ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಹವಾಮಾನ ಬದಲಾವಣೆಯ ಶೃಂಗಸಭೆ(ಸಿಒಪಿ)-28ರ ರಾಷ್ಟ್ರಗಳ ಮುಖ್ಯಸ್ಥ(ಎಚ್ಒಎಸ್)ರು ಮತ್ತು ಸರ್ಕಾರಗಳ ಮುಖ್ಯಸ್ಥ(ಎಚ್ಒಜಿ)ರು ಪಾಲ್ಗೊಂಡಿದ್ದ  ಉನ್ನತ ಮಟ್ಟದ ಸಭೆಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ವಿಶೇಷ ಭಾಷಣ

Posted On: 01 DEC 2023 5:47PM by PIB Bengaluru

ಗೌರವಾನ್ವಿತ ಗಣ್ಯರೆ,

ಮಹನೀಯರೆ ಮತ್ತು ಮಹಿಳೆಯರೆ,

140 ಕೋಟಿ ಭಾರತೀಯರ ಪರವಾಗಿ ನಿಮಗೆಲ್ಲರಿಗೂ ನಮಸ್ಕಾರಗಳು! ಇಂದು, ಮೊದಲನೆಯದಾಗಿ ನಾನು ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.

ನಾನು ಪ್ರಸ್ತಾಪಿಸಿದ ಹವಾಮಾನ ನ್ಯಾಯ, ಹವಾಮಾನ ಹಣಕಾಸು ಮತ್ತು ಹಸಿರು ಸಾಲದಂತಹ ಸಮಸ್ಯೆಗಳನ್ನು ನೀವು ನಿರಂತರವಾಗಿ ಬೆಂಬಲಿಸಿದ್ದೀರಿ.

ಲೋಕಕಲ್ಯಾಣಕ್ಕೆ ಎಲ್ಲರ ಹಿತಾಸಕ್ತಿಗಳ ರಕ್ಷಣೆ ಅಗತ್ಯ, ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯ ಎಂಬ ನಂಬಿಕೆಯನ್ನು ನಮ್ಮೆಲ್ಲಾ ಪ್ರಯತ್ನಗಳು ಹೆಚ್ಚಿಸಿವೆ.

ಸ್ನೇಹಿತರೆ,

ಇಂದು ಭಾರತವು ಪರಿಸರ ವಿಜ್ಞಾನ ಮತ್ತು ಆರ್ಥಿಕತೆಯ ನಡುವೆ ಪರಿಪೂರ್ಣ ಸಮತೋಲನ ಸಾಧಿಸುವ ವಿಷಯದಲ್ಲಿ ಜಗತ್ತಿಗೆ ಒಂದು ಉದಾಹರಣೆಯಾಗಿದೆ. ಭಾರತವು ವಿಶ್ವದ ಜನಸಂಖ್ಯೆಯ 17 ಪ್ರತಿಶತ ಪ್ರಮಾಣ ಹೊಂದಿದ್ದರೂ, ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ನಮ್ಮ ಪಾಲು ಕೇವಲ 4 ಪ್ರತಿಶತಕ್ಕಿಂತ ಕಡಿಮೆ ಇದೆ.

ರಾಷ್ಟ್ರೀಯವಾಗಿ ನಿಶ್ಚಯಿಸಿದ ಕೊಡುಗೆ(NDC)ಯ ಗುರಿಗಳನ್ನು ತಲುಪುವ ಹಾದಿಯಲ್ಲಿರುವ ವಿಶ್ವದ ಕೆಲವೇ ಆರ್ಥಿಕತೆಗಳಲ್ಲಿ ಭಾರತವು ಸಹ ಒಂದಾಗಿದೆ. ನಾವು ಈಗಾಗಲೇ 11 ವರ್ಷಗಳ ಹಿಂದೆ ಇಂಗಾಲ ಹೊರಸೂಸುವಿಕೆಯ ತೀವ್ರತೆಗೆ ಸಂಬಂಧಿಸಿದ ಗುರಿಗಳನ್ನು ಸಾಧಿಸಿದ್ದೇವೆ. ನಾವು ನಿಗದಿತ ಸಮಯಕ್ಕಿಂತ 9 ವರ್ಷಗಳ ಮುಂಚಿತವಾಗಿ ಉರವಲುರಹಿತ ಅಥವಾ ಉರವಲು-ಮುಕ್ತ ಇಂಧನ ಗುರಿಗಳನ್ನು ಸಾಧಿಸಿದ್ದೇವೆ. ಭಾರತವು 2030ರ ವೇಳೆಗೆ ಇಂಗಾಲ ಹೊರಸೂಸುವಿಕೆಯ ತೀವ್ರತೆಯನ್ನು ಶೇಕಡ 45ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ನಾವು ಉರವಲು-ಮುಕ್ತ ಇಂಧನದ ಪಾಲನ್ನು ಶೇಕಡ 50ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇವೆ. ನಾವು 2070ರ ವೇಳೆಗೆ ನಿವ್ವಳ ಶೂನ್ಯಗುರಿಯತ್ತ ಸಾಗುವುದನ್ನು ಮುಂದುವರಿಸುತ್ತೇವೆ.

ಸ್ನೇಹಿತರೆ,

ಜಿ-20 ಅಧ್ಯಕ್ಷತೆ ಅಲಂಕರಿಸಿದ್ದ ಅವಧಿಯಲ್ಲಿ, ಭಾರತವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಮನೋಭಾವದೊಂದಿಗೆ ಹವಾಮಾನ ವಿಷಯಕ್ಕೆ ಸ್ಥಿರವಾದ ಪ್ರಾಮುಖ್ಯತೆ ನೀಡಿದೆ. ಸುಸ್ಥಿರ ಭವಿಷ್ಯಕ್ಕಾಗಿ, ನಾವು ಎಲ್ಲರೊಂದಿಗೆ  ಹಸಿರು ಅಭಿವೃದ್ಧಿ ಒಪ್ಪಂದವನ್ನು ಒಪ್ಪಿಕೊಂಡಿದ್ದೇವೆ. ನಾವು ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿಯ ತತ್ವಗಳನ್ನು ನಿರ್ಧರಿಸಿದ್ದೇವೆ. ಜಾಗತಿಕವಾಗಿ ನವೀಕರಿಸಬಹುದಾದ ಇಂಧನವನ್ನು 3 ಪಟ್ಟು ಹೆಚ್ಚಿಸುವ ಬದ್ಧತೆಯನ್ನು ನಾವು ಪ್ರಸ್ತಾಪಿಸಿದ್ದೇವೆ.

ಭಾರತವು ಪರ್ಯಾಯ ಇಂಧನಗಳಿಗಾಗಿ ಹೈಡ್ರೋಜನ್ ಕ್ಷೇತ್ರವನ್ನು ಉತ್ತೇಜಿಸಿದೆ. ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಸಹ ಪ್ರಾರಂಭಿಸಿದೆ. ಹವಾಮಾನ ಹಣಕಾಸು ಬದ್ಧತೆಗಳನ್ನು ಬಿಲಿಯನ್‌ಗಳಿಂದ ಹಲವಾರು ಟ್ರಿಲಿಯನ್‌ಗಳಿಗೆ ಹೆಚ್ಚಿಸುವ ಅಗತ್ಯವಿದೆ ಎಂದು ನಾವು ಒಟ್ಟಾಗಿ ತೀರ್ಮಾನಿಸಿದ್ದೇವೆ.

ಸ್ನೇಹಿತರೆ,

ಭಾರತವು ಗ್ಲಾಸ್ಗೋದಲ್ಲಿ 'ಐಲ್ಯಾಂಡ್ ಸ್ಟೇಟ್ಸ್'ಗಾಗಿ ಮೂಲಸೌಕರ್ಯ ಸುಧಾರಣೆ ಉಪಕ್ರಮ ಪ್ರಾರಂಭಿಸಿದೆ. ಭಾರತವು 13 ದೇಶಗಳಲ್ಲಿ ಇದಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಗ್ಲ್ಯಾಸ್ಗೋದಲ್ಲಿ ನಾನು ಮಿಷನ್ ಲೈಫ್ - ಪರಿಸರಕ್ಕಾಗಿ ಜೀವನಶೈಲಿಯ ದೃಷ್ಟಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಿದ್ದೆ.

ಈ ವಿಧಾನದಿಂದ 2030ರ ವೇಳೆಗೆ ನಾವು ವರ್ಷಕ್ಕೆ 2 ಬಿಲಿಯನ್ ಟನ್ ಗಳಷ್ಟು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಬಹುದು ಎಂದು ಇಂಟರ್ ನ್ಯಾಷನಲ್ ಎನರ್ಜಿ ಏಜೆನ್ಸಿಯ ಅಧ್ಯಯನ ವರದಿ ಹೇಳಿದೆ.

ಇಂದು ನಾನು ಈ ವೇದಿಕೆಯಿಂದ ಸುಂದರ ಪೃಥ್ವಿಯ ಪರವಾದ, ಪೂರ್ವಭಾವಿಯಾದ ಮತ್ತು ಸಕಾರಾತ್ಮಕವಾದ ಮತ್ತೊಂದು ಉಪಕ್ರಮಕ್ಕೆ ಕರೆ ನೀಡುತ್ತಿದ್ದೇನೆ. ಇದು ಹಸಿರು ಸಾಲ ಸೌಲಭ್ಯ(ಗ್ರೀನ್ ಕ್ರೆಡಿಟ್ಸ್) ಉಪಕ್ರಮವಾಗಿದೆ. ಇದು ಇಂಗಾಲ ಹೊರಸೂಸುವಿಕೆ ವಾಣಿಜ್ಯ ಮನಸ್ಥಿತಿ ಮೀರಿ ಚಲಿಸುವ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ಇಂಗಾಲ ಹೊರಸೂಸುವಿಕೆ ತಗ್ಗಿಸುವ ಅಭಿಯಾನವಾಗಿದೆ. ನೀವು ಖಂಡಿತವಾಗಿಯೂ ಅದರೊಂದಿಗೆ ಸಂಪರ್ಕ ಹೊಂದುತ್ತೀರಿ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೆ,

ಕಳೆದ ಶತಮಾನದ ತಪ್ಪುಗಳನ್ನು ಸರಿಪಡಿಸಲು ನಮಗೆ ಹೆಚ್ಚು ಸಮಯವಿಲ್ಲ. ಮನುಕುಲದ ಒಂದು ಸಣ್ಣ ವಿಭಾಗವು ವಿಶೇಷವಾಗಿ ಜಾಗತಿಕ ದಕ್ಷಿಣ ಭಾಗದ ರಾಷ್ಟ್ರಗಳು ಪ್ರಕೃತಿಯನ್ನು ವಿವೇಚನೆಯಿಲ್ಲದೆ ಶೋಷಿಸಿದೆ. ಆದರೆ ಇಡೀ ಮನುಕುಲ ಅದಕ್ಕೆ ಬೆಲೆ ತೆರುತ್ತಿದೆ. 'ನನ್ನ ಕಲ್ಯಾಣ ಮಾತ್ರ' ಎಂಬ ಈ ಚಿಂತನೆಯು ಜಗತ್ತನ್ನು ಕತ್ತಲೆಯತ್ತ ಕೊಂಡೊಯ್ಯುತ್ತದೆ. ಈ ಸಭಾಂಗಣದಲ್ಲಿ ಕುಳಿತಿರುವ ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಬ್ಬ ರಾಷ್ಟ್ರದ ಮುಖ್ಯಸ್ಥರು ಇಲ್ಲಿಗೆ ದೊಡ್ಡ ಜವಾಬ್ದಾರಿಯೊಂದಿಗೆ ಬಂದಿದ್ದಾರೆ. ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ಇಡೀ ಜಗತ್ತು ಇಂದು ನಮ್ಮನ್ನು ನೋಡುತ್ತಿದೆ, ಈ ಭೂಮಿಯ ಭವಿಷ್ಯವು ನಮ್ಮನ್ನು ಗಮನಿಸುತ್ತಿದೆ. ಹಾಗಾಗಿ, ನಾವು ಇದರಲ್ಲಿ ಯಶಸ್ವಿಯಾಗಬೇಕು.

ನಾವು ನಿರ್ಣಾಯಕರಾಗಿರಬೇಕು:

ಪ್ರತಿಯೊಂದು ದೇಶವು ತನಗಾಗಿ ನಿಗದಿಪಡಿಸುವ ಹವಾಮಾನ ಗುರಿಗಳನ್ನು ಮತ್ತು ಅದು ಮಾಡುತ್ತಿರುವ ಬದ್ಧತೆಗಳನ್ನು ಪೂರೈಸುತ್ತದೆ ಎಂದು ನಾವು ಸಂಕಲ್ಪ ತೊಡಬೇಕು.

ನಾವು ಏಕತೆಯಿಂದ ಕೆಲಸ ಮಾಡಬೇಕು:

ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ, ಪರಸ್ಪರ ಸಹಕರಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂಬ ಸಂಕಲ್ಪ ತೊಡಬೇಕು. ಜಾಗತಿಕ ಇಂಗಾಲ ಬಜೆಟ್‌ನಲ್ಲಿ ನಾವು ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನ್ಯಾಯಯುತ ಪಾಲು ನೀಡಬೇಕು.

ನಾವು ಹೆಚ್ಚು ಸಮತೋಲಿತವಾಗಿರಬೇಕು:

ಹೊಂದಾಣಿಕೆ, ತಗ್ಗಿಸುವಿಕೆ, ಹವಾಮಾನ ಹಣಕಾಸು, ತಂತ್ರಜ್ಞಾನ, ನಷ್ಟ ಮತ್ತು ಹಾನಿಗಳ ನಡುವೆ ಸಮತೋಲನ ಕಾಯ್ದುಕೊಂಡು ಮುಂದುವರಿಯಲು ನಾವು ಪ್ರತಿಜ್ಞೆ ಸ್ವೀಕರಿಸಬೇಕು.

ನಾವು ಮಹತ್ವಾಕಾಂಕ್ಷಿಯಾಗಿರಬೇಕು:

ಇಂಧನ ಸ್ಥಿತ್ಯಂತರವು ನ್ಯಾಯಸಮ್ಮತ, ಎಲ್ಲರನ್ನೂ ಒಳಗೊಂಡ ಮತ್ತು ಸಮಾನವಾಗಿರಬೇಕು ಎಂದು ನಾವು ನಿರ್ಧರಿಸಬೇಕು.

ನಾವು ಹೊಸತನ ತರುವವರಾಗಿರಬೇಕು:

ನವೀನ ತಂತ್ರಜ್ಞಾನವನ್ನು ನಿರಂತರವಾಗಿ ಅಭಿವೃದ್ಧಿಪಡಿಸಲು, ನಮ್ಮ ಸ್ವಾರ್ಥ ದಾಟಿ ಮೇಲೇರಲು ಮತ್ತು ತಂತ್ರಜ್ಞಾನವನ್ನು ಇತರ ದೇಶಗಳಿಗೆ ವರ್ಗಾಯಿಸಲು. ಶುದ್ಧ ಇಂಧನ ಪೂರೈಕೆ ಸರಪಳಿಗಳನ್ನು ಬಲಪಡಿಸಲು ನಾವು ಸಂಕಲ್ಪ ತೊಡಬೇಕು.

ಸ್ನೇಹಿತರೆ,

ಹವಾಮಾನ ಬದಲಾವಣೆ ಪ್ರಕ್ರಿಯೆಗಾಗಿ ವಿಶ್ವಸಂಸ್ಥೆ ರೂಪಿಸಿರುವ ಮಾರ್ಗಸೂಚಿಗಳಿಗೆ ಭಾರತ ಬದ್ಧವಾಗಿದೆ. ಆದ್ದರಿಂದ, 2028ರಲ್ಲಿ ಭಾರತದಲ್ಲಿ ಸಿಒಪಿ-33 ಶೃಂಗಸಭೆಯನ್ನು ಆಯೋಜಿಸುವುದನ್ನು ನಾನಿಂದು ಈ ವೇದಿಕೆಯಿಂದಲೇ ಪ್ರಸ್ತಾಪಿಸುತ್ತೇನೆ.

ಮುಂಬರುವ 12 ದಿನಗಳಲ್ಲಿ ಜಾಗತಿಕ ಇಂಗಾಲ ಹೊರಸೂಸುವಿಕೆಯ ವಸ್ತುಸ್ಥಿತಿ ಪರಾಮರ್ಶೆಯು ನಮ್ಮನ್ನು ಸುರಕ್ಷಿತ ಮತ್ತು ಉಜ್ವಲ ಭವಿಷ್ಯಕ್ಕೆ ಕರೆದೊಯ್ಯುತ್ತದೆ ಎಂದು ನಾನು ಭರವಸೆ ಹೊಂದಿದ್ದೇನೆ.

ನಷ್ಟ ಮತ್ತು ಹಾನಿ ನಿಧಿಯನ್ನು ಕಾರ್ಯಗತಗೊಳಿಸಲು ನಿನ್ನೆ ತೆಗೆದುಕೊಂಡ ನಿರ್ಧಾರವು ನಮ್ಮ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಯುಎಇ ಆಯೋಜಿಸಿರುವ ಈ ಸಿಒಪಿ-28 ಶೃಂಗಸಭೆಯು ಯಶಸ್ಸಿನ ಹೊಸ ಎತ್ತರ ತಲುಪುತ್ತದೆ ಎಂಬ ವಿಶ್ವಾಸ ನನಗಿದೆ. ನನಗೆ ಈ ವಿಶೇಷ ಗೌರವ ನೀಡಿದ್ದಕ್ಕಾಗಿ ನನ್ನ ಸಹೋದರ ಗೊರವಾನ್ವಿತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಘನತೆವೆತ್ತ ಗುಟೆರಸ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಎಲ್ಲರಿಗೂ ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

***

 


(Release ID: 1982256) Visitor Counter : 83