ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶದ ʻಉದ್ಯೋಗ ಮೇಳʼ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
"ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಹೊಸದಾಗಿ ನೇಮಕಾತಿಗೊಂಡ ಉದ್ಯೋಗಿಗಳು ಪ್ರಮುಖ ಪಾತ್ರ ವಹಿಸುತ್ತಾರೆ"
"ಪ್ರಸ್ತುತ ಸರ್ಕಾರವು ಪಠ್ಯಕ್ರಮದಲ್ಲಿ ಪ್ರಾದೇಶಿಕ ಭಾಷೆಗಳ ಪುಸ್ತಕಗಳಿಗೆ ಒತ್ತು ನೀಡುತ್ತಿದೆ"
"ಸಕಾರಾತ್ಮಕ ಚಿಂತನೆ, ಸರಿಯಾದ ಉದ್ದೇಶ ಮತ್ತು ಸಂಪೂರ್ಣ ಸಮಗ್ರತೆಯೊಂದಿಗೆ ನಿರ್ಧಾರಗಳನ್ನು ತೆಗೆದುಕೊಂಡಾಗ, ಇಡೀ ಪರಿಸರವು ಸಕಾರಾತ್ಮಕತೆಯಿಂದ ತುಂಬಿರುತ್ತದೆ"
"ವ್ಯವಸ್ಥೆಯಿಂದ ಸೋರಿಕೆಯನ್ನು ನಿಲ್ಲಿಸಿದ ಪರಿಣಾಮವಾಗಿ ಬಡವರ ಕಲ್ಯಾಣಕ್ಕಾಗಿ ವೆಚ್ಚವನ್ನು ಹೆಚ್ಚಿಸಲು ಸರ್ಕಾರಕ್ಕೆ ಅನುವಾಗಿದೆ"
"ವಿಶ್ವಕರ್ಮರ ಸಾಂಪ್ರದಾಯಿಕ ಕೌಶಲ್ಯಗಳನ್ನು 21ನೇ ಶತಮಾನದ ಅಗತ್ಯಗಳಿಗೆ ಅಳವಡಿಸಿಕೊಳ್ಳಲು ʻಪಿಎಂ ವಿಶ್ವಕರ್ಮ ಯೋಜನೆʼಯನ್ನು ರೂಪಿಸಲಾಗಿದೆ"
Posted On:
21 AUG 2023 1:12PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಲಿಂಕ್ ಮೂಲಕ ಮಧ್ಯಪ್ರದೇಶದ ʻಉದ್ಯೋಗ ಮೇಳʼವನ್ನು ಉದ್ದೇಶಿಸಿ ಮಾತನಾಡಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ನೇಮಕಾತಿ ಪತ್ರಗಳನ್ನು ಪಡೆಯುತ್ತಿರುವ ಉದ್ಯೋಗಿಗಳು ಈ ಐತಿಹಾಸಿಕ ಅವಧಿಯಲ್ಲಿ ಬೋಧನೆಯ ಮಹತ್ವದ ಜವಾಬ್ದಾರಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು. ದೇಶದ ಅಭಿವೃದ್ಧಿಯಲ್ಲಿ ʻರಾಷ್ಟ್ರೀಯ ವ್ಯಕ್ತಿತ್ವʼವು ವಹಿಸುವ ನಿರ್ಣಾಯಕ ಪಾತ್ರವನ್ನು ವಿವರಿಸಿದ ತಮ್ಮ ಕೆಂಪು ಕೋಟೆಯ ಭಾಷಣದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇಂದು ಉದ್ಯೋಗ ಪಡೆಯುತ್ತಿರುವ ಎಲ್ಲರೂ ಭಾರತದ ಭವಿಷ್ಯದ ಪೀಳಿಗೆಯನ್ನು ರೂಪಿಸುವ, ದೇಶವನ್ನು ಆಧುನೀಕರಿಸುವ ಮತ್ತು ದೇಶಕ್ಕೆ ಹೊಸ ದಿಕ್ಕನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಒತ್ತಿ ಹೇಳಿದರು. ಈ ಉದ್ಯೋಗ ಮೇಳದ ಮೂಲಕ ಮಧ್ಯಪ್ರದೇಶದ ಪ್ರಾಥಮಿಕ ಶಾಲೆಗಳಿಗೆ ನೇಮಕಗೊಂಡಿರುವ ಐದೂವರೆ ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಅವರು ಶುಭ ಕೋರಿದರು. ಕಳೆದ 3 ವರ್ಷಗಳಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ಸುಮಾರು 50 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು ಮತ್ತು ಈ ಸಾಧನೆಗಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸಿದರು.
ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಬೀತುಪಡಿಸುವಲ್ಲಿ ದೊಡ್ಡ ಕೊಡುಗೆ ನೀಡಿರುವ ʻರಾಷ್ಟ್ರೀಯ ಶಿಕ್ಷಣ ನೀತಿʼಯ ಅನುಷ್ಠಾನದಲ್ಲಿ ಹೊಸ ಉದ್ಯೋಗಿಗಳು ಪ್ರಮುಖ ಪಾತ್ರ ವಹಿಸುರತ್ತಾರೆ ಎಂದು ಪ್ರಧಾನಿ ಹೇಳಿದರು. ಸಾಂಪ್ರದಾಯಿಕ ಜ್ಞಾನ ಮತ್ತು ಭವಿಷ್ಯದ ತಂತ್ರಜ್ಞಾನಕ್ಕೆ ಸರ್ಕಾರ ಸಮಾನ ಪ್ರಾಮುಖ್ಯತೆ ನೀಡಿದೆ ಎಂದು ಹೇಳಿದರು. ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪಠ್ಯಕ್ರಮವನ್ನು ಸಹ ಸಿದ್ಧಪಡಿಸಲಾಗಿದ್ದು, ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಗತಿ ಸಾಧಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಇಂಗ್ಲಿಷ್ ಗೊತ್ತಿಲ್ಲದ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡದ ಕಾರಣ ಉಂಟಾದ ದೊಡ್ಡ ಅನ್ಯಾಯವನ್ನು ಎತ್ತಿ ತೋರಿಸಿದ ಪ್ರಧಾನಿ, ಪ್ರಸ್ತುತ ಸರ್ಕಾರ ಈಗ ಪಠ್ಯಕ್ರಮದಲ್ಲಿ ಪ್ರಾದೇಶಿಕ ಭಾಷೆಗಳ ಪುಸ್ತಕಗಳಿಗೆ ಒತ್ತು ನೀಡುತ್ತಿದೆ. ಇದು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದರು.
"ಸಕಾರಾತ್ಮಕ ಚಿಂತನೆ, ಸರಿಯಾದ ಉದ್ದೇಶ ಮತ್ತು ಸಂಪೂರ್ಣ ಸಮಗ್ರತೆಯೊಂದಿಗೆ ನಿರ್ಧಾರಗಳನ್ನು ತೆಗೆದುಕೊಂಡಾಗ, ಇಡೀ ಪರಿಸರವು ಸಕಾರಾತ್ಮಕತೆಯಿಂದ ತುಂಬಿರುತ್ತದೆ" ಎಂದು ʻಅಮೃತ ಕಾಲʼದ ಮೊದಲ ವರ್ಷದಲ್ಲಿ ಬಂದ ಎರಡು ಸಕಾರಾತ್ಮಕ ಸುದ್ದಿಗಳನ್ನು ಉಲೇಖಿಸುತ್ತ ಪ್ರಧಾನಿ ಹೇಳಿದರು. ಅವುಗಳೆಂದರೆ ಭಾರತದಲ್ಲಿ ಬಡತನ ಪ್ರಮಾಣ ಕಡಿಮೆಯಾಗಿರುವುದು ಮತ್ತು ದೇಶದಲ್ಲಿ ಸಮೃದ್ಧಿ ಹೆಚ್ಚಿರುವುದು. ಮೊದಲನೆಯದಾಗಿ, ಕೇವಲ 5 ವರ್ಷಗಳಲ್ಲಿ ಭಾರತದಲ್ಲಿ 13.5 ಕೋಟಿ ಭಾರತೀಯರು ಬಡತನ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ ಎಂದು ನೀತಿ ಆಯೋಗದ ವರದಿಯಲ್ಲಿ ತಿಳಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಎರಡನೆಯದಾಗಿ, ಕಳೆದ 9 ವರ್ಷಗಳಲ್ಲಿ ಜನರ ಸರಾಸರಿ ಆದಾಯದಲ್ಲಿ ಭಾರಿ ಹೆಚ್ಚಳವಾಗಿದೆ, ಈ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಂಖ್ಯೆಯಲ್ಲಿ ಹೆಚ್ಚಳ ಕುರಿತಾದ ವರದಿಯು ಇದನ್ನು ಸ್ಪಷ್ಟಪಡಿಸಿದೆ ಎಂದು ಅವರು ವಿವರಿಸಿದರು.
ʻಐಟಿಆರ್ʼ ಅಂಕಿ-ಅಂಶಗಳ ಪ್ರಕಾರ, 2014ರಲ್ಲಿ ಸುಮಾರು 4 ಲಕ್ಷ ರೂ.ಗಳಿದ್ದ ಸರಾಸರಿ ಆದಾಯವು 2023ರಲ್ಲಿ 13 ಲಕ್ಷ ರೂ.ಗೆ ಏರಿದೆ ಎಂದು ಪ್ರಧಾನಿ ಹೇಳಿದರು. ಕಡಿಮೆ ಆದಾಯದ ಗುಂಪಿನಿಂದ ಹೆಚ್ಚಿನ ಆದಾಯದ ಗುಂಪಿಗೆ ಸ್ಥಳಾಂತರಗೊಳ್ಳುವ ಜನರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅವರು ತಿಳಿಸಿದರು. ಈ ಅಂಕಿ-ಅಂಶಗಳು ಹೆಚ್ಚುತ್ತಿರುವ ಉದ್ಯೋಗಾವಕಾಶಗಳು ಮತ್ತು ಹೆಚ್ಚುತ್ತಿರುವ ಉತ್ಸಾಹದ ಜೊತೆಗೆ ದೇಶದ ಪ್ರತಿಯೊಂದು ವಲಯವನ್ನು ಬಲಪಡಿಸುವ ಭರವಸೆ ನೀಡುತ್ತವೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ಆದಾಯ ತೆರಿಗೆ ರಿಟರ್ನ್ಸ್ ಕುರಿತ ಹೊಸ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ತಮ್ಮ ಸರ್ಕಾರದ ಮೇಲೆ ದೇಶದ ನಾಗರಿಕರ ವಿಶ್ವಾಸ ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೇಳಿದರು. ನಾಗರಿಕರು ಸಲ್ಲಿಸಿದ ತೆರಿಗೆಯ ಪ್ರತಿ ಪೈಸೆಯನ್ನು ದೇಶದ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುತ್ತಿದೆ ಎಂಬ ವಿಷಯ ಜನರಿಗೆ ಅರಿವಾಗಿರುವುದರಿಂದಲೇ ಹೆಚ್ಚಿನ ಸಂಖ್ಯೆಯ ಜನರು ತಮ್ಮ ತೆರಿಗೆಗಳನ್ನು ಪ್ರಾಮಾಣಿಕವಾಗಿ ಪಾವತಿಸಲು ಮುಂದೆ ಬರುತ್ತಿದ್ದಾರೆ ಎಂದು ವಿವರಿಸಿದರು. 2014ಕ್ಕಿಂತ ಮೊದಲು 10ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆಯು 5ನೇ ಸ್ಥಾನಕ್ಕೆ ತಲುಪಿದೆ ಎಂಬುದು ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಪ್ರಧಾನಿ ಹೇಳಿದರು. ಹಗರಣಗಳು ಮತ್ತು ಭ್ರಷ್ಟಾಚಾರದಿಂದ ತುಂಬಿದ್ದ 2014ರ ಹಿಂದಿನ ಯುಗವನ್ನು ದೇಶದ ನಾಗರಿಕರು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಗಮನಸೆಳೆದರು. "ಇಂದು, ಬಡವರಿಗೆ ಸಲ್ಲಬೇಕಾದ ಎಲ್ಲ ಹಣ ನೇರವಾಗಿ ಅವರ ಖಾತೆಗೆ ತಲುಪುತ್ತಿದೆ" ಎಂದು ಪ್ರಧಾನಿ ಹೇಳಿದರು.
ವ್ಯವಸ್ಥೆಯಿಂದ ಸೋರಿಕೆಯನ್ನು ನಿಲ್ಲಿಸಿದ ಪರಿಣಾಮವಾಗಿ, ಸರ್ಕಾರ ಬಡವರ ಕಲ್ಯಾಣಕ್ಕಾಗಿ ವೆಚ್ಚವನ್ನು ಹೆಚ್ಚಿಸಲು ಅನುವಾಗಿದೆ ಎಂದು ಪ್ರಧಾನಿ ತಿಳಿಸಿದರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾಡಿದ ಹೂಡಿಕೆಯು ದೇಶದ ಮೂಲೆ ಮೂಲೆಗಳಲ್ಲಿ ಉದ್ಯೋಗವನ್ನು ಸೃಷ್ಟಿಸಿದೆ ಎಂದು ಒತ್ತಿಹೇಳಿದ ಅವರು, ಸಾಮಾನ್ಯ ಸೇವಾ ಕೇಂದ್ರದ ಉದಾಹರಣೆಯನ್ನು ನೀಡಿದರು. 2014ರಿಂದ ಹಳ್ಳಿಗಳಲ್ಲಿ 5 ಲಕ್ಷ ಹೊಸ ʻಸಾಮಾನ್ಯ ಸೇವಾ ಕೇಂದ್ರʼಗಳನ್ನು ಸ್ಥಾಪಿಸಲಾಗಿದೆ ಮತ್ತು ಅಂತಹ ಪ್ರತಿಯೊಂದು ಕೇಂದ್ರವು ಇಂದು ಅನೇಕ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಇದರರ್ಥ ಬಡವರು ಮತ್ತು ಗ್ರಾಮಗಳ ಕಲ್ಯಾಣವಾಗಿದೆ, ಜೊತೆಗೆ ಉದ್ಯೋಗಾವಕಾಶಗಳ ಸೃಷ್ಟಿಯಾಗಿದೆ ಎಂದು ಅವರು ಹೇಳಿದರು.
ದೂರಗಾಮಿ ನೀತಿಗಳು ಮತ್ತು ನಿರ್ಧಾರಗಳ ಮೂಲಕ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಇಂದು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯಂದು ತಮ್ಮ ಭಾಷಣದಲ್ಲಿ ಕೆಂಪು ಕೋಟೆಯಿಂದ ʻಪಿಎಂ ವಿಶ್ವಕರ್ಮʼ ಯೋಜನೆಯ ಘೋಷಣೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಈ ಯೋಜನೆಯು ಈ ದೂರದೃಷ್ಟಿಯ ಪ್ರತಿಬಿಂಬವಾಗಿದೆ ಎಂದರು. ವಿಶ್ವಕರ್ಮರ ಸಾಂಪ್ರದಾಯಿಕ ಕೌಶಲ್ಯಗಳನ್ನು 21ನೇ ಶತಮಾನದ ಅಗತ್ಯಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಲು ʻಪಿಎಂ ವಿಶ್ವಕರ್ಮʼ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು. ಇದಕ್ಕಾಗಿ ಸುಮಾರು 13 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು ಮತ್ತು ಇದು 18 ವಿವಿಧ ರೀತಿಯ ಕೌಶಲ್ಯಗಳಿಗೆ ಸಂಬಂಧಿಸಿದವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಈ ಯೋಜನೆಯು ಸಮಾಜದ ಪ್ರಮುಖ ವರ್ಗಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಒತ್ತಿ ಹೇಳಿದರು. ಈ ಮುನ್ನ ಸರ್ಕಾರಗಳ ಅವಧಿಯಲ್ಲಿ ಈ ವರ್ಗದ ಪ್ರಾಮುಖ್ಯತೆಯನ್ನು ಚರ್ಚಿಸಲಾಯಿತೇ ಹೊರತು, ಅವರ ಸ್ಥಿತಿಯನ್ನು ಸುಧಾರಿಸಲು ಯಾವುದೇ ಸಂಘಟಿತ ಪ್ರಯತ್ನವನ್ನು ಎಂದಿಗೂ ಮಾಡಲಿಲ್ಲ ಎಂದು ಪ್ರಧಾನಿ ಹೇಳಿದರು. ʻವಿಶ್ವಕರ್ಮʼ ಯೋಜನೆಯಡಿ, ಫಲಾನುಭವಿಗಳಿಗೆ ತರಬೇತಿಯ ಜೊತೆಗೆ ಆಧುನಿಕ ಉಪಕರಣಗಳನ್ನು ಖರೀದಿಸಲು ವೋಚರ್‌ಗಳನ್ನು ಸಹ ನೀಡಲಾಗುವುದು ಎಂದು ಭಪ್ರಧಾನಿ ಹೇಳಿದರು. "ಪಿಎಂ ವಿಶ್ವಕರ್ಮ ಯೋಜನೆ ಮೂಲಕ ಯುವಜನರು ತಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ," ಎಂದು ಹೇಳಿದರು.
ತಮ್ಮ ಭಾಷಣವನ್ನು ಕೊನೆಯಲ್ಲಿ ಇಂದು ಶಿಕ್ಷಕರಾಗುತ್ತಿರುವವರು ಕಠಿಣ ಪರಿಶ್ರಮದ ಮೂಲಕ ಇಲ್ಲಿಗೆ ತಲುಪಿದ್ದಾರೆ ಎಂದ ಪ್ರಧಾನಮಂತ್ರಿಯವರು, ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಒತ್ತಾಯಿಸಿದರು. ಸರ್ಕಾರ ಸಿದ್ಧಪಡಿಸಿದ ಆನ್‌ಲೈನ್ ಕಲಿಕಾ ವೇದಿಕೆ - ʻಐಜಿಒಟಿ ಕರ್ಮಯೋಗಿʼ ಬಗ್ಗೆ ಅವರು ವಿಶೇಷವಾಗಿ ಉಲ್ಲೇಖಿಸಿದರು. ನೇಮಕಾತಿದಾರರು ಈ ಸೌಲಭ್ಯದ ಗರಿಷ್ಠ ಲಾಭವನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಪ್ರಧಾನಿ ಒತ್ತಾಯಿಸಿದರು.
*****
(Release ID: 1950890)
Visitor Counter : 151
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam