ಪ್ರಧಾನ ಮಂತ್ರಿಯವರ ಕಛೇರಿ

ರೋಜ್‌ಗಾರ್ ಮೇಳದ ಅಡಿ 51,000+ ನೇಮಕ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 30 NOV 2023 6:43PM by PIB Bengaluru

ನಮಸ್ಕಾರ!

ದೇಶದ ಲಕ್ಷಗಟ್ಟಲೆ ಯುವಕರಿಗೆ ಸರ್ಕಾರಿ ಉದ್ಯೋಗ ನೀಡುವ ಅಭಿಯಾನ ಮುಂದುವರಿದಿದೆ. ಇಂದು 50 ಸಾವಿರಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗದ ನೇಮಕ ಪತ್ರ ನೀಡಲಾಗಿದೆ. ಈ ನೇಮಕ ಪತ್ರಗಳನ್ನು ಸ್ವೀಕರಿಸುವುದು ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಫಲಿತಾಂಶವಾಗಿದೆ. ನಾನು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ನನ್ನ ಹೃದಯಾಂತರಾಳದಿಂದ ಅಭಿನಂದಿಸುತ್ತೇನೆ.

ಈಗ ನೀವು ರಾಷ್ಟ್ರ ನಿರ್ಮಾಣದ ಮುಖ್ಯವಾಹಿನಿ ಸೇರಲಿದ್ದೀರಿ, ಅದು ನೇರವಾಗಿ ಜನರಿಗೆ ಸಂಬಂಧಿಸಿದ್ದಾಗಿದೆ. ಭಾರತ ಸರ್ಕಾರದ ಉದ್ಯೋಗಿಗಳಾದ ನೀವೆಲ್ಲರೂ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ನೀವು ಯಾವುದೇ ಸ್ಥಾನ ಹೊಂದಿದ್ದರೂ, ನೀವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ನಿಮ್ಮ ಮೊದಲ ಆದ್ಯತೆಯು ದೇಶವಾಸಿಗಳಿಗೆ ಸುಲಭವಾಗಿ ಬದುಕುವುದನ್ನು ಖಚಿತಪಡಿಸಬೇಕು.

ಸ್ನೇಹಿತರೆ,

ಕೆಲವೇ ದಿನಗಳ ಹಿಂದೆ, ಅಂದರೆ ನವೆಂಬರ್ 26ರಂದು ದೇಶವು ಸಂವಿಧಾನ ದಿನ ಆಚರಿಸಿತು. 1949ರಲ್ಲಿ ಈ ದಿನದಂದು ದೇಶವು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡುವ ಸಂವಿಧಾನವನ್ನು ಅಂಗೀಕರಿಸಿತು. ಸಂವಿಧಾನದ ಮುಖ್ಯ ಶಿಲ್ಪಿ ಬಾಬಾ ಸಾಹೇಬರು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯ ಸ್ಥಾಪಿಸುವ ಭಾರತದ ಕನಸು ಕಂಡಿದ್ದರು. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ, ದೇಶದಲ್ಲಿ ದೀರ್ಘಕಾಲ ಸಮಾನತೆಯ ತತ್ವವನ್ನು ನಿರ್ಲಕ್ಷಿಸಲಾಯಿತು.

2014ರ ಮೊದಲು ಸಮಾಜದ ಬಹುಭಾಗ ಮೂಲಸೌಕರ್ಯಗಳಿಂದ ವಂಚಿತವಾಗಿತ್ತು. 2014ರಲ್ಲಿ ರಾಷ್ಟ್ರವು ನಮಗೆ ಸೇವೆ ಮಾಡುವ ಅವಕಾಶ ನೀಡಿದಾಗ ಮತ್ತು ಸರ್ಕಾರ ನಡೆಸುವ ಗುರುತರ ಜವಾಬ್ದಾರಿಯನ್ನು ನಮಗೆ ವಹಿಸಿದಾಗ ಮೊದಲನೆಯದಾಗಿ, ನಾವು ಹಿಂದುಳಿದವರಿಗೆ ಆದ್ಯತೆ ನೀಡುವ ಮಂತ್ರದೊಂದಿಗೆ ಮುನ್ನಡೆಯಲು ಪ್ರಾರಂಭಿಸಿದ್ದೇವೆ. ದಶಕಗಳಿಂದ ವಿವಿಧ ಯೋಜನೆಗಳ ಲಾಭ ಅಥವಾ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದ ಜನರಿಗೆ ಸರ್ಕಾರವೇ ತಲುಪಿದೆ. ಅಂಥವರ ಬದುಕನ್ನು ಬದಲಾಯಿಸಲು ನಾವು ನಿರಂತರ ಪ್ರಯತ್ನಿಸುತ್ತಿದ್ದೇವೆ.

ಸರ್ಕಾರದ ಚಿಂತನೆ ಮತ್ತು ಕಾರ್ಯ ಸಂಸ್ಕೃತಿಯ ಈ ಬದಲಾವಣೆಯಿಂದಾಗಿ ಇಂದು ದೇಶದಲ್ಲಿ ಅಭೂತಪೂರ್ವ ಫಲಿತಾಂಶಗಳು ಕಂಡುಬರುತ್ತಿವೆ. ಅಧಿಕಾರಶಾಹಿಯೂ ಒಂದೇ, ಜನರು ಒಂದೇ, ಫೈಲ್‌ಗಳು ಒಂದೇ ಆಗಿರುತ್ತವೆ. ಕೆಲಸ ಮಾಡುವ ಜನರು ಒಂದೇ, ಕಾರ್ಯವಿಧಾನವು ಸಹ ಒಂದೇ ಆಗಿರುತ್ತದೆ. ಆದರೆ ಯಾವಾಗ ಸರ್ಕಾರವು ದೇಶದ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಆದ್ಯತೆ ನೀಡಲು ಪ್ರಾರಂಭಿಸಿತೋ, ಅಂದಿನಿಂದ ಇಡೀ ಪರಿಸ್ಥಿತಿ ಬದಲಾಗತೊಡಗಿತು. ಅತ್ಯಂತ ಕ್ಷಿಪ್ರಗತಿಯಲ್ಲಿ ಒಂದರ ನಂತರ ಒಂದರಂತೆ, ಕಾರ್ಯಶೈಲಿ ಬದಲಾಗತೊಡಗಿತು, ಕೆಲಸದ ವಿಧಾನವು ಬದಲಾಗಲಾರಂಭಿಸಿತು. ಜವಾಬ್ದಾರಿಗಳನ್ನು ಸಮಾನವಾಗಿ ನಿಯೋಜಿಸಲು ಆರಂಭಿಸಿದ ನಂತರ, ಸಾಮಾನ್ಯ ಜನರ ಕಲ್ಯಾಣದ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶಗಳು ಹೊರಹೊಮ್ಮಲು ಪ್ರಾರಂಭಿಸಿದವು.

ಒಂದು ಅಧ್ಯಯನದ ಪ್ರಕಾರ, 5 ವರ್ಷಗಳಲ್ಲಿ ದೇಶದ 13 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ. ಸರ್ಕಾರದ ಯೋಜನೆಗಳು ಬಡವರಿಗೆ ತಲುಪಿದಾಗ ಎಷ್ಟು ಬದಲಾಗುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ಇಂದು ಬೆಳಗ್ಗೆಯೇ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ ಪ್ರತಿ ಗ್ರಾಮವನ್ನು ಹೇಗೆ ತಲುಪುತ್ತಿದೆ ಎಂಬುದನ್ನು ನೀವು ನೋಡಿರಬೇಕು. ನಿಮ್ಮಂತೆಯೇ ಸರ್ಕಾರಿ ನೌಕರರು ಸರ್ಕಾರದ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ಕೊಂಡೊಯ್ಯುತ್ತಿದ್ದಾರೆ. ಸರ್ಕಾರಿ ಸೇವೆಗೆ ಸೇರಿದ ನಂತರ ನೀವೂ ಅದೇ ಉದ್ದೇಶದಿಂದ, ಸದುದ್ದೇಶದಿಂದ, ಅದೇ ಸಮರ್ಪಣಾ ಭಾವದಿಂದ ಜನಸೇವೆಗೆ ಮುಡಿಪಾಗಿಡಬೇಕು.

ಸ್ನೇಹಿತರೆ,

ಇಂದಿನ ಬದಲಾಗುತ್ತಿರುವ ಭಾರತದಲ್ಲಿ, ನೀವೆಲ್ಲರೂ ಸಹ ಮೂಲಸೌಕರ್ಯ ಕ್ರಾಂತಿಗೆ ಸಾಕ್ಷಿಯಾಗಿದ್ದೀರಿ. ಆಧುನಿಕ ಎಕ್ಸ್‌ಪ್ರೆಸ್‌ವೇಗಳು, ಆಧುನಿಕ ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಜಲಮಾರ್ಗಗಳು ಇರಲಿ, ಇಂದು ದೇಶವು ಈ ಕ್ಷೇತ್ರಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಸರ್ಕಾರವು ಮೂಲಸೌಕರ್ಯಕ್ಕಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿರುವಾಗ ಹೂಡಿಕೆ ಮಾಡುತ್ತಿರುವುದು ಸಹಜ. ಅದು ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

2014ರಿಂದ ಸಂಭವಿಸಿದ ಮತ್ತೊಂದು ನಿರ್ಣಾಯಕ ಬದಲಾವಣೆಯೆಂದರೆ, ವರ್ಷಗಳಿಂದ ನಿಶ್ಚಲವಾಗಿದ್ದ ಯೋಜನೆಗಳನ್ನು ಗುರುತಿಸಿ ಕಾರ್ಯಾಚರಣೆ ಮಾದರಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಅರೆಬೆಂದ ಯೋಜನೆಗಳು ದೇಶದ ಪ್ರಾಮಾಣಿಕ ತೆರಿಗೆದಾರರ ಹಣ ಪೋಲು ಮಾಡುವುದಲ್ಲದೆ, ಯೋಜನೆಗಳ ವೆಚ್ಚವನ್ನು ಹೆಚ್ಚಿಸುತ್ತವೆ. ಅದೇ ಸಮಯದಲ್ಲಿ ಜನರು ಯೋಜನೆಯಿಂದ ಪಡೆಯಬೇಕಾದ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ. ಇದರಿಂದ ನಮ್ಮ ತೆರಿಗೆದಾರರಿಗೂ ಭಾರಿ ಅನ್ಯಾಯವಾಗಿದೆ.

ಹಲವು ವರ್ಷಗಳಿಂದ ಲಕ್ಷಾಂತರ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ಪರಾಮರ್ಶಿಸಿ ನಿರಂತರವಾಗಿ ಮೇಲ್ವಿಚಾರಣೆ ನಡೆಸಿದೆ ಮತ್ತು ಯಶಸ್ಸನ್ನು ಸಾಧಿಸಿದೆ. ಇದು ದೇಶದ ಮೂಲೆ ಮೂಲೆಯಲ್ಲಿ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಉದಾಹರಣೆಗೆ, ಬೀದರ್-ಕಲಬುರಗಿ ರೈಲು ಮಾರ್ಗವು ಅಂತಹ ಒಂದು ಯೋಜನೆಯಾಗಿದ್ದು, ಇದು 22-23 ವರ್ಷಗಳ ಹಿಂದೆ ಪ್ರಾರಂಭವಾಯಿತು. ಆದರೆ ಈ ಯೋಜನೆಯೂ ಅತಂತ್ರ ಸ್ಥಿತಿಯಲ್ಲಿದ್ದು, ಮರೆತು ಹೋಗಿತ್ತು. ನಾವು ಅದನ್ನು 2014ರಲ್ಲಿ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ, ಕೇವಲ 3 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿದ್ದೇವೆ. ಸಿಕ್ಕಿಂನ ಪಾಕ್ಯೊಂಗ್ ವಿಮಾನ ನಿಲ್ದಾಣ ಅಭಿವೃದ್ಧಿಗೆ 2008ರಲ್ಲಿ ಪರಿಕಲ್ಪನೆ ಮಾಡಲಾಯಿತು. ಆದರೆ 2014ರ ವರೆಗೆ ಇದು ಕಾಗದ ಪತ್ರಗಳಲ್ಲೇ ಉಳಿಯಿತು. 2014ರ ನಂತರ ಈ ಯೋಜನೆಗೆ ಸಂಬಂಧಿಸಿದ ಎಲ್ಲ ಅಡೆತಡೆಗಳು ನಿವಾರಣೆಯಾಗಿ 2018ರ ವೇಳೆಗೆ ಪೂರ್ಣಗೊಳ್ಳುವ ಮೂಲಕ ಉದ್ಯೋಗಗಳನ್ನೂ ಒದಗಿಸಿದೆ. 20-22 ವರ್ಷಗಳ ಹಿಂದೆಯೇ ಪಾರಾದೀಪ್ ರಿಫೈನರಿ ಬಗ್ಗೆ ಚರ್ಚೆಗಳು ಪ್ರಾರಂಭವಾದವು, ಆದರೆ 2013ರ ವರೆಗೂ ಏನೂ ಫಲಪ್ರದವಾಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ, ಎಲ್ಲಾ ಬಾಕಿ ಉಳಿದಿರುವ ಯೋಜನೆಗಳಂತೆ, ನಾವು ಪ್ಯಾರಾದಿಪ್ ರಿಫೈನರಿ ಯೋಜನೆಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದೇವೆ. ಅಂತಹ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಂಡಾಗ, ಅವು ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಲ್ಲದೆ, ಅನೇಕ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.

ಸ್ನೇಹಿತರೆ,

ರಿಯಲ್ ಎಸ್ಟೇಟ್ ದೇಶದಲ್ಲಿ ಉದ್ಯೋಗ ಸೃಷ್ಟಿಸುವ ವಿಶಾಲ ಕ್ಷೇತ್ರವಾಗಿದೆ. ಈ ವಲಯ ಸಾಗುತ್ತಿರುವ ದಿಕ್ಕಿನತ್ತ ಮಧ್ಯಮ ವರ್ಗದವರ ಹಾಗೂ ಬಿಲ್ಡರ್ ಗಳ ಹಾಳು ನಿಶ್ಚಿತವಾಗಿತ್ತು. ರೇರಾ ಕಾನೂನಿನಿಂದಾಗಿ, ಇಂದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ ಕಂಡುಬಂದಿದೆ. ಈ ವಲಯದಲ್ಲಿ ಹೂಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇಂದು ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಯೋಜನೆಗಳು ರೇರಾ ಕಾನೂನಿನಡಿ ನೋಂದಾಯಿಸಲ್ಪಟ್ಟಿವೆ. ಈ ಮೊದಲು ಯೋಜನೆಗಳು ಸ್ಥಗಿತಗೊಳ್ಳುತ್ತಿದ್ದವು, ಅದರಿಂದ ಹೊಸ ಉದ್ಯೋಗಾವಕಾಶಗಳು ಸ್ಥಗಿತಗೊಳ್ಳುತ್ತಿದ್ದವು. ದೇಶದಲ್ಲಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಕ್ಷೇತ್ರವು ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

ಸ್ನೇಹಿತರೆ,

ಭಾರತ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳು ಇಂದು ದೇಶದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿವೆ. ವಿಶ್ವದ ಪ್ರಮುಖ ಸಂಸ್ಥೆಗಳು ಭಾರತದ ಬೆಳವಣಿಗೆಯ ದರದ ಬಗ್ಗೆ ಬಹಳ ಸಕಾರಾತ್ಮಕವಾಗಿವೆ. ಇತ್ತೀಚೆಗೆ, ಹೂಡಿಕೆಯ ರೇಟಿಂಗ್‌ಗಳಲ್ಲಿ ಜಾಗತಿಕ ನಾಯಕರೊಬ್ಬರು ಭಾರತ್‌ನ ತ್ವರಿತ ಬೆಳವಣಿಗೆಗೆ ಅನುಮೋದನೆಯ ಮುದ್ರೆ ಹಾಕಿದ್ದಾರೆ. ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಹೆಚ್ಚಿನ ದುಡಿಯುವ ವಯಸ್ಸಿನ ಜನಸಂಖ್ಯೆ ಮತ್ತು ಕಾರ್ಮಿಕ ಉತ್ಪಾದಕತೆಯ ಹೆಚ್ಚಳದಿಂದಾಗಿ ಭಾರತದ ಬೆಳವಣಿಗೆಯು ತ್ವರಿತ ಗತಿಯಲ್ಲಿ ಮುಂದುವರಿಯುತ್ತದೆ ಎಂದು ಅವರು ಅಂದಾಜಿಸಿದ್ದಾರೆ. ಭಾರತದ ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರದ ಬಲವೂ ಇದಕ್ಕೆ ಪ್ರಮುಖ ಕಾರಣವಾಗಿದೆ.

ಈ ಎಲ್ಲಾ ಸಂಗತಿಗಳು ಮುಂಬರುವ ದಿನಗಳಲ್ಲೂ ಭಾರತದಲ್ಲಿ ಉದ್ಯೋಗ ಮತ್ತು ಸ್ವಯಂ-ಉದ್ಯೋಗದ ಅಪಾರ ಸಾಧ್ಯತೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ ಎಂಬುದಕ್ಕೆ ಸಾಕ್ಷಿ. ಇದು ಸ್ವತಃ ದೇಶದ ಯುವಜನತೆಗೆ ಬಹಳ ಮುಖ್ಯವಾಗಿದೆ. ಸರ್ಕಾರಿ ಉದ್ಯೋಗಿಯಾಗಿರುವ ನಿಮ್ಮದೂ ಇದರಲ್ಲಿ ಪ್ರಮುಖ ಪಾತ್ರವಿದೆ. ಭಾರತದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳಬೇಕು. ಒಂದು ಪ್ರದೇಶವು ಎಷ್ಟೇ ದೂರದಲ್ಲಿದ್ದರೂ ಅದು ನಿಮ್ಮ ಆದ್ಯತೆಯಾಗಿರಬೇಕು. ವ್ಯಕ್ತಿಯ ಸ್ಥಳ ಎಷ್ಟೇ ದೂರದಲ್ಲಿದ್ದರೂ, ಪ್ರವೇಶಿಸಲು ಸಾಧ್ಯವಾಗದಿದರ್ರೂ, ನೀವು ಅವನನ್ನು ತಲುಪಬೇಕು. ಭಾರತ ಸರ್ಕಾರದ ಉದ್ಯೋಗಿಯಾಗಿ, ನೀವು ಈ ಕಾರ್ಯವಿಧಾನವನ್ನು ಅನುಸರಿಸಿದಾಗ ಮಾತ್ರ, ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗುತ್ತದೆ.

ಸ್ನೇಹಿತರೆ,

ಮುಂದಿನ 25 ವರ್ಷಗಳು ನಿಮಗೆ ಮತ್ತು ದೇಶಕ್ಕೆ ಬಹಳ ಮುಖ್ಯವಾದ ಕಾಲಘಟ್ಟ. ಕೆಲವೇ ತಲೆಮಾರುಗಳಿಗೆ ಈ ರೀತಿಯ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ನೀವೆಲ್ಲರೂ "ಕರ್ಮಯೋಗಿ ಪ್ರಾರಂಭ" ಎಂಬ ಹೊಸ ಕಲಿಕೆಯ ಘಟಕಕ್ಕೆ ಸೇರಬೇಕೆಂದು ನಾನು ವಿನಂತಿಸುತ್ತೇನೆ. ಅದರೊಂದಿಗೆ ಒಡನಾಡುವ ಮೂಲಕ ತನ್ನ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಹೆಚ್ಚಿಸದ ಒಬ್ಬ ಸ್ನೇಹಿತನೂ ಇರಬಾರದು. ನಿಮ್ಮನ್ನು ಈ ಹಂತಕ್ಕೆ ತಂದ ಕಲಿಯುವ ಉತ್ಸಾಹವನ್ನು ಎಂದಿಗೂ ನಿಲ್ಲಿಸಬೇಡಿ. ನಿರಂತರವಾಗಿ ಕಲಿಯುತ್ತಿರಿ; ನೀವು ನಿರಂತರವಾಗಿ ಬೆಳೆಯುತ್ತಿರಿ. ಇದು ನಿಮ್ಮ ಜೀವನದ ಆರಂಭ, ದೇಶವೂ ಬೆಳೆಯುತ್ತಿದೆ, ನೀವೂ ಬೆಳೆಯಬೇಕು. ಸೇವೆಗೆ ಸೇರಿದ ನಂತರ, ಇಲ್ಲಿ ಸಿಲುಕಿಕೊಳ್ಳಬೇಡಿ.  ಇದಕ್ಕಾಗಿ ಒಂದು ಬೃಹತ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಕರ್ಮಯೋಗಿ ಯೋಜನೆಯನ್ನು 1 ವರ್ಷದ ಹಿಂದೆ ಪ್ರಾರಂಭಿಸಲಾಯಿತು. ಅಂದಿನಿಂದ, ಲಕ್ಷಾಂತರ ಹೊಸ ಸರ್ಕಾರಿ ನೌಕರರು ಅದರ ಮೂಲಕ ತರಬೇತಿ ಪಡೆದರು. ಪ್ರಧಾನ ಮಂತ್ರಿಗಳ ಕಾರ್ಯಾಲಯ ಪಿಎಂಒದಲ್ಲಿ ನನ್ನೊಂದಿಗೆ ಕೆಲಸ ಮಾಡುವವರೆಲ್ಲರೂ ಹಿರಿಯ ಉದ್ಯೋಗಿಗಳು. ಅವರು ದೇಶದ ಪ್ರಮುಖ ವಿಷಯಗಳನ್ನು ನೋಡಿಕೊಳ್ಳುತ್ತಾರೆ, ಆದರೆ ಅವರು ಅದರೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ನಿರಂತರವಾಗಿ ಟೆಸ್ಟ್, ಪರೀಕ್ಷೆಗಳು ಮತ್ತು ಕೋರ್ಸ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಇದರಿಂದಾಗಿ ಅವರ ಸಾಮರ್ಥ್ಯ, ಅವರ ಶಕ್ತಿ ಬಲಗೊಳ್ಳುತ್ತಿದೆ, ಇದು ನನ್ನ ಕಾರ್ಯಾಲಯ ಮತ್ತು ದೇಶವನ್ನು ಬಲಪಡಿಸುತ್ತದೆ. .

ನಮ್ಮ ಆನ್‌ಲೈನ್ ತರಬೇತಿ ವೇದಿಕೆ iGoT ಕರ್ಮಯೋಗಿಯಲ್ಲಿ 800ಕ್ಕೂ ಹೆಚ್ಚು ಕೋರ್ಸ್‌ಗಳು ಲಭ್ಯವಿದೆ. ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಇದನ್ನು ಬಳಸಿ. ಇಂದು ನಿಮ್ಮ ಜೀವನದ ಈ ಹೊಸ ಆರಂಭದೊಂದಿಗೆ, ನಿಮ್ಮ ಕುಟುಂಬದ ಕನಸುಗಳು ಹೊಸ ರೆಕ್ಕೆಪುಕ್ಕಗಳನ್ನು ಪಡೆಯುತ್ತಿವೆ. ನಿಮ್ಮ ಕುಟುಂಬದ ಸದಸ್ಯರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ನೀವು ಸರ್ಕಾರಿ ಕ್ಷೇತ್ರಕ್ಕೆ ಸೇರಿರುವುದರಿಂದ, ಸಾಧ್ಯವಾದರೆ, ಇಂದು ನಿಮ್ಮ ದಿನಚರಿಯಲ್ಲಿ ಒಂದು ವಿಷಯ ಬರೆಯಿರಿ, ಒಬ್ಬ ಸಾಮಾನ್ಯ ನಾಗರಿಕನಾಗಿ, ನಿಮ್ಮ ವಯಸ್ಸು 20, 22, 25 ವರ್ಷ ಏನೇ ಇರಲಿ, ನೀವು ಸರ್ಕಾರದಲ್ಲಿ ಯಾವ ಸಮಸ್ಯೆಗಳನ್ನು ಎದುರಿಸಿದ್ದೀರಿ? ಕೆಲವೊಮ್ಮೆ ಬಸ್ ನಿಲ್ದಾಣದಲ್ಲಿ ಸಮಸ್ಯೆ ಇದ್ದಿರಬಹುದು ಅಥವಾ ರಸ್ತೆಗಳಲ್ಲಿ ಪೊಲೀಸರಿಂದ ಸಮಸ್ಯೆ ಉಂಟಾಗಿರಬಹುದು. ನೀವು ಎಲ್ಲೋ ಸರ್ಕಾರಿ ಕಚೇರಿಯಲ್ಲಿ ಸಮಸ್ಯೆ  ಎದುರಿಸಿರಬಹುದು.

ನೀವು ಅದನ್ನು ನೆನಪಿಸಿಕೊಳ್ಳಿ, ಸರ್ಕಾರ ಮತ್ತು ಸರ್ಕಾರಿ ನೌಕರನ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ನೀವು ಎದುರಿಸಿದ ಯಾವುದೇ ಸಮಸ್ಯೆಗಳು, ನಿಮ್ಮ ಜೀವನದ ಯಾವುದೇ ಹಂತದಲ್ಲಿ ಯಾವುದೇ ನಾಗರಿಕರು ಅಂತಹ ಸಮಸ್ಯೆಗಳನ್ನು ಎದುರಿಸಲು ನಾನು ಬಯಸುವುದಿಲ್ಲ ಎಂದು ನಿರ್ಧರಿಸಿ. ನಾನು ಆ ರೀತಿ ನಡೆದುಕೊಳ್ಳುವುದಿಲ್ಲ. ನಿಮಗೆ ಏನಾಗಿದೆಯೋ ಅದು ಬೇರೆಯವರಿಗೆ ಆಗುವುದಿಲ್ಲ ಎಂದು ನಿರ್ಧರಿಸುವ ಮೂಲಕ ಸಾಮಾನ್ಯ ಜನರಿಗೆ ಮಹತ್ತರವಾಗಿ ಸಹಾಯ ಮಾಡಬಹುದು. ರಾಷ್ಟ್ರ ನಿರ್ಮಾಣದ ದಿಕ್ಕಿನಲ್ಲಿ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

***

 



(Release ID: 1982306) Visitor Counter : 65