ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಗೋವಾದಲ್ಲಿ 37ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ 


 "ರಾಷ್ಟ್ರೀಯ ಕ್ರೀಡಾಕೂಟವು ಭಾರತದ ಅಸಾಧಾರಣ ಕ್ರೀಡಾ ಪಾರಮ್ಯವನ್ನು ಸಂಭ್ರಮಿಸುತ್ತದೆ"
 
“ಭಾರತದ ಮೂಲೆ ಮೂಲೆಯಲ್ಲಿಯೂ ಪ್ರತಿಭೆ ಇದೆ. ಆದ್ದರಿಂದ, 2014 ರ ನಂತರ, ನಾವು ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ರಾಷ್ಟ್ರೀಯ ಬದ್ಧತೆಯನ್ನು ಕೈಗೊಂಡಿದ್ದೇವೆ”
 
"ಗೋವಾದ ಪ್ರಭೆಯು ಹೋಲಿಕೆಗೆ ಮೀರಿದ್ದು"
 
"ಕ್ರೀಡಾ ಜಗತ್ತಿನಲ್ಲಿ ಭಾರತದ ಇತ್ತೀಚಿನ ಯಶಸ್ಸು ಪ್ರತಿ ಯುವ ಕ್ರೀಡಾಪಟುವಿಗೆ ದೊಡ್ಡ ಸ್ಫೂರ್ತಿಯಾಗಿದೆ"
 
"ಖೇಲೋ ಇಂಡಿಯಾದ ಮೂಲಕ ಪ್ರತಿಭೆಗಳನ್ನು ಅನ್ವೇಷಿಸುವುದು, ಅವರನ್ನು ಪೋಷಿಸುವುದು ಮತ್ತು ಟಾಪ್ಸ್ ಮೂಲಕ ಒಲಿಂಪಿಕ್ಸ್ ಪೋಡಿಯಂ ತಲುಪಲು ತರಬೇತಿ ಮತ್ತು ಮನೋಧರ್ಮವನ್ನು ಒದಗಿಸುವುದು ನಮ್ಮ ಮಾರ್ಗಸೂಚಿಯಾಗಿದೆ"
 
"ಭಾರತವು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ ಮತ್ತು ಇಂದು ಅಭೂತಪೂರ್ವ ಮಾನದಂಡಗಳನ್ನು ಸ್ಥಾಪಿಸುತ್ತಿದೆ"
 
"ಭಾರತದ ವೇಗ ಮತ್ತು ಪ್ರಮಾಣಕ್ಕೆ ಸಾಟಿಯಾಗುವುದು ಕಷ್ಟ"
 
"ಭಾರತದ ಯುವಶಕ್ತಿಯನ್ನು ವಿಕಸಿತ ಭಾರತದ ಯುವಶಕ್ತಿಯನ್ನಾಗಿ ಪರಿವರ್ತಿಸಲು ನನ್ನ ಭಾರತ (ಮೈ ಭಾರತ್)‌ ಒಂದು ಮಾಧ್ಯಮವಾಗಲಿದೆ"
 
“ಭಾರತವು 2030 ರಲ್ಲಿ ಯುವ ಒಲಿಂಪಿಕ್ಸ್ ಮತ್ತು 2036 ರಲ್ಲಿ ಒಲಿಂಪಿಕ್ಸ್ ಅನ್ನು ಆಯೋಜಿಸಲು ಸಿದ್ಧವಾಗಿದೆ. ಒಲಿಂಪಿಕ್ಸ್ ಅನ್ನು ಆಯೋಜಿಸುವ ನಮ್ಮ ಆಶಯವು ಕೇವಲ ಭಾವನೆಗಳಿಗೆ ಸೀಮಿತವಾಗಿಲ್ಲ. ಬದಲಿಗೆ, ಇದರ ಹಿಂದೆ ಕೆಲವು ದೃಢವಾದ ಕಾರಣಗಳಿವೆ"

Posted On: 26 OCT 2023 8:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೋವಾದ ಮಡಗಾಂವ್ ನಲ್ಲಿರುವ  ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ 37 ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಕ್ರೀಡಾಕೂಟವು ಅಕ್ಟೋಬರ್ 26 ರಿಂದ ನವೆಂಬರ್ 9 ರವರೆಗೆ ನಡೆಯಲಿದೆ. 28 ಸ್ಥಳಗಳಲ್ಲಿ ನಡೆಯುವ 43 ಕ್ರೀಡಾ ವಿಭಾಗಗಳಲ್ಲಿ ದೇಶಾದ್ಯಂತದ 10,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. 

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತೀಯ ಕ್ರೀಡೆಗಳ ಮಹಾಕುಂಭದ ಪಯಣವು ಗೋವಾಕ್ಕೆ ಆಗಮಿಸಿದೆ ಮತ್ತು ಇಲ್ಲಿನ ಪರಿಸರವು ಬಣ್ಣಗಳು, ಅಲೆಗಳು, ಉತ್ಸಾಹ ಮತ್ತು ಸಾಹಸದಿಂದ ತುಂಬಿದೆ ಎಂದು ಹೇಳಿದರು. "ಗೋವಾದ ಪ್ರಭೆಯಂತೆ ಮತ್ತಾವುದೂ ಇಲ್ಲ" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಗೋವಾದ ಜನತೆಗೆ ಅಭಿನಂದನೆ ಸಲ್ಲಿಸಿದ ಅವರು 37ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ದೇಶದ ಕ್ರೀಡೆಗೆ ಗೋವಾದ ಕೊಡುಗೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು ಗೋವಾದ ಫುಟ್ಬಾಲ್ ಪ್ರೀತಿಯ ಬಗ್ಗೆ ಪ್ರಸ್ತಾಪಿಸಿದರು. ಕ್ರೀಡಾಪ್ರೇಮಿಗಳ ಗೋವಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿರುವುದು ಅದಕ್ಕೇ ಶಕ್ತಿ ತುಂಬುತ್ತಿದೆ ಎಂದರು.

ರಾಷ್ಟ್ರವು ಕ್ರೀಡಾ ಜಗತ್ತಿನಲ್ಲಿ ಹೊಸ ಎತ್ತರವನ್ನು ಸಾಧಿಸುತ್ತಿರುವ ಸಮಯದಲ್ಲಿ ರಾಷ್ಟ್ರೀಯ ಕ್ರೀಡಾಕೂಟಗಳು ನಡೆಯುತ್ತಿವೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಏಷ್ಯನ್ ಕ್ರೀಡಾಕೂಟದಲ್ಲಿ 70 ವರ್ಷಗಳ ಹಳೆಯ ದಾಖಲೆಯನ್ನು ಮುರಿದ ಯಶಸ್ಸನ್ನು ಅವರು ಪ್ರಸ್ತಾಪಿಸಿದರು ಮತ್ತು 70 ಕ್ಕಿಂತ ಹೆಚ್ಚು ಪದಕಗಳೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿರುವ ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಬಗ್ಗೆಯೂ ಅವರು ಮಾತನಾಡಿದರು. ಭಾರತ ಇತಿಹಾಸ ಸೃಷ್ಟಿಸಿದ, ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದ ಬಗ್ಗೆಯೂ ಅವರು ಪ್ರಸ್ತಾಪಿಸಿದರು. "ಕ್ರೀಡಾ ಜಗತ್ತಿನಲ್ಲಿ ಭಾರತದ ಇತ್ತೀಚಿನ ಯಶಸ್ಸು ಪ್ರತಿಯೊಬ್ಬ ಯುವ ಕ್ರೀಡಾಪಟುವಿಗೆ ದೊಡ್ಡ ಸ್ಫೂರ್ತಿಯಾಗಿದೆ" ಎಂದು ಶ್ರೀ ಮೋದಿ ಹೇಳಿದರು. ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರತಿಯೊಬ್ಬ ಯುವ ಕ್ರೀಡಾಪಟುವಿಗೆ ದೃಢವಾದ ಚಿಮ್ಮುಹಲಗೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಇರುವ ವಿವಿಧ ಅವಕಾಶಗಳನ್ನು ಎತ್ತಿ ತೋರಿಸಿದರು ಮತ್ತು ಅತ್ಯುತ್ತಮವಾದ ಸಾಧನೆ ನೀಡುವಂತೆ ಕರೆ ನೀಡಿದರು.

ಭಾರತದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ ಮತ್ತು ದೇಶವು ಕೊರತೆಯ ನಡುವೆಯೂ ಚಾಂಪಿಯನ್‌ ಗಳನ್ನು ಸೃಷ್ಟಿಸಿದೆ. ಆದರೂ ಪದಕ ಪಟ್ಟಿಯಲ್ಲಿ ಕಳಪೆ ಪ್ರದರ್ಶನವು ಯಾವಾಗಲೂ ದೇಶವಾಸಿಗಳಿಗೆ ನೋವುಂಟು ಮಾಡಿತು ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು 2014ರ ನಂತರ ಕ್ರೀಡಾ ಮೂಲಸೌಕರ್ಯ, ಆಯ್ಕೆ ಪ್ರಕ್ರಿಯೆ, ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಯೋಜನೆಗಳು, ತರಬೇತಿ ಯೋಜನೆಗಳು ಮತ್ತು ಸಮಾಜದ ಮನಸ್ಥಿತಿಯಲ್ಲಿ ತಂದ ಬದಲಾವಣೆಗಳು, ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿನ ಅಡೆತಡೆಗಳನ್ನು ಒಂದೊಂದಾಗಿ ತೆಗೆದುಹಾಕಿದ್ದನ್ನು ವಿವರಿಸಿದರು. ಪ್ರತಿಭಾನ್ವೇಷಣೆಯಿಂದ ಒಲಿಂಪಿಕ್ಸ್ ಪೋಡಿಯಂ ತಲುಪುವವರೆಗಿನ ಮಾರ್ಗಸೂಚಿಯನ್ನು ಸರ್ಕಾರ ಸಿದ್ಧಪಡಿಸಿದೆ ಎಂದು ಅವರು ಹೇಳಿದರು.

ಒಂಬತ್ತು ವರ್ಷಗಳ ಹಿಂದಿನ ಕ್ರೀಡಾ ಬಜೆಟ್‌ ಗಿಂತ ಈ ವರ್ಷದ ಕ್ರೀಡಾ ಬಜೆಟ್ ಮೂರು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು. ಖೇಲೋ ಇಂಡಿಯಾ ಮತ್ತು ಟಾಪ್ಸ್‌ ನಂತಹ ಉಪಕ್ರಮಗಳ ಹೊಸ ಪೂರಕ ವ್ಯವಸ್ಥೆಯು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ಪ್ರತಿಭಾವಂತ ಕ್ರೀಡಾಪಟುಗಳನ್ನು ಹೊರತರುತ್ತಿದೆ ಎಂದು ಅವರು ಹೇಳಿದರು. ಟಾಪ್ಸ್‌ ನಲ್ಲಿ ಅಗ್ರಗಣ್ಯ ಕ್ರೀಡಾಪಟುಗಳು ವಿಶ್ವದ ಅತ್ಯುತ್ತಮ ತರಬೇತಿಯನ್ನು ಪಡೆಯುತ್ತಾರೆ ಮತ್ತು 3000 ಅಥ್ಲೀಟ್‌ ಗಳು ಖೇಲೋ ಇಂಡಿಯಾದ ತರಬೇತಿಯಲ್ಲಿದ್ದಾರೆ ಎಂದು ಅವರು ಹೇಳಿದರು. ಆಟಗಾರರು ವರ್ಷಕ್ಕೆ 6 ಲಕ್ಷ ಮೌಲ್ಯದ ಶಿಷ್ಯವೇತನ ಪಡೆಯುತ್ತಿದ್ದಾರೆ. ಖೇಲೋ ಇಂಡಿಯಾ ಅಡಿಯಲ್ಲಿ ಹೊರಬಂದ ಸುಮಾರು 125 ಆಟಗಾರರು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿ 36 ಪದಕಗಳನ್ನು ಗೆದ್ದಿದ್ದಾರೆ ಎಂದು ಪ್ರಧಾನಿ ಹೇಳಿದರು. "ಖೇಲೋ ಇಂಡಿಯಾದ ಮೂಲಕ ಪ್ರತಿಭೆಗಳನ್ನು ಅನ್ವೇಷಿಸುವುದು, ಅವರನ್ನು ಪೋಷಿಸುವುದು ಮತ್ತು ಟಾಪ್ಸ್ ಮೂಲಕ ಒಲಿಂಪಿಕ್ಸ್ ವೇದಿಕೆಯನ್ನು ತಲುಪಲು ತರಬೇತಿ ಮತ್ತು ಮನೋಧರ್ಮವನ್ನು ಒದಗಿಸುವುದು ನಮ್ಮ ಮಾರ್ಗಸೂಚಿಯಾಗಿದೆ" ಎಂದು ಅವರು ಹೇಳಿದರು.

"ಯಾವುದೇ ದೇಶದ ಕ್ರೀಡಾ ಕ್ಷೇತ್ರದ ಪ್ರಗತಿಯು ಅದರ ಆರ್ಥಿಕತೆಯ ಪ್ರಗತಿಯೊಂದಿಗೆ ನೇರವಾಗಿ ಸಂಬಂಧಿಸಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ದೇಶದಲ್ಲಿ ನಕಾರಾತ್ಮಕ ವಾತಾವರಣವು ಕ್ರೀಡಾ ಕ್ಷೇತ್ರ ಮತ್ತು ದೈನಂದಿನ ಜೀವನದಲ್ಲಿ ಪ್ರತಿಫಲಿಸುತ್ತದೆ, ಆದರೆ ಕ್ರೀಡೆಯಲ್ಲಿ ಭಾರತದ ಇತ್ತೀಚಿನ ಯಶಸ್ಸು ಅದರ ಒಟ್ಟಾರೆ ಯಶಸ್ಸಿನ ಕಥೆಯನ್ನು ಹೋಲುತ್ತದೆ ಎಂದು ಅವರು ತಿಳಿಸಿದರು. ಭಾರತವು ಹೊಸ ದಾಖಲೆಗಳನ್ನು ಮುರಿಯುತ್ತಿದೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಭಾರತದ ವೇಗ ಮತ್ತು ಪ್ರಮಾಣಕ್ಕೆ ಸಾಟಿಯಾಗುವುದು ಕಷ್ಟ" ಎಂದು ಅವರು ಒತ್ತಿ ಹೇಳಿದರು. ಕಳೆದ 30 ದಿನಗಳಲ್ಲಿ ಭಾರತದ ಸಾಧನೆಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ರಾಷ್ಟ್ರವು ಇದೇ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಮುನ್ನಡೆಯುವುದನ್ನು ಮುಂದುವರೆಸಿದರೆ, ಯುವ ಪೀಳಿಗೆಗೆ ಉಜ್ವಲ ಭವಿಷ್ಯವನ್ನು ಖಾತರಿಯಾಗುವುದಕ್ಕೆ ಈ ಮೋದಿ ಗ್ಯಾರಂಟಿ ನೀಡುತ್ತಾರೆ ಎಂದು ಹೇಳಿದರು. ಈ ಕುರಿತು ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ನಾರಿ ಶಕ್ತಿ ವಂದನಾ ಅಧಿನಿಯಮದ ಅಂಗೀಕಾರ, ಗಗನಯಾನದ ಯಶಸ್ವಿ ಪರೀಕ್ಷೆ, ಭಾರತದ ಮೊದಲ ಕ್ಷಿಪ್ರ ರೈಲು 'ನಮೋ ಭಾರತ್' ಉದ್ಘಾಟನೆ, ಬೆಂಗಳೂರು ಮೆಟ್ರೋ ವಿಸ್ತರಣೆ, ಜಮ್ಮು ಮತ್ತು ಕಾಶ್ಮೀರದ ಮೊದಲ ವಿಸ್ಟಾ ಡೋಮ್ ರೈಲು ಸೇವೆ, ದೆಹಲಿ-ವಡೋದರಾ ಎಕ್ಸ್‌ಪ್ರೆಸ್‌ ವೇ, ಜಿ20 ಶೃಂಗಸಭೆಯ ಯಶಸ್ವಿ ಆಯೋಜನೆ, 6 ಲಕ್ಷ ಕೋಟಿ ಮೌಲ್ಯದ ಒಪ್ಪಂದಗಳು ನಡೆದ ಜಾಗತಿಕ ಸಾಗರ ಶೃಂಗಸಭೆ, ಇಸ್ರೇಲ್‌ ನಿಂದ ಭಾರತೀಯರನ್ನು ಸ್ಥಳಾಂತರಿಸಿದ ಆಪರೇಷನ್ ಅಜಯ್, ಭಾರತ ಮತ್ತು ಶ್ರೀಲಂಕಾ ನಡುವೆ ದೋಣಿ ಸೇವೆಗಳ ಪ್ರಾರಂಭ, 5ಜಿ ಬಳಕೆದಾರರ ಅಗ್ರ 3 ದೇಶಗಳಲ್ಲಿ ಭಾರತದ ಸೇರ್ಪಡೆ, ಆಪಲ್‌ ಸಂಸ್ಥೆಯ ನಂತರ ಸ್ಮಾರ್ಟ್‌ಫೋನ್‌ ಗಳನ್ನು ತಯಾರಿಸುವುದಾಗಿ ಗೂಗಲ್‌ ನ ಇತ್ತೀಚಿನ ಪ್ರಕಟಣೆ ಮತ್ತು ದೇಶದಲ್ಲಿ ಹಣ್ಣು ಮತ್ತು ತರಕಾರಿ ಉತ್ಪನ್ನಗಳಲ್ಲಿ ಹೊಸ ದಾಖಲೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು. "ಇದು ಕೇವಲ ಅರ್ಧದಷ್ಟು ಪಟ್ಟಿ" ಎಂದು ಪ್ರಧಾನಿ ಒತ್ತಿ ಹೇಳಿದರು.

ರಾಷ್ಟ್ರದ ಯುವಜನರು ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸಗಳ ತಳಹದಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದರು. ತಮ್ಮ ಸಾಮರ್ಥ್ಯವನ್ನು ಅರಿತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆಗಾಗಿ ಗರಿಷ್ಠ ಅವಕಾಶವನ್ನು ಪಡೆಯಲು ಯುವಜನರನ್ನು ದೇಶದ ಯೋಜನೆಗಳೊಂದಿಗೆ ಸಂಪರ್ಕಿಸಲು ಏಕ-ನಿಲುಗಡೆ ಕೇಂದ್ರವಾಗಿರುವ ಹೊಸ ವೇದಿಕೆ ‘MY Bharat’ ಕುರಿತು ಪ್ರಧಾನಿ ಮಾತನಾಡಿದರು. ಭಾರತದ ಯುವಶಕ್ತಿಯನ್ನು ವಿಕಸಿತ ಭಾರತದ ಯುವಶಕ್ತಿಯನ್ನಾಗಿ ಪರಿವರ್ತಿಸಲು ಇದು ಮಾಧ್ಯಮವಾಗಲಿದೆ ಎಂದು ಅವರು ಹೇಳಿದರು. ಮುಂಬರುವ ಏಕತಾ ದಿವಸದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುಇವುದು. ಅಂದು ಏಕತಾ ಓಟದ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಅವರು ಕೋರಿದರು.

 “ಇಂದು ಭಾರತದ ಸಂಕಲ್ಪ ಮತ್ತು ಪ್ರಯತ್ನಗಳೆರಡೂ ತುಂಬಾ ದೊಡ್ಡದಾಗಿರುವಾಗ, ಭಾರತದ ಆಕಾಂಕ್ಷೆಗಳು ಹೆಚ್ಚಾಗುವುದು ಸಹಜ. ಅದಕ್ಕಾಗಿಯೇ ಐಒಸಿ ಅಧಿವೇಶನದಲ್ಲಿ ನಾನು 140 ಕೋಟಿ ಭಾರತೀಯರ ಆಕಾಂಕ್ಷೆಯನ್ನು ಮುಂದಿಟ್ಟಿದ್ದೇನೆ. 2030ರಲ್ಲಿ ಯುವ ಒಲಿಂಪಿಕ್ಸ್ ಮತ್ತು 2036ರಲ್ಲಿ ಒಲಿಂಪಿಕ್ಸ್ ಆಯೋಜಿಸಲು ಭಾರತ ಸಿದ್ಧವಿದೆ ಎಂದು ಒಲಿಂಪಿಕ್ಸ್‌ ಸುಪ್ರೀಂ ಸಮಿತಿಗೆ ನಾನು ಭರವಸೆ ನೀಡಿದ್ದೇನೆ. ಒಲಿಂಪಿಕ್ಸ್ ಆಯೋಜಿಸುವ ನಮ್ಮ ಆಶಯ ಕೇವಲ ಭಾವನೆಗಳಿಗೆ ಸೀಮಿತವಾಗಿಲ್ಲ. ಬದಲಿಗೆ, ಇದರ ಹಿಂದೆ ಕೆಲವು ದೃಢವಾದ ಕಾರಣಗಳಿವೆ. 2036 ರಲ್ಲಿ ಭಾರತದ ಆರ್ಥಿಕತೆ ಮತ್ತು ಮೂಲಸೌಕರ್ಯವು ಒಲಿಂಪಿಕ್ಸ್ ಅನ್ನು ಸುಲಭವಾಗಿ ಆಯೋಜಿಸುವ ಸ್ಥಿತಿಯಲ್ಲಿರುತ್ತದೆ” ಎಂದು ಪ್ರಧಾನಿ ಹೇಳಿದರು.

"ನಮ್ಮ ರಾಷ್ಟ್ರೀಯ ಕ್ರೀಡಾಕೂಟವು ಏಕ್ ಭಾರತ್, ಶ್ರೇಷ್ಠ ಭಾರತ್" ನ ಸಂಕೇತವಾಗಿದೆ, ಭಾರತದ ಪ್ರತಿಯೊಂದು ರಾಜ್ಯವು ತನ್ನ ಸಾಮರ್ಥ್ಯವನ್ನು ತೋರಿಸಲು ಇದು ಉತ್ತಮ ಮಾಧ್ಯಮವಾಗಿದೆ” ಎಂದು ಪ್ರಧಾನಿ ಒತ್ತಿ ಹೇಳಿದರು. ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲು ಗೋವಾ ಸರ್ಕಾರ ಮತ್ತು ಗೋವಾ ಜನರು ಮಾಡಿದ ಸಿದ್ಧತೆಗಳನ್ನು ಅವರು ಶ್ಲಾಘಿಸಿದರು. ಇಲ್ಲಿ ರಚಿಸಲಾದ ಕ್ರೀಡಾ ಮೂಲಸೌಕರ್ಯವು ಗೋವಾದ ಯುವಕರಿಗೆ ಮುಂದಿನ ಹಲವು ದಶಕಗಳವರೆಗೆ ಉಪಯುಕ್ತವಾಗಲಿದೆ ಮತ್ತು ಈ ನೆಲವು ದೇಶಕ್ಕೆ ಅನೇಕ ಹೊಸ ಆಟಗಾರರನ್ನು ನೀಡುತ್ತದೆ, ಭವಿಷ್ಯದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲು ಇಲ್ಲಿನ ಮೂಲಸೌಕರ್ಯವನ್ನು ಬಳಸಲಾಗುವುದು ಎಂದು ಹೇಳಿದರು. "ಕಳೆದ ಕೆಲವು ವರ್ಷಗಳಲ್ಲಿ, ಗೋವಾದಲ್ಲಿ ಸಂಪರ್ಕಕ್ಕೆ ಸಂಬಂಧಿಸಿದ ಆಧುನಿಕ ಮೂಲಸೌಕರ್ಯಗಳನ್ನು ಸಹ ನಿರ್ಮಿಸಲಾಗಿದೆ. ರಾಷ್ಟ್ರೀಯ ಕ್ರೀಡಾಕೂಟವು ಗೋವಾದ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ” ಎಂದು ಅವರು ಹೇಳಿದರು.

ಗೋವಾವನ್ನು ಆಚರಣೆಗಳ ನಾಡು ಎಂದ ಕರೆದ ಪ್ರಧಾನಮಂತ್ರಿಯವರು, ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳು ಮತ್ತು ಶೃಂಗಸಭೆಗಳ ಕೇಂದ್ರವಾಗಿ ರಾಜ್ಯವು ಬೆಳೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. 2016ರ ಬ್ರಿಕ್ಸ್ ಸಮ್ಮೇಳನ ಮತ್ತು ಹಲವು ಜಿ20 ಸಮ್ಮೇಳನಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ‘ಸುಸ್ಥಿರ ಪ್ರವಾಸೋದ್ಯಮಕ್ಕಾಗಿ ಗೋವಾ ಮಾರ್ಗಸೂಚಿʼಯನ್ನು ಜಿ20 ಅಂಗೀಕರಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು.

ಯಾವುದೇ ಕ್ರೀಡಾಂಗಣವಾಗಲಿ, ಯಾವುದೇ ಸವಾಲಾಗಲಿ ಪ್ರತಿಯೊಂದು ಸನ್ನಿವೇಶದಲ್ಲೂ ತಮ್ಮ ಅತ್ಯುತ್ತಮವಾದುದನ್ನು ನೀಡುವಂತೆ ಕ್ರೀಡಾಪಟುಗಳಿಗೆ ಪ್ರಧಾನಿ ಕರೆ ನೀಡಿದರು. “ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು. ಈ ಕರೆಯೊಂದಿಗೆ, ನಾನು 37 ನೇ ರಾಷ್ಟ್ರೀಯ ಕ್ರೀಡಾಕೂಟದ ಆರಂಭವನ್ನು ಘೋಷಿಸುತ್ತೇನೆ. ಎಲ್ಲ ಕ್ರೀಡಾಪಟುಗಳಿಗೆ ಮತ್ತೊಮ್ಮೆ ಶುಭಾಶಯಗಳು. ಗೋವಾ ಸಿದ್ಧವಾಗಿದೆ”ಎಂದು ಅವರು ತಮ್ಮ ಮಾತು ಮುಕ್ತಾಯಮಾಡಿದರು.

ಕಾರ್ಯಕ್ರಮದಲ್ಲಿ ಗೋವಾ ರಾಜ್ಯಪಾಲರಾದ ಶ್ರೀ ಪಿ.ಎಸ್.ಶ್ರೀಧರನ್ ಪಿಳ್ಳೈ, ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಭಾರತೀಯ ಒಲಿಂಪಿಕ್ ಒಕ್ಕೂಟದ ಅಧ್ಯಕ್ಷೆ ಡಾ.ಪಿ.ಟಿ.ಉಷಾ ಮತ್ತಿತರರು ಉಪಸ್ಥಿತರಿದ್ದರು. 

ಹಿನ್ನೆಲೆ

ಪ್ರಧಾನಿಯವರ ನಾಯಕತ್ವದಲ್ಲಿ ದೇಶದಲ್ಲಿ ಕ್ರೀಡಾ ಸಂಸ್ಕೃತಿಯು ದೊಡ್ಡ ಬದಲಾವಣೆ ಕಂಡಿದೆ. ಸರ್ಕಾರದ ನಿರಂತರ ಬೆಂಬಲದ ನೆರವಿನಿಂದ ಕ್ರೀಡಾಪಟುಗಳ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ತರವಾದ ಸುಧಾರಣೆಯನ್ನು ಕಂಡಿದೆ. ಅತ್ಯುತ್ತಮ ಸಾಧಕರನ್ನು ಗುರುತಿಸಲು ಮತ್ತು ಕ್ರೀಡೆಯ ಜನಪ್ರಿಯತೆಯನ್ನು ಹೆಚ್ಚಿಸಲು ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ನಡೆಸುವ ಮಹತ್ವವನ್ನು ಗುರುತಿಸಿ, ದೇಶದಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ.

ಗೋವಾದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡಾಕೂಟವು ಅಕ್ಟೋಬರ್ 26 ರಿಂದ ನವೆಂಬರ್ 9 ರವರೆಗೆ ನಡೆಯಲಿದೆ. ರಾಷ್ಟ್ರಾದ್ಯಂತ 10,000 ಕ್ಕೂ ಹೆಚ್ಚು ಕ್ರೀಡಾಪಟುಗಳು 28 ಸ್ಥಳಗಳಲ್ಲಿ 43 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

 

 

***



(Release ID: 1971867) Visitor Counter : 203