ಪ್ರಧಾನ ಮಂತ್ರಿಯವರ ಕಛೇರಿ
ಚಂದ್ರಯಾನ-3ರ ಯಶಸ್ಸಿನ ಕುರಿತು ಇಸ್ರೋ ತಂಡವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ
"ನಾನು ಕಾಯುತ್ತಿದ್ದೆ, ನಿಮ್ಮನ್ನು ಭೇಟಿ ಮಾಡಲು ಮತ್ತು ನಿಮ್ಮ ಶ್ರದ್ಧೆ, ಸಮರ್ಪಣೆ, ಧೈರ್ಯ, ನಿಷ್ಠೆ ಮತ್ತು ಉತ್ಸಾಹಕ್ಕೆ ವಂದಿಸಲು ಉತ್ಸುಕನಾಗಿದ್ದೆ"
“ಭಾರತ ಚಂದ್ರನ ಮೇಲಿದೆ! ನಾವು ನಮ್ಮ ರಾಷ್ಟ್ರೀಯ ಹೆಮ್ಮೆಯನ್ನು ಚಂದ್ರನ ಮೇಲೆ ಇರಿಸಿದ್ದೇವೆ"
"ಈ ನವ ಭಾರತವು 21 ನೇ ಶತಮಾನದಲ್ಲಿ ಜಗತ್ತಿನ ದೊಡ್ಡ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ"
"ಚಂದ್ರನ ಮೇಲಿಳಿದ ಕ್ಷಣವು ಈ ಶತಮಾನದ ಅತ್ಯಂತ ಸ್ಪೂರ್ತಿದಾಯಕ ಕ್ಷಣಗಳಲ್ಲಿ ಒಂದಾಗಿದೆ"
"ಇಂದು, ಇಡೀ ಜಗತ್ತು ಭಾರತದ ವೈಜ್ಞಾನಿಕ ಮನೋಭಾವ, ನ ತಂತ್ರಜ್ಞಾನ ಮತ್ತು ನಮ್ಮ ವೈಜ್ಞಾನಿಕ ಮನೋಧರ್ಮದ ಶಕ್ತಿಯನ್ನು ನೋಡುತ್ತಿದೆ ಮತ್ತು ಒಪ್ಪಿಕೊಂಡಿದೆ"
"ನಮ್ಮ 'ಮೂನ್ ಲ್ಯಾಂಡರ್' ಚಂದ್ರನ ಮೇಲೆ 'ಅಂಗದ' ನಂತೆ ದೃಢವಾಗಿ ಕಾಲಿಟ್ಟಿದೆ"
"ಚಂದ್ರಯಾನ-3 ರ ಮೂನ್ ಲ್ಯಾಂಡರ್ ಇಳಿದ ಸ್ಥಳವನ್ನು ಈಗ 'ಶಿವಶಕ್ತಿ' ಎಂದು ಕರೆಯಲಾಗುವುದು"
"ಚಂದ್ರಯಾನ-2 ತನ್ನ ಹೆಜ್ಜೆಗುರುತುಗಳನ್ನು ಬಿಟ್ಟ ಸ್ಥಳವನ್ನು ಈಗ 'ತಿರಂಗಾ' ಎಂದು ಕರೆಯಲಾಗುವುದು"
"ಚಂದ್ರಯಾನ-3 ಚಂದ್ರಯಾನದ ಯಶಸ್ಸಿನಲ್ಲಿ, ನಮ್ಮ ಮಹಿಳಾ ವಿಜ್ಞಾನಿಗಳು, ದೇಶದ ನಾರಿ ಶಕ್ತಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ"
'ಮೂರನೇ ಸಾಲಿನಿಂದ' ಮೊದಲ ಸಾಲಿನವರೆಗಿನ ಪಯಣದಲ್ಲಿ ನಮ್ಮ 'ಇಸ್ರೋ' ದಂತಹ ಸಂಸ್ಥೆಗಳು ದೊಡ್ಡ ಪಾತ್ರವನ್ನು ವಹಿಸಿವೆ"
"ದಕ್ಷಿಣ ಭಾರತದಿಂದ ಚಂದ್ರನ ದಕ್ಷಿಣ ಭಾಗಕ್ಕೆ ಪ್ರಯಾಣ ಸುಲಭವಾಗಿರಲಿಲ್ಲ"
"ಇನ್ನು ಮುಂದೆ, ಪ್ರತಿ ವರ್ಷ, ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲಾಗುತ್ತದೆ"
"ಭಾರತದ ಶಾಸ್ತ್ರಗ್ರಂಥಗಳಲ್ಲಿನ ಖಗೋಳ ಸೂತ್ರಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಮತ್ತು ಅವುಗಳನ್ನು ಹೊಸದಾಗಿ ಅಧ್ಯಯನ ಮಾಡಲು ಹೊಸ ಪೀಳಿಗೆಯು ಮುಂದೆ ಬರಬೇಕು"
"21 ನೇ ಶತಮಾನದ ಈ ಅವಧಿಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸುವ ದೇಶವು ಪ್ರಗತಿ ಕಾಣುತ್ತದೆ"
Posted On:
26 AUG 2023 9:34AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರೀಸ್ ನಿಂದ ಆಗಮಿಸಿದ ನಂತರ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ISTRAC) ಗೆ ಭೇಟಿ ನೀಡಿದರು ಮತ್ತು ಚಂದ್ರಯಾನ-3 ರ ಯಶಸ್ಸಿನ ಕುರಿತು ಇಸ್ರೋ ತಂಡವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿಯವರು ಚಂದ್ರಯಾನ-3 ಮಿಷನ್ ನಲ್ಲಿ ಭಾಗಿಯಾಗಿರುವ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು, ಅಲ್ಲಿ ಅವರಿಗೆ ಚಂದ್ರಯಾನ-3 ಮಿಷನ್ ನಲ್ಲಿನ ಸಂಶೋಧನೆಗಳು ಮತ್ತು ಪ್ರಗತಿಯ ಬಗ್ಗೆ ವಿವರಿಸಲಾಯಿತು.
ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ISTRAC) ನಲ್ಲಿ ತಾವು ಉಪಸ್ಥಿತರಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದರು. ದೇಹ ಮತ್ತು ಮನಸ್ಸು ಇಷ್ಟೊಂದು ಸಂತೋಷದಿಂದ ತುಂಬಿರುವ ಸಂದರ್ಭವು ಅತ್ಯಂತ ಅಪರೂಪ ಎಂದು ಅವರು ಹೇಳಿದರು. ಪ್ರತಿಯೊಬ್ಬರ ಜೀವನದಲ್ಲಿ ಹಾತೊರೆಯುವಿಕೆಯ ಸಂದರ್ಭವು ಮೇಲುಗೈ ಸಾಧಿಸುವ ಕೆಲವು ವಿಶೇಷ ಕ್ಷಣಗಳನ್ನು ಉಲ್ಲೇಖಿಸಿದ ಪ್ರಧಾನಿ, ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಗೆ ತಮ್ಮ ಪ್ರವಾಸದ ಸಮಯದಲ್ಲಿ ಅದೇ ರೀತಿಯ ಭಾವನೆಗಳನ್ನು ನಾನು ಅನುಭವಿಸಿದೆ ಮತ್ತು ತಮ್ಮ ಮನಸ್ಸು ಎಲ್ಲಾ ಸಮಯದಲ್ಲೂ ಚಂದ್ರಯಾನ 3 ಮಿಷನ್ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಹೇಳಿದರು. ತಮ್ಮ ಪೂರ್ವಸಿದ್ಧತೆಯಿಲ್ಲದ ತಮ್ಮ ISTRAC ಭೇಟಿಯಿಂದಾಗಿ ಇಸ್ರೋದಲ್ಲಿನ ವಿಜ್ಞಾನಿಗಳಿಗೆ ಉಂಟಾದ ಅನಾನುಕೂಲತೆಯನ್ನು ಗಮನಿಸಿದ ಭಾವೋದ್ರಿಕ್ತ ಪ್ರಧಾನಿಯವರು, ವಿಜ್ಞಾನಿಗಳ ಶ್ರದ್ಧೆ, ಸಮರ್ಪಣೆ, ಧೈರ್ಯ, ನಿಷ್ಠೆ ಮತ್ತು ಉತ್ಸಾಹಕ್ಕೆ ವಂದಿಸಲು ಮತ್ತು ಅವರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೆ ಎಂದು ಹೇಳಿದರು.
ಇದು ಅಷ್ಟೊಂದು ಸರಳವಾದ ಯಶಸ್ಸಲ್ಲ ಎಂದು ಪ್ರಧಾನಿ ಹೇಳಿದರು. ಈ ಸಾಧನೆಯು ಅನಂತ ಬಾಹ್ಯಾಕಾಶದಲ್ಲಿ ಭಾರತದ ವೈಜ್ಞಾನಿಕ ಶಕ್ತಿಯನ್ನು ಸಾರುತ್ತದೆ ಎಂದು ಅವರು ಹೇಳಿದರು. "ಭಾರತವು ಚಂದ್ರನ ಮೇಲಿದೆ, ನಾವು ನಮ್ಮ ರಾಷ್ಟ್ರೀಯ ಹೆಮ್ಮೆಯನ್ನು ಚಂದ್ರನ ಮೇಲೆ ಇರಿಸಿದ್ದೇವೆ" ಎಂದು ಹರ್ಷಚಿತ್ತರಾದ ಪ್ರಧಾನಿ ಉದ್ಗರಿಸಿದರು. ಈ ಅಭೂತಪೂರ್ವ ಸಾಧನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು “ಇದು ಇಂದಿನ ಭಾರತ ನಿರ್ಭೀತ ಮತ್ತು ಪರಿಶ್ರಮದ ಭಾರತವಾಗಿದೆ. ಇದು ಹೊಸ ಮತ್ತು ಹೊಸ ರೀತಿಯಲ್ಲಿ ಯೋಚಿಸುವ ಭಾರತವಾಗಿದೆ, ಕತ್ತಲೆಯ ವಲಯಕ್ಕೆ ಹೋಗಿ ಜಗತ್ತಿಗೆ ಬೆಳಕನ್ನು ಹರಡುತ್ತದೆ. ಈ ಭಾರತವು 21 ನೇ ಶತಮಾನದಲ್ಲಿ ಪ್ರಪಂಚದ ದೊಡ್ಡ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತದೆ” ಎಂದರು.
ಚಂದ್ರನ ಮೇಲೆ ಇಳಿದ ಕ್ಷಣವು ರಾಷ್ಟ್ರದ ಪ್ರಜ್ಞೆಯಲ್ಲಿ ಅಮರವಾಗಿದೆ ಎಂದು ಪ್ರಧಾನಿ ಹೇಳಿದರು. “ಚಂದ್ರನ ಮೇಲೆ ಇಳಿದ ಕ್ಷಣವು ಈ ಶತಮಾನದ ಅತ್ಯಂತ ಸ್ಪೂರ್ತಿದಾಯಕ ಕ್ಷಣಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ಭಾರತೀಯನೂ ಇದನ್ನು ತನ್ನ ಸ್ವಂತ ಗೆಲುವನ್ನಾಗಿ ತೆಗೆದುಕೊಂಡಿದ್ದಾನೆ”ಎಂದು ಅವರು ಹೇಳಿದರು. ಈ ಮಹಾನ್ ಯಶಸ್ಸಿನ ಶ್ರೇಯಸ್ಸು ವಿಜ್ಞಾನಿಗಳಿಗೆ ಸಲ್ಲಬೇಕು ಎಂದು ಪ್ರಧಾನ ಮಂತ್ರಿ ಹೇಳಿದರು.
ಮೂನ್ ಲ್ಯಾಂಡರ್ ನ ಬಲವಾದ ಹೆಜ್ಜೆಗಳ ಛಾಯಾಚಿತ್ರಗಳನ್ನು ವಿವರಿಸಿದ ಪ್ರಧಾನಿ, "ನಮ್ಮ 'ಮೂನ್ ಲ್ಯಾಂಡರ್' ಚಂದ್ರನ ಮೇಲೆ 'ಅಂಗದʼನಂತೆ ದೃಢವಾಗಿ ಕಾಲಿಟ್ಟಿದೆ... ಒಂದೆಡೆ ವಿಕ್ರಮನ ಶೌರ್ಯ, ಮತ್ತೊಂದೆಡೆ ಪ್ರಜ್ಞಾನ್ ಪರಾಕ್ರಮವಿದೆ" ಎಂದರು. ಇವು ಎಂದಿಗೂ ನೋಡದ ಚಂದ್ರನ ಭಾಗಗಳ ಚಿತ್ರಗಳಾಗಿವೆ ಮತ್ತು ಇದನ್ನು ಭಾರತ ಮಾಡಿದೆ ಎಂದು ಅವರು ಹೇಳಿದರು. "ಇಡೀ ಜಗತ್ತು ಭಾರತದ ವೈಜ್ಞಾನಿಕ ಮನೋಭಾವ, ತಂತ್ರಜ್ಞಾನ ಮತ್ತು ಮನೋಧರ್ಮವನ್ನು ಗುರುತಿಸುತ್ತಿದೆ" ಎಂದು ಶ್ರೀ ಮೋದಿ ಹೇಳಿದರು.
"ಚಂದ್ರಯಾನ-3 ರ ಯಶಸ್ಸು ಕೇವಲ ಭಾರತಕ್ಕೆ ಮಾತ್ರವಲ್ಲ, ಇದು ಇಡೀ ಮಾನವೀಯತೆಗೆ ಸೇರಿದೆ" ಎಂದು ಪ್ರಧಾನಿ ಹೇಳಿದರು ಮತ್ತು ಮಿಷನ್ ನ ಪರಿಶೋಧನೆಗಳು ಪ್ರತಿ ದೇಶದ ಚಂದ್ರನ ಮಿಷನ್ ಗಳಿಗೆ ಸಾಧ್ಯತೆಗಳ ಹೊಸ ಬಾಗಿಲುಗಳನ್ನು ತೆರೆಯುತ್ತದೆ ಎಂದು ಒತ್ತಿ ಹೇಳಿದರು. ಈ ಮಿಷನ್ ಚಂದ್ರನ ರಹಸ್ಯಗಳನ್ನು ಬಿಚ್ಚಿಡುವುದಲ್ಲದೆ ಭೂಮಿಯ ಮೇಲಿನ ಸವಾಲುಗಳನ್ನು ನಿವಾರಿಸಲು ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು. ಚಂದ್ರಯಾನ-3 ಮಿಷನ್ ಗೆ ಸಂಬಂಧಿಸಿದ ಪ್ರತಿಯೊಬ್ಬ ವಿಜ್ಞಾನಿ, ತಂತ್ರಜ್ಞ, ಎಂಜಿನಿಯರ್ ಮತ್ತು ಎಲ್ಲ ಸದಸ್ಯರನ್ನು ಪ್ರಧಾನಿಯವರು ಮತ್ತೊಮ್ಮೆ ಅಭಿನಂದಿಸಿದರು.
"ಚಂದ್ರಯಾನ-3 ರ ಮೂನ್ ಲ್ಯಾಂಡರ್ ಇಳಿದ ಸ್ಥಳವನ್ನು ಈಗ 'ಶಿವಶಕ್ತಿ' ಎಂದು ಕರೆಯಲಾಗುವುದು" ಎಂದು ಪ್ರಧಾನಿ ಘೋಷಿಸಿದರು. "ಶಿವನಲ್ಲಿ, ಮಾನವೀಯತೆಯ ಕಲ್ಯಾಣದ ಸಂಕಲ್ಪವಿದೆ ಮತ್ತು ಶಕ್ತಿಯು ಆ ಸಂಕಲ್ಪವನ್ನು ಈಡೇರಿಸಲು ನಮಗೆ ಶಕ್ತಿಯನ್ನು ನೀಡುತ್ತದೆ. ಚಂದ್ರನ ಈ ಶಿವಶಕ್ತಿ ಬಿಂದುವು ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಸಂಪರ್ಕದ ಭಾವನೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.
ವಿಜ್ಞಾನದ ಅನ್ವೇಷಣೆಯ ಕಲ್ಯಾಣದ ಬಗ್ಗೆ ಮಾತನಾಡಿದ ಪ್ರಧಾನಿ, ಈ ಪವಿತ್ರ ನಿರ್ಣಯಗಳಿಗೆ ಶಕ್ತಿಯ ಆಶೀರ್ವಾದ ಬೇಕು ಮತ್ತು ಆ ಶಕ್ತಿಯೇ ನಮ್ಮ ನಾರಿ ಶಕ್ತಿ ಎಂದು ಹೇಳಿದರು. ಚಂದ್ರಯಾನ-3 ಮಿಷನ್ ಯಶಸ್ಸಿನಲ್ಲಿ ನಮ್ಮ ಮಹಿಳಾ ವಿಜ್ಞಾನಿಗಳು, ದೇಶದ ನಾರಿ ಶಕ್ತಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. "ಚಂದ್ರನ ಶಿವಶಕ್ತಿ ಬಿಂದುವು ಭಾರತದ ಈ ವೈಜ್ಞಾನಿಕ ಮತ್ತು ತಾತ್ವಿಕ ಚಿಂತನೆಗೆ ಸಾಕ್ಷಿಯಾಗಲಿದೆ" ಎಂದು ಅವರು ಹೇಳಿದರು.
ಚಂದ್ರಯಾನ-2 ತನ್ನ ಹೆಜ್ಜೆಗುರುತುಗಳನ್ನು ಬಿಟ್ಟ ಸ್ಥಳವನ್ನು ಈಗ 'ತಿರಂಗಾ' ಎಂದು ಕರೆಯಲಾಗುವುದು ಎಂದು ಪ್ರಧಾನಿ ಹೇಳಿದರು. ಈ ಅಂಶವು ಭಾರತ ಮಾಡುವ ಪ್ರತಿಯೊಂದು ಪ್ರಯತ್ನಕ್ಕೂ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವೈಫಲ್ಯವೇ ಕೊನೆಯಲ್ಲ ಎಂದು ನಮಗೆ ನೆನಪಿಸುತ್ತದೆ ಎಂದು ಪ್ರಧಾನಿ ಹೇಳಿದರು. "ಬಲವಾದ ಇಚ್ಛಾಶಕ್ತಿ ಇದ್ದರೆ ಯಶಸ್ಸು ಖಚಿತ" ಎಂದು ಅವರು ಹೇಳಿದರು.
ಭಾರತವು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ 4 ನೇ ರಾಷ್ಟ್ರವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ನಾವು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಸಾಧಾರಣ ಆರಂಭವನ್ನು ಪರಿಗಣಿಸಿದಾಗ ಈ ಸಾಧನೆಯು ಹೆಚ್ಚು ಅಗಾಧವಾಗುತ್ತದೆ ಎಂದು ಹೇಳಿದರು. ಭಾರತವನ್ನು ತೃತೀಯ ಜಗತ್ತಿನ ರಾಷ್ಟ್ರವೆಂದು ಪರಿಗಣಿಸಿದ್ದ ಮತ್ತು ಅಗತ್ಯವಾದ ತಂತ್ರಜ್ಞಾನ ಮತ್ತು ಬೆಂಬಲವನ್ನು ಹೊಂದಿರದ ಸಮಯವನ್ನು ಅವರು ನೆನಪಿಸಿಕೊಂಡರು. ಇಂದು, ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಈಗ ಅದು ಮರ ಅಥವಾ ತಂತ್ರಜ್ಞಾನದವರೆಗೆ ವಿಶ್ವದ ಮೊದಲ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಹೇಳಿದರು. 'ಮೂರನೇ ಸಾಲಿನಿಂದ' ಮೊದಲ ಸಾಲಿನವರೆಗಿನ ಪಯಣದಲ್ಲಿ ನಮ್ಮ 'ಇಸ್ರೋ' ದಂತಹ ಸಂಸ್ಥೆಗಳು ದೊಡ್ಡ ಪಾತ್ರವನ್ನು ವಹಿಸಿವೆ" ಎಂದು ಅದರ ಕೊಡುಗೆಗಳನ್ನು ಪ್ರಧಾನಿ ಉಲ್ಲೇಖಿಸಿದರು. ಇಂದು ಅವುಗಳು ಚಂದ್ರನ ಮೇಲೆ ಮೇಕ್ ಇನ್ ಇಂಡಿಯಾವನ್ನು ಕೊಂಡೊಯ್ದಿವೆ ಎಂದು ಪ್ರಧಾನಿ ಹೇಳಿದರು.
ದೇಶವಾಸಿಗಳಿಗೆ ಇಸ್ರೋದ ಶ್ರಮವನ್ನು ತಿಳಿಸಲು ಪ್ರಧಾನಿ ಈ ಸಂದರ್ಭವನ್ನು ಬಳಸಿಕೊಂಡರು. "ದಕ್ಷಿಣ ಭಾರತದಿಂದ ಚಂದ್ರನ ದಕ್ಷಿಣ ಭಾಗಕ್ಕೆ ಪ್ರಯಾಣ ಸುಲಭವಾಗಿರಲಿಲ್ಲ" ಎಂದು ಪ್ರಧಾನಿ ಹೇಳಿದರು ಮತ್ತು ಇಸ್ರೋ ತನ್ನ ಸಂಶೋಧನಾ ಕೇಂದ್ರದಲ್ಲಿ ಕೃತಕ ಚಂದ್ರನನ್ನು ಸಹ ನಿರ್ಮಿಸಿದೆ ಎಂದು ತಿಳಿಸಿದರು. ಇಂತಹ ಬಾಹ್ಯಾಕಾಶ ಯಾತ್ರೆಗಳ ಯಶಸ್ಸಿಗೆ ಭಾರತದ ಯುವಜನರಲ್ಲಿರುವ ನಾವೀನ್ಯತೆ ಮತ್ತು ವಿಜ್ಞಾನದ ಉತ್ಸಾಹಕ್ಕೆ ಶ್ರೇಯ ಸಲ್ಲಬೇಕು ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಮಂಗಳಯಾನ ಮತ್ತು ಚಂದ್ರಯಾನದ ಯಶಸ್ಸು ಮತ್ತು ಗಗನಯಾನದ ತಯಾರಿ ದೇಶದ ಯುವ ಪೀಳಿಗೆಗೆ ಹೊಸ ಮನೋಭಾವವನ್ನು ನೀಡಿದೆ. ನಿಮ್ಮ ದೊಡ್ಡ ಸಾಧನೆಯು ಭಾರತೀಯ ಪೀಳಿಗೆಯನ್ನು ಜಾಗೃತಗೊಳಿಸುತ್ತಿದೆ ಮತ್ತು ಅದಕ್ಕೆ ಶಕ್ತಿ ತುಂಬುತ್ತಿದೆ” ಎಂದು ಶ್ರೀ ಮೋದಿ ಹೇಳಿದರು. ಇಂದು ಭಾರತದ ಮಕ್ಕಳಲ್ಲಿ ಚಂದ್ರಯಾನದ ಹೆಸರು ಅನುರಣಿಸುತ್ತಿದೆ. ಪ್ರತಿ ಮಗು ತನ್ನ ಭವಿಷ್ಯವನ್ನು ವಿಜ್ಞಾನಿಗಳಲ್ಲಿ ನೋಡುತ್ತಿದೆ ಎಂದು ಅವರು ಹೇಳಿದರು.
ಬಾಹ್ಯಾಕಾಶ ಕ್ಷೇತ್ರದ ಸಾಮರ್ಥ್ಯಗಳು ಉಪಗ್ರಹಗಳ ಉಡಾವಣೆ ಮತ್ತು ಬಾಹ್ಯಾಕಾಶ ಪರಿಶೋಧನೆಗಳಿಗೆ ಸೀಮಿತವಾಗಿಲ್ಲ ಮತ್ತು ಅದರ ಬಲವನ್ನು ಸುಗಮ ಜೀವನ ಮತ್ತು ಸುಗಮ ಆಡಳಿತದಲ್ಲಿ ಕಾಣಬಹುದು ಎಂದು ಪ್ರಧಾನಿ ಹೇಳಿದರು. ತಮ್ಮ ಪ್ರಧಾನಮಂತ್ರಿ ಅಧಿಕಾರದ ಆರಂಭಿಕ ವರ್ಷಗಳಲ್ಲಿ ಇಸ್ರೋದೊಂದಿಗೆ ಕೇಂದ್ರ ಸರ್ಕಾರದಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ಅವರು ಸ್ಮರಿಸಿಕೊಂಡರು. ಬಾಹ್ಯಾಕಾಶ ಅಪ್ಲಿಕೇಶನ್ ಗಳನ್ನು ಆಡಳಿತದೊಂದಿಗೆ ಜೋಡಿಸಲು ಮಾಡಿದ ಅದ್ಭುತ ಪ್ರಗತಿಯನ್ನು ಅವರು ಪ್ರಸ್ತಾಪಿಸಿದರು. ಸ್ವಚ್ಛ ಭಾರತ ಅಭಿಯಾನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಪಾತ್ರ; ದೂರದ ಪ್ರದೇಶಗಳಿಗೆ ಶಿಕ್ಷಣ, ಸಂವಹನ ಮತ್ತು ಆರೋಗ್ಯ ಸೇವೆಗಳು; ಟೆಲಿ-ಮೆಡಿಸಿನ್ ಮತ್ತು ಟೆಲಿ-ಶಿಕ್ಷಣದ ಪಾತ್ರವನ್ನು ಅವರು ಪ್ರಸ್ತಾಪಿಸಿದರು. ಪ್ರಧಾನಿಯವರು ನಾವಿಕ್ (NAVIC) ವ್ಯವಸ್ಥೆಯ ಪಾತ್ರ ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಬೆಂಬಲದ ಬಗ್ಗೆ ಮಾತನಾಡಿದರು. “ಬಾಹ್ಯಾಕಾಶ ತಂತ್ರಜ್ಞಾನವು ನಮ್ಮ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ನ ಆಧಾರವಾಗಿದೆ. ಇದು ಯೋಜನೆಗಳ ಕಾರ್ಯಗತಗೊಳಿಸುವಿಕೆ ಮತ್ತು ಮೇಲ್ವಿಚಾರಣೆಯಲ್ಲಿ ಬಹಳಷ್ಟು ಸಹಾಯ ಮಾಡುತ್ತಿದೆ. ಕಾಲಾನಂತರದಲ್ಲಿ ಹೆಚ್ಚುತ್ತಿರುವ ಬಾಹ್ಯಾಕಾಶ ಅಪ್ಲಿಕೇಶನ್ ನ ಈ ವ್ಯಾಪ್ತಿಯು ನಮ್ಮ ಯುವಜನರಿಗೆ ಅವಕಾಶಗಳನ್ನು ಸಹ ಹೆಚ್ಚಿಸುತ್ತಿದೆ”ಎಂದು ಪ್ರಧಾನಮಂತ್ರಿ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸಹಯೋಗದಲ್ಲಿ 'ಆಡಳಿತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ' ಕುರಿತು ರಾಷ್ಟ್ರೀಯ ಹ್ಯಾಕಥಾನ್ಗಳನ್ನು ಆಯೋಜಿಸಲು ಇಸ್ರೋಗೆ ಪ್ರಧಾನಮಂತ್ರಿ ವಿನಂತಿಸಿದರು. "ಈ ರಾಷ್ಟ್ರೀಯ ಹ್ಯಾಕಥಾನ್ ನಮ್ಮ ಆಡಳಿತವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ದೇಶವಾಸಿಗಳಿಗೆ ಆಧುನಿಕ ಪರಿಹಾರಗಳನ್ನು ನೀಡುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಅವರು ಹೇಳಿದರು.
ದೇಶದ ಯುವ ಪೀಳಿಗೆಗೂ ಪ್ರಧಾನಿ ಕಾರ್ಯಭಾರ ನೀಡಿದರು. “ಹೊಸ ಪೀಳಿಗೆಯು ಭಾರತದ ಶಾಸ್ತ್ರಗ್ರಂಥಗಳಲ್ಲಿನ ಖಗೋಳ ಸೂತ್ರಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು, ಅವುಗಳನ್ನು ಹೊಸದಾಗಿ ಅಧ್ಯಯನ ಮಾಡಲು ನೀವು ಮುಂದೆ ಬರಬೇಕು. ಇದು ನಮ್ಮ ಪರಂಪರೆಗೆ ಮುಖ್ಯವಾಗಿದೆ ಮತ್ತು ವಿಜ್ಞಾನಕ್ಕೂ ಮುಖ್ಯವಾಗಿದೆ. ಇದೊಂದು ರೀತಿಯಲ್ಲಿ ಇಂದು ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳ ಪಾಲಿಗೆ ದುಪ್ಪಟ್ಟು ಜವಾಬ್ದಾರಿಯಾಗಿದೆ. ಸುದೀರ್ಘ ಕಾಲದ ಗುಲಾಮಗಿರಿಯಲ್ಲಿ ಭಾರತ ಹೊಂದಿದ್ದ ವೈಜ್ಞಾನಿಕ ಜ್ಞಾನದ ನಿಧಿಯನ್ನು ಸಮಾಧಿ ಮಾಡಲಾಗಿತ್ತು. ಈ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ನಾವು ಈ ನಿಧಿಯನ್ನು ಸಹ ಅನ್ವೇಷಿಸಬೇಕು, ಅದರ ಬಗ್ಗೆ ಸಂಶೋಧನೆ ಮಾಡಬೇಕು ಮತ್ತು ಅದರ ಬಗ್ಗೆ ಜಗತ್ತಿಗೆ ತಿಳಿಸಬೇಕು” ಎಂದು ಅವರು ಹೇಳಿದರು.
ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ಉದ್ಯಮವು 8 ಶತಕೋಟಿ ಡಾಲರ್ಗಳಿಂದ 16 ಶತಕೋಟಿ ಡಾಲರ್ ಗೆ ತಲುಪಲಿದೆ ಎಂಬ ತಜ್ಞರ ಅಂದಾಜನ್ನು ಪ್ರಧಾನಿ ಉಲ್ಲೇಖಿಸಿದರು. ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳಿಗಾಗಿ ಸರ್ಕಾರ ಅವಿರತವಾಗಿ ಶ್ರಮಿಸುತ್ತಿರುವಾಗ, ದೇಶದ ಯುವಕರು ಸಹ ಕಳೆದ 4 ವರ್ಷಗಳಲ್ಲಿ ಬಾಹ್ಯಾಕಾಶ ಸಂಬಂಧಿ ಸ್ಟಾರ್ಟ್ ಅಪ್ ಗಳ ಸಂಖ್ಯೆ 4 ರಿಂದ ಸುಮಾರು 150 ಕ್ಕೆ ಹೆಚ್ಚಳವಾಗಲು ಶ್ರಮಿಸಿದ್ದಾರೆ ಎಂದು ಅವರು ಹೇಳಿದರು. ಸೆಪ್ಟೆಂಬರ್ 1 ರಿಂದ MyGov ಆಯೋಜಿಸಿರುವ ಚಂದ್ರಯಾನ ಮಿಷನ್ ಕುರಿತ ಬೃಹತ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಪ್ರಧಾನಿ ಕೋರಿದರು.
21ನೇ ಶತಮಾನದ ಈ ಅವಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದಾಳತ್ವ ವಹಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ವಿಶ್ವದ ಅತ್ಯಂತ ತರುಣ ಪ್ರತಿಭೆಗಳ ಕಾರ್ಖಾನೆಯಾಗಿದೆ ಎಂದು ಹೇಳಿದರು. "ಸಾಗರದ ಆಳದಿಂದ ಆಕಾಶದ ಎತ್ತರದವರೆಗೆ, ಬಾಹ್ಯಾಕಾಶದ ಗಹನತೆಯವರೆಗೆ, ಯುವ ಪೀಳಿಗೆಗೆ ಮಾಡಲು ಬಹಳಷ್ಟು ಕೆಲಸಗಳು ಇವೆ" ಎಂದರು. 'ಡೀಪ್ ಅರ್ಥ್' ನಿಂದ 'ಡೀಪ್ಸೀ' ಮತ್ತು ಮುಂದಿನ ಪೀಳಿಗೆಯ ಕಂಪ್ಯೂಟರ್ನಿಂದ ಜೆನೆಟಿಕ್ ಇಂಜಿನಿಯರಿಂಗ್ವರೆಗಿನ ಅವಕಾಶಗಳನ್ನು ಎತ್ತಿ ತೋರಿಸಿದ ಪ್ರಧಾನಿಯವರು, "ಭಾರತದಲ್ಲಿ ನಿಮಗಾಗಿ ಹೊಸ ಅವಕಾಶಗಳು ನಿರಂತರವಾಗಿ ತೆರೆದುಕೊಳ್ಳುತ್ತಿವೆ" ಎಂದರು.
ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ಅತ್ಯಗತ್ಯ ಮತ್ತು ಇಂದಿನ ಪ್ರಮುಖ ಧ್ಯೇಯೋದ್ದೇಶಗಳನ್ನು ಮುಂದುವರಿಸುವವರು ಅವರೇ ಎಂದು ಪ್ರಧಾನಿ ಒತ್ತಿ ಹೇಳಿದರು. ವಿಜ್ಞಾನಿಗಳೇ ಅವರಿಗೆ ಮಾದರಿಯಾಗಿದ್ದು, ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಅವರ ಸಂಶೋಧನೆ ಮತ್ತು ವರ್ಷಗಟ್ಟಲೆಯ ಪರಿಶ್ರಮ ಸಾಬೀತುಪಡಿಸಿದೆ ಎಂದರು. ದೇಶದ ಜನರು ವಿಜ್ಞಾನಿಗಳಲ್ಲಿ ನಂಬಿಕೆ ಹೊಂದಿದ್ದಾರೆ ಮತ್ತು ಜನರ ಆಶೀರ್ವಾದ, ದೇಶದ ಬಗ್ಗೆ ಇರುವ ಸಮರ್ಪಣೆಯೊಂದಿಗೆ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನಾಗಲಿದೆ ಎಂದರು. "ನಮ್ಮ ಅದೇ ಆವಿಷ್ಕಾರ ಮನೋಭಾವವು 2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುತ್ತದೆ" ಎಂದು ಹೇಳಿದ ಶ್ರೀ ಮೋದಿ ತಮ್ಮ ಮಾತು ಮುಗಿಸಿದರು.
*****
(Release ID: 1952472)
Visitor Counter : 337
Read this release in:
Khasi
,
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam