ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

​​​​​​​ವರ್ಷದ ಮೆಲುಕು – 2023:  ಗ್ರಾಹಕ ವ್ಯವಹಾರಗಳ ಇಲಾಖೆ

2023ರಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯು 140 ಬೆಲೆ ವರದಿ ಕೇಂದ್ರಗಳನ್ನು ಸ್ಥಾಪಿಸಿದ್ದು, 2023 ರಲ್ಲಿ ಒಟ್ಟು 5508 ನಿಯಮಗಳು / ನಿಬಂಧನೆಗಳು / ಮಾರ್ಗಸೂಚಿಗಳನ್ನು ಹೊರಡಿಸಿದೆ

ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಪುನಶ್ಚೇತನ

ಏಪ್ರಿಲ್ 2023 ರಿಂದ ನವೆಂಬರ್ 2023ರವರೆಗೆ, 1320 ಮಾನದಂಡಗಳನ್ನು (455 ಹೊಸ ಮತ್ತು 865 ಪರಿಷ್ಕೃತ) ರೂಪಿಸಲಾಗಿದೆ ಮತ್ತು 2118 ಮಾನದಂಡಗಳನ್ನು ಪರಿಶೀಲಿಸಲಾಗಿದೆ

Posted On: 20 DEC 2023 5:03PM by PIB Bengaluru

ʻಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯʼದ ಅಡಿಯಲ್ಲಿ ಕಾರ್ಯನಿರ್ವಹಿಸುವ ʻಗ್ರಾಹಕ ವ್ಯವಹಾರಗಳ ಇಲಾಖೆʼಯು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವುದರಿಂದ ಹಿಡಿದು ಬೆಲೆ ಮೇಲ್ವಿಚಾರಣೆಯನ್ನು ಬಲಪಡಿಸುವವರೆಗೆ ಹಾಗೂ ಗ್ರಾಹಕರನ್ನು ಅವರ ಹಕ್ಕುಗಳ ಬಗ್ಗೆ ಸಂವೇದನಾಶೀಲಗೊಳಿಸುವವರೆಗೆ ವರ್ಷವಿಡೀ ಹತ್ತಾರು ಸಂಘಟಿತ ಪ್ರಯತ್ನಗಳನ್ನು ಮಾಡಿದೆ.

2023ರಲ್ಲಿ ಇಲಾಖೆಯ ಕೆಲವು ಪ್ರಮುಖ ಉಪಕ್ರಮಗಳು ಮತ್ತು ಸಾಧನೆಗಳು ಹೀಗಿವೆ:

ಬೆಲೆ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಬಲಪಡಿಸುವ ಪ್ರಯತ್ನಗಳು

ಭಾರತದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಈಶಾನ್ಯ ಪ್ರದೇಶಗಳನ್ನು ಪ್ರತಿನಿಧಿಸುವ ಹಾಗೂ ದೇಶಾದ್ಯಂತ ವ್ಯಾಪಿಸಿರುವ 550 ಮಾರುಕಟ್ಟೆ ಕೇಂದ್ರಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ʻಬೆಲೆ ಮೇಲ್ವಿಚಾರಣಾ ಘಟಕʼವು 22 ಅಗತ್ಯ ಸರಕುಗಳ (ಅಕ್ಕಿ, ಗೋಧಿ, ಗೋಧಿ ಹಿಟ್ಟು, ಕಡಲೆ ಬೇಳೆ, ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ಮಸೂರ್ ದಾಲ್, ಸಕ್ಕರೆ, ಬೆಲ್ಲ, ನೆಲಗಡಲೆ ಎಣ್ಣೆ, ಸಾಸಿವೆ ಎಣ್ಣೆ, ವನಸ್ಪತಿ, ಸೂರ್ಯಕಾಂತಿ ಎಣ್ಣೆ, ಸೋಯಾ ಎಣ್ಣೆ, ತಾಳೆ ಎಣ್ಣೆ, ಚಹಾ, ಹಾಲು, ಆಲೂಗಡ್ಡೆ, ಈರುಳ್ಳಿ, ಟೊಮೆಟೊ ಮತ್ತು ಉಪ್ಪು) ಸಗಟು ಮತ್ತು ಚಿಲ್ಲರೆ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.  ಈ ಬೆಲೆಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಸಂಗ್ರಹಿಸಲಾಗುತ್ತದೆ. ಇದಲ್ಲದೆ, ಈ ಕೆಳಗಿನ ಸಾಧನೆಗಳನ್ನು ಮಾಡಲಾಗಿದೆ:

  1. ಈ ವರ್ಷದಲ್ಲಿ 140 ʻಬೆಲೆ ವರದಿ ಕೇಂದ್ರʼಗಳನ್ನು ಸ್ಥಾಪಿಸಲಾಗಿದೆ. ಬೆಲೆ ವರದಿ ಕೇಂದ್ರಗಳ ಸಂಖ್ಯೆ 01/01/2023 ರಂದು 410 ಇದ್ದದ್ದು, ಈಗ 550ಕ್ಕೆ ಏರಿದೆ.
  2. ʻಬೆಲೆ ಮೇಲ್ವಿಚಾರಣಾ ಘಟಕʼವನ್ನು ಬಲಪಡಿಸುವ ಯೋಜನೆಯ ಕಾರ್ಯಾಚರಣಾ ಮಾರ್ಗಸೂಚಿಗಳನ್ನು 19/08/2021 ರಂದು ಹೊರಡಿಸಲಾಗಿದೆ
  3. ಈ ವರ್ಷದಲ್ಲಿ, ಬೆಲೆ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಬಲಪಡಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 6,23,68,711/- ರೂ. ಒದಗಿಸಲಾಗಿದೆ.
  4. ಬೆಲೆ ವರದಿಗಾಗಿ ಮೊಬೈಲ್ ತಂತ್ರಾಂಶವು 2021ರ ಜನವರಿ 1 ರಿಂದ ಕಾರ್ಯರೂಪಕ್ಕೆ ಬಂದಿದೆ.. ಎಲ್ಲಾ ಬೆಲೆ ಸಂಗ್ರಹ ಕೇಂದ್ರಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ದೈನಂದಿನ ಬೆಲೆ ವರದಿ ಮಾಡುತ್ತಿವೆ.
  5. ಮುನ್ಸೂಚಕ ಬೆಲೆ ಮುನ್ನೋಟ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಬೆಲೆ ಏರಿಳಿತವನ್ನು ಪರಿಶೀಲಿಸಲು ʻಬೆಲೆ ಸ್ಥಿರೀಕರಣ ನಿಧಿʼ

ಕೆಲವು ತೋಟಗಾರಿಕೆ ಸರಕುಗಳ ಬೆಲೆಗಳು ವಿಶೇಷವಾಗಿ ಈರುಳ್ಳಿ, ಆಲೂಗಡ್ಡೆ ಮತ್ತು ಬೇಳೆಕಾಳುಗಳ ಬೆಲೆಗಳು ಹೆಚ್ಚು ಅಸ್ಥಿರವಾಗಿವೆ. ಸಾಮಾನ್ಯವಾಗಿ ಸುಗ್ಗಿಯ ಸಮಯದಲ್ಲಿ ಮತ್ತು ಅದರ ನಂತರದ ಅವಧಿಯಲ್ಲಿ ಸಗಟು ಮತ್ತು ಚಿಲ್ಲರೆ ಬೆಲೆಗಳಲ್ಲಿ ತೀವ್ರ ಕುಸಿತವನ್ನು ಗಮನಿಸಲಾಗಿದೆ. ಸಂಗ್ರಹಿಸಿದ ದಾಸ್ತಾನುಗಳು ಕ್ಷೀಣಿಸಿದಂತೆಲ್ಲಾ, ಬೆಲೆಗಳು ಹೆಚ್ಚಾಗುತ್ತವೆ. ಈರುಳ್ಳಿ, ಆಲೂಗಡ್ಡೆ ಮತ್ತು ಬೇಳೆಕಾಳುಗಳ ವಿಷಯದಲ್ಲಿ ಈ ವಿದ್ಯಮಾನವು ಹೆಚ್ಚು ಸ್ಪಷ್ಟವಾಗಿದೆ. ಬೆಲೆಯ ಏರಿಳಿತವು ಗ್ರಾಹಕರ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಈ ಸರಕುಗಳ ಬೆಲೆಯಲ್ಲಿನ ಅಸಹಜ ಹೆಚ್ಚಳವು ಆಹಾರ ಬಳಕೆಯ ಖರ್ಚಿನ ಹೆಚ್ಚಳದ ಮೂಲಕ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ವ್ಯಾಪಕ ಬೆಲೆ ಏರಿಳಿತಗಳು ಸಟ್ಟಾ ವ್ಯಾಪಾರಕ್ಕೂ ಕಾರಣವಾಗುತ್ತವೆ, ಇದು ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆಗಳ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ.

ʻವಿಶ್ವ ಗ್ರಾಹಕ ಹಕ್ಕುಗಳ ದಿನʼ ಆಚರಣೆ

15.03.2023 ರಂದು ನವದೆಹಲಿಯ ʻವಾಣಿಜ್ಯ ಭವನʼದಲ್ಲಿ ʻವಿಶ್ವ ಗ್ರಾಹಕ ಹಕ್ಕುಗಳ ದಿನʼವನ್ನು ಆಚರಿಸಲಾಯಿತು. "ಶುದ್ಧ ಇಂಧನಕ್ಕೆ ಪರಿವರ್ತನೆ  ಮೂಲಕ ಗ್ರಾಹಕರನ್ನು ಸಬಲೀಕರಣಗೊಳಿಸುವುದು" ಎಂಬುದು ಈ ಕಾರ್ಯಕ್ರಮದ ವಿಷಯವಸ್ತು ಆಗಿತ್ತು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ; ಗ್ರಾಹಕ ವ್ಯವಹಾರಗಳು; ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದಲ್ಲದೆ, ಇಲಾಖೆಯು ಉದ್ಯಮದಾದ್ಯಂತ ಹಲವಾರು ಸಮ್ಮೇಳನಗಳನ್ನು ಆಯೋಜಿಸಿತು. ಕಳೆದ ಮಾರ್ಚ್‌ನಲ್ಲಿ ʻಗ್ರಾಹಕ ಮತ್ತು ವಿಮಾ ವಲಯದ ಕುರಿತ ದುಂಡು ಮೇಜಿನ ಸಮ್ಮೇಳನʼದ ಜೊತೆಗೆ, ಚಂಡೀಗಢದಲ್ಲಿ "ಉತ್ತರದ ರಾಜ್ಯಗಳಲ್ಲಿ ಗ್ರಾಹಕ ರಕ್ಷಣೆ" ಕುರಿತು ಒಂದು ದಿನದ ಕಾರ್ಯಾಗಾರವನ್ನು ಇಲಾಖೆಯು ಆಯೋಜಿಸಿತು. ಅಷ್ಟೇ ಅಲ್ಲದೆ, ಮುಂಬೈನಲ್ಲಿ "ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವುದು ಹೇಗೆ?" ಎಂಬ ದುಂಡು ಮೇಜಿನ ಸಮ್ಮೇಳನ, ಮುಂಬೈನಲ್ಲಿ "ಕರಾಳ ಮಾದರಿಗಳು" ಕುರಿತು ಮಧ್ಯಸ್ಥಗಾರರೊಂದಿಗೆ ಸಂವಾದಾತ್ಮಕ ಸಮಾಲೋಚನೆಯನ್ನೂ ಸಹ ಇಲಾಖೆಯು ಏರ್ಪಡಿಸಿತ್ತು. ವಿಶಾಖಪಟ್ಟಣಂನಲ್ಲಿ ನಡೆದ ಕಾರ್ಯಾಗಾರವು ಗ್ರಾಹಕರ ರಕ್ಷಣೆ ಮತ್ತು ಇತರೆ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿತು.

2023 ರಲ್ಲಿ ಅಧಿಸೂಚಿತ ನಿಯಮಗಳು / ನಿಬಂಧನೆಗಳು / ಮಾರ್ಗಸೂಚಿಗಳು

2023ರಲ್ಲಿ ʻಗ್ರಾಹಕ ಸಂರಕ್ಷಣಾ ಕಾಯ್ದೆ-2019ʼರ ಅಡಿಯಲ್ಲಿ ಈ ಕೆಳಗಿನ ಆದೇಶಗಳು ನಿಯಮಗಳು / ನಿಬಂಧನೆಗಳು / ಮಾರ್ಗಸೂಚಿಗಳನ್ನು ಇಲಾಖೆಯು ಹೊರಡಿಸಿದೆ:

  1. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಗ್ರೂಪ್ 'ಬಿ' ಹುದ್ದೆಗಳು) ನೇಮಕಾತಿ ನಿಯಮಗಳು- 2023
  2. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಗ್ರೂಪ್ 'ಎ' ಹುದ್ದೆಗಳು) ನೇಮಕಾತಿ ನಿಯಮಗಳು-2023
  3. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ರಿಜಿಸ್ಟ್ರಾರ್) ನೇಮಕಾತಿ ನಿಯಮಗಳು-2023
  4. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಅಧಿಕಾರಿಗಳು ಮತ್ತು ನೌಕರರ ಸೇವಾ ನಿಯಮಗಳು ಮತ್ತು ಷರತ್ತುಗಳು) ನಿಯಮಗಳು-2023
  5. ಗ್ರಾಹಕ ರಕ್ಷಣೆ (ನೇರ ಮಾರಾಟ) (ತಿದ್ದುಪಡಿ) ನಿಯಮಗಳು-2023
  6. ಗ್ರಾಹಕ ರಕ್ಷಣೆ (ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ) (ತಿದ್ದುಪಡಿ) ನಿಯಮಗಳು-2023
  7. ಗ್ರಾಹಕ ರಕ್ಷಣೆ (ನೇಮಕಾತಿಗೆ ಅರ್ಹತೆ, ನೇಮಕಾತಿ ವಿಧಾನ, ಅಧಿಕಾರಾವಧಿ, ರಾಜ್ಯ ಆಯೋಗ ಮತ್ತು ಜಿಲ್ಲಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ರಾಜೀನಾಮೆ ಮತ್ತು ತೆಗೆದುಹಾಕುವಿಕೆ) (ತಿದ್ದುಪಡಿ) ನಿಯಮಗಳು-2023
  8. ʻಕರಾಳ ಮಾದರಿʼಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳು-2023

ʻಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರʼವು(ಸಿಸಿಪಿಎ) ʻಕರಾಳ ಮಾದರಿಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾರ್ಗಸೂಚಿ- 2023ʼ ಅನ್ನು ಹೊರಡಿಸಿದೆ

ʻಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರʼವು(ಸಿಸಿಪಿಎ) ಕರಾಳ ಮಾದರಿಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ -2019ರ ಸೆಕ್ಷನ್ 2(28) ಮತ್ತು 2(47)ರ ಅಡಿಯಲ್ಲಿ ವ್ಯಾಖ್ಯಾನಿಸಲಾದ, ಸ್ವರೂಪದಲ್ಲಿ ಮೋಸದ ಅಭ್ಯಾಸಗಳನ್ನು ಹೋಲುವ "ದಾರಿತಪ್ಪಿಸುವ ಜಾಹೀರಾತುಗಳು" ಅಥವಾ "ಅನ್ಯಾಯದ ವ್ಯಾಪಾರ ಅಭ್ಯಾಸ"ಗಳನ್ನು ನಿಯಂತ್ರಿಸಲು ʻಗ್ರಾಹಕ ಸಂರಕ್ಷಣಾ ಕಾಯ್ದೆ-2019ʼರ ಸೆಕ್ಷನ್ 18 (2)(1)ರ ಅಡಿಯಲ್ಲಿ ಮಾರ್ಗಸೂಚಿಗಳನ್ನು ʻಸಿಸಿಪಿಎʼ ಹೊರಡಿಸಿದೆ. ʻಸುಳ್ಳು ತುರ್ತುʼ, ʻಬಾಸ್ಕೆಟ್ ಸ್ನೀಕಿಂಗ್ʼ, ʻಕನ್‌ಫರ್ಮ್ ಶೇಮಿಂಗ್ʼ, ಬಲವಂತದ ಕ್ರಮ, ಚಂದಾದಾರಿಕೆ ಉರುಳು, ʻಇಂಟರ್ಫೇಸ್ ಹಸ್ತಕ್ಷೇಪʼ, ʻಬೈಟ್ ಮತ್ತು ಸ್ವಿಚ್ʼ, ʻಡ್ರಿಪ್ ಪ್ರೈಸಿಂಗ್ʼ, ಮರೆಮಾಚಿದ ಜಾಹೀರಾತುಗಳು ಮತ್ತು ಕಿರಿಕಿರಿ, ʻಟ್ರಿಕ್ ವರ್ಡಿಂಗ್ʼ, ʻಸಾಸ್ ಬಿಲ್ಲಿಂಗ್ʼ ಹಾಗೂ ʻರೋಗ್‌ ಮಾಲ್ವೇರ್‌ʼಗಳು ಸೇರಿದಂತೆ 13 ರೀತಿಯ ʻಡಾರ್ಕ್ ಮಾದರಿʼಗಳನ್ನು ಈ ಮಾರ್ಗಸೂಚಿಗಳು ನಿರ್ದಿಷ್ಟಪಡಿಸುತ್ತವೆ. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಹಾಗೂ ನ್ಯಾಯಯುತ ಮತ್ತು ಪಾರದರ್ಶಕ ಮಾರುಕಟ್ಟೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ವಿಶೇಷವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ಮಾರುಕಟ್ಟೆಯ ಹಿನ್ನೆಲೆಯಲ್ಲಿ ಇವು ಹೆಚ್ಚು ಪ್ರಸ್ತುತವಾಗಿವೆ.

ʻಇ-ಫೈಲಿಂಗ್‌ʼನತ್ತ ಪ್ರಯತ್ನಗಳು

ʻಗ್ರಾಹಕ ಸಂರಕ್ಷಣಾ ಕಾಯ್ದೆ-2019ʼರ ನಿಬಂಧನೆಗಳ ಅಡಿಯಲ್ಲಿ, ಗ್ರಾಹಕರು / ವಕೀಲರು ಮನೆಯಿಂದ ಅಥವಾ ಎಲ್ಲಿಯಾದರೂ ʻಇ-ದಾಖಿಲ್ʼ ಪೋರ್ಟಲ್ ಮೂಲಕ ಗ್ರಾಹಕರ ದೂರನ್ನು ಆನ್‌ಲೈನ್‌ನಲ್ಲೇ ಸಲ್ಲಿಸಲು ಅನುಕೂಲವಾಗುವಂತೆ "edaakhil.nic.in" ಎಂಬ ಗ್ರಾಹಕ ಆಯೋಗದ ಆನ್‌ಲೈನ್‌ ಅಪ್ಲಿಕೇಶನ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ʻಇ-ದಾಖಿಲ್ʼ ಪೋರ್ಟಲ್, ದೂರು ಶುಲ್ಕವನ್ನು ಆನ್‌ಲೈನ್‌ನಲ್ಲೇ ಪಾವತಿಸುವ ಸೌಲಭ್ಯವನ್ನು ಹೊಂದಿದೆ ಮತ್ತು ಶುಲ್ಕ ಪಾವತಿಯ ರಸೀದಿಯನ್ನು ಅಪ್‌ಲೋಡ್‌ ಮಾಡುವ ಮೂಲಕ ತಂತ್ರಾಂಶದಲ್ಲಿ ಶುಲ್ಕವನ್ನು ಪಾವತಿಸುವ ಆಯ್ಕೆಯನ್ನು ಒದಗಿಸುತ್ತದೆ. ಈಗ ʻಇ-ದಖಿಲ್ʼ ಮೂಲಕ  ಮೇಲ್ಮನವಿ ಸಲ್ಲಿಸಲೂ ಅವಕಾಶವಿದೆ.

ಪ್ರಸ್ತುತ ಲಡಾಖ್ ಹೊರತುಪಡಿಸಿ 35 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ʻಎನ್‌ಸಿಡಿಆರ್‌ಸಿʼ ಮೂಲಕ ʻಇ-ದಾಖಿಲ್ʼ ಪೋರ್ಟಲ್ ಅನ್ನು ಪ್ರವೇಶಿಸಬಹುದು.

ಪ್ರಕರಣಗಳ ವಿಲೇವಾರಿ

ವಿವಿಧ ಪ್ರಾದೇಶಿಕ ಕಾರ್ಯಾಗಾರಗಳು, ರಾಜ್ಯ ನಿರ್ದಿಷ್ಟ ಸಭೆಗಳು ಮತ್ತು ವಿವಿಧ ವಲಯ-ನಿರ್ದಿಷ್ಟ ಸಮ್ಮೇಳನಗಳು ಸೇರಿದಂತೆ ಗ್ರಾಹಕ ವ್ಯವಹಾರಗಳ ಇಲಾಖೆ ಕೈಗೊಂಡ ನಾನಾ ಉಪಕ್ರಮಗಳ ಪರಿಣಾಮವಾಗಿ, ಜುಲೈ 2022ರಿಂದ, ಅನೇಕ ರಾಜ್ಯಗಳು ಮತ್ತು ಜಿಲ್ಲಾ ಆಯೋಗಗಳಲ್ಲಿ ಪ್ರಕರಣಗಳ ತ್ವರಿತ ಮತ್ತು ಪರಿಣಾಮಕಾರಿ ವಿಲೇವಾರಿಯಲ್ಲಿ ಗಮನಾರ್ಹ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ. 100% ಕ್ಕಿಂತ ಹೆಚ್ಚು ವಿಲೇವಾರಿ ದರ ಸಾಧಿಸಲಾಗಿದೆ. ಈ ಹಿನ್ನೆಲೆಯಲ್ಲಿ, ʻಗ್ರಾಹಕ ಸಂರಕ್ಷಣಾ ಕಾಯ್ದೆ-2019ʼರ ಉದ್ದೇಶವನ್ನು -  ಅಂದರೆ ಪ್ರಕರಣಗಳ ತ್ವರಿತ, ಪರಿಣಾಮಕಾರಿ ಮತ್ತು ಸಮಯೋಚಿತ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು ಸಕ್ರಿಯವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ.

ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಪುನರುಜ್ಜೀವನ

ಇಲಾಖೆಯು ʻರಾಷ್ಟ್ರೀಯ ಗ್ರಾಹಕ ಸಹಾಯವಾಣಿʼಯನ್ನು(ಎನ್‌ಸಿಎಚ್) ಪುನರುಜ್ಜೀವನಗೊಳಿಸಿದೆ, ಇದು ವ್ಯಾಜ್ಯ ಪೂರ್ವ ಹಂತದಲ್ಲಿ ಕುಂದುಕೊರತೆ ಪರಿಹಾರಕ್ಕಾಗಿ ದೇಶಾದ್ಯಂತ ಗ್ರಾಹಕರಿಗೆ ಏಕ ಪ್ರವೇಶ ಕೇಂದ್ರವಾಗಿ ಹೊರಹೊಮ್ಮಿದೆ. ಟೋಲ್ ಫ್ರೀ ಸಂಖ್ಯೆ ʻ1915ʼ ಮೂಲಕ ಗ್ರಾಹಕರು ದೇಶಾದ್ಯಂತ 17 ಭಾಷೆಗಳಲ್ಲಿ ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಬಹುದು. ಐಟಿ ಬೆಂಬಲಿತ ʻಓಮ್ನಿ ಚಾನೆಲ್ʼ ಕೇಂದ್ರ ಪೋರ್ಟಲ್ ಆಗಿರುವ ʻಸಮಗ್ರ ಕುಂದುಕೊರತೆ ಪರಿಹಾರ ವೇದಿಕೆʼಯಲ್ಲಿ (ಐಎನ್‌ಜಿಆರ್‌ಎಂ) ಈ ಕುಂದುಕೊರತೆಗಳನ್ನು - ವಾಟ್ಸ್‌ಆಪ್‌ ಅಪ್ಲಿಕೇಶನ್, ಎಸ್ಎಂಎಸ್, ಮೇಲ್, ಎನ್‌ಸಿಎಚ್ ತಂತ್ರಾಂಶ, ವೆಬ್ ಪೋರ್ಟಲ್, ʻಉಮಂಗ್ ತಂತ್ರಾಂಶ  - ಹೀಗೆ ವಿವಿಧ ಮಾರ್ಗಗಳ ಮೂಲಕ ನೋಂದಾಯಿಸಬಹುದು.

ಕಾನ್ಫೋನೆಟ್‌

2007 ರಲ್ಲಿ ಪ್ರಾರಂಭಿಸಲಾದ ʻಕಾನ್ಫೋನೆಟ್ʼ(CONFONET) ತಂತ್ರಾಂಶವನ್ನು ಉನ್ನತೀಕರಿಸಲಾಗಿದ್ದು ಇದರ ತಂತ್ರಜ್ಞಾನ, ಸುರಕ್ಷತೆ ಮತ್ತು ಬಳಕೆಯನ್ನು ಆಧುನೀಕರಿಸಲಾಗಿದೆ. ವಿವಿಧ ಮಧ್ಯಸ್ಥಗಾರರ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಉನ್ನತೀಕರಣ ಮತ್ತು ಆಧುನೀಕರಣವನ್ನು ಮಾಡಲಾಗಿದೆ. ʻಇ-ಜಾಗೃತಿʼ ಎಂಬ ನವೀಕರಿಸಿದ ಅತ್ಯಾಧುನಿಕ ಹೊಸ ʻಕೇಂದ್ರ ತಂತ್ರಾಂಶʼವು ಗ್ರಾಹಕ ಪ್ರಕರಣ ನಿರ್ವಹಣಾ ಪ್ರಕ್ರಿಯೆಯನ್ನು ಗಮನಾರ್ಹವಾಗಿ ಸುಧಾರಿಸಿದೆ. ಈ ಹೊಸ ತಂತ್ರಾಂಶವು ʻಸಿಎಂಎಸ್ʼ, ʻಒಸಿಎಂಎಸ್ʼ, ʻಇ-ದಾಖಿಲ್ʼ ಮತ್ತು ʻಎನ್‌ಸಿಡಿಆರ್‌ಸಿʼ ಮಾಡ್ಯೂಲ್‌ಗಳನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸಿದೆ.

ಗ್ರಾಹಕರ ಅನುಕೂಲಕ್ಕಾಗಿ ಮತ್ತು ಅವರ ಮನೆ ಬಾಗಿಲಿಗೆ ನ್ಯಾಯವನ್ನು ತರುವ ಆಶಯದೊಂದಿಗೆ, ʻಎನ್‌ಸಿಡಿಆರ್‌ಸಿʼಯ 10 ಪೀಠಗಳು ಮತ್ತು ʻಎಸ್‌ಸಿಡಿಆರ್‌ಸಿʼಗಳ 35 ಪೀಠಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತಿದೆ. ಈ ಹೊಸ ಸೇವೆಯು ಗ್ರಾಹಕ ಆಯೋಗಗಳಿಗೆ ʻಹೈಬ್ರಿಡ್ ವಿಚಾರಣೆʼಯ ಮೂಲಕ ಪ್ರಕರಣಗಳನ್ನು ಆಲಿಸಲು ಸಹಾಯ ಮಾಡುತ್ತದೆ. ಇದು ಅರ್ಜಿದಾರರು, ವಕೀಲರು ಮತ್ತು ಸಂಸ್ಥೆಗಳು ತಾವಿರುವಲ್ಲಿಂದಲೇ ವಿಚಾರಣೆಗ ಹಾಜರಾಗಲು ಸಹಾಯ ಮಾಡುತ್ತದೆ. ಜೊತೆಗೆ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ವಿಚಾರಣೆಯನ್ನು ಬೆಂಬಲಿಸುತ್ತದೆ. ವೀಡಿಯೊ ಕಾನ್ಫರೆನ್ಸ್‌ ಸಾಧನಗಳನ್ನು ಖರೀದಿಸಲು ಆದೇಶವನ್ನು ನೀಡಲಾಗಿದೆ ಮತ್ತು 2023ರ ಆರಂಭದಿಂದ ಈ ಸೇವೆಗಳು ಗ್ರಾಹಕರಿಗೆ ಲಭ್ಯವಾಗಿವೆ.

ಗುಣಮಟ್ಟ ಮಾನದಂಡಗಳ ಸೂತ್ರೀಕರಣ

ಏಪ್ರಿಲ್ 2023ರಿಂದ  25 ನವೆಂಬರ್ 2023ರ ಅವಧಿಯಲ್ಲಿ, 1320  ಗುಣಮಟ್ಟ ಮಾನದಂಡಗಳನ್ನು (455 ಹೊಸ  ಮತ್ತು 865 ಪರಿಷ್ಕೃತ) ರೂಪಿಸಲಾಗಿದೆ ಮತ್ತು 2118 ಗುಣಮಟ್ಟ ಮಾನದಂಡಗಳನ್ನು ಪರಿಶೀಲಿಸಲಾಗಿದೆ. 25 ನವೆಂಬರ್ 2023ರಂತೆ ಜಾರಿಯಲ್ಲಿರುವ ಒಟ್ಟು ಮಾನದಂಡಗಳ ಸಂಖ್ಯೆ 22320 ಆಗಿದೆ. 8500 ಭಾರತೀಯ ಮಾನದಂಡಗಳನ್ನು ʻಐಎಸ್ಒʼ/ʻಐಇಸಿʼ ಗುಣಮಟ್ಟ ಮಾನದಂಡಗಳೊಂದಿಗೆ ಸಮನ್ವಯಗೊಳಿಸಲಾಗಿದೆ.

ಗುಣಮಟ್ಟ ಮಾನದಂಡಗಳ ಅಭಿವೃದ್ಧಿಯಲ್ಲಿ ಹೊಸ ಉಪಕ್ರಮಗಳು: ʻಗುಣಮಟ್ಟ ಮಾನದಂಡಗಳ ರಾಷ್ಟ್ರೀಯ ಕ್ರಿಯಾ ಯೋಜನೆʼ (SNAP) 2022-27

ʻಭಾರತದ ರಾಷ್ಟ್ರೀಯ ಗುಣಮಟ್ಟ ಮಾನದಂಡಗಳ ಸಂಸ್ಥೆʼಯಾಗಿ (ಎನ್ಎಸ್‌ಬಿ) ತನ್ನ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ʻಗುಣಮಟ್ಟ ಮಾನದಂಡಗಳ ರಾಷ್ಟ್ರಿಐ ಕ್ರಿಯಾ ಯೋಜನೆʼ-2022-27(ಎಸ್‌ಎನ್‌ಎಪಿ-2027) ಅನ್ನು ʻಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ʼ(ಬಿಐಎಸ್) ರೂಪಿಸಿದೆ. ಇದನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು, ಜವಳಿ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು 06 ಜನವರಿ 2023ರಂದು ಔಪಚಾರಿಕವಾಗಿ ಬಿಡುಗಡೆ ಮಾಡಿದರು.

ಈ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲು ʻಬಿಐಎಸ್ʼ ವ್ಯಾಪಕವಾದ ಮಧ್ಯಸ್ಥಗಾರರ ಸಮಾಲೋಚನೆಗಳನ್ನು ಕೈಗೊಂಡಿದೆ. ಸರ್ಕಾರದ ನೀತಿಗಳು ಮತ್ತು ಆದ್ಯತೆಗಳಿಗೆ ಸೂಕ್ತ ಪರಿಗಣನೆ ನೀಡಲಾಗಿದೆ. ಮಾನದಂಡಗಳ ಅಭಿವೃದ್ಧಿಗಾಗಿ ಗುರುತಿಸಲಾದ ವಿಷಯಗಳು / ಅಂಶಗಳ ಮೇಲೆ ಪ್ರಮಾಣೀಕರಣ ಕಾರ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ,  ಲಭ್ಯವಿರುವ ʻಐಎಸ್ಒʼ ಮಾರ್ಗಸೂಚಿಗಳನ್ನು ರಾಷ್ಟ್ರೀಯ ಸಾಮಾಜಿಕ-ಆರ್ಥಿಕ ಅವಶ್ಯಕತೆಗಳ ಆಧರಿತವಾಗಿ ಮೌಲ್ಯಮಾಪನ ಮಾಡಲಾಯಿತು. ʻಎಸ್‌ಎನ್‌ಎಪಿ- 2022-27ʼರಲ್ಲಿ ಒಟ್ಟು 34 ವಲಯಗಳು, 138 ಕ್ಷೇತ್ರಗಳು ಮತ್ತು 533 ವಿಷಯ ಪ್ರದೇಶಗಳನ್ನು ಗುರುತಿಸಲಾಗಿದೆ.

ʻಹಾಲ್ಮಾರ್ಕ್‌ʼ ಕಾರ್ಯದತ್ತ ಪ್ರಯತ್ನಗಳು

ಏಪ್ರಿಲ್ 1, 2023 ರಿಂದ ನವೆಂಬರ್ 25, 2023ರ ಅವಧಿಯಲ್ಲಿ ʻಹಾಲ್ಮಾರ್ಕಿಂಗ್‌ʼ ನೋಂದಣಿಗಳ ಸಂಖ್ಯೆ 1,60,866 ರಿಂದ 1,84,296ಕ್ಕೆ ಏರಿದೆ. ʻಬಿಐಎಸ್ʼನಿಂದ ಮಾನ್ಯತೆ ಪಡೆದ ʻಅಸ್ಸೇಯಿಂಗ್ʼ ಮತ್ತು ʻಹಾಲ್ಮಾರ್ಕಿಂಗ್‌ ಕೇಂದ್ರʼಗಳ ಸಂಖ್ಯೆ 1403 ರಿಂದ 1499ಕ್ಕೆ ಏರಿದೆ. ಈ ಅವಧಿಯಲ್ಲಿ 26 ʻಆಫ್-ಸೈಟ್ʼ ಕೇಂದ್ರಗಳನ್ನು ಸಹ ಗುರುತಿಸಲಾಗಿದೆ. ಇದೇ ಅವಧಿಯಲ್ಲಿ, 10.39 ಕೋಟಿ ಚಿನ್ನ ಮತ್ತು ಬೆಳ್ಳಿ ಆಭರಣಗಳು / ಕಲಾಕೃತಿಗಳನ್ನು ಹಾಲ್ಮಾರ್ಕ್ ಮಾಡಲಾಗಿದೆ.

ಚಿನ್ನದ ಆಭರಣಗಳು / ಕಲಾಕೃತಿಗಳಿಗೆ ಹಾಲ್ಮಾರ್ಕ್‌ ಮಾಡುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ʻಗುಣಮಟ್ಟ ನಿಯಂತ್ರಣ ಆದೇಶʼಕ್ಕೆ 2023ರ ಸೆಪ್ಟೆಂಬರ್ 06 ರಂದು ತಿದ್ದುಪಡಿ ತಂದಿದೆ. ಇದರೊಂದಿಗೆ ಕಡ್ಡಾಯ ಹಾಲ್ಮಾರ್ಕಿಂಗ್ ವ್ಯಾಪ್ತಿಯ ಅಡಿಯಲ್ಲಿ ಬರುವ ದೇಶದ ಒಟ್ಟು ಜಿಲ್ಲೆಗಳ ಸಂಖ್ಯೆಯು  288ರಿಂದ 343ಕ್ಕೆ ಹೆಚ್ಚಿದೆ. ಈ ಜಿಲ್ಲೆಗಳಲ್ಲಿ 01 ಜೂನ್ 2022ರಿಂದ ಕನಿಷ್ಠ ಒಂದು ʻಅಸ್ಸೆಯಿಂಗ್ʼ ಮತ್ತು ಹಾಲ್ಮಾರ್ಕಿಂಗ್ ಕೇಂದ್ರ ಇರುವಂತೆ ನೋಡಿಕೊಳ್ಳಲಾಗಿದೆ.

ʻಕಡ್ಡಾಯ ಹಾಲ್ಮಾರ್ಕಿಂಗ್ ಆದೇಶʼದ ಅನುಷ್ಠಾನದ ದೃಷ್ಟಿಯಿಂದ, ʻಅಸ್ಸೇಯಿಂಗ್‌ ಮತ್ತು ಹಾಲ್ಮಾರ್ಕಿಂಗ್‌ ಕೇಂದ್ರʼಗಳಲ್ಲಿ (ಎಎಚ್‌ಸಿ) ಅಸ್ಸೇಯಿಂಗ್ ಮತ್ತು ಹಾಲ್ಮಾರ್ಕಿಂಗ್ ಚಟುವಟಿಕೆಗಳನ್ನು ಯಾಂತ್ರೀಕರಣಗೊಳಿಸಲು ಹೊಸ ಆನ್ಲೈನ್ ವ್ಯವಸ್ಥೆಯನ್ನು ಮಾಡಲಾಗಿದೆ. 01 ಜುಲೈ 2021 ರಿಂದ ಆರು ಅಂಕಿಯ ʻಎಚ್‌ಯುಐಡಿʼ (ಹಾಲ್ಮಾರ್ಕಿಂಗ್ ಅನನ್ಯ ಐಡಿ) ಒಳಗೊಂಡ ಹೊಸ ಹಾಲ್ಮಾರ್ಕ್‌ನೊಂದಿಗೆ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ. ಹಾಲ್ಮಾರ್ಕಿಂಗ್‌ಗಾಗಿ ʻಎಚ್‌ಯುಐಡಿʼ ಆಧಾರಿತ ವ್ಯವಸ್ಥೆಯನ್ನು ಪ್ರಾರಂಭಿಸಿದಾಗಿನಿಂದ, 25 ನವೆಂಬರ್ 2023 ರವರೆಗೆ 30.54 ಕೋಟಿ ಚಿನ್ನದ ಆಭರಣಗಳು / ಕಲಾಕೃತಿಗಳನ್ನು ಹಾಲ್ಮಾರ್ಕ್ ಮಾಡಲಾಗಿದೆ.

ʻಐಎಸ್ 1417:2016ʼ ಪ್ರಕಾರ 2015ರ ಅಕ್ಟೋಬರ್‌ನಿಂದ 999 ಮತ್ತು 995ರ ಚಿನ್ನದ ಗಟ್ಟಿಗಳ ಹಾಲ್ಮಾರ್ಕಿಂಗ್ ಪ್ರಾರಂಭಿಸಲಾಯಿತು. ಈ ಯೋಜನೆಯಡಿ, 2023ರ ನವೆಂಬರ್ 25 ರವರೆಗೆ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗಾಗಿ ಸಂಸ್ಕರಣಾಗಾರಗಳು / ಭಾರತ ಸರ್ಕಾರದ ಠಂಕಶಾಲೆಗಳಿಗೆ 50 ಪರವಾನಗಿಗಳನ್ನು ನೀಡಲಾಗಿದೆ.

ಭಾರತ ಸರ್ಕಾರವು 05 ನವೆಂಬರ್ 2015 ರಂದು ಚಿನ್ನದ ನಗದೀಕರಣ ಯೋಜನೆಯನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ, ಸಂಗ್ರಹ ಮತ್ತು ಶುದ್ಧತೆ ಪರೀಕ್ಷಾ ಕೇಂದ್ರಗಳಾಗಿ (ಸಿಪಿಟಿಸಿ) ಕಾರ್ಯನಿರ್ವಹಿಸಲು 48 ʻಅಸ್ಸೇಯಿಂಗ್‌ ಮತ್ತು ಹಾಲ್ಮಾರ್ಕಿಂಗ್‌ ಕೇಂದ್ರʼಗಳು(ಎ&ಹೆಚ್‌) ಹಾಗೂ ಒಂದು ಆಭರಣ ಮಳಿಗೆಗೆ ಅನುಮತಿ ನೀಡಲಾಗಿದೆ. ಹಾಲ್ಮಾರ್ಕಿಂಗ್ ಯೋಜನೆಯಡಿ, ಈ ಅವಧಿಯಲ್ಲಿ, ಕೊರತೆಯ ಸ್ಥಳದಲ್ಲಿ ಕೇಂದ್ರವನ್ನು ಸ್ಥಾಪಿಸಲು ಮೂರು ʻಎಎಚ್‌ಸಿʼಗಳಿಗೆ ಕೇಂದ್ರ ನೆರವು ನೀಡಿದೆ. ಸಾಮರ್ಥ್ಯ ವರ್ಧನೆಗಾಗಿ ʻಬಿಐಎಸ್ʼ ಅಧಿಕಾರಿಗಳನ್ನು ತರಬೇತುಗೊಳಿಸಲು ಒಂದು ಕಾರ್ಯಕ್ರಮವು  ಆಯೋಜಿಸಲಾಗಿತ್ತು.

ನವದೆಹಲಿಯಲ್ಲಿ 02-03 ನವೆಂಬರ್ 2023 ರಂದು ʻಜಿ-20 ಪ್ರಮಾಣೀಕರಣ ಸಂವಾದ-2023ʼ

ಭಾರತದ ಜಿ-20 ಅಧ್ಯಕ್ಷತೆಯ ಚೌಕಟ್ಟಿನೊಳಗೆ, ʻಜಿ-20 ಪ್ರಮಾಣೀಕರಣ ಸಂವಾದ-2023ʼ ಅನ್ನು  2023ರ ನವೆಂಬರ್ 02-03ರಂದು ಭಾರತದ ನವದೆಹಲಿಯ ʻಭಾರತ್ ಮಂಟಪʼದಲ್ಲಿ ʻಬಿಐಎಸ್ʼ ಆಯೋಜಿಸಿತು. 'ಶೂನ್ಯ ದೋಷ ಮತ್ತು ಶೂನ್ಯ ಪರಿಣಾಮ' ಸಾಧಿಸಲು ಅಂತರ್ಗತ ಪ್ರಮಾಣೀಕರಣ ಮತ್ತು ಉತ್ತಮ ನಿಯಂತ್ರಕ ಅಭ್ಯಾಸಗಳ ಮೂಲಕ ಸುಸ್ಥಿರತೆಯನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಸಂವಾದದಲ್ಲಿ ಚರ್ಚಿಸಲಾಯಿತು. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಹಾಗೂ ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಬೆಂಬಲ ಮತ್ತು ಮಾರ್ಗದರ್ಶನದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ʻಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆʼ(ಐಎಸ್ಒ), ʻಅಂತರರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಕಮಿಷನ್ʼ(ಐಇಸಿ) ಮತ್ತು ʻಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟʼ(ಐಟಿಯು), ಜಿ 20 ಸದಸ್ಯ ರಾಷ್ಟ್ರಗಳ ʻರಾಷ್ಟ್ರೀಯ ಮಾನದಂಡಗಳ ಸಂಸ್ಥೆಗಳು, ಮತ್ತು ಆಹ್ವಾನಿತ ದೇಶಗಳ ಅಂತರರಾಷ್ಟ್ರೀಯ ನಿಯೋಗಗಳು ಹಾಗೂ ಸಚಿವಾಲಯಗಳು; ನಿಯಂತ್ರಣ ಸಂಸ್ಥೆಗಳು, ಮಾನ್ಯತೆ ಸಂಸ್ಥೆಗಳು, ಕೈಗಾರಿಕೆ, ಕೈಗಾರಿಕಾ ಸಂಘಗಳು, ಪ್ರಯೋಗಾಲಯಗಳು, ಶೈಕ್ಷಣಿಕ ಮತ್ತು ಗ್ರಾಹಕ ಸಂಘಟನೆಗಳ ಮುಂಚೂಣಿ ವ್ಯಕ್ತಿಗಳ ಉತ್ಸಾಹಭರಿತ ಪ್ರತಿಕ್ರಿಯೆ ಮತ್ತು ಭಾಗವಹಿಸುವಿಕೆಗೆ ಈ ಸಂವಾದವು ಸಾಕ್ಷಿಯಾಯಿತು. ಸಂವಾದದಲ್ಲಿ ಸುಮಾರು 250ಪ್ರತಿನಿಧಿಗಳು ಭಾಗವಹಿಸಿದ್ದರು. ಜಿ-20 ಮಾನದಂಡಗಳ ಸಂವಾದವು ಉದ್ಘಾಟನಾ ಸಮಾರಂಭ ಹಾಗೂ ಮೂರು ತಾಂತ್ರಿಕ ಚರ್ಚಾಗೋಷ್ಠಿಗಳನ್ನು ಒಳಗೊಂಡಿತ್ತು. ನಂತರ ನಡೆದ 'ಶೂನ್ಯ ದೋಷ ಮತ್ತು ಶೂನ್ಯ ಪರಿಣಾಮ' ಕಾರ್ಯಕ್ರಮದ ವಿಷಯದ ಬಗ್ಗೆ ಸಮಾರೋಪ ಸಮಾರಂಭದಲ್ಲಿ ಜಿ-20 ಸದಸ್ಯರು ಮತ್ತು ಆಹ್ವಾನಿತರು ತಮ್ಮ ಹೇಳಿಕೆಗಳನ್ನು ನೀಡಿದರು.

ಕಾನೂನು ಮಾಪನಶಾಸ್ತ್ರದತ್ತ ಹೆಜ್ಜೆಗಳು

ಕಾನೂನು ಮಾಪನಶಾಸ್ತ್ರ ಒದಗಿಸುವ ಸೇವೆಗಳಿಗಾಗಿ ಆನ್‌ಲೈನ್ ಪೋರ್ಟಲ್:

ಕಾನೂನು ಮಾಪನಶಾಸ್ತ್ರದಡಿ ನೀಡಲಾಗುವ ಎಲ್ಲಾ ಸೇವೆಗಳನ್ನು ಪೋರ್ಟಲ್‌ಗಳ ಮೂಲಕ ಆನ್‌ಲೈನ್ ನೀಡಲಾಗುತ್ತಿದೆ. ಈ ಪೋರ್ಟಲ್‌ಗಳು ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಅನುಸರಣೆಯ ಹೊರೆಯನ್ನು ಕಡಿಮೆ ಮಾಡಲು ನೆರವಾಗುತ್ತಿವೆ. ಪ್ರಮಾಣೀಕರಣದ ಕೆಲಸವು ಬಹಳ ವೇಗವಾಗಿದೆ ಮತ್ತು ಅರ್ಜಿ ಸಲ್ಲಿಸುವ ಸಮಯವನ್ನು ಸಾಕಷ್ಟು ಕಡಿಮೆ ಮಾಡಿದೆ.

ಎನ್ಎಸ್‌ಡಬ್ಲ್ಯೂಎಸ್(NSWS) ಪೋರ್ಟಲ್: ಕಾನೂನು ಮಾಪನಶಾಸ್ತ್ರವು ಒದಗಿಸುವ ಈ ಕೆಳಗಿನ ಎರಡು ಸೇವೆಗಳು www.nsws.gov.in ಪೋರ್ಟಲ್ನಲ್ಲಿವೆ:

  • (ಎ) ತೂಕಗಳು ಮತ್ತು ಅಳತೆಗಳ ಮಾದರಿಗಳ ಅನುಮೋದನೆ
  • (ಬಿ) ಪೂರ್ವ-ಪ್ಯಾಕೇಜ್ ಮಾಡಿದ ಸರಕುಗಳ ತಯಾರಕರು / ಪ್ಯಾಕರ್‌ಗಳು / ಆಮದುದಾರರ ನೋಂದಣಿ
  • (ii) ಗ್ರಾಹಕ ವ್ಯವಹಾರಗಳ ಇಲಾಖೆ ಅಭಿವೃದ್ಧಿಪಡಿಸಿದ ಪೋರ್ಟಲ್ www.lm.doca.gov.in ಅನ್ನು ಈ ಕೆಳಗಿನವುಗಳಿಗೆ ಅರ್ಜಿಗಳನ್ನು ಸಲ್ಲಿಸಲು / ಪ್ರಮಾಣಪತ್ರಗಳನ್ನು ನೀಡಲು ಬಳಸಲಾಗುತ್ತದೆ:
  • (ಎ) ಕಂಪನಿಯ ನಿರ್ದೇಶಕರ ನಾಮನಿರ್ದೇಶನ
  • (ಬಿ) ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ತೂಕ ಮತ್ತು ಅಳತೆ ಉಪಕರಣದ ಆಮದು ನೋಂದಣಿ

ವ್ಯಾಪಾರವನ್ನು ಸುಗಮಗೊಳಿಸುವ ನಿಯಮಗಳ ಅಡಿಯಲ್ಲಿ ಈ ಕೆಳಗಿನ ತಿದ್ದುಪಡಿಗಳನ್ನು ಮಾಡಲಾಗಿದೆ:

ಕಾನೂನು ಮಾಪನಶಾಸ್ತ್ರ ಕಾಯ್ದೆ-2009ರ ಸೆಕ್ಷನ್ 49ರ ಪ್ರಕಾರ, ಕಂಪನಿಗಳು ತಮ್ಮ ಯಾವುದೇ ನಿರ್ದೇಶಕರನ್ನು ಕಂಪನಿಯ ವ್ಯವಹಾರಕ್ಕೆ ಜವಾಬ್ದಾರಿಯುತ ವ್ಯಕ್ತಿಯಾಗಿ ನಾಮನಿರ್ದೇಶನ ಮಾಡಲು ಅವಕಾಶ ನೀಡುತ್ತದೆ. ಸಂಸ್ಥೆಯ ಅಥವಾ ಶಾಖೆಯ ಅಧಿಕಾರ ಮತ್ತು ಜವಾಬ್ದಾರಿಯನ್ನು ನಿಜವಾಗಿಯೂ ಹೊಂದಿರುವ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡುವಂತೆ ವಿವಿಧ ಕೈಗಾರಿಕೆಗಳಿಂದ ವಿನಂತಿ ಇತ್ತು. ಅನುಸರಣೆಯ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ʻಕಾನೂನು ಮಾಪನಶಾಸ್ತ್ರ (ಸಾಮಾನ್ಯ) ನಿಯಮಗಳು-2011ʼಕ್ಕೆ ತಿದ್ದುಪಡಿ ಮಾಡಲಾಗಿದೆ. ಇದರನ್ವಯ ವಿಭಿನ್ನ ಸಂಸ್ಥೆಗಳು ಅಥವಾ ಶಾಖೆಗಳು ಅಥವಾ ವಿಭಿನ್ನ ಘಟಕಗಳನ್ನು ಹೊಂದಿರುವ ಕಂಪನಿಗಳಿಗೆ ಯಾವುದೇ ಸಂಸ್ಥೆ ಅಥವಾ ಶಾಖೆಯಲ್ಲಿ ಆಯಾ ಸಂಸ್ಥೆಗಳು ಅಥವಾ ಶಾಖೆಗಳು ಅಥವಾ ವಿವಿಧ ಘಟಕಗಳ ಚಟುವಟಿಕೆಗಳನ್ನು ಯೋಜಿಸುವ, ನಿರ್ದೇಶಿಸುವ ಮತ್ತು ನಿಯಂತ್ರಿಸುವ ಅಧಿಕಾರ ಮತ್ತು ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಯನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡಲಾಗಿದೆ.

ʻಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ಡ್ ಸರಕುಗಳು) ನಿಯಮಗಳು-2011ʼಕ್ಕೆ ತಿದ್ದುಪಡಿ ಮಾಡಲಾಗಿದ್ದು, ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳು ಪ್ಯಾಕೇಜ್‌ನಲ್ಲಿ ಘೋಷಿಸದಂತಹ ಕೆಲವೊಂದು ಕಡ್ಡಾಯ ಘೋಷಣೆಗಳನ್ನು ʻಕ್ಯೂಆರ್ ಕೋಡ್ʼ ಮೂಲಕ ಡಿಜಿಟಲ್ ರೂಪದಲ್ಲಿ ಘೋಷಿಸಲು ಅನುಮತಿಸಲಾಗಿದೆ. ಈ ಅನುಮತಿಯು ತಂತ್ರಜ್ಞಾನದ ಹೆಚ್ಚಿನ ಬಳಕೆಯ ಮೂಲಕ ಡಿಜಿಟಲ್ ಯುಗದಲ್ಲಿ ʻಕ್ಯೂಆರ್ ಕೋಡ್ʼ ಮೂಲಕ ಕಡ್ಡಾಯ ಘೋಷಣೆಯನ್ನು ಮಾಡಲು ಅನುವು ಮಾಡಿಕೊಡುತ್ತದೆ. ಸ್ಕ್ಯಾನ್ ಮಾಡುವ ಮೂಲಕ ಈ ಘೋಷಣೆಗಳನ್ನು ವೀಕ್ಷಿಸಬಹುದಾಗಿದೆ.

ಪೂರ್ವ-ಪ್ಯಾಕೇಜ್ ಮಾಡಿದ ಸರಕುಗಳ ಮೇಲೆ ತಯಾರಿಕೆಯ ತಿಂಗಳು ಮತ್ತು ವರ್ಷವನ್ನು ಘೋಷಿಸಲು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಇ-ಕಾಮರ್ಸ್ ಮೂಲಕ ಆರ್ಡರ್ ಮಾಡಿದ ಬಿಡಿ ಸರಕುಗಳಿಗೆ ಕೆಲವು ಘೋಷಣೆಗಳನ್ನು ಮಾಡುವ ನಿಟ್ಟಿನಲ್ಲಿ ʻಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ಡ್ ಸರಕುಗಳು) ನಿಯಮಗಳು-2011ʼಕ್ಕೆ ತಿದ್ದುಪಡಿ ಮಾಡಲಾಗಿದೆ.

ʻಜನ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ-2023ʼ ಅನ್ನು 2023ರ ಕಾಯ್ದೆ ಸಂಖ್ಯೆ 18 ಎಂದು ಪ್ರಕಟಿಸಲಾಗಿದೆ. ಈ ಮಸೂದೆಯು ʻಕಾನೂನು ಮಾಪನಶಾಸ್ತ್ರ ಕಾಯ್ದೆ-2009ʼ ಸೇರಿದಂತೆ 19 ಸಚಿವಾಲಯಗಳು / ಇಲಾಖೆಗಳಲ್ಲಿನ 42 ಕಾಯ್ದೆಗಳಲ್ಲಿ ತಿದ್ದುಪಡಿಗಳನ್ನು ಒಳಗೊಂಡಿದೆ. ಈ ಕಾಯ್ದೆಯಡಿ, ʻಕಾನೂನು ಮಾಪನಶಾಸ್ತ್ರ ಕಾಯ್ದೆ-2009ʼರ 7 ವಿಭಾಗಗಳನ್ನು ಅಪರಾಧಮುಕ್ತಗೊಳಿಸಲಾಗಿದೆ.

ʻಜನ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ-2023ʼರ ಸೆಕ್ಷನ್ 1ರ ಉಪ-ವಿಭಾಗ (2)ರ ಪ್ರಕಾರ, ಸಂಬಂಧಿತ ಸಚಿವಾಲಯಗಳು/ಇಲಾಖೆಗಳು ಅಧಿಸೂಚನೆಗಳನ್ನು ಹೊರಡಿಸಬಹುದು, ಇದರಲ್ಲಿ ತಿದ್ದುಪಡಿಗಳ ಜಾರಿಯ ದಿನಾಂಕವನ್ನು ಆಯಾ ಸಚಿವಾಲಯಗಳು / ಇಲಾಖೆಗಳು ನಿರ್ಧರಿಸಬಹುದು. ಸದರಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಮತ್ತು ಸದರಿ ತಿದ್ದುಪಡಿಯು 01.10.2023 ರಿಂದ ಜಾರಿಗೆ ಬರಲಿದೆ.

ʻಒಐಎಂಎಲ್ʼ 1955ರಲ್ಲಿ ಸ್ಥಾಪನೆಗೊಂಡ ಅಂತರ-ಸರ್ಕಾರಿ ಸಂಸ್ಥೆಯಾಗಿದೆ

1956ರಲ್ಲಿ ಭಾರತವು ಅದರ ಸದಸ್ಯತ್ವ ಪಡೆಯಿತು. ಇದು 63 ಸದಸ್ಯ ರಾಷ್ಟ್ರಗಳು ಮತ್ತು 64 ಬೆಂಬಲಿತ ಸದಸ್ಯರನ್ನು ಹೊಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೂಕ ಅಥವಾ ಅಳತೆಯ ಸಾಧನಗಳನ್ನು ಮಾರಾಟ ಮಾಡಲು ʻಒಐಎಂಎಲ್ʼ ಮಾದರಿ ಅನುಮೋದನೆ ಪ್ರಮಾಣಪತ್ರ ಕಡ್ಡಾಯವಾಗಿದೆ. ವಿಶ್ವದ ಎಲ್ಲಿಯೇ  ತೂಕ ಮತ್ತು ಅಳತೆಗಳ ಸಾಧನಗಳನ್ನು ಮಾರಾಟ ಮಾಡಲು ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ʻಒಐಎಂಎಲ್ʼ ಪ್ರಮಾಣಪತ್ರವನ್ನು ನೀಡುವ ಅಧಿಕಾರವನ್ನು ಭಾರತ ಈಗ ಪಡೆದುಕೊಂಡಿದೆ.

ದೇಶೀಯ ತಯಾರಕರು ಈಗ ಹೆಚ್ಚುವರಿ ಪರೀಕ್ಷಾ ಶುಲ್ಕವನ್ನು ಭರಿಸದೆ ತಮ್ಮ ತೂಕ ಮತ್ತು ಅಳತೆ ಸಾಧನವನ್ನು ವಿಶ್ವಾದ್ಯಂತ ರಫ್ತು ಮಾಡಬಹುದು. ಇದರ ಪರಿಣಾಮವಾಗಿ ಗಮನಾರ್ಹ ವೆಚ್ಚ ಉಳಿತಾಯವಾಗುತ್ತದೆ. ನಮ್ಮ ಪ್ರಮಾಣೀಕೃತ ʻಆಆರ್‌ಎಸ್‌ಎಲ್‌ʼಗಳಿಂದ ʻಒಐಎಂಎಲ್ʼ ಮಾದರಿ ಅನುಮೋದನೆ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಭಾರತವು ವಿದೇಶಿ ತಯಾರಕರನ್ನು ಬೆಂಬಲಿಸಬಹುದು. ವಿದೇಶಿ ತಯಾರಕರಿಗೆ ತೂಕ ಮತ್ತು ಅಳತೆ ಸಾಧನದ ʻಒಐಎಂಎಲ್ʼ ಅನುಮೋದನೆ ಪ್ರಮಾಣಪತ್ರಗಳನ್ನು ನೀಡುವ ಮೂಲಕ, ಭಾರತವು ಶುಲ್ಕ ಇತ್ಯಾದಿಗಳ ವಿಷಯದಲ್ಲಿ ವಿದೇಶಿ ವಿನಿಮಯವನ್ನು ಸಹ ಸೃಷ್ಟಿಸುತ್ತದೆ.

ಭಾರತವು ಈಗ ಆಸ್ಟ್ರೇಲಿಯಾ, ಸ್ವಿಟ್ಸರ್‌ಲೆಂಡ್‌,  ಚೀನಾ, ಜೆಕ್ ಗಣರಾಜ್ಯ, ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್, ಬ್ರಿಟನ್‌, ಜಪಾನ್, ನೆದರ್‌ಲ್ಯಾಂಡ್ಸ್, ಸ್ವೀಡನ್ ಮತ್ತು ಸ್ಲೋವಾಕಿಯಾ ಸೇರಿದಂತೆ ʻಒಐಎಂಎಲ್ʼ ಅನುಮೋದನೆ ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ಹೊಂದಿರುವ ವಿಶ್ವದ 13ನೇ ದೇಶವಾಗಿ ವಿಶೇಷ ಗುಂಪಿಗೆ ಸೇರ್ಪಡೆಗೊಂಡಿದೆ.

ಎಲ್ಲಾ ಸರಕುಗಳಿಗೆ ʻಇ-ಕಾಮರ್ಸ್ʼ ವೇದಿಕೆಗಳು ಸೇರಿದಂತೆ ಎಲ್ಲಾ ಮಾರಾಟಗಾರರಿಂದ ʻತಯಾರಕ ದೇಶʼ(ಸರಕಿನ ಮೂಲ) ನಿಬಂಧನೆಯ ಅನುಸರಣೆ

  1. ಗ್ರಾಹಕರ ಹಿತದೃಷ್ಟಿಯಿಂದ ಇ-ಕಾಮರ್ಸ್ ಸಂಸ್ಥೆಗಳು ಸೇರಿದಂತೆ ಎಲ್ಲಾ ಆಮದುದಾರರು ಆಮದು ಮಾಡಿದ ಉತ್ಪನ್ನಗಳಿಗೆ ಅದರ ಮೂಲ ದೇಶವನ್ನು ಘೋಷಿಸಬೇಕಾಗುತ್ತದೆ
  2. ಡಿಜಿಟಲ್ ವೇದಿಕೆಗಳಲ್ಲಿ ಕಡ್ಡಾಯ ಮಾಹಿತಿಯನ್ನು ಘೋಷಿಸುವ ನಿಯಮಗಳ ನಿಬಂಧನೆಗಳನ್ನು ಅನುಸರಿಸದ ʻಇ-ಕಾಮರ್ಸ್ʼ ಸಂಸ್ಥೆಗಳಿಗೆ ವಿವಿಧ ನೋಟಿಸ್‌ಗಳನ್ನು ನೀಡಲಾಗಿದೆ
  3. ಈ ನಿಯಮದ ಉಲ್ಲಂಘನೆ ಮುಂದುವರಿಸಿದವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

ನೀಡಲಾದ ಸಲಹೆಗಳು:

  1. ಗ್ರಾಹಕರು / ಬಳಕೆದಾರರ ಹಿತದೃಷ್ಟಿಯಿಂದ ʻವೆಲ್ಡಿಂಗ್ ಎಲೆಕ್ಟ್ರೋಡ್‌ʼಗಳನ್ನು ಪ್ಯಾಕ್ ಮಾಡುವಾಗ ಮತ್ತು ಮಾರಾಟ ಮಾಡುವಾಗ "ವೆಲ್ಡಿಂಗ್ ರಾಡ್‌ನ ವ್ಯಾಸದ ಜೊತೆ ತೂಕವನ್ನು ತಿಳಿಸುವಂತೆ (ಅಗತ್ಯ ಮಾನದಂಡದ ಪ್ರಕಾರ)" ತಯಾರಕರು / ಆಮದುದಾರರು / ಪ್ಯಾಕರ್‌ಗಳಲ್ಲಿ ಜಾಗೃತಿ ಮೂಡಿಸಲು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ʻಕಾನೂನು ಮಾಪನಶಾಸ್ತ್ರದ ನಿಯಂತ್ರಕʼರಿಗೆ ಸಲಹೆ ನೀಡಲಾಗಿದೆ.
  1. ಚಿಲ್ಲರೆ ಮಾರಾಟಕ್ಕಾಗಿ ಉದ್ದೇಶಿಸಲಾದ ಶಸ್ತ್ರಚಿಕಿತ್ಸಾ ಮತ್ತು ಕೈಗಾರಿಕಾ ಕೈಗವಸುಗಳು ʻಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ಡ್ ಸರಕುಗಳು) ನಿಯಮಗಳು-2011ʼರ ಅಡಿಯಲ್ಲಿ ಮಾಡಲಾದ ನಿಬಂಧನೆಗಳಿಗೆ ಅನುಗುಣವಾಗಿವೆಯೆ ಎಂದು ಖಚಿತಪಡಿಸಿಕೊಳ್ಳಲು ಕ್ಷೇತ್ರ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ʻಕಾನೂನು ಮಾಪನಶಾಸ್ತ್ರದ ನಿಯಂತ್ರಕʼರಿಗೆ ಸಲಹೆ / ನಿರ್ದೇಶನವನ್ನು ನೀಡಲಾಗಿದೆ. ʻಕಾನೂನು ಮಾಪನಶಾಸ್ತ್ರ(ಪ್ಯಾಕೇಜ್ಡ್ ಸರಕುಗಳು) ನಿಯಮಗಳು-2011ʼರ ಅಡಿಯಲ್ಲಿ ಅಗತ್ಯವಿರುವ ಕಡ್ಡಾಯ ಘೋಷಣೆಗಳಿಗೆ ವಿರುದ್ಧವಾಗಿ ನಕಲಿ ಗುಣಮಟ್ಟದ ಶಸ್ತ್ರಚಿಕಿತ್ಸಾ ಮತ್ತು ಕೈಗಾರಿಕಾ ಕೈಗವಸುಗಳನ್ನು ದೇಶದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ ಮತ್ತು ಮಾರಾಟ ಮಾಡಲಾಗುತ್ತಿದೆ ಎಂಬುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
  1. ʻಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ಡ್ ಸರಕುಗಳು) ನಿಯಮಗಳು- 2011ʼರ ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಕ್ಷೇತ್ರ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕಾನೂನು ಮಾಪನಶಾಸ್ತ್ರ ನಿಯಂತ್ರಕರಿಗೆ ಸಲಹೆ / ನಿರ್ದೇಶನವನ್ನು ನೀಡಲಾಗಿದೆ. ಸರ್ಕಾರ / ʻಎನ್‌ಪಿಪಿಎʼ / ಇತರ ಯಾವುದೇ ಶಾಸನಬದ್ಧ ಸಂಸ್ಥೆಯು ಬೆಲೆಗಳನ್ನು ಪರಿಷ್ಕರಿಸಲು ಅನುಮತಿಸಿದರೆ, ಸರ್ಕಾರ / ʻಎನ್‌ಪಿಪಿಎʼ / ಇತರ ಯಾವುದೇ ಶಾಸನಬದ್ಧ ಸಂಸ್ಥೆ ಹೊರಡಿಸಿದ ಅಧಿಸೂಚನೆಯ ಪ್ರಕಾರವೇ ಬೆಲೆಗಳನ್ನು ಪರಿಷ್ಕರಿಸಲು ಕೈಗಾರಿಕೆಗಳಿಗೆ ಅವಕಾಶ ನೀಡಬಹುದು ಎಂದು ಕೋರಲಾಗಿದೆ.
  1. ಪೆಟ್ರೋಲಿಯಂ ಕೈಗಾರಿಕೆಗಳು ಎದುರಿಸುತ್ತಿರುವ ತೊಂದರೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವ್ಯಾಪಾರವನ್ನು ಸುಲಭಗೊಳಿಸಲು, 9.6.2023 ರಂದು ನವದೆಹಲಿಯ ʻವಿಜ್ಞಾನ ಭವನʼದಲ್ಲಿ ದುಂಡು ಮೇಜಿನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದ ನಂತರ ಗ್ರಾಹಕರು ಮತ್ತು ಚಿಲ್ಲರೆ ವಿತರಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಗಳು ಮತ್ತು ತೈಲ ಮಾರುಕಟ್ಟೆ ಕಂಪನಿಗಳಿಗೆ ವಿವಿಧ ಸಲಹೆಗಳು / ನಿರ್ದೇಶನಗಳನ್ನು ನೀಡಲಾಯಿತು.

ಗ್ರಾಹಕ ಜಾಗೃತಿಯತ್ತ ಪ್ರಯತ್ನಗಳು

  • ಗ್ರಾಹಕ ವ್ಯವಹಾರಗಳ ಇಲಾಖೆಯು(ಡಿಒಸಿಎ) ಗ್ರಾಹಕರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ನೀತಿಗಳನ್ನು ಜಾರಿಗೆ ತರುತ್ತದೆ, ಗ್ರಾಹಕರ ರಕ್ಷಣೆಯನ್ನು ಬಲಪಡಿಸುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಜಾಗೃತಿ ಮೂಡಿಸುತ್ತದೆ. ಗ್ರಾಹಕರ ಹಕ್ಕುಗಳು ಮತ್ತು ಮಾಹಿತಿ ಚಟುವಟಿಕೆಯನ್ನು ಹೆಚ್ಚಿಸುವ ಈ ಉದ್ದೇಶಕ್ಕಾಗಿ ʻಡಿಒಸಿಎʼ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ. ಈ ಉಪಕ್ರಮಗಳ ಬಗ್ಗೆ ಗ್ರಾಹಕರಲ್ಲಿ, ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ. ಇದರಿಂದ ಗ್ರಾಹಕರು ಈ ಉಪಕ್ರಮಗಳಿಂದ ಪ್ರಯೋಜನ ಪಡೆಯಬಹುದು ಮತ್ತು ಅವರ ಆಯ್ಕೆಗಳ ಬಗ್ಗೆ ಉತ್ತಮ ಮಾಹಿತಿ ಪಡೆಯಬಹುದು.
  • ಗ್ರಾಹಕರ ಜಾಗೃತಿಯನ್ನು ಉತ್ತೇಜಿಸುವ ಮಹತ್ವವನ್ನು ಗುರುತಿಸಿ, ಗ್ರಾಹಕ ವ್ಯವಹಾರಗಳ ಇಲಾಖೆಯು (ಡಿಒಸಿಎ) "ಜಾಗೋ ಗ್ರಾಹಕ ಜಾಗೋ" ಎಂಬ ಹೆಸರಿನ ರಾಷ್ಟ್ರವ್ಯಾಪಿ ಮಲ್ಟಿಮೀಡಿಯಾ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ಸರಳ ಸಂದೇಶಗಳ ಮೂಲಕ, ಗ್ರಾಹಕರಿಗೆ ಮೋಸದ ಅಭ್ಯಾಸಗಳು ಮತ್ತು ಸಮಸ್ಯೆಗಳ ಬಗ್ಗೆ ಹಾಗೂ ಪರಿಹಾರವನ್ನು ಪಡೆಯುವ ಕಾರ್ಯವಿಧಾನದ ಬಗ್ಗೆ ಅರಿವು ಮೂಡಿಸಲಾಗುತ್ತದೆ.
  • ಎಲ್ಲಾ ಗ್ರಾಹಕರನ್ನು ಉತ್ತಮವಾಗಿ ಸಂಪರ್ಕಿಸುವ ಮತ್ತು ಅಭಿಯಾನವನ್ನು ಬಲಪಡಿಸುವ ಉದ್ದೇಶದೊಂದಿಗೆ ಇಲಾಖೆಯ ಹೊಸ ಚಿಹ್ನೆ "ಜಾಗೃತಿ" ಅನ್ನು ಪ್ರಾರಂಭಿಸಲಾಯಿತು. ಇಲಾಖೆಯು ತನ್ನ ಎಲ್ಲಾ ಮಾಧ್ಯಮ ಅಭಿಯಾನಗಳಲ್ಲಿ "ಜಾಗೋ ಗ್ರಾಹಕ್ ಜಾಗೋ" ಘೋಷವಾಕ್ಯದ ಜೊತೆಗೆ "ಜಾಗೃತಿ" ಲಾಂಛನವನ್ನು ಬಳಸುತ್ತಿದೆ.
  • ವಿವಿಧ ವಿಷಯಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ʻಆಡಿಯೊ ಸ್ಪಾಟ್ʼಗಳನ್ನು (ಆರ್‌.ಜೆ.ಗಳ ಲೈವ್ ಸಂದೇಶಗಳು) ಆಲ್ ಇಂಡಿಯಾ ರೇಡಿಯೋ (ಎಐಆರ್) ಮೂಲಕ ಪ್ರಸಾರ ಮಾಡಲಾಯಿತು. ʻಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ- 2023ʼ ಮತ್ತು ʻಐಸಿಸಿ ಕ್ರಿಕೆಟ್ ವಿಶ್ವಕಪ್- 2023ʼರ ಸಂದರ್ಭದಲ್ಲಿ ಇಲಾಖೆಯು ಗ್ರಾಹಕ ಜಾಗೃತಿ ಸಂಬಂಧಿತ ʻಜಿಂಗಲ್ಸ್ʼ ಅನ್ನು ಪ್ರಸಾರ ಮಾಡಿತು.
  • ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ʻವೀಡಿಯೊ ಸ್ಪಾಟ್ʼಗಳನ್ನು ದೂರದರ್ಶನ ಜಾಲದ ʻಡಿಡಿ ನ್ಯಾಷನಲ್ʼ ಮತ್ತು ಪ್ರಾದೇಶಿಕ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗಿದೆ.
  • ಗ್ರಾಹಕರಲ್ಲಿ ಜಾಗೃತಿಯನ್ನು ಹರಡಲು ಇಲಾಖೆಯು ದೇಶಾದ್ಯಂತ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿನ ಸಿನೆಮಾ ಚಿತ್ರಮಂದಿರಗಳ ಪರದೆಗಳ ಮೇಲೆ ʻವೀಡಿಯೊ ಸ್ಪಾಟ್ʼಗಳನ್ನು ಪ್ರಸಾರ ಮಾಡುತ್ತಿದೆ.
  • ಹೆಚ್ಚಿದ ಡಿಜಿಟಲೀಕರಣದಿಂದಾಗಿ, ಸಾಮಾಜಿಕ ಮಾಧ್ಯಮವು ಜನರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ ಹಾಗೂ ವ್ಯಕ್ತಿ ಅಥವಾ ಸಮಾಜವನ್ನು ಸಂವೇದನಾಶೀಲಗೊಳಿಸಲು ಸಹಾಯ ಮಾಡುತ್ತದೆ. ಗ್ರಾಹಕರಿಗೆ ಅರಿವು ಮೂಡಿಸಲು ಮತ್ತು ಅವರನ್ನು ಸಬಲೀಕರಣಗೊಳಿಸಲು ʻಗ್ರಾಹಕ ಸಂರಕ್ಷಣಾ ಕಾಯ್ದೆ- 2019ʼ ಮತ್ತು ಇಲಾಖೆಯ ಇತರ ಉಪಕ್ರಮಗಳ ಬಗ್ಗೆ ಸೃಜನಶೀಲ ಹಾಗೂ ಆಡಿಯೋ / ದೃಶ್ಯ ರೂಪದಲ್ಲಿ ನಿಯಮಿತ ಪೋಸ್ಟ್‌ಗಳನ್ನು ಇಲಾಖೆಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಾ‌ದ https://twitter.com/jagograhakjago,https://www.facebook.com/ConsumerAdvocacy/ https://www.instagram.com/consumeraffairs_goi/, ʻಕೂʼ, ಮತ್ತು ʻಪಬ್ಲಿಕ್‌ ಆಪ್‌ʼ ವೇದಿಕೆಗಳಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಪರಿಹಾರ ಕಾರ್ಯವಿಧಾನ ಸೇರಿದಂತೆ ಸಂಬಂಧಿತ ಮಾಹಿತಿಯನ್ನು ಪಡೆಯಲು ಈ ಟ್ವೀಟ್‌ಗಳು ಗ್ರಾಹಕರಿಗೆ ಸಹಾಯಕವಾಗಿವೆ.
  • ವಿವಿಧ ಕಾರ್ಯಕ್ರಮಗಳು / ಜಾತ್ರೆಗಳು / ಉತ್ಸವಗಳಲ್ಲಿ ಒಟ್ಟುಗೂಡುವ ಗ್ರಾಹಕರಲ್ಲಿ ವಿಶೇಷವಾಗಿ ದೇಶದ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಜಾಗೃತಿ ಮೂಡಿಸಲು ಇಲಾಖೆಯು ವಿವಿಧ ಜಾತ್ರೆಗಳು / ಉತ್ಸವಗಳು / ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತದೆ. ನವದೆಹಲಿಯಲ್ಲಿ ನಡೆದ ʻಇಂಡಿಯಾ ಇಂಟರ್ನ್ಯಾಷನಲ್ ಟ್ರೇಡ್ ಫೇರ್ (ಐಐಟಿಎಫ್) – 2023ʼ  ಕಾರ್ಯಕ್ರಮದ ಟಿಕೆಟ್‌ಗಳ ಮೇಲೆ ಹಾಗೂ ಅಲ್ಲಿ ಅಳವಡಿಸಲಾದ ಹೋರ್ಡಿಂಗ್‌ಗಳ ಮೇಲೆ ಈ ಜಾಗೃತಿ ಸಂದೇಶಗಳನ್ನು ಪ್ರಚಾರ ಮಾಡುವ ಮೂಲಕ ಇಲಾಖೆಯು ಈ ಮೇಳದಲ್ಲಿ ಭಾಗವಹಿಸಿತು.
  • ಗ್ರಾಮೀಣ, ದೂರದ ಮತ್ತು ಹಿಂದುಳಿದ ಪ್ರದೇಶಗಳಿಗೆ ಜಾಗೃತಿ ಆಂದೋಲನವನ್ನು ತಲುಪಿಸುವಲ್ಲಿ ರಾಜ್ಯ ಸರ್ಕಾರಗಳ ಸಕ್ರಿಯ ಪಾಲ್ಗೊಳ್ಳುವಿಕೆ ನಿರ್ಣಾಯಕವಾಗಿದೆ ಎಂಬ ಅಂಶವನ್ನು ಪರಿಗಣಿಸಿ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಗ್ರಾಹಕರ ಜಾಗೃತಿಯ ಕ್ಷೇತ್ರವನ್ನು ವಿಸ್ತರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ʻನಾಗಾಲ್ಯಾಂಡ್ ಹಾರ್ನ್‌ಬಿಲ್ ಉತ್ಸವ-2023ʼ ಕಾರ್ಯಕ್ರಮದಲ್ಲಿ ನಾಗಾಲ್ಯಾಂಡ್ ರಾಜ್ಯದ ಮೂಲಕ ಇಲಾಖೆಯು ಭಾಗವಹಿಸಿತು.

****


(Release ID: 1989499) Visitor Counter : 128