ಪ್ರಧಾನ ಮಂತ್ರಿಯವರ ಕಛೇರಿ

ಭಾರತವು ಹೊಸ ವ್ಯೂಹಾತ್ಮಕ ಶಕ್ತಿಯನ್ನು ಪಡೆದುಕೊಂಡಿದೆ; ಗಡಿಗಳು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ: ಕೆಂಪು ಕೋಟೆಯಿಂದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ



"ಸಶಸ್ತ್ರ ಪಡೆಗಳನ್ನು ಆಧುನೀಕರಿಸಲಾಗುತ್ತಿದೆ; ಸಶಸ್ತ್ರಪಡೆಯಲ್ಲಿ ಯುವ ಬಲ ಹೆಚ್ಚಿಸುವುದು ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಯುದ್ಧಕ್ಕೆ ಸನ್ನದ್ಧರಾಗುವುದು ನಮ್ಮ ಮೊದಲ ಆದ್ಯತೆಯಾಗಿದೆ"

Posted On: 15 AUG 2023 2:00PM by PIB Bengaluru

"ಇತ್ತೀಚಿನ ವರ್ಷಗಳಲ್ಲಿ ಭಾರತವು ಹೊಸ ವ್ಯೂಹಾತ್ಮಕ ಶಕ್ತಿಯನ್ನು ಪಡೆದುಕೊಂಡಿದೆ ಮತ್ತು ಇಂದು ನಮ್ಮ ಗಡಿಗಳು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಆಗಸ್ಟ್ 15 ರಂದು 77ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಕೊತ್ತಲಗಳಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು. ಪ್ರಸ್ತುತ ಜಾಗತಿಕ ಭದ್ರತಾ ಸನ್ನಿವೇಶದ ನಡುವೆ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಅಚಲ ಸಂಕಲ್ಪವನ್ನು ಅವರು ಪುನರುಚ್ಚರಿಸಿದರು. ಸಶಸ್ತ್ರ ಪಡೆಗಳನ್ನು ಆಧುನೀಕರಿಸಲು ಮತ್ತು ಸಶಸ್ತ್ರಪಡೆಗಳಲ್ಲಿ ಯುವಬಲ ಹೆಚ್ಚಿಸಲು ಹಾಗೂ ಮತ್ತು ಭವಿಷ್ಯದ ಎಲ್ಲಾ ಸವಾಲುಗಳನ್ನು ಎದುರಿಸಲು ಯುದ್ಧಕ್ಕೆ ಸನ್ನದ್ಧರಾಗಲು ಹಲವಾರು ಮಿಲಿಟರಿ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರತಿಪಾದಿಸಿದರು.

ಭಯೋತ್ಪಾದಕ ದಾಳಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿರುವುದರಿಂದ ದೇಶದ ಜನರು ಇಂದು ಸುರಕ್ಷಿತವಾಗಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು. ದೇಶವು ಶಾಂತಿಯುತ ಮತ್ತು ಸುಭದ್ರವಾದಾಗ, ಅಭಿವೃದ್ಧಿಯ ಹೊಸ ಗುರಿಗಳನ್ನು ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.

ರಕ್ಷಣಾ ಪಿಂಚಣಿದಾರರ ದೀರ್ಘಕಾಲದ ಬೇಡಿಕೆಯಾದ ʻಸಮಾನ ಶ್ರೇಣಿ, ಸಮಾನ ಪಿಂಚಣಿʼ(ಒಆರ್‌ಒಪಿ) ಯೋಜನೆಯನ್ನು ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತಂದಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. "ಒ.ಆರ್‌.ಒ.ಪಿʼ ನಮ್ಮ ದೇಶದ ಸೈನಿಕರಿಗೆ ಗೌರವದ ವಿಷಯವಾಗಿತ್ತು. ನಾವು ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೆ ತಂದಿದ್ದೇವೆ. 70,000 ಕೋಟಿ ರೂ.ಗಳು ಇಂದು ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳನ್ನು ತಲುಪಿದೆ" ಎಂದು ಅವರು ಹೇಳಿದರು.

ದೇಶವನ್ನು ಸುಭದ್ರವಾಗಿರಿಸುವ ಮತ್ತು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಗಡಿಯಲ್ಲಿ ಕಾವಲು ಕಾಯುವ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

*****



(Release ID: 1949164) Visitor Counter : 92