ಪ್ರಧಾನ ಮಂತ್ರಿಯವರ ಕಛೇರಿ

ಸೆಪ್ಟೆಂಬರ್ 24 , 2023 ರಂದು ಒಂಬತ್ತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ


ಈ ಒಂಬತ್ತು ಹೊಸ ವಂದೇ ಭಾರತ್ ರೈಲುಗಳು ಹನ್ನೊಂದು ರಾಜ್ಯಗಳಲ್ಲಿ ಸಂಪರ್ಕವನ್ನು ಹೆಚ್ಚಿಸಲಿವೆ

ಪುರಿ, ಮಧುರೈ ಮತ್ತು ತಿರುಪತಿಯಂತಹ ಪ್ರಮುಖ ಧಾರ್ಮಿಕ ಸ್ಥಳಗಳು ವಂದೇ ಭಾರತ್ ಸಂಪರ್ಕವನ್ನು ಪಡೆಯಲಿವೆ

ಭಾರತೀಯ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ವೇಗವಾಗಿ ಚಲಿಸುತ್ತವೆ ಮತ್ತು ಪ್ರಯಾಣಿಕರ ಸಮಯವನ್ನು ಗಣನೀಯವಾಗಿ ಉಳಿಸುತ್ತವೆ

ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರವಾಸ ಅನುಭವವನ್ನು ಒದಗಿಸಲು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹೊಸ ರೈಲುಗಳ ಸೇರ್ಪಡೆ

Posted On: 23 SEP 2023 1:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24ನೇ ಸೆಪ್ಟೆಂಬರ್ 2023 ರಂದು ಮಧ್ಯಾಹ್ನ 12:30 ಗಂಟೆಗೆ ವಿಡಿಯೊ ಸಮಾವೇಶ ಮೂಲಕ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಿದ್ದಾರೆ.

ಈ ಹೊಸ ವಂದೇ ಭಾರತ್ ರೈಲುಗಳು ದೇಶದಾದ್ಯಂತ ಸಂಪರ್ಕವನ್ನು ಸುಧಾರಿಸುವ ಮತ್ತು ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿಯವರ ದೃಷ್ಟಿಯನ್ನು ಸಾಕಾರಗೊಳಿಸುವತ್ತ ಒಂದು ಹೆಜ್ಜೆಯಾಗಿದೆ. ಹಸಿರು ನಿಶಾನೆ ಕಾಣಲಿರುವ ಹೊಸ ರೈಲುಗಳು:

1.ಉದಯಪುರ - ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್

2.ತಿರುನಲ್ವೇಲಿ-ಮಧುರೈ- ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್

3.ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್

4.ವಿಜಯವಾಡ - ಚೆನ್ನೈ (ರೇಣಿಗುಂಟಾ ಮೂಲಕ) ವಂದೇ ಭಾರತ್ ಎಕ್ಸ್ಪ್ರೆಸ್

5.ಪಾಟ್ನಾ - ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್

6.ಕಾಸರಗೋಡು  - ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್

7. ರೂರ್ಕೆಲಾ - ಭುವನೇಶ್ವರ್ - ಪುರಿ ವಂದೇ ಭಾರತ್ ಎಕ್ಸ್ಪ್ರೆಸ್

8.ರಾಂಚಿ - ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್

9. ಜಾಮ್ ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್
 

ಈ ಒಂಬತ್ತು ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ ಸೇರಿದಂತೆ ಹನ್ನೊಂದು ರಾಜ್ಯಗಳಾದ್ಯಂತ ರೈಲು ಸಂಪರ್ಕವನ್ನು ಹೆಚ್ಚಿಸುತ್ತವೆ.

ಈ ವಂದೇ ಭಾರತ್ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ಅತ್ಯಂತ ವೇಗದ ರೈಲು ಆಗಿರುತ್ತವೆ ಮತ್ತು ಪ್ರಯಾಣಿಕರ ಗಣನೀಯ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ಮಾರ್ಗದಲ್ಲಿ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ, ರೂರ್ಕೆಲಾ- ಭುವನೇಶ್ವರ್ - ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಕಾಸರಗೋಡು - ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್ ಸುಮಾರು 3 ಗಂಟೆಗಳ ಸಮಯ ಉಳಿತಾಯದ ವೇಗ ಹೊಂದಿರುತ್ತವೆ; ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ 2.5 ಗಂಟೆಗಳಿಗಿಂತ ಹೆಚ್ಚು ಸಮಯ ಉಳಿತಾಯ; ತಿರುನಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ 2 ಗಂಟೆಗಳಿಗೂ ಹೆಚ್ಚು; ರಾಂಚಿ - ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್, ಪಾಟ್ನಾ - ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಜಾಮ್ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ಸುಮಾರು 1 ಗಂಟೆ; ಮತ್ತು ಉದಯಪುರ - ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್ ಸುಮಾರು ಅರ್ಧ ಗಂಟೆ ಸಮಯ ಉಳಿತಾಯ ಮಾಡುತ್ತವೆ.

ದೇಶದಾದ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳ ಸಂಪರ್ಕವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ರೂರ್ಕೆಲಾ-ಭುವನೇಶ್ವರ್-ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ತಿರುನಲ್ವೇಲಿ-ಮಧುರೈ-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಮುಖ ಧಾರ್ಮಿಕ ಪಟ್ಟಣಗಳಾದ ಪುರಿ ಮತ್ತು ಮಧುರೈಗಳನ್ನು ಸಂಪರ್ಕಿಸುತ್ತದೆ. ಅಲ್ಲದೆ, ವಿಜಯವಾಡ - ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೇಣಿಗುಂಟಾ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ತಿರುಪತಿ ಯಾತ್ರಾ ಕೇಂದ್ರಕ್ಕೆ ಸಂಪರ್ಕವನ್ನು ಒದಗಿಸುತ್ತದೆ.

ಈ ವಂದೇ ಭಾರತ್ ರೈಲುಗಳ ಅನುಷ್ಠಾನವು ದೇಶದಲ್ಲಿ ಹೊಸ ಗುಣಮಟ್ಟದ ರೈಲು ಸೇವೆಗೆ ನಾಂದಿ ಹಾಡಲಿದೆ. ವಿಶ್ವ ದರ್ಜೆಯ ಸೌಕರ್ಯಗಳು ಮತ್ತು ಕವಚ ತಂತ್ರಜ್ಞಾನ ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ರೈಲುಗಳು ಸಾಮಾನ್ಯ ಜನರು, ವೃತ್ತಿಪರರು, ಉದ್ಯಮಿಗಳು, ವಿದ್ಯಾರ್ಥಿ ಸಮುದಾಯ ಮತ್ತು ಪ್ರವಾಸಿಗರಿಗೆ ಆಧುನಿಕ, ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುವ ಪ್ರಮುಖ ಹೆಜ್ಜೆಯಾಗಿರುತ್ತವೆ.

****(Release ID: 1959922) Visitor Counter : 157