತರು ಬೇಳೆಕಾಳುಗಳನ್ನು ಬೆಳೆಯಲು ಇಚ್ಛೆ ತೋರುತ್ತಿಲ್ಲ. ಉತ್ಪಾದನೆಗೆ ಮೊದಲೇ ಎನ್‌ಎಎಫ್‌ಇಡಿ ಮತ್ತು ಎನ್ ಸಿಸಿಎಫ್ ನೋಂದಾಯಿಸಿಕೊಳ್ಳುವ ರೈತರಿಗೆ, ಅವರ ಬೇಳೆಕಾಳುಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್ ಪಿ) 100 ಪ್ರತಿಶತವನ್ನು ಖರೀದಿಸಲು ನಾವು ನಿರ್ಧರಿಸಿದ್ದೇವೆ ಎಂದು ಶ್ರೀ ಶಾ ಹೇಳಿದರು. ಈ ಪೋರ್ಟಲ್ ನಲ್ಲಿ ನೋಂದಾಯಿಸಿದ ನಂತರ, ರೈತರು ತಮ್ಮ ಎರಡೂ ಕೈಗಳಲ್ಲಿ ಲಡ್ಡುಗಳನ್ನು ಹೊಂದಿರುತ್ತಾರೆ ಎಂದು ಶ್ರೀ ಶಾ ಹೇಳಿದರು. ಬೇಳೆಕಾಳುಗಳ ಫಸಲು ಬಂದಾಗ ಎಂಎಸ್‌ಪಿಗಿಂತ ಹೆಚ್ಚಿನ ಬೆಲೆ ಬಂದರೆ ಅದರ ಸರಾಸರಿ ಲೆಕ್ಕ ಹಾಕಿ ರೈತರಿಂದ ಹೆಚ್ಚಿನ ಬೆಲೆಗೆ ಬೇಳೆಕಾಳುಗಳನ್ನು ಖರೀದಿಸುವ ವೈಜ್ಞಾನಿಕ ಸೂತ್ರವನ್ನು ರೂಪಿಸಲಾಗಿದ್ದು, ಇದರಿಂದ ರೈತರಿಗೆ ಎಂದಿಗೂ ಅನ್ಯಾಯವಾಗುವುದಿಲ್ಲ ಎಂದರು.
ಎನ್‌ಎಎಫ್‌ಇಡಿ ಮತ್ತು ಎನ್ ಸಿಸಿಎಫ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ಶ್ರೀ ಅಮಿತ್ ಶಾ ರೈತರಿಗೆ ಮನವಿ ಮಾಡಿದರು ಮತ್ತು ರೈತರ ಬೇಳೆಕಾಳುಗಳನ್ನು ಸರ್ಕಾರವು ಖರೀದಿಸುತ್ತದೆ ಮತ್ತು ಅದನ್ನು ಮಾರಾಟ ಮಾಡಲು ರೈತರು ಎಲ್ಲಿಯೂ ಅಲೆದಾಡಬೇಕಾಗಿಲ್ಲ ಎನ್ನುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗ್ಯಾರಂಟಿಯಾಗಿದೆ. ದೇಶವನ್ನು ಆತ್ಮನಿರ್ಭರ ಮಾಡುವಲ್ಲಿ ದೇಶದ ರೈತರು ಸರ್ವ ಪ್ರಯತ್ನವನ್ನು ಮಾಡುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶದ ಬಹುಪಾಲು ಭಾಗವು ಸಸ್ಯಾಹಾರಿಯಾಗಿದೆ ಮತ್ತು ಅವರಿಗೆ ಪ್ರೋಟೀನ್ ಬಹಳ ಮುಖ್ಯ, ಅದರ ಏಕೈಕ ಮೂಲವೆಂದರೆ ಬೇಳೆಕಾಳುಗಳು ಎಂದು ಸಹಕಾರ ಸಚಿವರು ಹೇಳಿದರು. ದೇಶದ ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ಬೇಳೆಕಾಳುಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಹೇಳಿದರು. ಬೇಳೆಕಾಳುಗಳ ಕೃಷಿಯು ಭೂಮಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಏಕೆಂದರೆ ಬೇಳೆಕಾಳುಗಳು ಭೂ ಸುಧಾರಣೆಗೆ ಪ್ರಮುಖ ಬೆಳೆಯಾಗಿದೆ. ಬೇಳೆಕಾಳುಗಳ ಉತ್ಪಾದನೆಗೆ ಕಡಿಮೆ ನೀರು ಬೇಕಾಗುತ್ತದೆ ಮತ್ತು ದೇಶದ ಹಲವೆಡೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ನಮ್ಮ ಭವಿಷ್ಯದ ಚಿಂತೆಯ ವಿಷಯವಾಗಿದೆ ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಹೆಚ್ಚಿಸಬೇಕಾದರೆ, ಕಡಿಮೆ ನೀರು ಬೇಕಾಗುವಂತ ಬೆಳೆಗಳ ಉತ್ಪಾದನೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
ಈ ಹಿಂದೆ ರೈತರು ಬೇಳೆಕಾಳುಗಳನ್ನು ಉತ್ಪಾದಿಸಿದರೆ ನ್ಯಾಯಯುತ ಬೆಲೆ ಸಿಗುವುದಿಲ್ಲ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿತ್ತು, ಆದರೆ ಈಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರ ಸಂಕಷ್ಟಕ್ಕೆ ಅಂತ್ಯ ಹಾಡಿದ್ದಾರೆ ಎಂದು ಸಹಕಾರ ಸಚಿವರು ಹೇಳಿದರು. ರೈತರು ನೋಂದಾಯಿಸಿದ್ದರೆ, ಸಂಪೂರ್ಣ ಬೇಳೆಕಾಳುಗಳನ್ನು ಎಂಎಸ್‌ಪಿಯಲ್ಲಿ ಖರೀದಿಸುವುದು ಎನ್‌ಎಎಫ್‌ಇಡಿ ಮತ್ತು ಎನ್ ಸಿಸಿಎಫ್ ನ ಜವಾಬ್ದಾರಿಯಾಗುತ್ತದೆ. ಒಂದು ರೀತಿಯಲ್ಲಿ ಬೇಳೆಕಾಳುಗಳು, ರೈತರ ಜಮೀನಿನಲ್ಲಿ ಮಿನಿ ರಸಗೊಬ್ಬರ ಕಾರ್ಖಾನೆಯನ್ನು ಸ್ಥಾಪಿಸಿದಂತೆ ಎಂದು ಅವರು ಹೇಳಿದರು. ಒಂದು ಹೆಕ್ಟೇರ್ ಪ್ರದೇಶದಲ್ಲಿ 30 ರಿಂದ 40 ಕೆಜಿ ಸಾರಜನಕವನ್ನು ಒದಗಿಸುವುದು ದೊಡ್ಡ ವಿಷಯ ಮತ್ತು ಇದು ಹಲವಾರು ಪ್ರಯೋಗಗಳಿಂದ ಸಾಬೀತಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ಛತ್ತೀಸ್‌ಗಢ ಮತ್ತು ಬಿಹಾರದಂತಹ ರಾಜ್ಯಗಳ ರೈತರು ತಮ್ಮ ಜಮೀನಿನ ಗಾತ್ರವನ್ನು ಬೇಳೆಕಾಳುಗಳಿಗಾಗಿ ನೋಂದಾಯಿಸಿಕೊಳ್ಳಬಹುದು ಎಂದು ಶ್ರೀ ಶಾ ಹೇಳಿದರು. ಅವರ ಬೇಳೆಕಾಳುಗಳನ್ನು ಎಂಎಸ್‌ಪಿಯಲ್ಲಿ ಖರೀದಿಸಲಾಗುವುದು ಎಂದು ಅವರಿಗೆ ಭರವಸೆ ನೀಡಬಹುದು.
ಗೃಹ ಸಚಿವರು ಮತ್ತು ಸಹಕಾರ ಸಚಿವರು ಅತ್ಯಂತ ಕಡಿಮೆ ಸಮಯದಲ್ಲಿ ಪೋರ್ಟಲ್ ಅನ್ನು ಪ್ರಾರಂಭಿಸಿದ್ದಕ್ಕಾಗಿ ಎನ್‌ಎಎಫ್‌ಇಡಿ ಮತ್ತು ಎನ್.ಸಿಸಿಎಫ್ ಅನ್ನು ಶ್ಲಾಘಿಸಿದರು. ಬೇಳೆಕಾಳುಗಳನ್ನು ಉತ್ಪಾದಿಸಬಹುದಾದ ಎಲ್ಲಾ ಕ್ಷೇತ್ರಗಳಲ್ಲಿ ಪೋರ್ಟಲ್ ಬಗ್ಗೆ ಜಾಗೃತಿ ಮೂಡಿಸಲು ಅವರು ದೇಶದ ಎಲ್ಲಾ ಕೃಷಿಕರ ಉತ್ಪಾದನಾ ಸಂಸ್ಥೆಗಳು (ಎಫ್‌ಪಿಒ) ಮತ್ತು ಪ್ರಗತಿಪರ ರೈತರಿಗೆ ಮನವಿ ಮಾಡಿದರು. ಅತ್ಯಂತ ಸರಳವಾದ ರೀತಿಯಲ್ಲಿ ಎಲ್ಲಾ ಭಾಷೆಗಳಲ್ಲಿ ನೋಂದಣಿ ಮಾಡಿಸಬಹುದು ಎಂದು ರೈತರಿಗೆ ಅರಿವು ಮೂಡಿಸಬೇಕು ಎಂದರು. ನೋಂದಣಿಯ ಸ್ವೀಕೃತಿಯನ್ನು ಪಡೆದ ನಂತರ, ಎನ್‌ಎಎಫ್‌ಇಡಿ (ನಾಫೆಡ್) ಮತ್ತು ಎನ್‌ಸಿಸಿಎಫ್ ರೈತರ ಬೇಳೆಕಾಳುಗಳನ್ನು ಕನಿಷ್ಠ ಎಂಎಸ್‌ಪಿ ದರದಲ್ಲಿ ಖರೀದಿಸಲು ಬದ್ಧವಾಗಿದೆ ಮತ್ತು ಅವರ ಬೇಳೆಕಾಳುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಆಯ್ಕೆಯೂ ರೈತರಿಗೆ ಮುಕ್ತವಾಗಿದೆ ಎಂದು ಅವರು ಹೇಳಿದರು.
ಶ್ರೀ ಅಮಿತ್ ಶಾ ಅವರು ಪೋರ್ಟಲ್ ಅನ್ನು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ ಆಧಾರ್ ಸಂಖ್ಯೆಯನ್ನು ಪರಿಶೀಲಿಸಲಾಗಿದೆ, ರೈತರ ವಿಶಿಷ್ಟ ಐಡಿಯನ್ನು ರಚಿಸಲಾಗಿದೆ, ಅದನ್ನು ಭೂ ದಾಖಲೆಗಳೊಂದಿಗೆ ಸಂಯೋಜಿಸಲಾಗಿದೆ ಮತ್ತು ಆಧಾರ್ ಆಧಾರಿತ ಪಾವತಿಯೊಂದಿಗೆ ಸಂಯೋಜಿಸಲಾಗಿದೆ. ಯಾವುದೇ ರೀತಿಯ ಭ್ರಷ್ಟಾಚಾರವಿಲ್ಲದೆ ರೈತರ ಉತ್ಪನ್ನಗಳ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ವ್ಯವಸ್ಥೆ ಇದೆ. ಈ ಪೋರ್ಟಲ್ ಅನ್ನು ನೈಜ ಸಮಯದ ಆಧಾರದ ಮೇಲೆ ಉಗ್ರಾಣ ಏಜೆನ್ಸಿಗಳೊಂದಿಗೆ ಸಂಯೋಜಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಗ್ರಾಣ ವ್ಯವಸ್ಥೆ ಬರಲಿದೆ. ಪ್ರತಿಯೊಂದು ಪ್ರಾಥಮಿಕ ಕೃಷಿ ಸಹಕಾರಿ ಕ್ರೆಡಿಟ್ ಸೊಸೈಟಿ (ಪಿಎಸಿಎಸ್) ದೊಡ್ಡ ಗೋದಾಮಿನ ನಿರ್ಮಾಣದತ್ತ ಸಾಗುತ್ತಿದೆ, ಇದು ಬೆಳೆಗಳನ್ನು ಸಾಗಿಸುವ ಸಮಸ್ಯೆಯನ್ನು ಪರಿಹರಿಸುತ್ತದೆ. ಸರಕಾರ ಕನಿಷ್ಠ ಎಂಎಸ್‌ಪಿ ದರವನ್ನಾದರೂ ನೀಡಲಿದ್ದು, ರೈತರು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಪಡೆದರೆ ಮಾರುಕಟ್ಟೆಯಲ್ಲೂ ಮಾರಾಟ ಮಾಡಲು ಮುಕ್ತ ಅವಕಾಶವಿದೆ ಎಂದು ಸಹಕಾರ ಸಚಿವರು ಹೇಳಿದರು. ಬೇಳೆ ಕಾಳನ್ನು ಅಳವಡಿಸಿಕೊಂಡು ದೇಶವನ್ನು ದ್ವಿದಳ ಧಾನ್ಯಗಳ ವಲಯದಲ್ಲಿ ಸ್ವಾವಲಂಬಿಯಾಗುವಂತೆ ಮಾಡಿ ಜನವರಿ 1, 2028ರ ಮೊದಲು ಭಾರತವು ಒಂದು ಒಂದು ಕೆಜಿಯಷ್ಟನ್ನೂ ಆಮದು ಮಾಡಿಕೊಳ್ಳುವ ಅಗತ್ಯ ಬರದಂತೆ ಮಾಡಲು ಅವರು ರೈತರಿಗೆ ಮನವಿ ಮಾಡಿದರು.
ಗೃಹ ಸಚಿವರು ಮತ್ತು ಸಹಕಾರ ಸಚಿವರು ಬಹಳ ಕಡಿಮೆ ಸಮಯದಲ್ಲಿ, 537 ಪಿಎಸಿಎಸ್ ಮತ್ತು ಅನೇಕ ಎಫ್ ಪಿಒ ಗಳು ಈ ಪೋರ್ಟಲ್‌ಗೆ ಸೇರಿಕೊಂಡಿವೆ ಎಂದು ಹೇಳಿದರು. ಗುಜರಾತ್‌ನಿಂದ 480 ಪಿಎಸಿಎಸ್ ಮತ್ತು ಎಫ್ ಪಿಒಗಳು, ಮಹಾರಾಷ್ಟ್ರದಿಂದ 227, ಕರ್ನಾಟಕದ 209, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಿಂದ 45 ಸಹ ಪೋರ್ಟಲ್‌ಗೆ ಸೇರಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿವೆ. ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರಿ ಬದಲಾವಣೆಯಾಗಿದೆ ಎಂದರು. 2013-14ನೇ ಸಾಲಿನಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆ 265 ದಶಲಕ್ಷ ಟನ್‌ಗಳಾಗಿದ್ದು, 2022-23ರಲ್ಲಿ 330 ದಶಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ ಎಂದು ಶ್ರೀ ಶಾ ಹೇಳಿದರು. ಸ್ವಾತಂತ್ರ್ಯದ ನಂತರದ 75 ವರ್ಷಗಳಲ್ಲಿ ಯಾವುದೇ ಒಂದು ದಶಕದಲ್ಲಿ ನಾವು ವಿಶ್ಲೇಷಿಸಿದರೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ರೈತರು ಅತಿದೊಡ್ಡ ಬೆಳವಣಿಗೆಯನ್ನು ಸಾಧಿಸಿದ್ದಾರೆ ಎಂದು ಅವರು ಹೇಳಿದರು. ಈ ಅವಧಿಯಲ್ಲಿ ಬೇಳೆಕಾಳುಗಳ ಉತ್ಪಾದನೆಯಲ್ಲಿ ಭಾರಿ ಹೆಚ್ಚಳವಾಗಿದೆ ಆದರೆ ನಾವು ಮೂರು ರೀತಿಯ ಕಾಳುಗಳಲ್ಲಿ ಸ್ವಾವಲಂಬಿಯಾಗಿಲ್ಲ, ಅವುಗಳಲ್ಲಿ ನಾವು ಸ್ವಾವಲಂಬಿಯಾಗಬೇಕು ಎಂದು ಹೇಳಿದರು.
ವಿಸ್ತೀರ್ಣ ಮತ್ತು ಉತ್ಪಾದನೆ ಎರಡರಲ್ಲೂ ಬೇಳೆಕಾಳುಗಳ ಉತ್ಪಾದನೆಯಲ್ಲಿ ಇಂದು ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿರುವುದು ತೃಪ್ತಿಯ ಸಂಗತಿ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಪಂಚದಲ್ಲಿ ಬೇಳೆಕಾಳುಗಳ ಉತ್ಪಾದನೆಗೆ ಭಾರತವು 31 ಪ್ರತಿಶತದಷ್ಟು ಬಿತ್ತನೆ ಪ್ರದೇಶವನ್ನು ಹೊಂದಿದೆ. ಒಟ್ಟು ಬೇಳೆಕಾಳು ಉತ್ಪಾದನೆಯಲ್ಲಿ ಭಾರತ ಶೇ.28 ರಷ್ಟು ಪಾಲು ಹೊಂದಿದೆ. ಸರಕಾರವು ರಫ್ತಿಗಾಗಿ ಸಹಕಾರಿ ಸಂಘವನ್ನು ರಚಿಸಿದ್ದು, ಈ ಮೂಲಕ ವಿಶ್ವದಾದ್ಯಂತ ಬೇಳೆಕಾಳುಗಳನ್ನು ರಫ್ತು ಮಾಡುವ ಗುರಿಯು ಮುನ್ನಡೆಯಲಿದ್ದು, ಈ ಜವಾಬ್ದಾರಿ ದೇಶದ ರೈತರ ಮೇಲಿದೆ ಎಂದರು. ಉತ್ಪಾದಕತೆ ಹೆಚ್ಚಿಸಲು ಉತ್ತಮ ಬೀಜ ಉತ್ಪಾದನೆಗೆ ಸಹಕಾರಿ ಸಂಘವನ್ನೂ ರಚಿಸಲಾಗಿದೆ ಎಂದರು. ಕೆಲವೇ ದಿನಗಳಲ್ಲಿ ನಾವು ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಉತ್ಪಾದಕತೆಯನ್ನು ಹೆಚ್ಚಿಸಲು ನಮ್ಮ ಯೋಜನೆಯನ್ನು ಮುಂದಿಡುತ್ತೇವೆ. ನಾವು ನಮ್ಮ ಸಾಂಪ್ರದಾಯಿಕ ಬೀಜಗಳನ್ನು ಸಂರಕ್ಷಿಸುತ್ತೇವೆ ಮತ್ತು ಸಂವರ್ಧನೆಯನ್ನು ಮಾಡುತ್ತೇವೆ. ಇದರೊಂದಿಗೆ, ಉತ್ಪಾದಕತೆಯನ್ನು ಹೆಚ್ಚಿಸಲು, ನಾವು ಸಹಕಾರಿ ಆಧಾರದ ಮೇಲೆ ಬಹು ರಾಜ್ಯ ಬೀಜ ಮಾರ್ಪಾಡು ಸಮಿತಿಯನ್ನು ರಚಿಸಿದ್ದೇವೆ. ಎಲ್ಲಾ ಪಿಎಸಿಎಸ್ ಗಳು ಸಮಿತಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
2013-14 ರಲ್ಲಿ ದೇಶದ ರೈತರು 19 ದಶಲಕ್ಷ ಮೆಟ್ರಿಕ್ ಟನ್ ಬೇಳೆಕಾಳುಗಳನ್ನು ಉತ್ಪಾದಿಸಿದರೆ 2022-23 ರಲ್ಲಿ 26 ದಶಲಕ್ಷ ಮೆಟ್ರಿಕ್ ಟನ್ ಆಗಿತ್ತು, ಆದರೆ ನಾವು ಇಷ್ಟಕ್ಕೇ ತೃಪ್ತರಾಗಬಾರದು ಎಂದು ಶ್ರೀ ಅಮಿತ್ ಶಾ ಹೇಳಿದರು. 2027ರ ವೇಳೆಗೆ ಬೇಳೆಕಾಳುಗಳ ಆಮದು ನಿಲ್ಲಿಸುವುದು ಮಾತ್ರವಲ್ಲದೆ ರಫ್ತು ಮಾಡುವಂತಹ ವ್ಯವಸ್ಥೆ ರೂಪಿಸಬೇಕಿದೆ ಎಂದು ಹೇಳಿದರು. ಸಹಕಾರ ಸಚಿವರು ರೈತರಿಗೆ ಭರವಸೆ ನೀಡಿ ಈ ಪೋರ್ಟಲ್‌ನ ಸದಸ್ಯರಾಗುವಂತೆ ಮನವಿ ಮಾಡಿದರು. ಇಂತಹ ಸಣ್ಣ ಪ್ರಯತ್ನದಿಂದ ದೇಶಕ್ಕಾಗಿ ಹಲವಾರು ಕೆಲಸಗಳನ್ನು ಮಾಡುತ್ತೇವೆ ಮತ್ತು ಇದರಿಂದ ರೈತರೂ ಸಹ ಏಳಿಗೆ ಹೊಂದುತ್ತಾರೆ ಎಂದರು. ರೈತರ ಆದಾಯವನ್ನು ದ್ವಿಗುಣಗೊಳಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಆವರಣದಿಂದ ಕೇಳಿಕೊಂಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ವಿರೋಧ ಪಕ್ಷಗಳು ಅಂಕಿ-ಅಂಶಗಳನ್ನು ನೋಡದೆ ಗೇಲಿ ಮಾಡುತ್ತಾರೆ ಎಂದರು. ಅಂಕಿ ಅಂಶಗಳನ್ನು ನೀಡುತ್ತಾ ಸಹಕಾರ ಸಚಿವರು, 2014-15ರಲ್ಲಿ ತೊಗರಿಕಾಳು 4350 ರೂ.ಗಳಾಗಿದ್ದು, ಇಂದು 7000 ರೂ.ಗಳ ಎಂಎಸ್‌ಪಿ ಆಗಿದೆ ಕೇವಲ ತೊಗರಿಯಲ್ಲಿಯೇ ನಾವು ರೈತರ ಆದಾಯವನ್ನು 65% ಹೆಚ್ಚಿಸಲು ಶ್ರಮಿಸಿದ್ದೇವೆ ಎಂದು ಹೇಳಿದರು. ಇದೇ ಅವಧಿಯಲ್ಲಿ ಹೆಸರುಕಾಳು 4600 ರೂ.ಗಳಷ್ಟಿದ್ದು, ಇಂದು 8,558 ರೂ.ಗೆ ತಲುಪಿದೆ, ಉದ್ದಿನ ಕಾಳು 4350 ರೂ.ಗಳಷ್ಟಿದ್ದು ಇಂದು 6950 ರೂ.ಗೆ ಏರಿಕೆಯಾಗಿದೆ. ಕಡಲೇಬೇಳೆ ಎಂಎಸ್‌ಪಿ 3100 ರೂ ಇದ್ದು, ಅದು 5440 ರೂ ಆಗಿದೆ ಮತ್ತು ಮಸೂರ್ (ಮೈಸೂರ್ ಬೇಳೆ) ಎಂಎಸ್‌ಪಿ 2950 ರೂ ಆಗಿತ್ತು ಈಗ ಇದು ಎರಡು ಪಟ್ಟು ಹೆಚ್ಚು ಏರಿಕೆಯಾಗಿ 6425 ರೂ. ಆಗಿದೆ. ಈಗ ರೈತರು ತಮಗೆ ಬೇಕಾದಷ್ಟು ತೊಗರಿ, ಉದ್ದು ಮತ್ತು ಮಸೂರ್ ಬಿತ್ತನೆ ಮಾಡಬಹುದು ಮತ್ತು ಅವರ ಆದಾಯವು ಬೇರೆ ಏನನ್ನೂ ಮಾಡದೆ ದ್ವಿಗುಣಗೊಳ್ಳುತ್ತದೆ ಎಂದು ಶ್ರೀ ಶಾ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಹೊರತುಪಡಿಸಿ 10 ವರ್ಷಗಳಲ್ಲಿ ಯಾವುದೇ ಸರ್ಕಾರವು ಎಂಎಸ್‌ಪಿಯನ್ನು ಇಷ್ಟು ಹೆಚ್ಚಿಸಿಲ್ಲ ಎಂದು ಗೃಹ ಸಚಿವರು ಮತ್ತು ಸಹಕಾರ ಸಚಿವರು ದೇಶಾದ್ಯಂತ ರೈತರಿಗೆ ತಿಳಿಸಿದರು. ಸಹಕಾರ ಆಂದೋಲನದ ಗುರಿ ಸಹಕಾರದಿಂದ ಏಳಿಗೆಯಾಗಿದ್ದು, ಈ ಏಳಿಗೆಯೆಂದರೆ ರೈತನ ಏಳಿಗೆ ಎಂದರ್ಥ ಎಂದರು. ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರ ಏಳಿಗೆಗಾಗಿ ಸಹಕಾರ ಚಳವಳಿಯನ್ನು ಬಲಪಡಿಸುವ ಕೆಲಸ ಮಾಡಿದ್ದು, ರೈತರು ಈ ಬಗ್ಗೆ ಸ್ಪಷ್ಟ ಸಂದೇಶ ಮತ್ತು ತಿಳುವಳಿಕೆಯನ್ನು ಹೊಂದಿರಬೇಕು ಎಂದು ಹೇಳಿದರು. ಇಂದು ನಾವು ಬಟಾಣಿ, ಉದ್ದು ಮತ್ತು (ಮಸೂರ್) ಮೈಸೂರು ಬೇಳೆಯಲ್ಲಿ ಸ್ವಾವಲಂಬಿಗಳಾಗಬೇಕಾಗಿದೆ ಎಂದು ಶ್ರೀ ಶಾ ಹೇಳಿದರು. ಕಾಳುಗಳ ಗುಣಮಟ್ಟ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು, ಕಾನ್ಪುರದ ಐಸಿಎಆರ್ ಮತ್ತು ಐಐಪಿಆರ್ ನೊಂದಿಗೆ 150 ಉತ್ತಮ ಬೀಜ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅನೇಕ ಎಫ್‌ಪಿಒಗಳೂ ಈ ಕಾರ್ಯದಲ್ಲಿ ನಿರತವಾಗಿವೆ ಎಂದರು. ಬೇಳೆಕಾಳುಗಳ ಪ್ರಾಥಮಿಕ ಕೃಷಿಗಾಗಿ 608 ಎಫ್‌ಪಿಒಗಳು ಮತ್ತು ದ್ವಿತೀಯ ಅಥವಾ ಅಂತರ ಕೃಷಿಗಾಗಿ ಅಂತಹ 123 ಎಫ್‌ಪಿಒಗಳನ್ನು ನೋಂದಾಯಿಸಲಾಗಿದೆ ಎಂದು ಹೇಳಿದರು.
ಈ ಕ್ರಾಂತಿಯು ಪೌಷ್ಟಿಕಾಂಶವನ್ನು ಹೆಚ್ಚಿಸಿ ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೆ, ನಮ್ಮ ಗ್ರಾಹಕರಿಗೆ ಬೇಳೆಕಾಳುಗಳ ಬೆಲೆಯನ್ನು ಕಡಿಮೆ ಮಾಡುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅದಕ್ಕಾಗಿಯೇ ಎನ್ ಸಿಸಿಎಫ್ ಮತ್ತು ಎನ್ ಎಎಫ್ ಇಡಿ ಮೂಲಕ ನಾವು 'ಭಾರತ್ ದಾಲ್' ಪರಿಕಲ್ಪನೆಯನ್ನು ರಚಿಸಿದ್ದೇವೆ ಮತ್ತು ನಾವು ಪ್ರಸ್ತುತ ಭಾರತ್ ಬ್ರ್ಯಾಂಡ್‌ನೊಂದಿಗೆ ಈ ಕಾಳುಗಳನ್ನು ದೇಶದಾದ್ಯಂತ ಎಲ್ಲಾ ಸ್ಥಳಗಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಭಾರತ್ ದಾಲ್ ನ ವ್ಯಾಪ್ತಿ ದೊಡ್ಡದಾಗಲಿದೆ. ಭಾರತ್ ದಾಲ್ ಕೇವಲ 7 ತಿಂಗಳೊಳಗೆ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್ ಆಗಿದೆ ಎಂದು ಅವರು ಹೇಳಿದರು. ಇದರ ಬೆಲೆಯೂ ಕಡಿಮೆಯಾಗಿದ್ದು, ನಮ್ಮ ರೈತರು ಇದರ ನೇರ ಲಾಭ ಪಡೆಯುತ್ತಿದ್ದಾರೆ. ಇದರೊಂದಿಗೆ ಎಥೆನಾಲ್ ಉತ್ಪಾದನೆಯನ್ನೂ ಹೆಚ್ಚಿಸಬೇಕಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 20 ಪ್ರತಿಶತ ಎಥೆನಾಲ್ ಅನ್ನು ಪೆಟ್ರೋಲ್‌ಗೆ ಬೆರೆಸುವ ಗುರಿಯನ್ನು ಹೊಂದಿದ್ದಾರೆ ಮತ್ತು ನಾವು 20 ಪ್ರತಿಶತ ಎಥೆನಾಲ್ ಅನ್ನು ಮಿಶ್ರಣ ಮಾಡಬೇಕಾದರೆ, ಇದಕ್ಕಾಗಿ ನಾವು ಲಕ್ಷಗಟ್ಟಲೆ ಟನ್‌ಗಳಷ್ಟು ಎಥೆನಾಲ್ ಅನ್ನು ಉತ್ಪಾದಿಸಬೇಕು. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಎನ್‌ಎಎಫ್ ಇಡಿ ಮತ್ತು ಎನ್ ಸಿಸಿಎಫ್ ಮೆಕ್ಕೆಜೋಳ ನೋಂದಣಿ ಆರಂಭಿಸಲಿವೆ ಎಂದರು. ಮೆಕ್ಕೆಜೋಳ ಬಿತ್ತುವ ರೈತರಿಗೆ, ರೈತರ ಶೋಷಣೆಯಾಗದಂತೆ ನೇರವಾಗಿ ಎಥೆನಾಲ್ ತಯಾರಿಕಾ ಕಾರ್ಖಾನೆಗೆ ಮೆಕ್ಕೆಜೋಳವನ್ನು ಎಂಎಸ್‌ಪಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡುತ್ತೇವೆ. ಮತ್ತು ಹಣವು ನೇರವಾಗಿ ಬ್ಯಾಂಕ್ ಖಾತೆಗೆ ಹೋಗುತ್ತದೆ. ರೈತರ ಹೊಲ ಕೇವಲ ಮೆಕ್ಕೆಜೋಳ ಮಾತ್ರವಲ್ಲ ಪೆಟ್ರೋಲ್ ಉತ್ಪಾದಿಸುವ ಬಾವಿಯಾಗಲಿದೆ ಎಂದರು. ದೇಶದ ರೈತರು ಪೆಟ್ರೋಲ್ ಆಮದು ಮಾಡಿಕೊಳ್ಳಲು ಬಳಸುವ ವಿದೇಶಿ ಕರೆನ್ಸಿಯನ್ನು ಉಳಿಸಬೇಕು ಎಂದು ಶ್ರೀ ಶಾ ಹೇಳಿದರು. ಬೇಳೆಕಾಳುಗಳ ಕ್ಷೇತ್ರದಲ್ಲಿ ನಾವು ಆತ್ಮನಿರ್ಭರರಾಗಬೇಕು ಮತ್ತು ಪೌಷ್ಟಿಕಾಂಶ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದು ದೇಶಾದ್ಯಂತ ರೈತರಲ್ಲಿ ಮನವಿ ಮಾಡಲು ಬಯಸುವುದಾಗಿ ಸಹಕಾರ ಸಚಿವರು ಹೇಳಿದರು.
*****
(Release ID: 1993307)
Visitor Counter : 116