ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯಲ್ಲಿ ನಡೆದ 9ನೇ ʻಜಿ-20 ಸಂಸದೀಯ ಸಭಾಪತಿಗಳ ಶೃಂಗಸಭೆʼಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
Posted On:
13 OCT 2023 1:34PM by PIB Bengaluru
ನಮಸ್ಕಾರ!
140 ಕೋಟಿ ಭಾರತೀಯರ ಪರವಾಗಿ, ʻಜಿ-20 ಸಂಸದೀಯ ಸಭಾಪತಿಗಳ ಶೃಂಗಸಭೆʼಯಲ್ಲಿ ಭಾಗಿಯಾಗಿರುವ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇನೆ. ಈ ಶೃಂಗಸಭೆಯು ಒಂದು ರೀತಿಯಲ್ಲಿ 'ಮಹಾಕುಂಭ' ಅಥವಾ ಪ್ರಪಂಚದಾದ್ಯಂತದ ವಿವಿಧ ಸಂಸದೀಯ ಕಾರ್ಯವಿಧಾನಗಳ ಬೃಹತ್ ಸಮಾಗಮವಾಗಿದೆ. ನಿಮ್ಮಂತಹ ಎಲ್ಲಾ ಪ್ರತಿನಿಧಿಗಳು ವಿವಿಧ ಸಂಸತ್ತುಗಳ ಕಾರ್ಯಶೈಲಿಯಲ್ಲಿ ಅನುಭವ ಹೊಂದಿದ್ದಾರೆ. ಅಂತಹ ಶ್ರೀಮಂತ ಪ್ರಜಾಪ್ರಭುತ್ವದ ಅನುಭವಗಳನ್ನು ಹೊಂದಿರುವ ನಿಮ್ಮ ಭಾರತ ಭೇಟಿ ನಮ್ಮೆಲ್ಲರಿಗೂ ಬಹಳ ಸಂತೋಷದಾಯಕವಾಗಿದೆ.
ಸ್ನೇಹಿತರೇ,
ಈಗ ಭಾರತದಲ್ಲಿ ಹಬ್ಬದ ಋತು. ಈ ದಿನಗಳಲ್ಲಿ, ಭಾರತದಾದ್ಯಂತ ಅನೇಕ ಹಬ್ಬದ ಚಟುವಟಿಕೆಗಳು ನಡೆಯುತ್ತವೆ. ಆದರೆ ಈ ಬಾರಿ ʻಜಿ-20ʼ ಚಟುವಟಿಕೆಗಳು ವರ್ಷವಿಡೀ ಹಬ್ಬದ ವಾತಾವರಣದ ಉತ್ಸಾಹವನ್ನು ಕಾಯ್ದುಕೊಂಡಿವೆ. ನಾವು ವರ್ಷವಿಡೀ ಭಾರತದ ವಿವಿಧ ನಗರಗಳಲ್ಲಿ ʻಜಿ-20ʼ ಪ್ರತಿನಿಧಿಗಳಿಗೆ ಆತಿಥ್ಯ ನೀಡಿದ್ದೇವೆ. ಪರಿಣಾಮವಾಗಿ, ಆ ನಗರಗಳಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಲಾಯಿತು. ಇದರ ನಂತರ ಭಾರತವು ಚಂದ್ರಯಾನದಲ್ಲಿ ಯಶಸ್ವಿಯಾಯಿತು. ಇದು ದೇಶಾದ್ಯಂತ ಸಂಭ್ರಮಾಚರಣೆಯನ್ನು ಮತ್ತಷ್ಟು ಹೆಚ್ಚಿಸಿತು. ನಂತರ, ನಾವು ದೆಹಲಿಯಲ್ಲಿ ಯಶಸ್ವಿ ʻಜಿ -20ʼ ಶೃಂಗಸಭೆಯನ್ನು ಆಯೋಜಿಸಿದೆವು. ಈಗ ಈ ʻಪಿ-20 ಶೃಂಗಸಭೆʼ ಇಲ್ಲಿ ನಡೆಯುತ್ತಿದೆ. ಯಾವುದೇ ದೇಶದ ದೊಡ್ಡ ಶಕ್ತಿ ಅಲ್ಲಿನ ಜನರು; ಅದರ ಜನರ ಇಚ್ಛಾಶಕ್ತಿ. ಇಂದು, ಈ ಶೃಂಗಸಭೆಯು ಜನರ ಈ ಶಕ್ತಿಯನ್ನು ಆಚರಿಸಲು ಒಂದು ಕಾರಣವಾಗಿದೆ.
ಸ್ನೇಹಿತರೇ,
ಪ್ರಜಾಪ್ರಭುತ್ವದ ತಾಯಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ ʻಪಿ 20 ಶೃಂಗಸಭೆʼ ನಡೆಯುತ್ತಿದೆ. ಸಂಸತ್ತುಗಳು ಚರ್ಚೆ ಮತ್ತು ಸಂವಾದದ ಪ್ರಮುಖ ವೇದಿಕೆಗಳಾಗಿವೆ ಎಂಬ ವಿಷಯ ಪ್ರಪಂಚದ ವಿವಿಧ ಸಂಸತ್ತುಗಳ ಪ್ರತಿನಿಧಿಗಳಾಗಿರುವ ನಿಮಗೆ ತಿಳಿದೇ ಇದೆ. ಸಾವಿರಾರು ವರ್ಷಗಳ ಹಿಂದೆಯೂ ಇಲ್ಲಿ ನಡೆದ ಚರ್ಚೆಗಳು ಮತ್ತು ಸಂವಾದಗಳ ಉತ್ತಮ ಉದಾಹರಣೆಗಳು ನಮ್ಮಲ್ಲಿವೆ. 5000 ವರ್ಷಗಳಿಗಿಂತಲೂ ಹಳೆಯದಾದ ನಮ್ಮ ಧರ್ಮಗ್ರಂಥಗಳಲ್ಲಿ, ನಮ್ಮ ವೇದಗಳಲ್ಲಿ, ಸಭೆಗಳು ಮತ್ತು ಸಮಿತಿಗಳ ಬಗ್ಗೆ ಉಲ್ಲೇಖವಿದೆ. ಅಲ್ಲಿ, ಸಮಾಜದ ಹಿತದೃಷ್ಟಿಯಿಂದ ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಇದನ್ನು ನಮ್ಮ ಅತ್ಯಂತ ಹಳೆಯ ವೇದವಾದ ಋಗ್ವೇದದಲ್ಲಿ - संगच्छ-ध्वं संवद-ध्वं सं, वो मनांसि जानताम् । ಎಂದು ಹೇಳಲಾಗಿದೆ. ಅಂದರೆ ನಾವು ಒಟ್ಟಿಗೆ ನಡೆಯುತ್ತೇವೆ, ಒಟ್ಟಿಗೆ ಮಾತನಾಡುತ್ತೇವೆ ಮತ್ತು ನಮ್ಮ ಮನಸ್ಸು ಒಂದಾಗಿದೆ. ಆ ಅವಧಿಯಲ್ಲೂ ಗ್ರಾಮಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಗ್ರಾಮ ಸಭೆಗಳಲ್ಲಿ ಚರ್ಚೆಯ ಮೂಲಕ ತೆಗೆದುಕೊಳ್ಳಲಾಗುತ್ತಿತ್ತು.
ಗ್ರೀಕ್ ರಾಯಭಾರಿ ಮೆಗಾಸ್ತನೀಸ್ ಭಾರತದಲ್ಲಿ ಅಂತಹ ವ್ಯವಸ್ಥೆಯನ್ನು ನೋಡಿದಾಗ, ಅವರು ಆಶ್ಚರ್ಯಚಕಿತರಾಗಿದ್ದರು. ಭಾರತದ ವಿವಿಧ ರಾಜ್ಯಗಳಲ್ಲಿ ಚಾಲ್ತಿಯಲ್ಲಿದ್ದ ಈ ವ್ಯವಸ್ಥೆಯ ಬಗ್ಗೆ ಅವರು ವಿವರವಾಗಿ ಬರೆದಿದ್ದಾರೆ. ತಮಿಳುನಾಡಿನಲ್ಲಿ 9ನೇ ಶತಮಾನದ ಶಿಲಾಶಾಸನವಿದೆ ಎಂದು ತಿಳಿದರೆ ನಿಮಗೆ ಸೋಜಿಗವಾಗಬಹುದು. ಇದು ಗ್ರಾಮ ಶಾಸಕಾಂಗಗಳ ನಿಯಮಗಳು ಮತ್ತು ಸಂಹಿತೆಗಳನ್ನು ಉಲ್ಲೇಖಿಸುತ್ತದೆ. ಮತ್ತು 1200 ವರ್ಷಗಳಷ್ಟು ಹಳೆಯದಾದ ಆ ಶಾಸನದಲ್ಲಿ, ಯಾವ ಸದಸ್ಯರನ್ನು ಅನರ್ಹಗೊಳಿಸಬಹುದು, ಯಾವ ಕಾರಣಕ್ಕಾಗಿ ಮತ್ತು ಯಾವ ಸಂದರ್ಭಗಳಲ್ಲಿ ಅನರ್ಹಗೊಳಿಸಬಹುದು ಎಂದು ಸಹ ಬರೆಯಲಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ನಿಮಗೆ ತುಂಬಾ ಆಸಕ್ತಿದಾಯಕವೆನಿಸಬಹುದು. ನಾನು 1200 ವರ್ಷಗಳ ಹಿಂದಿನ ಬಗ್ಗೆ ಮಾತನಾಡುತ್ತಿದ್ದೇನೆ. ಅನುಭವ ಮಂಟಪದ ಬಗ್ಗೆಯೂ ನಾನು ನಿಮಗೆ ಹೇಳಲು ಬಯಸುತ್ತೇನೆ. ಮ್ಯಾಗ್ನಾ ಕಾರ್ಟಾಕ್ಕಿಂತ ಮುಂಚೆಯೇ, ನಾವು 12ನೇ ಶತಮಾನದಲ್ಲಿ "ಅನುಭವ ಮಂಟಪ" ಸಂಪ್ರದಾಯವನ್ನು ಹೊಂದಿದ್ದೆವು. ಈ ವ್ಯವಸ್ಥೆಯಲ್ಲೂ ಚರ್ಚೆ ಮತ್ತು ಸಂವಾದಗಳನ್ನು ಪ್ರೋತ್ಸಾಹಿಸಲಾಯಿತು. ಪ್ರತಿಯೊಂದು ವರ್ಗ, ಪ್ರತಿಯೊಂದು ಜಾತಿ, ಪ್ರತಿಯೊಂದು ಸಮುದಾಯದ ಜನರು ಅನುಭವ ಮಂಟಪದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅಲ್ಲಿಗೆ ಹೋಗುತ್ತಿದ್ದರು. ಜಗದ್ಗುರು ಬಸವೇಶ್ವರರ ಈ ಕೊಡುಗೆ ಇಂದಿಗೂ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತದೆ. 5000 ವರ್ಷಗಳಷ್ಟು ಹಳೆಯದಾದ ವೇದಗಳಿಂದ ಇಂದಿನವರೆಗಿನ ಈ ಪ್ರಯಾಣವು, ಸಂಸದೀಯ ಸಂಪ್ರದಾಯಗಳ ಈ ಬೆಳವಣಿಗೆಯು ನಮ್ಮ ಪರಂಪರೆ ಮಾತ್ರವಲ್ಲ, ಇಡೀ ವಿಶ್ವದ ಪರಂಪರೆಯಾಗಿದೆ ಎಂಬುದನ್ನು ಸೂಚಿಸುತ್ತದೆ.
ಸ್ನೇಹಿತರೇ,
ಭಾರತದ ಸಂಸದೀಯ ಪ್ರಕ್ರಿಯೆಗಳು ಕಾಲಾನಂತರದಲ್ಲಿ ನಿರಂತರವಾಗಿ ಸುಧಾರಿಸಿವೆ ಮತ್ತು ಹೆಚ್ಚು ಶಕ್ತಿಯುತವಾಗಿವೆ. ಭಾರತದಲ್ಲಿ, ನಾವು ಸಾರ್ವತ್ರಿಕ ಚುನಾವಣೆಗಳನ್ನು ಅತಿದೊಡ್ಡ ಹಬ್ಬವೆಂದು ಪರಿಗಣಿಸುತ್ತೇವೆ. 1947ರಲ್ಲಿ ಸ್ವಾತಂತ್ರ್ಯದ ನಂತರ, ಭಾರತದಲ್ಲಿ 17 ಸಾರ್ವತ್ರಿಕ ಚುನಾವಣೆಗಳು ಮತ್ತು 300ಕ್ಕೂ ಹೆಚ್ಚು ರಾಜ್ಯ ವಿಧಾನಸಭಾ ಚುನಾವಣೆಗಳು ನಡೆದಿವೆ. ಭಾರತವು ವಿಶ್ವದಲ್ಲೇ ಅತಿದೊಡ್ಡ ಮಟ್ಟದಲ್ಲಿ ಚುನಾವಣೆಗಳನ್ನು ನಡೆಸುವುದು ಮಾತ್ರವಲ್ಲ, ದೇಶದ ಚುನಾವಣೆ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ, ದೇಶವಾಸಿಗಳು ನನ್ನ ಪಕ್ಷವನ್ನು ಸತತ ಎರಡನೇ ಬಾರಿಗೆ ವಿಜಯಶಾಲಿಯನ್ನಾಗಿ ಮಾಡಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆ ಮಾನವ ಇತಿಹಾಸದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ಪ್ರಕ್ರಿಯೆಯಾಗಿದೆ. 60 ಕೋಟಿಗೂ ಹೆಚ್ಚು ಅಂದರೆ 600 ದಶಲಕ್ಷ ಮತದಾರರು ಇದರಲ್ಲಿ ಭಾಗವಹಿಸಿದ್ದರು. ನೀವು ಊಹಿಸಬಹುದು, ಆ ಸಮಯದಲ್ಲಿ ಭಾರತದಲ್ಲಿ 91 ಕೋಟಿ ಅಂದರೆ 910 ದಶಲಕ್ಷ ನೋಂದಾಯಿತ ಮತದಾರರಿದ್ದರು. ಇದು ಇಡೀ ಯುರೋಪಿನ ಒಟ್ಟು ಜನಸಂಖ್ಯೆಗಿಂತ ಹೆಚ್ಚು. ಭಾರತದಲ್ಲಿ ಒಟ್ಟು ನೋಂದಾಯಿತ ಮತದಾರರಲ್ಲಿ ಸುಮಾರು 70 ಪ್ರತಿಶತದಷ್ಟು ಜನರು ಮತ ಚಲಾಯಿಸಿರುವುದು ಭಾರತದಲ್ಲಿ ಸಂಸದೀಯ ಅಭ್ಯಾಸಗಳ ಮೇಲೆ ಜನರಿಗೆ ಎಷ್ಟು ನಂಬಿಕೆ ಇದೆ ಎಂಬುದನ್ನು ತೋರಿಸುತ್ತದೆ. ಮತ್ತು ಇದರಲ್ಲಿ, ಮಹಿಳೆಯರ ಗರಿಷ್ಠ ಭಾಗವಹಿಸುವಿಕೆಯು ಒಂದು ಪ್ರಮುಖ ಅಂಶವಾಗಿದೆ. 2019ರ ಚುನಾವಣೆಯಲ್ಲಿ ಭಾರತೀಯ ಮಹಿಳೆಯರು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಸ್ನೇಹಿತರೇ, ಸಂಖ್ಯೆಯಲ್ಲಿ ಮಾತ್ರವಲ್ಲ, ರಾಜಕೀಯ ಪ್ರಾತಿನಿಧ್ಯದ ದೃಷ್ಟಿಯಿಂದಲೂ, ಭಾರತದ ಚುನಾವಣೆಗಳಂತಹ ಉದಾಹರಣೆಯನ್ನು ನೀವು ಜಗತ್ತಿನಲ್ಲಿ ಕಾಣಲು ಸಾಧ್ಯವಿಲ್ಲ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ 600ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. ಈ ಚುನಾವಣೆಗಳಲ್ಲಿ, ಒಂದು ಕೋಟಿಗೂ ಹೆಚ್ಚು ಅಂದರೆ 10 ದಶಲಕ್ಷ ಸರ್ಕಾರಿ ನೌಕರರು ಚುನಾವಣಾ ಕೆಲಸಕ್ಕೆ ಕೊಡುಗೆ ನೀಡಿದ್ದಾರೆ. ಚುನಾವಣೆಗಾಗಿ ದೇಶದಲ್ಲಿ 1 ದಶಲಕ್ಷ ಅಥವಾ 10 ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಸ್ನೇಹಿತರೇ,
ಕಾಲಕ್ಕೆ ತಕ್ಕಂತೆ ಭಾರತವು ಚುನಾವಣಾ ಪ್ರಕ್ರಿಯೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿದೆ. ಭಾರತವು ಸುಮಾರು 25 ವರ್ಷಗಳಿಂದ ವಿದ್ಯುನ್ಮಾನ ಮತದಾನ ಯಂತ್ರಗಳು- ಇವಿಎಂಗಳನ್ನು ಬಳಸುತ್ತಿದೆ. ಇವಿಎಂ ಬಳಕೆಯೊಂದಿಗೆ, ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ದಕ್ಷತೆ ಎರಡೂ ಹೆಚ್ಚಾಗಿವೆ. ಭಾರತದಲ್ಲಿ, ಮತ ಎಣಿಕೆ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಚುನಾವಣಾ ಫಲಿತಾಂಶಗಳನ್ನು ಘೋಷಿಸಲಾಗುತ್ತದೆ. ಈಗ ನಾನು ನಿಮಗೆ ಇನ್ನೊಂದು ಅಂಕಿಅಂಶವನ್ನು ನೀಡುತ್ತಿದ್ದೇನೆ. ಇದನ್ನು ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಮುಂದಿನ ವರ್ಷ ಭಾರತದಲ್ಲಿ ಮತ್ತೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಎಂದು ನಿಮಗೆ ತಿಳಿದಿರಬೇಕು. 100 ಕೋಟಿ ಮತದಾರರು ಅಂದರೆ 1 ಶತಕೋಟಿ ಜನರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ʻಪಿ-20ʼ ಶೃಂಗಸಭೆಯ ಎಲ್ಲಾ ಪ್ರತಿನಿಧಿಗಳಿಗೆ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳನ್ನು ವೀಕ್ಷಿಸಲು ಬರುವಂತೆ ನಾನು ಮುಂಚಿತವಾಗಿ ಆಹ್ವಾನ ನೀಡುತ್ತೇನೆ. ಭಾರತವು ಮತ್ತೊಮ್ಮೆ ನಿಮಗೆ ಆತಿಥ್ಯ ವಹಿಸಲು ತುಂಬಾ ಸಂತೋಷಪಡುತ್ತದೆ.
ಸ್ನೇಹಿತರೇ,
ಕೆಲವೇ ದಿನಗಳ ಹಿಂದೆ, ಭಾರತದ ಸಂಸತ್ತು ಬಹಳ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಂಡಿದೆ, ಅದರ ಬಗ್ಗೆ ನಾನು ನಿಮಗೆ ಅರಿವು ಮೂಡಿಸಲು ಬಯಸುತ್ತೇನೆ. ಭಾರತವು ತನ್ನ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ. ಭಾರತದಲ್ಲಿ ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳಲ್ಲಿ ಸುಮಾರು 32 ಲಕ್ಷ ಅಂದರೆ 3 ದಶಲಕ್ಷಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳಿದ್ದಾರೆ. ಇವರಲ್ಲಿ ಶೇ.50ರಷ್ಟು ಮಹಿಳಾ ಪ್ರತಿನಿಧಿಗಳಿದ್ದಾರೆ. ಇಂದು, ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತಿದೆ. ನಮ್ಮ ಸಂಸತ್ತು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವು ನಮ್ಮ ಸಂಸದೀಯ ಸಂಪ್ರದಾಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.
ಸ್ನೇಹಿತರೇ,
ಭಾರತದ ಸಂಸದೀಯ ಸಂಪ್ರದಾಯಗಳಲ್ಲಿ ದೇಶವಾಸಿಗಳ ಅಚಲ ನಂಬಿಕೆಗೆ ಮತ್ತೊಂದು ನಿರ್ಣಾಯಕ ಕಾರಣವಿದೆ, ಇದನ್ನು ನೀವು ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ವೈವಿಧ್ಯತೆ, ನಮ್ಮ ವಿಶಾಲತೆ ಮತ್ತು ನಮ್ಮ ಚೈತನ್ಯದಲ್ಲಿದೆ ನಮ್ಮ ಶಕ್ತಿಯು ಅಡಗಿದೆ. ನಮ್ಮಲ್ಲಿ ಎಲ್ಲಾ ಧರ್ಮದ ಜನರಿದ್ದಾರೆ. ನೂರಾರು ರೀತಿಯ ಆಹಾರ, ನೂರಾರು ಜೀವನ ವಿಧಾನಗಳು ನಮ್ಮ ಅಸ್ಮಿತೆಯಾಗಿವೆ. ಭಾರತದಲ್ಲಿ ನೂರಾರು ಭಾಷೆಗಳನ್ನು ಮಾತನಾಡುತ್ತಾರೆ; ನಮ್ಮಲ್ಲಿ ನೂರಾರು ಉಪಭಾಷೆಗಳಿವೆ. ಭಾರತದಲ್ಲಿ 900ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳಿದ್ದು, 28 ಭಾಷೆಗಳಲ್ಲಿ ಜನರಿಗೆ ಕ್ಷಣಕ್ಷಣದ ಮಾಹಿತಿಯನ್ನು ಒದಗಿಸಲು 24×7 ಕಾರ್ಯನಿರ್ವಹಿಸುತ್ತಿವೆ. ಸುಮಾರು 200 ಭಾಷೆಗಳಲ್ಲಿ 33 ಸಾವಿರಕ್ಕೂ ಹೆಚ್ಚು ವಿವಿಧ ಪತ್ರಿಕೆಗಳು ಇಲ್ಲಿ ಪ್ರಕಟವಾಗುತ್ತವೆ. ನಾವು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಮಾರು 3 ಶತಕೋಟಿ ಬಳಕೆದಾರರನ್ನು ಹೊಂದಿದ್ದೇವೆ. ಇದು ಭಾರತದಲ್ಲಿ ಮಾಹಿತಿಯ ಹರಿವು ಹಾಗೂ ವಾಕ್ ಸ್ವಾತಂತ್ರ್ಯದ ಮಟ್ಟ ಎಷ್ಟು ಬೃಹತ್ ಮತ್ತು ಶಕ್ತಿಯುತವಾಗಿದೆ ಎಂಬುದನ್ನು ತೋರಿಸುತ್ತದೆ. 21ನೇ ಶತಮಾನದ ಈ ಜಗತ್ತಿನಲ್ಲಿ, ಭಾರತದ ಈ ಚೈತನ್ಯ, ವೈವಿಧ್ಯತೆಯಲ್ಲಿ ಏಕತೆ ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಹುರುಪು ಪ್ರತಿ ಸವಾಲಿನ ವಿರುದ್ಧ ಹೋರಾಡಲು ಮತ್ತು ಪ್ರತಿಯೊಂದು ಸಮಸ್ಯೆಯನ್ನು ಒಟ್ಟಿಗೆ ಪರಿಹರಿಸಲು ನಮಗೆ ಸ್ಫೂರ್ತಿ ನೀಡುತ್ತದೆ.
ಸ್ನೇಹಿತರೇ,
ಇಂದು ವಿಶ್ವದ ವಿವಿಧ ಮೂಲೆಗಳಲ್ಲಿ ಏನೇ ನಡೆದರು ಅದರ ಪರಿಣಾಮವನ್ನು ಎಲ್ಲರೂ ಎದುರಿಸುತ್ತಾರೆ. ಇಂದು ಜಗತ್ತು ಸಂಘರ್ಷಗಳು ಮತ್ತು ಘರ್ಷಣೆಗಳಿಂದಾಗಿ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಬಿಕ್ಕಟ್ಟುಗಳಿಂದ ತುಂಬಿರುವ ಈ ಜಗತ್ತು ಯಾರ ಹಿತಾಸಕ್ತಿಯನ್ನೂ ಪೂರೈಸುವುದಿಲ್ಲ. ವಿಭಜಿತ ಜಗತ್ತು ಮಾನವೀಯತೆ ಎದುರಿಸುತ್ತಿರುವ ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು ಸಾಧ್ಯವಿಲ್ಲ. ಇದು ಶಾಂತಿ ಮತ್ತು ಸಹೋದರತ್ವದ ಸಮಯ; ಒಟ್ಟಿಗೆ ಸಾಗುವ ಮತ್ತು ಒಟ್ಟಿಗೆ ಮುಂದುವರಿಯುವ ಸಮಯ. ಇದು ಎಲ್ಲರ ಬೆಳವಣಿಗೆ ಮತ್ತು ಯೋಗಕ್ಷೇಮದ ಸಮಯ. ನಾವು ಜಾಗತಿಕ ವಿಶ್ವಾಸದ ಕೊರತೆಯನ್ನು ನಿವಾರಿಸಬೇಕು ಮತ್ತು ಮಾನವ ಕೇಂದ್ರಿತ ಚಿಂತನೆಯಲ್ಲಿ ಮುಂದುವರಿಯಬೇಕು. ನಾವು ಜಗತ್ತನ್ನು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಮನೋಭಾವದಿಂದ ನೋಡಬೇಕು. ಜಗತ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚಿನ ಭಾಗವಹಿಸುವಿಕೆ ಇದ್ದರೆ ಪರಿಣಾಮವೂ ದೊಡ್ಡದಾಗಿರುತ್ತದೆ. ಈ ನಿಟ್ಟಿನಲ್ಲಿ, ಭಾರತವು ಆಫ್ರಿಕನ್ ಒಕ್ಕೂಟವನ್ನು ʻಜಿ -20ʼಯ ಖಾಯಂ ಸದಸ್ಯನನ್ನಾಗಿ ಮಾಡಲು ಪ್ರಸ್ತಾಪಿಸಿತು. ಎಲ್ಲಾ ಸದಸ್ಯ ರಾಷ್ಟ್ರಗಳು ಇದನ್ನು ಒಪ್ಪಿಕೊಂಡಿರುವುದು ನನಗೆ ಸಂತೋಷ ತಂದಿದೆ. ಈ ವೇದಿಕೆಯಲ್ಲಿ ಇಡೀ ಆಫ್ರಿಕಾ ಒಕ್ಕೂಟದ ಸಂಸತ್ತಿನ ಭಾಗವಹಿಸುವಿಕೆಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ.
ಸ್ನೇಹಿತರೇ,
ನಮ್ಮ ಸ್ಪೀಕರ್ ಓಂ ಬಿರ್ಲಾ ಜೀ ಅವರು ಇಂದು ಸಂಜೆ ನಿಮ್ಮನ್ನು ಭಾರತದ ಹೊಸ ಸಂಸತ್ ಭವನಕ್ಕೆ ಕರೆದೊಯ್ಯಲಿದ್ದಾರೆ ಎಂದು ನಾನು ಕೇಳಲ್ಪಟ್ಟೆ. ಅಲ್ಲಿ ನೀವು ಪೂಜ್ಯ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲಿದ್ದೀರಿ. ನಿಮಗೆ ತಿಳಿದಿರುವಂತೆ ಭಾರತವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಭಯೋತ್ಪಾದಕರು ಭಾರತದಲ್ಲಿ ಸಾವಿರಾರು ಮುಗ್ಧ ಜನರನ್ನು ಕೊಂದಿದ್ದಾರೆ. ಹೊಸ ಸಂಸತ್ ಕಟ್ಟಡದ ಸಮೀಪದಲ್ಲಿ ನೀವು ಭಾರತದ ಹಳೆಯ ಸಂಸತ್ತನ್ನು ಸಹ ನೋಡುತ್ತೀರಿ. ಸುಮಾರು 20 ವರ್ಷಗಳ ಹಿಂದೆ, ಭಯೋತ್ಪಾದಕರು ನಮ್ಮ ಸಂಸತ್ತನ್ನು ಗುರಿಯಾಗಿಸಿ ದಾಳಿ ಮಾಡಿದ್ದರು. ಮತ್ತು ಆ ಸಮಯದಲ್ಲಿ ಸಂಸತ್ತಿನ ಅಧಿವೇಶನ ನಡೆಯುತ್ತಿತ್ತು ಎಂದು ತಿಳಿದರೆ ನಿಮಗೆ ಆಘಾತವಾಗಬಹುದು. ಭಯೋತ್ಪಾದಕರು ಸಂಸದರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು, ಅವರನ್ನು ಕೊಲ್ಲಲು ಯೋಜಿಸಿದ್ದರು. ಇಂತಹ ಅನೇಕ ಭಯೋತ್ಪಾದಕ ಕೃತ್ಯಗಳನ್ನು ಎದುರಿಸಿದ ನಂತರ ಭಾರತವು ಇಂದು ಈ ಎತ್ತರಕ್ಕೆ ತಲುಪಿದೆ. ಭಯೋತ್ಪಾದನೆ ಜಗತ್ತಿಗೆ ಎಷ್ಟು ದೊಡ್ಡ ಸವಾಲಾಗಿದೆ ಎಂಬುದನ್ನು ಈಗ ಜಗತ್ತು ಅರಿತುಕೊಂಡಿದೆ. ಭಯೋತ್ಪಾದಕರು ಎಲ್ಲೇ ದಾಳಿ ಮಾಡಿದರೂ, ಯಾವುದೇ ಕಾರಣಕ್ಕಾಗಿ ಮತ್ತು ಯಾವುದೇ ರೂಪದಲ್ಲಿ ಮಾಡಿದರೂ ಅದು ಮಾನವೀಯತೆಗೆ ವಿರುದ್ಧವಾದುದು. ಅಂತಹ ಸನ್ನಿವೇಶದಲ್ಲಿ, ಭಯೋತ್ಪಾದನೆಗೆ ಸಂಬಂಧಿಸಿದಂತೆ ನಾವೆಲ್ಲರೂ ಯಾವಾಗಲೂ ಅತ್ಯಂತ ಕಠಿಣ ಧೋರಣೆ ಹೊಂದಿರಬೇಕು. ಆದಾಗ್ಯೂ, ಇದಕ್ಕೆ ಮತ್ತೊಂದು ಜಾಗತಿಕ ಆಯಾಮವಿದೆ, ಅದರ ಬಗ್ಗೆ ನಾನು ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಭಯೋತ್ಪಾದನೆಯ ವ್ಯಾಖ್ಯಾನದ ಬಗ್ಗೆ ಒಮ್ಮತವಿಲ್ಲ ಎಂಬುದು ತುಂಬಾ ದುಃಖದ ವಿಚಾರ. ಇಂದಿಗೂ ʻಭಯೋತ್ಪಾದನೆಯನ್ನು ಎದುರಿಸುವ ಅಂತರರಾಷ್ಟ್ರೀಯ ಒಪ್ಪಂದʼವು ವಿಶ್ವಸಂಸ್ಥೆಯಲ್ಲಿ ಒಮ್ಮತಕ್ಕಾಗಿ ಕಾಯುತ್ತಿದೆ. ಮಾನವಕುಲದ ಶತ್ರುಗಳು ವಿಶ್ವದ ಈ ನಡೆಯ ಲಾಭವನ್ನು ಪಡೆಯುತ್ತಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ನಾವು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದರ ಬಗ್ಗೆ ವಿಶ್ವದಾದ್ಯಂತದ ಸಂಸತ್ತುಗಳು ಮತ್ತು ಪ್ರತಿನಿಧಿಗಳು ಯೋಚಿಸಬೇಕಾಗಿದೆ.
ಸ್ನೇಹಿತರೇ,
ವಿಶ್ವದ ಸವಾಲುಗಳನ್ನು ಎದುರಿಸಲು ಸಾರ್ವಜನಿಕ ಭಾಗವಹಿಸುವಿಕೆಗಿಂತ ಉತ್ತಮ ಮಾಧ್ಯಮ ಬೇರೊಂದಿಲ್ಲ. ಸರ್ಕಾರಗಳು ರೂಪುಗೊಳ್ಳುವುದು ಬಹುಮತದಿಂದ, ಆದರೆ ದೇಶವನ್ನು ನಡೆಸುವುದು ಒಮ್ಮತದಿಂದ ಎಂಬುದು ನನ್ನ ನಂಬಿಕೆ. ನಮ್ಮ ಸಂಸತ್ತುಗಳು ಮತ್ತು ಈ ʻಪಿ 20 ʼವೇದಿಕೆ ಕೂಡ ಈ ಭಾವನೆಯನ್ನು ಬಲಪಡಿಸಬಹುದು. ಚರ್ಚೆ ಮತ್ತು ಸಂವಾದಗಳ ಮೂಲಕ ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ನಮ್ಮ ಪ್ರಯತ್ನಗಳು ಖಂಡಿತವಾಗಿಯೂ ಯಶಸ್ವಿಯಾಗುತ್ತವೆ. ಭಾರತದಲ್ಲಿ ನಿಮ್ಮ ವಾಸ್ತವ್ಯವು ಆಹ್ಲಾದಕರವಾಗಿರುತ್ತದೆ ಎಂಬ ಖಾತರಿ ನನಗಿದೆ. ನಾನು ಮತ್ತೊಮ್ಮೆ ಈ ಶೃಂಗಸಭೆಗೆ ಮತ್ತು ಭಾರತದಲ್ಲಿ ಆಹ್ಲಾದಕರ ಪ್ರಯಾಣಕ್ಕಾಗಿ ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ.
ಅನಂತ ಧನ್ಯವಾದಗಳು.
ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.
******
(Release ID: 1968038)
Visitor Counter : 153
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Malayalam