ಪ್ರಧಾನ ಮಂತ್ರಿಯವರ ಕಛೇರಿ
ಮಹತ್ವಾಕಾಂಕ್ಷೆಯ ಜಿಲ್ಲೆಗಳ 'ಸಂಕಲ್ಪ ಸಪ್ತಾಹ' ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
Posted On:
30 SEP 2023 6:29PM by PIB Bengaluru
ಕೇಂದ್ರ ಸಚಿವ ಸಂಪುಟದ ನನ್ನ ಎಲ್ಲ ಸಹೋದ್ಯೋಗಿಗಳು, ಸರ್ಕಾರಿ ಅಧಿಕಾರಿಗಳು, ನೀತಿ ಆಯೋಗದ ಸಹೋದ್ಯೋಗಿಗಳು, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಲಕ್ಷಾಂತರ ಒಡನಾಡಿಗಳು, ವಿವಿಧ ಬ್ಲಾಕ್‌ಗಳಲ್ಲಿ ತಳಮಟ್ಟದ ಸಂಪರ್ಕ ಹೊಂದಿರುವವರು ಮತ್ತು ಈ ವಿಷಯದ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲಾ ಪ್ರತಿನಿಧಿಗಳನ್ನು ನಾನಿಂದು ಈ ಕಾರ್ಯಕ್ರಮದಲ್ಲಿ ಸ್ವಾಗತಿಸುತ್ತೇನೆ. ಈ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ನಾನು ವಿಶೇಷವಾಗಿ ನೀತಿ ಆಯೋಗವನ್ನು ಅಭಿನಂದಿಸುತ್ತೇನೆ. ನಾನು ನಿಮಗೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ನೀವು ಭಾರತ ಮಂಟಪದಲ್ಲಿ ಉಪಸ್ಥಿತರಿದ್ದೀರಿ. ಇದು ದೇಶ ಮತ್ತು ಭಾರತ ಸರ್ಕಾರದ ಕಾರ್ಯವಿಧಾನವನ್ನು ತೋರಿಸುತ್ತಿದೆ. ಜಿ-20 ಶೃಂಗಸಭೆ ನಡೆದ ಕೇವಲ 1 ತಿಂಗಳೊಳಗೆ, ದೇಶದ ಕುಗ್ರಾಮಗಳ ಬಗ್ಗೆ ಕಾಳಜಿಯುಳ್ಳವರು, ನಿರ್ಲಕ್ಷಿತ ಕುಟುಂಬಗಳ ಬಗ್ಗೆ ಕಾಳಜಿ ಹೊಂದಿರುವವರು ಮತ್ತು ಅವರ ಯೋಗಕ್ಷೇಮಕ್ಕಾಗಿ ನೀತಿಗಳನ್ನು ಮುಂದಿಡಲು ಕೆಲಸ ಮಾಡುವ ಜನರು ಇಲ್ಲಿದ್ದಾರೆ. ಇಲ್ಲಿ ಜನರು ಜಗತ್ತಿಗೆ ನಿರ್ದೇಶನ ನೀಡಲು ಕೆಲಸ ಮಾಡುತ್ತಿದ್ದಾರೆ. ಅಂದರೆ, ಕ್ಯಾನ್ವಾಸ್ ವ್ಯಾಪ್ತಿಯನ್ನು ನೋಡೋಣ. ಇದೇ ತಿಂಗಳಲ್ಲಿ ಭಾರತ ಮಂಟಪದಲ್ಲಿ ಜಾಗತಿಕ ನಾಯಕರು ಸಾಮೂಹಿಕವಾಗಿ ಜಾಗತಿಕ ಕಾಳಜಿಯನ್ನು ತಿಳಿಸುತ್ತಿದ್ದರು. ಇಂದು ಅದೇ ಭಾರತ ಮಂಟಪದಲ್ಲಿ, ನನ್ನ ದೇಶದಲ್ಲಿ ತಳಮಟ್ಟದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿರುವ, ಶಕ್ತಿಯನ್ನು ತರಲು ಮತ್ತು ಉತ್ಸಾಹದಿಂದ ಕೆಲಸ ಮಾಡುತ್ತಿರುವ ಲಕ್ಷಾಂತರ ಒಡನಾಡಿಗಳನ್ನು ಭೇಟಿಯಾಗುತ್ತಿದ್ದೇನೆ. ಇದು ನನಗೆ ಹೆಮ್ಮೆಯ ವಿಷಯ. ನನಗೆ, ಈ ಶೃಂಗಸಭೆಯು ಜಿ-20ಕ್ಕಿಂತ ಏನೂ ಕಡಿಮೆಯಿಲ್ಲ.
ಅನೇಕ ಜನರು ನಮ್ಮೊಂದಿಗೆ ಆನ್‌ಲೈನ್‌ನಲ್ಲಿ ಸಂಪರ್ಕ ಹೊಂದಿದ್ದಾರೆ. ಈ ಕಾರ್ಯಕ್ರಮವು 'ಟೀಮ್ ಇಂಡಿಯಾ' ಯಶಸ್ಸಿನ ಸಂಕೇತವಾಗಿದೆ, ಇದು 'ಸಬ್ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಮನೋಭಾವದ ಸಂಕೇತವಾಗಿದೆ. ಈ ಕಾರ್ಯಕ್ರಮವು ಭಾರತದ ಭವಿಷ್ಯಕ್ಕಾಗಿ ಮುಖ್ಯವಾಗಿದೆ, ಇದರ ಯಶಸ್ಸು ಅದರ ನಿರ್ಣಯದಲ್ಲಿ ಅಂತರ್ಗತವಾಗಿರುತ್ತದೆ, ಅದು ಅದರ ಪ್ರತಿಬಿಂಬವೂ ಆಗಿದೆ.
ಸ್ನೇಹಿತರೆ,
ಸ್ವಾತಂತ್ರ್ಯಾ ನಂತರ ಜಾರಿಗೆ ತಂದ ಟಾಪ್ 10 ಯೋಜನೆಗಳ ಕುರಿತು ಅಧ್ಯಯನ ನಡೆಸಿದಾಗಲೆಲ್ಲಾ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ. ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮ, ಮಹತ್ವಾಕಾಂಕ್ಷೆಯ ಜಿಲ್ಲಾ ಅಭಿಯಾನವು ದೇಶದ 112 ಜಿಲ್ಲೆಗಳಲ್ಲಿ 25 ಕೋಟಿಗೂ ಹೆಚ್ಚು ಜನರ ಜೀವನ ಪರಿವರ್ತಿಸಿದೆ. ಜೀವನದ ಗುಣಮಟ್ಟದಲ್ಲಿ ಬದಲಾವಣೆಯಾಗಿದೆ, ಆಡಳಿತದ ಸುಗಮತೆಯಲ್ಲಿ ಬದಲಾವಣೆಯಾಗಿದೆ. ಜೀವನವನ್ನು ಹೇಗಾದರೂ ಬದುಕೋಣ, ನಾವು ಹೀಗೆ ಬದುಕಬೇಕು ಎಂದು ಹೇಳುತ್ತಿದ್ದವರು ಈಗ ಹೆಜ್ಜೆ ಹಾಕುವ ಮನಸ್ಥಿತಿಯಲ್ಲಿದ್ದಾರೆ. ಈ ಸಮಾಜವು ಇನ್ನು ಮುಂದೆ ಹಾಗೆಯೇ ಇರಲು ಬಯಸುವುದಿಲ್ಲ, ಅವರು ಪರಿವರ್ತನೆ ಮಾಡಲು ಬಯಸುತ್ತಾರೆ. ಇದು ಅವರ ಮನಸ್ಥಿತಿ. ಇದು ಒಂದು ದೊಡ್ಡ ಶಕ್ತಿ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಈ ಅಭಿಯಾನದ ಯಶಸ್ಸು ಈಗ ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮಕ್ಕೆ ಭದ್ರ ಬುನಾದಿಯಾಗಿದೆ. ಜಿಲ್ಲಾ ಮಟ್ಟದ ಅನುಭವವು ಎಷ್ಟು ಯಶಸ್ವಿಯಾಗಿದೆ ಎಂದರೆ ವಿಶ್ವದ ಅಭಿವೃದ್ಧಿ ಮಾದರಿಗಳನ್ನು ಚರ್ಚಿಸುವ ಪ್ರತಿಯೊಬ್ಬರೂ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನೇಕ ಪಾಠಗಳನ್ನು ಸೂಚಿಸುತ್ತಿದ್ದಾರೆ. ಅದರಿಂದ ನಾವೂ ಸಾಕಷ್ಟು ಕಲಿತಿದ್ದೇವೆ, ಅದರಿಂದ 500 ಬ್ಲಾಕ್‌ಗಳಲ್ಲಿ ಪ್ರತಿ ರಾಜ್ಯದಲ್ಲಿ ಎಲ್ಲೆಲ್ಲಿ ಒಂದು ನಿಯತಾಂಕದ ಅಡಿ ಮೌಲ್ಯಮಾಪನ ಮಾಡಲಾಗಿದೆ ಎಂಬ ಆಲೋಚನೆ ಬಂದಿದೆ. ನಾವು ಅದನ್ನು ರಾಜ್ಯದ ಸರಾಸರಿಗೆ ತಂದರೆ, ಅದನ್ನು ರಾಷ್ಟ್ರೀಯ ಸರಾಸರಿಗೆ ತೆಗೆದುಕೊಂಡರೆ, ಬದಲಾವಣೆಯು ಎಷ್ಟು ಮಹತ್ವದ್ದಾಗಿದೆ, ಫಲಿತಾಂಶವು ಎಷ್ಟು ಮಹತ್ವದ್ದಾಗಿದೆ ಎಂದು ನೀವೇ ಊಹಿಸಬಹುದು. ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವು ಯಶಸ್ಸಿನ ಪತಾಕೆ ಹಾರಿಸಿದಂತೆ, ಆಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮವು ಸಹ 100 ಪ್ರತಿಶತ ಯಶಸ್ವಿಯಾಗಲಿದೆ ಎಂದು ನಾನು ನಂಬುತ್ತೇನೆ. ಈ ಯೋಜನೆಯು ಅದ್ಭುತವಾಗಿರುವುದರಿಂದ ಮಾತ್ರವಲ್ಲ, ಅದರ ಮೇಲೆ ಕೆಲಸ ಮಾಡುವ ಜನರು ಅದ್ಭುತವಾಗಿದ್ದಾರೆ.
ಸ್ವಲ್ಪ ಸಮಯದ ಹಿಂದೆ, ನಾನು ಮೂವರು ಸಹೋದ್ಯೋಗಿಗಳೊಂದಿಗೆ ಸಂವಾದ ನಡೆಸುತ್ತಿದ್ದೆ. ನೀವು ಸಂವಾದವನ್ನು ಕೇಳಿದ್ದೀರಿ. ಅವರ ಆತ್ಮವಿಶ್ವಾಸ ನೋಡಿ. ತಳಮಟ್ಟದಲ್ಲಿ ಕೆಲಸ ಮಾಡುವ ಈ ಸಹೋದ್ಯೋಗಿಗಳ ಆತ್ಮಸ್ಥೈರ್ಯವನ್ನು ನೋಡಿದಾಗ, ನನ್ನ ಆತ್ಮವಿಶ್ವಾಸವು ಹಲವು ಪಟ್ಟ ಹೆಚ್ಚಾಗುತ್ತದೆ. ನೆಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು ಕೇವಲ ಪದಗಳಲ್ಲಿ ಅಲ್ಲ, ನಾನು ಸಂಪೂರ್ಣವಾಗಿ ನಿಮ್ಮೊಂದಿಗೆ ನಿಂತಿದ್ದೇನೆ. ನೀವು 2 ಹೆಜ್ಜೆ ಹಾಕಿದರೆ, ನಾನು 3 ಹೆಜ್ಜೆ ಇಡಲು ಸಿದ್ಧ, ನೀವು 12 ಗಂಟೆಗಳ ಕಾಲ ಕೆಲಸ ಮಾಡಿದರೆ, ನಾನು 13 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧ. ನಾನು ನಿಮ್ಮ ಜೊತೆಗಾರನಾಗಿ, ನಿಮ್ಮ ತಂಡದ ಸದಸ್ಯನಾಗಿ ಕೆಲಸ ಮಾಡಲು ಬಯಸುತ್ತೇನೆ. ತಂಡವಾಗಿ ನಾವು ಈ ಮಹತ್ವಾಕಾಂಕ್ಷೆಯ ಬ್ಲಾಕ್‌ನ ಯಶಸ್ಸನ್ನು ಸಾಧಿಸುತ್ತೇವೆ ಎಂಬ ವಿಶ್ವಾಸವಿ ನನಗಿದೆ. ನಾವು 2 ವರ್ಷಗಳ ಸಮಯ ನಿಗದಿಪಡಿಸಿದರೆ, ನಾವು ಅದನ್ನು ಒಂದೂವರೆ ವರ್ಷದಲ್ಲಿ ಮಾಡುತ್ತೇವೆ ಎಂಬುದು ನನಗೆ ಖಾತ್ರಿಯಿದೆ. ಒಂದೂವರೆ ವರ್ಷ ನಿಗದಿ ಮಾಡಿದ್ದರೆ ಒಂದೇ ವರ್ಷದಲ್ಲಿ ಮಾಡುತ್ತೇವೆ. ಇದು ನನ್ನ ದೃಢವಾದ ನಂಬಿಕೆ. ಒಂದು ಅಥವಾ ಎರಡು ವಾರಗಳಲ್ಲಿ ಕೆಲವು ಬ್ಲಾಕ್‌ಗಳು ಹೊರಹೊಮ್ಮುತ್ತವೆ ಎಂಬುದು ನನಗೆ ಖಾತ್ರಿಯಿದೆ, ಅದು ಕನಿಷ್ಠ ಒಂದು ನಿಯತಾಂಕದಲ್ಲಿ ಸಾಮಾನ್ಯ ಸ್ಥಿತಿಯ ಸರಾಸರಿಗಿಂತ ಹೆಚ್ಚಿನದನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅವರು ಅದನ್ನು ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಏಕೆಂದರೆ ನಾನು ಪ್ರತಿದಿನ ವಿಷಯಗಳನ್ನು ವಿವರವಾಗಿ ಗಮನಿಸುತ್ತೇನೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ನಾನು ನಿಮ್ಮ ಪರೀಕ್ಷಿಸುತ್ತಿದ್ದೇನೆ ಎಂಬ ಕಾರಣಕ್ಕಾಗಿ ಅಲ್ಲ, ಆದರೆ ನಿಮ್ಮ ಯಶಸ್ಸನ್ನು ನಾನು ನೋಡಿದಾಗ, ಆ ದಿನ ನನ್ನ ಕೆಲಸದ ಸಾಮರ್ಥ್ಯ ಹೆಚ್ಚಾಗುತ್ತದೆ, ನನ್ನ ಉತ್ಸಾಹವು ಹೆಚ್ಚಾಗುತ್ತದೆ. ನನಗೂ ಅನಿಸುತ್ತದೆ, "ನೀವು ತುಂಬಾ ಕೆಲಸ ಮಾಡುತ್ತೀರಿ, ನಾನು ಸ್ವಲ್ಪ ಹೆಚ್ಚು ಮಾಡುತ್ತೇನೆ." ಅದಕ್ಕಾಗಿಯೇ ನಾನು ಚಾರ್ಟ್ ಅನ್ನು ನೋಡುತ್ತಲೇ ಇರುತ್ತೇನೆ ಇದರಿಂದ ಚಾರ್ಟ್ ಸ್ವತಃ ನನ್ನ ಸ್ಫೂರ್ತಿ, ನನ್ನ ಶಕ್ತಿಯಾಗುತ್ತಿದೆ.
ಆದ್ದರಿಂದ ಸ್ನೇಹಿತರೆ,
ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವು 5 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಮೂರನೇ ವ್ಯಕ್ತಿಯ ಏಜೆನ್ಸಿಯು ಕಾರ್ಯಕ್ರಮ ಮೌಲ್ಯಮಾಪನ ಮಾಡಿದಾಗ, ಅವರು ತೃಪ್ತಿ ವ್ಯಕ್ತಪಡಿಸುತ್ತಾರೆ. ಸಕ್ರಿಯವಾಗಿ ತೊಡಗಿಸಿಕೊಂಡವರು ಸಂತೃಪ್ತಿಯ ಸ್ವಾಭಾವಿಕ ಅರ್ಥವನ್ನು ಕಂಡುಕೊಳ್ಳುತ್ತಾರೆ. ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವು ನಿರ್ಧರಿಸುವ ಮತ್ತೊಂದು ಅಂಶವೆಂದರೆ, ಉತ್ತಮ ಆಡಳಿತದ ಮೂಲಭೂತ ತತ್ವಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಸವಾಲಿನ ಉದ್ದೇಶಗಳನ್ನು ಸಹ ಸಾಧಿಸಬಹುದು. ಈ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮಕ್ಕಾಗಿ ನಾವು ನೇರವಾದ ಕಾರ್ಯತಂತ್ರ ಬಳಸಿದ್ದೇವೆ.
ಯಾರಾದರೂ ಅನಾರೋಗ್ಯಕ್ಕೆ ಒಳಗಾದಾಗ ಅವರು ವೈದ್ಯರನ್ನು ಭೇಟಿ ಮಾಡುವುದನ್ನು ನೀವು ಗಮನಿಸಿದ್ದೀರಿ. ಪರೀಕ್ಷೆಯ ನಂತರ, ಗಂಭೀರವಾದ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಆರಂಭದಲ್ಲಿ ನಂಬಬಹುದು, ಆದರೆ ತುರ್ತು ಇದ್ದರೆ, ರೋಗಿಯು ತನ್ನ ರೋಗನಿರೋಧಕ ಶಕ್ತಿ ಬಲಪಡಿಸುವವರೆಗೆ ಕಾಯಲು ಸಲಹೆ ನೀಡಬಹುದು, ದೇಹವು ಕಾರ್ಯಾಚರಣೆಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತದೆ ಎಂದು ಖಚಿತಪಡಿಸುತ್ತದೆ. ಅವನ ಸಾಮರ್ಥ್ಯವನ್ನು ಬಲಪಡಿಸುವುದು ಅವಶ್ಯಕ. ವೈದ್ಯರು ಚಿಕಿತ್ಸೆ, ಸಹಾಯವನ್ನು ನೀಡುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ರೋಗಿಯನ್ನು ಸಿದ್ಧಪಡಿಸುತ್ತಾರೆ. ದೇಹವು ಸ್ಪಂದಿಸುವ ಮತ್ತು ಶಸ್ತ್ರಚಿಕಿತ್ಸೆಗೆ ಸಿದ್ಧವಾದಾಗ ಮಾತ್ರ ವೈದ್ಯರು ಮುಂದುವರಿಯುತ್ತಾರೆ, ಅಲ್ಲಿಯವರೆಗೆ ಅನಗತ್ಯ ಮಧ್ಯಸ್ಥಿಕೆಗಳನ್ನು ತಪ್ಪಿಸುತ್ತಾರೆ. ಯಾವುದೇ ಪ್ರಮುಖ ವೈದ್ಯಕೀಯ ವಿಧಾನಗಳನ್ನು ಪರಿಗಣಿಸುವ ಮೊದಲು ಪ್ರತಿ ಅಂಗವು ಸರಿಯಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ರೋಗಿಯ ದೇಹವು ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಎಂದು ಅವನು ಖಚಿತಪಡಿಸುತ್ತಾರೆ. ಪ್ರತಿಯೊಂದು ಅಂಗವು ಸರಿಯಾಗಿ ಕಾರ್ಯ ನಿರ್ವಹಿಸುವವರೆಗೆ ಯಾರನ್ನೂ ಸಂಪೂರ್ಣವಾಗಿ ಆರೋಗ್ಯವಂತರೆಂದು ಪರಿಗಣಿಸಲಾಗುವುದಿಲ್ಲ. ವೈದ್ಯರು ರೋಗಿಯ ಒಟ್ಟಾರೆ ಆರೋಗ್ಯವನ್ನು ನಿರ್ಣಯಿಸುವಂತೆಯೇ, ತೂಕ, ಎತ್ತರ ಮತ್ತು ಪ್ರಮುಖ ಚಿಹ್ನೆಗಳಂತಹ ವಿವಿಧ ನಿಯತಾಂಕಗಳನ್ನು ಪರಿಗಣಿಸಿ, ನಮ್ಮ ದೇಶವನ್ನು ಕೆಲವು ರಾಷ್ಟ್ರೀಯ ಸೂಚಕಗಳ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ ಎಂದು ಗ್ರಹಿಸಲಾಗುತ್ತಿದೆ. ಆದಾಗ್ಯೂ, ದೇಹದಲ್ಲಿನ ಒಂದು ಅಸಮರ್ಪಕ ಅಂಗವು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆಯೇ, ದೇಶದೊಳಗಿನ ನಿರ್ದಿಷ್ಟ ಪ್ರದೇಶಗಳ ಅಭಿವೃದ್ಧಿಯು ಪ್ರಗತಿಯ ಒಟ್ಟಾರೆ ಗ್ರಹಿಕೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ದೇಹದ ಒಂದು ಭಾಗವು ಕೆಲಸ ಮಾಡದಿದ್ದರೆ, ಅದನ್ನು ಆರೋಗ್ಯಕರವೆಂದು ಪರಿಗಣಿಸಬಹುದೇ? ಖಂಡಿತವಾಗಿಯೂ ಅಲ್ಲ! ಅದೇ ರೀತಿ 2,4, 10 ಜಿಲ್ಲೆಗಳು ಅಥವಾ 2, 4 ಬ್ಲಾಕ್‌ಗಳು ಹಿಂದುಳಿದರೆ ಏನಾಗುತ್ತದೆ? ಆದ್ದರಿಂದ, ವೈದ್ಯರು ರೋಗಿಯ ಸಂಪೂರ್ಣ ದೇಹವನ್ನು ಉದ್ದೇಶಿಸಿ ಕೆಲಸ ಮಾಡುವಂತೆ, ನಾವು ಸಹ ಪ್ರತಿಯೊಂದು ಅಂಗಗಳ ಆರೋಗ್ಯವನ್ನು ಖಾತ್ರಿಪಡಿಸುವ ಮೂಲಕ ನಮ್ಮ ಇಡೀ ದೇಹದ ಆರೋಗ್ಯವನ್ನು ಪರಿಗಣಿಸುತ್ತೇವೆ.
ಅಂತೆಯೇ, ಒಂದು ಕುಟುಂಬದಲ್ಲಿ, ಒಬ್ಬ ಸದಸ್ಯರು ಅಸ್ವಸ್ಥರಾಗಿದ್ದರೆ, ಇಡೀ ಕುಟುಂಬದ ಗಮನ ಮತ್ತು ಸಂಪನ್ಮೂಲಗಳು ಆ ವ್ಯಕ್ತಿಯ ಸುತ್ತ ಸುತ್ತುತ್ತವೆ. ನಾವು ಇತರ ಎಲ್ಲ ವಿಷಯಗಳೊಂದಿಗೆ ರಾಜಿ ಮಾಡಿಕೊಳ್ಳಬೇಕು. ವ್ಯಕ್ತಿಯ ಆರೋಗ್ಯವು ಕುಟುಂಬದ ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಒಬ್ಬರು ಹೊರಗೆ ಹೋಗುವುದನ್ನು ನಿಲ್ಲಿಸಬೇಕು. ಕುಟುಂಬವು ಸಂಪೂರ್ಣವಾಗಿ ಆರೋಗ್ಯವಾಗಿದ್ದರೆ ಮಾತ್ರ ಕುಟುಂಬವು ತನ್ನ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಅಂತೆಯೇ, ಜಿಲ್ಲೆಗಳು, ಗ್ರಾಮಗಳು ಮತ್ತು ಪ್ರದೇಶಗಳ ಅಭಿವೃದ್ಧಿಯು ಒಟ್ಟಾರೆಯಾಗಿ ಇಡೀ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುತ್ತವೆ. ಹಾಗೆಯೇ, ನಾವು ನಮ್ಮ ಜಿಲ್ಲೆ, ನಮ್ಮ ಗ್ರಾಮ, ನಮ್ಮ ತಹಸೀಲ್‌ನ ಸರ್ವತೋಮುಖ ಅಭಿವೃದ್ಧಿ, ಸರ್ವತೋಮುಖ ಅಭಿವೃದ್ಧಿ, ಸರ್ವ ಪ್ರಯೋಜನಕಾರಿಯಾದ ಅಭಿವೃದ್ಧಿ ಮಾಡದಿದ್ದರೆ, ಅಂಕಿಅಂಶಗಳು ಸುಧಾರಣೆಯನ್ನು ತೋರಿಸಿದರೂ ಮೂಲಭೂತ ಬದಲಾವಣೆ ಸಾಧ್ಯವಿಲ್ಲ. ಆದರೆ ನಿಜವಾದ ತೃಪ್ತಿ ಮತ್ತು ಪರಿವರ್ತನೆ ತರುವುದಿಲ್ಲ. ಪ್ರಮುಖ ಸಮಸ್ಯೆಗಳನ್ನು ಪರಿಹರಿಸಿದಾಗ ಬದಲಾವಣೆ ಬರುತ್ತದೆ ಮತ್ತು ಅಭಿವೃದ್ಧಿಯು ತಳಹಂತವನ್ನು ತಲುಪುತ್ತದೆ. ಇಂದು, ಈ ಶೃಂಗಸಭೆಯಲ್ಲಿ ನನ್ನೊಂದಿಗೆ ಕುಳಿತಿರುವ ಜನರನ್ನು ನೋಡಿದರೆ, ಅದರ ಹಿಂದಿನ ಉದ್ದೇಶವನ್ನು ನೀವು ನೋಡಬಹುದು. ಭಾರತ ಸರ್ಕಾರದ ಉನ್ನತ ತಂಡವು ಇಲ್ಲಿ ಉಪಸ್ಥಿತರಿದ್ದು, ನೀತಿ ನಿರೂಪಣೆಯಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಯದರ್ಶಿಗಳು ಇಲ್ಲಿದ್ದಾರೆ.
ಈಗ ನನ್ನ ಮುಂದೆ 2 ಆಯ್ಕೆಗಳಿವೆ. ಉನ್ನತ ತಂಡದ ಪರಿಣಾಮಕಾರಿತ್ವ ಖಚಿತಪಡಿಸಿಕೊಳ್ಳಲು ನಾನು ಅವರ ಹಿಂದಿನ ಶಕ್ತಿಯನ್ನು ಒಟ್ಟುಗೂಡಿಸಬೇಕೇ ಅಥವಾ ತಳಹಂತವನ್ನು ಬಲಪಡಿಸಲು ನಾನು ಕೆಲಸ ಮಾಡಬೇಕೇ? ನನ್ನ ಗಮನ ತಳಮಟ್ಟದಲ್ಲಿ ಶಕ್ತಿಗಾಗಿ ಕೆಲಸ ಮಾಡುತ್ತಿದೆ. ನಾನು ತಳಮಟ್ಟದಲ್ಲಿ ಬಲಪಡಿಸುವ ಮಾರ್ಗವನ್ನು ಆರಿಸಿಕೊಂಡಿದ್ದೇನೆ. ತಳಮಟ್ಟದ ಶಕ್ತಿಯ ಮೂಲಕ ನಮ್ಮ ಪಿರಮಿಡ್ ಅಥವಾ ಗೋಪುರ ಏರುತ್ತದೆ. ಅಭಿವೃದ್ಧಿಯ ಅತ್ಯಂತ ಕಡಿಮೆ ಹಂತವಾದ ನೆಲೆಗಟ್ಟನ್ನು ಹೆಚ್ಚು ಅಭಿವೃದ್ಧಿಪಡಿಸಿದರೆ, ಫಲಿತಾಂಶಗಳು ಹೆಚ್ಚು ಮಹತ್ವದ್ದಾಗಿರುತ್ತವೆ ಎಂದು ನಾನು ನಂಬುತ್ತೇನೆ. ಆದ್ದರಿಂದ, ಈ ರೀತಿಯಲ್ಲಿ ಅಭಿವೃದ್ಧಿಯನ್ನು ಮುಂದುವರಿಸುವುದು ನಮ್ಮ ಪ್ರಯತ್ನವಾಗಿದೆ. ಇದು ನಮ್ಮ ಪ್ರಯತ್ನವಾಗಬೇಕು.
ಅದೇ ರೀತಿ, ಅಭಿವೃದ್ಧಿ ಬ್ಲಾಕ್ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದು ಇಲ್ಲಿ ಹಾಜರಿರುವ ಸರ್ಕಾರಿ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ನಾವು 2 ದಿಕ್ಕುಗಳಲ್ಲಿ ಕೆಲಸ ಮಾಡಬಹುದು. ಪ್ರತಿ ಇಲಾಖೆಯು ತನ್ನ ಕೆಲಸವನ್ನು ಪರಿಗಣಿಸಬಹುದು. ಈ ಕೆಲಸ ಮುಂದುವರಿಸಲು ದೇಶಾದ್ಯಂತ 100 ಬ್ಲಾಕ್‌ಗಳನ್ನು ಗುರುತಿಸೋಣ. ಅವರು ಇಡೀ ಜಗತ್ತನ್ನು ನೋಡಬೇಕಾಗಿಲ್ಲ. ತಮ್ಮ ಇಲಾಖೆಯಲ್ಲಿ ಯಾವ ಬ್ಲಾಕ್‌ಗಳು ಹಿಂದುಳಿದಿವೆ ಎಂಬುದನ್ನು ಗುರುತಿಸಬೇಕು. ಉದಾಹರಣೆಗೆ, ಇಡೀ ದೇಶದಲ್ಲಿ 100 ಬ್ಲಾಕ್‌ಗಳು ಆರೋಗ್ಯದಲ್ಲಿ ಅತ್ಯಂತ ಹಿಂದುಳಿದಿವೆ ಎಂದು ಭಾವಿಸಿದರೆ, ಭಾರತ ಸರ್ಕಾರದ ಆರೋಗ್ಯ ಇಲಾಖೆಯು ಆ 100 ಬ್ಲಾಕ್‌ಗಳಲ್ಲಿನ ಪರಿಸ್ಥಿತಿ ಸುಧಾರಿಸಲು ಕಾರ್ಯತಂತ್ರ ರೂಪಿಸುತ್ತದೆ. ಶಿಕ್ಷಣ ಇಲಾಖೆಯು ತನ್ನ ಇಲಾಖೆಗೆ 100 ಬ್ಲಾಕ್‌ಗಳನ್ನು ಆಯ್ಕೆ ಮಾಡಬಹುದು. ಭಾರತ ಸರ್ಕಾರದ ಶಿಕ್ಷಣ ಇಲಾಖೆಯು ಅತ್ಯಂತ ಹಿಂದುಳಿದಿರುವ 100 ಬ್ಲಾಕ್‌ಗಳನ್ನು ಗುರುತಿಸಿರುವುದನ್ನು ನೋಡಬಹುದು. ಈ ಮಹತ್ವಾಕಾಂಕ್ಷೆಯ ಜಿಲ್ಲೆ ಅಥವಾ ಮಹತ್ವಾಕಾಂಕ್ಷೆಯ ಬ್ಲಾಕ್ ನೀತಿ ಆಯೋಗದ ಕಾರ್ಯಕ್ರಮವಾಗುವುದು ನನಗೆ ಇಷ್ಟವಿಲ್ಲ. ನಾನು ಅದನ್ನು ಸರ್ಕಾರದ ಸ್ವರೂಪ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ವರೂಪ, ಕೇಂದ್ರ ಮತ್ತು ರಾಜ್ಯಗಳ ಇಲಾಖೆಗಳ ಸ್ವರೂಪ ಎಂದು ನೋಡಲು ಬಯಸುತ್ತೇನೆ.
ನನ್ನ ಪ್ರದೇಶದಲ್ಲಿನ ಕೊನೆಯ 100 ಬ್ಲಾಕ್‌ಗಳು ಈಗ ಸರಾಸರಿಗಿಂತ ಹೆಚ್ಚಿವೆ ಎಂದು ಎಲ್ಲಾ ಇಲಾಖೆಗಳು ನಿರ್ಧರಿಸಿದಾಗ, ಎಲ್ಲಾ ನಿಯತಾಂಕಗಳು ಬದಲಾಗುತ್ತಿರುವುದನ್ನು ನೀವು ನೋಡುತ್ತೀರಿ. ಆದ್ದರಿಂದ, ಮಹತ್ವಾಕಾಂಕ್ಷೆಯ ಬ್ಲಾಕ್‌ನಲ್ಲಿ ಕೆಲಸ ಮಾಡುವ ಕಾರ್ಯವಿಧಾನವು ರಾಜ್ಯಗಳು ಮತ್ತು ಜಿಲ್ಲೆಗಳ ಘಟಕಗಳ ಮೂಲಕ ಇರುತ್ತದೆ. ಆದರೆ ನಾವು ಈ ಚಿಂತನೆಯನ್ನು ದೇಶಾದ್ಯಂತ ಮುನ್ನಡೆಸಬಹುದೇ? ಆ ದಿಕ್ಕಿನಲ್ಲಿ ನಾವು ಪ್ರಯತ್ನಗಳನ್ನು ಮಾಡಬೇಕು ಎಂದು ನಾನು ನಂಬುತ್ತೇನೆ. ಈ ರೀತಿಯಾಗಿ, ಎಲ್ಲಾ ವಿಭಾಗಗಳಲ್ಲಿ ಕೌಶಲ್ಯ ಅಭಿವೃದ್ಧಿ ಇದ್ದರೆ, ಭಾರತದ ಯಾವ 100 ಬ್ಲಾಕ್‌ಗಳು ನನ್ನ ಗಮನ ಬಯಸುತ್ತವೆ ಎಂಬುದನ್ನು ಸಹ ಅವರು ನೋಡಬೇಕು. ಅದೇ ರೀತಿ, ಇಡೀ ರಾಜ್ಯದಲ್ಲಿ ತೀರಾ ಹಿಂದುಳಿದಿರುವ 100 ಗ್ರಾಮಗಳನ್ನು ರಾಜ್ಯ ಸರಕಾರಗಳು ಆಯ್ಕೆ ಮಾಡಬೇಕು. ಅವುಗಳನ್ನು ಒಂದು ಅಥವಾ ಎರಡು ತಿಂಗಳ ನಂತರ ಮೌಲ್ಯಮಾಪನ ಮಾಡಬೇಕು, ಸಮಸ್ಯೆಗಳನ್ನು ಹೇಗೆ ಪರಿಹರಿಸಲಾಗುತ್ತದೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ. ಅಲ್ಲಿ ಸಿಬ್ಬಂದಿ ಇಲ್ಲದಿದ್ದರೆ ನೇಮಕಾತಿಯ ಅವಶ್ಯಕತೆ ಇದೆ, ಆದ್ದರಿಂದ ನೇಮಕಾತಿ ನಡೆಸಬೇಕು. ಯುವ ಅಧಿಕಾರಿಗಳನ್ನು ಕರೆ ತರಬೇಕಾದರೆ ಯುವ ಅಧಿಕಾರಿಗಳನ್ನು ನೇಮಿಸಬೇಕು. ಅವರು ತಮ್ಮ 100 ಹಳ್ಳಿಗಳಲ್ಲಿನ ಸಮಸ್ಯೆಗಳನ್ನು ಒಂದು ತಿಂಗಳೊಳಗೆ ಯಶಸ್ವಿಯಾಗಿ ಪರಿಹರಿಸಲು ಸಾಧ್ಯವಾದರೆ, ಆ ಮಾದರಿಯನ್ನು ಅವರ 1000 ಹಳ್ಳಿಗಳಿಗೆ ವಿಳಂಬವಿಲ್ಲದೆ ಪುನರಾವರ್ತಿಸಬಹುದು ಮತ್ತು ಫಲಿತಾಂಶವನ್ನು ಸಾಧಿಸಬಹುದು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದ್ದು, 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ, ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಕಾಣಲು ನಾವು ಬಯಸುತ್ತೇವೆ. ಅಭಿವೃದ್ಧಿ ಹೊಂದಿದ ದೇಶವಾಗಿ ನಾವು ದೆಹಲಿ, ಮುಂಬೈ, ಚೆನ್ನೈನಲ್ಲಿ ವೈಭವವನ್ನು ಕೇಂದ್ರೀಕರಿಸುತ್ತೇವೆ ಮತ್ತು ನಮ್ಮ ಹಳ್ಳಿಗಳನ್ನು ಬಿಟ್ಟುಬಿಡುತ್ತೇವೆ ಎಂದರ್ಥವಲ್ಲ. ನಾವು 1.4 ಬಿಲಿಯನ್ ಜನರ ಭವಿಷ್ಯವನ್ನು ಒಳಗೊಂಡಿರುವ ಮಾದರಿಯೊಂದಿಗೆ ನಡೆಯಲು ಬಯಸುತ್ತೇವೆ. ನಾವು ಅವರ ಜೀವನ ಬದಲಾಯಿಸಲು ಬಯಸುತ್ತೇವೆ. ಅದಕ್ಕಾಗಿ ಮಾನದಂಡಗಳನ್ನು ರೂಪಿಸುವುದಕ್ಕೆ ಸಂಬಂಧಿಸಿದಂತೆ ಅವರಲ್ಲಿ ಸ್ಪರ್ಧೆಯ ಪ್ರಜ್ಞೆ ಇರಬೇಕು ಎಂದು ನಾನು ಬಯಸುತ್ತೇನೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಪ್ರಗತಿಯನ್ನು ನಾನು ನಿಯಮಿತವಾಗಿ ಪರಿಶೀಲಿಸುತ್ತಿದ್ದಾಗ, ಅದು ನನಗೆ ತುಂಬಾ ಸಂತೋಷ ತಂದಿತು. ಮೊದಲನೆಯದಾಗಿ, ದತ್ತಾಂಶ ಭರ್ತಿ ಮಾಡುವಲ್ಲಿ ಯಾವುದೇ ಅನುಕೂಲವಿಲ್ಲ. ಯಾವುದೇ ಸೌಲಭ್ಯವಿಲ್ಲದೆ ಈ ಕೆಲಸ ಮಾಡಬಹುದು. ನೆಲದ ಮೇಲೆ ಪರಿಶೀಲಿಸಿದ ಮಾಹಿತಿಯು ಲಭ್ಯವಾಗುವವರೆಗೆ, ಅಂತಹ ಅಂಕಿಅಂಶಗಳನ್ನು ತುಂಬುವುದರಲ್ಲಿ ಯಾವುದೇ ಅರ್ಥವಿಲ್ಲ. ಇನ್ನಾದರೂ ಈ ಕೆಲಸ ಆಗಬೇಕಿದೆ. ಆದಾಗ್ಯೂ, ಕೆಲವು ಜಿಲ್ಲೆಯ ಅಧಿಕಾರಿಗಳು ಎಷ್ಟು ಉತ್ಸಾಹದಿಂದ ಇದ್ದಾರೆಂದರೆ, ಅವರು ಪ್ರತಿ 2 ಅಥವಾ 3 ದಿನಗಳಿಗೊಮ್ಮೆ ತಮ್ಮ ಕಾರ್ಯಕ್ಷಮತೆಯನ್ನು ಅಪ್‌ಲೋಡ್ ಮಾಡುತ್ತಾರೆ, ಸುಧಾರಣೆ ತರಲು ನಿರಂತರವಾಗಿ ಕೆಲಸ ಮಾಡುತ್ತಾರೆ. ನಂತರ, ಮೊದಲ 6 ತಿಂಗಳಲ್ಲಿ, ಒಂದು ಜಿಲ್ಲೆ ಮುಂದೆ ಸಾಗುತ್ತಿರುವಂತೆ ತೋರುತ್ತಿದೆ ಎಂಬುದನ್ನು ನಾನು ನೋಡುತ್ತೇನೆ. ಆದರೆ, ಅದು 24-48 ಗಂಟೆಗಳಲ್ಲಿ ಅವು ಹಿಂದುಳಿದಿವೆ ಎಂದು ನಾನು ಕಂಡುಕೊಳ್ಳುತ್ತೇನೆ. ಅದು ಬೇರೊಬ್ಬರ ಹಿಂದೆ ಬಿದ್ದಿದ್ದರೆ, ಅದು ಮತ್ತೊಮ್ಮೆ ಮುನ್ನಡೆಯುತ್ತಿದೆ ಎಂದು 72 ಗಂಟೆಗಳಲ್ಲಿ ನನಗೆ ತಿಳಿಯುತ್ತದೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಅಂತಹ ಸಕಾರಾತ್ಮಕ ಮತ್ತು ಸ್ಪರ್ಧಾತ್ಮಕ ಸ್ವಭಾವವು ಫಲಿತಾಂಶಗಳನ್ನು ನೀಡುವಲ್ಲಿ ಗಮನಾರ್ಹ ಬದಲಾವಣೆ ತಂದಿತು. ಇದರಿಂದ ಬಹುದೊಡ್ಡ ಲಾಭ ಏನೆಂದರೆ, ಈ ಹಿಂದೆ ಗುಜರಾತ್‌ನಲ್ಲಿ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ಕಛ್ ಜಿಲ್ಲೆಯಲ್ಲಿ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿದರೆ ಅವರ ಸಹೋದ್ಯೋಗಿಗಳೆಲ್ಲ ಕೇಳುತ್ತಿದ್ದರು, ‘‘ನಿಮಗೆ ಸರಕಾರದೊಂದಿಗೆ ತಕರಾರು ಇದೆಯೇ? ಮುಖ್ಯಮಂತ್ರಿಗೆ ಅಸಮಾಧಾನವಿದೆಯೇ? ನೀವು? ನಿಮಗೆ ರಾಜಕೀಯ ಸಮಸ್ಯೆಗಳೇನಾದರೂ ಇದೆಯೇ? ನಿಮಗೆ ಶಿಕ್ಷೆಯ ಪೋಸ್ಟಿಂಗ್ ಅನ್ನು ಏಕೆ ನೀಡಲಾಗಿದೆ?" ಅವರ ಸಹೋದ್ಯೋಗಿಗಳು ಅವನನ್ನು ಕೀಟಲೆ ಮಾಡುತ್ತಿದ್ದರು. ಅವನ ಅವನತಿ ಶುರುವಾಯಿತು ಎಂದು ನಂಬಲು ಪ್ರಾರಂಭಿಸುತ್ತಾರೆ. ಆದರೆ, ಕಛ್ ಜಿಲ್ಲೆಯಲ್ಲಿ ಭೂಕಂಪನದ ನಂತರ, ಉತ್ತಮ ಅಧಿಕಾರಿಗಳನ್ನು ತರಬೇಕಾದ ಅಗತ್ಯವಿದ್ದಾಗ, ಎಲ್ಲರಿಗೂ ಪ್ರೋತ್ಸಾಹ ನೀಡಲಾಯಿತು. ಆಗ ಕರೆ ತಂದವರು ಈಗ ಗುಜರಾತ್ ಸರ್ಕಾರದ ಅತ್ಯಂತ ಪ್ರೀತಿಯ ಅಧಿಕಾರಿಗಳೆಂದು ಪರಿಗಣಿಸಲ್ಪಟ್ಟಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಕಛ್ ಜಿಲ್ಲೆಯಲ್ಲಿ ಯಾರಿಗಾದರೂ ಅಪಾಯಿಂಟ್‌ಮೆಂಟ್ ಸಿಕ್ಕರೆ ಅವರನ್ನು ಸರ್ಕಾರದ ಒಲವು ಹೊಂದಿರುವ ಅಧಿಕಾರಿ ಎಂದು ಪರಿಗಣಿಸಲಾಗುತ್ತಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಿಂದೆ ಶಿಕ್ಷೆಯ ಪೋಸ್ಟ್ ಎಂದು ಪರಿಗಣಿಸಲ್ಪಟ್ಟ ಸ್ಥಳವು ಅತ್ಯಂತ ಗೌರವಾನ್ವಿತ ಸ್ಥಳವಾಗಿದೆ, ಇದು ಸಾಧ್ಯವಾಗಿದೆ.
ಸಾಮಾನ್ಯವಾಗಿ ಸಾಕಷ್ಟು ವಯಸ್ಸಾದ ಮತ್ತು ದಣಿದಿರುವ ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಜನರು "ಓಹ್, ಈ ಜಿಲ್ಲೆ ನಿಷ್ಪ್ರಯೋಜಕವಾಗಿದೆ, ಅದು ಇರಲಿ" ಎಂದು ಹೇಳಬಹುದು. ಆದರೆ ನಾವು ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಯುವ ಅಧಿಕಾರಿಗಳನ್ನು ತರಲು ಪ್ರಾರಂಭಿಸಿದಾಗಿನಿಂದ, ಅವರ ಉತ್ಸಾಹ, ಏನನ್ನಾದರೂ ಮಾಡಲು ಉತ್ಸುಕರಾಗಿದ್ದರು. 3 ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದರೆ, ಸರ್ಕಾರವು ಅವರಿಗೆ ಉತ್ತಮ ಸ್ಥಾನ ನೀಡುತ್ತದೆ ಎಂದು ನಂಬಿದ್ದರಿಂದ ಫಲಿತಾಂಶಗಳು ವೇಗವಾಗಿ ಗೋಚರಿಸಲಾರಂಭಿಸಿದವು. ಅದು ನಿಖರವಾಗಿ ಏನಾಯಿತು. ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಕೆಲಸ ಮಾಡಿದ ಜನರು ನಂತರ ಉತ್ತಮ ಸ್ಥಾನಗಳನ್ನು ಪಡೆದರು!
ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಿಗೆ ಸಂಬಂಧಿಸಿದಂತೆ, ನಾನು ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತೇನೆ, ಭಾರತ ಸರ್ಕಾರದ ಅಧಿಕಾರಿಗಳು ಗಮನ ಹರಿಸುವಂತೆ ಒತ್ತಾಯಿಸುತ್ತೇನೆ. ಬ್ಲಾಕ್ ವ್ಯಾಪ್ತಿಯಲ್ಲಿ ಯಶಸ್ವಿಯಾಗುವವರಿಗೆ, ವಿಶೇಷವಾಗಿ ಅಧಿಕಾರಿಗಳಿಗೆ ಉಜ್ವಲ ಭವಿಷ್ಯವಿದೆ. ಅವರೇ ನೆಲೆಗಟ್ಟಿನಲ್ಲಿ ನೈಜ ಫಲಿತಾಂಶ ತರುತ್ತಿದ್ದು, ಈ ತಂಡಗಳನ್ನು ಪ್ರೋತ್ಸಾಹಿಸಿ ಮುನ್ನಡೆಯಬೇಕು.
ಎರಡನೆಯದಾಗಿ, ಉತ್ಪಾದನೆಯ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವ ಸಂಪ್ರದಾಯವನ್ನು ಸರ್ಕಾರದಲ್ಲಿ ಸ್ಥಾಪಿಸಲಾಗಿದೆ ಎಂಬುದನ್ನು ನೀವು ಗಮನಿಸಿರಬೇಕು. ಎಷ್ಟು ಬಜೆಟ್ ಮೀಸಲಿಟ್ಟಿದೆ, ಎಲ್ಲಿಗೆ ಹೋಯಿತು, ಎಷ್ಟು ಖರ್ಚಾಗಿದೆ ಎಂಬುದೇ ಎಲ್ಲವೂ ಆಗಿತ್ತು. ಫಲಿತಾಂಶವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಸಾಧನೆ ಎಂದು ಪರಿಗಣಿಸಲಾಗಿದೆ. 2014ರ ನಂತರ ನಾವು ಫಲಿತಾಂಶದ ಬಜೆಟ್ ಪರಿಚಯಿಸಲು ಪ್ರಾರಂಭಿಸಿದ್ದೇವೆ ಎಂಬುದನ್ನು ನೀವು ಗಮನಿಸಿರಬೇಕು. ಬಜೆಟ್ ಜೊತೆಗೆ, ಫಲಿತಾಂಶದ ಬಗ್ಗೆ ವರದಿ ಪ್ರಾರಂಭಿಸಲಾಯಿತು. ಫಲಿತಾಂಶಗಳಿಗೆ(ಔಟ್ ಪುಟ್)ಗೆ ಒತ್ತು ನೀಡಿದ್ದರಿಂದ ಗಮನಾರ್ಹವಾದ ಗುಣಾತ್ಮಕ ಬದಲಾವಣೆ ಸಂಭವಿಸಿದೆ. ಈಗ ನಮ್ಮ ಬ್ಲಾಕ್‌ನ ನಿರ್ದಿಷ್ಟ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ, ಸಮಯ ಮತ್ತು ಮಾನವಶಕ್ತಿಯು ವಾಸ್ತವವಾಗಿ ಯಾವುದೇ ಫಲಿತಾಂಶಗಳನ್ನು ನೀಡುತ್ತಿದೆಯೇ ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ. ಇದು ಕೇವಲ ಸಂಪನ್ಮೂಲಗಳ ಹಂಚಿಕೆ ಬಗ್ಗೆ ಅಲ್ಲ, ಇದು ಫಲಿತಾಂಶಗಳನ್ನು ಸಾಧಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ.
ಹಣವು ಕೆಲಸವನ್ನು ಖಾತ್ರಿಗೊಳಿಸುತ್ತದೆ ಎಂಬ ಕೆಲವರ ನಂಬಿಕೆಗೆ ವಿರುದ್ಧವಾಗಿ, ನನ್ನ ವ್ಯಾಪಕ ಅನುಭವ ಬೇರೆ ರೀತಿಯಲ್ಲಿ ಹೇಳುತ್ತದೆ, ನನ್ನ ಸ್ನೇಹಿತರೇ, ಇಷ್ಟು ದಿನ ಸರ್ಕಾರ ನಡೆಸಿದ ನನ್ನ ಅನುಭವದಿಂದ, ಬದಲಾವಣೆಯು ಕೇವಲ ಬಜೆಟ್‌ನಿಂದ ಬರುವುದಿಲ್ಲ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಸಂಪನ್ಮೂಲಗಳ ಅತ್ಯುತ್ತಮ ಬಳಕೆ ಮತ್ತು ಒಮ್ಮುಖದ ಮೇಲೆ ನಾವು ಗಮನ ಹರಿಸಿದರೆ, ಹೊಸ ನಿಧಿಗಳಿಗಾಗಿ ಕಾಯದೆ ನಮ್ಮ ಬ್ಲಾಕ್‌ನಲ್ಲಿ ನಾವು ಅಭಿವೃದ್ಧಿ ತರಬಹುದು. ಮನ್ರೇಗಾ ಅಡಿ ನಡೆಯುತ್ತಿರುವ ಕೆಲಸದ ಉದಾಹರಣೆಯನ್ನು ತೆಗೆದುಕೊಳ್ಳೋಣ. ಮನ್ರೇಗಾ ಕೆಲಸವು ನನ್ನ ಅಭಿವೃದ್ಧಿಯ ವಿನ್ಯಾಸದೊಂದಿಗೆ ಹೊಂದಿಕೆಯಾಗುತ್ತದೆ ಎಂದು ನಾನು ಯೋಜಿಸಿದ್ದೇನೆಯೇ? ನನ್ನ ಅಭಿವೃದ್ಧಿಯ ವಿನ್ಯಾಸಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ನಾನು ಮನ್ರೇಗಾ ಕೆಲಸವನ್ನು ನಿರ್ವಹಿಸುತ್ತೇನೆ. ನಾನು ರಸ್ತೆಗೆ ಮಣ್ಣು ಹಾಕಬೇಕಾದರೆ, ಆ ನಿರ್ದಿಷ್ಟ ರಸ್ತೆಯಲ್ಲಿ ಮಣ್ಣು ಹಾಕಲು ನಾನು ಮನ್ರೇಗಾ ಕೆಲಸ ಬಳಸುತ್ತೇನೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇನೆ. ಈ ರೀತಿ, ನನ್ನ ಅರ್ಧದಷ್ಟು ರಸ್ತೆ ಕೆಲಸ ಮುಗಿದಿದೆ ಮತ್ತು ಒಮ್ಮುಖವಾಗಿವೆ. ಉದಾಹರಣೆಗೆ, ನೀರಿನ ಅಭಾವ ಎದುರಿಸುತ್ತಿರುವ ಪ್ರದೇಶಗಳಿವೆ. ನೀವು ವರ್ಷದಲ್ಲಿ 3-4 ತಿಂಗಳು ನೀರಿಗಾಗಿ ಪರದಾಡಬೇಕಾಗುತ್ತದೆ. ಆದರೆ ನೀವು ಮನ್ರೇಗಾ ಅಡಿ, ಹೆಚ್ಚಿನ ಸಂಖ್ಯೆಯ ಕೆರೆಗಳನ್ನು ನಿರ್ಮಿಸುವುದು, ಹೆಚ್ಚು ನೀರು ಸಂಗ್ರಹಿಸುವುದು, ಕಾರ್ಯಾಚರಣೆ ಮಾದರಿಯಲ್ಲಿ ಕೆಲಸ ಮಾಡುವತ್ತ ಗಮನ ಹರಿಸಲು ನಿರ್ಧರಿಸಿದರೆ, ನೀರಿನ ಕೊರತೆಯಿಂದ ಆ 4 ತಿಂಗಳಲ್ಲಿ ಹಿಂದುಳಿದ 25 ಹಳ್ಳಿಗಳ ಸಮಸ್ಯೆಗಳು ಬಗೆಹರಿಯುತ್ತವೆ. ಒಮ್ಮುಖ(ಕನ್ವರ್ಜನ್ಸ್)ವು ಗಮನಾರ್ಹ ಶಕ್ತಿ ಹೊಂದಿದೆ, ಉತ್ತಮ ಆಡಳಿತದ ಮೊದಲ ಷರತ್ತೆಂದರೆ, ಅದು ಸಂಪನ್ಮೂಲಗಳ ಅತ್ಯುತ್ತಮ ಬಳಕೆಯಾಗಿದೆ ಎಂದು ನಾನು ನಂಬುತ್ತೇನೆ.
ಇನ್ನೊಂದು ಅನುಭವ ನನ್ನ ಮನಸ್ಸಿಗೆ ಬರುತ್ತದೆ. ನನ್ನ ಅನುಭವದಿಂದ, ಏನಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ತರಗತಿಯಲ್ಲಿ ಶಿಕ್ಷಕರು, ವಿಶೇಷವಾಗಿ ತಪಾಸಣೆಯು ಸನ್ನಿಹಿತವಾದಾಗ, ಪ್ರಕಾಶಮಾನವಾದ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡುವುದು ಸಹಜ. ಅವರು ಹೇಳುತ್ತಾರೆ, "ತಪಾಸಣೆಯಲ್ಲಿ ಪ್ರಶ್ನೆಯನ್ನು ಕೇಳಿದಾಗ, ತಕ್ಷಣವೇ ನಿಮ್ಮ ಕೈ ಮೇಲಕ್ಕೆತ್ತಿ." ಶಿಕ್ಷಕರ ಆಟ, ಎಲ್ಲವೂ ನನಗೆ ಗೊತ್ತು. ಇದು ಸಾಕಷ್ಟು ನೈಸರ್ಗಿಕವಾಗಿದೆ. ನೀವು ಉತ್ತಮ ಪ್ರಭಾವ ಬೀರಲು ಬಯಸಿದರೆ, ಒಬ್ಬ ಉತ್ತಮ ವಿದ್ಯಾರ್ಥಿ ತಕ್ಷಣವೇ ಕೈ ಎತ್ತುತ್ತಾನೆ. ಹಾಗೆಯೇ, ನಾವು ತಕ್ಷಣದ ಫಲಿತಾಂಶಗಳನ್ನು ಪಡೆಯುವ ಪ್ರದೇಶಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ನಾವು ಒಲವು ತೋರುತ್ತೇವೆ ಎಂಬುದು ನನ್ನ ವಿಚಾರವಾಗಿದೆ. ನಾನು ಸರ್ಕಾರದಲ್ಲಿ ಪೂರೈಸುವ ಗುರಿ ಹೊಂದಿದ್ದರೆ, ಭಾರತ ಸರ್ಕಾರದಲ್ಲಿ ಹೇಳೋಣ ಮತ್ತು ಈ 6 ರಾಜ್ಯಗಳು ಗಮನ ಹರಿಸಬೇಕೆಂದು ನಾನು ಭಾವಿಸುತ್ತೇನೆ, ನಾನು ಅವುಗಳ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ಉಳಿದ 12 ರಾಜ್ಯಗಳು, ಅವುಗಳು ಅಗತ್ಯವಿದ್ದರೂ, ಸಂಪನ್ಮೂಲಗಳನ್ನು ಪಡೆಯುವುದಿಲ್ಲ. ಏಕೆಂದರೆ ಅವುಗಳ ಕಾರ್ಯಕ್ಷಮತೆ ಕಳಪೆಯಾಗಿದೆ. ನಾನು ಈಗಾಗಲೇ ಸಿಹಿಯಾದ ಚಹಾಕ್ಕೆ ಸ್ವಲ್ಪ ಹೆಚ್ಚುವರಿ ಸಕ್ಕರೆ ಸೇರಿಸುತ್ತೇನೆ. ಏನಾಗುತ್ತದೆ ಎಂದರೆ ಅಭಿವೃದ್ಧಿ ಹೊಂದಿದವರು ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸುವವರು ಅತಿಯಾದ ಸಂಪನ್ಮೂಲಗಳನ್ನು ಪಡೆಯುತ್ತಾರೆ, ಇದು ವ್ಯರ್ಥಕ್ಕೆ ಕಾರಣವಾಗುತ್ತದೆ.
ನಾನು ಓದುತ್ತಿದ್ದ ಕಾಲವೊಂದಿತ್ತು, ಆ ಅದೃಷ್ಟ ನನಗೆ ಇರಲಿಲ್ಲ, ಆದರೆ ನನ್ನ ಸ್ನೇಹಿತರಿಗೆ ಅವರ ಪೋಷಕರು ಹೇಳುತ್ತಿದ್ದರು... "ನೀನು 10ನೇ ತರಗತಿಯಲ್ಲಿ ಈ ಗ್ರೇಡ್ ಪಡೆದರೆ, ನಾವು ನಿನಗೆ ಗಡಿಯಾರ ಉಡುಗೊರೆ ಕೊಡಿಸುತ್ತೇನೆ ಎಂದು. ನಿಮಗೆ ಆ ಗ್ರೇಡ್ ಸಿಕ್ಕಿದರೆ. 12ನೇ ತರಗತಿಯಲ್ಲಿ ನೀವು ಉಡುಗೊರೆ ಪಡೆಯುತ್ತಿದ್ದಿರಿ." ನನ್ನ ಕಾಲದಲ್ಲಿ ಅದು ರೂಢಿಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನೀವು ಮನೆಯ ಯಾವುದೇ ಮೂಲೆಯಲ್ಲಿ ಸುಮಾರು 3-4 ಕೈಗಡಿಯಾರಗಳನ್ನು ಕಾಣಬಹುದು. ಅವುಗಳಲ್ಲಿ ಕೆಲವನ್ನು 6 ತಿಂಗಳವರೆಗೆ ಮುಟ್ಟದೆ ಇರಬಹುದು. ಆದರೆ ಬಡವರ ಮನೆಯಲ್ಲಿ ಒಂದು ಗಡಿಯಾರವಿದ್ದರೆ, ಅದನ್ನು ವರ್ಷದ 365 ದಿನವೂ ಬಳಸಲಾಗುತ್ತದೆ ಮತ್ತು ಕಾಳಜಿ ವಹಿಸಲಾಗುತ್ತದೆ. ಸಂಪನ್ಮೂಲಗಳು ಹೇರಳವಾಗಿರುವಲ್ಲಿ ಹೆಚ್ಚುವರಿ ಏನನ್ನಾದರೂ ನೀಡುವುದು ವ್ಯರ್ಥಕ್ಕೆ ಕಾರಣವಾಗುತ್ತದೆ, ಆದರೆ ಅಗತ್ಯವಿರುವಲ್ಲಿ ಸಂಪನ್ಮೂಲಗಳನ್ನು ಖಚಿತಪಡಿಸಿಕೊಳ್ಳುವುದು ಅದರ ಸರಿಯಾದ ಬಳಕೆಗೆ ಕಾರಣವಾಗುತ್ತದೆ. ಆದ್ದರಿಂದ, ನಾವು ನಮ್ಮ ಸಂಪನ್ಮೂಲಗಳ ಸಮಾನ ಹಂಚಿಕೆಯ ಅಭ್ಯಾಸ ಅಳವಡಿಸಿಕೊಂಡರೆ ಮತ್ತು ವಿಶೇಷವಾಗಿ ಅಗತ್ಯ-ಆಧಾರಿತ ವಿತರಣೆಯ ಮೇಲೆ ಗಮನ ಕೇಂದ್ರೀಕರಿಸಿದರೆ, ಅದು ಅವರಿಗೆ ಅಧಿಕಾರ ನೀಡುತ್ತದೆ ಮತ್ತು ನಾವು ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದು ನಾನು ನಂಬುತ್ತೇನೆ. ಅದೇ ರೀತಿ, ಕೆಲಸಗಳನ್ನು ಮಾಡಲು ಬಂದಾಗ, ನಾವು ಎಲ್ಲವನ್ನೂ ಸರ್ಕಾರ ಮಾಡುತ್ತದೆ ಎಂಬ ಭ್ರಮೆಯಲ್ಲಿರುವುದನ್ನು ನೀವು ನೋಡಿರಬೇಕು. ಇದು ಕಳೆದ ಶತಮಾನದ ಮನಸ್ಥಿತಿ, ಸ್ನೇಹಿತರೇ. ಎಲ್ಲವನ್ನೂ ಸರಕಾರವೇ ಮಾಡುತ್ತದೆ ಎಂಬ ಈ ನಂಬಿಕೆಯಿಂದ ಹೊರಬರಬೇಕಿದೆ. ಸಮಾಜದ ಶಕ್ತಿ ಅಪಾರ. ಮಧ್ಯಾಹ್ನದ ಊಟಕ್ಕೆ ಅಡುಗೆ ಮನೆ ನಡೆಸುವಂತೆ ಸರಕಾರಕ್ಕೆ ಹೇಳಿದರೆ ಬೆವರು ಸುರಿಸುವಂತಾಗಿದೆ. ಇದಕ್ಕೆ ತದ್ವಿರುದ್ಧವಾಗಿ, ನಮ್ಮ ಸಿಖ್ ಸಹೋದರರು ಮತ್ತು ಸಹೋದರಿಯರು ಸಾವಿರಾರು ಜನರು ತಿನ್ನುವ 'ಲಂಗರ್'ಗಳನ್ನು (ಸಮುದಾಯ ಅಡುಗೆ ಮನೆ) ನಡೆಸುತ್ತಾರೆ. ಅವರು ಎಂದಿಗೂ ದಣಿದಿಲ್ಲ, ಇದು ನಡೆಯುತ್ತಿದೆ. ಆ ಸಮಾಜಕ್ಕೆ ಒಂದು ಶಕ್ತಿಯಿದೆ. ನಾವು ಆ ಶಕ್ತಿಯನ್ನು ಸಂಪರ್ಕಿಸಿದಾಗ, ಏನಾಗುತ್ತದೆ? ಸಮುದಾಯವನ್ನು ಸಂಪರ್ಕಿಸುವ ನಾಯಕತ್ವವಿರುವ ಬ್ಲಾಕ್‌ಗಳು ಅಥವಾ ಜಿಲ್ಲೆಗಳಲ್ಲಿ, ನನ್ನ ಅನುಭವದಲ್ಲಿ ರೂಪಾಂತರವು ತ್ವರಿತವಾಗಿ ಸಂಭವಿಸುತ್ತಿದೆ.
ಸ್ವಚ್ಛತಾ ಅಭಿಯಾನ ಇಂದು ಯಶಸ್ಸಿನ ದಿಕ್ಕಿನಲ್ಲಿ ತನ್ನ ಸ್ಥಾನ ಕಂಡುಕೊಂಡಿದೆ. ಅದಕ್ಕೆ ಮೋದಿ ಕಾರಣವೇ? 5-50 ಜನರು ಪೊರಕೆ ಹಿಡಿದು ಗುಡಿಸುವುದರಿಂದ ಹೀಗಾಗುತ್ತಿದೆಯೇ? ಇಲ್ಲ ಸ್ವಾಮೀ. ಇನ್ನು ಮುಂದೆ ಕಸ ಹಾಕುವುದಿಲ್ಲ ಎಂಬ ಮನಸ್ಥಿತಿ ಸಮಾಜದಲ್ಲಿ ಮೂಡಿದೆ. ಸಮಾಜವು ಸಾಮೂಹಿಕವಾಗಿ ಕಸ ಹಾಕದಿರಲು ನಿರ್ಧರಿಸಿದಾಗ, ಸ್ವಚ್ಛತಾ ಅಭಿಯಾನದ ಅಗತ್ಯವಿಲ್ಲ ಸ್ನೇಹಿತರೇ. ಸಾರ್ವಜನಿಕ ಸಹಭಾಗಿತ್ವ ಬಹುಮುಖ್ಯವಾಗಿದ್ದು, ಉದ್ದನೆಯ ಕುರ್ತಾ-ಪೈಜಾಮ ಧರಿಸಿ, ಖಾದಿಯಲ್ಲಿ ಅಲಂಕೃತರಾಗಿ ಬಂದವರೇ ನಾಯಕರಾಗುತ್ತಾರೆ ಎಂಬ ವಿಕೃತವಾದ ನಾಯಕತ್ವವನ್ನು ಇಲ್ಲಿ ನಾವು ಹೊಂದಿದ್ದೇವೆ. ಜೀವನದ ಪ್ರತಿಯೊಂದು ಅಂಶದಲ್ಲೂ ನಾಯಕತ್ವ ಅಸ್ತಿತ್ವದಲ್ಲಿದೆ. ನಮಗೆ ಶಿಕ್ಷಣ, ಕೃಷಿಯಲ್ಲಿ ನಾಯಕರು ಬೇಕು ಮತ್ತು ನಮಗೆ ರಾಜಕೀಯ ನಾಯಕರು ಅಗತ್ಯವಿಲ್ಲ. ನಮ್ಮ ಅಧಿಕಾರಿಗಳೂ ನಾಯಕರೇ. ಅವರು ಸಹ ಜನರನ್ನು ಪ್ರೇರೇಪಿಸುತ್ತಾರೆ.
ಬ್ಲಾಕ್ ಮಟ್ಟದಲ್ಲಿ ನಾಯಕತ್ವ ಸ್ಥಾಪಿಸಲು ಮತ್ತು 'ಸಂಕಲ್ಪ್ ಸಪ್ತಾಹ್' (ರೆಸಲ್ಯೂಶನ್ ವೀಕ್) ನಂತಹ ಉಪಕ್ರಮಗಳಲ್ಲಿ ತಂಡದ ಮನೋಭಾವದ ಗುರಿ ಸಾಧಿಸಲು, ಅಲ್ಲಿ ಕುಳಿತುಕೊಳ್ಳುವ ಪ್ರತಿಯೊಂದು ಗುಂಪು ಸಾಮಾನ್ಯ ಉದ್ದೇಶ ಹೊಂದಿರಬೇಕು - ಟೀಮ್ ಸ್ಪಿರಿಟ್. ತಂಡ ಸ್ಫೂರ್ತಿ ಇದ್ದಾಗ ನಾಯಕತ್ವ ಬರುತ್ತದೆ. ಸಾರ್ವಜನಿಕ ಸಹಭಾಗಿತ್ವಕ್ಕೆ ಹೊಸ ಆಲೋಚನೆಗಳು ಹೊರಹೊಮ್ಮುತ್ತವೆ. ನೈಸರ್ಗಿಕ ವಿಪತ್ತು ಸಂಭವಿಸಿದಾಗ, ಸರ್ಕಾರದ ಸಂಪನ್ಮೂಲಗಳು ಮಾತ್ರ ಅದನ್ನು ನಿಭಾಯಿಸಬಲ್ಲವು ಎಂಬುದನ್ನು ನೀವು ನೋಡಿದ್ದೀರಾ? ಯಾವುದೇ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಒಟ್ಟುಗೂಡುತ್ತಾರೆ, ಅವರು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರಾರಂಭಿಸುತ್ತಾರೆ. ಜನರು ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಆ ಕ್ಷಣದಲ್ಲಿ, "ಅಯ್ಯೋ, ಸಮಾಜವು ತುಂಬಾ ಸಹಾಯ ಮಾಡಿದೆ, ನನ್ನ ಕೆಲಸ ಮುಗಿದಿದೆ" ಎಂದು ನಮಗೆ ಅನಿಸುತ್ತದೆ. ಅಧಿಕಾರಿಗಳೂ ಕೂಡ ‘ಇವರು ಸಹಾಯ ಮಾಡಿದ್ದು ದೊಡ್ಡದು, ನನ್ನ ಕೆಲಸ ಮುಗಿಯಿತು’ ಎಂದುಕೊಳ್ಳುತ್ತಾರೆ.
ಸಮುದಾಯದ ಶಕ್ತಿಯನ್ನು ಗುರುತಿಸುವುದು ಮತ್ತು ಅದನ್ನು ಸಂಪರ್ಕಿಸುವುದು ನಿರ್ಣಾಯಕ ಎಂದು ತಳಮಟ್ಟದಲ್ಲಿ ಕೆಲಸ ಮಾಡುವ ಯಾರಿಗಾದರೂ ತಿಳಿದಿದೆ. ನಮ್ಮ ಶಾಲಾ ಕಾಲೇಜುಗಳು ಅಭಿವೃದ್ಧಿ ಹೊಂದಲಿ. ಕುಟುಂಬದ ಸದಸ್ಯರು, ಪೋಷಕರು ತೊಡಗಿಸಿಕೊಂಡರೆ, ಶಾಲೆಯು ಎಂದಿಗೂ ಹಿಂದುಳಿದಿಲ್ಲ ಎಂಬುದನ್ನು ನೀವು ನೋಡುತ್ತೀರಿ. ಇದನ್ನು ಮಾಡುವ ಮಾರ್ಗಗಳನ್ನು ಅನ್ವೇಷಿಸಬೇಕು. ನಾನು ಯಾವಾಗಲೂ ಹೇಳುತ್ತೇನೆ, ಹಳ್ಳಿಯ ಹುಟ್ಟುಹಬ್ಬ ಆಚರಿಸಿ, ರೈಲು ನಿಲ್ದಾಣವಿದ್ದರೆ, ಅದರ ಜನ್ಮದಿನಾಂಕ ಕಂಡುಹಿಡಿಯಿರಿ - ಅದು ದಾಖಲೆಗಳಲ್ಲಿ ಸೇರುತ್ತದೆ, ಅದರ ಜನ್ಮದಿನ ಆಚರಿಸಿ. ನಿಮ್ಮ ಶಾಲೆಗೆ 80 ವರ್ಷ, 90 ವರ್ಷ ಅಥವಾ 100 ವರ್ಷ ವಯಸ್ಸಾಗಿರಬಹುದು. ಆ ಶಾಲೆಯ ಜನ್ಮದಿನಾಂಕ ಪತ್ತೆ ಮಾಡಿ. ಅಲ್ಲಿ ಓದಿದ ಎಲ್ಲ ಜೀವಂತ ವ್ಯಕ್ತಿಗಳನ್ನು ಒಟ್ಟುಗೂಡಿಸಿ.
ಸಾರ್ವಜನಿಕ ಭಾಗವಹಿಸುವಿಕೆಯ ಮಾರ್ಗಗಳಿವೆ. ನೀವು ದೇಣಿಗೆ ನೀಡಬೇಕೆಂದು ಇದರ ಅರ್ಥವಲ್ಲ. ಉದಾಹರಣೆಗೆ, ನಾವು ಅಂಗನವಾಡಿಗಳಲ್ಲಿ (ಮಕ್ಕಳ ಆರೈಕೆ ಕೇಂದ್ರಗಳು) ಅಪೌಷ್ಟಿಕತೆಯನ್ನು ಬಜೆಟ್ ಮೂಲಕ ಪರಿಹರಿಸಲು ಬಯಸಿದರೆ, ಅದು ಒಂದು ಮಾರ್ಗವಾಗಿದೆ. ಆದರೆ ನಾನು ಹೇಳುವುದಾದರೆ, "ನಾನು ನನ್ನ ಹಳ್ಳಿಯಲ್ಲಿ ಒಂದು ನಿರ್ದಿಷ್ಟ ದಿನಾಂಕದಂದು ಸಮುದಾಯದ ಊಟದ ಕಾರ್ಯಕ್ರಮ ಆಯೋಜಿಸುತ್ತೇನೆ. ಈ ಸಮುದಾಯದ ಊಟದ ಸಮಾರಂಭದಲ್ಲಿ ಯಾರಿಗಾದರೂ ಹುಟ್ಟುಹಬ್ಬವಿದ್ದರೆ, ಯಾರಿಗಾದರೂ ಪೋಷಕರ ಪುಣ್ಯತಿಥಿ ಇದ್ದರೆ ಅಥವಾ ಯಾರಿಗಾದರೂ ವಿವಾಹ ವಾರ್ಷಿಕೋತ್ಸವವಿದ್ದರೆ, ನಾನು ಅವರನ್ನು ಆಹ್ವಾನಿಸುತ್ತೇನೆ ಮತ್ತು ನೋಡುತ್ತೇನೆ. ನಮ್ಮ ಹಳ್ಳಿಯ ಅಂಗನವಾಡಿಯಲ್ಲಿ 100 ಮಕ್ಕಳಿದ್ದಾರೆ. ಇದು ನಿಮ್ಮ ಜನ್ಮದಿನವಾಗಿದ್ದರೆ ಮತ್ತು ನೀವು ಸಾಮಾನ್ಯವಾಗಿ ಮನೆಯಲ್ಲಿ ಒಳ್ಳೆಯ ಊಟ ಮಾಡುವ ಮೂಲಕ ಆಚರಿಸಿದರೆ, ಹಣ್ಣನ್ನು ತರಲು ಪರಿಗಣಿಸಿ. ಎಲ್ಲರೂ ಒಗ್ಗೂಡಿ ನಿಮ್ಮ ಹುಟ್ಟುಹಬ್ಬದ ಅಂಗವಾಗಿ ಈ 100 ಮಕ್ಕಳಿಗೆ ಬಾಳೆಹಣ್ಣು ಹಂಚಬಹುದು. ಅವರ ಹುಟ್ಟುಹಬ್ಬವನ್ನೂ ಆಚರಿಸಲಾಗುವುದು. ಅವರೇ ಬಂದು ಆ ಮಕ್ಕಳಿಗೆ ಕೊಟ್ಟರೆ ಸಾಮಾಜಿಕ ನ್ಯಾಯವಿದೆ, ಸಮಾಜದಲ್ಲಿ ಇರುವ ಸಾಮಾಜಿಕ ಅಂತರವೂ ಕಡಿಮೆಯಾಗತೊಡಗುತ್ತದೆ. ಒಂದು ವರ್ಷದಲ್ಲಿ, ನೀವು ಖಂಡಿತವಾಗಿಯೂ ಹಳ್ಳಿಯಲ್ಲಿ 80-100 ಕುಟುಂಬಗಳನ್ನು ಕಾಣಬಹುದು, ಅವರು ಶಾಲೆಗೆ ಬರುತ್ತಾರೆ, ಅಂಗನವಾಡಿಗೆ ಬರುತ್ತಾರೆ ಮತ್ತು ಆ ಮಕ್ಕಳಿಗೆ ಏನಾದರೂ ಒಳ್ಳೆಯ-ಋತುಮಾನದ ವಸ್ತುಗಳನ್ನು ತಿನ್ನುತ್ತಾರೆ, ದಿನಾಂಕಗಳನ್ನು ಹೇಳೋಣ. ಖರ್ಜೂರಗಳು ಸೀಸನ್ ಆಗಿದ್ದರೆ, "ಸರಿ, ಇಂದು ನಾನು 2-2 ಖರ್ಜೂರಗಳನ್ನು ತಂದು ಈ 100 ಮಕ್ಕಳಿಗೆ ಹಂಚುತ್ತೇನೆ" ಎಂದು ಯಾರಾದರೂ ಹೇಳಬಹುದು. ಇದು ಸಮುದಾಯದ ಸಹಭಾಗಿತ್ವ, ಸರ್ಕಾರದ ಬಜೆಟ್‌ನಲ್ಲಿ ಈ ರೀತಿಯ ಉಪಕ್ರಮಕ್ಕೆ ಹಣ ಮೀಸಲಿಡುವುದಿಲ್ಲ, ನಾನು ಗುಜರಾತ್‌ನಲ್ಲಿದ್ದಾಗ, ನಾನು ಸಮುದಾಯದ ಊಟದ ಅಭಿಯಾನ ನಡೆಸಿದ್ದೇನೆ. ಧಾರ್ಮಿಕ ಮುಖಂಡರು ಸಹ ಭಾಗವಹಿಸುವಂತೆ ಜನರನ್ನು ಒತ್ತಾಯಿಸಿದ್ದೆ. ಆ ಸಮಯದಲ್ಲಿ ಸುಮಾರು 80 ದಿನಗಳು-ಈಗ ನಿಖರವಾದ ಸಂಖ್ಯೆಯ ಬಗ್ಗೆ ನನಗೆ ಖಚಿತವಿಲ್ಲ-ಬಹುತೇಕ ಪ್ರತಿದಿನ ಕುಟುಂಬಕ್ಕೆ ಬರಲು, ಶಾಲಾ ಮಕ್ಕಳೊಂದಿಗೆ ಆಚರಿಸಲು ಮತ್ತು ಅವರಿಗೆ ಉತ್ತಮ ಆಹಾರ ನೀಡಲು ಅವಕಾಶವಿದೆ. ಇದಕ್ಕೆ ವಿರೋಧಿ ಹೋರಾಟವೂ ಇತ್ತು. ಅಪೌಷ್ಟಿಕತೆ, ಮತ್ತು ಶಿಕ್ಷಕರು ಆಗಾಗ್ಗೆ ಹೊರುತ್ತಿದ್ದ ಮಕ್ಕಳ ಪೋಷಣೆಯ ಹೊರೆಯನ್ನು ಕಡಿಮೆಗೊಳಿಸಲಾಯಿತು. ಸಮುದಾಯ ಸಹಭಾಗಿತ್ವವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ. ಉದಾಹರಣೆಗೆ, ಕ್ಷಯರೋಗವನ್ನು ಪರಿಗಣಿಸೋಣ (ಟಿಬಿ.) 10 ಟಿಬಿ ರೋಗಿಗಳಿದ್ದರೆ ನಮ್ಮ ಬ್ಲಾಕ್ ಮತ್ತು ನಾವು ಅವರನ್ನು ಟಿಬಿ ಮಿತ್ರ ಕಾರ್ಯಕ್ರಮದೊಂದಿಗೆ ಸಂಪರ್ಕಿಸಿ, ನಾವು ಅವರೊಂದಿಗೆ ಸಂಪರ್ಕದಲ್ಲಿರಬಹುದು, ವಾರಕ್ಕೊಮ್ಮೆ ಫೋನ್ ಮಾಡಬಹುದು ಮತ್ತು ಅವರ ಯೋಗಕ್ಷೇಮ ವಿಚಾರಿಸಬಹುದು. ನಾವು ಇದನ್ನು 6 ತಿಂಗಳ ಕಾಲ ನಿರಂತರವಾಗಿ ಮಾಡಿದರೆ, ಟಿಬಿಯನ್ನು ನಿರ್ಮೂಲನೆ ಮಾಡಬಹುದು. ಹೆಚ್ಚು ಜನರನ್ನು ನಾವು ತೊಡಗಿಸಿಕೊಳ್ಳುತ್ತೇವೆ. ಇದರ ಆರಂಭಿಕ ಪ್ರಯತ್ನವು ಕಷ್ಟವಾಗಬಹುದು, ಆದರೆ ನಂತರ, ಅದು ಶಕ್ತಿಯ ಮೂಲವಾಗುತ್ತದೆ.
ಇಂದು ಜಾಗತಿಕವಾಗಿ ಭಾರತದ ಹೆಸರು ಪ್ರತಿಧ್ವನಿಸುತ್ತಿರುವುದನ್ನು ನೀವು ಗಮನಿಸಿರಬೇಕು. ನೀವೂ ಅದನ್ನು ಅನುಭವಿಸುತ್ತಿರಬೇಕು. ಪತ್ರಿಕೆಗಳು ಇದನ್ನು ಮೋದಿ, ಮೋದಿ ಸರ್ಕಾರದ ಅತ್ಯುತ್ತಮ ರಾಜತಾಂತ್ರಿಕತೆ ಮತ್ತು ವಿವಿಧ ಸಾಧನೆಗಳಿಗೆ ಕಾರಣವೆಂದು ಹೇಳುತ್ತವೆ. ನನಗೂ ಹಾಗೆ ಅನಿಸುತ್ತದೆ. ಆದಾಗ್ಯೂ, ವಾಸ್ತವದಲ್ಲಿ, ಸಾಮಾನ್ಯವಾಗಿ ಗಮನಿಸದೇ ಇರುವ ಇನ್ನೊಂದು ಕಾರಣವಿದೆ. ಅದು ನಮ್ಮ ಅನಿವಾಸಿ ಭಾರತೀಯ ಸಮುದಾಯವಾಗಿದೆ. ಭಾರತವನ್ನು ತೊರೆದು ಇತರ ದೇಶಗಳಲ್ಲಿ ನೆಲೆಸಿರುವ ಜನರು, ಅವರಲ್ಲಿರುವ ಉತ್ಸಾಹ ಮತ್ತು ಸಂಘಟಿತ ಶಕ್ತಿ, ಸಾರ್ವಜನಿಕ ಜೀವನದಲ್ಲಿ ಹೆಚ್ಚಿದ ಭಾಗವಹಿಸುವಿಕೆ - ಈ ಅಂಶಗಳು ಆ ದೇಶಗಳಲ್ಲಿನ ಜನರು, ಈ ವ್ಯಕ್ತಿಗಳು ಹೆಚ್ಚು ಮೌಲ್ಯಯುತರು ಎಂದು ನಂಬುವಂತೆ ಮಾಡುತ್ತದೆ. ಪರಿಣಾಮವಾಗಿ, ಭಾರತವನ್ನು ಅಮೂಲ್ಯವಾದ ದೇಶವೆಂದು ಗ್ರಹಿಸಲಾಗಿದೆ. ಇದರರ್ಥ ಭಾಗವಹಿಸುವ ಕ್ರಿಯೆಯ ಬಲವನ್ನು ವಿದೇಶಾಂಗ ನೀತಿಯಲ್ಲಿ ಬಳಸಿಕೊಂಡರೆ, ನನ್ನ ಬ್ಲಾಕ್‌ನಲ್ಲಿಯೂ ಸಹ ಸುಲಭವಾಗಿ ಕಾರ್ಯ ನಿರ್ವಹಿಸಬಹುದು.
ನನ್ನ ಸ್ನೇಹಿತರೆ.
ಆದ್ದರಿಂದ, ಈ ‘ಸಂಕಲ್ಪ ಸಪ್ತಾಹ’ವನ್ನು ಗರಿಷ್ಠವಾಗಿ ಬಳಸಿಕೊಳ್ಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ, ಮುಕ್ತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಿ, ತಾಲೀಮು ಯೋಜನೆಗಳನ್ನು ವಿನ್ಯಾಸಗೊಳಿಸಿ. ಸಂಪನ್ಮೂಲಗಳನ್ನು ಅದೇ ರೀತಿ ಬಳಸಿ. ಇಲ್ಲಿ, ನಮ್ಮ ಬ್ಲಾಕ್‌ನಲ್ಲಿ, ನಾವು ಸುಮಾರು 8-10 ವಾಹನಗಳನ್ನು ಹೊಂದಿರಬಹುದು, ಬಹುಶಃ ಇನ್ನೂ ಕಡಿಮೆ. ಕೆಲವೇ ಅಧಿಕಾರಿಗಳಿಗೆ ಮಾತ್ರ ವಾಹನಗಳಿವೆ. ಈಗ ದೂರದ ಪ್ರಯಾಣದ ಜವಾಬ್ದಾರಿಯು ದಾರಿಯಿಲ್ಲದ ಅನೇಕ ಜನರ ಮೇಲೆ ಬೀಳುತ್ತದೆ. ನಾನು ಗುಜರಾತ್ ನಲ್ಲಿ ಯಶಸ್ವಿ ಪ್ರಯೋಗ ನಡೆಸಿದ್ದೇನೆ. ಒಂದು ಬ್ಲಾಕ್‌ನಲ್ಲಿ 100 ಹಳ್ಳಿಗಳಿವೆ ಎಂದು ಹೇಳೋಣ. ತಲಾ 10 ಗ್ರಾಮಗಳಿಗೆ 10 ಅಧಿಕಾರಿಗಳನ್ನು ನಿಯೋಜಿಸಿದ್ದೇನೆ. ಅವರು ತಮ್ಮ ಕಾರಿನಲ್ಲಿ ಹೋಗುವಾಗ, 5 ಇಲಾಖೆಗಳ ಕಿರಿಯ ಅಧಿಕಾರಿಗಳನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಬೇಕೆಂದು ನಾನು ಅವರಿಗೆ ಹೇಳಿದೆ. ಒಂದು ತಿಂಗಳ ಕಾಲ ಈ 10 ಗ್ರಾಮಗಳತ್ತ ಮಾತ್ರ ಗಮನ ಹರಿಸಿ. ಎಲ್ಲ ಅಧಿಕಾರಿಗಳು ಕೃಷಿ ಇಲಾಖೆಯವರಾದರೂ ಆ ಗ್ರಾಮಗಳಲ್ಲಿ ಶಿಕ್ಷಣ, ಕೃಷಿ, ನೀರು, ಜಾನುವಾರುಗಳ ಬಗ್ಗೆ ಚರ್ಚಿಸಬೇಕು. ನಂತರ, ಮುಂದಿನ ಗುಂಪಿಗೆ 10 ಹಳ್ಳಿಗಳ ಮತ್ತೊಂದು ಗುಂಪು ಹೀಗೆ ಮಾಡಲಾಗಿತ್ತು. ಅವರು ಆ 10 ಹಳ್ಳಿಗಳಲ್ಲಿ ಒಂದು ತಿಂಗಳು ತಂಗುತ್ತಾರೆ ಮತ್ತು ನಂತರ 1 ತಿಂಗಳ ನಂತರ ತಿರುಗುತ್ತಾರೆ. ಇದು ಸಂಪೂರ್ಣ-ಸರ್ಕಾರದ ಕಾರ್ಯ ವಿಧಾನ ಅಳವಡಿಸಿಕೊಳ್ಳಲಾಯಿತು ಎಂಬ ಅನುಭವವಾಗಿತ್ತು. ಒಂಟಿಯಾಗಿ ಕೆಲಸ ಮಾಡುತ್ತಿದ್ದ 10 ಅಧಿಕಾರಿಗಳು ಈಗ ವಾರಕ್ಕೊಮ್ಮೆ ಕುಳಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರು ಹೇಳುತ್ತಿದ್ದರು, "ನಾನು ಆ ಪ್ರದೇಶಕ್ಕೆ ಹೋಗಿದ್ದೆ, ನನ್ನ ಇಲಾಖೆ ಶಿಕ್ಷಣಕ್ಕೆ ಸಂಬಂಧಿಸಿದೆ, ಆದರೆ ನಾನು ಕೃಷಿಯಲ್ಲಿ ಈ ವಿಷಯಗಳನ್ನು ಗಮನಿಸಿದ್ದೇನೆ. ನೀರಿನ ವಲಯದಲ್ಲಿ ಸಂಪನ್ಮೂಲಗಳ ಅತ್ಯುತ್ತಮ ಬಳಕೆ ಇತ್ತು." ಅದಾದ ನಂತರ ಫಲಿತಾಂಶಗಳು ತೋರಿಸಲು ಪ್ರಾರಂಭಿಸಿದವು. ಈ ಅಧಿಕಾರಿಗಳು ಸಂಪೂರ್ಣ ಬ್ಲಾಕ್ ನ ಸಮಗ್ರ ತಿಳುವಳಿಕೆ ಹೊಂದಿದ್ದರು. ಯಾರಾದರೂ ಕೃಷಿ ಕ್ಷೇತ್ರದವರಾಗಿರಬಹುದು, ಆದರೆ ಅವರಿಗೆ ಶಿಕ್ಷಣ ಮತ್ತು ಆರೋಗ್ಯದ ಜ್ಞಾನವೂ ಇತ್ತು. ನಾವು ನಮ್ಮ ಕಾರ್ಯತಂತ್ರವನ್ನು ಬದಲಾಯಿಸಬೇಕಾಗಿದೆ ಎಂದು ನಾನು ನಂಬುತ್ತೇನೆ. ನಾವು ನಮ್ಮ ಆಡಳಿತ ಕಾರ್ಯತಂತ್ರವನ್ನು ಬದಲಾಯಿಸಿದರೆ, ಅದು ನಮ್ಮ ಸಂಪನ್ಮೂಲಗಳ ಅತ್ಯುತ್ತಮ ಬಳಕೆಗೆ ಕಾರಣವಾಗುತ್ತದೆ.
ಇಂದು ಸಂಪರ್ಕ ಅಥವಾಸಂವಹನವು ಅನುಕೂಲಗಳು ಮತ್ತು ಅನನುಕೂಲಗಳನ್ನು ಹೊಂದಿದೆ. ವೀಡಿಯೊ ಕಾನ್ಫರೆನ್ಸ್‌ಗಳ ಮೂಲಕ ಅಥವಾ ಮೊಬೈಲ್ ಫೋನ್‌ಗಳ ಮೂಲಕ ಮಾಹಿತಿ ಪಡೆಯುವುದು ಹಲವು ಪ್ರಯೋಜನಗಳನ್ನು ಹೊಂದಿದೆ, ಆದರೆ ದೈಹಿಕವಾಗಿ ಎಲ್ಲೋ ಹೋಗುವ ಪ್ರಯೋಜನಕ್ಕೆ ಪರ್ಯಾಯವಾಗಿಲ್ಲ, ಸ್ನೇಹಿತರೆ, ನಾನು ಈಗ ಹೇಳುತ್ತಿರುವುದು, ನೀವು ನಿಮ್ಮ ಹಳ್ಳಿಯಲ್ಲಿ ವಾಸಿಸುತ್ತಿದ್ದರೆ, ನಾನು ವೀಡಿಯೊ ಕಾನ್ಫರೆನ್ಸ್‌ನಲ್ಲಿ ಹೊಸದನ್ನು ಹೇಳುವುದಿಲ್ಲ. ಮುಖಾಮುಖಿ ಭೇಟಿಯಾದಾಗ, ವೀಡಿಯೊ ಕಾನ್ಫರೆನ್ಸ್‌ನಿಂದ ಬರದ ಶಕ್ತಿ ಅದರಲ್ಲಿದೆ. ಅದಕ್ಕಾಗಿಯೇ ದೈಹಿಕ ಉಪಸ್ಥಿತಿಯ ಅಗತ್ಯವಿರುವ ಜವಾಬ್ದಾರಿಗಳಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳಬಾರದು. ನಾವು ಒಂದು ಸ್ಥಳಕ್ಕೆ ಹೋದಾಗ, ಅದರ ಶಕ್ತಿ ನಮಗೆ ಅರ್ಥವಾಗುತ್ತದೆ.
ಈ ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮ ಸಮಯದಲ್ಲಿ, ಬಹುಶಃ ಈ ವಾರದಲ್ಲಿ ಮೊದಲ ಬಾರಿಗೆ, ನಿಮ್ಮ ಸಹೋದ್ಯೋಗಿಗಳ ಸಾಮರ್ಥ್ಯವನ್ನು ನೀವು ಗಮನಿಸಬಹುದು, ಅದನ್ನು ನೀವು ಹಿಂದೆಂದೂ ಗಮನಿಸಿಲ್ಲ. ಆಫೀಸ್‌ನಲ್ಲಿ ದಿನವೂ ಅವರನ್ನು ನೋಡುತ್ತಿದ್ದರೂ, ಅವರ ಹೆಸರು ತಿಳಿಯದೆ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರೂ ಕೆಲವೊಮ್ಮೆ ಅವರ ಹೆಸರೇ ತಿಳಿಯದೇ ಇರಬಹುದು. ಆದರೆ ನೀವು ಒಂದು ವಾರ ಒಟ್ಟಿಗೆ ಕುಳಿತಾಗ, ಅವರ ಸಾಮರ್ಥ್ಯ, ಅವರ ವಿಶಿಷ್ಟ ಗುಣಗಳನ್ನು ನೀವು ತಿಳಿದುಕೊಳ್ಳುತ್ತೀರಿ. ಅದು ನಮ್ಮ ತಂಡದ ಮನೋಭಾವಕ್ಕೆ ನಿರ್ಣಾಯಕವಾಗಿದೆ. ತಂಡವನ್ನು ರಚಿಸಿದಾಗ, ಬಯಸಿದ ಫಲಿತಾಂಶಗಳು ಸ್ವಾಭಾವಿಕವಾಗಿ ಅನುಸರಿಸುತ್ತವೆ.
ಆದ್ದರಿಂದ, ಮುಂದಿನ 3 ತಿಂಗಳೊಳಗೆ ಸಾಧಿಸಬಹುದಾದ ಗುರಿಗಳನ್ನು ಹೊಂದಿಸಿ ಎಂಬುದು ನಿಮ್ಮೆಲ್ಲರಲ್ಲಿ ನನ್ನ ವಿನಂತಿ. 30ರಲ್ಲಿ 5 ನಿಯತಾಂಕಗಳನ್ನು ಗುರುತಿಸೋಣ, ಅಲ್ಲಿ ನಾವು ರಾಜ್ಯದ ಸರಾಸರಿಯನ್ನು ಸಂಪೂರ್ಣವಾಗಿ ಮೀರಿಸಬಹುದು, ಅದನ್ನು ಸಾಧಿಸಲೂಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀವು 5 ನಿಯತಾಂಕಗಳನ್ನು ಸಾಧಿಸಿದರೆ, ನೀವು 10ಕ್ಕೆ ಗುರಿಯಿಡಬಹುದು. ನಾವು ಪರೀಕ್ಷೆಗೆ ಕುಳಿತಾಗ ನಮ್ಮ ಶಿಕ್ಷಕರು ಶಾಲೆಯಲ್ಲಿ ಹೇಳುತ್ತಿದ್ದುದನ್ನು ಇದು ನನ್ನನ್ನು ನೆನಪಿಸುತ್ತದೆ-ಮೊದಲು ಸುಲಭವಾದ ಉತ್ತರಗಳನ್ನು ಬರೆಯಿರಿ. ಅದೇ ತತ್ವ ಇಲ್ಲಿ ಅನ್ವಯಿಸುತ್ತದೆ. ಸರಳವಾದ ಸಮಸ್ಯೆಗಳನ್ನು ಮೊದಲು ಪರಿಹರಿಸಿ, ಮತ್ತು ಕ್ರಮೇಣ ನಿಮ್ಮ ದಾರಿಯಲ್ಲಿ ಕೆಲಸ ಮಾಡಿ. 40 ಸಮಸ್ಯೆಗಳಿದ್ದರೆ, ಮೊದಲ 35ರ ಮೇಲೆ ಗಮನ ಕೇಂದ್ರೀಕರಿಸಿ. ನಿಧಾನವಾಗಿ ಆದರೆ ಖಚಿತವಾಗಿ, ನೀವು ಪ್ರತಿ ಸಮಸ್ಯೆಯನ್ನು ನಿವಾರಿಸುತ್ತೀರಿ. ನೀವು ನೋಡುತ್ತೀರಿ, ಯಾವುದೇ ಸಮಯದಲ್ಲಿ, ನಿಮ್ಮ ಬ್ಲಾಕ್‌ನ ಮಹತ್ವಾಕಾಂಕ್ಷೆಯ ಗುರಿಗಳು ಇತರರ ಆಕಾಂಕ್ಷೆಗಳಾಗುತ್ತವೆ. ಇದು ಇತರರಿಗೆ ಸ್ಫೂರ್ತಿಯಾಗಲಿದೆ. ನಿನ್ನೆ ಮೊನ್ನೆಯವರೆಗೂ ಮಹತ್ವಾಕಾಂಕ್ಷಿಯಾಗಿದ್ದ ನಮ್ಮ 112 ಜಿಲ್ಲೆಗಳು ಈಗ ಸ್ಫೂರ್ತಿದಾಯಕ ಜಿಲ್ಲೆಗಳಾಗಿ ಮಾರ್ಪಟ್ಟಿವೆ. ಒಂದು ವರ್ಷದಲ್ಲಿ, ಮುಂದಿನ 12 ತಿಂಗಳೊಳಗೆ, 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು ಇರುತ್ತವೆ. ಅವುಗಳಲ್ಲಿ ಕನಿಷ್ಠ 100 ಸ್ಫೂರ್ತಿದಾಯಕ ಬ್ಲಾಕ್‌ಗಳಾಗಿ ಬದಲಾಗುತ್ತವೆ. ನಾವು ಇಡೀ ರಾಜ್ಯದಾದ್ಯಂತ ಸ್ಫೂರ್ತಿದಾಯಕ ಬ್ಲಾಕ್‌ಗಳನ್ನು ಹೊಂದಿದ್ದೇವೆ. ಈ ಕಾರ್ಯವನ್ನು ಪೂರ್ಣಗೊಳಿಸೋಣ.
ಈ ಕಾರ್ಯಕ್ರಮದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುವುದನ್ನು ಆನಂದಿಸಿದೆ. ಈ ಕಾರ್ಯಕ್ರಮದಲ್ಲಿ ಆನ್‌ಲೈನ್‌ನಲ್ಲಿ ನನ್ನ ಮಾತುಗಳನ್ನು ಕೇಳುತ್ತಿರುವವರಿಗೆ, ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ನಾವೆಲ್ಲಾ ಮಿಷನ್ ಮೋಡ್‌ನಲ್ಲಿ ಚಲಿಸೋಣ. ದೇಶಾದ್ಯಂತ 100 ಬ್ಲಾಕ್‌ಗಳನ್ನು ಆಯ್ಕೆ ಮಾಡಿ ಮತ್ತು ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ರಾಷ್ಟ್ರೀಯ ಸರಾಸರಿಗೆ ತರಲು ನಾನು ವಿವಿಧ ಇಲಾಖೆಗಳ ಜನರನ್ನು ಒತ್ತಾಯಿಸುತ್ತೇನೆ. ಪ್ರತಿಯೊಂದು ಇಲಾಖೆಯೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ತಳಮಟ್ಟದ ಯಾವ ಕೆಲಸವೂ ಕೈ ಬಿಡುವುದಿಲ್ಲ ಎಂಬ ನಂಬಿಕೆ ನನಗಿಲ್ಲ. 1-2 ವರ್ಷಗಳಲ್ಲಿ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಸ್ನೇಹಿತರೆ, ನಾವು 2024ರ ಅಕ್ಟೋಬರ್-ನವೆಂಬರ್‌ನಲ್ಲಿ ಮತ್ತೆ ಭೇಟಿಯಾಗುತ್ತೇವೆ. ನಾವು ದೈಹಿಕವಾಗಿ ಭೇಟಿಯಾಗುತ್ತೇವೆ ಮತ್ತು ನಾವು ಪ್ರಗತಿಯನ್ನು ಪರಿಶೀಲಿಸುತ್ತೇವೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಆ ಸಮಯದಲ್ಲಿ, ನಿಮ್ಮ ನಡುವಿನ 10 ಜನರ ಯಶಸ್ಸಿನ ಬಗ್ಗೆ ನಾನು ಕೇಳಲು ಬಯಸುತ್ತೇನೆ. ನಂತರ, ಮುಂದಿನ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನನ್ನ ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅಲ್ಲಿಯವರೆಗೆ, ನಾನು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಿಮ್ಮ ಬ್ಲಾಕ್‌ಗಳನ್ನು ನೀವು ತ್ವರಿತವಾಗಿ ಮುನ್ನಡೆಸಬೇಕಾಗಿದೆ. ಆದ್ದರಿಂದ, ನಾನು ಈಗ ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳಲು ಬಯಸುವುದಿಲ್ಲ.
ಎಲ್ಲರಿಗೂ ಶುಭಾಶಯಗಳು ಮತ್ತು ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
***
(Release ID: 1965533)
Visitor Counter : 159