ಪ್ರಧಾನ ಮಂತ್ರಿಯವರ ಕಛೇರಿ

ನವೆಂಬರ್ 30ರಂದು ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ


ಮಹಿಳಾ ನೇತೃತ್ವದ ಅಭಿವೃದ್ಧಿಯ ಪ್ರಮುಖ ಹೆಜ್ಜೆಯಾಗಿ ʻಪ್ರಧಾನ ಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರʼಕ್ಕೆ ಚಾಲನೆ ನೀಡಲಿರುವ ಪ್ರಧಾನಿ

ಮುಂದಿನ ಮೂರು ವರ್ಷಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ 15,000 ಡ್ರೋನ್ ಗಳನ್ನು ಒದಗಿಸಲಾಗುವುದು

ದಿಯೋಘಡದ ʻಏಮ್ಸ್ʼನಲ್ಲಿ 10,000ನೇ ʻಜನೌಷಧ ಕೇಂದ್ರʼವನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ

ದೇಶದಲ್ಲಿ ಜನೌಷಧ ಕೇಂದ್ರಗಳ ಸಂಖ್ಯೆಯನ್ನು 10,000ದಿಂದ 25,000ಕ್ಕೆ ಹೆಚ್ಚಿಸುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಿರುವ ಪ್ರಧಾನಮಂತ್ರಿಗಳು

ಈ ಎರಡೂ ಉಪಕ್ರಮಗಳೊಂದಿಗೆ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಮಂತ್ರಿಯವರು ಘೋಷಿಸಿದ ಭರವಸೆಗಳು ಈಡೇರಿದಂತಾಗಲಿದೆ

Posted On: 29 NOV 2023 11:59AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 30 ರಂದು ಬೆಳಗ್ಗೆ 11ಗಂಟೆಗೆ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ. ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯನ್ನು ದೇಶಾದ್ಯಂತ ಕೈಗೊಳ್ಳಲಾಗುತ್ತಿದ್ದು, ಈ ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ತಲುಪುವುದನ್ನು ಖಾತರಿಪಡಿಸುವ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ.

ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿಯವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿ ಪ್ರಧಾನಮಂತ್ರಿಯವರು ʻಪ್ರಧಾನಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರʼಕ್ಕೆ ಚಾಲನೆ ನೀಡಲಿದ್ದಾರೆ. ಇದು ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಡ್ರೋನ್ಗಳನ್ನು ಒದಗಿಸುತ್ತದೆ, ಇದರಿಂದಾಗಿ ಈ ತಂತ್ರಜ್ಞಾನವನ್ನು ಅವರು ಜೀವನೋಪಾಯದ ಮಾರ್ಗವಾಗಿ ಬಳಸಬಹುದು. ಮುಂದಿನ ಮೂರು ವರ್ಷಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ 15,000 ಡ್ರೋನ್ಗಳನ್ನು ಒದಗಿಸಲಾಗುವುದು. ಡ್ರೋನ್ಗಳನ್ನು ಹಾರಿಸಲು ಮತ್ತು ಬಳಸಲು ಮಹಿಳೆಯರಿಗೆ ಅಗತ್ಯ ತರಬೇತಿ ನೀಡಲಾಗುವುದು. ಈ ಉಪಕ್ರಮವು ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುತ್ತದೆ.

ಆರೋಗ್ಯ ರಕ್ಷಣೆಯನ್ನು ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಪ್ರಧಾನಿಯವರ ʻಆರೋಗ್ಯವಂತ ಭಾರತʼ ದೃಷ್ಟಿಕೋನದ ಮೂಲಾಧಾರವಾಗಿದೆ. ಕೈಗೆಟುಕುವ ಬೆಲೆಯಲ್ಲಿ ಔಷಧಗಳು ಲಭ್ಯವಾಗುವಂತೆ ಮಾಡಲು ಜನೌಷಧ ಕೇಂದ್ರವನ್ನು ಸ್ಥಾಪಿಸುವುದು ಈ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದಿಯೋಗಢದ ʻಏಮ್ಸ್ʼನಲ್ಲಿ 10,000ನೇ ಜನೌಷಧ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದಲ್ಲದೆ, ದೇಶದಲ್ಲಿ ಜನೌಷಧ ಕೇಂದ್ರಗಳ ಸಂಖ್ಯೆಯನ್ನು 10,000 ದಿಂದ 25,000 ಕ್ಕೆ ಹೆಚ್ಚಿಸುವ ಕಾರ್ಯಕ್ರಮಕ್ಕೂ ಪ್ರಧಾನಿ ಚಾಲನೆ ನೀಡಲಿದ್ದಾರೆ.

ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ಗಳನ್ನು ಒದಗಿಸುವ ಮತ್ತು ಜನೌಷಧ ಕೇಂದ್ರಗಳ ಸಂಖ್ಯೆಯನ್ನು 10,000 ದಿಂದ 25,000ಕ್ಕೆ ಹೆಚ್ಚಿಸುವ ಈ ಎರಡೂ ಉಪಕ್ರಮಗಳನ್ನು ಪ್ರಧಾನಿ ಈ ವರ್ಷದ ಆರಂಭದಲ್ಲಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಘೋಷಿಸಿದ್ದರು. ಈ ಕಾರ್ಯಕ್ರಮವು ಈ ಭರವಸೆಗಳ ಈಡೇರಿಕೆಗೆ ಸಾಕ್ಷಿಯಾಗಲಿದೆ.

*****



(Release ID: 1980733) Visitor Counter : 101