ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

​​​​​​​ಜಿ20 ಶೃಂಗಸಭೆಯ ಮೊದಲು ಅಂತರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿನ ವ್ಯವಸ್ಥೆಗಳನ್ನು ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಪರಿಶೀಲಿಸಿದರು


ಐತಿಹಾಸಿಕ ಬೃಹತ್‌ ಪ್ರಮಾಣದ ಕಾರ್ಯಕ್ರಮ, ಜಾಗತಿಕ ನಾಯಕರ ಶೃಂಗಸಭೆಯು ಇತಿಹಾಸವನ್ನು ನಿರ್ಮಿಸುತ್ತದೆ: ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್

ಮಾಧ್ಯಮ ಕೇಂದ್ರವು ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ"

Posted On: 05 SEP 2023 6:23PM by PIB Bengaluru

ಜಿ20 ನಾಯಕರ ಶೃಂಗಸಭೆಯ ಪೂರ್ವ ಸಿದ್ಧತೆ ಮತ್ತು ವ್ಯವಸ್ಥೆಗಳನ್ನು ಪರಿಶೀಲಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು (05-09-2023 ರಂದು) ಅಂತರಾಷ್ಟ್ರೀಯ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದರು. ನವದೆಹಲಿಯ ಭಾರತ ಮಂಟಪಮ್ ನಲ್ಲಿ 2023 ರ ಸೆಪ್ಟೆಂಬರ್ 9-10 ರ ನಡುವೆ ಜಿ20 ಶೃಂಗಸಭೆ ನಡೆಯಲಿದೆ. ಸಚಿವರ ಭೇಟಿಯ ಸಂದರ್ಭದಲ್ಲಿ, ಸಚಿವರಿಗೆ ಸ್ಥಳದಲ್ಲಿ ಎಂ.ಸಿ.ಆರ್‌,  ಸ್ಟುಡಿಯೋ, ಪಿ.ಸಿ.ಆರ್‌, ಪಿಕ್ಯೂಆರ್‌ ಮತ್ತು ಸಾಮಾಜಿಕ ಮಾಧ್ಯಮ ಕೊಠಡಿಯ ವ್ಯವಸ್ಥೆಗಳನ್ನು, ಚಟುವಟಿಕೆಗಳನ್ನು ವಿವರಿಸಲಾಯಿತು.

ಭಾರತವು ಜಿ20 ನಾಯಕರ ಶೃಂಗಸಭೆಯನ್ನು ಆಯೋಜಿಸಲು ಉತ್ಸುಕವಾಗಿದೆ ಎಂದು ಕೇಂದ್ರ ಸಚಿವ ಶ್ರೀ ಠಾಕೂರ್ ಅವರು ಹೇಳಿದರು. ಕಳೆದ ಒಂದು ವರ್ಷದಲ್ಲಿ ಭಾರತದಾದ್ಯಂತ 60 ಕ್ಕೂ ಹೆಚ್ಚು ನಗರಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳು ನಡೆದಿವೆ, ಈ ಸಮಯದಲ್ಲಿ ಅಗಾಧ ಪ್ರಮಾಣದ  ಪ್ರತಿಕ್ರಿಯೆ ಲಭಿಸಿದೆ. ಈ ಕಾರ್ಯಕ್ರಮದ ಸಂಘಟನೆಯು ಐತಿಹಾಸಿಕವಾಗಿದೆ ಮತ್ತು ನಾಯಕರ ಶೃಂಗಸಭೆಯು ಇತಿಹಾಸವನ್ನು ನಿರ್ಮಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಹೇಳಿದರು.

ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರ (ದಿ ಇಂಟರ್‌ನ್ಯಾಶನಲ್ ಮೀಡಿಯಾ ಸೆಂಟರ್‌)ನಲ್ಲಿ ವ್ಯವಸ್ಥೆಗಳ ಕುರಿತು ಮಾತನಾಡಿದ ಕೇಂದ್ರ ಸಚಿವರು, ಇದು ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದೆ ಮತ್ತು ಇದು ನವ ಭಾರತದ ಶಕ್ತಿಯನ್ನು ತೋರಿಸುತ್ತದೆ. ಮೀಡಿಯಾ ಕೇಂದ್ರದ ಗೋಡೆಗಳಲ್ಲಿ ಭಾರತದ ಕಲೆ ಮತ್ತು ಸಂಸ್ಕೃತಿಯ ತುಣುಕುಗಳು ಅಲಂಕರಿಸುತ್ತಿವೆ. ಜಿ20 ಶೃಂಗಸಭೆ ನಡೆಯುವ ಭಾರತ ಮಂಟಪದ ಪಕ್ಕದಲ್ಲೇ ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರವಿದೆ.

 

 

ಮುಖ್ಯ ಮಾಧ್ಯಮ ಕೇಂದ್ರ, ಪತ್ರಿಕಾಗೋಷ್ಠಿಗಳ ಸ್ಥಳವನ್ನು “ಹಿಮಾಲಯ” ಎಂದು ಹೆಸರಿಸಲಾಗಿದೆ ಮತ್ತು 300 ಕ್ಕೂ ಹೆಚ್ಚು ಪತ್ರಕರ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಾರತವು ತನ್ನ ಡಿಜಿಟಲ್ ಪಾವತಿ ವ್ಯವಸ್ಥೆಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ ಮತ್ತು ಈ ತಾಂತ್ರಿಕ ಸಾಧನೆಯನ್ನು ಇಲ್ಲಿನ ಪೆವಿಲಿಯನ್‌ ಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

 

 

ಶೃಂಗಸಭೆಯ ಸಮಯದಲ್ಲಿ ಭಾರತದ ಬೃಹತ್‌ ಸಾಧನೆಗಳ ಅನಾವರಣಗಳ ಕುರಿತು, " ಜಿ20 ಶೃಂಗಸಭೆಯ ಸಮಯದಲ್ಲಿ ಭಾರತವು ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುತ್ತಿದೆ ಮತ್ತು ಅದೇ ಸಮಯದಲ್ಲಿ ನವ ಭಾರತದ ಉನ್ನತ ಚಿತ್ರಣವನ್ನು ಕೂಡಾ ಜಾಗತಿಕ ದೇಶಗಳ ಮುಂದಿಡುತ್ತದೆ" ಎಂದು ಕೇಂದ್ರ ಸಚಿವರು ಹೇಳಿದರು.

“ಪ್ರಪಂಚದಾದ್ಯಂತದ ಮಾಧ್ಯಮ ಸಿಬ್ಬಂದಿಗಳ ಅತಿದೊಡ್ಡ ಸಭೆಯನ್ನು ಈ ಬಾರಿಯ ಜಿ20 ಕಾಣಲಿದೆ” ಎಂದು ಹೇಳಿದ ಕೇಂದ್ರ ಸಚಿವರು, ಪ್ರಪಂಚದಾದ್ಯಂತದ ಮಾಧ್ಯಮ ಭ್ರಾತೃತ್ವಕ್ಕೆ ಆತ್ಮೀಯ ಸ್ವಾಗತವನ್ನು ಕೋರಿದರು.

ದೂರದರ್ಶನ ಕಾರ್ಯಕ್ರಮದ ಪ್ರಸಾರಕ್ಕಾಗಿ ವಿಸ್ತಾರವಾದ ವ್ಯವಸ್ಥೆಯನ್ನು ನಿರ್ಮಿಸಿದ್ದಕ್ಕಾಗಿ ಸಂಘಟಕ ಸಿಬ್ಬಂದಿಗಳನ್ನು ಶ್ಲಾಘಿಸಿದ ಕೇಂದ್ರ ಸಚಿವರು, ವಿಮಾನ ನಿಲ್ದಾಣದಿಂದ ಭಾರತ್ ಮಂಟಪದವರೆಗೆ ವಿವಿಧ ಸ್ಥಳಗಳಲ್ಲಿ 78 ಕ್ಕೂ ಹೆಚ್ಚು ಯು.ಹೆಚ್‌.ಡಿ. ಮತ್ತು 4-ಕೆ ಕ್ಯಾಮೆರಾಗಳನ್ನು ಅಳವಡಿಸುವುದರೊಂದಿಗೆ, ಪೂರ್ವ ವ್ಯವಸ್ಥೆಯಲ್ಲಿ ದೂರದರ್ಶನವು ಕೂಡಾ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ, ಜೊತೆಗೆ ಎಲ್ಲಾ ಮಾಧ್ಯಮಗಳಿಗೂ ಶುದ್ಧ ಆಹಾರ ನೀಡಲಾಗುವುದು ಎಂದು ತಿಳಿಸಿದರು.

ಹಿನ್ನೆಲೆ

ಮಾಧ್ಯಮದವರಿಗೆ ಅನುಕೂಲವಾಗುವಂತೆ ವ್ಯಾಪಕ ಸೌಕರ್ಯ ವ್ಯವಸ್ಥೆಗಳನ್ನು ಮಾಧ್ಯಮ ಕೇಂದ್ರದ ಸ್ಥಳದಲ್ಲಿಯೇ ಮಾಡಲಾಗಿದೆ

  • ಮುಖ್ಯ ಶೃಂಗಸಭೆಯು ಭಾರತ ಮಂಟಪದಲ್ಲಿ ನಡೆಯಲಿದೆ ಮತ್ತು ನವದೆಹಲಿಯ ಇಂಟರ್ನ್ಯಾಷನಲ್ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ಐ.ಟಿ.ಪಿ.ಒ) ಕಾಂಪ್ಲೆಕ್ಸ್‌ ನ ಸಭಾಂಗಣ 4 ಮತ್ತು 5 ಸನಿಹದಲ್ಲಿ ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರ (ದಿ ಇಂಟರ್‌ನ್ಯಾಶನಲ್ ಮೀಡಿಯಾ ಸೆಂಟರ್‌ –ಐ.ಎಂ.ಸಿ) ಅನ್ನು ನಿರ್ಮಿಸಲಾಗಿದೆ.
  • ಆಗಮನ, ನಿರ್ಗಮನ, ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳು, ದ್ವಿಪಕ್ಷೀಯ ಸಭೆಗಳು, (ಎನ್.ಜಿ.ಎಂ.ಎ. & ಐ.ಸಿ.ಎ.ಆರ್.) ಸಂಗಾತಿಗಳ ಕಾರ್ಯಕ್ರಮ ಮತ್ತು ರಾಜ್ ಘಾಟ್‌‌ ನಲ್ಲಿ ಕಾರ್ಯಕ್ರಮಗಳು ಇತ್ಯಾದಿಗಳಂತಹ ಅಧಿಕೃತ ಕಾರ್ಯಕ್ರಮಗಳು ದೂರದರ್ಶನ ಮತ್ತು ಅಧಿಕೃತ ವಿದೇಶಿ ಮಾಧ್ಯಮಗಳಿಂದ ಮಾತ್ರ ಪ್ರಸಾರ ಮಾಡಲ್ಪಡುತ್ತವೆ.  ಎಲ್ಲರಿಗೂ ಶುದ್ಧ ಆಹಾರ ನೀಡಲಾಗುವುದು.
  • ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರ (ಐ.ಎಂ.ಸಿ)ದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ 2000 ಮಾಧ್ಯಮ ಪ್ರತಿನಿಧಿಗಳನ್ನು ಏಕಕಾಲಕ್ಕೆ ಸೇರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
  • ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರ (ಐ.ಎಂ.ಸಿ)ವು ಅಧಿಕೃತ ಮಾಧ್ಯಮ ಸೇರಿದಂತೆ ಎಲ್ಲಾ ದೇಶೀಯ ಮತ್ತು ವಿದೇಶಿ ಮಾಧ್ಯಮಗಳಿಗೆ ಆತಿಥ್ಯ ನೀಡುತ್ತದೆ.
  • ಮಾನ್ಯತೆ ಪಡೆದ (ನೋಂದಣಿ ಮಾಡಿದ ಎಲ್ಲರ ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರ ಒದಗಿಸಲಾದ ಆನ್‌ಲೈನ್ ಮಾನ್ಯತೆ) ಮಾಧ್ಯಮ ಸಿಬ್ಬಂದಿಗೆ ಮಾತ್ರ ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರ (ಐ.ಎಂ.ಸಿ)ಕ್ಕೆ ಪ್ರವೇಶ ಅನುಮತಿಸಲಾಗಿದೆ.

 

ಎಲ್ಲಾ ಮಾಧ್ಯಮ ಸಿಬ್ಬಂದಿಗಳಿಗೂ ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರ(ಐ.ಎಂ.ಸಿ)ದಲ್ಲಿ ಕೆಳಗಿನ ಸೌಲಭ್ಯ-ಸವಲತ್ತುಗಳನ್ನು ಒದಗಿಸಲಾಗುವುದು.

1) ಇಂಟರ್ನೆಟ್ ಸಂಪರ್ಕ ಮತ್ತು ಪ್ರಿಂಟರ್‌ನೊಂದಿಗೆ 1300 ಕ್ಕೂ ಹೆಚ್ಚು ಕೆಲಸದ ಘಟಕಗಳು

2)ತೀವ್ರ ವೇಗ ಗತಿಯ ವೈಫೈ ವ್ಯವಸ್ಥೆ

3)ಅಂತರರಾಷ್ಟ್ರೀಯ ಪ್ರಸಾರ ಕೇಂದ್ರ(ಇಂಟರ್ನ್ಯಾಷನಲ್ ಬ್ರಾಡ್ಕಾಸ್ಟಿಂಗ್ ಸೆಂಟರ್ –ಐ.ಬಿ.ಸಿ): ಭಾರತ ಮಂಟಪದಿಂದ ನೇರ ಪ್ರಸಾರ ಪೂರೈಕೆಗಾಗಿ, ಪ್ರಸಾರ ಭಾರತಿ ರೆಕಾರ್ಡ್ ಮಾಡಿದೆ

4)ಸಣ್ಣ ಮಾಧ್ಯಮ ಬೂತ್‌ ಗಳು, ಪರಸ್ಪರ ನೇರ (ಮುಖಾಮುಖಿ) ಸಂದರ್ಶನ ಕೊಠಡಿಗಳು

5)ಮಾಧ್ಯಮ ಹೇಳಿಕೆಯ(ಬ್ರೀಫಿಂಗ್) ಕೊಠಡಿಗಳು (ರಾಯಭಾರ ಕಚೇರಿಗಳು ಮತ್ತು ಅಧಿಕೃತ ಮಾಧ್ಯಮಕ್ಕಾಗಿ 100/50 ಮಾಧ್ಯಮಗಳ ಸಾಮರ್ಥ್ಯ): ಇಲ್ಲಿ ವಿದೇಶಿ ಪ್ರತಿನಿಧಿಗಳು ಮಾಧ್ಯಮ ಹೇಳಿಕೆಯ(ಬ್ರೀಫಿಂಗ್)ಗಳನ್ನು ಆಯೋಜಿಸಲಿದ್ದಾರೆ.

6)ವರದಿ ಮಾಡಲು ಲೈವ್ ಸ್ಟ್ಯಾಂಡ್-ಅಪ್ ಸ್ಥಾನಗಳು ಮಾಧ್ಯಮಕ್ಕೆ ಲಭ್ಯವಿದೆ.

7)ಮಾಧ್ಯಮಗಾರರ ವಿಶ್ರಾಂತಿ ಕೊಠಡಿಗಳು

8)ಮಾಹಿತಿ ಕಿಯೋಸ್ಕ್‌ ಗಳು

9)ಸಹಾಯವಾಣಿ ಕೇಂದ್ರ

10)ವೈದ್ಯಕೀಯ ಕೊಠಡಿ

11)ವಿವಿಧ ಜಾಗತಿಕ ರುಚಿಯ ಭಕ್ಷಗಳು-ಆಹಾರ ಆಯ್ಕೆಗಳು ಲಭ್ಯವಿರುತ್ತವೆ

12)1400 ಪಾರ್ಕಿಂಗ್ ಸೌಲಭ್ಯಗಳು ಮತ್ತು 80 ಕ್ಕೂ ಹೆಚ್ಚು ಶಟಲ್ ಬಸ್‌ಗಳು ಜೆ.ಎಲ್.ಎನ್. ಮತ್ತು  ಐ.ಎಂ.ಸಿ. ನಡುವೆ ನಿರಂತರ ಸಂಚರಿಸುತ್ತವೆ

ಇದಲ್ಲದೆ, ಪ್ರದರ್ಶನಗಳು ಮಾಧ್ಯಮ ಭೇಟಿಗಳಿಗಾಗಿ ಕೆಳಗಿನವು ತೆರೆದಿರುತ್ತವೆ

#ಹಾಲ್ 3ರ ಮುಂಭಾಗದಲ್ಲಿರುವ ಆರ್.ಬಿ.ಐ. ನ ಡಿಜಿಟಲ್ ಇನ್ನೋವೇಶನ್ ಪೆವಿಲಿಯನ್

#ಹಾಲ್ 5ರ ಮುಂಭಾಗದಲ್ಲಿ ಮದರ್ ಆಫ್ ಡೆಮಾಕ್ರಸಿ (ವಿಡಿಯೋ) ಪ್ರದರ್ಶನ

#ಹಾಲ್ 4ರ ಮುಂಭಾಗದಲ್ಲಿ ಎಂ.ಇ.ಟಿ.ವೈ.ಯಿಂದ ಮನೋಚೇತೋಹಾರಿ ಅನುಭವದ ಡಿಜಿಟಲ್ ಇಂಡಿಯಾ ಪ್ರದರ್ಶನ

#ಹಾಲ್ 3ರ ನೆಲ ಮಹಡಿಯಲ್ಲಿ ಒಡಿಒಪಿ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿದೆ

ಭಾರತವು 1 ಡಿಸೆಂಬರ್ 2022 ರಿಂದ ಜಾಗತಿಕ ಹೆಮ್ಮೆಯ ಜಿ20 ಅಧ್ಯಕ್ಷ ಸ್ಥಾನವನ್ನು “ವಸುಧೈವ ಕುಟುಂಬಕಂ” ಅಥವಾ “ಒಂದು ಭೂಮಿ · ಒಂದು ಕುಟುಂಬ · ಒಂದು ಭವಿಷ್ಯ” ಎಂಬ ವಿಷಯದ ಅಡಿಯಲ್ಲಿ ಹೊಂದಿದೆ.

ಅಂದಿನಿಂದ, ಸದಸ್ಯ ರಾಷ್ಟ್ರಗಳು, ಆಹ್ವಾನಿತ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ ಪ್ರಪಂಚದಾದ್ಯಂತದ 1000 ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ಭಾರತದಾದ್ಯಂತ 60 ಕ್ಕೂ ಹೆಚ್ಚು ನಗರಗಳಲ್ಲಿ ಸುಮಾರು 220 ಸಭೆಗಳನ್ನು ವೈಭವೋಪೇತವಾಗಿ  ನಡೆಸಲಾಗಿದೆ.

ಭಾರತದ ಜಿ20 ಅಧ್ಯಕ್ಷೀಯತೆಯು ಜನಭಾಗಿದಾರಿಯ ರೂಪದಲ್ಲಿ ದೇಶದ ಮೂಲೆ ಮೂಲೆಗಳಿಗೆ ಈ ಬೃಹತ್ ಸಂಗಮವಾಗಿ ಹರಡುವುದನ್ನು ಕಳೆದ ಹಲವಾರು ತಿಂಗಳುಗಳಿಂದ ನಾವು ಬಹಳ ವಿಶೇಷ ರೂಪದಲ್ಲಿ ವೀಕ್ಷಿಸಿದೆವು. ಭಾರತದಲ್ಲಿ ಕೇವಲ ಸರ್ಕಾರವಲ್ಲ, ಎಲ್ಲಾ 140-ಕೋಟಿ ಜನತೆಯೂ ಈ ಮಹಾ ಜಾಗತಿಕ ಸಮಾರಂಭದ ಅತಿಥೇಯರಾಗಿದ್ದಾರೆ.

ಭಾರತದ ಅಧ್ಯಕ್ಷೀಯತೆಯ ಜಿ20 ಈ ಕಾರ್ಯಕ್ರಮವು ಜಾಗತಿಕ ಮತ್ತು ದೇಶೀಯ ಮಾಧ್ಯಮಗಳ ಅತಿದೊಡ್ಡ ಕೂಟ ಹಾಗೂ ಬೃಹತ್‌ ಸಮಾಗಮನವನ್ನು ಎದುರು ನೋಡುತ್ತಿದೆ

 

****    

 

 


(Release ID: 1955060) Visitor Counter : 130