ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಅವರು ಜನವರಿ 6ರಿಂದ 7ರವರೆಗೆ ನಡೆಯಲಿರುವ  ರಾಜ್ಯ ಪೊಲೀಸ್‌ ಮಹಾನಿರ್ದೇಶಕರು/ ಇನ್ಸಪೆಕ್ಟರ್ ಜನರಲ್‌ ಆಫ್‌ ಪೊಲೀಸ್ ಅಧಿಕಾರಿಗಳ ಅಖಿಲ ಭಾರತ ಸಮಾವೇಶದಲ್ಲಿ ಭಾಗಿ 


ಪೊಲೀಸ್ ವ್ಯವಸ್ಥೆ ಮತ್ತು ಆಂತರಿಕ ಭದ್ರತೆ ಸೇರಿ ವಿಸ್ತೃತ ವಿಷಯಗಳ ಚರ್ಚೆ 

ಸಮಾವೇಶದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಜಾರಿ ಸಂಬಂಧ ನೀಲನಕ್ಷೆ ರೂಪಿಸುವ ಕುರಿತು ಸಮಾಲೋಚನೆ 

ಪೊಲೀಸಿಂಗ್ ಮತ್ತು ಭದ್ರತೆ ಕುರಿತಂತೆ ಭವಿಷ್ಯದ ವಿಷಯಗಳ ಬಗ್ಗೆ ಚರ್ಚೆ 

Posted On: 04 JAN 2024 11:58AM by PIB Bengaluru

ಪ್ರಧಾನಮಂತ್ರಿ ಶ್ರೀ  ನರೇಂದ್ರ ಮೋದಿ ಅವರು 2024ರ ಜನವರಿ 6ರಿಂದ 7ರವರೆಗೆ ಜೈಪುರದಲ್ಲಿನ  ರಾಜಸ್ಥಾನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು. ಇನ್ಸ್ ಪೆಕ್ಟರ್ ಜನರಲ್‌ ಆಫ್ ಪೊಲೀಸ್ ಅಧಿಕಾರಿಗಳ ಅಖಿಲ ಭಾರತ ಸಮ್ಮೇಳನ-2023ರಲ್ಲಿ ಭಾಗವಹಿಸಲಿದ್ದಾರೆ.

2024ರ ಜನವರಿ 5 ರಿಂದ 7 ರವರೆಗೆ ಮೂರು ದಿನ ನಡೆಯಲಿರುವ ಸಮ್ಮೇಳನವು ಸೈಬರ್ ಅಪರಾಧ, ಪೋಲೀಸ್ ವ್ಯವಸ್ಥೆಯಲ್ಲಿ ತಂತ್ರಜ್ಞಾನ, ಭಯೋತ್ಪಾದನೆ ನಿಗ್ರಹ ಸವಾಲುಗಳು, ಎಡಪಂಥೀಯ ಬಂಡುಕೋರರು, ಕಾರಾಗೃಹಗಳ ಸುಧಾರಣೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಪೊಲೀಸ್ ಮತ್ತು ಆಂತರಿಕ ಭದ್ರತಾ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುವುದು. ಸಮ್ಮೇಳನದ ಮತ್ತೊಂದು ಪ್ರಮುಖ ಕಾರ್ಯಸೂಚಿಯು ಹೊಸ ಕ್ರಿಮಿನಲ್ ಕಾನೂನುಗಳ ಜಾರಿಗಾಗಿ ನೀಲ ನಕ್ಷೆಯನ್ನು ರೂಪಿಸುವ ಕುರಿತ ಚರ್ಚೆಯಾಗಿದೆ. ಅಲ್ಲದೆ, ಕೃತಕ ಬುದ್ಧಿಮತ್ತೆ, ಡೀಪ್‌ಫೇಕ್ ಇತ್ಯಾದಿಗಳಂತಹ ಹೊಸ ತಂತ್ರಜ್ಞಾನಗಳು ಮತ್ತು ಅವುಗಳನ್ನು ಎದುರಿಸುವ ವಿಧಾನಗಳಿಂದ ಎದುರಾಗುವ ಸವಾಲುಗಳಂತಹ ಪೋಲೀಸಿಂಗ್ ಮತ್ತು ಭದ್ರತೆಯಲ್ಲಿ ಭವಿಷ್ಯದ ವಿಷಯಗಳ ಬಗ್ಗೆಯೂ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಸಮ್ಮೇಳನವು ಸ್ಪಷ್ಟವಾದ ಕ್ರಿಯೆಯ ಅಂಶಗಳನ್ನು ಗುರುತಿಸಲು ಮತ್ತು ಅವುಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಅವಕಾಶವನ್ನು ಒದಗಿಸುತ್ತದೆ, ಇದನ್ನು ಪ್ರತಿ ವರ್ಷವೂ ಪ್ರಧಾನಮಂತ್ರಿ ಅವರ ಮುಂದೆ ಪ್ರಸ್ತುತಪಡಿಸಲಾಗುತ್ತದೆ. 

ಗುರುತಿಸಲಾದ ವಿಷಯಗಳ ಕುರಿತು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳನ್ನು ಒಳಗೊಂಡಿರುವ ವ್ಯಾಪಕವಾದ ಚರ್ಚೆಗಳೊಂದಿಗೆ ಸಮ್ಮೇಳನ ಸಮಾಪನಗೊಳ್ಳಲಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿಯೊಂದು ವಿಷಯಗಳ ಅಡಿಯಲ್ಲಿ ಉತ್ತಮ ಪದ್ದತಿಗಳನ್ನು ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುವುದು, ಇದರಿಂದಾಗಿ ಇತರೆ ರಾಜ್ಯಗಳು ಆ ಅಂಶಗಳನ್ನು ಪರಸ್ಪರ ಕಲಿಯಬಹುದಾಗಿದೆ. 

2014ರಿಂದಲೂ ಪ್ರಧಾನಮಂತ್ರಿ ಅವರು ಡಿಜಿಪಿ ಸಮ್ಮೇಳನದ ಬಗ್ಗೆ  ತೀವ್ರ ಆಸಕ್ತಿ ವಹಿಸುತ್ತಿದ್ದಾರೆ. ಹಿಂದಿನ ಪ್ರಧಾನಮಂತ್ರಿಗಳ ಸಾಂಕೇತಿಕ ಉಪಸ್ಥಿತಿಗಿಂತ ಭಿನ್ನವಾಗಿ, ಅವರು ಸಮ್ಮೇಳನದ ಎಲ್ಲಾ ಪ್ರಮುಖ ಗೋಷ್ಠಿಗಳಲ್ಲೂ ಕುಳಿತು ಆಲಿಸುತ್ತಾರೆ. ಪ್ರಧಾನಮಂತ್ರಿ ಎಲ್ಲಾ  ಚರ್ಚೆ ಹಾಗೂ ಮಾಹಿಗಳನ್ನು ತಾಳ್ಮೆಯಿಂದ ಆಲಿಸುವುದು ಮಾತ್ರವಲ್ಲದೆ, ಹೊಸ ಆಲೋಚನೆಗಳು ಹುಟ್ಟಲು ಅನುವಾಗುವಂತೆ ಮುಕ್ತ ಮತ್ತು ಅನೌಪಚಾರಿಕ ಚರ್ಚೆಗಳನ್ನು ಪ್ರೋತ್ಸಾಹಿಸುತ್ತಾರೆ. ಈ ವರ್ಷದ ಸಮ್ಮೇಳನದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲೂ ಮುಕ್ತ ಮನಸ್ಸಿನ ವಿಷಯಾಧಾರಿತ ಚರ್ಚೆಗಳನ್ನು ಸಹ ಆಯೋಜಿಸಲಾಗಿದೆ. ದೇಶದ ಮೇಲೆ ಪರಿಣಾಮ ಬೀರುವ ಪ್ರಮುಖ ಪೋಲೀಸಿಂಗ್ ಮತ್ತು ಆಂತರಿಕ ಭದ್ರತಾ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯ ಮತ್ತು ಶಿಫಾರಸುಗಳನ್ನು ಪ್ರಧಾನಿ ಅವರೊಂದಿಗೆ ಹಂಚಿಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಇದು ಅವಕಾಶವನ್ನು ಒದಗಿಸುತ್ತದೆ.

ಪ್ರಧಾನಮಂತ್ರಿ ಅವರು 2014ರಿಂದ ದೇಶಾದ್ಯಂತ ವಾರ್ಷಿಕ ಡಿಜಿಪಿ ಸಮ್ಮೇಳನಗಳನ್ನು ಆಯೋಜಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಸಮ್ಮೇಳನವನ್ನು 2014 ರಲ್ಲಿ ಗುವಾಹಟಿಯಲ್ಲಿ ಆಯೋಜಿಸಲಾಗಿತ್ತು; ಅನಂತರ 2015ರಲ್ಲಿ ಧೋರ್ಡೊ, ರಣ್ ಆಫ್ ಕಚ್; 2016 ರಲ್ಲಿ ಹೈದರಾಬಾದ್ ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿ: 2017ರಲ್ಲಿ ತೆಕನ್‌ಪುರ ಬಿಎಸ್ ಎಫ್ ಅಕಾಡೆಮಿ,; 2018 ರಲ್ಲಿ ಕೆವಾಡಿಯಾ; 2019ರಲ್ಲಿ ಪುಣೆಯ ಐಐಎಸ್ ಇಆರ್; 2021ರಲ್ಲಿ ಲಕ್ನೋದ ಪೊಲೀಸ್ ಪ್ರಧಾನ ಕಛೇರಿಯಲ್ಲಿ; ಮತ್ತು 2023ರಲ್ಲಿ ದೆಹಲಿಯ ಪುಸಾದ ರಾಷ್ಟ್ರೀಯ ಕೃಷಿ ವಿಜ್ಞಾನ ಆವರಣದಲ್ಲಿ ಆಯೋಜಿಸಲಾಗಿತ್ತು. ಅದೇ  ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದು ಈ ವರ್ಷ ಜೈಪುರದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.

ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು, ಸಂಪುಟ ಕಾರ್ಯದರ್ಶಿ, ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು, ಮತ್ತಿತರರು  ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.  
 

***



(Release ID: 1993053) Visitor Counter : 78