ಗಣಿ ಸಚಿವಾಲಯ

ರಾಷ್ಟ್ರೀಯ ಭೂವಿಜ್ಞಾನ ದತ್ತಾಂಶ ಭಂಡಾರ(ರೆಪೊಸಿಟರಿ)ದ ಪೋರ್ಟಲ್ ಅನಾವರಣಗೊಳಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ


ಸಂದಿಗ್ಧ(ನಿರ್ಣಾಯಕ) ಮತ್ತು ಆಯಕಟ್ಟಿನ ಖನಿಜಗಳ ಹರಾಜಿನ ಯಶಸ್ಸು ಖಚಿತಪಡಿಸಿಕೊಳ್ಳಲು ಗಣಿ ಸಚಿವಾಲಯ ರೋಡ್‌ಶೋ ನಡೆಸಲಿದೆ

ನಿರ್ಣಾಯಕ ಖನಿಜಗಳಲ್ಲಿ ಸ್ವಾವಲಂಬನೆಯತ್ತ ಗಮನ ಹರಿಸಿ - ಶ್ರೀ ಪ್ರಲ್ಹಾದ್ ಜೋಶಿ

7 ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ 20 ಖನಿಜ  ಬ್ಲಾಕ್‌ಗಳ ಹರಾಜು ಮಾಡಲಾಗುವುದು

Posted On: 20 DEC 2023 2:30PM by PIB Bengaluru

2023  ನವೆಂಬರ್ 29ರಂದು ಪ್ರಾರಂಭಿಸಲಾದ ನಿರ್ಣಾಯಕ ಮತ್ತು ಆಯಕಟ್ಟಿನ (ಕಾರ್ಯತಂತ್ರ) ಖನಿಜಗಳ ಮೊದಲ ಕಂತಿನ ಹರಾಜು ಯಶಸ್ಸಿನಿಂದ ಉತ್ತೇಜಿತವಾಗಿರುವ ಗಣಿ ಸಚಿವಾಲಯ, 2023 ಡಿಸೆಂಬರ್ 19ರಂದು ಕೇಂದ್ರ ಸಂಸದೀಯ ವ್ಯವಹಾರಗಳು,  ಗಣಿ ಮತ್ತು ಕಲ್ಲಿದ್ದಲು ಸಚಿವ ಶ್ರೀ ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ರೋಡ್ ಶೋ ನಡೆಸಿತು. ಗಣಿ, ಕಲ್ಲಿದ್ದಲು ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ, ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿ.ಎಲ್. ಕಾಂತರಾವ್, ಸಚಿವಾಲಯದ ಹಿರಿಯ ಅಧಿಕಾರಿಗಳು, ಕೈಗಾರಿಕಾ ಸಂಘಗಳು ಮತ್ತು ಪಿಎಸ್ ಯುಗಳು ಸೇರಿದಂತೆ ಈ ಕಾರ್ಯಕ್ರಮದಲ್ಲಿ 45ಕ್ಕಿಂತ ಹೆಚ್ಚಿನ ಕಂಪನಿಗಳು, ಸಲಹೆಗಾರರು ಮತ್ತು ಪರಿಶೋಧನಾ ಏಜೆನ್ಸಿಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ರಾಷ್ಟ್ರೀಯ ಭೂವಿಜ್ಞಾನ ದತ್ತಾಂಶ ಭಂಡಾರ(ಡೇಟಾ ರೆಪೊಸಿಟರಿ)ದ ಪೋರ್ಟಲ್ (ಎನ್ ಜಿಡಿಆರ್)ಗೆ ಚಾಲನೆ ನೀಡಿದರು.

https://static.pib.gov.in/WriteReadData/userfiles/image/image00144H0.jpg

ಮೊದಲ ಕಂತಿನಲ್ಲಿ ಒಟ್ಟು 20 ನಿರ್ಣಾಯಕ ಮತ್ತು ಆಯಕಟ್ಟಿನ ಖನಿಜ ಬ್ಲಾಕ್‌ಗಳನ್ನು ಹರಾಜು ಮಾಡಲಾಗುವುದು. ಅದರಲ್ಲಿ 16 ಖನಿಜ ಬ್ಲಾಕ್‌ಗಳನ್ನು ಸಂಯೋಜಿತ ಪರವಾನಗಿ ಮತ್ತು 4 ಖನಿಜ ಬ್ಲಾಕ್‌ಗಳನ್ನು ಗಣಿಗಾರಿಕೆ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಲಾಗುತ್ತದೆ. ಖನಿಜಗಳಲ್ಲಿ ಗ್ರ್ಯಾಫೈಟ್, ಗ್ಲಾಕೊನೈಟ್, ಲಿಥಿಯಂ, ಆರ್ ಇಇ, ಮಾಲಿಬ್ಡಿನಮ್, ನಿಕ್ಕಲ್, ಪೊಟ್ಯಾಶ್ ಇತ್ಯಾದಿ ಸೇರಿವೆ. ಬ್ಲಾಕ್‌ಗಳು ತಮಿಳುನಾಡು, ಒಡಿಶಾ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಗುಜರಾತ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ  ಹರಡಿವೆ.

ಸಮಾರಂಭ ಉದ್ದೇಶಿಸಿ ಮಾತನಾಡಿದ ಸಚಿವ ಶ್ರೀ ಪ್ರಲ್ಹಾದ ಜೋಶಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರಿಕಲ್ಪನೆಯಂತೆ ಸ್ವಾವಲಂಬನೆಯ ಗುರಿ ಸಾಧಿಸಲು,  ಖನಿಜಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಗಣಿ ಸಚಿವಾಲಯವು ಕೈಗೊಂಡ ಪ್ರಯತ್ನಗಳು ಮತ್ತು ಉಪಕ್ರಮಗಳನ್ನು ಶ್ಲಾಘಿಸಿದರು. ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಭಾರತೀಯ ಗಣಿಗಾರಿಕೆ ಕ್ಷೇತ್ರವು ಹೇಗೆ ಮಹತ್ವದ್ದಾಗಿದೆ ಎಂಬುದನ್ನು ಅವರು ವಿವರಿಸಿದರು, ದೇಶೀಯ ಉತ್ಪಾದನೆ ಬಲಪಡಿಸುವುದು, ಸ್ವಾವಲಂಬನೆ ಬೆಳೆಸುವುದು, ಆಮದು ಅವಲಂಬನೆ ಕಡಿಮೆಗೊಳಿಸುವುದು, ಸುಸ್ಥಿರ ಸಂಪನ್ಮೂಲ ನಿರ್ವಹಣೆ ಸಮರ್ಥಿಸುವುದು, ಗಣಿಗಾರಿಕೆಯಲ್ಲಿ ಹೂಡಿಕೆ ಆಕರ್ಷಿಸುವುದು ಮುಂತಾದ ಆದ್ಯತೆಗಳ ಬಗ್ಗೆ ಅವರು ಒತ್ತು ನೀಡಿದರು. ಭಾರತದ ಉದ್ಯಮ ಮತ್ತು ತಾಂತ್ರಿಕ ಪ್ರಗತಿಗೆ ಪ್ರಮುಖವಾದ ಕೈಗಾರಿಕೆಗಳು ಮತ್ತು ಪ್ರಗತಿಶೀಲ ವಲಯಗಳನ್ನು ಪ್ರಸ್ತಾಪಿಸಿದ ಅವರು, ಹಂತ ಹಂತವಾಗಿ ಹೆಚ್ಚು ನಿರ್ಣಾಯಕ ಖನಿಜ ಬ್ಲಾಕ್‌ಗಳನ್ನು ಹರಾಜು ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.

https://static.pib.gov.in/WriteReadData/userfiles/image/image0025MVQ.jpg

ಗಣಿ, ಕಲ್ಲಿದ್ದಲು ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ ಅವರು ನಿರ್ಣಾಯಕ ಖನಿಜಗಳ ಹರಾಜಿನ ಆರಂಭಿಕ ಹಂತದ ಸಂಭಾವ್ಯ ಯಶಸ್ಸಿನ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. ಈ ಖನಿಜಗಳಿಗೆ ವಿಶ್ವಾಸಾರ್ಹ ಪೂರೈಕೆ ಸರಪಳಿ ಸ್ಥಾಪಿಸುವತ್ತ ಇದು ಸಕಾರಾತ್ಮಕ ಹೆಜ್ಜೆಯಾಗಿದೆ. ಆತ್ಮ ನಿರ್ಭರ್ ಭಾರತ ಕಟ್ಟುವ ದೃಷ್ಟಿಕೋನ ಮತ್ತು ಉನ್ನತ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲಿದೆ. ಈ ಖನಿಜ ಬ್ಲಾಕ್‌ಗಳನ್ನು ಹರಾಜು ಮಾಡಲು ಸರ್ಕಾರ ನಡೆಸಿರುವ ಪ್ರಯತ್ನಗಳನ್ನು ಅವರು ಪುನರುಚ್ಚರಿಸಿದರು. ಈ ಹರಾಜು ಪ್ರಕ್ರಿಯೆಯ ಯಶಸ್ಸು ಉದ್ಯಮದ ಸಕ್ರಿಯ ಭಾಗವಹಿಸುವಿಕೆಯ ಮೇಲೆ ಹೇಗೆ ಅವಲಂಬಿತವಾಗಿದೆ. ಹರಾಜು ಪ್ರಕ್ರಿಯೆಯ ಉದ್ದಕ್ಕೂ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ನೈತಿಕ ಅಭ್ಯಾಸಗಳ ಅತ್ಯುನ್ನತ ಮಾನದಂಡಗಳನ್ನು ಪ್ರದರ್ಶಿಸಬೇಕು ಎಂದು ಎಲ್ಲಾ ಪಾಲುದಾರರಿಗೆ ಅವರು ಕರೆ ನೀಡಿದರು.

ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿ.ಎಲ್. ಕಾಂತರಾವ್ ಅವರು, ದೇಶದಲ್ಲಿ ಕೈಗೊಂಡಿರುವ ಪರಿಶೋಧನಾ ಚಟುವಟಿಕೆಗಳನ್ನು ಹೆಚ್ಚಿಸಲು ಗಣಿ ಸಚಿವಾಲಯ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಖನಿಜ ವಲಯದ ಬಹುಮುಖಿ ಬೆಳವಣಿಗೆಗೆ ನೀತಿ ಚೌಕಟ್ಟನ್ನು ಸುಗಮಗೊಳಿಸುವ ಪ್ರಯತ್ನಗಳ ಬಗ್ಗೆ ಒಳನೋಟಗಳನ್ನು ನೀಡಿದರು. ಅಲ್ಲದೆ, ಅವರು ಎಲ್ಲಾ ಪಾಲುದಾರರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಇ-ಹರಾಜು ಪ್ರಕ್ರಿಯೆಯಲ್ಲಿ ಸುಲಭವಾಗಿ ಭಾಗವಹಿಸಲು ಸಚಿವಾಲಯ ಎಲ್ಲಾ ಸಹಾಯ ನೀಡಲಿದೆ ಎಂದು ಖಾತ್ರಿಪಡಿಸಿದ ಅವರು, ಕೇಂದ್ರ ಸರ್ಕಾರ ನಡೆಸುತ್ತಿರುವ ಇ-ಹರಾಜು ಪ್ರಕ್ರಿಯೆಗೆ ತಮ್ಮ ಸಲಹೆಗಳನ್ನು ನೀಡುವಂತೆ ಶ್ರೀ ರಾವ್ ಅವರು ನೆರೆದಿದ್ದ ಪಾಲುದಾರರನ್ನು ಉತ್ತೇಜಿಸಿದರು.

https://static.pib.gov.in/WriteReadData/userfiles/image/image003XZS2.jpg

ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಂಭಾವ್ಯ ಹರಾಜುದಾರರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ರೋಡ್‌ಶೋ ನಡೆಸಲಾಯಿತು. ಗಣಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸಂಜಯ್ ಲೋಹಿಯಾ ಅವರು ಗಣ್ಯರನ್ನು ಸ್ವಾಗತಿಸಿದರು. ನಿರ್ಣಾಯಕ ಮತ್ತು ಆಯಕಟ್ಟಿನ(ಕಾರ್ಯತಂತ್ರ) ಖನಿಜಗಳ ಹರಾಜಿನ ಮಹತ್ವದ ಕುರಿತು ಚರ್ಚೆ ಪ್ರಾರಂಭಿಸಿದರು.

ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ ವೀಣಾ ಕುಮಾರಿ ಡರ್ಮಲ್ ಅವರು ಪ್ರಸ್ತುತಿ ಪ್ರಾರಂಭಿಸಿ, ಪ್ರಚಲಿತ ಖನಿಜ ನೀತಿಗಳು ಮತ್ತು ಎಂಎಂಡಿಆರ್ ಕಾಯಿದೆಯ ಸುಧಾರಣೆ, ನಿರ್ಣಾಯಕ ಮತ್ತು ಆಯಕಟ್ಟಿನ ಖನಿಜ ಬ್ಲಾಕ್‌ಗಳ ಹರಾಜಿಗೆ ಕೇಂದ್ರ ಸರ್ಕಾರವನ್ನು ಸಕ್ರಿಯಗೊಳಿಸುವ ನಿಯಮಗಳ ಬಗ್ಗೆ ಭಾಗವಹಿಸಿದ್ದ ಪಾಲುದಾರರಿಗೆ ಮೌಲ್ಯಮಾಪನ ಮಾಡಿದರು. ಇದಲ್ಲದೆ, ಹರಾಜಿನ ಮೊದಲ ಕಂತಿನಲ್ಲಿ ಪ್ರಾರಂಭಿಸಲಾದ 20 ಬ್ಲಾಕ್‌ಗಳ ಬಗ್ಗೆ ಮಾಹಿತಿ ನೀಡಿದರು. ಇ-ಹರಾಜು ಪ್ರಕ್ರಿಯೆಯ ಅಂದಾಜು ಟೈಮ್‌ಲೈನ್ ಅನ್ನು ಪ್ರಸ್ತುತಪಡಿಸಿದರು. ಇದರ ನಂತರ ಎಸ್ ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ – ವಹಿವಾಟು ಸಲಹಾ ಸಂಸ್ಥೆ, ಎಂಇಸಿಎಲ್ - ತಾಂತ್ರಿಕ ಸಲಹಾ ಸಂಸ್ಥೆ ಮತ್ತು ಎಂಎಸ್ ಟಿಸಿ - ಹರಾಜು ವೇದಿಕೆ ಒದಗಿಸುವ ಸೇವಾ ಸಂಸ್ಥೆ ಇವುಗಳು  ಪ್ರಸ್ತುತಿ ನೀಡಿ, ಇ-ಹರಾಜು ಮತ್ತು ಹರಾಜು ಮಾಡಲಾಗುವ  ನಿರ್ಣಾಯಕ ಖನಿಜ ಬ್ಲಾಕ್‌ಗಳ ಬಗ್ಗೆ ಸಂಭಾವ್ಯ ಹರಾಜುದಾರರಿಗೆ ಮಾಹಿತಿ ನೀಡುತ್ತವೆ.

ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಅರ್ಹತಾ ಷರತ್ತುಗಳು, ಹರಾಜು ಪ್ರಕ್ರಿಯೆಗೆ ಸಾಮಾನ್ಯ ಮಾರ್ಗಸೂಚಿಗಳು ಮತ್ತು ಬಿಡ್ಡಿಂಗ್ ನಿಯತಾಂಕಗಳನ್ನು ಒಳಗೊಂಡಂತೆ ಹರಾಜು ಪ್ರಕ್ರಿಯೆಯ ವಿವರಗಳನ್ನು ಪಾಲುದಾರರಿಗೆ ಪ್ರಸ್ತುತಪಡಿಸಿದೆ. ಎಂಇಸಿಎಲ್ ಆಧುನಿಕ ತಂತ್ರಜ್ಞಾನಗಳಲ್ಲಿ ನಿರ್ಣಾಯಕ ಮತ್ತು ಆಯಕಟ್ಟಿನ ಖನಿಜಗಳ ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲಿತು. ಜತೆಗೆ, ಹರಾಜಿಗೆ ಇಡಲಾದ 20 ನಿರ್ಣಾಯಕ ಖನಿಜ ಬ್ಲಾಕ್‌ಗಳ ವಿವರಗಳನ್ನು ಹಂಚಿಕೊಂಡಿತು. ಎಂಎಸ್ ಟಿಸಿ ಹರಾಜು ಪೋರ್ಟಲ್‌ನ ತಾಂತ್ರಿಕತೆಗಳೊಂದಿಗೆ ಸಂಭಾವ್ಯ ಹರಾಜುದಾರರ ನೋಂದಣಿ ಪ್ರಕ್ರಿಯೆ ನಡೆಸಿತು. ನಂತರ ಪಾಲುದಾರರಿಂದ ಬಂದ ಪ್ರಶ್ನೆಗಳನ್ನು ನಿರೂಪಕರು ಪರಿಹರಿಸಿದರು.

ಗಣಿ ಸಚಿವಾಲಯದ ನಿರ್ದೇಶಕರು(ಎನ್ಎಂಇಟಿ), ದೇಶದಲ್ಲಿ ಖನಿಜ ಅನ್ವೇಷಣೆ ಅಥವಾ ಪರಿಶೋಧನೆ ತ್ವರಿತಗೊಳಿಸಲು ಅಧಿಸೂಚಿತ ಖಾಸಗಿ ಪರಿಶೋಧನಾ ಏಜೆನ್ಸಿಗಳ (NPEAs) ತೊಡಗಿಸಿಕೊಳ್ಳುವಿಕೆ ಸುಲಭಗೊಳಿಸಲು ಸಚಿವಾಲಯ ನಡೆಸಿದ  ಪ್ರಯತ್ನಗಳನ್ನು ವಿವರಿಸಿದರು. ನ್ಯಾಷನಲ್ ಮಿನರಲ್ ಎಕ್ಸ್‌ಪ್ಲೋರೇಷನ್ ಟ್ರಸ್ಟ್ (ಎನ್‌ಎಂಇಟಿ) ಮೂಲಕ ಅಧಿಸೂಚಿತ ಖಾಸಗಿ ಎಕ್ಸ್‌ಪ್ಲೋರೇಷನ್ ಏಜೆನ್ಸಿ(ಎನ್‌ಪಿಇಎ)ಯ ಧನಸಹಾಯ ಕುರಿತು ಅವರು ಮತ್ತಷ್ಟು ಮಾಹಿತಿ ನೀಡಿದರು. ಸಚಿವಾಲಯವು ಅಂತಹ 16 ಖಾಸಗಿ ಏಜೆನ್ಸಿಗಳಿಗೆ ಸೂಚನೆ ನೀಡಿದೆ. ಖನಿಜ (ಹರಾಜು) ನಿಯಮಗಳು 2015ರಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಯ ಬಗ್ಗೆಯೂ ತಿಳಿಸಲಾಯಿತು. ಈ ಬಗ್ಗೆ ಸಂಭಾವ್ಯ ಹರಾಜುದಾರರು ಮತ್ತು ಪಾಲುದಾರರ ಪ್ರತಿಕ್ರಿಯೆಗಳನ್ನು ಆಲಿಸಲಾಯಿತು.

ಇದಲ್ಲದೆ, ಎಂಎಂಡಿಆರ್ ಕಾಯಿದೆಯಲ್ಲಿ ಇತ್ತೀಚೆಗೆ ಒಳಗೊಂಡಿರುವ ನಿಬಂಧನೆ ಮತ್ತು ಅದರ ಅಡಿಯ ನಿಯಮಗಳ ಪರಿಶೋಧನೆ ಪರವಾನಗಿಯ ವಿವರಗಳ ಪ್ರಸ್ತುತಿ. ಪರಿಶೋಧನೆ ಪರವಾನಗಿಯು ವಿಚಕ್ಷಣದಿಂದ ಪ್ರಾರಂಭಿಸಿ ನಿರೀಕ್ಷಿತ ಕಾರ್ಯಾಚರಣೆಗಳವರೆಗೆ ಪೂರ್ಣ ಪ್ರಮಾಣದ ಪರಿಶೋಧನೆ ಕೈಗೊಳ್ಳಲು ಖನಿಜ ರಿಯಾಯಿತಿ ನೀಡುವ ಒಂದು ನಿಬಂಧನೆಯಾಗಿದೆ. ಅಂತಾರಾಷ್ಟ್ರೀಯ ಅಭ್ಯಾಸಕ್ಕೆ ಅನುಗುಣವಾಗಿ ಖಾಸಗಿ ಪಾಲುದಾರರು ಮತ್ತು ಕಿರಿಯ ಗಣಿಗಾರಿಕೆ ಕಂಪನಿಗಳನ್ನು ಆಳವಾದ ಖನಿಜಗಳ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳುವುದು ಇದರ ಕ್ರಮವಾಗಿದೆ. ಎಂಎಂಡಿಆರ್ ಕಾಯಿದೆಯಲ್ಲಿ ಮಾಡಲಾದ ಕರಡು ತಿದ್ದುಪಡಿಗಳನ್ನು ಪ್ರಸ್ತುತಪಡಿಸಲಾಯಿತು. ಪಾಲುದಾರರಿಂದ ಸಲಹೆಗಳು, ಪ್ರತಿಕ್ರಿಯೆಗಳನ್ನು ಸಹ ಪಡೆಯಲಾಯಿತು.

ನಿರೀಕ್ಷಿತ ಹರಾಜುದಾರರೊಂದಿಗೆ ಹರಾಜು-ಪೂರ್ವ ಸಭೆಯನ್ನು 2023 ಡಿಸೆಂಬರ್ 22 ರಂದು ನಿಗದಿಪಡಿಸಲಾಗಿದೆ, ಹರಾಜು ದಾಖಲೆಯ ಮಾರಾಟದ ಕೊನೆಯ ದಿನಾಂಕ 16ನೇ ಜನವರಿ 2024, ಬಿಡ್ ಸಲ್ಲಿಕೆಯ ಕೊನೆಯ ದಿನಾಂಕ 22ನೇ ಜನವರಿ 2024ಕ್ಕೆ ನಿಗದಿಪಡಿಸಲಾಗಿದೆ. ಅದರ ನಂತರ, ಆದ್ಯತೆಯ ಬಿಡ್‌ದಾರರ ಆಯ್ಕೆಗಾಗಿ ಇ-ಹರಾಜು ಪ್ರಾರಂಭವಾಗುತ್ತದೆ. ಗಣಿಗಳ ವಿವರಗಳು, ಹರಾಜು ನಿಯಮಗಳು, ಟೈಮ್‌ಲೈನ್‌ಗಳು ಇತ್ಯಾದಿಗಳನ್ನು ಎಂಎಸ್ಟಿಸಿ ಹರಾಜು ವೇದಿಕೆ http://www.mstcecommerce.com/auctionhome/mlcl/index.jsp ಇಲ್ಲಿ ನೋಡಬಹುದು.

ರಾಷ್ಟ್ರೀಯ ಭೂವಿಜ್ಞಾನ ಡೇಟಾ ರೆಪೊಸಿಟರಿ(ಎನ್ ಜಿಡಿಆರ್)ಯನ್ನು ರಾಷ್ಟ್ರೀಯ ಖನಿಜ ಪರಿಶೋಧನೆ ನೀತಿ, 2016ರ ಭಾಗವಾಗಿ ರಚಿಸಲಾಗಿದೆ, ಎಲ್ಲಾ ಬೇಸ್‌ಲೈನ್ ಮತ್ತು ಅನ್ವೇಷಣೆ-ಸಂಬಂಧಿತ ಭೂವೈಜ್ಞಾನಿಕ ಡೇಟಾವನ್ನು ಒಂದೇ ಜಿಐಎಸ್ ವೇದಿಕೆಯಲ್ಲಿ ಅನಾವರಣ ಮಾಡಲಾಗುತ್ತದೆ. ಖನಿಜ ಪರಿಶೋಧನೆಯ ವ್ಯಾಪ್ತಿ ತ್ವರಿತಗೊಳಿಸಲು, ಹೆಚ್ಚಿಸಲು ಮತ್ತು ಸುಗಮಗೊಳಿಸಲು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ಮತ್ತು ಭಾಸ್ಕರಾಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಅಪ್ಲಿಕೇಷನ್ಸ್ ಮತ್ತು ಜಿಯೋಇನ್‌ಫರ್ಮ್ಯಾಟಿಕ್ಸ್ (BISAG-N) ನೇತೃತ್ವದ ಎನ್ ಜಿಡಿಆರ್ ಉಪಕ್ರಮವು ನಿರ್ಣಾಯಕ ಜಿಯೋಸೈನ್ಸ್ ಡೇಟಾವನ್ನು ಪ್ರಜಾಪ್ರಭುತ್ವಗೊಳಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಉದ್ಯಮಗಳು, ಶೈಕ್ಷಣಿಕ ಸಂಪನ್ಮೂಲಗಳಾದ್ಯಂತ ಅಭೂತಪೂರ್ವ ಪ್ರವೇಶದೊಂದಿಗೆ ಪಾಲುದಾರರನ್ನು ಸಬಲಗೊಳಿಸುತ್ತದೆ.

https://static.pib.gov.in/WriteReadData/userfiles/image/image0041E9D.jpg

ಪ್ರಸ್ತುತ, ಭೂವೈಜ್ಞಾನಿಕ, ಭೂ ಭೌತಿಕ, ಭೂರಾಸಾಯನಿಕ, ಡೇಟಾ ಲೇಯರ್‌ಗಳಂತಹ 35 ನಕ್ಷೆ ಸೇವೆಗಳನ್ನು ಎನ್ ಜಿಡಿಆರ್ ಪೋರ್ಟಲ್‌ನೊಂದಿಗೆ ಸಂಯೋಜಿಸಲಾಗಿದೆ. ಈ ಡೇಟಾ ಸೆಟ್‌ಗಳನ್ನು ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ವಿಭಿನ್ನ ಜಿಯೋ-ಲೇಯರ್‌ಗಳ ಈ ಇಂಟರ್‌ಪ್ಲೇ ಮತ್ತು ಹೆಚ್ಚಿನ ವ್ಯಾಖ್ಯಾನವು ಸಂಭಾವ್ಯ ಖನಿಜ ವಲಯಗಳನ್ನು ಗುರಿಯಾಗಿಸಲು ಸಹಾಯ ಮಾಡುತ್ತದೆ. ಎನ್ ಜಿಡಿಆರ್ ಪೋರ್ಟಲ್ ಅನ್ನು https://geodataindia.gov.in ಮೂಲಕ ಪ್ರವೇಶಿಸಬಹುದು. ಪೋರ್ಟಲ್‌ನಲ್ಲಿ ನೋಂದಾಯಿಸಿದ ನಂತರ ಬಳಕೆದಾರರು ಡೇಟಾ ವೀಕ್ಷಿಸಬಹುದು, ಡೌನ್‌ಲೋಡ್ ಮಾಡಬಹುದು ಮತ್ತು ಅರ್ಥೈಸಿಕೊಳ್ಳಬಹುದು.

ರಾಷ್ಟ್ರೀಯ ಖನಿಜ ಪರಿಶೋಧನಾ ನೀತಿ(ಎನ್ಎಂಇಪಿ)-2016ರ ಭಾಗವಾಗಿ NGDR ರಚನೆಯ ಬಗ್ಗೆ ಗಣಿಗಳ ಸಚಿವಾಲಯ ಪರಿಕಲ್ಪನೆ ಮಾಡಿದೆ. ಎನ್ ಜಿಡಿಆರ್ ಸ್ಥಾಪಿಸುವ ಜವಾಬ್ದಾರಿಯನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ(ಜಿಎಸ್ಐ)ಗೆ ನೀಡಲಾಗಿದೆ. ಎನ್ ಜಿಡಿಆರ್ ಡಿಜಿಟಲ್ ಜಿಯೋಸ್ಪೇಷಿಯಲ್ ವೇದಿಕೆಯಲ್ಲಿ ಸಾರ್ವಜನಿಕ ರಂಗದ ಎಲ್ಲಾ ಭೂವೈಜ್ಞಾನಿಕ, ಭೂರಾಸಾಯನಿಕ, ಜಿಯೋಫಿಸಿಕಲ್ ಮತ್ತು ಖನಿಜ ಪರಿಶೋಧನೆ ಡೇಟಾ ಲಭ್ಯವಾಗುವಂತೆ ಮಾಡುತ್ತದೆ. ಇದು ಬೇಸ್‌ಲೈನ್ ಜಿಯೋಸೈನ್ಸ್ ಡೇಟಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಏಜೆನ್ಸಿಗಳು ಮತ್ತು ಖನಿಜ ರಿಯಾಯಿತಿ ಹೊಂದಿರುವವರು ಉತ್ಪಾದಿಸಿದ ಎಲ್ಲಾ ಖನಿಜ ಪರಿಶೋಧನೆಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ಗಣಿಗಾರಿಕೆ ವಲಯದ ಹೂಡಿಕೆ ಆಕರ್ಷಣೆಯನ್ನು ಹೆಚ್ಚಿಸುವುದು ಈ ಉಪಕ್ರಮದ ಹೆಚ್ಚಿನ ಗುರಿಯಾಗಿದೆ.

ರಾಷ್ಟ್ರೀಯ ಭೂವಿಜ್ಞಾನ ಡೇಟಾ ಪೋರ್ಟಲ್‌ನ (ಎನ್ ಜಿಡಿಆರ್) ಪ್ರಮುಖ ಲಕ್ಷಣಗಳು:

1. ಕೇಂದ್ರೀಕೃತ ಪ್ರವೇಶ: ಭೌಗೋಳಿಕ ನಕ್ಷೆಗಳು, ಖನಿಜ ಸಂಪನ್ಮೂಲಗಳು, ಭೂಕಂಪನ ದತ್ತಾಂಶ ಮತ್ತು ಪರಿಸರ ಮಾಹಿತಿ ಸೇರಿದಂತೆ ವೈವಿಧ್ಯಮಯ ಭೂವಿಜ್ಞಾನ ಡೇಟಾಸೆಟ್‌ಗಳ ಕೇಂದ್ರೀಕೃತ ರೆಪೊಸಿಟರಿ(ಭಂಡಾರ) ಒದಗಿಸುತ್ತದೆ.

2. ಬಳಕೆದಾರ ಸ್ನೇಹಿ ಇಂಟರ್ಫೇಸ್: ವ್ಯಾಪಕ ಶ್ರೇಣಿಯ ಬಳಕೆದಾರರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಅರ್ಥಗರ್ಭಿತ ಇಂಟರ್ಫೇಸ್, ತಡೆರಹಿತ ನ್ಯಾವಿಗೇಷನ್ ಮತ್ತು ಡೇಟಾ ಪರಿಶೋಧನೆಯನ್ನು ಸಕ್ರಿಯಗೊಳಿಸುತ್ತದೆ.

3. ಎಂಇಆರ್ ಟಿ ಟೆಂಪ್ಲೇಟ್: ಮಿನರಲ್ ಎಕ್ಸ್‌ಪ್ಲೋರೇಶನ್ ರಿಪೋರ್ಟಿಂಗ್ ಟೆಂಪ್ಲೇಟ್ ಎಲ್ಲಾ ಭೂವೈಜ್ಞಾನಿಕ ಪಾಲುದಾರರಿಗೆ ತಮ್ಮ ಡೇಟಾವನ್ನು ಎನ್ ಜಿಡಿಆರ್ ಪೋರ್ಟಲ್‌ನಲ್ಲಿ ಪ್ರಮಾಣಿತ ವರದಿ ಮಾಡುವ ಟೆಂಪ್ಲೇಟ್‌ನಲ್ಲಿ ಸಲ್ಲಿಸಲು ಅನುಕೂಲ ಮಾಡಿಕೊಡುತ್ತದೆ.

4. ವಿಶ್ಲೇಷಣಾತ್ಮಕ ಪರಿಕರಗಳು: ಸಂಕೀರ್ಣ ಜಿಯೋಸ್ಪೇಷಿಯಲ್ ಡೇಟಾದಿಂದ ಮೌಲ್ಯಯುತವಾದ ಒಳನೋಟಗಳನ್ನು ಅರ್ಥೈಸಲು ಮತ್ತು ಹೊರತೆಗೆಯಲು ಅತ್ಯಾಧುನಿಕ ವಿಶ್ಲೇಷಣಾತ್ಮಕ ಸಾಧನಗಳೊಂದಿಗೆ ಸಜ್ಜುಗೊಂಡಿದೆ.

5. ಮುಕ್ತ ಪ್ರವೇಶ: ಭೂವಿಜ್ಞಾನ ಮಾಹಿತಿ ಸಂಪತ್ತಿಗೆ ಮುಕ್ತ ಪ್ರವೇಶ ನೀಡುವ ಮೂಲಕ ಪಾರದರ್ಶಕತೆ ಮತ್ತು ಜ್ಞಾನ ಹಂಚಿಕೆಯನ್ನು ಉತ್ತೇಜಿಸುತ್ತದೆ.

ಹೇಗೆ ಪ್ರವೇಶಿಸುವುದು?

NGDR ಪೋರ್ಟಲ್ ಅನ್ನು https://geodataindia.gov.inನಲ್ಲಿ ಪ್ರವೇಶಿಸಬಹುದು.

ಈ ಪೋರ್ಟಲ್‌ನ ಅಭಿವೃದ್ಧಿಯು ವಿವಿಧ ಭೂವಿಜ್ಞಾನ ಸಂಸ್ಥೆಗಳಾದ ಜಿಎಸ್ಐ, ಎಂಇಸಿಎಲ್, ಗಣಿಗಾರಿಕೆ ಮತ್ತು ಭೂವಿಜ್ಞಾನದ ರಾಜ್ಯ ಇಲಾಖೆಗಳು, ಖಾಸಗಿ ಏಜೆನ್ಸಿಗಳು ಮತ್ತು ದೇಶದ ಇತರೆ ಪಾಲುದಾರ ಏಜೆನ್ಸಿಗಳಿಗೆ ಸಹಾಯ ಮಾಡುತ್ತದೆ. ಈ ಪೋರ್ಟಲ್ ಮೂಲಕ ಭೂವಿಜ್ಞಾನದ ಡೇಟಾ ವೀಕ್ಷಿಸಲು, ಡೌನ್‌ಲೋಡ್ ಮಾಡಲು ಮತ್ತು ವ್ಯಾಖ್ಯಾನಕ್ಕಾಗಿ ಜಾಗತಿಕವಾಗಿ ಲಭ್ಯವಾಗುವುದರಿಂದ, ಇದು ಜಾಗತಿಕ ಗಣಿಗಾರಿಕೆ ಕಂಪನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ಖನಿಜ ಪರಿಶೋಧನೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ತರಲು ಅನುಕೂಲವಾಗುತ್ತದೆ.

ಜಾಗತಿಕವಾಗಿ, ಎಲ್ಲಾ ಖನಿಜ-ಸಮೃದ್ಧ ದೇಶಗಳು ತಮ್ಮ ಖನಿಜ ಪರಿಶೋಧನಾ ಕಾರ್ಯಕ್ರಮಗಳನ್ನು ಬೆಂಬಲಿಸಲು ಭೂವೈಜ್ಞಾನಿಕ ಮಾಹಿತಿಯ ವಿವಿಧ ಪದರಗಳನ್ನು ಹೊಂದಿರುವ ಸದೃಢವಾದ ಭೂವಿಜ್ಞಾನ ಡೇಟಾ ಪೋರ್ಟಲ್ ಹೊಂದಿವೆ, ಅಂದರೆ ಭೂವೈಜ್ಞಾನಿಕ, ಭೂ ಭೌತಿಕ, ಭೂರಾಸಾಯನಿಕ, ಇತ್ಯಾದಿ. ಈ ಅತ್ಯಾಧುನಿಕ, ಬಳಕೆದಾರ ಸ್ನೇಹಿ, ಪರಸ್ಪರ ಕಾರ್ಯಾಚರಣಾ ವೇದಿಕೆಯೊಂದಿಗೆ, ಭಾರತವು ಈಗ ಇತರೆ ಖನಿಜ-ಸಮೃದ್ಧ ರಾಷ್ಟ್ರಗಳ ಲೀಗ್‌ನಲ್ಲಿದೆ, ಅಲ್ಲಿ ಭೂವೈಜ್ಞಾನಿಕ ದತ್ತಾಂಶದ ಪ್ರವೇಶವು ಅವರ ಖನಿಜ ಪರಿಶೋಧನಾ ಕಾರ್ಯಕ್ರಮಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 

****

 

 



(Release ID: 1988713) Visitor Counter : 67