ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 07 AUG 2023 4:11PM by PIB Bengaluru

ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಪಿಯೂಷ್ ಗೋಯಲ್ ಜಿ, ನಾರಾಯಣ ರಾಣೆ ಜಿ, ಸಹೋದರಿ ದರ್ಶನಾ ಜರ್ದೋಶ್ ಜಿ, ಎಲ್ಲಾ ಉದ್ಯಮ ಮತ್ತು ಫ್ಯಾಷನ್ ರಂಗದ ಎಲ್ಲಾ ಸ್ನೇಹಿತರೆ, ಕೈಮಗ್ಗ ಮತ್ತು ಖಾದಿಯ ವ್ಯಾಪಕ ಸಂಪ್ರದಾಯಕ್ಕೆ ಸಂಬಂಧಿಸಿದ ಎಲ್ಲಾ ಉದ್ಯಮಿಗಳು ಮತ್ತು ನೇಕಾರರು, ಇಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯರು, ಮಹಿಳೆಯರು ಮತ್ತು ಮಹನೀಯರೆ!

ಕೆಲವು ದಿನಗಳ ಹಿಂದೆ ಭಾರತ ಮಂಟಪವನ್ನು ಅದ್ಧೂರಿಯಾಗಿ ಉದ್ಘಾಟಿಸಲಾಗಿತ್ತು. ನಿಮ್ಮಲ್ಲಿ ಕೆಲವರು ಮೊದಲು ಇಲ್ಲಿಗೆ ಬಂದು ನಿಮ್ಮ ಮಳಿಗೆಗಳು ಅಥವಾ ಟೆಂಟ್‌ಗಳನ್ನು ಹಾಕಿದ್ದಿರಿ. ಆದರೆ ಇಂದು ನೀವು ಇಲ್ಲಿ ಪರಿವರ್ತಿತ ರಾಷ್ಟ್ರವನ್ನು ನೋಡುತ್ತಿದ್ದೀರಿ. ಇಂದು ನಾವು ಈ ಭಾರತ ಮಂಟಪದಲ್ಲಿ ರಾಷ್ಟ್ರೀಯ ಕೈಮಗ್ಗ ದಿನ ಆಚರಿಸುತ್ತಿದ್ದೇವೆ. ಭಾರತ ಮಂಟಪದ ಈ ವೈಭವದಲ್ಲಿಯೂ ಭಾರತದ ಕೈಮಗ್ಗ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಾಚೀನ ಮತ್ತು ಆಧುನಿಕತೆಯ ಈ ಸಂಗಮವು ಇಂದಿನ ಭಾರತವನ್ನು ವ್ಯಾಖ್ಯಾನಿಸುತ್ತಿದೆ. ಇಂದಿನ ಭಾರತ ಕೇವಲ ಸ್ಥಳೀಯರ ಬಗ್ಗೆ ಧ್ವನಿಯೆತ್ತದೆ, ವಿಶ್ವವ್ಯಾಪಿಯಾಗಿಸಲು ಜಾಗತಿಕ ವೇದಿಕೆ ಒದಗಿಸುತ್ತಿದೆ. ಸ್ವಲ್ಪ ಸಮಯದ ಹಿಂದೆ, ನಮ್ಮ ಕೆಲವು ನೇಕಾರರೊಂದಿಗೆ ಸಂವಹನ ನಡೆಸಲು ನನಗೆ ಅವಕಾಶ ಸಿಕ್ಕಿತು. ದೇಶಾದ್ಯಂತ ಅನೇಕ ಕೈಮಗ್ಗ ಕ್ಲಸ್ಟರ್‌ಗಳಿಂದ ನಮ್ಮ ನೇಕಾರ ಸಹೋದರರು ಮತ್ತು ಸಹೋದರಿಯರು ನಮ್ಮೊಂದಿಗೆ ಇರಲು ದೂರದೂರುಗಳಿಂದ ಇಲ್ಲಿಗೆ ಬಂದಿದ್ದಾರೆ. ಈ ಭವ್ಯ ಸಮಾರಂಭದಲ್ಲಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ!

 

ಸ್ನೇಹಿತರೆ,

ಈ ಆಗಸ್ಟ್ ತಿಂಗಳು ಕ್ರಾಂತಿಯ ತಿಂಗಳು. ಸ್ವಾತಂತ್ರ್ಯಕ್ಕಾಗಿ ಮಾಡಿದ ಪ್ರತಿ ತ್ಯಾಗವನ್ನು ನೆನಪಿಸಿಕೊಳ್ಳುವ ಸಮಯ ಇದು. ಈ ದಿನ ಸ್ವದೇಶಿ ಚಳುವಳಿ ಪ್ರಾರಂಭವಾಯಿತು. ಸ್ವದೇಶಿಯ ಈ ಮನೋಭಾವ ಕೇವಲ ವಿದೇಶಿ ಬಟ್ಟೆ ಬಹಿಷ್ಕಾರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ, ಇದು ನಮ್ಮ ಆರ್ಥಿಕ ಸ್ವಾತಂತ್ರ್ಯಕ್ಕೆ ಉತ್ತಮ ಪ್ರೇರಣೆಯಾಗಿದೆ. ಇದು ಭಾರತದ ಜನರನ್ನು ತನ್ನ ನೇಕಾರರೊಂದಿಗೆ ಸಂಪರ್ಕಿಸುವ ಅಭಿಯಾನವಾಗಿತ್ತು. ಈ ದಿನವನ್ನು ರಾಷ್ಟ್ರೀಯ ಕೈಮಗ್ಗ ದಿನವಾಗಿ ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಲು ಇದು ಪ್ರಮುಖ ಕಾರಣವಾಗಿದೆ. ಅನೇಕ ವರ್ಷಗಳಲ್ಲಿ, ಭಾರತದ ನೇಕಾರರಿಗೆ ಮತ್ತು ಭಾರತದ ಕೈಮಗ್ಗ ಕ್ಷೇತ್ರದ ವಿಸ್ತರಣೆಗೆ ಅಭೂತಪೂರ್ವ ಕೆಲಸ ಮಾಡಲಾಗಿದೆ. ಸ್ವದೇಶಿ ವಿಷಯದಲ್ಲಿ ಹೊಸ ಕ್ರಾಂತಿಯೊಂದು ದೇಶವನ್ನು ಆವರಿಸಿದೆ. ವಿಶೇಷವಾಗಿ ಆಗಸ್ಟ್ 15ರಂದು ಕೆಂಪುಕೋಟೆಯಿಂದ ಈ ಕ್ರಾಂತಿಯ ಬಗ್ಗೆ ಮಾತನಾಡಲು ಭಾಸವಾಗುತ್ತದೆ. ಆದರೆ ಇಂದು ದೇಶದೆಲ್ಲೆಡೆಯಿಂದ ಅಸಂಖ್ಯಾತ ನೇಕಾರ ಸ್ನೇಹಿತರು ನನ್ನ ಜೊತೆಗೂಡಿದ್ದಾರೆ. ಹಾಗಾಗಿ ಅವರ ಮುಂದೆ ಅವರ ಕಠಿಣ ಪರಿಶ್ರಮದಿಂದ ಭಾರತವು ಸಾಧಿಸಿದ ಈ ಯಶಸ್ಸಿನ ಬಗ್ಗೆ ಮಾತನಾಡುವಾಗ ನನ್ನ ಹೃದಯವು ಅಪಾರ ಹೆಮ್ಮೆಯಿಂದ ತುಂಬುತ್ತದೆ.

 

ಸ್ನೇಹಿತರೆ,

ನಮ್ಮ ಬಟ್ಟೆ, ನಮ್ಮ ಡ್ರೆಸ್ಸಿಂಗ್ ಸ್ಟೈಲ್ ನಮ್ಮ ಗುರುತಿಗೆ ಸಂಬಂಧ ಮತ್ತು ಸಂಪರ್ಕ ಹೊಂದಿದೆ. ವಿವಿಧ ರೀತಿಯ ಬಟ್ಟೆ ಶೈಲಿಗಳಿವೆ, ಜನರು ಉಡುಪು ಧರಿಸುವ ಶೈಲಿ ನೋಡಿ ನಾವು ಅವರು ಯಾವ ಪ್ರದೇಶಕ್ಕೆ ಸೇರಿದವರು ಎಂದು ಗುರುತಿಸಬಹುದು. ಅದೇನೆಂದರೆ, ನಮ್ಮ ವೈವಿಧ್ಯತೆಯೇ ನಮ್ಮ ಗುರುತು. ಒಂದು ರೀತಿಯಲ್ಲಿ ನಮ್ಮ ವೈವಿಧ್ಯತೆ ಆಚರಿಸಲು ಇದು ಒಂದು ಅವಕಾಶವಾಗಿದೆ. ಈ ವೈವಿಧ್ಯತೆಯು ನಮ್ಮ ಬಟ್ಟೆಗಳಲ್ಲಿ ಮೊದಲು ಕಂಡುಬರುತ್ತದೆ. ಬಟ್ಟೆಯನ್ನು ನೋಡಿಯೇ ಹೊಸತನವಿದೆಯೋ ಅಥವಾ ವಿಭಿನ್ನವಾಗಿದೆಯೋ ಎಂದು ಜನರು ತಿಳಿದುಕೊಳ್ಳುತ್ತಾರೆ. ದೇಶದ ದೂರದ ಪ್ರದೇಶಗಳಲ್ಲಿ ವಾಸಿಸುವ ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರಿಂದ ಹಿಡಿದು ಹಿಮದಿಂದ ಆವೃತವಾದ ಪರ್ವತಗಳ ಸುತ್ತಲೂ ವಾಸಿಸುವವರಿಂದ ಹಿಡಿದು, ಸಮುದ್ರ ತೀರದ ಸಮೀಪ ವಾಸಿಸುವ ಜನರಿಂದ, ಮರುಭೂಮಿಗಳು ಮತ್ತು ಭಾರತದ ಬಯಲು ಪ್ರದೇಶಗಳವರೆಗೆ, ನಮ್ಮಲ್ಲಿ ಸುಂದರವಾದ ಕಾಮನಬಿಲ್ಲು ಇದೆ. ವಿಭಿನ್ನವಾದ ಬಟ್ಟೆ ಶೈಲಿಗಳಿವೆ. ನಾನು ಒಮ್ಮೆ ಈ ರೀತಿಯ ಬಟ್ಟೆ ಶೈಲಿಗಳನ್ನು ಪಟ್ಟಿ ಮಾಡಲು ಮತ್ತು ಸಂಗ್ರಹ ಮಾಡಲು ಮನವಿ ಮಾಡಿದ್ದೆ. ಇಂದು ನನ್ನ ವಿನಂತಿಯು ಇಲ್ಲಿ ‘ಭಾರತೀಯ ವಸ್ತ್ರ ಏವಂ ಶಿಲ್ಪ ಕೋಶ’ (ಭಾರತೀಯ ಜವಳಿ ಸಂಕಲನ) ರೂಪದಲ್ಲಿ ಕಾರ್ಯರೂಪಕ್ಕೆ ಬಂದಿರುವುದನ್ನು ನೋಡಿ ನನಗೆ ಅತ್ಯಂತ ಸಂತೋಷವಾಗಿದೆ.

 

ಸ್ನೇಹಿತರೆ,

ಕಳೆದ ಶತಮಾನಗಳಲ್ಲಿ ಜವಳಿ ಉದ್ಯಮಕ್ಕೆ ಸಾಕಷ್ಟು ಗಮನ ನೀಡಲಾಗಿಲ್ಲ, ಸ್ವಾತಂತ್ರ್ಯಾ ನಂತರ ಅದನ್ನು ಪುನರುಜ್ಜೀವನಗೊಳಿಸಲು ಸಾಕಷ್ಟು ಪ್ರಯತ್ನಗಳು ನಡೆಯದಿರುವುದು ದುರದೃಷ್ಟಕರ. ಖಾದಿ ಕ್ಷೀಣಿಸುವ ಸ್ಥಿತಿ ನಿರ್ಮಾಣವಾಗಿತ್ತು. ಮೊದಲು ಖಾದಿ ಧರಿಸುವವರು ಜನರಿಂದ ಅವಹೇಳನಕಾರಿ ಮಾತು ಕೇಳುತ್ತಿದ್ದರು. ಆದರೆ 2014 ರಿಂದ, ನಮ್ಮ ಸರ್ಕಾರವು ಈ ಪರಿಸ್ಥಿತಿ ಮತ್ತು ಈ ಮನಸ್ಥಿತಿ ಬದಲಾಯಿಸಲು ತೊಡಗಿದೆ. ನನಗೆ ಇನ್ನೂ ನೆನಪಿದೆ, ಮನ್ ಕಿ ಬಾತ್ ಕಾರ್ಯಕ್ರಮದ ಆರಂಭಿಕ ದಿನಗಳಲ್ಲಿ, ನಾನು ಒಂದಲ್ಲ ಒಂದು ಖಾದಿ ವಸ್ತು ಖರೀದಿಸಲು ದೇಶದ ಜನತೆಯನ್ನು ವಿನಂತಿಸಿದ್ದೆ. ಇಂದು ಅದರ ಫಲಿತಾಂಶಗಳಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಕಳೆದ 9 ವರ್ಷಗಳಲ್ಲಿ ಖಾದಿ ಉತ್ಪಾದನೆ 3 ಪಟ್ಟು ಹೆಚ್ಚಾಗಿದೆ. ಖಾದಿ ಬಟ್ಟೆಗಳ ಮಾರಾಟವೂ 5 ಪಟ್ಟು ಹೆಚ್ಚಾಗಿದೆ. ದೇಶ ವಿದೇಶಗಳಲ್ಲಿ ಖಾದಿ ಬಟ್ಟೆಗೆ ಬೇಡಿಕೆ ಹೆಚ್ಚುತ್ತಿದೆ. ನಾನು ಕೆಲವು ದಿನಗಳ ಹಿಂದೆ ಪ್ಯಾರಿಸ್‌ನಲ್ಲಿ ಬಹಳ ದೊಡ್ಡ ಫ್ಯಾಷನ್ ಬ್ರಾಂಡ್‌ನ ಸಿಇಒ ಅವರನ್ನು ಭೇಟಿಯಾಗಿದ್ದೆ. ವಿದೇಶದಲ್ಲಿ ಖಾದಿ ಮತ್ತು ಭಾರತೀಯ ಕೈಮಗ್ಗದ ಕಡೆಗೆ ಆಕರ್ಷಣೆ ಹೇಗೆ ಹೆಚ್ಚುತ್ತಿದೆ ಎಂಬುದನ್ನು ಅವರು ನನಗೆ ತಿಳಿಸಿದರು.

ಸ್ನೇಹಿತರೆ,

9 ವರ್ಷಗಳ ಹಿಂದೆ ಖಾದಿ ಮತ್ತು ಗ್ರಾಮೋದ್ಯೋಗಗಳ ವ್ಯವಹಾರ ಕೇವಲ 25 -30 ಸಾವಿರ ಕೋಟಿ ರೂ ಇತ್ತು. ಇಂದು 1 ಲಕ್ಷದ 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ತಲುಪಿದೆ. ಕಳೆದ 9 ವರ್ಷಗಳಲ್ಲಿ ಈ ಕ್ಷೇತ್ರಕ್ಕೆ ಹರಿದು ಬಂದಿರುವ ಹೆಚ್ಚುವರಿ 1 ಲಕ್ಷ ಕೋಟಿ, ಈ ಹಣ ಎಲ್ಲಿಗೆ ಹೋಯಿತು? ಈ ಹಣ ಕೈಮಗ್ಗ ಕ್ಷೇತ್ರಕ್ಕೆ ಸಂಬಂಧಿಸಿದ ನನ್ನ ಬಡ ಸಹೋದರ ಸಹೋದರಿಯರಿಗೆ ಹೋಗಿದೆ, ಈ ಹಣ ಹಳ್ಳಿಗಳಿಗೆ ಹೋಗಿದೆ; ಈ ಹಣ ಆದಿವಾಸಿಗಳ ಪಾಲಾಗಿದೆ. ನೀತಿ ಆಯೋಗದ ಪ್ರಕಾರ, ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಅವರನ್ನು ಬಡತನದಿಂದ ಹೊರತರುವ ಕಾರ್ಯದಲ್ಲಿ ಈ ವಲಯವು ತನ್ನ ಅಮೋಘ ಪಾತ್ರ ವಹಿಸಿದೆ. ಇಂದು ‘ವೋಕಲ್ ಫಾರ್ ಲೋಕಲ್’ ಎಂಬ ಮನೋಭಾವದಿಂದ ದೇಶವಾಸಿಗಳು ಸ್ವದೇಶಿ ಉತ್ಪನ್ನಗಳನ್ನು ಮನಃಪೂರ್ವಕವಾಗಿ ಖರೀದಿಸುತ್ತಿದ್ದಾರೆ. ಅದೊಂದು ಜನಾಂದೋಲನವಾಗಿ ಮಾರ್ಪಟ್ಟಿದೆ. ನಾನು ಮತ್ತೊಮ್ಮೆ ಎಲ್ಲಾ ದೇಶವಾಸಿಗಳಿಗೆ ಮನವಿ ಮಾಡುತ್ತೇನೆ, ಮುಂದಿನ ದಿನಗಳಲ್ಲಿ ರಕ್ಷಾ ಬಂಧನ, ಗಣೇಶ ಉತ್ಸವ, ದಸರಾ, ದೀಪಾವಳಿ, ದುರ್ಗಾ ಪೂಜೆಯ ಹಬ್ಬಗಳನ್ನು ಆಚರಿಸುತ್ತೇವೆ. ಈ ಹಬ್ಬಗಳಲ್ಲಿ ನಾವು ನಮ್ಮ ಸ್ವದೇಶಿ ಸಂಕಲ್ಪವನ್ನು ಪುನರುಚ್ಚರಿಸಬೇಕು. ಇದನ್ನು ಮಾಡುವುದರಿಂದ ನಾವು ನಮ್ಮ ಕುಶಲಕರ್ಮಿಗಳು, ನಮ್ಮ ನೇಕಾರ ಸಹೋದರರು ಮತ್ತು ಸಹೋದರಿಯರು ಮತ್ತು ಕೈಮಗ್ಗದ ಜಗತ್ತಿಗೆ ಸಂಬಂಧಿಸಿದ ಜನರಿಗೆ ಸಹಾಯ ಮಾಡಬಹುದು. ರಾಖಿ ಹಬ್ಬದಂದು ಸಹೋದರಿ ತನ್ನ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟಿದಾಗ, ಸಹೋದರನು ತನ್ನ ಸಹೋದರಿಯನ್ನು ರಕ್ಷಿಸುವ ಭರವಸೆ ನೀಡುತ್ತಾನೆ. ಆದರೆ ಅವನು ಅವಳಿಗೆ ಬಡ ತಾಯಿ ಕೂಡಿಟ್ಟ ಹಣದಿಂದ ಏನನ್ನಾದರೂ ಉಡುಗೊರೆಯಾಗಿ ನೀಡಿದರೆ, ಅವನು ಆ ತಾಯಿಯನ್ನು ಸಹ ರಕ್ಷಿಸುತ್ತಾನೆ.

 

ಸ್ನೇಹಿತರೆ,

ಜವಳಿ ಕ್ಷೇತ್ರಕ್ಕೆ ನಾವು ಆರಂಭಿಸಿರುವ ಯೋಜನೆಗಳು ಸಾಮಾಜಿಕ ನ್ಯಾಯದ ಪ್ರಮುಖ ಸಾಧನವಾಗುತ್ತಿರುವುದು ನನಗೆ ಖುಷಿ ತಂದಿದೆ. ಇಂದು ದೇಶಾದ್ಯಂತ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಲಕ್ಷಾಂತರ ಜನರು ಕೈಮಗ್ಗದ ಕೆಲಸದಲ್ಲಿ ತೊಡಗಿದ್ದಾರೆ. ಇವರಲ್ಲಿ ಹೆಚ್ಚಿನವರು ದಲಿತ, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮಾಜದಿಂದ ಬಂದವರು. ಕಳೆದ 9 ವರ್ಷಗಳಲ್ಲಿ, ಸರ್ಕಾರದ ಪ್ರಯತ್ನಗಳು ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ನೀಡಿದ್ದಲ್ಲದೆ, ಅವರ ಆದಾಯವೂ ಹೆಚ್ಚಾಗಿದೆ. ವಿದ್ಯುತ್, ನೀರು, ಅನಿಲ ಸಂಪರ್ಕ, ಸ್ವಚ್ಛ ಭಾರತಕ್ಕೆ ಸಂಬಂಧಿಸಿದ ಯೋಜನೆಗಳ ಪ್ರಯೋಜನಗಳು ಸಮಾಜದ ಈ ವರ್ಗಗಳಿಗೆ ಹೆಚ್ಚು ತಲುಪಿವೆ. ಮೋದಿ ಆ ಜನರಿಗೆ ಗೆ ಉಚಿತ ಪಡಿತರ ಆಹಾರದ ಖಾತರಿ ನೀಡಿದ್ದಾರೆ. ಇನ್ನು ಮೋದಿ ಗ್ಯಾರಂಟಿ ಕೊಟ್ಟಿದ್ದರಿಂದ ಅವರ ಅಡುಗೆ ಒಲೆ 365 ದಿನ ಉರಿಯುತ್ತದೆ. ಮೋದಿ ಅವರಿಗೆ ಪಕ್ಕಾ ಮನೆ ಗ್ಯಾರಂಟಿ ಕೊಟ್ಟಿದ್ದಾರೆ. 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆ. ಮೂಲಸೌಕರ್ಯಗಳಿಗಾಗಿ ನಮ್ಮ ನೇಕಾರ ಸಹೋದರ, ಸಹೋದರಿಯರ ದಶಕಗಳ ಕಾಯುವಿಕೆಯನ್ನು ನಾವು ಕೊನೆಗೊಳಿಸಿದ್ದೇವೆ.

 

ಸ್ನೇಹಿತರೆ,

ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪ್ರದಾಯಗಳು ಜೀವಂತವಾಗಿರುವುದು ಮಾತ್ರವಲ್ಲದೆ, ಹೊಸ ಅವತಾರದಲ್ಲಿ ಜಗತ್ತನ್ನು ಆಕರ್ಷಿಸಬೇಕು ಎಂದು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ನಾವು ಈ ಕ್ಷೇತ್ರಕ್ಕೆ ಸಂಬಂಧಿಸಿದ ಸ್ನೇಹಿತರ ಶಿಕ್ಷಣ, ತರಬೇತಿ ಮತ್ತು ಗಳಿಕೆಗೆ ಒತ್ತು ನೀಡುತ್ತಿದ್ದೇವೆ. ನೇಕಾರರು ಮತ್ತು ಕುಶಲಕರ್ಮಿಗಳ ಮಕ್ಕಳ ಆಕಾಂಕ್ಷೆಗಳಿಗೆ ನಾವು ರೆಕ್ಕೆಪುಕ್ಕಗಳನ್ನು ನೀಡಲು ಬಯಸುತ್ತೇವೆ. ನೇಕಾರರ ಮಕ್ಕಳ ಕೌಶಲ್ಯ ತರಬೇತಿಗಾಗಿ ಜವಳಿ ಸಂಸ್ಥೆಗಳಲ್ಲಿ 2 ಲಕ್ಷ ರೂ.ವರೆಗೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ಕಳೆದ 9 ವರ್ಷಗಳಲ್ಲಿ 600ಕ್ಕೂ ಹೆಚ್ಚು ಕೈಮಗ್ಗ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಸಾವಿರಾರು ನೇಕಾರರಿಗೆ ತರಬೇತಿ ನೀಡಲಾಗಿದೆ. ಗುಣಮಟ್ಟದ ಮತ್ತು ಸದಾ ನವೀನ ವಿನ್ಯಾಸಗಳೊಂದಿಗೆ ಹೆಚ್ಚಿನ ಉತ್ಪಾದಕತೆ ಖಚಿತಪಡಿಸಿಕೊಳ್ಳಲು ನೇಕಾರರ ಕೆಲಸವನ್ನು ಸುಲಭಗೊಳಿಸಲು ನಮ್ಮ ಪ್ರಯತ್ನಗಳು ನಿರಂತರವಾಗಿವೆ. ಹಾಗಾಗಿ ಅವರಿಗೆ ಕಂಪ್ಯೂಟರ್ ಚಾಲಿತ ಪಂಚಿಂಗ್ ಮೆಷಿನ್ ಗಳನ್ನೂ ನೀಡಲಾಗುತ್ತಿದೆ. ಇದು ಹೊಸ ವಿನ್ಯಾಸಗಳನ್ನು ತ್ವರಿತವಾಗಿ ತಯಾರಿಸಲು ಅನುಮತಿ ನೀಡುತ್ತದೆ. ಯಂತ್ರಚಾಲಿತ ಮಗ್ಗಗಳಿಂದ ನೇಯ್ಗೆಯೂ ಸುಲಭವಾಗುತ್ತಿದೆ. ಇಂತಹ ಹಲವು ಉಪಕರಣಗಳು, ಇಂತಹ ಹಲವು ಮಗ್ಗಗಳು ನೇಕಾರರಿಗೆ ಲಭ್ಯವಾಗುತ್ತಿವೆ. ಕೈಮಗ್ಗ ನೇಕಾರರಿಗೆ ಸರ್ಕಾರವು ಕಚ್ಚಾ ವಸ್ತುಗಳನ್ನು ಅಂದರೆ ನೂಲನ್ನು ರಿಯಾಯಿತಿ ದರದಲ್ಲಿ ನೀಡುತ್ತಿದೆ. ಕಚ್ಚಾ ವಸ್ತುಗಳ ಸಾಗಣೆ ವೆಚ್ಚವನ್ನೂ ಸರ್ಕಾರವೇ ಭರಿಸುತ್ತಿದೆ. ಮುದ್ರಾ ಯೋಜನೆ ಮೂಲಕ ನೇಕಾರರು ಬ್ಯಾಂಕ್ ಗ್ಯಾರಂಟಿ ಇಲ್ಲದೆ ಸಾಲ ಪಡೆಯಲು ಸಾಧ್ಯವಾಗಿದೆ.

 

ಸ್ನೇಹಿತರೆ,

ನಾನು ಗುಜರಾತ್‌ನಲ್ಲಿ ವಾಸಿಸುತ್ತಿದ್ದಾಗ ಅನೇಕ ವರ್ಷಗಳ ಕಾಲ ನನ್ನ ನೇಕಾರರೊಂದಿಗೆ ಸಮಯ ಕಳೆದಿದ್ದೇನೆ. ಇಡೀ ಕೃಷಿ ಪ್ರದೇಶದ ಆರ್ಥಿಕತೆಗೆ ಕೈಮಗ್ಗ ದೊಡ್ಡ ಕೊಡುಗೆ ನೀಡಿದ್ದು, ನಾನು ಈ ಭಾಗದ ಸಂಸದನಾಗಿದ್ದೇನೆ. ಆಗಾಗ ಅವರನ್ನು ಭೇಟಿಯಾಗಿ ಮಾತನಾಡುತ್ತಿರುತ್ತೇನೆ. ಆದ್ದರಿಂದಲೇ ನನಗೆ ನೆಲದ ವಾಸ್ತವಗಳ ಅರಿವಿದೆ. ನಮ್ಮ ನೇಕಾರರು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರು ಉತ್ಪನ್ನ ತಯಾರಿಸುತ್ತಾರೆ, ಆದರೆ ಪೂರೈಕೆ ಸರಪಳಿ ಮತ್ತು ಮಾರುಕಟ್ಟೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಅವರನ್ನು ಈ ಸಮಸ್ಯೆಯಿಂದ ಹೊರತರಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಕೈಯಿಂದ ತಯಾರಿಸಿದ ಉತ್ಪನ್ನಗಳ ಮಾರುಕಟ್ಟೆಗೆ ಸರ್ಕಾರ ಒತ್ತು ನೀಡುತ್ತಿದೆ. ಪ್ರತಿದಿನ ದೇಶದ ಯಾವುದೋ ಮೂಲೆಯಲ್ಲಿ ಮಾರುಕಟ್ಟೆ ಪ್ರದರ್ಶನ ಆಯೋಜಿಸಲಾಗುತ್ತಿದೆ. ಭಾರತ ಮಂಟಪದಂತೆಯೇ ಇಂದು ದೇಶದ ವಿವಿಧ ನಗರಗಳಲ್ಲಿ ಪ್ರದರ್ಶನ ಸ್ಥಳಗಳನ್ನು ನಿರ್ಮಿಸಲಾಗುತ್ತಿದೆ. ಇದರ ಅಡಿ, ದೈನಂದಿನ ಭತ್ಯೆಗಳ ಜತೆಗೆ ಉಚಿತ ಮಳಿಗೆಗಳನ್ನು ಸಹ ನೀಡಲಾಗುತ್ತಿದೆ. ಇಂದು ನಮ್ಮ ಯುವಕರು, ನಮ್ಮ ಹೊಸ ಪೀಳಿಗೆ ಮತ್ತು ಹೊಸ ಸ್ಟಾರ್ಟಪ್‌ಗಳು ಕೈಮಗ್ಗ, ಕರಕುಶಲ ಮತ್ತು ನಮ್ಮ ಗುಡಿ ಕೈಗಾರಿಕೆಯಿಂದ ತಯಾರಿಸಿದ ಉತ್ಪನ್ನಗಳಿಗೆ ಅದರ ಮಾರುಕಟ್ಟೆಗೆ ಹಲವಾರು ಹೊಸ ಕಾರ್ಯತಂತ್ರಗಳು, ಹೊಸ ಮಾದರಿಗಳು, ಹೊಸ ವ್ಯವಸ್ಥೆಗಳೊಂದಿಗೆ ಬರುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಹಾಗಾಗಿ ಅದರ ಭವಿಷ್ಯದಲ್ಲಿ ಹೊಸ ಆಸಕ್ತಿಯನ್ನು ನಾನು ನೋಡುತ್ತಿದ್ದೇನೆ.

ಇಂದು ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ, ಪ್ರತಿ ಜಿಲ್ಲೆಯಲ್ಲೂ ವಿಶೇಷ ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತಿದೆ. ಇಂತಹ ಉತ್ಪನ್ನಗಳ ಮಾರಾಟಕ್ಕಾಗಿ ದೇಶದ ರೈಲು ನಿಲ್ದಾಣಗಳಲ್ಲಿ ವಿಶೇಷ ಮಳಿಗೆಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಪ್ರತಿ ರಾಜ್ಯ ಮತ್ತು ಜಿಲ್ಲೆಗಳಿಂದ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ, ಸರ್ಕಾರವು ಏಕ್ತಾ ಮಾಲ್ ನಿರ್ಮಿಸುತ್ತಿದೆ. ಏಕ್ತಾ ಮಾಲ್ ಒಂದೇ ಸೂರಿನಡಿ ಆ ರಾಜ್ಯದ ಕರಕುಶಲ ಉತ್ಪನ್ನಗಳನ್ನು ಹೊಂದಿರುತ್ತದೆ. ಇದರಿಂದ ಕೈಮಗ್ಗ ಕ್ಷೇತ್ರಕ್ಕೆ ಸಂಬಂಧಿಸಿದ ನಮ್ಮ ಸಹೋದರ ಸಹೋದರಿಯರಿಗೂ ಹೆಚ್ಚಿನ ಅನುಕೂಲವಾಗಲಿದೆ. ನಿಮ್ಮಲ್ಲಿ ಯಾರಿಗಾದರೂ ಗುಜರಾತ್‌ನಲ್ಲಿ ಏಕತಾ ಪ್ರತಿಮೆ ನೋಡುವ ಅವಕಾಶವಿದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಅಲ್ಲಿ ಏಕತಾ ಮಾಲ್ ನಿರ್ಮಿಸಲಾಗಿದೆ. ಭಾರತದ ನೇಕಾರರು ಮತ್ತು ಕುಶಲಕರ್ಮಿಗಳು ತಯಾರಿಸಿದ ದೇಶದ ಮೂಲೆ ಮೂಲೆಯ ಉತ್ಪನ್ನಗಳು ಅಲ್ಲಿ ಲಭ್ಯವಿವೆ. ಆದ್ದರಿಂದ ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರು ಏಕತೆಯನ್ನು ಅನುಭವಿಸುತ್ತಾರೆ. ಅವರು ಬಯಸಿದ ಭಾರತದ ಯಾವುದೇ ಮೂಲೆಗೆ ಪ್ರವೇಶ ಪಡೆಯಬಹುದು. ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಇಂತಹ ಏಕತಾ ಮಾಲ್‌ಗಳನ್ನು ಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ವಿಷಯಗಳು ನಮಗೆ ಎಷ್ಟು ಮುಖ್ಯ? ನಾನು ಪ್ರಧಾನಿಯಾಗಿ ವಿದೇಶಕ್ಕೆ ಹೋದಾಗ ಜಗತ್ತಿನ ಗಣ್ಯರಿಗೆ ಉಡುಗೊರೆ ತೆಗೆದುಕೊಂಡು ಹೋಗಬೇಕು. ವಿಶ್ವದಾದ್ಯಂತ ಇರುವ ಜನರಿಗೆ ನಾನು ಪ್ರಸ್ತುತಪಡಿಸುತ್ತಿರುವ ಪ್ರತಿಯೊಂದು ಉಡುಗೊರೆಯನ್ನು ನೀವೇ ಎಲ್ಲಾ ಸ್ನೇಹಿತರೂ ಮಾಡುವಂತಹದ್ದಾಗಿದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. ಅವರು ಸಂತೋಷಪಡುತ್ತಾರೆ ಮಾತ್ರವಲ್ಲದೆ, ಅಂತಹ ಹಳ್ಳಿಯ ಜನರು ಇದನ್ನು ಮಾಡಿದ್ದಾರೆ ಎಂದು ನಾನು ಅವರಿಗೆ ಹೇಳಿದಾಗ, ಅವರು ತುಂಬಾ ಪ್ರಭಾವಿತರಾಗುತ್ತಾರೆ.

 

ಸ್ನೇಹಿತರೆ,

ಕೈಮಗ್ಗ ಕ್ಷೇತ್ರದ ನಮ್ಮ ಸಹೋದರ ಸಹೋದರಿಯರಿಗೆ ಡಿಜಿಟಲ್ ಇಂಡಿಯಾದ ಪ್ರಯೋಜನಗಳು ಸಿಗುವಂತೆ ಮಾಡಲು ಸತತ ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರವು ಉತ್ಪನ್ನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಪೋರ್ಟಲ್ ರಚಿಸಿದೆ ಎಂದು ನಿಮಗೆ ಈಗಾಗಲೇ ತಿಳಿದಿದೆ. ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ ಅಂದರೆ ಜಿಇಎಂ. ಜಿಇಎಂನಲ್ಲಿ ಚಿಕ್ಕ ಕುಶಲಕರ್ಮಿಗಳು, ಕುಶಲಕರ್ಮಿಗಳು, ನೇಕಾರರು ಕೂಡ ತಮ್ಮ ಸರಕುಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದು. ಹೆಚ್ಚಿನ ಸಂಖ್ಯೆಯ ನೇಕಾರರು ಇದರ ಲಾಭ ಪಡೆದಿದ್ದಾರೆ. ಇಂದು ಕೈಮಗ್ಗ ಮತ್ತು ಕರಕುಶಲತೆಗೆ ಸಂಬಂಧಿಸಿದ ಸುಮಾರು 2 ಲಕ್ಷ ಸಂಸ್ಥೆಗಳು ಜಿಇಎಂ ಪೋರ್ಟಲ್‌ಗೆ ಸಂಪರ್ಕ ಹೊಂದಿವೆ.

 

ಸ್ನೇಹಿತರೆ,

ನಮ್ಮ ಸರ್ಕಾರವು ತನ್ನ ನೇಕಾರರಿಗೆ ವಿಶ್ವದ ಅತಿದೊಡ್ಡ ಮಾರುಕಟ್ಟೆ ಒದಗಿಸಲು ಸ್ಪಷ್ಟ ಕಾರ್ಯತಂತ್ರದೊಂದಿಗೆ ಕೆಲಸ ಮಾಡುತ್ತಿದೆ. ಇಂದು ವಿಶ್ವದ ಪ್ರಮುಖ ಕಂಪನಿಗಳು ಭಾರತದ ಎಂಎಸ್‌ಎಂಇಗಳು, ನೇಕಾರರು, ಕುಶಲಕರ್ಮಿಗಳು ಮತ್ತು ರೈತರ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಮುಂದೆ ಬರುತ್ತಿವೆ. ಅಂತಹ ಹಲವು ಕಂಪನಿಗಳ ನಾಯಕತ್ವದೊಂದಿಗೆ ನೇರವಾಗಿ ಚರ್ಚೆ ನಡೆಸಿದ್ದೇನೆ. ಅವರು ವಿಶ್ವದ ದೊಡ್ಡ ಅಂಗಡಿಗಳು, ಚಿಲ್ಲರೆ ಪೂರೈಕೆ ಸರಪಳಿಗಳು, ದೊಡ್ಡ ಮಾಲ್‌ಗಳು ಮತ್ತು ಅಂಗಡಿಗಳನ್ನು ಹೊಂದಿದ್ದಾರೆ. ಆನ್‌ಲೈನ್ ಜಗತ್ತಿನಲ್ಲಿಯೂ ಅವರ ಸಾಮರ್ಥ್ಯವು ದೊಡ್ಡದಾಗಿದೆ. ಅಂತಹ ಕಂಪನಿಗಳು ಈಗ ಭಾರತದ ಸ್ಥಳೀಯ ಉತ್ಪನ್ನಗಳನ್ನು ಪ್ರಪಂಚದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲು ನಿರ್ಧರಿಸಿವೆ. ಈಗ ಶ್ರೀ ಅನ್ನ ಎಂದು ಕರೆಯಲ್ಪಡುವ ನಮ್ಮ ಸಿರಿಧಾನ್ಯ, ಆಹಾರ ಧಾನ್ಯಗಳು ಅಥವಾ ನಮ್ಮ ಕೈಮಗ್ಗ ಉತ್ಪನ್ನಗಳನ್ನು ಈ ದೊಡ್ಡ ಅಂತಾರಾಷ್ಟ್ರೀಯ ಕಂಪನಿಗಳು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯುತ್ತವೆ. ಅಂದರೆ ಉತ್ಪನ್ನವು ಭಾರತದಿಂದ ಬರುತ್ತದೆ; ಇದನ್ನು ಭಾರತದಲ್ಲಿ ತಯಾರಿಸಲಾಗುವುದು, ಇದು ಭಾರತದ ಜನರ ಬೆವರಿನ ಪರಿಮಳವನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಪೂರೈಕೆ ಸರಪಳಿಗಳು ಈ ಬಹುರಾಷ್ಟ್ರೀಯ ಕಂಪನಿಗಳದ್ದಾಗಿರುತ್ತದೆ. ನಮ್ಮ ದೇಶದ ಈ ವಲಯಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ.

 

ಸ್ನೇಹಿತರೆ,

ಸರ್ಕಾರದ ಈ ಪ್ರಯತ್ನಗಳ ನಡುವೆ ಇಂದು ನಾನು ಜವಳಿ ಉದ್ಯಮ ಮತ್ತು ಫ್ಯಾಷನ್ ಲೋಕದ ಸ್ನೇಹಿತರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಇಂದು ನಾವು ವಿಶ್ವದ ಅಗ್ರ-3 ಆರ್ಥಿಕತೆಗಳಲ್ಲಿ ಒಂದಾಗಲು ಕ್ರಮಗಳನ್ನು ಕೈಗೊಂಡಿರುವುದರಿಂದ, ನಾವು ನಮ್ಮ ಆಲೋಚನೆ ಮತ್ತು ಕೆಲಸದ ವ್ಯಾಪ್ತಿಯನ್ನು ವಿಸ್ತರಿಸಬೇಕಾಗಿದೆ. ನಮ್ಮ ಕೈಮಗ್ಗ, ನಮ್ಮ ಖಾದಿ ಮತ್ತು ನಮ್ಮ ಜವಳಿ ವಲಯವನ್ನು ವಿಶ್ವ ಚಾಂಪಿಯನ್‌ಗಳನ್ನಾಗಿ ಮಾಡಲು ನಾವು ಬಯಸುತ್ತೇವೆ. ಆದರೆ ಅದಕ್ಕೆ ಎಲ್ಲರ ಶ್ರಮ ಅಗತ್ಯ. ಅದು ಕೆಲಸಗಾರನಾಗಿರಲಿ, ನೇಕಾರನಾಗಿರಲಿ, ವಿನ್ಯಾಸಕಾರನಾಗಿರಲಿ ಅಥವಾ ಉದ್ಯಮವಾಗಿರಲಿ, ಪ್ರತಿಯೊಬ್ಬರೂ ಸಮರ್ಪಿತ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ನೀವು ಭಾರತದ ನೇಕಾರರ ಕೌಶಲ್ಯವನ್ನು ಅಳತೆಯೊಂದಿಗೆ ಜೋಡಿಸುತ್ತೀರಿ. ನೀವು ಭಾರತದ ನೇಕಾರರ ಕೌಶಲ್ಯವನ್ನು ತಂತ್ರಜ್ಞಾನದೊಂದಿಗೆ ಜೋಡಿಸುತ್ತೀರಿ. ಇಂದು ನಾವು ಭಾರತದಲ್ಲಿ ನವ ಮಧ್ಯಮ ವರ್ಗದ ಉದಯವನ್ನು ನೋಡುತ್ತಿದ್ದೇವೆ. ಪ್ರತಿ ಉತ್ಪನ್ನಕ್ಕೂ ಭಾರತದಲ್ಲಿ ಬೃಹತ್ ಯುವ ಗ್ರಾಹಕ ವರ್ಗವನ್ನು ಸೃಷ್ಟಿಸಲಾಗುತ್ತಿದೆ. ಇದು ಖಂಡಿತವಾಗಿಯೂ ಭಾರತದ ಜವಳಿ ಕಂಪನಿಗಳಿಗೆ ಒಂದು ದೊಡ್ಡ ಅವಕಾಶವಾಗಿದೆ. ಆದ್ದರಿಂದ, ಸ್ಥಳೀಯ ಪೂರೈಕೆ ಸರಪಳಿಯನ್ನು ಬಲಪಡಿಸುವುದು ಮತ್ತು ಅದರಲ್ಲಿ ಹೂಡಿಕೆ ಮಾಡುವುದು ಈ ಕಂಪನಿಗಳ ಜವಾಬ್ದಾರಿಯಾಗಿದೆ. ಹೊರಗಿನಿಂದ ಸಿದ್ಧ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಮನಸ್ಥಿತಿಯನ್ನು ನಾವು ಬೆಂಬಲಿಸಬಾರದು. ಇಂದು ಮಹಾತ್ಮ ಗಾಂಧೀಜಿಯವರ ಕಾರ್ಯಗಳನ್ನು ಸ್ಮರಿಸುತ್ತಿರುವ ನಾವು ಮತ್ತೊಮ್ಮೆ ನಮ್ಮ ಅಗತ್ಯಗಳಿಗಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಿಧಾನವನ್ನು ಆಶ್ರಯಿಸಬಾರದು ಎಂಬ ಸಂಕಲ್ಪ ಮಾಡಬೇಕಾಗಿದೆ. ಈ ವಿಧಾನ ಸರಿಯಲ್ಲ. ಈ ವಲಯದ ದಿಗ್ಗಜರು ಇದು ಇಷ್ಟು ಬೇಗ ಹೇಗೆ ಸಂಭವಿಸುತ್ತದೆ ಅಥವಾ ಸ್ಥಳೀಯ ಪೂರೈಕೆ ಸರಪಳಿಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸುವುದು ಹೇಗೆ ಎಂಬುದಕ್ಕೆ ಮನ್ನಿಸುವುದಿಲ್ಲ. ಭವಿಷ್ಯದಲ್ಲಿ ನಾವು ಲಾಭ ಪಡೆಯಲು ಬಯಸಿದರೆ, ನಾವು ಇಂದು ಸ್ಥಳೀಯ ಪೂರೈಕೆ ಸರಪಳಿಯಲ್ಲಿ ಹೂಡಿಕೆ ಮಾಡಬೇಕು. ಅಭಿವೃದ್ಧಿ ಹೊಂದಿದ ಭಾರತ ಕಟ್ಟಲು ಇದು ಮಾರ್ಗವಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಕನಸು ನನಸಾಗಿಸಲು, 5 ಟ್ರಿಲಿಯನ್ ಆರ್ಥಿಕತೆಯ ಕನಸು ನನಸಾಗಿಸಲು ಮತ್ತು ಭಾರತವನ್ನು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಸೇರಿಸುವ ಕನಸು ನನಸಾಗಿಸಲು ಇದು ಮಾರ್ಗವಾಗಿದೆ. ನಾವು ಭಾವನಾತ್ಮಕ ಅಂಶವನ್ನು ನೋಡಿದರೆ, ಈ ಮಾರ್ಗವನ್ನು ಅನುಸರಿಸುವ ಮೂಲಕ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುತ್ತದೆ; ಸ್ವದೇಶಿಯ ಕನಸನ್ನು ನನಸು ಮಾಡಲು ಸಾಧ್ಯವಾಗುತ್ತದೆ.

 

ಸ್ನೇಹಿತರೆ,

ತನ್ನ ಬಗ್ಗೆ ಮತ್ತು ತನ್ನ ದೇಶದ ಬಗ್ಗೆ ಹೆಮ್ಮೆಪಡುವ ಉನ್ನತ ಘನತೆ ಮತ್ತು ಹೆಮ್ಮೆಯ ವ್ಯಕ್ತಿಗೆ ಖಾದಿ ಬಟ್ಟೆಯೇ ಸರಿ ಎಂದು ನಾನು ದೃಢವಾಗಿ ನಂಬುತ್ತೇನೆ. ಆದರೆ ಅದೇ ಸಮಯದಲ್ಲಿ ಸ್ವಾವಲಂಬಿ ಭಾರತದ ಕನಸನ್ನು ಹೆಣೆಯುವವರಿಗೆ, 'ಮೇಕ್ ಇನ್ ಇಂಡಿಯಾ'ಕ್ಕೆ ಒತ್ತು ನೀಡುವವರಿಗೆ ಈ ಖಾದಿ ಕೇವಲ ವಸ್ತ್ರವಲ್ಲ, ಅದೊಂದು ಅಸ್ತ್ರವೂ ಹೌದು.

 

ಸ್ನೇಹಿತರೆ,

ನಾಳೆಯ ನಂತರದ ದಿನ ಆಗಸ್ಟ್ 9. ಇಂದಿನ ದಿನಾಂಕವು ಸ್ವದೇಶಿ ಆಂದೋಲನದೊಂದಿಗೆ ಸಂಬಂಧಿಸಿದೆ. ಆದರೆ ಆಗಸ್ಟ್ 9 ಭಾರತದ ಶ್ರೇಷ್ಠ ಚಳುವಳಿಗಳಲ್ಲಿ ಒಂದಕ್ಕೆ ಸಾಕ್ಷಿಯಾಗಿದೆ. ಆಗಸ್ಟ್ 9ರಂದು ಪೂಜ್ಯ ಬಾಪು ಅವರ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭಿಸಲಾಯಿತು. ಗೌರವಾನ್ವಿತ ಬಾಪು ಬ್ರಿಟಿಷರಿಗೆ ಸ್ಪಷ್ಟವಾಗಿ ಹೇಳಿದ್ದರು - ಭಾರತ ಬಿಟ್ಟು ತೊಲಗಿ. ಇದಾದ ಕೆಲವೇ ದಿನಗಳಲ್ಲಿ ಬ್ರಿಟಿಷರು ಭಾರತವನ್ನು ತೊರೆಯಬೇಕಾದಂತಹ ಜಾಗೃತಿಯ ವಾತಾವರಣ ದೇಶದಲ್ಲಿ ಸೃಷ್ಟಿಯಾಯಿತು. ಇಂದು ಗೌರವಾನ್ವಿತ ಬಾಪು ಅವರ ಆಶೀರ್ವಾದದೊಂದಿಗೆ, ನಾವು ಅದೇ ಇಚ್ಛಾಶಕ್ತಿಯಿಂದ ಮುನ್ನಡೆಯಬೇಕಾಗಿದೆ, ಇದು ಇಂದಿನ ಅಗತ್ಯವೂ ಆಗಿದೆ. ಬ್ರಿಟಿಷರನ್ನು ಓಡಿಸಬಲ್ಲ ಮಂತ್ರವು ಇಲ್ಲಿಂದ ಕೂಡ ಅಂತಹ ಅಂಶಗಳನ್ನು ಓಡಿಸಲು ಕಾರಣವಾಗಬಹುದು. ಇಂದು ನಾವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಕನಸು, ಸಂಕಲ್ಪ ಹೊಂದಿದ್ದೇವೆ. ಆದರೆ, ಈ ನಿರ್ಣಯದ ಮುಂದೆ ಕೆಲವು ಕೆಟ್ಟ ಅಂಶಗಳು ಅಡೆತಡೆಗಳನ್ನು ಸೃಷ್ಟಿಸುತ್ತಿವೆ. ಅದಕ್ಕಾಗಿಯೇ ಇಂದು ಭಾರತವು ಈ ಕೆಟ್ಟ ಅಂಶಗಳನ್ನು ಒಂದೇ ಧ್ವನಿಯಲ್ಲಿ ಹೇಳುತ್ತಿದೆ - ಕ್ವಿಟ್ ಇಂಡಿಯಾ. ಇಂದು ಭಾರತ ಹೇಳುತ್ತಿದೆ - ಭ್ರಷ್ಟಾಚಾರ, ಭಾರತ ಬಿಟ್ಟು ತೊಲಗಿ!. ಇಂದು ಭಾರತ ಹೇಳುತ್ತಿದೆ – ವಂಶ ಪಾರಂಪರ್ಯ ರಾಜಕೀಯ, ಭಾರತ ಬಿಟ್ಟು ತೊಲಗಿ! ಇಂದು ಭಾರತ ಹೇಳುತ್ತಿದೆ - ತುಷ್ಟೀಕರಣ ರಾಜಕಾರಣ, ಭಾರತ ಬಿಟ್ಟು ತೊಲಗಿ! ಭಾರತದಲ್ಲಿನ ಈ ಅನಿಷ್ಟಗಳು ದೇಶಕ್ಕೆ ದೊಡ್ಡ ಅಪಾಯ ತಂದೊಡ್ಡುತ್ತಿವೆ. ದೇಶಕ್ಕೆ ದೊಡ್ಡ ಸವಾಲು ಕೂಡ ಇದೆ. ನಾನು ನಂಬುತ್ತೇನೆ, ನಾವೆಲ್ಲರೂ ನಮ್ಮ ಪ್ರಯತ್ನಗಳಿಂದ ಈ ಅನಿಷ್ಟಗಳನ್ನು ಕೊನೆಗೊಳಿಸುತ್ತೇವೆ ಮತ್ತು ಸೋಲಿಸುತ್ತೇವೆ. ತದನಂತರ ಭಾರತಕ್ಕೆ ಜಯ ದೊರೆಯುತ್ತದೆ, ದೇಶಕ್ಕೆ ಮತ್ತು ಪ್ರತಿ ದೇಶಕ್ಕೆ ವಿಜಯ ಇರುತ್ತದೆ.

 

ಸ್ನೇಹಿತರೆ,

'15ನೇ ಆಗಸ್ಟ್ - ಹರ್ ಘರ್ ತಿರಂಗ'. ದೇಶದಲ್ಲಿ ತ್ರಿವರ್ಣ ಧ್ವಜ ನಿರ್ಮಿಸುವ ಕೆಲಸದಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿರುವ ಸಹೋದರಿಯರನ್ನು ಭೇಟಿ ಮಾಡುವ ಅವಕಾಶ ಇಂದು ನನಗೆ ಸಿಕ್ಕಿದೆ. ಅವರಿಗೆ ನಮಸ್ಕರಿಸಿ ಮಾತನಾಡುವ ಅವಕಾಶವೂ ಸಿಕ್ಕಿತು. ಕಳೆದ ಬಾರಿ ಮತ್ತು ಬರಲಿರುವ ಪ್ರತಿ ವರ್ಷದಂತೆ ನಾವು 'ಹರ್ ಘರ್ ತಿರಂಗ'ವನ್ನು ಮುಂದಕ್ಕೆ ಕೊಂಡೊಯ್ಯಬೇಕು. ಮನೆಯ ಛಾವಣಿಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದಾಗ ಅದು ಹಾರಾಡುತ್ತದೆ. ಅದು ಮನಸ್ಸಿನಲ್ಲಿಯೂ ಮಿನುಗುತ್ತದೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯಗಳನ್ನು ಕೋರುತ್ತೇನೆ. ತುಂಬು ಧನ್ಯವಾದಗಳು!

 

ಹಕ್ಕು ನಿರಾಕರಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರವಾಗಿದೆ. ಅವರು ಮೂಲ ಭಾಷಣವನ್ನು ಹಿಂದಿ ಭಾಷೆಯಲ್ಲಿ ಮಾಡಿದ್ದಾರೆ.

 

 

****

 



(Release ID: 1947073) Visitor Counter : 166