ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದ ಅಧ್ಯಕ್ಷತೆಯ ಜಿ -20


ಗುಜರಾತಿನ  ಗಾಂಧಿನಗರದಲ್ಲಿ ಜಿ -20 ಆರೋಗ್ಯ ಸಚಿವರ ಸಭೆ ಉದ್ಘಾಟನೆ
 
आरोग्यं परमं भाग्यं स्वास्थ्यं सर्वार्थसाधनम् : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
 
"ಜಗತ್ತು ಇಂದು ಪರಸ್ಪರ ಅಂತರ ಸಂಪರ್ಕ ಹೊಂದಿರುವುದರಿಂದ, ಭವಿಷ್ಯದ ಆರೋಗ್ಯ ತುರ್ತುಸ್ಥಿತಿಗಳನ್ನು ನಿರೀಕ್ಷಿಸಲು, ಎದುರಿಸಲು ಮತ್ತು ಪ್ರತಿಕ್ರಿಯಿಸಲು ಜಾಗತಿಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಅವಶ್ಯಕತೆಯಿದೆ"
 
"ಯಶಸ್ವಿ ಆರೋಗ್ಯ ಉಪಕ್ರಮಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯು ಪ್ರಮುಖ ಪಾತ್ರ ವಹಿಸುತ್ತದೆ, ಇದು ಭಾರತದ ಕುಷ್ಠರೋಗ ನಿರ್ಮೂಲನಾ ಅಭಿಯಾನ ಮತ್ತು ಟಿಬಿ ನಿರ್ಮೂಲನಾ ಕಾರ್ಯಕ್ರಮದಿಂದ ಸಾಬೀತಾಗಿದೆ "

ಗಾಂಧಿನಗರದಲ್ಲಿ ನಡೆದ ಜಿ 20 ಆರೋಗ್ಯ ಸಚಿವರ ಸಭೆಯಲ್ಲಿ ಆರೋಗ್ಯ ಸಚಿವರ ಸಭೆಯ ಫಲಿತಾಂಶ ದಾಖಲೆ ಅಂಗೀಕಾರ

ವೈದ್ಯಕೀಯ ಪ್ರತಿಬಂಧಕ ಕ್ರಮಗಳ ಸಮಾನ ಲಭ್ಯತೆಯ  ತತ್ವವು ಮೂಲಭೂತ ಹಕ್ಕು: ಡಾ.ಮನ್ಸುಖ್ ಮಾಂಡವಿಯಾ

ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವ್ಯಕ್ತಿಗಳನ್ನು ಸಬಲೀಕರಣಗೊಳಿಸಲು ಡಿಜಿಟಲ್ ಆರೋಗ್ಯದ ಜಾಗತಿಕ ಉಪಕ್ರಮ: ಡಾ. ಮನ್ಸುಖ್ ಮಾಂಡವಿಯಾ

Posted On: 18 AUG 2023 4:57PM by PIB Bengaluru

"ಭಾರತದ 1.4 ಬಿಲಿಯನ್ ಜನರ ಪರವಾಗಿ, ಗೌರವಾನ್ವಿತ ಜಾಗತಿಕ ಆರೋಗ್ಯ ನಾಯಕರು, ಪ್ರತಿನಿಧಿಗಳು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಭಾರತಕ್ಕೆ, ವಿಶೇಷವಾಗಿ ರೋಮಾಂಚಕ ರಾಜ್ಯ ಗುಜರಾತಿಗೆ  ಹೃತ್ಪೂರ್ವಕ ಸ್ವಾಗತವನ್ನು ಬಯಸುತ್ತೇನೆ ಇದರಲ್ಲಿ, 2.4 ಮಿಲಿಯನ್ ವೈದ್ಯರು, 3.5 ಮಿಲಿಯನ್ ದಾದಿಯರು, 1.3 ಮಿಲಿಯನ್ ಅರೆವೈದ್ಯಕೀಯ ತಜ್ಞರು, 1.6 ಮಿಲಿಯನ್ ಔಷಧಶಾಸ್ತ್ರಜ್ಞರು (ಫಾರ್ಮಾಸಿಸ್ಟ್ ಗಳು)  ಮತ್ತು ಭಾರತದ ಚಲನಶೀಲ  ಆರೋಗ್ಯ ಕ್ಷೇತ್ರದ ಅಸಂಖ್ಯಾತ ಇತರರ ಜೊತೆ ಆರೋಗ್ಯ ವೃತ್ತಿಪರರ ಪ್ರಭಾವಶಾಲಿ ಸಮೂಹದೊಂದಿಗೆ ನಾನು ಸೇರಿಕೊಂಡಿದ್ದೇನೆ”- ಗುಜರಾತಿನ ಗಾಂಧಿನಗರದಲ್ಲಿ ಇಂದು ಉದ್ಘಾಟಿಸಲಾದ ಜಿ20 ಭಾರತ ಆರೋಗ್ಯ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ವಿಡಿಯೋ ಸಂದೇಶದಲ್ಲಿ ಈ ಮಾತುಗಳನ್ನು  ಹೇಳಿದರು. 

ಆರೋಗ್ಯ ಮತ್ತು ಸಾಮರಸ್ಯದ ಜೀವನದ ನಡುವಿನ ಅಂತರ್ಗತ ಸಂಬಂಧವನ್ನು ಎತ್ತಿ ತೋರಿಸುವ ಮೂಲಕ ಮಹಾತ್ಮ ಗಾಂಧಿಯವರ ತತ್ವಗಳನ್ನು ಪ್ರಧಾನಿ ಉಲ್ಲೇಖಿಸಿದರು. ಈ ಭಾವನೆಯನ್ನು ಪ್ರತಿಧ್ವನಿಸಿದ ಪ್ರಧಾನಮಂತ್ರಿಯವರು, "आरोग्यं परमं भाग्यं स्वास्थ्सर्वार्थसाधनम्" ( "ಆರೋಗ್ಯವೇ ಪರಮ ಶ್ರೇಷ್ಠ  ಸಂಪತ್ತು, ಮತ್ತು ಉತ್ತಮ ಆರೋಗ್ಯದಿಂದ ಎಲ್ಲ  ಕಾರ್ಯಗಳನ್ನೂ  ಸಾಧಿಸಬಹುದು" ) ಎಂಬ ಪ್ರಾಚೀನ ಸಂಸ್ಕೃತ ಗಾದೆಯನ್ನು ಉಲ್ಲೇಖಿಸಿದರು.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಜಾಗತಿಕ ನಿರ್ಧಾರ ತೆಗೆದುಕೊಳ್ಳುವಾಗ  ಆರೋಗ್ಯವನ್ನು ಪ್ರಮುಖವಾಗಿಡುವ ಅನಿವಾರ್ಯತೆಯನ್ನು ಪ್ರಧಾನಿ ಒತ್ತಿ ಹೇಳಿದರು. 100ಕ್ಕೂ ಹೆಚ್ಚು ದೇಶಗಳಿಗೆ 300 ಮಿಲಿಯನ್ ಲಸಿಕೆ ಡೋಸ್ ಗಳನ್ನು ಒದಗಿಸಿದ ಲಸಿಕೆ ಮೈತ್ರಿ ಉಪಕ್ರಮದ ಮೂಲಕ ಸಾಧಿತವಾದ ಅಂತರರಾಷ್ಟ್ರೀಯ ಸಹಕಾರವನ್ನು ಅವರು ಶ್ಲಾಘಿಸಿದರು, ಇದು ಪುನಶ್ಚೇತನ/ಸ್ಥಿತಿಸ್ಥಾಪಕತ್ವ ಮತ್ತು ಸಹಯೋಗದ ಮೌಲ್ಯವನ್ನು ಒತ್ತಿಹೇಳುತ್ತದೆ. ಈ ನಿಟ್ಟಿನಲ್ಲಿ, "ಜಗತ್ತು ಇಂದು ಪರಸ್ಪರ ನಿಕಟ ಸಂಪರ್ಕ ಹೊಂದಿರುವುದರಿಂದ, ಭವಿಷ್ಯದ ಆರೋಗ್ಯ ತುರ್ತುಸ್ಥಿತಿಗಳನ್ನು ನಿರೀಕ್ಷಿಸಲು, ಎದುರಿಸಲು ಮತ್ತು ಪ್ರತಿಕ್ರಿಯಿಸಲು ಜಾಗತಿಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಅವಶ್ಯಕತೆಯಿದೆ" ಎಂದು ಅವರು ಹೇಳಿದರು.

ಆರೋಗ್ಯ ರಕ್ಷಣೆಗೆ ಭಾರತದ ಸಮಗ್ರ ವಿಧಾನಗಳನ್ನು ವಿವರಿಸಿದ ಪ್ರಧಾನ ಮಂತ್ರಿ ಅವರು , ಸಾಂಪ್ರದಾಯಿಕ ಔಷಧವನ್ನು ಅಳವಡಿಸಿಕೊಳ್ಳುವುದು, ಆರೋಗ್ಯ ಮೂಲಸೌಕರ್ಯಗಳನ್ನು ವಿಸ್ತರಿಸುವುದು ಮತ್ತು ಎಲ್ಲರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುವುದು ನಮ್ಮ ಧೋರಣೆ ಎಂದರು.  ಗುಜರಾತ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧ ಜಾಗತಿಕ ಕೇಂದ್ರವನ್ನು ಸ್ಥಾಪಿಸುವ ಮೂಲಕ ಸಮಗ್ರ ಆರೋಗ್ಯ ಮತ್ತು ಸ್ವಾಸ್ಥ್ಯದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದನ್ನು ಪ್ರಸ್ತಾಪಿಸಿದ ಅವರು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಒಂದು ಪ್ರಮುಖ ಹೆಜ್ಜೆ ಎಂದು ಒತ್ತಿ ಹೇಳಿದರು. 

ಆರೋಗ್ಯ ಮತ್ತು ಪರಿಸರದ ನಡುವಿನ ಪರಸ್ಪರ ಸಂಬಂಧವನ್ನು ಒಪ್ಪಿಕೊಂಡ ಪ್ರಧಾನಮಂತ್ರಿಯವರು, ಹವಾಮಾನ ಮತ್ತು ಆರೋಗ್ಯ ಉಪಕ್ರಮದ ಆರಂಭ ಮತ್ತು ಸೂಕ್ಷ್ಮಜೀವಿ ಪ್ರತಿರೋಧದ ವಿರುದ್ಧದ ಪ್ರಯತ್ನಗಳನ್ನು ಶ್ಲಾಘಿಸಿದರು. ಪರಿಸರ ವ್ಯವಸ್ಥೆಗಳು, ಮಾನವರು, ಪ್ರಾಣಿಗಳು ಮತ್ತು ಸಸ್ಯಗಳ ಆರೋಗ್ಯವನ್ನು ಒಂದುಗೂಡಿಸುವ "ಒಂದು ಭೂಮಿ, ಒಂದು ಆರೋಗ್ಯ" ದೃಷ್ಟಿಕೋನವನ್ನು ಅವರು ಪ್ರತಿಪಾದಿಸಿದರು.

ಆರೋಗ್ಯ ರಕ್ಷಣೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, "ಯಶಸ್ವಿ ಆರೋಗ್ಯ ಉಪಕ್ರಮಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯು ಪ್ರಮುಖ ಪಾತ್ರ ವಹಿಸುತ್ತದೆ, ಇದು ಭಾರತದ ಕುಷ್ಠರೋಗ ನಿರ್ಮೂಲನಾ ಅಭಿಯಾನ ಮತ್ತು ಕ್ಷಯ ನಿರ್ಮೂಲನಾ ಕಾರ್ಯಕ್ರಮದಿಂದ ಸಾಬೀತಾಗಿದೆ" ಎಂದು ಹೇಳಿದರು. ಪ್ರಧಾನಮಂತ್ರಿಯವರು ಜಾಗತಿಕ ಅನ್ವೇಷಣೆ/ನಾವೀನ್ಯತೆ ಮತ್ತು ಡಿಜಿಟಲ್ ಪರಿಹಾರಗಳನ್ನು ಪ್ರೋತ್ಸಾಹಿಸಿದರು, ಇದಕ್ಕೆ ಭಾರತದ ಇ-ಸಂಜೀವನಿ ವೇದಿಕೆ ಮತ್ತು ಐತಿಹಾಸಿಕ ಲಸಿಕಾ ಆಂದೋಲನ (ವ್ಯಾಕ್ಸಿನೇಷನ್ ಡ್ರೈವ್ )ಕ್ಕೆ ಅನುಕೂಲ ಮಾಡಿಕೊಟ್ಟ ಅದ್ಭುತ ಕೋವಿನ್ ವ್ಯವಸ್ಥೆ ಒಂದು ಉದಾಹರಣೆಯಾಗಿದೆ. ಮಾನವೀಯತೆಯ ಬಗ್ಗೆ ಪ್ರಾಚೀನ ಭಾರತೀಯ ಆಕಾಂಕ್ಷೆಯನ್ನು ಪ್ರಸ್ತಾಪಿಸಿ ಪ್ರಧಾನಮಂತ್ರಿಯವರು ಭಾಷಣವನ್ನು ಮುಕ್ತಾಯಗೊಳಿಸಿದರು, ಎಲ್ಲರೂ ಸಂತೋಷದಿಂದ ಇರುವಂತಾಗಲಿ ಮತ್ತು ಅನಾರೋಗ್ಯದಿಂದ ಮುಕ್ತರಾಗಲಿ ಎಂದು ಹಾರೈಸಿದರು. ಶೃಂಗಸಭೆಯ ಚರ್ಚೆಗಳ ಫಲಿತಾಂಶಗಳ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಮಾತುಕತೆಗಳನ್ನು ಅಂತಿಮಗೊಳಿಸುವುದಾಗಿ ಮತ್ತು ಆರೋಗ್ಯ ಸಚಿವರ ಸಭೆಯ ಫಲಿತಾಂಶ ದಾಖಲೆಯನ್ನು ಅಂಗೀಕರಿಸುವುದಾಗಿ ಘೋಷಿಸಿದರು. ಉಕ್ರೇನ್ ಕುರಿತ ಒಂದು ಭೌಗೋಳಿಕ ರಾಜಕೀಯ ಪ್ಯಾರಾಗ್ರಾಫ್ ಹೊರತುಪಡಿಸಿ ಎಲ್ಲಾ ಪ್ಯಾರಾಗ್ರಾಫ್ ಗಳಿಗೆ ಒಪ್ಪಿಗೆಯನ್ನು ಪಡೆಯಲಾಯಿತು. ಮಾತುಕತೆಯ ಸಮಯದಲ್ಲಿ ನೀಡಿದ ಸಹಕಾರಕ್ಕಾಗಿ ಅವರು ಜಿ 20 ರಾಷ್ಟ್ರಗಳಿಗೆ ಧನ್ಯವಾದ ಅರ್ಪಿಸಿದರು ಮತ್ತು ಬರಲಿರುವ ಸಂಭಾವ್ಯ  ಆರೋಗ್ಯ ಸವಾಲುಗಳ ಹಿನ್ನೆಲೆಯಲ್ಲಿ ಮುಂಬರುವ ಭವಿಷ್ಯದಲ್ಲಿ ಅದರ ಅನುಷ್ಠಾನವನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.  ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಜಪಾನ್ ನ ಆರೋಗ್ಯ ಸಚಿವ ಕಟ್ಸುನೊಬು ಕಟೋ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ  ಸಚಿವರಾದ  ಡಾ.ಭಾರತಿ ಪ್ರವೀಣ್ ಪವಾರ್ ಮತ್ತು ಪ್ರೊ.ಎಸ್.ಪಿ.ಸಿಂಗ್ ಬಘೇಲ್ ಅವರು ಜೊತೆಯಲ್ಲಿದ್ದರು. ಜಿ 20 ಆರೋಗ್ಯ ಸಚಿವರ ಸಭೆ 2023 ರ ಆಗಸ್ಟ್ 18 ರಿಂದ 19 ರವರೆಗೆ ಎರಡು ದಿನಗಳ ಕಾರ್ಯಕ್ರಮವಾಗಿದ್ದು, ಇದು ಭಾರತದ ಜಿ 20 ಅಧ್ಯಕ್ಷತೆ ಅಡಿಯಲ್ಲಿ ನಿಗದಿಪಡಿಸಿದ 3 ಆರೋಗ್ಯ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. 3 ಆದ್ಯತೆಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಗಳು, ತಡೆಗಟ್ಟುವಿಕೆ, ಸನ್ನದ್ಧತೆ ಮತ್ತು ಪ್ರತಿಕ್ರಿಯೆ (ಒಂದು ಆರೋಗ್ಯ ಮತ್ತು ಎಎಂಆರ್ ಮೇಲೆ ಕೇಂದ್ರೀಕರಿಸಿ); ಸುರಕ್ಷಿತ, ಪರಿಣಾಮಕಾರಿ, ಗುಣಮಟ್ಟದ ಮತ್ತು ಕೈಗೆಟುಕುವ ವೈದ್ಯಕೀಯ ಪ್ರತಿಕ್ರಮಗಳ (ಲಸಿಕೆಗಳು, ಚಿಕಿತ್ಸೆ ಮತ್ತು ರೋಗನಿರ್ಣಯ) ಅನುವು ಮತ್ತು ಲಭ್ಯತೆಯ ಮೇಲೆ ಕೇಂದ್ರೀಕರಿಸಿ ಔಷಧೀಯ ವಲಯದಲ್ಲಿ ಸಹಕಾರವನ್ನು ಬಲಪಡಿಸುವುದು; ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಸಹಾಯ ಮಾಡಲು ಹಾಗೂ ಆರೋಗ್ಯ ಸೇವೆ ವಿತರಣೆಯನ್ನು ಸುಧಾರಿಸಲು ಡಿಜಿಟಲ್ ಆರೋಗ್ಯ ನಾವೀನ್ಯತೆಗಳು ಮತ್ತು ಪರಿಹಾರಗಳು ಸೇರಿವೆ. ಇದು ಒಂದು ದಿನದ ಹಿಂದೆ ಉದ್ಘಾಟಿಸಲಾದ ಜಿ 20 ಡೆಪ್ಯೂಟಿಗಳ ಆರೋಗ್ಯ ಸಚಿವರ ಸಭೆಯನ್ನು ಅನುಸರಿಸುತ್ತದೆ.

ತಮ್ಮ ತವರು ರಾಜ್ಯವಾದ ಗುಜರಾತ್ ಗೆ ಸಚಿವರು ಮತ್ತು ಪ್ರತಿನಿಧಿಗಳನ್ನು ಸ್ವಾಗತಿಸಿದ ಡಾ. ಮಾಂಡವೀಯ, "ರೋಮಾಂಚಕ ರಾಜ್ಯವಾದ ಗುಜರಾತ್ ನ ಐತಿಹಾಸಿಕ ನಗರ ಗಾಂಧಿನಗರಕ್ಕೆ ವಿಶ್ವದೆಲ್ಲೆಡೆಯಿಂದ ಗೌರವಾನ್ವಿತ ನಾಯಕರನ್ನು ನಾವು ಅಪಾರ ಹೆಮ್ಮೆ ಮತ್ತು ಗೌರವದಿಂದ ಸ್ವಾಗತಿಸುತ್ತೇವೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ನಿರಂತರ  ಪರಂಪರೆ ಮತ್ತು ಅವರ ಅಹಿಂಸೆ, ಸತ್ಯ ಮತ್ತು ಸಾರ್ವತ್ರಿಕ ಪ್ರಗತಿಯ ತತ್ವಗಳನ್ನು ಸ್ಮರಿಸಲು ನಾವು ಒಗ್ಗೂಡುತ್ತಿರುವುದರಿಂದ ಈ ಸಭೆ ವಿಶೇಷ ಮಹತ್ವವನ್ನು ಹೊಂದಿದೆ” ಎಂದರು. 

ಸುರಕ್ಷಿತ, ಗುಣಮಟ್ಟದ, ಕೈಗೆಟುಕುವ ಮತ್ತು ಪರಿಣಾಮಕಾರಿ ಲಸಿಕೆಗಳು, ಚಿಕಿತ್ಸೆಗಳು ಮತ್ತು ರೋಗನಿರ್ಣಯಗಳಿಗೆ ಸಮಯೋಚಿತ, ಸಕಾಲಿಕ  ಲಭ್ಯತೆಯನ್ನು  ಖಚಿತಪಡಿಸಿಕೊಳ್ಳಲು, ತುದಿಯಿಂದ ತುದಿಯವರೆಗೆ (ಎಂಡ್-ಟು-ಎಂಡ್) ವೈದ್ಯಕೀಯ ಪ್ರತಿಕ್ರಮಗಳ ಸಮನ್ವಯ ಕಾರ್ಯವಿಧಾನವನ್ನು ಸ್ಥಾಪಿಸುವ ಸಾಮೂಹಿಕ ಸಂಕಲ್ಪದ ಬಗ್ಗೆ ಮಾತನಾಡಿದ ಸಚಿವರು, "ವೈದ್ಯಕೀಯ ಪ್ರತಿಕ್ರಮಗಳಿಗೆ ಸಮಾನ ಪ್ರವೇಶದ ತತ್ವವು ಜಿ20 ಆಗಿ ನಾವು ಅಚಲವಾಗಿ ಬದ್ಧರಾಗಿರುವ ಮೂಲಭೂತ ಹಕ್ಕು. ಈ ನಿರ್ಣಾಯಕ ವಿಷಯದ ಬಗ್ಗೆ ಜಿ 7 ಮತ್ತು ಜಿ 20 ನಡುವಿನ ಹೊಂದಾಣಿಕೆಯು ವಿಶ್ವ ಆರೋಗ್ಯ ಸಂಸ್ಥೆಯ ಅಂತರರಾಷ್ಟ್ರೀಯ ಆರೋಗ್ಯ ನಿಯಂತ್ರಣ ನಿಯಮಾವಳಿಗಳ ಕಾರ್ಯ ಪಡೆ ಮತ್ತು ಅಂತರ್ ಸರ್ಕಾರಿ ಸಮಾಲೋಚನಾ ಸಂಸ್ಥೆ ವಿವರಿಸಿದ ತತ್ವಗಳ ಮೂಲಕ ಜಾಗತಿಕ ಆರೋಗ್ಯವನ್ನು ರಕ್ಷಿಸುವ ನಮ್ಮ ಹಂಚಿಕೆಯ ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದೂ ಹೇಳಿದರು. 

ಇಂದು ಜಗತ್ತು ಎದುರಿಸುತ್ತಿರುವ ವೈವಿಧ್ಯಮಯ ಆರೋಗ್ಯ ಸವಾಲುಗಳ ಬಗ್ಗೆ ಮಾತನಾಡಿದ ಡಾ.ಮಾಂಡವೀಯ, "ಕೋವಿಡ್ -19 ಜಾಗತಿಕ ಸಾಂಕ್ರಾಮಿಕವು ಡಿಜಿಟಲ್ ಆರೋಗ್ಯ ಅಳವಡಿಕೆ ಮತ್ತು ಅನುಷ್ಠಾನದ ಅನಿವಾರ್ಯತೆಯನ್ನು ಒತ್ತಿಹೇಳಿದೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಹಾಗೂ  ವ್ಯಕ್ತಿಗಳನ್ನು ಸಬಲೀಕರಣಗೊಳಿಸುವಲ್ಲಿ ಅದರ ಸಾಮರ್ಥ್ಯವನ್ನು ನಾವು ಗುರುತಿಸುತ್ತೇವೆ. ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ, ಡಿಜಿಟಲ್ ಆರೋಗ್ಯದ ಜಾಗತಿಕ ಉಪಕ್ರಮವನ್ನು ಸ್ಥಾಪಿಸಲಾಗಿದೆ, ಇದು  ಪರಿವರ್ತನಾಶೀಲ ದೃಷ್ಟಿಯನ್ನು ಸಾಕಾರಗೊಳಿಸಲು ರಾಷ್ಟ್ರಗಳು ಮತ್ತು ಸಂಸ್ಥೆಗಳ ನಡುವೆ ಸಹಯೋಗವನ್ನು ಬೆಳೆಸುತ್ತದೆ ಎಂದೂ ಹೇಳಿದರು. 

ಕೊನೆಯಲ್ಲಿ, ಡಾ.ಮಾಂಡವೀಯ ಅವರು "ಗಡಿಗಳು ಮತ್ತು ಭಿನ್ನತೆಗಳನ್ನು  ಮೀರಿ, ಪ್ರತಿಯೊಬ್ಬ ವ್ಯಕ್ತಿಯ ಯೋಗಕ್ಷೇಮವನ್ನು ಎತ್ತಿಹಿಡಿಯುವ ಜಗತ್ತನ್ನು ರೂಪಿಸಲು, ಎಲ್ಲರಿಗೂ ಆರೋಗ್ಯಕರ ಭವಿಷ್ಯವನ್ನು ನಿರ್ಮಾಣ ಮಾಡಲು ಈ ಸಂದರ್ಭವನ್ನು ಬಳಸಿಕೊಳ್ಳೋಣ" ಎಂದು ಹೇಳಿ ತಮ್ಮ ಮಾತುಗಳನ್ನು ಮುಗಿಸಿದರು.

ಈ ಕಾರ್ಯಕ್ರಮದಲ್ಲಿ, ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಜಿ 20 ಶೃಂಗಸಭೆಯ ಉದಾರ ಆತಿಥ್ಯ ವಹಿಸಿದ  ಭಾರತ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು. ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಮುನ್ನಡೆಸುವಲ್ಲಿ ಮತ್ತು ವಿಶ್ವದ ಅತಿದೊಡ್ಡ ಆರೋಗ್ಯ ಭರವಸೆ (ವಿಮಾ)  ಉಪಕ್ರಮವಾದ ಆಯುಷ್ಮಾನ್ ಭಾರತ್ ಯೋಜನೆಯ ಯಶಸ್ಸಿಗಾಗಿ ಅವರು ಭಾರತವನ್ನು ಶ್ಲಾಘಿಸಿದರು. ಗಾಂಧಿನಗರದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಕ್ಕೆ (ಎಚ್ ಡಬ್ಲ್ಯೂಸಿ) ಭೇಟಿ ನೀಡಿದ ತಮ್ಮ ಅನುಭವ ಮತ್ತು ಎಚ್ ಡಬ್ಲ್ಯೂಸಿ 1000 ಮನೆಗಳಿಗೆ ಒದಗಿಸುತ್ತಿರುವ ಪ್ರಾಥಮಿಕ ಆರೋಗ್ಯ ಸೇವೆಗಳಿಂದ ತಾವು  ಪ್ರಭಾವಿತರಾಗಿರುವುದರ ಬಗ್ಗೆ  ಅವರು ಮಾತನಾಡಿದರು. "ಸ್ಥಳೀಯವಾಗಿ ಪ್ರಿಸ್ಕ್ರಿಪ್ಷನ್ (ಔಷಧ ಚೀಟಿ)  ಮತ್ತು ಚಿಕಿತ್ಸೆಯನ್ನು ಒದಗಿಸುವ ಟೆಲಿಮೆಡಿಸಿನ್ ಸೇವೆಗಳನ್ನು ಇಲ್ಲಿ ಒದಗಿಸುತ್ತಿರುವುದನ್ನು ನಾನು ಪ್ರಶಂಸಿಸುತ್ತೇನೆ. ಇಂದು ಭಾರತದಲ್ಲಿ ಆರೋಗ್ಯ ರಕ್ಷಣೆಯನ್ನು ಪರಿವರ್ತನೆಯ ಹಾದಿಗೆ ಒಯ್ಯುತ್ತಿರುವ ಸ್ವರೂಪಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಎಂದವರು ನುಡಿದರು.  ಡಿಜಿಟಲ್ ಆರೋಗ್ಯದ ಜಾಗತಿಕ ಉಪಕ್ರಮದ ಮಹತ್ವವನ್ನು ಒತ್ತಿ ಹೇಳಿದ  ಡಾ.ಘೆಬ್ರೆಯೆಸಸ್, "ಡಿಜಿಟಲ್ ತಂತ್ರಜ್ಞಾನವು ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಆರೋಗ್ಯವನ್ನು ಪರಿವರ್ತಿಸಬಹುದು, ಮತ್ತು ಭಾರತದ ಜಿ 20 ಅಧ್ಯಕ್ಷತೆಯ ಅಡಿಯಲ್ಲಿ ಪ್ರಾರಂಭಿಸಲಾಗುವ ಡಿಜಿಟಲ್ ಆರೋಗ್ಯದ ಜಾಗತಿಕ ಉಪಕ್ರಮವು ಡಿಜಿಟಲ್ ಆರೋಗ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯತಂತ್ರವನ್ನು ಬೆಂಬಲಿಸುತ್ತದೆ" ಎಂದೂ ಹೇಳಿದರು.

ಇಂಡೋನೇಷ್ಯಾ ಮತ್ತು ಬ್ರೆಜಿಲ್ ನ ಮೂರು ರಾಷ್ಟ್ರಗಳ ಆರೋಗ್ಯ ಸಚಿವರು ತಮ್ಮ ಆರೋಗ್ಯ ಸಚಿವ ಶ್ರೀ ಬುಡಿ ಗುನಾಡಿ ಸಾಡಿಕಿನ್ ಮತ್ತು ಶ್ರೀಮತಿ ನಿಸಿಯಾ ಟ್ರಿಂಡಾಡೆ ಅವರ ನೇತೃತ್ವದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಆರಂಭಿಕ ಪ್ರತಿಕ್ರಿಯೆಗಳನ್ನು ಹಂಚಿಕೊಂಡರು.

ಯಾವುದೇ ಜಾಗತಿಕ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ತಯಾರಿ ನಡೆಸಲು ಮತ್ತು ತಡೆಗಟ್ಟಲು ಸ್ಥಿತಿಸ್ಥಾಪಕ/ಪುನಶ್ಚೇತನಗೊಳ್ಳುವಂತಹ  ಆರೋಗ್ಯ ವ್ಯವಸ್ಥೆಗಳನ್ನು ಮತ್ತಷ್ಟು ನಿರ್ಮಿಸಲು ಈ ದಿನದಂದು ನಡೆದ ಮೊದಲ ಆರೋಗ್ಯ ಆದ್ಯತೆಯ ಅಧಿವೇಶನದಲ್ಲಿ ಚರ್ಚಿಸಲಾಯಿತು. ಸಾಂಪ್ರದಾಯಿಕ ವೈದ್ಯ/ಔಷಧ ಕುರಿತ ಜಾಗತಿಕ ಶೃಂಗಸಭೆಯ ಭಾಗವಾಗಿ ಎರಡು ಇಂಟರ್ಫೇಸ್ ಅಧಿವೇಶನಗಳು ನಡೆದವು, ಜೊತೆಗೆ ಗಡಿಗಳನ್ನು ಮೀರಿ ಮೌಲ್ಯಾಧಾರಿತ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುವ ಅಗತ್ಯದ ಬಗ್ಗೆಯೂ ಚರ್ಚಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಇಂಡೋನೇಷ್ಯಾ ಮತ್ತು ಬ್ರೆಜಿಲ್ ನ ರಾಷ್ಟ್ರಗಳ ಸಚಿವರು, ಜಿ 20 ಮತ್ತು ಆಹ್ವಾನಿತ ರಾಷ್ಟ್ರಗಳ ಸಚಿವರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ನೀತಿ ಆಯೋಗದ ಸದಸ್ಯ (ಆರೋಗ್ಯ) ಶ್ರೀ ವಿ.ಕೆ.ಪಾಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶ್ ಪಂತ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ.ರಾಜೀವ್ ಬಹ್ಲ್, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಭಯ್ ಠಾಕೂರ್ ಮತ್ತು ಭಾರತದ ಜಿ 20 ಅಧ್ಯಕ್ಷತೆಯ ಸೂಸ್ ಶೆರ್ಪಾ ಮತ್ತು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಜಿ 20 ಆರೋಗ್ಯ ಸಚಿವರ ಸಭೆಯಲ್ಲಿ ಪ್ರಧಾನಿಯವರ ಭಾಷಣವನ್ನು ಇಲ್ಲಿ ವೀಕ್ಷಿಸಿ:

****



(Release ID: 1950453) Visitor Counter : 103