ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಕ್ರೀಡಾ ದಿನದಂದು ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಜಾಲತಾಣ ಗೆ ಚಾಲನೆ ನೀಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್ 


ಫಿಟ್ ಇಂಡಿಯಾ ರಸಪ್ರಶ್ನೆಯ(ಕ್ವಿಜ್)  ಮೂರನೇ ಆವೃತ್ತಿಯನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಪ್ರಕಟಿಸಿದರು

ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಗೆಲುವು ಸಾಧಿಸಿದ  4x400 ಮೀ ಪುರುಷರ ರಿಲೇ ತಂಡವನ್ನು ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಅಭಿನಂದಿಸಿದರು.

ಕ್ರೀಡಾ ಕ್ಷೇತ್ರದಿಂದ ಹಿಡಿದು ಚಂದ್ರಯಾನದೊಂದಿಗೆ ಚಂದ್ರಗ್ರಹದ ಮೇಲೆ ನಾವು ನಮ್ಮ ಛಾಪು ಮೂಡಿಸಿದ್ದೇವೆ. ಇದು ಹೊಸ ಭಾರತ: ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 29 AUG 2023 6:25PM by PIB Bengaluru

ರಾಷ್ಟ್ರೀಯ ಕ್ರೀಡಾ ದಿನ 2023 ರ ಸಂದರ್ಭದಲ್ಲಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ಜೆ.ಎಲ್.ಎನ್. ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಿಟ್ ಇಂಡಿಯಾ ಕ್ವಿಜನ ಮೂರನೇ ಆವೃತ್ತಿಯನ್ನು ಉದ್ಘಾಟಿಸಿದರು.

ನವದೆಹಲಿಯ ವಿವಿಧ ಶಾಲೆಗಳ ಸುಮಾರು 500 ಶಾಲಾ ಮಕ್ಕಳು ಹಾಗೂ  ಎಂ.ವೈ.ಎ.ಸ್. ,  ಎಸ್.ಎ.ಐ. ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಗಳ ಹಲವಾರು ಗಣ್ಯ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬುಡಾಪೆಸ್ಟ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಹೊಸದಾಗಿ ಏಷ್ಯನ್ ದಾಖಲೆಯನ್ನು ನಿರ್ಮಿಸಿದ ನಂತರ 4x400ಮಿ ಪುರುಷರ ರಿಲೇ ತಂಡವನ್ನು ಅಭಿನಂದಿಸುವುದರೊಂದಿಗೆ ಸಚಿವರು ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಮಂಜೂರಾದ ಕ್ರೀಡಾ ಮೂಲಸೌಕರ್ಯ ಯೋಜನೆಗಳ ಮಾಹಿತಿಯ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಗಳ ಜಾಲತಾಣ ಅನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಶ್ರೀ ಠಾಕೂರ್ ಅವರು, “ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರು ನಮಗೆ 1928, 1932 ಮತ್ತು 1936 ರಲ್ಲಿ ಹಾಕಿಯಲ್ಲಿ ಸತತ ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ನೀಡಿದರು. ಈ ಮಹಾನ್ ಮಾಂತ್ರಿಕನಿಗೆ ಗೌರವ ಸಲ್ಲಿಸಲು ಇದು ಸೂಕ್ತವಾದ ದಿನವಾಗಿದೆ ಮತ್ತು ಈ ಸುಸಂದರ್ಭಕ್ಕಾಗಿ ನಾನು ಸಂತೋಷಪಡುತ್ತೇನೆ. ಮುಂಬರುವ ವರ್ಷಗಳಲ್ಲಿ, ಈ ಕ್ರೀಡಾ ಕ್ರಾಂತಿಯನ್ನು ಇನ್ನೂ ಬಲಿಷ್ಠವಾಗಿ ಮುಂದಕ್ಕೆ ಕೊಂಡೊಯ್ಯಲು ತರಬೇತುದಾರರು ಮತ್ತು ಕ್ರೀಡಾಪಟುಗಳು ದೊಡ್ಡ ಪಾತ್ರವನ್ನು ವಹಿಸಲಿದ್ದಾರೆ” ಎಂದು ಹೇಳಿದರು.

“ಭಾರತದಾದ್ಯಂತ ವಾರ್ಷಿಕವಾಗಿ 3526 ಕ್ರೀಡಾ ಕಾರ್ಯಕ್ರಮಗಳು ನಡೆಯುತ್ತಿವೆ ಮತ್ತು ನಾವು ಇಂದು ಬಂದಿರುವ ಈ ಸಾಧನೆಯ ಹಾದಿಗೆ ಇದು ಸಾಕ್ಷಿಯಾಗಿದೆ. ಇದು ಭಾರತೀಯ ಕ್ರೀಡೆಗಳಿಗೆ ನಂಬಲಾಗದ ಹಂತವಾಗಿದೆ. ಕಳೆದ 60 ವರ್ಷಗಳಲ್ಲಿ, ವಿಶ್ವಮಟ್ಟದ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಕೇವಲ 18 ಪದಕಗಳು ಮಾತ್ರ ಇದ್ದವು. ಆದರೆ, ಈ ವರ್ಷ ನಡೆದ ಟೂರ್ನಿಯಲ್ಲಿ ನಾವು 26 ಪದಕ ಗೆದ್ದಿದ್ದೇವೆ. ಆ ಹಂತ ತಲುಪಿದ್ದೇವೆ. ಅಷ್ಟೇ ಅಲ್ಲ, ಎಲ್ಲಾ ಕ್ರೀಡೆಗಳಲ್ಲಿ, ಚೆಸ್ ನಲ್ಲಿ ಶ್ರೀ ಪ್ರಗ್ನಾನಂದರಿಂದ ಹಿಡಿದು ಕುಸ್ತಿಯಲ್ಲಿ ಕು. ಅಂತಿಮ್ ಪಂಗಲ್ ಮತ್ತು ಬಿಲ್ಲುಗಾರಿಕೆಯಲ್ಲಿ ಕು. ಅದಿತಿ ಗೋಪಿಚಂದ್ ಸ್ವಾಮಿ ಇರಲಿ, ನಾವು ಎಲ್ಲಾ ಕ್ರೀಡೆಗಳಲ್ಲೂ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಬುಡಾಪೆಸ್ಟ್ ನಲ್ಲೂ, ನಮ್ಮ 4x400 ಮೀ ರಿಲೇ ತಂಡವು ಉತ್ತಮ ಪ್ರದರ್ಶನವನ್ನು ನೀಡಿದೆ. ಕ್ರೀಡೆಯ ಸಾಧ್ಯವಿರುವ ಎಲ್ಲ ಉನ್ನತ ಮಟ್ಟದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಮ್ಮ ಸದಾ ಉತ್ಸಾಹಿ ಸಾಧಕರಾದ ಪಾರುಲ್ ಚೌಧರಿ ಮತ್ತು ನೀರಜ್ ಚೋಪ್ರಾ ಅವರು ಚಿನ್ನದ ಪದಕವನ್ನು ಪಡೆದಿದ್ಧಾರೆ ”ಎಂದು ಸಚಿವರು ಹೇಳಿದರು.  

ಫಿಟ್ ಇಂಡಿಯಾ ರಸಪ್ರಶ್ನೆಯ (ಕ್ವಿಜ್) ಎರಡು ಯಶಸ್ವಿ ಆವೃತ್ತಿಯ ನಂತರ, 3 ನೇ ಆವೃತ್ತಿಯನ್ನು ಈಗ ಘೋಷಿಸಲಾಯಿತು. ಇದು ಶಾಲಾ ವಿದ್ಯಾರ್ಥಿಗಳಿಗೆ ಭಾರತದ ಅತಿದೊಡ್ಡ ಕ್ರೀಡೆ ಮತ್ತು ಫಿಟ್ನೆಸ್ ರಸಪ್ರಶ್ನೆ ಸ್ಪರ್ಧೆಯಾಗಿದ್ದು, ಒಟ್ಟು ರೂ 3.25 ಕೋಟಿ ಬಹುಮಾನವನ್ನು ಹೊಂದಿದೆ. ಫಿಟ್ ಇಂಡಿಯಾ ರಸಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ಶ್ರೀ ಠಾಕೂರ್ ಅವರು, “ಅರುಣಾಚಲದ ಟೆಂಗಾ ಕಣಿವೆಯ ವಿದ್ಯಾರ್ಥಿಗಳು ಅಂಡಮಾನ್, ಸಿಕ್ಕಿಂ ಮುಂತಾದ ದೂರದ ಸ್ಥಳಗಳೊಂದಿಗೆ ಫಿಟ್ ಇಂಡಿಯಾ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಅವರು ರಸಪ್ರಶ್ನೆಯ ಸ್ಪರ್ಧೆಯಲ್ಲಿ ಅಗ್ರ ತಂಡಗಳಾಗಿದ್ದರು.” ಎಂದು ಹೇಳಿದರು.  

“ಕ್ರೀಡಾ ಕ್ಷೇತ್ರದಿಂದ ಹಿಡಿದು ಚಂದ್ರಯಾನದ ಯಶಸ್ಸಿನೊಂದಿಗೆ ಚಂದ್ರಗ್ರಹದ ಮೇಲೆ ನಾವು ನಮ್ಮ ಛಾಪು ಮೂಡಿಸಿದ್ದೇವೆ. ಇದು ನವ ಭಾರತ. ನಮ್ಮ ಕ್ರೀಡಾಳುಗಳು ನಮ್ಮನ್ನು ಅಗ್ರಸ್ಥಾನಕ್ಕೆ ತಲುಪಿಸಲು ಎಲ್ಲಾ ಸಾಧನೆಗಳನ್ನೂ ಮಾಡಿದ್ದಾರೆ. ನಾನು ಕೇವಲ ಎನ್.ಎಸ್.ಎಫ್.ಗಳು ಮತ್ತು ಐ.ಒ.ಎ.ಗಳನ್ನು ಮಾತ್ರವಲ್ಲದೆ ತಮ್ಮ ಮಕ್ಕಳನ್ನು ಶಿಸ್ತುಬದ್ಧವಾಗಿ ಮತ್ತು ಕ್ರೀಡಾ ಕ್ಷೇತ್ರಕ್ಕೆ ಪ್ರವೇಶಿಸುವಂತೆ ಪ್ರೋತ್ಸಾಹ ನೀಡಿ ಸಹಾಯ ಮಾಡಿದ ಹಲವಾರು ಪೋಷಕರು ಮತ್ತು ತರಬೇತುದಾರರನ್ನು ಸಹ ಈ ಸಂದರ್ಭದಲ್ಲಿ ಅಭಿನಂದಿಸ ಬಯಸುತ್ತೇನೆ”ಎಂದು ಸಚಿವರು ಹೇಳಿದರು.

ಭಾರತ ಸರ್ಕಾರದ ಡಿಜಿಟಲ್ ಇಂಡಿಯಾದ ದೃಷ್ಟಿಕೋನಕ್ಕೆ ಅನುಗುಣವಾಗಿ ಕ್ರೀಡಾ ವ್ಯವಹಾರಗಳ ಸುಲಭತೆ ಮತ್ತು ಉತ್ತಮ ಆಡಳಿತವನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಜಾಲತಾಣ ಅನ್ನು ಪ್ರಾರಂಭಿಸಲಾಯಿತು.  ಇದು ಎನ್.ಎಸ್.ಎಫ್.ಗಳಿಗೆ ಏಕೀಕೃತ ಆನ್ಲೈನ್ ಜಾಲತಾಣ ಆಗಿದೆ. ಎನ್.ಎಸ್.ಎಫ್. ಗಳ ಗುರುತಿಸುವಿಕೆ, ವಾರ್ಷಿಕ ನವೀಕರಣ, ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಗಳ ಚುನಾವಣೆ ಇತ್ಯಾದಿಗಳನ್ನು ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಇದು ಏಕ ಗವಾಕ್ಷಿ ವ್ಯವಸ್ಥೆಯಾಗಿದೆ. 

ಈ ಜಾಲತಾಣದಿಂದಾಗಿ, ಎನ್.ಎಸ್.ಎಫ್.ಗಳಿಂದ ದಾಖಲೆಗಳನ್ನು ಸಲ್ಲಿಸುವ ಭೌತಿಕ ವಿಧಾನದ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಮತ್ತು ಕೇಂದ್ರ ಕ್ರೀಡಾ ಸಚಿವಾಲಯದಿಂದ ಅದನ್ನು ಭೌತಿಕ ವಿಧಾನದಲ್ಲಿ ಪರೀಕ್ಷಿಸುವ ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಆನ್ಲೈನ್ ಜಾಲತಾಣ ಕ್ರೀಡಾ ಇಲಾಖೆ ಮತ್ತು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ನಡುವೆ ಉತ್ತಮ ಸಮನ್ವಯವನ್ನು ಖಾತ್ರಿಪಡಿಸುತ್ತದೆ.

ಅಂತೆಯೇ, ಆನ್ಲೈನ್ ಅಪ್ಲಿಕೇಶನ್ ಸಲ್ಲಿಕೆ ಮತ್ತು ಸಂಸ್ಕರಣಾ ಜಾಲತಾಣ ವನ್ನು ಕೂಡಾ ಪ್ರಾರಂಭಿಸಲಾಗಿದೆ, ಇದನ್ನು ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾ ಮೂಲಸೌಕರ್ಯಗಳ ರಚನೆ ಮತ್ತು ಉನ್ನತೀಕರಣ ಮತ್ತು ಕ್ರೀಡಾ ಸಲಕರಣೆಗಳ ಬೇಡಿಕೆಗಾಗಿ ಎಲ್ಲಾ ಅರ್ಜಿಗಳನ್ನು ನಿರ್ವಹಿಸಲು ಬಳಸಿಕೊಳ್ಳಲಾಗುತ್ತದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಈ ಜಾಲತಾಣ ಮೂಲಕ ಮೊದಲ ಸೆಪ್ಟೆಂಬರ್ 2023 ರಿಂದ ಅನುದಾನ ಹಾಗೂ ಇತರೇ ಹಣಕಾಸಿನ ಬೆಂಬಲದ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ.

ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಮಂಜೂರಾದ ಕ್ರೀಡಾ ಮೂಲಸೌಕರ್ಯ ಯೋಜನೆಗಳ ಕುರಿತು ಹಾಗೂ ಖೇಲೋ ಇಂಡಿಯಾ ಯೋಜನೆಯು 2016 ರಿಂದ ಕ್ರೀಡಾ ಉತ್ಕೃಷ್ಟತೆಗಾಗಿ ರಾಷ್ಟ್ರವನ್ನು ಹೇಗೆ ಪರಿವರ್ತಿಸಿದೆ ಎಂಬುದನ್ನು ಈ ಕ್ರೀಡಾ ಮಾಹಿತಿಯ ಕಿರುಪುಸ್ತಕ ತೋರಿಸುತ್ತದೆ. ಈ ಕಿರುಪುಸ್ತಕವು ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿವೃದ್ಧಿಗೊಂಡಿರುವ ಮತ್ತು ಯೋಜನೆ ಹಂತದಲ್ಲಿರುವ ಸಂಪೂರ್ಣ ಕ್ರೀಡಾ ಮೂಲಸೌಕರ್ಯದ ಮೇಲೆ ಬೆಳಕು ಚೆಲ್ಲುತ್ತದೆ. ಖೇಲೋ ಇಂಡಿಯಾ ಯೋಜನೆಯು ಪ್ರಾರಂಭದಿಂದಲೂ, ತಳಮಟ್ಟದಲ್ಲಿ ಗಮನಹರಿಸುವುದರೊಂದಿಗೆ ದೇಶದಲ್ಲಿ ಕ್ರೀಡಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಸಾಧನೆಯ ಹಾದಿಯಲ್ಲಿ, ಈ ಭವ್ಯವಾದ ಸಂದರ್ಭವನ್ನು ಸ್ಮರಿಸಲು ಮತ್ತು ರಾಷ್ಟ್ರೀಯ ಕ್ರೀಡಾ ದಿನದಂದು ಹಾಕಿ ದಂತಕಥೆಯಾದ ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವ ಸಲ್ಲಿಸಲು, ಭಾರತ ಸರ್ಕಾರದ ಹಲವಾರು ಕಚೇರಿಗಳು, ಕೇಂದ್ರ ಸಚಿವಾಲಯದ ಕಚೇರಿಗಳು, ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರಗಳು, ಖೇಲೋ ಇಂಡಿಯಾ ಕೇಂದ್ರಗಳು, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ಹಾಗೂ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹಲವಾರು ಕ್ರೀಡೆ ಮತ್ತು ಫಿಟ್ನೆಸ್ ಚಟುವಟಿಕೆಗಳನ್ನು ನಡೆಸಲಾಯಿತು. ಸ್ಪರ್ಧಾಳುಗಳ ವಯೋಮಾನಕ್ಕೆ ತಕ್ಕಂತೆ, 18-40 ವರ್ಷ ಪ್ರಾಯ, 40-60 ವರ್ಷ ಪ್ರಾಯ ಮತ್ತು 60+ ವರ್ಷ ವಯಸ್ಸಿನವರಿಗೆ , ಹೀಗೆ ವಯಸ್ಸಿಗೆ ಅನುಗುಣವಾಗಿ ವಿವಿಧ ಸ್ಪರ್ಧಾತ್ಮಕ ಮತ್ತು ಮೋಜಿನ ಆಟಗಳನ್ನು ನಡೆಸಲಾಯಿತು.

****


(Release ID: 1953389) Visitor Counter : 152