ಸಂಪುಟ ಕಾರ್ಯಾಲಯ
ಸಿಕ್ಕಿಂನಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ ಸಿ ಎಂ ಸಿ)
ಪ್ರಕಟಣಾ ದಿನಾಂಕ:
09 OCT 2023 4:05PM by PIB Bengaluru
ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ ಸಿ ಎಂ ಸಿ) ಸಭೆಯು ಸಿಕ್ಕಿಂನ ಪರಿಸ್ಥಿತಿಯನ್ನು ಪರಿಶೀಲಿಸಿತು.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಸೇರಿದ ಸಿಕ್ಕಿಂನ ಮುಖ್ಯ ಕಾರ್ಯದರ್ಶಿ, ಬಹುತೇಕ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಹವಾಮಾನ ಪರಿಸ್ಥಿತಿಗಳಲ್ಲಿ ಸುಧಾರಣೆ ಕಂಡುಬಂದಿದ್ದು ಇದರ ಪರಿಣಾಮವಾಗಿ, ಅಪಾಯದಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಮತ್ತು ಅವರ ಏರ್ ಲಿಫ್ಟಿಂಗ್ ಪ್ರಾರಂಭಿಸಲು ಸಾಧ್ಯವಾಗಿದೆ. ಇಂದು ಬೆಳಗ್ಗೆ 80 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದರು. ಪರಿಹಾರ ಮತ್ತು ರಕ್ಷಣಾ ಕ್ರಮಗಳ ಬಗ್ಗೆಯೂ ಅವರು ಸಮಿತಿಗೆ ವಿವರಿಸಿದರು. 28 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಮತ್ತು 6,800 ಕ್ಕೂ ಹೆಚ್ಚು ಜನರು ಅವುಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದರು. ಇದಲ್ಲದೆ, ಸಂತ್ರಸ್ತ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳು, ಔಷಧಿಗಳು ಮತ್ತು ಎಲ್ ಪಿ ಜಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಮುನ್ಸೂಚನೆಯ ಪ್ರಕಾರ ಅಕ್ಟೋಬರ್ 11 ರಿಂದ 13 ರವರೆಗೆ ಹವಾಮಾನವು ಅನುಕೂಲಕರವಾಗಿರುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕರು ಮಾಹಿತಿ ನೀಡಿದರು. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ರಾಜ್ಯದಲ್ಲಿ 6 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎನ್ ಡಿ ಆರ್ ಎಫ್ ಮಹಾನಿರ್ದೇಶಕರು ಸಮಿತಿಗೆ ವಿವರಿಸಿದರು. ಇದಲ್ಲದೆ, ಎನ್ ಡಿ ಆರ್ ಎಫ್ ನ 3 ಮೀಸಲು ತಂಡಗಳು ಸಿಲಿಗುರಿಯಲ್ಲಿ ಬದಲಿ ವ್ಯವಸ್ಥೆಗಾಗಿ ಲಭ್ಯವಿವೆ. ರಕ್ಷಣಾ ಮತ್ತು ಪುನಃಸ್ಥಾಪನೆ ಪ್ರಯತ್ನಗಳಲ್ಲಿ ರಾಜ್ಯಕ್ಕೆ ಸಹಾಯ ಮಾಡಲು ಸಾಕಷ್ಟು ಸಂಖ್ಯೆಯ ತಂಡಗಳು ಮತ್ತು ಸೇನೆ ಮತ್ತು ವಾಯುಪಡೆಯ ಸ್ವತ್ತುಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವು ಉನ್ನತ ಮಟ್ಟದಲ್ಲಿ ಪರಿಸ್ಥಿತಿಯನ್ನು ದಿನದ 24 ಗಂಟೆಯೂ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಗೃಹ ಕಾರ್ಯದರ್ಶಿ ಹೇಳಿದರು. ಪರಿಸ್ಥಿತಿಯ ಅವಲೋಕನಕ್ಕಾಗಿ ಅಂತರ್ ಮಂತ್ರಿಗಳ ಸಮನ್ವಯ ತಂಡ (ಐಎಂಸಿಟಿ) ಸಿಕ್ಕಿಂ ತಲುಪಿದೆ ಎಂದು ಅವರು ಸಮಿತಿಗೆ ತಿಳಿಸಿದರು. ಸಿಕ್ಕಿಂ ಸರ್ಕಾರಕ್ಕೆ ಅಗತ್ಯ ಹೆಚ್ಚುವರಿ ಕೇಂದ್ರದ ನೆರವು ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ಏಜೆನ್ಸಿಗಳು ಮತ್ತು ಸಿಕ್ಕಿಂ ಸರ್ಕಾರದ ಪರಿಹಾರ ಮತ್ತು ರಕ್ಷಣಾ ಕ್ರಮಗಳನ್ನು ಪರಿಶೀಲಿಸಿದ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರು ಕಡಿಮೆ ಸಮಯದಲ್ಲಿ ಜನರನ್ನು ಸ್ಥಳಾಂತರಿಸುವುದು ಸಿಕ್ಕಿಂ ಸರ್ಕಾರ ಮತ್ತು ಕೇಂದ್ರ ಏಜೆನ್ಸಿಗಳಿಗೆ ಆದ್ಯತೆಯಾಗಿರಬೇಕು ಎಂದು ಒತ್ತಿ ಹೇಳಿದರು. ಸೇತುವೆಗಳು ಕೊಚ್ಚಿಹೋಗಿರುವ ಕಡೆ ಜನರಿಗೆ ರಸ್ತೆ ಸಂಪರ್ಕವನ್ನು ಪುನಃಸ್ಥಾಪಿಸಲು ಬೈಲಿ ಸೇತುವೆಗಳನ್ನು ಆದ್ಯತೆಯ ಮೇಲೆ ನಿರ್ಮಿಸಬೇಕು ಎಂದು ಅವರು ತಿಳಿಸಿದರು. ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ ಮತ್ತು ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಸಂಪುಟ ಕಾರ್ಯದರ್ಶಿ ಭರವಸೆ ನೀಡಿದರು.
ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಸಿಕ್ಕಿಂನ ಮುಖ್ಯ ಕಾರ್ಯದರ್ಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿ, ಮಿಲಿಟರಿ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಸದಸ್ಯ ಕಾರ್ಯದರ್ಶಿ, ಎನ್ ಡಿ ಎಂ ಎ, ಸಿ ಐ ಎಸ್ ಸಿ, ಐ ಡಿ ಎಸ್, ಡಿಜಿ ಎನ್ ಡಿ ಆರ್ ಎಫ್, ಡಿಜಿ ಎಂಒ, ಡಿಜಿ ಐಎಂಡಿ, ಡಿಡಿಜಿ ಬಿ ಆರ್ ಒ ಮತ್ತು ಗೃಹ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
****
(ಪ್ರಕಟಣೆ ಐ.ಡಿ.: 1966002)
ವಿಸಿಟರ್ ಕೌಂಟರ್ : 141