ಪ್ರಧಾನ ಮಂತ್ರಿಯವರ ಕಛೇರಿ

​​​​​​​ಉತ್ತರ ಪ್ರದೇಶದ ಮಥುರಾದಲ್ಲಿ ಸಂತ ಮೀರಾಬಾಯಿ ಜನ್ಮೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ


ʻʻಸಂತ ಮೀರಾಬಾಯಿ ಅವರ 525ನೇ ಜನ್ಮ ದಿನಾಚರಣೆಯು ಕೇವಲ ಒಂದು ಜನ್ಮ ದಿನೋತ್ಸವವಲ್ಲ, ಅದು ಭಾರತದಲ್ಲಿ ಪ್ರೀತಿಯ ಸಂಸ್ಕೃತಿ ಮತ್ತು ಸಂಪ್ರದಾಯದ ಪರಿಪೂರ್ಣ ಆಚರಣೆ”

"ಮೀರಾಬಾಯಿ ಭಾರತದ ಪ್ರಜ್ಞೆಯನ್ನು ಭಕ್ತಿ ಮತ್ತು ಆಧ್ಯಾತ್ಮಿಕತೆಯ ಮೂಲಕ ಪೋಷಿಸಿದರು"

"ಭಾರತವು ಹಲವಾರು ವರ್ಷಗಳಿಂದ ನಾರಿ ಶಕ್ತಿಗೆ ಸಮರ್ಪಿತವಾಗಿದೆ"

"ಅಭಿವೃದ್ಧಿಯ ಓಟದಲ್ಲಿ ಮಥುರಾ ಮತ್ತು ಬ್ರಜ್ ಹಿಂದೆ ಬೀಳಲು ಬಿಡುವುದಿಲ್ಲ"

"ಬ್ರಜ್ ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬದಲಾಗುತ್ತಿರುವ ರಾಷ್ಟ್ರದ ಪುನರುಜ್ಜೀವನ ಪ್ರಜ್ಞೆಯ ಸ್ವರೂಪದ ಸಂಕೇತಗಳಾಗಿವೆ"

Posted On: 23 NOV 2023 7:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಮಥುರಾದಲ್ಲಿ ಸಂತ ಮೀರಾಬಾಯಿ ಅವರ 525ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸಂತ ಮೀರಾಬಾಯಿ ಜನ್ಮೋತ್ಸವದಲ್ಲಿ ಭಾಗವಹಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತ ಮೀರಾ ಬಾಯಿ ಅವರ ಗೌರವಾರ್ಥ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ವಸ್ತುಪ್ರದರ್ಶನದಲ್ಲಿ ಹೆಜ್ಜೆ ಹಾಕಿದ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಾಕ್ಷಿಯಾದರು. ಈ ಸಂದರ್ಭವು ಸಂತ ಮೀರಾಬಾಯಿ ಅವರ ಸ್ಮರಣಾರ್ಥ ವರ್ಷವಿಡೀ ಕಾರ್ಯಕ್ರಮಗಳ ಸರಣಿಯ ಚಾಲನೆಗೂ ನಾಂದಿ ಹಾಡಿತು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಬ್ರಜ್ ನೆಲದಲ್ಲಿ ಮತ್ತು ಬ್ರಜ್ ಜನತೆಯ ನಡುವೆ ಇರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಈ ಅವಕಾಶಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಈ ನೆಲದ ದೈವಿಕ ಪ್ರಾಮುಖ್ಯತೆಗೆ  ಅಪಾರ ಗೌರವ ಸಲ್ಲಿಸಿದರು. ಕೃಷ್ಣ, ರಾಧಾರಾಣಿ, ಮೀರಾಬಾಯಿ ಮತ್ತು ಬ್ರಜ್‌ನ ಎಲ್ಲಾ ಸಂತರಿಗೆ ಪ್ರಧಾನಿ ನಮಸ್ಕರಿಸಿದರು. ಮಥುರಾದ ಸಂಸತ್ ಸದಸ್ಯರಾಗಿ ಶ್ರೀಮತಿ ಹೇಮಾ ಮಾಲಿನಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ, ಹೇಮಾ ಮಾಲಿನಿ ಅವರು ಕೃಷ್ಣನ ಭಕ್ತಿಯಲ್ಲಿ ಸಂಪೂರ್ಣ ತಲ್ಲೀನರಾಗಿದ್ದಾರೆ ಎಂದರು.

ಗುಜರಾತ್‌ನೊಂದಿಗೆ ಶ್ರೀಕೃಷ್ಣ ಮತ್ತು ಮೀರಾಬಾಯಿ ಅವರ ಸಂಪರ್ಕವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ತಮ್ಮ ಮಥುರಾ ಭೇಟಿಯನ್ನು ಇನ್ನಷ್ಟು ವಿಶೇಷವಾಗಿಸುತ್ತದೆ ಎಂದರು. "ಗುಜರಾತ್‌ಗೆ ಭೇಟಿ ನೀಡಿದ ನಂತರವೇ ಮಥುರಾದ ಕನ್ಹಯ್ಯ ದ್ವಾರಕಾಧೀಶರಾಗಿ ರೂಪಾಂತರಗೊಂಡರು" ಎಂದು ಪ್ರಧಾನಿ ಒತ್ತಿ ಹೇಳಿದರು. ರಾಜಸ್ಥಾನ ಮೂಲದ ಸಂತ ಮೀರಾಬಾಯಿ ಅವರು, ಮಥುರಾದ ಬೀದಿಗಳನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿದರು ಮತ್ತು ಗುಜರಾತ್‌ನ ದ್ವಾರಕಾದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದರು ಎಂದು ಮಾಹಿತಿ ನೀಡಿದರು. ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಹರಡಿರುವ ಬ್ರಜ್‌ಗೆ ಭೇಟಿ ನೀಡುವ ಅವಕಾಶ ದೊರೆತರೆ ಗುಜರಾತ್ ಜನರು ಅದನ್ನು ದ್ವಾರಕಾಧೀಶನ ಆಶೀರ್ವಾದವೆಂದು ಪರಿಗಣಿಸುತ್ತಾರೆ ಎಂದು ಪ್ರಧಾನಿ ಒತ್ತಿ ಹೇಳಿದರು. 2014ರಲ್ಲಿ ತಾವು ವಾರಣಾಸಿಯಿಂದ ಸಂಸದರಾದಾಗಿನಿಂದ ಉತ್ತರ ಪ್ರದೇಶದ ಭಾಗವಾಗಿದ್ದೇನೆ ಎಂದು ಶ್ರೀ ಮೋದಿ ಹೇಳಿದರು.

ಸಂತ ಮೀರಾಬಾಯಿ ಅವರ 525ನೇ ಜನ್ಮ ದಿನಾಚರಣೆ ಕೇವಲ ಜನ್ಮ ದಿನೋತ್ಸವವಲ್ಲ, ಬದಲಿಗೆ "ಭಾರತದಲ್ಲಿ ಪ್ರೀತಿಯ ಸಂಸ್ಕೃತಿ ಮತ್ತು ಸಂಪ್ರದಾಯದ ಪರಿಪೂರ್ಣ ಆಚರಣೆಯಾಗಿದೆ" ಎಂದು ಪ್ರಧಾನಿ ಹೇಳಿದರು. ನರ ಮತ್ತು ನಾರಾಯಣ, ಜೀವ ಮತ್ತು ಶಿವ, ಭಕ್ತ ಮತ್ತು ದೇವರನ್ನು ಒಂದೇ ಎಂದು ಪರಿಗಣಿಸುವ ಚಿಂತನೆಯ ಆಚರಣೆ ಇದಾಗಿದೆ,ʼʼ ಎಂದರು.

ಮೀರಾಬಾಯಿ ಅವರು ತ್ಯಾಗ ಮತ್ತು ಶೌರ್ಯದ ಭೂಮಿಯಾದ ರಾಜಸ್ಥಾನದಿಂದ ಬಂದವರು ಎಂದು ಪ್ರಧಾನಿ ಸ್ಮರಿಸಿದರು. 84 'ಕೋಶ್‌' ಬ್ರಜ್ ಮಂಡಲ್ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಭಾಗವಾಗಿದೆ ಎಂದು ಅವರು ಗಮನಸೆಳೆದರು. "ಮೀರಾಬಾಯಿ ಭಾರತದ ಪ್ರಜ್ಞೆಯನ್ನು ಭಕ್ತಿ ಮತ್ತು ಆಧ್ಯಾತ್ಮಿಕತೆಯಿಂದ ಪೋಷಿಸಿದರು. ಅವರ ನೆನಪಿನಲ್ಲಿ ನಡೆಯುವ ಈ ಕಾರ್ಯಕ್ರಮವು ಭಾರತದ ಭಕ್ತಿ ಸಂಪ್ರದಾಯದ ಜೊತೆಗೆ ಭಾರತದ ಶೌರ್ಯ ಮತ್ತು ತ್ಯಾಗದ ಬಗ್ಗೆ ನಮಗೆ ನೆನಪಿಸುತ್ತದೆ, ಏಕೆಂದರೆ ರಾಜಸ್ಥಾನದ ಜನರು ಭಾರತದ ಸಂಸ್ಕೃತಿ ಮತ್ತು ಪ್ರಜ್ಞೆಯನ್ನು ರಕ್ಷಿಸುವ ಸಂದರ್ಭ ಬಂದಾಗ ಸದಾ ಗೋಡೆಯಂತೆ ಸ್ಥಿರವಾಗಿ ನಿಂತಿದ್ದಾರೆ," ಎಂದು ಅವರು ಹೇಳಿದರು.

"ಭಾರತವು ಹಲವು ವರ್ಷಗಳಿಂದ ನಾರಿ ಶಕ್ತಿಗೆ ಸಮರ್ಪಿತವಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಬ್ರಜ್‌ ವಾಸಿಗಳು ಅದನ್ನು ಇತರರಿಗಿಂತ ಹೆಚ್ಚಾಗಿ ಒಪ್ಪಿಕೊಂಡಿದ್ದಾರೆ ಎಂದರು. ಕನ್ಹಯ್ಯ ಅವರ ಭೂಮಿಯಲ್ಲಿ, ಪ್ರತಿಯೊಂದು ಸ್ವಾಗತ, ಭಾಷಣ ಮತ್ತು ಸನ್ಮಾನವು 'ರಾಧೆ ರಾಧೆ' ಯೊಂದಿಗೆ ಪ್ರಾರಂಭವಾಗುತ್ತದೆ ಎಂದು ಪ್ರಧಾನಿ ಹೇಳಿದರು. "ರಾಧೆಯ ಹೆಸರಿನ ಪೂರ್ವ ಪ್ರತ್ಯಯವಾಗಿ ಸೇರ್ಪಡೆಗೊಂಡಾಗ ಮಾತ್ರ ಕೃಷ್ಣನ ಹೆಸರು ಪರಿಪೂರ್ಣವಾಗುತ್ತದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ರಾಷ್ಟ್ರ ನಿರ್ಮಾಣ ಮತ್ತು ಸಮಾಜಕ್ಕೆ ದಾರಿ ಮಾಡಿಕೊಡಲು ಮಹಿಳೆಯರು ನೀಡಿದ ಕೊಡುಗೆಗಳು ಈ ಆದರ್ಶಗಳಿಗೆ ಸಲ್ಲುತ್ತವೆ ಎಂದು ಅವರು ಹೇಳಿದರು. ಮೀರಾಬಾಯಿ ಒಂದು ಪರಿಪೂರ್ಣ ಉದಾಹರಣೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅವರ ಒಂದು ದ್ವಿಪದವನ್ನು ವಾಚಿಸಿದರು. ಆಕಾಶ ಮತ್ತು ಭೂಮಿಯ ನಡುವೆ ಏನೇ ಬಿದ್ದರೂ ಅದು ಅಂತಿಮವಾಗಿ ಕೊನೆಯನ್ನು ಸೇರುತ್ತದೆ ಎಂಬ ಸಂದೇಶವನ್ನು ವಿವರಿಸಿದರು.

ಮಹಿಳೆಯ ಅಂತಃ ಶಕ್ತಿಯು ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮೀರಾಬಾಯಿ ಆಗಿನ ಕಷ್ಟದ ಸಮಯದಲ್ಲಿ ತೋರಿಸಿಕೊಟ್ಟರು ಎಂದು ಪ್ರಧಾನಿ ಹೇಳಿದರು. ಸಂತ ರವಿದಾಸರು ಅವರ ಗುರುಗಳಾಗಿದ್ದರು. ಸಂತ ಮೀರಾಬಾಯಿ ಒಬ್ಬ ಮಹಾನ್ ಸಮಾಜ ಸುಧಾರಕರೂ ಆಗಿದ್ದರು. ಅವರ ಪದ್ಯಗಳು ಇಂದಿಗೂ ನಮಗೆ ಮಾರ್ಗದರ್ಶಕವಾಗಿವೆ ಎಂದು ಅವರು ಹೇಳಿದರು. ರೂಢಮಾದರಿಗಳಿಗೆ ಸೀಮಿತವಾಗದೆ ನಮ್ಮ ಮೌಲ್ಯಗಳೊಂದಿಗೆ ಸಂಪರ್ಕದಲ್ಲಿರುವುದನ್ನು ಮೀರಾಬಾಯಿ ನಮಗೆ ಕಲಿಸುತ್ತಾರೆ ಎಂದು ಪ್ರಧಾನಿ ಹೇಳಿದರು.

ಭಾರತದ ಸ್ಫೂರ್ತಿಯ ಮನೋಭಾವವನ್ನು ಎತ್ತಿ ತೋರಿಸಲು ಪ್ರಧಾನಿ ಮೋದಿ ಈ ಅವಕಾಶವನ್ನು ಬಳಸಿಕೊಂಡರು. ಪ್ರತಿ ಬಾರಿ ಭಾರತದ ಪ್ರಜ್ಞೆಯು ದಾಳಿಗೆ ಒಳಗಾದಾಗ ಅಥವಾ ದುರ್ಬಲಗೊಂಡಾಗ ಹಾದಿಯನ್ನು ಮುನ್ನಡೆಸಲು ದೇಶದ ಕೆಲವು ಭಾಗಗಳಿಂದ ಜಾಗೃತ ಶಕ್ತಿಯ ಮೂಲವು ಆವಿರ್ಭವಿಸಿದೆ ಎಂದು ಹೇಳಿದರು. ಈ ಪೈಕಿ ಕೆಲವು ಗಣ್ಯರು ಯೋಧರಾದರೆ, ಮತ್ತೆ ಕೆಲವರು ಸಂತರಾದರು ಎಂದು ಅವರು ಹೇಳಿದರು. ಭಕ್ತಿಕಾಲದ ಸಂತರಾದ ಅಲವರ್ ಮತ್ತು ನಾಯನಾರ್ ಸಂತರು ಮತ್ತು ದಕ್ಷಿಣ ಭಾರತದ ಆಚಾರ್ಯ ರಾಮಾನುಜಾಚಾರ್ಯರು, ಉತ್ತರ ಭಾರತದ ತುಳಸಿದಾಸ್, ಕಬೀರದಾಸ್, ರವಿದಾಸ್ ಮತ್ತು ಸೂರದಾಸ್, ಪಂಜಾಬ್‌ನ ಗುರುನಾನಕ್ ದೇವ್, ಪೂರ್ವದಲ್ಲಿ ಬಂಗಾಳದ ಚೈತನ್ಯ ಮಹಾಪ್ರಭು, ಗುಜರಾತ್‌ನ ನರಸಿನ್ಹ ಮೆಹ್ತಾ ಮತ್ತು ಪಶ್ಚಿಮದಲ್ಲಿ ಮಹಾರಾಷ್ಟ್ರದ ತುಕಾರಾಮ ಮತ್ತು ನಾಮದೇವ್ ಅವರ ಉದಾಹರಣೆಗಳನ್ನು ಪ್ರಧಾನಿ ನೀಡಿದರು. ಇವರೆಲ್ಲರೂ ತ್ಯಾಗದ ಮಾರ್ಗವನ್ನು ರೂಪಿಸಿದರು ಮತ್ತು ಭಾರತವನ್ನು ರೂಪಿಸಿದರು ಎಂದರು. ಅವರ ಭಾಷೆಗಳು ಮತ್ತು ಸಂಸ್ಕೃತಿಗಳು ಪರಸ್ಪರ ಭಿನ್ನವಾಗಿದ್ದರೂ, ಅವುಗಳ ಸಂದೇಶ ಒಂದೇ ಆಗಿದೆ ಮತ್ತು ಅವು ತಮ್ಮ ಭಕ್ತಿ ಮತ್ತು ಜ್ಞಾನದಿಂದ ಇಡೀ ರಾಷ್ಟ್ರವನ್ನು ಒಟ್ಟುಗೂಡಿಸಿವೆ ಎಂದು ಪ್ರಧಾನಿ ಹೇಳಿದರು.

"ಮಥುರಾ ನಗರವು ವಿವಿಧ ಭಕ್ತಿ ಆಂದೋಲನದಗಳ ಸಂಗಮದ ಸ್ಥಳವಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ರಾಷ್ಟ್ರಕ್ಕೆ ಹೊಸ ಪ್ರಜ್ಞೆಯನ್ನು ನೀಡಿದ ಮಾಲುಕ್ ದಾಸ್, ಚೈತನ್ಯ ಮಹಾಪ್ರಭು, ಮಹಾಪ್ರಭು ವಲ್ಲಭಾಚಾರ್ಯ, ಸ್ವಾಮಿ ಹರಿ ದಾಸ್ ಮತ್ತು ಸ್ವಾಮಿ ಹಿತ್ ಹರಿವಂಶ್ ಮಹಾಪ್ರಭು ಅವರ ಉದಾಹರಣೆಗಳನ್ನು ನೀಡಿದರು. "ಭಗವಾನ್ ಶ್ರೀ ಕೃಷ್ಣನ ಆಶೀರ್ವಾದದೊಂದಿಗೆ ಈ ಭಕ್ತಿ ಯಜ್ಞವನ್ನು ಇಂದು ಮುಂದುವರಿಸಲಾಗುತ್ತಿದೆ," ಎಂದು ಅವರು ಹೇಳಿದರು.

ಭವ್ಯ ಭಾರತದ ಪ್ರಜ್ಞೆಯಿಲ್ಲದ ಜನರಿಂದಾಗಿ ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬ್ರಜ್ ಭೂಮಿಯನ್ನು ಅಭಿವೃದ್ಧಿಯಿಂದ ವಂಚಿತಗೊಳಿಸಲಾಗಿತ್ತು. ಇದರಿಂದ ಮಥುರಾಗೆ ಅರ್ಹವಾದ ಗಮನ ಸಿಗಲಿಲ್ಲ ಎಂದು ಪ್ರಧಾನಿ ವಿಷಾದಿಸಿದರು. ʻಅಮೃತಕಾಲʼದ ಈ ಕಾಲದಲ್ಲಿ ರಾಷ್ಟ್ರವು ಮೊದಲ ಬಾರಿಗೆ ಗುಲಾಮ ಮನಸ್ಥಿತಿಯಿಂದ ಹೊರಬಂದಿದೆ ಎಂದು ಪ್ರಧಾನಿ ಹೇಳಿದರು. ಕೆಂಪು ಕೋಟೆಯ ಕೊತ್ತಲಗಳಿಂದ ʻಪಂಚ ಪ್ರಾಣʼದ ಪ್ರತಿಜ್ಞೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ನವೀಕರಿಸಿದ ಭವ್ಯ ಕಾಶಿ ವಿಶ್ವನಾಥ ಧಾಮ, ಕೇದಾರನಾಥ ಧಾಮ ಹಾಗೂ ಶ್ರೀ ರಾಮ ಮಂದಿರದ ಮುಂಬರುವ ಉದ್ಘಾಟನಾ ದಿನಾಂಕವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, "ಈ ಅಭಿವೃದ್ಧಿಯ ಓಟದಲ್ಲಿ ಮಥುರಾ ಮತ್ತು ಬ್ರಜ್ ಹಿಂದೆ ಬೀಳಲು ಬಿಡುವುದಿಲ್ಲ" ಎಂದು ಹೇಳಿದರು. ಬ್ರಜ್‌ನ ಅಭಿವೃದ್ಧಿಗಾಗಿ 'ಉತ್ತರ ಪ್ರದೇಶ ಬ್ರಜ್ ತೀರ್ಥ ವಿಕಾಸ್ ಪರಿಷತ್' ಅನ್ನು ಸ್ಥಾಪಿಸಲಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. "ಈ ಮಂಡಳಿಯು ಭಕ್ತರ ಅನುಕೂಲಕ್ಕಾಗಿ ಮತ್ತು ತೀರ್ಥಯಾತ್ರೆಯ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ," ಎಂದು ಅವರು ಮಾಹಿತಿ ನೀಡಿದರು.

ಇಡೀ ಪ್ರದೇಶವು ಕನ್ಹಯ್ಯನ 'ಲೀಲೆ'ಗಳೊಂದಿಗೆ ಸಂಬಂಧ ಹೊಂದಿದೆ ಎಂದು ಪುನರುಚ್ಚರಿಸಿದ ಶ್ರೀ ಮೋದಿ, ವಿವಿಧ ರಾಜ್ಯಗಳಲ್ಲಿ ಬರುವ ಮಥುರಾ, ವೃಂದಾವನ, ಭರತ್‌ಪುರ್, ಕರೌಲಿ, ಆಗ್ರಾ, ಫಿರೋಜಾಬಾದ್, ಕಾಸ್‌ಗಂಜ್, ಪಲ್ವಾಲ್, ಬಲ್ಲಭಗಡ್ ನಂತಹ ಪ್ರದೇಶಗಳ ಉದಾಹರಣೆಗಳನ್ನು ನೀಡಿದರು. ಭಾರತ ಸರ್ಕಾರವು ವಿವಿಧ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಈ ಇಡೀ ಪ್ರದೇಶವನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ತಮ್ಮ ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, “ಬ್ರಜ್ ಪ್ರದೇಶ ಮತ್ತು ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಬೆಳವಣಿಗೆಗಳು ಕೇವಲ ವ್ಯವಸ್ಥೆಯಲ್ಲಿನ ಬದಲಾವಣೆಯಲ್ಲ. ಬದಲಿಗೆ ರಾಷ್ಟ್ರದ ಪುನರುಜ್ಜೀವನ ಪ್ರಜ್ಞೆಯ ಬದಲಾಗುತ್ತಿರುವ ಸ್ವರೂಪದ ಸಂಕೇತ,ʼʼ ಎಂದು ಒತ್ತಿ ಹೇಳಿದರು. "ಭಾರತವು ಎಲ್ಲಿ ಪುನರ್ಜನ್ಮ ಪಡೆದರೂ, ಅದರ ಹಿಂದೆ ಖಂಡಿತವಾಗಿಯೂ ಶ್ರೀ ಕೃಷ್ಣನ ಆಶೀರ್ವಾದವಿದೆ ಎಂಬುದಕ್ಕೆ ಮಹಾಭಾರತ ಸಾಕ್ಷಿಯಾಗಿದೆ" ಎಂದರು. ದೇಶವು ತನ್ನ ಸಂಕಲ್ಪಗಳನ್ನು ಸಾಧಿಸುತ್ತದೆ ಮತ್ತು ವಿಕಸಿತ ಭಾರತವನ್ನು ನಿರ್ಮಿಸುತ್ತದೆ ಎಂದು ಒತ್ತಿ ಹೇಳುವ ಮೂಲಕ ಪ್ರಧಾನಿ ತಮ್ಮ ಮಾತು ಮುಕ್ತಾಯಗೊಳಿಸಿದರು.

ಉತ್ತರ ಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಗಳಾದ ಶ್ರೀ ಕೇಶವ್ ಪ್ರಸಾದ್ ಮೌರ್ಯ ಮತ್ತು ಶ್ರೀ ಬ್ರಜೇಶ್ ಪಾಠಕ್ ಹಾಗೂ ಮಥುರಾದ ಸಂಸತ್ ಸದಸ್ಯೆ ಶ್ರೀಮತಿ ಹೇಮಾ ಮಾಲಿನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

***



(Release ID: 1979321) Visitor Counter : 67