ಗೃಹ ವ್ಯವಹಾರಗಳ ಸಚಿವಾಲಯ

​​​​​​​ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಭಾರತೀಯ ನ್ಯಾಯ (ಎರಡನೇ) ಸಂಹಿತಾ, 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ, 2023 ಮತ್ತು ಭಾರತೀಯ ಸಾಕ್ಷ್ಯ (ಎರಡನೇ) ವಿಧೇಯಕ, 2023 ರ ಮೇಲಿನ ಚರ್ಚೆಗೆ ಉತ್ತರಿಸಿದರು.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಮೊದಲ ಬಾರಿಗೆ, ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಭಾರತದ ಜನರಿಗೆ ಸಂಬಂಧಿಸಿದ ಸುಮಾರು 150 ವರ್ಷಗಳಷ್ಟು ಹಳೆಯದಾದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ನಿಯಂತ್ರಿಸುವ ಮೂರು ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ

ಶಿಕ್ಷೆಯ ಉದ್ದೇಶವು ಸಂತ್ರಸ್ತರಿಗೆ ನ್ಯಾಯವನ್ನು ನೀಡುವುದು ಮತ್ತು ಸಮಾಜದಲ್ಲಿ ಒಂದು ಉದಾಹರಣೆಯನ್ನು ನಿರ್ಮಾಣ ಮಾಡುವುದಾಗಿರಬೇಕು.  

ಭಾರತೀಯ ಆತ್ಮದೊಂದಿಗೆ ಮಾಡಿದ ಈ ಮೂರು ಕಾನೂನುಗಳು ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತರುತ್ತವೆ

ಮೋದಿ ಸರ್ಕಾರವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ, ಈ ಕಾನೂನುಗಳು ಅಂತಹ ನಿಬಂಧನೆಗಳನ್ನು ಹೊಂದಿವೆ, ಇದರಿಂದಾಗಿ ಯಾವುದೇ ಭಯೋತ್ಪಾದಕರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

ಹಳೆಯ ಕಾನೂನುಗಳಲ್ಲಿ, ನರಹತ್ಯೆ ಮತ್ತು ಮಹಿಳೆಯರ ನಿಂದನೆಗೆ  ಬದಲು, ಆಡಳಿತ  ಮತ್ತು ಬ್ರಿಟಿಷ್ ಸಾಮ್ರಾಜ್ಯದ ರಕ್ಷಣೆಗೆ ಮಾತ್ರ ಆದ್ಯತೆ ನೀಡಲಾಗಿತ್ತು.

ಹೊಸ ಕಾನೂನುಗಳಲ್ಲಿ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಮಾನವ ದೇಹದ ಮೇಲೆ ಪರಿಣಾಮ ಬೀರುವ ವಿಷಯಗಳು, ದೇಶದ ಗಡಿಗಳ ಭದ್ರತೆ, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸಂಬಂಧಿಸಿದ ಅಪರಾಧಗಳು, ಚುನಾವಣಾ ಅಪರಾಧಗಳು, ನಾಣ್ಯಗಳು, ಕರೆನ್ಸಿ ನೋಟುಗಳು ಮತ್ತು ಸರ್ಕಾರಿ ಅಂಚೆಚೀಟಿಗಳನ್ನು ತಿದ್ದುವುದು ಅಥವಾ ನಕಲು ಮಾಡುವುದು ಇತ್ಯಾದಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ

ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡ ಶ್ರೀ ನರೇಂದ್ರ ಮೋದಿ ಅವರು ರಾಜದ್ರೋಹದ ವಿಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ ಮತ್ತು ರಾಜದ್ರೋಹದ ಬದಲಿಗೆ ದೇಶದ್ರೋಹ/ವಿಶ್ವಾಸಘಾತುಕತನ ವಿಭಾಗವನ್ನು ಜಾರಿಗೆ ತಂದಿದ್ದಾರೆ

ಮೋದಿ ಸರ್ಕಾರ ತಂದ ಈ ಕಾನೂನುಗಳ ಅನುಷ್ಠಾನದ ನಂತರ, ದೇಶದಲ್ಲಿ ಹೊಸ ನ್ಯಾಯ ವ್ಯವಸ್ಥೆ ಜಾರಿಯಲ್ಲಿರುತ್ತದೆ.

ಅದು ರಾಮ ಮಂದಿರ, 370 ನೇ ವಿಧಿ, ತ್ರಿವಳಿ ತಲಾಖ್ ಅಥವಾ ಮಹಿಳಾ ಮೀಸಲಾತಿಯಾಗಿರಲಿ... ನಾವು ಏನು ಹೇಳುತ್ತೇವೋ ಅದನ್ನು ಮಾಡುತ್ತೇವೆ

ದೇಶದ ಭದ್ರತೆ ಅತಿ ಮುಖ್ಯ, ಯಾರು ಬೇಕಾದರೂ ಸರ್ಕಾರದ ವಿರುದ್ಧ ಏನು ಬೇಕಾದರೂ ಹೇಳಬಹುದು, ಆದರೆ ಯಾರಾದರೂ ಭಾರತದ ಧ್ವಜ, ಗಡಿಗಳು ಮತ್ತು ಸಂಪನ್ಮೂಲಗಳ ಜೊತೆ ಮನಸೋಇಚ್ಛೆಯ ಆಟ ಆಡಿದರೆ ಅವರು ಖಂಡಿತವಾಗಿಯೂ ಜೈಲಿಗೆ ಹೋಗುತ್ತಾರೆ



Posted On: 20 DEC 2023 8:43PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಭಾರತೀಯ ನ್ಯಾಯ (ಎರಡನೇ) ಸಂಹಿತಾ, 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ, 2023 ಮತ್ತು ಭಾರತೀಯ ಸಾಕ್ಷ್ಯ (ಎರಡನೇ) ಮಸೂದೆ, 2023 ರ ಮೇಲಿನ ಚರ್ಚೆಗೆ ಉತ್ತರಿಸಿದರು. ಚರ್ಚೆಯ ನಂತರ ಸದನವು ವಿಧೇಯಕಗಳನ್ನು ಅಂಗೀಕರಿಸಿತು.

ಚರ್ಚೆಗೆ ಉತ್ತರಿಸಿದ ಶ್ರೀ ಅಮಿತ್ ಶಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಮೊದಲ ಬಾರಿಗೆ, ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಭಾರತದ ಜನರಿಗೆ ಸಂಬಂಧಿಸಿದ ಸುಮಾರು 150 ವರ್ಷಗಳಷ್ಟು ಹಳೆಯದಾದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ನಿಯಂತ್ರಿಸುವ ಮೂರು ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಿದರು. 1860 ರಲ್ಲಿ ಮಾಡಲಾದ ಭಾರತೀಯ ದಂಡ ಸಂಹಿತೆಯ ಉದ್ದೇಶ ನ್ಯಾಯವನ್ನು ನೀಡುವುದು ಅಲ್ಲ, ಆದರೆ ಶಿಕ್ಷೆ ನೀಡುವುದಾಗಿದೆ ಎಂದು ಅವರು ಹೇಳಿದರು. ಈಗ ಭಾರತೀಯ ನ್ಯಾಯ ಸಂಹಿತಾ, 2023,  ಭಾರತೀಯ ದಂಡ ಸಂಹಿತೆ (ಐಪಿಸಿ) ಯನ್ನು ಸ್ಥಳಾಂತರಿಸುತ್ತದೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾವು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಯನ್ನು ಸ್ಥಳಾಂತರಿಸುತ್ತದೆ ಮತ್ತು ಭಾರತೀಯ ಸಾಕ್ಷ್ಯ ವಿಧೇಯಕವು ಭಾರತೀಯ ಸಾಕ್ಷ್ಯ ಕಾಯ್ದೆ, 1872 ನ್ನು ಬದಲಾಯಿಸುತ್ತದೆ ಮತ್ತು ಸದನದ ಅನುಮೋದನೆ ಪಡೆದ ನಂತರ ಕಾನೂನುಗಳನ್ನು ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ಭಾರತೀಯ ಆತ್ಮದಿಂದ ಮಾಡಿದ ಮೂರು ಕಾನೂನುಗಳು ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತವೆ ಎಂದೂ ಅವರು ಹೇಳಿದರು.

ವಿಧೇಯಕಗಳ ಬಗ್ಗೆ 35 ಸಂಸದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಲಾಮಗಿರಿಯ ಮನಸ್ಥಿತಿ ಮತ್ತು ಸಂಕೇತಗಳನ್ನು ನಿರ್ಮೂಲನೆ ಮಾಡುವಂತೆ ಮತ್ತು ಹೊಸ ವಿಶ್ವಾಸದೊಂದಿಗೆ ಶ್ರೇಷ್ಠ ಭಾರತದ ನಿರ್ಮಾಣಕ್ಕೆ ದಾರಿ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದರು. ಈ ದೇಶವು ಶೀಘ್ರದಲ್ಲೇ ವಸಾಹತುಶಾಹಿ ಕಾನೂನುಗಳಿಂದ ಸ್ವಾತಂತ್ರ್ಯ ಪಡೆಯಬೇಕು ಎಂದು ಪ್ರಧಾನಿ ಮೋದಿ ಅವರು ಕೆಂಪು ಕೋಟೆಯ ಕೊತ್ತಲಗಳಿಂದ ಹೇಳಿದ್ದರು ಮತ್ತು ಅದಕ್ಕೆ ಅನುಗುಣವಾಗಿ, ಈ ಮೂರು ಹಳೆಯ ಕಾನೂನುಗಳಲ್ಲಿ ಬದಲಾವಣೆಗಳನ್ನು ತರಲು ಗೃಹ ಸಚಿವಾಲಯವು 2019 ರಿಂದ ತೀವ್ರ ಚರ್ಚೆಗಳನ್ನು ಪ್ರಾರಂಭಿಸಿತ್ತು ಎಂದು ಶ್ರೀ ಶಾ ಹೇಳಿದರು. ಕಾನೂನುಗಳನ್ನು ವಿದೇಶಿ ಆಡಳಿತಗಾರರು  ತಮ್ಮ ಆಳ್ವಿಕೆಯನ್ನು ನಡೆಸಲು ಮತ್ತು ಅವರ ಗುಲಾಮ ಪ್ರಜೆಗಳನ್ನು ಆಳಲು ಮಾಡಿದ್ದರು ಎಂದು ಶ್ರೀ ಶಾ ಹೇಳಿದರು. ಮೂರು ಹಳೆಯ ಕಾನೂನುಗಳ ಬದಲಿಗೆ ಹೊಸ ಕಾನೂನುಗಳನ್ನು ನಮ್ಮ ಸಂವಿಧಾನದ ಮೂರು ಮೂಲಭೂತ ಸ್ಫೂರ್ತಿಗಳಾದ ವ್ಯಕ್ತಿಯ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮತ್ತು ಎಲ್ಲರನ್ನೂ ಸಮಾನವಾಗಿ ಪರಿಗಣಿಸುವ ತತ್ವದ ಆಧಾರದ ಮೇಲೆ ಮಾಡಲಾಗಿದೆ ಎಂದು ಗೃಹ ಸಚಿವರು ಹೇಳಿದರು. ಪ್ರಸ್ತುತ ಇದ್ದ ಮೂರು ಕಾನೂನುಗಳಲ್ಲಿ ನ್ಯಾಯವನ್ನು ಕಲ್ಪಿಸಿಕೊಳ್ಳಲಾಗಿಲ್ಲ ಬದಲು ಶಿಕ್ಷೆಯನ್ನು ಮಾತ್ರ ನ್ಯಾಯವೆಂದು ಪರಿಗಣಿಸಲಾಗಿದೆ ಎಂದೂ ಅವರು ಹೇಳಿದರು. ಶಿಕ್ಷೆ ನೀಡುವ ಉದ್ದೇಶ ಸಂತ್ರಸ್ತೆಗೆ ನ್ಯಾಯ ಒದಗಿಸುವುದು ಮತ್ತು ಸಮಾಜದಲ್ಲಿ ಮಾದರಿಯಾಗುವುದು, ಇದರಿಂದ ಬೇರೆ ಯಾರೂ ಅಂತಹ ತಪ್ಪನ್ನು ಮಾಡದಂತೆ ನೋಡಿಕೊಳ್ಳುವುದು ಎಂದು ಅವರು ಹೇಳಿದರು. ಸ್ವಾತಂತ್ರ್ಯದ ಹಲವು ವರ್ಷಗಳ ನಂತರ ಮೂರು ಹೊಸ ಕಾನೂನುಗಳನ್ನು ಮೊದಲ ಬಾರಿಗೆ ಮಾನವೀಕರಿಸಲಾಗುತ್ತಿದೆ ಎಂದೂ  ಶ್ರೀ ಶಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಕ್ರಮವು ಮೂರು ಕಾನೂನುಗಳನ್ನು ಗುಲಾಮಗಿರಿಯ ಮನಸ್ಥಿತಿ ಮತ್ತು ಚಿಹ್ನೆಗಳಿಂದ ಮುಕ್ತಗೊಳಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹಳೆಯ ಕಾನೂನುಗಳನ್ನು ದೇಶದ ನಾಗರಿಕರಿಗಾಗಿ ಮಾಡಲಾಗಿಲ್ಲ ಆದರೆ ಬ್ರಿಟಿಷ್ ಆಳ್ವಿಕೆಯ ಸುರಕ್ಷತೆಗಾಗಿ ಮಾಡಲಾಗಿದೆ ಎಂದು ಅವರು ಹೇಳಿದರು. ಹಳೆಯ ಕಾನೂನುಗಳಲ್ಲಿ, ನರಹತ್ಯೆ ಮತ್ತು ಮಹಿಳೆಯರೊಂದಿಗೆ ಅನುಚಿತ ವರ್ತನೆಗೆ ಆದ್ಯತೆ ನೀಡುವ ಬದಲು, ಆಡಳಿತದ ರಕ್ಷಣೆ, ರೈಲ್ವೆ ರಕ್ಷಣೆ ಮತ್ತು ಬ್ರಿಟಿಷ್ ಸಾಮ್ರಾಜ್ಯದ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಶ್ರೀ ಶಾ ಹೇಳಿದರು. ಹೊಸ ಕಾನೂನುಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಮಾನವ ದೇಹದ ಮೇಲೆ ಪರಿಣಾಮ ಬೀರುವ ವಿಷಯಗಳು, ದೇಶದ ಗಡಿಗಳ ಭದ್ರತೆ, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸಂಬಂಧಿಸಿದ ಅಪರಾಧಗಳು, ಚುನಾವಣಾ ಅಪರಾಧಗಳು, ನಾಣ್ಯಗಳು, ಕರೆನ್ಸಿ ನೋಟುಗಳು ಮತ್ತು ಸರ್ಕಾರಿ ಅಂಚೆಚೀಟಿಗಳನ್ನು ತಿರುಚುವುದು ಇತ್ಯಾದಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದರು. ಮೋದಿ ಜೀ ಅವರ ನಾಯಕತ್ವದಲ್ಲಿ ಮೊದಲ ಬಾರಿಗೆ, ನಮ್ಮ ಸಂವಿಧಾನದ ಸ್ಫೂರ್ತಿಗೆ ಅನುಗುಣವಾಗಿ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎಂದು ಶ್ರೀ ಶಾ ಹೇಳಿದರು.

ಕಾನೂನುಗಳಲ್ಲಿ ಮೊದಲ ಬಾರಿಗೆ ಭಯೋತ್ಪಾದನೆಯನ್ನು ವಿವರಿಸುವ ಮೂಲಕ ಮೋದಿ ಸರ್ಕಾರವು ಅದಕ್ಕೆ ಸಂಬಂಧಿಸಿದ  ಎಲ್ಲಾ ಲೋಪದೋಷಗಳನ್ನು ಸರಿಪಡಿಸುವ ಕೆಲಸವನ್ನು ಮಾಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈ ಕಾನೂನುಗಳಲ್ಲಿ, ರಾಜದ್ರೋಹವನ್ನು ದೇಶದ್ರೋಹವನ್ನಾಗಿ ಪರಿವರ್ತಿಸುವ ಕೆಲಸವನ್ನು ಮಾಡಲಾಗಿದೆ ಮತ್ತು ದೇಶಕ್ಕೆ ಹಾನಿ ಮಾಡುವ ಯಾರನ್ನೂ ಎಂದಿಗೂ ಬಿಡುವುದಿಲ್ಲ ಎಂಬ ದೃಢನಿಶ್ಚಯವನ್ನು ಅದರಲ್ಲಿ ಮೂಡಿಸಲಾಗಿದೆ ಎಂದು ಅವರು ಹೇಳಿದರು. ಮುಂಬರುವ 100 ವರ್ಷಗಳಲ್ಲಿ ಸಂಭವಿಸಬಹುದಾದ ಸಂಭಾವ್ಯ ತಾಂತ್ರಿಕ ಆವಿಷ್ಕಾರಗಳನ್ನು ಕಲ್ಪಿಸಿಕೊಳ್ಳುವ ಮೂಲಕ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಕಾನೂನುಗಳಲ್ಲಿ ಎಲ್ಲಾ ನಿಬಂಧನೆಗಳನ್ನು ಅಳವಡಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಗುಂಪು ಹತ್ಯೆ ಹೀನಾತಿಹೀನ ಘೋರ ಅಪರಾಧವಾಗಿದೆ ಮತ್ತು ಕಾನೂನುಗಳಲ್ಲಿ ಅದಕ್ಕೆ ಮರಣದಂಡನೆ ವಿಧಿಸಲು ಅವಕಾಶವಿದೆ ಎಂದು ಅವರು ಹೇಳಿದರು. ಪೊಲೀಸರು ಮತ್ತು ನಾಗರಿಕರ ಹಕ್ಕುಗಳ ನಡುವೆ ಉತ್ತಮ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ ಎಂದು ಶ್ರೀ ಶಾ ಹೇಳಿದರು. ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಮತ್ತು ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕಾನೂನುಗಳಲ್ಲಿ ನಿಬಂಧನೆಗಳನ್ನು/ಅವಕಾಶಗಳನ್ನು ಅಳವಡಿಸಲಾಗಿದೆ. ಜೈಲುಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು, ಸಮುದಾಯ ಸೇವೆಯನ್ನು ಮೊದಲ ಬಾರಿಗೆ ಶಿಕ್ಷೆಯಾಗಿ ಸೇರಿಸಲಾಗುತ್ತಿದೆ ಮತ್ತು ಅದಕ್ಕೆ ಕಾನೂನಾತ್ಮಕ ಸ್ಥಾನಮಾನವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಕಾನೂನುಗಳಿಗೆ ಸಂಬಂಧಿಸಿದಂತೆ ಒಟ್ಟು 3200 ಸಲಹೆಗಳನ್ನು ಸ್ವೀಕರಿಸಲಾಗಿದೆ ಮತ್ತು ಮೂರು ಕಾನೂನುಗಳನ್ನು ಪರಿಗಣಿಸಲು ಸ್ವತಃ 158 ಸಭೆಗಳನ್ನು ನಡೆಸಿದ್ದೇನೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2023ರ ಆಗಸ್ಟ್ 11, ರಂದು, ಈ ಮೂರು ಹೊಸ ವಿಧೇಯಕಗಳನ್ನು ಗೃಹ ಸಚಿವಾಲಯದ ಸ್ಥಾಯಿ ಸಮಿತಿಗೆ ಪರಿಗಣನೆಗಾಗಿ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಮೋದಿ ಜೀ ಅವರ ನಾಯಕತ್ವದಲ್ಲಿ, ಎಲ್ಲಾ ಮೂರು ಹೊಸ ಕಾನೂನುಗಳನ್ನು ನ್ಯಾಯ, ಸಮಾನತೆ ಮತ್ತು ನ್ಯಾಯಸಮ್ಮತತೆಯ ಮೂಲ ತತ್ವಗಳ ಆಧಾರದ ಮೇಲೆ ತರಲಾಗಿದೆ ಎಂದು ಶ್ರೀ ಶಾ ಹೇಳಿದರು. ಈ ಕಾನೂನುಗಳಲ್ಲಿ ವಿಧಿ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಈ ಕಾನೂನುಗಳ ಮೂಲಕ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು, ಪೊಲೀಸರು, ವಕೀಲರು ಮತ್ತು ನ್ಯಾಯಾಧೀಶರಿಗೆ ಕಾಲ ಮಿತಿಗಳನ್ನು ನಿಗದಿ ಮಾಡಲಾಗಿದೆ ಎಂದೂ ಅವರು ಹೇಳಿದರು.

ಒಟ್ಟು 484 ಸೆಕ್ಷನ್ ಗಳನ್ನು (ವಿಭಾಗಗಳನ್ನು) ಹೊಂದಿರುವ ಸಿಆರ್ಪಿಸಿಯನ್ನು ಬದಲಿಸುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಈಗ 531 ಸೆಕ್ಷನ್ ಗಳನ್ನು (ವಿಭಾಗಗಳನ್ನು)  ಹೊಂದಿರುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 177 ಸೆಕ್ಷನ್ ಗಳನ್ನು (ವಿಭಾಗಗಳನ್ನು) ಬದಲಾಯಿಸಲಾಗಿದೆ, 9 ಹೊಸ ಸೆಕ್ಷನ್ ಗಳನ್ನು ಸೇರಿಸಲಾಗಿದೆ ಮತ್ತು 14 ಸೆಕ್ಷನ್ ಗಳನ್ನು ರದ್ದುಪಡಿಸಲಾಗಿದೆ. ಐಪಿಸಿಯನ್ನು ಬದಲಿಸಲಿರುವ ಭಾರತೀಯ ನ್ಯಾಯ ಸಂಹಿತಾದಲ್ಲಿ ಹಿಂದಿನ 511 ಸೆಕ್ಷನ್ಗಳ ಬದಲು ಈಗ 358 ಸೆಕ್ಷನ್ಗಳು ಇರಲಿವೆ. ಇದರಲ್ಲಿ 21 ಹೊಸ ಅಪರಾಧಗಳನ್ನು ಸೇರಿಸಲಾಗಿದೆ, 41 ಅಪರಾಧಗಳಲ್ಲಿ ಜೈಲು ಶಿಕ್ಷೆಯ ಅವಧಿಯನ್ನು ಹೆಚ್ಚಿಸಲಾಗಿದೆ, 82 ಅಪರಾಧಗಳಲ್ಲಿ ದಂಡವನ್ನು ಹೆಚ್ಚಿಸಲಾಗಿದೆ, 25 ಅಪರಾಧಗಳಲ್ಲಿ ಕಡ್ಡಾಯ ಕನಿಷ್ಠ ಶಿಕ್ಷೆಯನ್ನು ಸೇರಿಸಲಾಗಿದೆ, 6 ಅಪರಾಧಗಳಲ್ಲಿ ಶಿಕ್ಷೆಯಾಗಿ ಸಮುದಾಯ ಸೇವೆಯನ್ನು ಪರಿಗಣಿಸಲಾಗಿದೆ ಮತ್ತು 19 ಸೆಕ್ಷನ್ ಗಳನ್ನು ರದ್ದುಪಡಿಸಲಾಗಿದೆ. ಅಂತೆಯೇ, ಸಾಕ್ಷ್ಯ ಕಾಯ್ದೆಯನ್ನು ಬದಲಿಸುವ ಭಾರತೀಯ ಸಾಕ್ಷ್ಯ  ವಿಧೇಯಕ ಹಿಂದಿನ 167 ರ ಬದಲು ಈಗ 170 ಸೆಕ್ಷನ್ ಗಳನ್ನು ಹೊಂದಿರುತ್ತದೆ, 24 ಸೆಕ್ಷನ್ ಗಳನ್ನು ತಿದ್ದುಪಡಿ ಮಾಡಲಾಗಿದೆ, 2 ಹೊಸ ಸೆಕ್ಷನ್ ಗಳನ್ನು ಸೇರಿಸಲಾಗಿದೆ ಮತ್ತು 6 ಸೆಕ್ಷನ್ ಗಳನ್ನು ರದ್ದುಪಡಿಸಲಾಗಿದೆ.

ಇದು ನರೇಂದ್ರ ಮೋದಿ ಸರ್ಕಾರ, ಅದು ಏನು ಹೇಳುತ್ತದೆಯೋ ಅದನ್ನು ಮಾಡುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಾವು 370 ಮತ್ತು 35 ಎ ವಿಧಿಗಳನ್ನು ತೆಗೆದುಹಾಕುತ್ತೇವೆ ಎಂದು ಹೇಳಿದ್ದೆವು ಮತ್ತು ನಾವು ಅದನ್ನು ಮಾಡಿದ್ದೇವೆ, ನಾವು ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಳ್ಳುತ್ತೇವೆ ಮತ್ತು ಭದ್ರತಾ ಪಡೆಗಳಿಗೆ ಮುಕ್ತ ಹಸ್ತವನ್ನು ನೀಡುತ್ತೇವೆ ಎಂದು ಹೇಳಿದ್ದೆವು, ನಾವು ಅದನ್ನು ಮಾಡಿದ್ದೇವೆ. ಈ ನೀತಿಗಳು ಜಮ್ಮು ಮತ್ತು ಕಾಶ್ಮೀರ, ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳು ಮತ್ತು ಈಶಾನ್ಯದಲ್ಲಿ ಹಿಂಸಾತ್ಮಕ ಘಟನೆಗಳಲ್ಲಿ ಶೇಕಡಾ 63 ರಷ್ಟು ಮತ್ತು ಸಾವುಗಳಲ್ಲಿ ಶೇಕಡಾ 73 ರಷ್ಟು ಇಳಿಕೆಗೆ ಕಾರಣವಾಗಿವೆ ಎಂದು ಅವರು ಹೇಳಿದರು. ಈಶಾನ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸುಧಾರಿಸಿರುವುದರಿಂದ ಅಲ್ಲಿ ಎಎಫ್ಎಸ್ಪಿಎಯನ್ನು ಶೇಕಡಾ 70 ಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಹಿಂಪಡೆಯಲಾಗಿದೆ ಎಂದು ಅವರು ಹೇಳಿದರು. ನಾವು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದೆವು. 2024 ರ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆಯಾಗುತ್ತಾರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ನಾವು ಹೇಳಿದ್ದೆವು, ಸರ್ವಾನುಮತದ ಒಪ್ಪಿಗೆಯೊಂದಿಗೆ ಮೀಸಲಾತಿ ನೀಡುವ ಮೂಲಕ ನಾವು ದೇಶದ ಮಾತೃಶಕ್ತಿಯನ್ನು ಗೌರವಿಸಿದ್ದೇವೆ. ತ್ರಿವಳಿ ತಲಾಖ್ ನಿಂದ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರಿಗೆ ಅನ್ಯಾಯವಾಗುತ್ತಿದೆ ಮತ್ತು ನಾವು ಅದನ್ನು ರದ್ದುಗೊಳಿಸುತ್ತೇವೆ ಎಂದು ನಾವು ಹೇಳಿದ್ದೆವು, ನಾವು ಭರವಸೆಯನ್ನು ಸಹ ಪೂರೈಸಿದ್ದೇವೆ. ನಾವು ನ್ಯಾಯ ವಿತರಣೆಯ ವೇಗವನ್ನು ಹೆಚ್ಚಿಸುತ್ತೇವೆ ಮತ್ತು ನ್ಯಾಯವು ಶಿಕ್ಷೆಯ ಆಧಾರದ ಮೇಲೆ ಇರುವುದಿಲ್ಲ ಎಂದು ನಾವು ಹೇಳಿದ್ದೆವು, ಮೋದಿ ಜೀ ಇಂದು ಇದನ್ನು ಮಾಡಿದ್ದಾರೆ.

ನ್ಯಾಯವು ಒಂದು ವಿಸ್ತಾರವಾದ ಕೊಡೆಯನ್ನು ಸಂಕೇತಿಸುವ ಪದವಾಗಿದೆ ಮತ್ತು ಇದು ಸುಸಂಸ್ಕೃತ ಸಮಾಜಕ್ಕೆ ಅಡಿಪಾಯವನ್ನು ಹಾಕುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಮೂರು ಹೊಸ ವಿಧೇಯಕಗಳ  ಮೂಲಕ ಜನರ ನ್ಯಾಯದ ನಿರೀಕ್ಷೆಯನ್ನು ಈಡೇರಿಸುವ ಪ್ರಯತ್ನವನ್ನು ಇಂದು ಮಾಡಲಾಗಿದೆ ಎಂದು ಅವರು ಹೇಳಿದರು. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಒಟ್ಟಾಗಿ ದೇಶದಲ್ಲಿ ಭಾರತೀಯ ಕಲ್ಪನೆಯ ನ್ಯಾಯ ವ್ಯವಸ್ಥೆಯನ್ನು ಸ್ಥಾಪಿಸುತ್ತವೆ ಎಂದು ಅವರು ಹೇಳಿದರು. ಈ ಹಿಂದೆ ಶಿಕ್ಷೆಯ ಕೇಂದ್ರೀಕೃತ ಕಲ್ಪನೆಯೊಂದಿಗೆ ಕಾನೂನುಗಳು ಇದ್ದವು, ಈಗ ಸಂತ್ರಸ್ತ ಕೇಂದ್ರಿತ ನ್ಯಾಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ.  ಎಂದು ಶ್ರೀ ಶಾ ಹೇಳಿದರು. ಸರಳ, ಸ್ಥಿರ, ಪಾರದರ್ಶಕ ಮತ್ತು ಉತ್ತರದಾಯಿತ್ವದ ಕಾರ್ಯವಿಧಾನಗಳ ಮೂಲಕ ಸುಲಭದಲ್ಲಿ ನ್ಯಾಯ ಲಭ್ಯತೆಯನ್ನು ಸಾಧಿಸಲು ಉದ್ದೇಶಿಸಲಾಗಿದೆ ಮತ್ತು ನ್ಯಾಯಯುತ, ಕಾಲಮಿತಿಯ, ಸಾಕ್ಷ್ಯಾಧಾರಿತ ತ್ವರಿತ ವಿಚಾರಣೆಗಳನ್ನು ಇದಕ್ಕಾಗಿ ರೂಪಿಸಲಾಗಿದೆ. ಇದು ನ್ಯಾಯಾಲಯಗಳು ಮತ್ತು ಜೈಲುಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ತನಿಖೆಯಲ್ಲಿ ವಿಧಿವಿಜ್ಞಾನದ ಆಧಾರದ ಮೇಲೆ ನಾವು ಪ್ರಾಸಿಕ್ಯೂಷನ್ ಬಲಪಡಿಸಿದ್ದೇವೆ ಮತ್ತು ಅತ್ಯಾಚಾರ ಸಂತ್ರಸ್ತೆಯ ಹೇಳಿಕೆಯನ್ನು ಆಡಿಯೋ-ವಿಡಿಯೋ ಮೋಡ್ ಮೂಲಕ ದಾಖಲಿಸುವುದನ್ನು ಕಡ್ಡಾಯಗೊಳಿಸಿದ್ದೇವೆ ಎಂದು ಶ್ರೀ ಶಾ ಹೇಳಿದರು. ಈ ಹೊಸ ಕಾನೂನುಗಳ ಅಂಗೀಕಾರದ ನಂತರ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ದ್ವಾರಕಾದಿಂದ ಅಸ್ಸಾಂವರೆಗೆ ಇಡೀ ದೇಶದಲ್ಲಿ ಒಂದೇ ನ್ಯಾಯ ವ್ಯವಸ್ಥೆ ಇರುತ್ತದೆ ಎಂದು ಅವರು ಹೇಳಿದರು. ಪ್ರಾಸಿಕ್ಯೂಷನ್ ನಿರ್ದೇಶಕರ ಬಗ್ಗೆ ಒಂದು ಪ್ರಸ್ತಾವನೆಯನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಈಗ ಪ್ರತಿ ಜಿಲ್ಲೆಯಲ್ಲಿ, ರಾಜ್ಯ ಮಟ್ಟದಲ್ಲಿ ಸ್ವತಂತ್ರ ಪ್ರಾಸಿಕ್ಯೂಷನ್ ನಿರ್ದೇಶನಾಲಯವನ್ನು ಸ್ಥಾಪಿಸಲಾಗುವುದು, ಅವರು ಪ್ರಕರಣದ ಮೇಲ್ಮನವಿಯನ್ನು ಪಾರದರ್ಶಕ ರೀತಿಯಲ್ಲಿ ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು. ಅನೇಕ ಪ್ರಕರಣಗಳಲ್ಲಿ, ಪೊಲೀಸ್ ಉತ್ತರದಾಯಿತ್ವವನ್ನು ನಿಗದಿಪಡಿಸಲಾಗಿದೆ ಮತ್ತು ಬಂಧಿತ ವ್ಯಕ್ತಿಯ ಮಾಹಿತಿಯನ್ನು ಪ್ರತಿ ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ದಾಖಲಿಸಿಟ್ಟು ನಿರ್ವಹಿಸಬೇಕಾಗುತ್ತದೆ.

ಭಾರತೀಯ ನ್ಯಾಯ ಸಂಹಿತಾದಲ್ಲಿ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಮಕ್ಕಳ ವಿರುದ್ಧದ ಅಪರಾಧ, ಕೊಲೆ, ಅಪಹರಣ ಮತ್ತು ಮಾನವ ಕಳ್ಳಸಾಗಣೆ ಮುಂತಾದ ಮಾನವ ಮತ್ತು ದೇಹಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಆದ್ಯತೆ ನೀಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನರೇಂದ್ರ ಮೋದಿ ಅವರು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಮತ್ತು ರಾಜದ್ರೋಹದ ಸೆಕ್ಷನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ ಎಂದು ಅವರು ಹೇಳಿದರು. ನಾವು ರಾಜದ್ರೋಹವನ್ನು ದೇಶದ್ರೋಹದಿಂದ ಬದಲಾಯಿಸಿದ್ದೇವೆ ಎಂದು ಅವರು ಹೇಳಿದರು. ಈ ದೇಶದ ವಿರುದ್ಧ ಯಾರೂ ಮಾತನಾಡಲಾಗದು ಮತ್ತು ಅದರ ಹಿತಾಸಕ್ತಿಗಳಿಗೆ ಯಾರೂ ಹಾನಿ ಮಾಡಲಾಗದು ಎಂದು ಗೃಹ ಸಚಿವರು ಹೇಳಿದರು. ಭಾರತದ ಧ್ವಜ, ಗಡಿಗಳು ಮತ್ತು ಸಂಪನ್ಮೂಲಗಳೊಂದಿಗೆ ಯಾರಾದರೂ ಆಟವಾಡಿದರೆ, ಅವರು ಖಂಡಿತವಾಗಿಯೂ ಜೈಲಿಗೆ ಹೋಗಬೇಕಾಗುತ್ತದೆ ಏಕೆಂದರೆ ದೇಶದ ಭದ್ರತೆಗೆ ಮೊದಲ ಆದ್ಯತೆ ನೀಡುವುದು ನರೇಂದ್ರ ಮೋದಿ ಸರ್ಕಾರದ ಆದ್ಯತೆಯಾಗಿದೆ ಎಂದು ಶ್ರೀ ಶಾ ಹೇಳಿದರು. . ದೇಶದ್ರೋಹದ ವ್ಯಾಖ್ಯಾನದಲ್ಲಿ ನಾವು ಉದ್ದೇಶ ಮತ್ತು ಆಶಯದ ಬಗ್ಗೆ ಮಾತನಾಡಿದ್ದೇವೆ ಮತ್ತು ಉದ್ದೇಶ ದೇಶದ್ರೋಹವಾಗಿದ್ದರೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಹೇಳಿದರು. ಕೆಲವು ಜನರು ಹೊಸ ಉಪಕ್ರಮಗಳಿಗೆ ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ಮೋದಿ ಸರ್ಕಾರವು ಸಂವಿಧಾನದ ಸ್ಫೂರ್ತಿಗೆ ಅನುಗುಣವಾಗಿ ನಡೆಯುವ ಸರ್ಕಾರವಾಗಿದೆ ಮತ್ತು ಯಾರಾದರೂ ದೇಶದ ವಿರುದ್ಧ ಏನಾದರೂ ಮಾಡಿದರೆ, ಅವರು ಖಂಡಿತವಾಗಿಯೂ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಅವರು ಹೇಳಿದರು. ಬ್ರಿಟಿಷರನ್ನು ದೇಶದಿಂದ ಹೊರಹಾಕುವ ಸಲುವಾಗಿ, ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನದ ಸುವರ್ಣ ವರ್ಷಗಳನ್ನು ರಾಜದ್ರೋಹದ ಆರೋಪದ ಮೇಲೆ ಜೈಲಿನಲ್ಲಿ ಕಳೆದರು, ಇಂದು ನರೇಂದ್ರ ಮೋದಿ ಸರ್ಕಾರದ ಉಪಕ್ರಮವು ಸ್ವತಂತ್ರ ಭಾರತದಲ್ಲಿ ಅನ್ಯಾಯದ ನಿಬಂಧನೆಯನ್ನು ಇಂದು ರದ್ದುಪಡಿಸುತ್ತಿರುವುದರಿಂದ  ಅದು ಅವರ ಆತ್ಮಗಳಿಗೆ ಖಂಡಿತವಾಗಿಯೂ ತೃಪ್ತಿ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಕಾನೂನುಗಳಲ್ಲಿ ವಿವಿಧ ನಿಬಂಧನೆಗಳನ್ನು ಮಾಡಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈ ನಿಟ್ಟಿನಲ್ಲಿ ಭಾರತೀಯ ನ್ಯಾಯ ಸಂಹಿತೆಯಲ್ಲಿ ಹೊಸ ಅಧ್ಯಾಯವನ್ನು ಸೇರಿಸಲಾಗಿದೆ ಎಂದು ಅವರು ಹೇಳಿದರು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ವಿಧಿಸಲು ಅವಕಾಶವಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅಥವಾ ಮರಣದವರೆಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯದ 75 ವರ್ಷಗಳ ನಂತರ ಮೊದಲ ಬಾರಿಗೆ ನರೇಂದ್ರ ಮೋದಿ ಸರ್ಕಾರವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಭಯೋತ್ಪಾದನೆಗೆ ಸ್ಥಾನ ನೀಡಿದೆ ಎಂದು ಶ್ರೀ ಶಾ ಹೇಳಿದರು. ಭಯೋತ್ಪಾದಕ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಾನೆ ಮತ್ತು ಅವನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಹೇಳಿದರು. ಡೈನಮೈಟ್, ಸ್ಫೋಟಕ ವಸ್ತು, ವಿಷಕಾರಿ ಅನಿಲ ಅಥವಾ ಪರಮಾಣು ಬಳಕೆಯಂತಹ ಘಟನೆಗಳಲ್ಲಿ ಯಾವುದೇ ಸಾವು ಸಂಭವಿಸಿದರೆ, ಅದಕ್ಕೆ ಕಾರಣರಾದವರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪರಿಗಣಿಸಲಾಗುವುದು ಎಂದು ಅವರು ಹೇಳಿದರು. ಈ ವ್ಯಾಖ್ಯಾನವು ಕಾನೂನಿನ ದುರುಪಯೋಗಕ್ಕೆ ಯಾವುದೇ ಅವಕಾಶವನ್ನು ನೀಡುವುದಿಲ್ಲ, ಆದರೆ ಭಯೋತ್ಪಾದಕ ಕೃತ್ಯಗಳನ್ನು ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸದನದಲ್ಲಿ ಸೆಕ್ಷನ್ನಿನ  ಅನುಮೋದನೆಯು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದರು. ಕಾನೂನುಗಳಲ್ಲಿ ಮೊದಲ ಬಾರಿಗೆ ಸಂಘಟಿತ ಅಪರಾಧವನ್ನು ವ್ಯಾಖ್ಯಾನಿಸಲಾಗಿದೆ ಮತ್ತು ವಿವರಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು. ಉದ್ದೇಶಪೂರ್ವಕ ಮಾಡಲಾದ ನರಹತ್ಯೆ ಅಥವಾ ದೈಹಿಕ ಹಾನಿಯ ಸಂದರ್ಭದಲ್ಲಿ, ಆರೋಪಿಯು ಪ್ರಕರಣವನ್ನು ವರದಿ ಮಾಡಲು ಪೊಲೀಸರ ಬಳಿಗೆ ಹೋಗಿ ಸಂತ್ರಸ್ತೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರೆ ಕಡಿಮೆ ಶಿಕ್ಷೆಗೆ ಅವಕಾಶವಿದೆ ಎಂದು ಅವರು ಹೇಳಿದರು. ಹಿಟ್ ಅಂಡ್ ರನ್ (ಹೊಡೆದೋಡುವ) ಪ್ರಕರಣಗಳಿಗೆ ನಾವು 10 ವರ್ಷಗಳ ಜೈಲು ಶಿಕ್ಷೆಯ ನಿಬಂಧನೆಯನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.

ಈಗ ಪೊಲೀಸರು ದೂರು ನೀಡಿದ 3 ದಿನಗಳಲ್ಲಿ ಎಫ್ಐಆರ್ ದಾಖಲಿಸಬೇಕಾಗುತ್ತದೆ ಮತ್ತು 3 ರಿಂದ 7 ವರ್ಷಗಳ ಶಿಕ್ಷೆಯನ್ನು ಒಳಗೊಂಡ ಪ್ರಕರಣಗಳಲ್ಲಿ, ಪ್ರಾಥಮಿಕ ತನಿಖೆಯ ನಂತರ ಎಫ್ಐಆರ್ ದಾಖಲಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಯಾವುದೇ ವಿಳಂಬವಿಲ್ಲದೆ 7 ದಿನಗಳಲ್ಲಿ ನೇರವಾಗಿ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಕಳುಹಿಸಲು ನಾವು ಈಗ ಅವಕಾಶ ಕಲ್ಪಿಸಿದ್ದೇವೆ ಎಂದು ಅವರು ಹೇಳಿದರು. ಈಗ ಚಾರ್ಜ್ ಶೀಟ್ (ಆರೋಪ ಪಟ್ಟಿ) ಸಲ್ಲಿಸಲು ಸಮಯ ಮಿತಿಯನ್ನು 90 ದಿನಗಳಿಗೆ ನಿಗದಿಪಡಿಸಲಾಗಿದೆ ಮತ್ತು ಇದರ ನಂತರ ತನಿಖೆಯನ್ನು ಇನ್ನೂ 90 ದಿನಗಳವರೆಗೆ ಮಾತ್ರ ನಡೆಸಬಹುದು ಎಂದು ಅವರು ಹೇಳಿದರು. ಮ್ಯಾಜಿಸ್ಟ್ರೇಟ್ 14 ದಿನಗಳ ಒಳಗೆ ಪ್ರಕರಣವನ್ನು ಅರಿತುಕೊಳ್ಳಬೇಕು ಮತ್ತು ನಂತರ ಕ್ರಮ ಆರಂಭಗೊಳ್ಳುತ್ತದೆ ಎಂದು ಶ್ರೀ ಶಾ ಹೇಳಿದರು. ಆರೋಪಿಗಳನ್ನು ಖುಲಾಸೆಗೊಳಿಸುವಂತೆ 60 ದಿನಗಳ ಒಳಗೆ ಮನವಿ ಸಲ್ಲಿಸಬೇಕಾಗುತ್ತದೆ ಎಂದು ಅವರು ಹೇಳಿದರು. 90 ದಿನಗಳ ಒಳಗೆ ಆರೋಪಿಯ ಅನುಪಸ್ಥಿತಿಯಲ್ಲಿಯೂ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಬಹುದಾದ ಅನೇಕ ಪ್ರಕರಣಗಳಿವೆ ಎಂದು ಶ್ರೀ ಶಾ ಹೇಳಿದರು. ಈಗ ನ್ಯಾಯಾಧೀಶರು ಪ್ರಕರಣ ಮುಗಿದ 45 ದಿನಗಳಲ್ಲಿ ತಮ್ಮ ತೀರ್ಪನ್ನು ನೀಡಬೇಕಾಗುತ್ತದೆ. ಇದರೊಂದಿಗೆ, ನಿರ್ಧಾರ ಮತ್ತು ಶಿಕ್ಷೆಯ ನಡುವೆ ಕೇವಲ 7 ದಿನಗಳು ಮಾತ್ರ ಇರುತ್ತವೆ. ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ 30 ದಿನಗಳ ಒಳಗೆ ಮಾತ್ರ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಬಹುದು.

ಇ-ಎಫ್ಐಆರ್ ಮೂಲಕ ಮಹಿಳೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬಹುದು, ಅದರ ಬಗ್ಗೆಯೂ ಗಮನ ಹರಿಸಲಾಗುವುದು ಮತ್ತು ಎರಡು ದಿನಗಳಲ್ಲಿ ಮಹಿಳೆಗೆ ಅವರ ಮನೆಯಲ್ಲಿ ಉತ್ತರ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪೊಲೀಸ್ ಅಧಿಕಾರದ ದುರುಪಯೋಗವನ್ನು ತಡೆಯಲು ನಾವು ತಂತ್ರಜ್ಞಾನವನ್ನು ಬಳಸಿದ್ದೇವೆ ಎಂದು ಅವರು ಹೇಳಿದರು. ಅಪರಾಧ ಸ್ಥಳ,  ತನಿಖೆ ಮತ್ತು ವಿಚಾರಣೆಯ ಈ ಎಲ್ಲಾ ಮೂರು ಹಂತಗಳಲ್ಲಿ ತಂತ್ರಜ್ಞಾನದ ಬಳಕೆಗೆ ನಾವು ಪ್ರಾಮುಖ್ಯತೆ ನೀಡಿದ್ದೇವೆ, ಇದು ಪೊಲೀಸ್ ತನಿಖೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸುತ್ತದೆ, ಜೊತೆಗೆ ಸಾಕ್ಷ್ಯಗಳ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಸಂತ್ರಸ್ತೆ ಹಾಗು ಆರೋಪಿಗಳ ಹಕ್ಕುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಸಾಕ್ಷ್ಯಗಳ ವೀಡಿಯೊ ರೆಕಾರ್ಡಿಂಗ್, ಶೋಧ ಮತ್ತು ವಶಪಡಿಸಿಕೊಳ್ಳುವಿಕೆಗೆ ಕಡ್ಡಾಯ ನಿಬಂಧನೆಗಳನ್ನು ಮಾಡಲಾಗಿದೆ, ಇದು ಯಾರನ್ನಾದರೂ ಸಿಲುಕಿಸುವ ಸಾಧ್ಯತೆಯ ವ್ಯಾಪ್ತಿಯನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡಿದೆ ಎಂದು ಶ್ರೀ ಶಾ ಹೇಳಿದರು.

ನಮ್ಮ ದೇಶದಲ್ಲಿ ಶಿಕ್ಷೆಯ ಪ್ರಮಾಣ ತುಂಬಾ ಕಡಿಮೆ ಮತ್ತು ಅದನ್ನು ಹೆಚ್ಚಿಸಲು, ವೈಜ್ಞಾನಿಕ ಪುರಾವೆಗಳಿಗೆ ಒತ್ತು ನೀಡಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ವಿಧೇಯಕದಲ್ಲಿ ತನಿಖೆಯ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ, ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು ತನಿಖೆ ನಡೆಸುವುದು ಮತ್ತು 90% ಶಿಕ್ಷೆಯ ಪ್ರಮಾಣವನ್ನು ಗುರಿಯಾಗಿಟ್ಟುಕೊಂಡು  7 ವರ್ಷಗಳಿಗಿಂತ ಹೆಚ್ಚು ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಎಫ್ಎಸ್ಎಲ್ ತಂಡದ ಭೇಟಿ ಕಡ್ಡಾಯವಾಗಿರುತ್ತದೆ ಎಂಬ ನಿಬಂಧನೆಯನ್ನು ನಾವು ಮಾಡಿದ್ದೇವೆ. ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಅವರು ಗುಜರಾತ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ರಚಿಸಿದರು, ಅವರು ಪ್ರಧಾನಿಯಾದಾಗ ಅವರು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್ಎಫ್ಎಸ್ಯು) ರಚಿಸಿದರು ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯದ ಅಡಿಯಲ್ಲಿ, ಇಲ್ಲಿಯವರೆಗೆ 9 ರಾಜ್ಯಗಳಲ್ಲಿ ಎನ್ಎಫ್ಎಸ್ಯುನ 7 ಕ್ಯಾಂಪಸ್ ಗಳು ಮತ್ತು ಎರಡು ತರಬೇತಿ ಅಕಾಡೆಮಿಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು. 5 ವರ್ಷಗಳ ನಂತರ, ನಮ್ಮ ಅಗತ್ಯಗಳನ್ನು ಪೂರೈಸುವ 35,000 ವಿಧಿವಿಜ್ಞಾನ ತಜ್ಞರನ್ನು ನಾವು ಪ್ರತಿವರ್ಷ ಪಡೆಯುತ್ತೇವೆ. ಮೋದಿ ಸರ್ಕಾರವು 6 ಅತ್ಯಾಧುನಿಕ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ನಿರ್ಮಿಸುತ್ತಿದೆ ಎಂದು ಅವರು ಹೇಳಿದರು.

ಈಗ ಸಂತ್ರಸ್ತರು ಯಾವುದೇ ಪೊಲೀಸ್ ಠಾಣೆಗೆ ಹೋಗಿ ಶೂನ್ಯ ಎಫ್ಐಆರ್ ದಾಖಲಿಸಬಹುದು ಮತ್ತು ಅದನ್ನು 24 ಗಂಟೆಗಳ ಒಳಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ವರ್ಗಾಯಿಸಬೇಕಾಗುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರೊಂದಿಗೆ, ಪ್ರತಿ ಜಿಲ್ಲೆ ಮತ್ತು ಪೊಲೀಸ್ ಠಾಣೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಅವರು ಬಂಧಿತರ ಪಟ್ಟಿಯನ್ನು ಸಿದ್ಧಪಡಿಸಿ ಅವರ ಸಂಬಂಧಿಕರಿಗೆ ಮಾಹಿತಿ ನೀಡುತ್ತಾರೆ. ಜಾಮೀನು ಮತ್ತು ಬಾಂಡ್ ಅನ್ನು ಹಿಂದೆ ಸ್ಪಷ್ಟಪಡಿಸಲಾಗಿಲ್ಲ, ಆದರೆ ಈಗ ಜಾಮೀನು ಮತ್ತು ಬಾಂಡ್ ಅನ್ನು ಸ್ಪಷ್ಟಪಡಿಸಲಾಗಿದೆ ಎಂದು ಶಾ ಹೇಳಿದರು. ಘೋಷಿತ ಅಪರಾಧಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. ಈ ಹಿಂದೆ, 19 ಅಪರಾಧಗಳಲ್ಲಿ ಮಾತ್ರ ಒಬ್ಬನನ್ನು ದೇಶಭ್ರಷ್ಟ ಎಂದು ಘೋಷಿಸಬಹುದಾಗಿತ್ತು, ಈಗ 120 ಅಪರಾಧಗಳಲ್ಲಿ ದೇಶಭ್ರಷ್ಟ ಎಂದು ಘೋಷಿಸಲು ಅವಕಾಶ ಕಲ್ಪಿಸಲಾಗಿದೆ.

ಗೈರುಹಾಜರಿಯಲ್ಲಿ ನಡೆಸುವ ವಿಚಾರಣೆಯ ಅಡಿಯಲ್ಲಿ, ಅಪರಾಧಿಗಳಿಗೆ ಈಗ ಶಿಕ್ಷೆ ವಿಧಿಸಲಾಗುವುದು ಮತ್ತು ಅವರ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ತಮ್ಮ ಜೈಲುವಾಸದ ಮೂರನೇ ಒಂದು ಭಾಗವನ್ನು ಅನುಭವಿಸಿದ ವಿಚಾರಣಾಧೀನ ಕೈದಿಗಳಿಗೆ ಜಾಮೀನು ನೀಡಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷೆಯ ಪರಿಹಾರವನ್ನು ತರ್ಕಬದ್ಧಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಮರಣದಂಡನೆ ಇದ್ದರೆ ಗರಿಷ್ಠ ಜೀವಾವಧಿ ಶಿಕ್ಷೆಯಾಗಬಹುದು, ಅದು ಇದಕ್ಕಿಂತ ಕಡಿಮೆ ಇರಬಾರದು. ಜೀವಾವಧಿ ಶಿಕ್ಷೆಯಾಗಿದ್ದರೆ, 7 ವರ್ಷ ಮತ್ತು 7 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಿದರೆ, ಕನಿಷ್ಠ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಪೊಲೀಸ್ ಠಾಣೆಗಳಲ್ಲಿ ಬೃಹತ್ ಪ್ರಮಾಣದ ಆಸ್ತಿ ಇದ್ದಲ್ಲಿ, ಅದನ್ನು ವೀಡಿಯೊಗ್ರಫಿ ಮಾಡಿದ ನಂತರ ಪೊಲೀಸ್ ಠಾಣೆಗಳಲ್ಲಿ ಇರುವ ಹೆಚ್ಚಿನ ಸಂಖ್ಯೆಯ ಆಸ್ತಿಯನ್ನು ಮ್ಯಾಜಿಸ್ಟ್ರೇಟ್ ಮಾರಾಟ ಮಾಡುತ್ತಾರೆ ಮತ್ತು ನ್ಯಾಯಾಲಯದ ಒಪ್ಪಿಗೆಯೊಂದಿಗೆ ಅದನ್ನು 30 ದಿನಗಳಲ್ಲಿ ಮಾರಾಟ ಮಾಡಲಾಗುವುದು ಹಾಗು ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲಾಗುವುದು ಎಂದು ಅವರು ಹೇಳಿದರು. ಮೋದಿ ಸರ್ಕಾರವು ಭಾರತೀಯ ಸಾಕ್ಷ್ಯ ಕಾಯ್ದೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ ಎಂದು ಶ್ರೀ ಶಾ ಹೇಳಿದರು. ಎಲೆಕ್ಟ್ರಾನಿಕ್ ದಾಖಲೆಯನ್ನು ದಾಖಲೆಯ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ ಮತ್ತು ಈಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ದಾಖಲೆಯನ್ನು ದಾಖಲೆಯಾಗಿ ಪರಿಗಣಿಸಲಾಗುತ್ತದೆ. ವಿದ್ಯುನ್ಮಾನವಾಗಿ ಸ್ವೀಕರಿಸಿದ ಹೇಳಿಕೆಗಳನ್ನು ಸಾಕ್ಷ್ಯದ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು. ದೇಶದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಇದನ್ನು ಸಂಪೂರ್ಣವಾಗಿ ಜಾರಿಗೆ ತಂದಾಗ, ನಮ್ಮ ನ್ಯಾಯಾಂಗ ಪ್ರಕ್ರಿಯೆಯು ವಿಶ್ವದ ಅತ್ಯಂತ ಆಧುನಿಕ ನ್ಯಾಯಾಂಗ ಪ್ರಕ್ರಿಯೆಯಾಗಲಿದೆ ಎಂದು ಗೃಹ ಸಚಿವರು ಹೇಳಿದರು.

ಈವರೆಗೆ ದೇಶದ ಶೇ.97ರಷ್ಟು ಪೊಲೀಸ್ ಠಾಣೆಗಳನ್ನು ಕಂಪ್ಯೂಟರೀಕರಣಗೊಳಿಸುವ ಕಾರ್ಯ ಐಸಿಜೆಎಸ್ ಮೂಲಕ ಪೂರ್ಣಗೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನ್ಯಾಯಾಲಯಗಳನ್ನು ಆಧುನೀಕರಿಸಲಾಗುತ್ತಿದ್ದು, ಐಸಿಜೆಎಸ್, ವಿಧಿವಿಜ್ಞಾನ ವಿಶ್ವವಿದ್ಯಾಲಯ, ಪೊಲೀಸ್ ಠಾಣೆ, ಗೃಹ ಇಲಾಖೆ, ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ, ಜೈಲು ಮತ್ತು ನ್ಯಾಯಾಲಯಗಳ ಮೂಲಕ ಒಂದೇ ಸಾಫ್ಟ್ವೇರ್ ಅಡಿಯಲ್ಲಿ ಆನ್ಲೈನ್ ಆಗುವ  ಹಂತದಲ್ಲಿವೆ ಎಂದು ಅವರು ಹೇಳಿದರು. ಇದರೊಂದಿಗೆ, ಸ್ಮಾರ್ಟ್ ಫೋನ್ ಗಳು, ಲ್ಯಾಪ್ಟಾಪ್ಗಳು, ಸಂದೇಶ ವೆಬ್ಸೈಟ್ಗಳು ಮತ್ತು ಸ್ಥಳ ಪುರಾವೆಗಳನ್ನು ಸಾಕ್ಷ್ಯಗಳ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ ಮತ್ತು ಆರೋಪಿಗಳು ಹಾಗು ಸಂತ್ರಸ್ತರಿಗೆ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶ ನೀಡಲಾಗಿದೆ.

ಭಯೋತ್ಪಾದಕ ಕೃತ್ಯಕ್ಕಾಗಿರುವ ಅಪರಾಧವನ್ನು ಒಂದೇ ಸ್ಥಳದಲ್ಲಿ ದಾಖಲಿಸಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು, ಆದರೆ ಇಲ್ಲಿಯವರೆಗೆ ಸಿಆರ್ಪಿಸಿಯಲ್ಲಿ ಭಯೋತ್ಪಾದನೆಯನ್ನು ವ್ಯಾಖ್ಯಾನಿಸಲಾಗಿಲ್ಲ ಮತ್ತು ಜನರು ತಪ್ಪಿಸಿಕೊಳ್ಳುತ್ತಿದ್ದರು ಎಂದವರು ಹೇಳಿದರು. ಕಾನೂನಿನ ಮೂಲಕ ನಾವು ಅವರು ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ಮುಚ್ಚಿದ್ದೇವೆ ಎಂದರು. ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪಪಡುವವರಿಗೆ ಮಾತ್ರ ಕರುಣೆಯ,  ದಯೆಯ ಹಕ್ಕಿದೆ ಎಂದು ಗೃಹ ಸಚಿವರು ಹೇಳಿದರು. ಅಂತಹ ದೃಢನಿಶ್ಚಯದೊಂದಿಗೆ ಕಾನೂನಿನಲ್ಲಿ ವಿಧಿವಿಜ್ಞಾನ ವಿಜ್ಞಾನಕ್ಕೆ ಸ್ಥಾನ ನೀಡುವ ಏಕೈಕ ದೇಶ ಭಾರತ ಎಂದು ಅವರು ಹೇಳಿದರು. ಬ್ರಿಟಿಷ್ ಯುಗದ ಗುಲಾಮಗಿರಿಯ ಎಲ್ಲಾ ಚಿಹ್ನೆಗಳನ್ನು ತೆಗೆದುಹಾಕುವ ಮೂಲಕ, ಈಗ ಇದು ಸಂಪೂರ್ಣ ಭಾರತೀಯ ಕಾನೂನಾಗಲಿದೆ ಎಂದು ಶ್ರೀ ಶಾ ಹೇಳಿದರು.

****



(Release ID: 1989007) Visitor Counter : 133