ರಾಷ್ಟ್ರಪತಿಗಳ ಕಾರ್ಯಾಲಯ

77ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣ

Posted On: 14 AUG 2023 7:40PM by PIB Bengaluru

ನನ್ನ ಪ್ರೀತಿಯ ದೇಶ ಬಾಂಧವರೇ,

ನಮ್ಮ 77 ನೇ ಸ್ವಾತಂತ್ರ್ಯ ದಿನದಂದು ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು! ಇದು ನಮಗೆಲ್ಲರಿಗೂ ವೈಭವದ ಮತ್ತು ಶುಭದಾಯಕವಾದ ಸಂದರ್ಭವಾಗಿದೆ. ಎಲ್ಲೆಡೆ ಹಬ್ಬದ ವಾತಾವರಣವಿರುವುದನ್ನು ಕಂಡು  ನನಗೆ ಬಹಳ ಸಂತೋಷವಾಗಿದೆ. ನಮ್ಮ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸಲು ಪ್ರತಿಯೊಬ್ಬರೂ - ಮಕ್ಕಳು, ಯುವಜನರು ಮತ್ತು ಹಿರಿಯರು, ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಉತ್ಸಾಹದಿಂದ ಸಿದ್ಧತೆ ನಡೆಸುತ್ತಿರುವುದನ್ನು ನೋಡುವುದು ನಮಗೆ ಸಂತೋಷದ ಮತ್ತು ಹೆಮ್ಮೆಯ ವಿಷಯವಾಗಿದೆ. ಜನರು ‘ಆಜಾದಿ ಕಾ ಅಮೃತ ಮಹೋತ್ಸವʼವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವು ನನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ನಮ್ಮ ಹಳ್ಳಿಯ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಉತ್ಸಾಹವು ಅಪರಿಮಿತವಾಗಿತ್ತು. ತ್ರಿವರ್ಣ ಧ್ವಜವನ್ನು ಹಾರಿಸಿದಾಗ, ನಮ್ಮ ಮೈನವಿರೇಳುತ್ತಿತ್ತು. ನಮ್ಮ ಹೃದಯದಲ್ಲಿ ದೇಶಭಕ್ತಿಯು ತುಂಬಿ, ಹೆಮ್ಮೆಯಿಂದ ರಾಷ್ಟ್ರಧ್ವಜಕ್ಕೆ ನಮಸ್ಕರಿಸಿ ರಾಷ್ಟ್ರಗೀತೆಯನ್ನು ಹಾಡುತ್ತಿದ್ದೆವು. ಸಿಹಿ ಹಂಚಲಾಗುತ್ತಿತ್ತು, ದೇಶಭಕ್ತಿ ಗೀತೆಗಳನ್ನು ಹಾಡಲಾಗುತ್ತಿತ್ತು. ಅವು ನಮ್ಮ ಮನಸ್ಸಿನಲ್ಲಿ ಹಲವು ದಿನಗಳವರೆಗೂ ಮೊಳಗುತ್ತಿತ್ತು. ನಾನು ಶಾಲಾ ಶಿಕ್ಷಕಿಯಾಗಿದ್ದಾಗ ಈ ಅನುಭವಗಳನ್ನು ಮತ್ತೆ ಪಡೆಯುವ ಅವಕಾಶ ದೊರೆತಿದ್ದು ನನ್ನ ಅದೃಷ್ಟ.

ನಾವು ಬೆಳೆದಂತೆಲ್ಲಾ, ಮಕ್ಕಳಂತೆ ನಮ್ಮ ಸಂತೋಷವನ್ನು ವ್ಯಕ್ತಪಡಿಸದೆ ಇರಬಹುದು, ಆದರೆ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಸಂಬಂಧಿಸಿದ ದೇಶಭಕ್ತಿಯ ಭಾವನೆಯ ತೀವ್ರತೆಯು ಸ್ವಲ್ಪವೂ ಕಡಿಮೆಯಾಗುವುದಿಲ್ಲ ಎಂದು ನನಗೆ ಖಾತ್ರಿಯಿದೆ. ನಾವು ಕೇವಲ ವ್ಯಕ್ತಿಗಳಲ್ಲ, ನಾವು ದೊಡ್ಡ ಜನಸಮುದಾಯದ ಭಾಗವಾಗಿದ್ದೇವೆ ಎಂಬುದನ್ನು ಸ್ವಾತಂತ್ರ್ಯ ದಿನವು ನಮಗೆ ನೆನಪಿಸುತ್ತದೆ. ಇದೊಂದು ಬೃಹತ್ ಮತ್ತು ಶ್ರೇಷ್ಠ ಜನಸಮುದಾಯವಾಗಿದೆ. ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಗರಿಕರ ಸಮುದಾಯವಾಗಿದೆ.

ನಾವು ಶ್ರೇಷ್ಠ ಪ್ರಜಾಪ್ರಭುತ್ವದ ಭಾಗವಾಗಿದ್ದೇವೆ ಎಂಬ ವಾಸ್ತವವನ್ನು ನಾವು ಸ್ವಾತಂತ್ರ್ಯ ದಿನದಂದು ಆಚರಿಸುತ್ತೇವೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಹಲವು ಗುರುತುಗಳಿವೆ - ಜಾತಿ, ಧರ್ಮ, ಭಾಷೆ ಮತ್ತು ಪ್ರದೇಶವನ್ನು ಹೊರತುಪಡಿಸಿ, ನಾವು ನಮ್ಮ ಕುಟುಂಬಗಳು ಮತ್ತು ವೃತ್ತಿಗಳೊಂದಿಗೆ ಗುರುತಿಸಿಕೊಂಡಿದ್ದೇವೆ - ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಒಂದು ಗುರುತು ಇದೆ. ಅದು ಭಾರತದ ಪ್ರಜೆಗಳಾಗಿ ನಮ್ಮ ಗುರುತಾಗಿದೆ. ಈ ನೆಲದಲ್ಲಿ ಪ್ರತಿಯೊಬ್ಬರೂ ಸಮಾನ ನಾಗರಿಕರು; ಪ್ರತಿಯೊಬ್ಬರಿಗೂ ಇಲ್ಲಿ ಸಮಾನ ಅವಕಾಶ, ಸಮಾನ ಹಕ್ಕುಗಳು ಮತ್ತು ಸಮಾನ ಕರ್ತವ್ಯಗಳಿವೆ.

ಆದರೆ ಇದು ಯಾವಾಗಲೂ ಹೀಗಿರಲಿಲ್ಲ. ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ ನಾವು ತಳಮಟ್ಟದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಹೊಂದಿದ್ದೇವೆ. ಆದರೆ ಸುದೀರ್ಘ ವರ್ಷಗಳ ಕಾಲದ ವಸಾಹತುಶಾಹಿ ಆಳ್ವಿಕೆಯು ಅವುಗಳನ್ನು ನಾಶಪಡಿಸಿತು. 1947 ರ ಆಗಸ್ಟ್ 15 ರಂದು, ರಾಷ್ಟ್ರವು ಹೊಸ ಬೆಳಗನ್ನು ಕಂಡಿತು. ನಾವು ವಿದೇಶಿ ಆಳ್ವಿಕೆಯಿಂದ ಮುಕ್ತಿ ಪಡೆದಿದ್ದು ಮಾತ್ರವಲ್ಲ, ನಮ್ಮ ಹಣೆಬರಹವನ್ನು ಮತ್ತೆ ಬರೆಯುವ ಸ್ವಾತಂತ್ರ್ಯವನ್ನೂ ಗಳಿಸಿದೆವು.

ನಮ್ಮ ಸ್ವಾತಂತ್ರ್ಯದೊಂದಿಗೆ ವಿದೇಶಿ ಆಡಳಿತಗಾರರು ಅನೇಕ ವಸಾಹತುಗಳಿಂದ ಹಿಂದೆ ಸರಿಯುವ ಕಾಲಘಟ್ಟವು ಪ್ರಾರಂಭವಾಯಿತು ಮತ್ತು ವಸಾಹತುಶಾಹಿಯ ಅಂತ್ಯವು ಸಮೀಪಿಸಿತು. ನಮ್ಮ ಸ್ವಾತಂತ್ರ್ಯ ಹೋರಾಟದ ವಿಶೇಷವೆಂದರೆ ಅದರ ಉದ್ದೇಶವನ್ನು ಸಾಧಿಸಿದ ಸಂಗತಿ ಮಾತ್ರವಲ್ಲ, ಅದನ್ನು ಹೇಗೆ ಸಾಧಿಸಲಾಯಿತು ಎಂಬುದಾಗಿದೆ. ಮಹಾತ್ಮಾ ಗಾಂಧಿಯವರ ನಾಯಕತ್ವದಲ್ಲಿ ಮತ್ತು ಅಸಾಧಾರಣ ದಾರ್ಶನಿಕ ನಾಯಕರ ಸಮೂಹದ ಅಡಿಯಲ್ಲಿ, ನಮ್ಮ ರಾಷ್ಟ್ರೀಯ ಚಳುವಳಿಯು ವಿಶಿಷ್ಟವಾದ ಆದರ್ಶಗಳಿಂದ ಕೂಡಿತ್ತು. ಗಾಂಧೀಜಿ ಮತ್ತು ಇತರರು ಭಾರತದ ಆತ್ಮವನ್ನು ಪುನರುಜ್ಜೀವನಗೊಳಿಸಿದರು ಮತ್ತು ರಾಷ್ಟ್ರವು ತನ್ನ ನಾಗರಿಕತೆಯ ಮೌಲ್ಯಗಳನ್ನು ಮರುಶೋಧಿಸಲು ಸಹಾಯ ಮಾಡಿದರು. ಭಾರತದ ಉಜ್ವಲ ಮಾದರಿಯನ್ನು ಅನುಸರಿಸಿ, ನಮ್ಮ ಹೋರಾಟದ ಮೂಲಾಧಾರವಾದ 'ಸತ್ಯ ಮತ್ತು ಅಹಿಂಸೆ' ವಿಶ್ವದಾದ್ಯಂತ ಅನೇಕ ರಾಜಕೀಯ ಹೋರಾಟಗಳಲ್ಲಿ ಯಶಸ್ವಿಯಾಗಿ ಬಳಕೆಯಾಯಿತು.

ಸ್ವಾತಂತ್ರ್ಯ ದಿನದ ಮುನ್ನಾದಿನದಂದು, ಸಹಭಾಗಿ ದೇಶಗಳ ಪೈಕಿ ಭಾರತವು ತನ್ನ ಅರ್ಹ ಸ್ಥಾನವನ್ನು ಮರಳಿ ಪಡೆಯುವುದನ್ನು ತಮ್ಮ ತ್ಯಾಗದಿಂದ ಸಾಧ್ಯವಾಗಿಸಿದ ಜ್ಞಾತ ಮತ್ತು ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆಯ ಗೌರವವನ್ನು ಸಲ್ಲಿಸಲು ನಾನು ನನ್ನ ಸಹ ನಾಗರಿಕರೊಂದಿಗೆ ಸೇರುತ್ತೇನೆ. ಮಾತಂಗಿನಿ ಹಜ್ರಾ ಮತ್ತು ಕನಕಲತಾ ಬರುವಾ ಅವರಂತಹ ಮಹಾನ್ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಭಾರತ ಮಾತೆಗಾಗಿ ತಮ್ಮ ಪ್ರಾಣವನ್ನು ಸಮರ್ಪಿಸಿದರು. ಮಾ ಕಸ್ತೂರಬಾ ಅವರು ಸತ್ಯಾಗ್ರಹದ ಕಠಿಣ ಹಾದಿಯ ಪ್ರತಿ ಹೆಜ್ಜೆಯಲ್ಲೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯರಿಗೆ ಸರಿಸಮಾನವಾಗಿದ್ದರು. ಸರೋಜಿನಿ ನಾಯ್ಡು, ಅಮ್ಮು ಸ್ವಾಮಿನಾಥನ್, ರಮಾದೇವಿ, ಅರುಣಾ ಅಸಫ್-ಅಲಿ ಮತ್ತು ಸುಚೇತಾ ಕೃಪಲಾನಿ ಅವರಂತಹ ಅನೇಕ ಮಹಾನ್ ಮಹಿಳಾ ನಾಯಕಿಯರು ಭವಿಷ್ಯದ ಎಲ್ಲಾ ಪೀಳಿಗೆಯ ಮಹಿಳೆಯರಿಗೆ ದೇಶ ಮತ್ತು ಸಮಾಜಕ್ಕೆ ಆತ್ಮವಿಶ್ವಾಸದಿಂದ ಸೇವೆ ಸಲ್ಲಿಸಲು ಸ್ಫೂರ್ತಿದಾಯಕ ಆದರ್ಶವಾದರು. ಇಂದು, ಮಹಿಳೆಯರು ದೇಶಕ್ಕೆ ಅಭಿವೃದ್ಧಿ ಮತ್ತು ಸೇವೆಯ ಪ್ರತಿಯೊಂದು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಕೊಡುಗೆ ನೀಡುತ್ತಿದ್ದಾರೆ ಮತ್ತು ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸುತ್ತಿದ್ದಾರೆ. ಕೆಲವು ದಶಕಗಳ ಹಿಂದೆ ಅವರ ಭಾಗವಹಿಸುವಿಕೆ ಊಹಿಸಲೂ ಸಾಧ್ಯವಾಗದಂತಹ ಅನೇಕ ಕ್ಷೇತ್ರಗಳಲ್ಲಿ ಇಂದು ನಮ್ಮ ಮಹಿಳೆಯರು ವಿಶೇಷ ಸ್ಥಾನವನ್ನು ಗಳಿಸಿದ್ದಾರೆ.

ನಮ್ಮ ದೇಶದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಗಮನ ನೀಡಲಾಗುತ್ತಿರುವುದು ನನಗೆ ಸಂತೋಷ ಕೊಟ್ಟಿದೆ. ಆರ್ಥಿಕ ಸಬಲೀಕರಣವು ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯ ಸ್ಥಾನವನ್ನು ಬಲಪಡಿಸುತ್ತದೆ. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವಂತೆ ನಾನು ಎಲ್ಲಾ ಸಹ ನಾಗರಿಕರನ್ನು ಕೋರುತ್ತೇನೆ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಧೈರ್ಯದಿಂದ ಸವಾಲುಗಳನ್ನು ಜಯಿಸಿ ಜೀವನದಲ್ಲಿ ಮುನ್ನಡೆಯಬೇಕೆಂದು ನಾನು ಬಯಸುತ್ತೇನೆ. ಮಹಿಳೆಯರ ಅಭಿವೃದ್ಧಿ ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳಲ್ಲಿ ಒಂದಾಗಿದೆ.

ಆತ್ಮೀಯ ನಾಗರಿಕರೇ,

ಸ್ವಾತಂತ್ರ್ಯ ದಿನವು ನಮ್ಮ ಇತಿಹಾಸದೊಂದಿಗೆ ಮರುಬೆಸೆಯುವಿಕೆಗೆ ಒಂದು ಸಂದರ್ಭವಾಗಿದೆ. ನಮ್ಮ ವರ್ತಮಾನವನ್ನು ಮೌಲ್ಯಮಾಪನ ಮಾಡಲು ಮತ್ತು ನಮ್ಮ ಮುಂದಿನ ದಾರಿಯನ್ನು ಪ್ರತಿಬಿಂಬಿಸಲು ಇದೊಂದು ಸಂದರ್ಭವಾಗಿದೆ. ಪ್ರಸ್ತುತ ಸಂದರ್ಭವನ್ನು ಗಮನಿಸಿದರೆ, ಭಾರತವು ವಿಶ್ವ ವೇದಿಕೆಯಲ್ಲಿ ತನ್ನ ಅರ್ಹ ಸ್ಥಾನವನ್ನು ಮರಳಿ ಪಡೆದಿರುವುದು ಮಾತ್ರವಲ್ಲ, ಅದು ಅಂತರರಾಷ್ಟ್ರೀಯ ಕ್ರಮಾಂಕದಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡಿದೆ. ಭಾರತೀಯ ಸಮುದಾಯದ ಸದಸ್ಯರೊಂದಿಗೆ ನನ್ನ ಭೇಟಿ ಮತ್ತು ಸಂವಾದದ ಸಮಯದಲ್ಲಿ, ನಾನು ಭಾರತದ ಕಥೆಯಲ್ಲಿ ಹೊಸ ವಿಶ್ವಾಸವನ್ನು ಗಮನಿಸಿದ್ದೇನೆ. ಪ್ರಪಂಚದಾದ್ಯಂತ ಅಭಿವೃದ್ಧಿ ಮತ್ತು ಮಾನವೀಯ ಗುರಿಗಳನ್ನು ಉತ್ತೇಜಿಸುವಲ್ಲಿ ಭಾರತವು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಇದು ಅಂತರರಾಷ್ಟ್ರೀಯ ವೇದಿಕೆಗಳ ನಾಯಕತ್ವವನ್ನು ವಹಿಸಿಕೊಂಡಿದೆ, ವಿಶೇಷವಾಗಿ ಜಿ-20 ರ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ.

ಜಿ-20 ವಿಶ್ವದ ಮೂರನೇ ಎರಡರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವುದರಿಂದ, ಜಾಗತಿಕ ಸಂವಾದವನ್ನು ಸರಿಯಾದ ದಿಕ್ಕಿನಲ್ಲಿ ರೂಪಿಸಲು ಇದೊಂದು ವಿಶಿಷ್ಟ ಅವಕಾಶವಾಗಿದೆ. ಜಿ-20 ಅಧ್ಯಕ್ಷತೆಯೊಂದಿಗೆ, ಭಾರತವು ವ್ಯಾಪಾರ ಮತ್ತು ಹಣಕಾಸಿನಲ್ಲಿ ಸಮಾನ ಪ್ರಗತಿಗಾಗಿ ನಿರ್ಧಾರ ತೆಗೆದುಕೊಳ್ಳುವುದನ್ನು ಉತ್ತೇಜಿಸಬಹುದು. ವ್ಯಾಪಾರ ಮತ್ತು ಹಣಕಾಸಿನ ಆಚೆಗೆ, ಮಾನವ ಅಭಿವೃದ್ಧಿಯ ವಿಷಯಗಳೂ ಕಾರ್ಯಸೂಚಿಯಲ್ಲಿವೆ. ಎಲ್ಲಾ ಮನುಕುಲಕ್ಕೆ ಸಂಬಂಧಿಸಿದ ಅನೇಕ ಜಾಗತಿಕ ಸಮಸ್ಯೆಗಳಿವೆ ಮತ್ತು ಅವು ಭೌಗೋಳಿಕ ಗಡಿಗಳಿಗೆ ಸೀಮಿತವಾಗಿಲ್ಲ. ಜಾಗತಿಕ ಸಮಸ್ಯೆಗಳೊಂದಿಗೆ ವ್ಯವಹರಿಸುವಲ್ಲಿ ಭಾರತದ ಸಾಬೀತಾಗಿರುವ ನಾಯಕತ್ವದೊಂದಿಗೆ, ಸದಸ್ಯ ರಾಷ್ಟ್ರಗಳು ಈ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಕ್ರಮವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ ಎಂದು ನನಗೆ ವಿಶ್ವಾಸವಿದೆ.

ಜಿ-20 ರ ಭಾರತದ ಅಧ್ಯಕ್ಷತೆಯಲ್ಲಿ ಗಮನಾರ್ಹವಾದದ್ದೆಂದರೆ, ಈ ರಾಜತಾಂತ್ರಿಕ ಚಟುವಟಿಕೆಯನ್ನು ತಳಮಟ್ಟದವರೆಗೆ ಕೊಂಡೊಯ್ಯುವ ವಿಧಾನ. ಜನರ ಸಹಭಾಗಿತ್ವವನ್ನು ಉತ್ತೇಜಿಸಲು ಮೊದಲ ಬಾರಿಗೆ ಅಭಿಯಾನವನ್ನು ಮಾಡಲಾಗಿದೆ. ಉದಾಹರಣೆಗೆ, ಜಿ-20 ರ ವಿಷಯಗಳ ಮೇಲೆ ಶಾಲಾ ಮತ್ತು ಕಾಲೇಜುಗಳಲ್ಲಿ ಆಯೋಜಿಸಲಾದ ವೈವಿಧ್ಯಮಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುವುದನ್ನು ನೋಡುವುದು ಸಂತಸದ ವಿಷಯವಾಗಿದೆ. ಎಲ್ಲಾ ನಾಗರಿಕರು ಜಿ-20 ಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆ ಉತ್ಸುಕರಾಗಿದ್ದಾರೆ.

ಆತ್ಮೀಯ ದೇಶಬಾಂಧವರೇ,

ಈ ಉತ್ಸಾಹವು ಸಬಲೀಕರಣದ ಪ್ರಜ್ಞೆಯೊಂದಿಗೆ ಸಾಧ್ಯ, ಏಕೆಂದರೆ ರಾಷ್ಟ್ರವು ಎಲ್ಲಾ ರಂಗಗಳಲ್ಲಿ ಮಹತ್ತರವಾದ ದಾಪುಗಾಲುಗಳನ್ನು ಹಾಕುತ್ತಿದೆ. ಭಾರತದ ಆರ್ಥಿಕತೆಯು ಸಂಕಷ್ಟದ ಸಮಯದಲ್ಲಿ ಸ್ಥಿತಿಸ್ಥಾಪಕತ್ವ ಹೊಂದಿದ್ದು ಮಾತ್ರವಲ್ಲದೆ ಇತರರಿಗೆ ಭರವಸೆಯ ದಾರಿದೀಪವಾಗಿದೆ. ವಿಶ್ವ ಆರ್ಥಿಕತೆಯು ಒಂದು ಸೂಕ್ಷ್ಮ ಹಂತದ ಮೂಲಕ ಹಾದುಹೋಗುತ್ತಿದೆ, ಏಕೆಂದರೆ ಸಾಂಕ್ರಾಮಿಕದ ನಂತರ ಅಂತರರಾಷ್ಟ್ರೀಯ ಘಟನೆಗಳು ಅನಿಶ್ಚಿತತೆಗೆ ಮತ್ತಷ್ಟು ಕಾರಣವಾಗಿವೆ. ಆದರೂ, ಚಂಡಮಾರುತವನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ. ಭಾರತವು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿದೆ ಮತ್ತು ಹೆಚ್ಚಿನ ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿದೆ. ನಮ್ಮ ಅನ್ನದಾತರಾದ ರೈತರು ನಮ್ಮ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ರಾಷ್ಟ್ರವು ಅವರಿಗೆ ಚಿರಋಣಿಯಾಗಿದೆ.

ಜಾಗತಿಕ ಮಟ್ಟದಲ್ಲಿ ಹಣದುಬ್ಬರವು ಆತಂಕಕ್ಕೆ ಕಾರಣವಾಗಿದೆ. ಆದರೆ ಭಾರತದಲ್ಲಿ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಇದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಸರ್ಕಾರವು ಸಾಮಾನ್ಯ ಜನರನ್ನು ಹೆಚ್ಚಿನ ಹಣದುಬ್ಬರದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಬಡವರಿಗೆ ಹೆಚ್ಚು ವ್ಯಾಪಕವಾದ ಭದ್ರತೆಯನ್ನು ಒದಗಿಸಿದೆ. ಜಾಗತಿಕ ಆರ್ಥಿಕ ಬೆಳವಣಿಗೆಗಾಗಿ ಜಗತ್ತು ಭಾರತದತ್ತ ನೋಡುತ್ತಿದೆ.

ಮುಂದುವರಿದ ಆರ್ಥಿಕ ಪ್ರಗತಿಯು ಎರಡು ಆಯಾಮಗಳ ಕಾರ್ಯತಂತ್ರದಿಂದ ನಡೆಸಲ್ಪಡುತ್ತದೆ. ಒಂದೆಡೆ, ವ್ಯಾಪಾರ ಮಾಡುವುದನ್ನು ಸುಲಭಗೊಳಿಸಲಾಗಿದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಉದ್ಯಮದ ಶಕ್ತಿಗಳನ್ನು ಬಲಪಡಿಸಲು ನಿರಂತರವಾದ ಉತ್ತೇಜನ ನೀಡಲಾಗುತ್ತಿದೆ.  ಮತ್ತೊಂದೆಡೆ, ಅಗತ್ಯವಿರುವವರಿಗೆ ಸಕ್ರಿಯ ಮತ್ತು ವಿಸ್ತರಿತ ಕಲ್ಯಾಣ ಉಪಕ್ರಮಗಳನ್ನು ವಿವಿಧ ವಲಯಗಳಲ್ಲಿ ತೆಗೆದುಕೊಳ್ಳಲಾಗಿದೆ. ಕಳೆದ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಬಡತನದಿಂದ ಮೇಲೆತ್ತಿರುವ ನಮ್ಮ ನೀತಿಗಳು ಮತ್ತು ಕ್ರಮಗಳ ಕೇಂದ್ರಬಿಂದು ವಂಚಿತರಿಗೆ ಆದ್ಯತೆಯನ್ನು ನೀಡುವುದೇ ಆಗಿದೆ. ಅಂತೆಯೇ, ಆದಿವಾಸಿಗಳ ಸ್ಥಿತಿಗತಿಗಳನ್ನು ಸುಧಾರಿಸಲು ಮತ್ತು ಪ್ರಗತಿಯ ಪಯಣಕ್ಕೆ ಸೇರಲು ಅವರನ್ನು ಪ್ರೋತ್ಸಾಹಿಸಲು ನಿರ್ದಿಷ್ಟ ಕಾರ್ಯಕ್ರಮಗಳಿವೆ. ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಆಧುನಿಕತೆಯನ್ನು ಅಳವಡಿಸಿಕೊಳ್ಳುತ್ತಲೇ ತಮ್ಮ ಸಂಪ್ರದಾಯಗಳನ್ನು ಶ್ರೀಮಂತಗೊಳಿಸಬೇಕೆಂದು ನಾನು ಮನವಿ ಮಾಡುತ್ತೇನೆ.
ಆರ್ಥಿಕ ಬೆಳವಣಿಗೆಯ ಜೊತೆಗೆ ಮಾನವ-ಅಭಿವೃದ್ಧಿ-ಕಾಳಜಿಗಳಿಗೂ ಹೆಚ್ಚಿನ ಆದ್ಯತೆ ನೀಡಿರುವುದು ನನಗೆ ಸಂತಸ ತಂದಿದೆ. ಶಿಕ್ಷಕಿಯೂ ಆಗಿದ್ದ ನಾನು ಶಿಕ್ಷಣವು ಸಾಮಾಜಿಕ ಸಬಲೀಕರಣದ ಬಹುದೊಡ್ಡ ಸಾಧನ ಎಂಬುದನ್ನು ಅರಿತುಕೊಂಡಿದ್ದೇನೆ. 2020 ರ ರಾಷ್ಟ್ರೀಯ ಶಿಕ್ಷಣ ನೀತಿಯು ಬದಲಾವಣೆಯನ್ನು ಪ್ರಾರಂಭಿಸಿದೆ. ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣತಜ್ಞರೊಂದಿಗಿನ ನನ್ನ ಸಂವಾದದಿಂದ, ಕಲಿಕಾ ಪ್ರಕ್ರಿಯೆಯು ಹೆಚ್ಚು ನಮ್ಯತೆಯಿಂದ ಕೂಡಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಆಧುನಿಕ ಕೌಶಲ್ಯಗಳೊಂದಿಗೆ ಪ್ರಾಚೀನ ಮೌಲ್ಯಗಳನ್ನು ವಿಲೀನಗೊಳಿಸುವ ಗುರಿಯನ್ನು ಹೊಂದಿರುವ ಈ ದಾರ್ಶನಿಕ ನೀತಿಯು ಬರುವ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ತರುತ್ತದೆ, ಇದು ರಾಷ್ಟ್ರದ ದೊಡ್ಡ ಪರಿವರ್ತನೆಗೆ ಕಾರಣವಾಗುತ್ತದೆ. ಭಾರತದ ಆರ್ಥಿಕ ಪ್ರಗತಿಯು ಅದರ ಜನರ ಕನಸುಗಳಿಂದ ನಡೆಸಲ್ಪಡುತ್ತದೆ, ವಿಶೇಷವಾಗಿ ಯುವ ಪೀಳಿಗೆಗೆ ಮಿತಿಯಿಲ್ಲದ ಅವಕಾಶಗಳು ತೆರೆದುಕೊಂಡಿವೆ. ಸ್ಟಾರ್ಟ್-ಅಪ್ಗಳಿಂದ ಕ್ರೀಡೆಯವರೆಗೆ, ನಮ್ಮ ಯುವಕರು ಹಿರಿಮೆಯ ಹೊಸ ದಿಗಂತಗಳನ್ನು ಅನ್ವೇಷಿಸಿದ್ದಾರೆ.
ನವಭಾರತದ ಆಶಯಗಳು ಅಪರಿಮಿತ ಆಯಾಮಗಳನ್ನು ಹೊಂದಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಹೊಸ ಎತ್ತರಗಳನ್ನು ಮುಟ್ಟಿದೆ ಮತ್ತು ಶ್ರೇಷ್ಠತೆಯ ಉನ್ನತ ಮಾನದಂಡಗಳನ್ನು ಸ್ಥಾಪಿಸುತ್ತಿದೆ. ಈ ವರ್ಷ, ಇಸ್ರೋ ಚಂದ್ರಯಾನ-3 ಅನ್ನು ಉಡಾಯಿಸಿತು ಮತ್ತು ಅದರ 'ವಿಕ್ರಮ್' ಎಂಬ ಲ್ಯಾಂಡರ್ ಮತ್ತು ಅದರ 'ಪ್ರಜ್ಞಾನ್' ಹೆಸರಿನ ರೋವರ್ ಮುಂದಿನ ಕೆಲವು ದಿನಗಳಲ್ಲಿ ಚಂದ್ರನ ಮೇಲೆ ಇಳಿಯಲಿವೆ. ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ ಮತ್ತು ನಾನು ಆ ಕ್ಷಣವನ್ನು ಎದುರು ನೋಡುತ್ತಿದ್ದೇನೆ. ಆದರೆ ಚಂದ್ರಯಾನವು ನಮ್ಮ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಒಂದು ಮೆಟ್ಟಿಲು ಮಾತ್ರ. ನಾವಿನ್ನೂ ಬಹಳ ದೂರ ಸಾಗಬೇಕಿದೆ. 

ಬಾಹ್ಯಾಕಾಶದಲ್ಲಿ ಮತ್ತು ಭೂಮಿಯ ಮೇಲಿನ ತಮ್ಮ ಕೆಲಸಕ್ಕಾಗಿ, ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞರು ದೇಶಕ್ಕೆ ಗೌರವಗಳನ್ನು ತರುತ್ತಿದ್ದಾರೆ. ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಲು, ಸರ್ಕಾರವು ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸುತ್ತಿದೆ, ಇದಕ್ಕಾಗಿ ಮುಂದಿನ ಐದು ವರ್ಷಕ್ಕೆ 50,000 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪ್ರತಿಷ್ಠಾನವು ನಮ್ಮ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಿತ್ತುತ್ತದೆ, ಬೆಳೆಯುತ್ತದೆ ಮತ್ತು ಉತ್ತೇಜಿಸುತ್ತದೆ.

ಆತ್ಮೀಯ ನಾಗರಿಕರೇ,

ನಮಗೆ, ವಿಜ್ಞಾನ ಅಥವಾ ಜ್ಞಾನವು ಅವುಗಳಲ್ಲಿಯೇ ಕೊನೆಗೊಳ್ಳುವುದಿಲ್ಲ, ಬದಲಿಗೆ ಸರ್ವರ ಒಳಿತಿಗಾಗಿ ಇರುವ ಸಾಧನಗಳಾಗಿವೆ. ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು ನೀತಿ ನಿರೂಪಕರ ತುರ್ತು ಗಮನಕ್ಕೆ ಅರ್ಹವಾದ ಒಂದು ಕ್ಷೇತ್ರವೆಂದರೆ ಹವಾಮಾನ ಬದಲಾವಣೆ. ಇತ್ತೀಚಿನ ವರ್ಷಗಳಲ್ಲಿ ನಾವು ಹಲವಾರು ಹವಾಮಾನ ವೈಪರೀತ್ಯಗಳನ್ನು ಎದುರಿಸಿದ್ದೇವೆ. ಭಾರತದ ಕೆಲವು ಭಾಗಗಳು ಅತಿವೃಷ್ಟಿಯನ್ನು ಎದುರಿಸಿವೆ. ಅದೇ ಸಮಯದಲ್ಲಿ, ಹಲವೆಡೆ ಅನಾವೃಷ್ಟಿಯನ್ನೂ ಎದುರಿಸುತ್ತಿದ್ದೇವೆ. ಈ ಘಟನೆಗಳು ಜಾಗತಿಕ ತಾಪಮಾನ ಏರಿಕೆಯ ವಿದ್ಯಮಾನಕ್ಕೆ ಕಾರಣವಾಗಿವೆ. ಆದ್ದರಿಂದ, ಪರಿಸರಕ್ಕಾಗಿ ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳನ್ನು ಮಾಡುವುದು ಅವಶ್ಯಕವಾಗಿದೆ. ಈ ಸಂದರ್ಭದಲ್ಲಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವು ಅಭೂತಪೂರ್ವ ಗುರಿಗಳನ್ನು ಸಾಧಿಸಿದ್ದೇವೆ ಎಂಬುದು ಗಮನಾರ್ಹವಾಗಿದೆ. ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಭಾರತವು ನಾಯಕತ್ವವನ್ನು ನೀಡುತ್ತಿದೆ. ಅಂತರರಾಷ್ಟ್ರೀಯ ಬದ್ಧತೆಗಳನ್ನು ಈಡೇರಿಸುವಲ್ಲಿ ನಮ್ಮ ದೇಶ ಪ್ರಮುಖ ಪಾತ್ರ ವಹಿಸುತ್ತಿದೆ. ನಾವು ಲೈಫ್ ಮಂತ್ರವನ್ನು ಅಂದರೆ ಪರಿಸರಕ್ಕಾಗಿ ಜೀವನಶೈಲಿಯನ್ನು ಜಾಗತಿಕ ಸಮುದಾಯಕ್ಕೆ ನೀಡಿದ್ದೇವೆ.

ಪ್ರೀತಿಯ ದೇಶ ಬಾಂಧವರೇ,

ಹವಾಮಾನ ವೈಪರೀತ್ಯಗಳು ಎಲ್ಲರ ಮೇಲೆ ಪರಿಣಾಮ ಬೀರುತ್ತವೆ. ಆದರೆ ಅವುಗಳ ಪ್ರಭಾವವು ಬಡವರು ಮತ್ತು ವಂಚಿತರ ಮೇಲೆ ಹೆಚ್ಚು ತೀವ್ರವಾಗಿರುತ್ತದೆ. ನಗರಗಳು ಮತ್ತು ಗುಡ್ಡಗಾಡು ಪ್ರದೇಶಗಳನ್ನು ವಿಶೇಷವಾಗಿ ಹೆಚ್ಚು ತಾಳಿಕೆಯ ಪ್ರದೇಶಗಳನ್ನಾಗಿ ಮಾಡುವ ಅಗತ್ಯವಿದೆ.

ಇದರಲ್ಲಿ ದೊಡ್ಡ ಅಂಶವೆಂದರೆ ದುರಾಸೆಯ ಸಂಸ್ಕೃತಿಯು ಪ್ರಪಂಚವನ್ನು ಪ್ರಕೃತಿಯಿಂದ ದೂರ ಮಾಡುತ್ತಿದೆ. ನಮ್ಮ ಮೂಲಗಳಿಗೆ ಮರಳುವ ತೀವ್ರವಾದ ಅಗತ್ಯವನ್ನು ನಾವು ಈಗ ಅರಿತುಕೊಂಡಿದ್ದೇವೆ. ಇನ್ನೂ ಅನೇಕ ಬುಡಕಟ್ಟು ಸಮುದಾಯಗಳು ನಿಸರ್ಗಕ್ಕೆ ಹತ್ತಿರವಾಗಿ ಮತ್ತು ಅದರೊಂದಿಗೆ ಸಾಮರಸ್ಯದಿಂದ ಬದುಕುತ್ತಿವೆ ಎಂದು ನನಗೆ ತಿಳಿದಿದೆ. ಅವರ ಮೌಲ್ಯಗಳು ಮತ್ತು ಜೀವನಶೈಲಿಯು ಹವಾಮಾನ ಕ್ರಮಗಳಿಗೆ ಅಮೂಲ್ಯವಾದ ಪಾಠಗಳಾಗಿವೆ.

ಬುಡಕಟ್ಟು ಸಮುದಾಯಗಳು ಯುಗ ಯುಗಗಳಿಂದ ಉಳಿದುಕೊಂಡು ಬಂದಿರುವುದರ ರಹಸ್ಯವನ್ನು ಒಂದೇ ಪದದಲ್ಲಿ ಹೇಳಬಹುದು. ಆ ಒಂದೇ ಪದವೇ ‘ಸಹಾನುಭೂತಿ’ಅವರು ಪ್ರಕೃತಿ ಮಾತೆಯ ಮಕ್ಕಳಾದ ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಆದಾಗ್ಯೂ, ಕೆಲವೊಮ್ಮೆ ಪ್ರಪಂಚವು ಸಹಾನುಭೂತಿಯ ಕೊರತೆಯಿಂದ ಬಳಲುತ್ತಿರುವಂತೆ ತೋರುತ್ತದೆ. ಆದರೆ ಅಂತಹ ಅವಧಿಗಳು ಕೇವಲ ಅಸಹಜತೆಗಳು ಮತ್ತು ದಯೆಯೇ ನಮ್ಮ ಮೂಲಭೂತ ಸ್ವಭಾವವಾಗಿದೆ ಎಂದು ಇತಿಹಾಸ ಹೇಳುತ್ತದೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸಹಾನುಭೂತಿಯನ್ನು ಹೊಂದಿದ್ದಾರೆ ಮತ್ತು ಮನುಕುಲವು ದಾರಿ ತಪ್ಪಿದಾಗ ಅವರು ದಾರಿ ತೋರಿಸುತ್ತಾರೆ ಎಂಬುದು ನನ್ನ ಅನುಭವ.

ನಮ್ಮ ದೇಶವು ಹೊಸ ಸಂಕಲ್ಪಗಳೊಂದಿಗೆ 'ಅಮೃತ ಕಾಲ'ವನ್ನು ಪ್ರವೇಶಿಸಿದೆ ಮತ್ತು 2047 ರ ವೇಳೆಗೆ ಭಾರತವನ್ನು ಸರ್ವರನ್ನೂ ಒಳಗೊಂಡ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವತ್ತ ನಾವು ಮುನ್ನಡೆಯುತ್ತಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಉತ್ಕೃಷ್ಟತೆಯನ್ನು ಸಾಧಿಸಲು ನಮ್ಮ ಮೂಲಭೂತ ಕರ್ತವ್ಯವನ್ನು ನಿರ್ವಹಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ. ಇದರಿಂದ ರಾಷ್ಟ್ರವು ನಿರಂತರವಾಗಿ ಪ್ರಯತ್ನ ಮತ್ತು ಸಾಧನೆಯ ಉನ್ನತ ಮಟ್ಟಕ್ಕೆ ಏರುತ್ತದೆ.

ಆತ್ಮೀಯ ಸಹ ನಾಗರಿಕರೇ,

ನಮ್ಮ ಸಂವಿಧಾನವು ನಮ್ಮ ಮಾರ್ಗದರ್ಶಿ ದಾಖಲೆಯಾಗಿದೆ. ಇದರ ಪೀಠಿಕೆಯು ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಒಳಗೊಂಡಿದೆ. ನಮ್ಮ ರಾಷ್ಟ್ರ ನಿರ್ಮಾತೃಗಳ ಕನಸುಗಳನ್ನು ನನಸಾಗಿಸಲು ಸೌಹಾರ್ದತೆ ಮತ್ತು ಸಹೋದರತ್ವದ ಮನೋಭಾವದಿಂದ ಮುನ್ನಡೆಯೋಣ.

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ನಾನು ಮತ್ತೊಮ್ಮೆ ನಿಮಗೆ, ವಿಶೇಷವಾಗಿ ಗಡಿ ಕಾಯುವ ನಮ್ಮ ಸೈನಿಕರಿಗೆ, ಪಡೆಗಳ ಯೋಧರಿಗೆ ಮತ್ತು ಆಂತರಿಕ ಭದ್ರತೆಯನ್ನು ಒದಗಿಸುವ ಪೊಲೀಸರಿಗೆ ಮತ್ತು ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ವಾಸಿಸುವ ಭಾರತೀಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು.

ಧನ್ಯವಾದಗಳು

ಜೈ ಹಿಂದ್!

ಜೈ ಭಾರತ್!

 

****



(Release ID: 1948689) Visitor Counter : 274