ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾರಾಷ್ಟ್ರದ ಪುಣೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ.


ಪುಣೆ ಮೆಟ್ರೋದ ಪೂರ್ಣಗೊಂಡ ವಿಭಾಗಗಳ ಉದ್ಘಾಟನೆ, ಮೆಟ್ರೋ ರೈಲಿಗೆ ಹಸಿರು ನಿಶಾನೆ

ಪಿಎಂಎವೈ ಅಡಿ ಶಂಕುಸ್ಥಾಪನೆ, ನಿರ್ಮಾಣಗೊಂಡ ಮನೆಗಳ ಹಸ್ತಾಂತರ

ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕ ಉದ್ಘಾಟನೆ

“ದೇಶದ ಆರ್ಥಿಕತೆಗೆ ವೇಗ ನೀಡುವ ನಿಟ್ಟಿನಲ್ಲಿ ಉಜ್ವಲ ನಗರವಾಗಿ ಹೊರ ಹೊಮ್ಮಿದ ಪುಣೆ ಮತ್ತು ಇಡೀ ದೇಶದ ಯುವ ಜನರ ನಿರೀಕ್ಷೆಗಳನ್ನು ಸಾಕಾರಗೊಳಿಸಿದ ನಗರ”

“ನಮ್ಮ ಸರ್ಕಾರ ನಾಗರಿಕರ ಜೀವನಮಟ್ಟ ಸುಧಾರಿಸಲು ಬದ್ಧ”

“ಆಧುನಿಕ ಭಾರತದ ನಗರಗಳಿಗೆ ಮೆಟ್ರೋ ಹೊಸ ಜೀವನಾಡಿ”

“ಮಹಾರಾಷ್ಟ್ರದ ಕೈಗಾರಿಕಾಭಿವೃದ್ದಿಯು ಸ್ವಾತಂತ್ರೋತ್ತರ ಭಾರತದ ಕೈಗಾರಿಕಾಭಿವೃದ್ಧಿಗೆ ದಾರಿ ಮಾಟಿಕೊಟ್ಟಿದೆ”

“ಅದು ಬಡವರು ಅಥವಾ ಮಧ್ಯಮವರ್ಗದವರಿರಬಹುದು, ಪ್ರತಿಯೊಂದು ಕನಸನ್ನು ಈಡೇರಿಸುವುದು ಮೋದಿಯವರ ವಾಗ್ದಾನ”

Posted On: 01 AUG 2023 3:11PM by PIB Bengaluru

ಪುಣೆಯ ಮೆಟ್ರೋದಲ್ಲಿ ಪೂರ್ಣಗೊಂಡ ವಿಭಾಗಗಳಲ್ಲಿ ಮೆಟ್ರೋ ರೈಲಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿದರು. ಪಿಂಪ್ರಿ ಚಿನ್ ಚನ್ ವಾಡ್ ನಗರ ಪಾಲಿಕೆ [ಪಿಸಿಎಂಸಿ] ವ್ಯಾಪ್ತಿಯಡಿ 1280 ಮನೆಗಳನ್ನು ಅವರು ಹಸ್ತಾಂತರಿಸಿದರು ಮತ್ತು ಪುಣೆ ನಗರ ಪಾಲಿಕೆಯಿಂದ ಪಿಎಂಎವೈ ಯೋಜನೆಯಡಿ 2650ಕ್ಕೂ ಹೆಚ್ಚು ಮನೆಗಳನ್ನು ಫಲಾನುಭವಿಗಳಿಗಾಗಿ ನಿರ್ಮಿಸಲಾಗಿದೆ. ಪಿಸಿಎಂಸಿಯಿಂದ ಸುಮಾರು 1190 ಪಿಎಂಎವೈ ಮನೆಗಳ ನಿರ್ಮಾಣಕ್ಕೆ ಅವರು ಶಿಲಾನ್ಯಾಸ ನೆರವೇರಿಸಿದರು. ಪುಣೆ ಮೆಟ್ರೋಪಾಲಿಟಿನ್ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ 6400ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಪಿಸಿಎಂಸಿ ಅಭಿವೃದ್ಧಿಯಿಂದ 300 ಕೋಟಿ ರೂಪಾಯಿ ವೆಚ್ಚದಲ್ಲಿ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು.

ಬಳಿಕ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಆಗಸ್ಟ್ ತಿಂಗಳು ಕ್ರಾಂತಿ ಮತ್ತು ಸಂಭ್ರಮಗಳ ಮಾಸ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪುಣೆ ನಗರದ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಬಾಲಗಂಗಾಧರ ತಿಲಕರು ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರನ್ನು ಈ ನಗರ ದೇಶಕ್ಕೆ ನೀಡಿದೆ. ಇಂದು ಸಮಾಜ ಸುಧಾರಕ ಅನ್ನಾ ಬಾವು ಸಾಥೆ ಅವರ ಜನ್ಮ ದಿನ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳಿಂದ ಅವರು ಪ್ರೇರಿತರಾಗಿದ್ದರು. ಇಂದಿಗೂ ಅನೇಕ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರು ಅವರ ಸಾಹಿತ್ಯ ಕೃತಿಗಳ ಬಗ್ಗೆ ಸಂಶೋಧನೆ ನಡೆಸುತ್ತಾರೆ ಮತ್ತು ಅವರ ಕೆಲಸ ಹಾಗೂ ಆದರ್ಶ ಎಲ್ಲರಿಗೂ ಸ್ಫೂರ್ತಿಯ ಮೂಲವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.  

“ದೇಶದ ಆರ್ಥಿಕತೆಗೆ ವೇಗ ನೀಡುವ ನಿಟ್ಟಿನಲ್ಲಿ ಉಜ್ವಲ ನಗರವಾಗಿ ಪುಣೆ ಹೊರ ಹೊಮ್ಮಿದೆ ಮತ್ತು ಇಡೀ ದೇಶದ ಜನರ ನಿರೀಕ್ಷೆಗಳನ್ನು ಸಾಕಾರಗೊಳಿಸಿದ ನಗರ. ಇಂದು 15 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳು ಈ ಆಶಯವನ್ನು ಇನ್ನಷ್ಟು ಬಲಗೊಳಿಸುತ್ತವೆ” ಎಂದು ಪ್ರಧಾನಮಂತ್ರಿ ಹೇಳಿದರು.

ನಗರ ಮಧ್ಯಮವರ್ಗದವರ ಗುಣಮಟ್ಟದ ಜೀವನದ ಬಗ್ಗೆ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಐದು ವರ್ಷಗಳ ಹಿಂದೆ ಮೆಟ್ರೋ ಕಾಮಗಾರಿ ಆರಂಭವಾದದ್ದನ್ನು ಸ್ಮರಿಸಿಕೊಂಡ ಅವರು, ಈ ಅವಧಿಯಲ್ಲಿ ಈಗಾಗಲೇ 24 ಕಿಲೋಮೀಟರ್ ಮೆಟ್ರೋ ಸಂಪರ್ಕ ಕಾರ್ಯಾರಂಭವಾಗಿದೆ ಎಂದರು.

ಪ್ರತಿನಗರದಲ್ಲಿ ವಾಸಿಸುವ ಜನರ ಜೀವನಮಟ್ಟವನ್ನು ಸುಧಾರಿಸಲು ಸಾರ್ವಜನಿಕ ಸಾರಿಗೆ ಮೂಲ ಸೌಕರ್ಯವನ್ನು ಸುಧಾರಿಸುವ ಅಗತ್ಯವನ್ನು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಮೆಟ್ರೋ ಸಂಪರ್ಕ ಜಾಲ ವಿಸ್ತರಣೆಯಾಗಿದ್ದು, ಹೊಸ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ ಮತ್ತು ಸಂಚಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಒತ್ತು ನೀಡಲಾಗುತ್ತಿದೆ ಎಂದರು.

2014ಕ್ಕೂ ಮುನ್ನ ದೇಶದಲ್ಲಿ ಕೇವಲ 250 ಕಿಲೋಮೀಟರ್ ಮೆಟ್ರೋ ರೈಲು ಸಂಪರ್ಕ ಜಾಲವಿತ್ತು ಮತ್ತು ಬಹುತೇಕ ಮೆಟ್ರೋ ರೈಲು ವ್ಯವಸ್ಥೆ ದೆಹಲಿಗೆ ಮಾತ್ರ ಸೀಮಿತವಾಗಿತ್ತು. ಇದೀಗ 800 ಕಿಲೋಮೀಟರ್ ಗೂ ಅಧಿಕ ಮೆಟ್ರೋ ಸಂಪರ್ಕ ಜಾಲ ನಿರ್ಮಾಣವಾಗಿದ್ದು, 1000 ಕಿಲೋಮೀಟರ್ ಮೆಟ್ರೋ ರೈಲು ಮಾರ್ಗಗಳ ನಿರ್ಮಾಣ ಪ್ರಗತಿಯಲ್ಲಿದೆ. 2014ಕ್ಕೂ ಮುನ್ನ ಭಾರತದಲ್ಲಿ ಮೆಟ್ರೋ ರೈಲು ಕೇವಲ 5 ನಗರಗಳಿಗೆ ಸೀಮಿತವಾಗಿತ್ತು, ಇಂದು 20 ನಗರಗಳಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದ್ದು, ಪುಣೆ, ನಾಗ್ಪುರ ಮತ್ತು ಮುಂಬೈ ಮೆಟ್ರೋ ರೈಲು ಸಂಪರ್ಕ ಜಾಲ ವಿಸ್ತರಣೆಯಾಗುತ್ತಿದೆ. “ಆಧುನಿಕ ಭಾರತದ ನಗರಗಳಿಗೆ ಮೆಟ್ರೋ ಹೊಸ ಜೀವನಾಡಿಯಾಗಿದೆ” ಎಂದರು. ಪುಣೆಯಂತಹ ನಗರಗಳಿಗೆ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಮೆಟ್ರೋ ವಿಸ್ತರಣೆಯ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

ನಗರ ಪ್ರದೇಶಗಳಲ್ಲಿ ಗುಣಮಟ್ಟದ ಜೀವನ ಸುಧಾರಣೆಯಲ್ಲಿ ಸ್ವಚ್ಛತಾ ಅಭಿಯಾನದ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀ ಮೋದಿಯವರು ಹೇಳಿದರು. ಸ್ವಚ್ಛ ಭಾರತ ಅಭಿಯಾನದಿಂದ ಶೌಚಾಲಯ ನಿರ್ಮಾಣವಷ್ಟೇ ಅಲ್ಲದೇ ತ್ಯಾಜ್ಯ ನಿರ್ವಹಣೆಯೂ ಸಹ ಕೇಂದ್ರೀಕೃತ ವಲಯವಾಗಿದೆ. ಕಸದ ರಾಶಿಗಳನ್ನು ಅಭಿಯಾನದ ಮಾದರಿಯಲ್ಲಿ ತೆರವುಗೊಳಿಸಲಾಗುತ್ತಿದೆ. ಪಿಂಪ್ರಿ ಚುನ್ ಚನ್ ವಾಡ್ ನಗರ ಪಾಲಿಕೆ [ಪಿಸಿಎಂಸಿ] ವ್ಯಾಪ್ತಿಯಲ್ಲಿ ತ್ಯಾಜ್ಯದಿಂದ ಇಂಧನ ಉತ್ಪಾದಿಸುವುದರಿಂದ ಆಗುವ ಲಾಭಗಳ ಕುರಿತು ಪ್ರಧಾನಮಂತ್ರಿಯರು ವಿವರಿಸಿದರು.  

“ಮಹಾರಾಷ್ಟ್ರದ ಕೈಗಾರಿಕಾಭಿವೃದ್ದಿಯು ಸ್ವಾತಂತ್ರೋತ್ತರದಿಂದ ಈ ವರೆಗಿನ ಭಾರತದ ಕೈಗಾರಿಕಾಭಿವೃದ್ಧಿಗೆ ದಾರಿ ಮಾಟಿಕೊಟ್ಟಿದೆ” ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ರಾಜ್ಯದಲ್ಲಿ ಮತ್ತಷ್ಟು ಕೈಗಾರಿಕಾಭಿವೃದ್ಧಿ ಕುರಿತು ಬೆಳಕು ಚೆಲ್ಲಿದ ಅವರು ಮಹಾರಾಷ್ಟ್ರ ರಾಜ್ಯಕ್ಕೆ ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗಿದೆ. ಹೊಸ ಎಕ್ಸ್ ಪ್ರೆಸ್ ಹೆದ್ದಾರಿಗಳು, ರೈಲ್ವೆ ಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳನ್ನು ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಉದಾಹರಣೆ ನೀಡಿದರು. 2014 ಕ್ಕೆ ಹೋಲಿಸಿದರೆ ರೈಲ್ವೆ ಮಾರ್ಗ 12 ಪಟ್ಟು ವಿಸ್ತರಣೆಯಾಗಿದೆ. ಮಹಾರಾಷ್ಟ್ರದ ಹಲವಾರು ನಗರಗಳು ನೆರೆ ರಾಜ್ಯಗಳ ಆರ್ಥಿಕ ತಾಣಗಳ ಜೊತೆ ಸಂಪರ್ಕ ಹೊಂದಿವೆ. ಮುಂಬೈ – ಅಹಮದಾಬಾದ್ ಹೈಸ್ಪೀಡ್ ರೈಲು ಮಹಾರಾಷ್ಟ್ರ ಮತ್ತು ಗುಜರಾತ್ ಗಳಿಗೆ ಅನುಕೂಲವಾಗಿದ್ದು, ದೆಹಲಿ – ಮುಂಬೈ ಆರ್ಥಿಕ ಕಾರಿಡಾರ್ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಹಾಗೂ ಇತರೆ ಉತ್ತರ ಭಾರತಕ್ಕೆ ಅನುಕೂಲವಾಗಿದೆ. ರಾಷ್ಟ್ರೀಯ ಸರಕು ಸಾಗಣೆ ಕಾರಿಡಾರ್, ಇದು ಮಹಾರಾಷ್ಟ್ರ ಮತ್ತು ಉತ್ತರ ಭಾರತದ ರೈಲು ಸಂಪರ್ಕವನ್ನು ಪರಿವರ್ತಿಸುತ್ತದೆ. ಕೈಗಾರಿಕೆಗಳು, ತೈಲ ಮತ್ತು ಅನಿಲ ಕೊಳವೆ ಮಾರ್ಗಗಳು, ಔರಂಗಾಬಾದ್ ಕೈಗಾರಿಕಾ ನಗರ, ನವಿ ಮುಂಬೈ ವಿಮಾನ ನಿಲ್ದಾಣ, ಶೆಂದ್ರ
 ಬಿಡ್ ಕಿನ್ ಕೈಗಾರಿಕಾ ಪಾರ್ಕ್ ಗಳಿಗೆ ಅನುಕೂಲವಾಗುವ, ಛತ್ತೀಸ್ ಗಢ, ತೆಲಂಗಾಣ ಇತರೆ ರಾಜ್ಯಗಳೊಂದಿಗೆ ಸಂಪರ್ಕ ಹೊಂದುವ ಜಾಲ ಇದಾಗಿದೆ. ಇಂತಹ ಯೋಜನೆಗಳು ಮಹಾರಾಷ್ಟ್ರದ ಆರ್ಥಿಕತೆಗೆ ಹೊಸ ಶಕ್ತಿ ತುಂಬುವ ಸಾಮರ್ಥ್ಯ ಹೊಂದಿವೆ ಎಂದು ಅವರು ಹೇಳಿದರು.

ರಾಜ್ಯಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಎಂಬ ಮಂತ್ರದೊಂದಿಗೆ ಸರ್ಕಾರ ಮುನ್ನಡೆಯುತ್ತಿದೆ. “ಮಹಾರಾಷ್ಟ್ರ ಅಭಿವೃದ್ಧಿ ಹೊಂದಿದರೆ ಭಾರತ ಅಭಿವೃದ್ಧಿಯಾಗುತ್ತದೆ, ಭಾರತ ಅಭಿವೃದ್ಧಿಯಾದರೆ ಮಹಾರಾಷ್ಟ್ರವು ಅಭಿವೃದ್ಧಿಯ ಫಲವನ್ನು ಪಡೆಯುತ್ತದೆ” ಎಂದರು. ಭಾರತ ನಾವೀನ್ಯತೆ ಮತ್ತು ನವೋದ್ಯಮಗಳ ತಾಣವಾಗಿ ಬೆಳವಣಿಗೆಯಾಗುತ್ತಿರುವ ಕುರಿತು ಪ್ರಧಾನಮಂತ್ರಿಯವರು ಮಾಹಿತಿ ನೀಡಿ, 9 ವರ್ಷಗಳ ಹಿಂದೆ ಕೆಲವು ನೂರರ ಸಂಖ್ಯೆಯಲ್ಲಿದ್ದ ನವೋದ್ಯಮಗಳ (startups)ಪ್ರಮಾಣ 1 ಲಕ್ಷದ ಗಡಿ ದಾಟಿದೆ. ಈ ಯಶಸ್ಸಿನಲ್ಲಿ ಡಿಜಿಟಲ್ ಮೂಲ ಸೌಕರ್ಯದ ವಿಸ್ತರಣೆಗೆ ಮನ್ನಣೆ ನೀಡಲಾಗಿದೆ ಮತ್ತು ಭಾರತದ ಡಿಜಿಟಲ್ ಮೂಲ ಸೌಕರ್ಯದ ಅಡಿಪಾಯದಲ್ಲಿ ಪುಣೆಯ ಪಾತ್ರವನ್ನು ಶ್ಲಾಘಿಸಿದರು. “ಸುಲಭ ದರದ ಇಂಟರ್ನೆಟ್, ಕೈಗೆಟುಕುವ ದೂರವಾಣಿಗಳು ಮತ್ತು ಪ್ರತಿಯೊಂದು ಹಳ್ಳಿಗಳನ್ನು ಇಂಟರ್ನೆಟ್ ಸೌಲಭ್ಯದೊಂದಿಗೆ ಬಲಗೊಳಿಸಲಾಗಿದೆ. 5ಜಿ ಸೇವೆಗಳನ್ನು ವೇಗವಾಗಿ ಬಿಡುಗಡೆಮಾಡುವ ದೇಶಗಳಲ್ಲಿ ಭಾರತವೂ ಸೇರಿದೆ” ಎಂದರು. ಹಣಕಾಸು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಕೃಷಿ ತಂತ್ರಜ್ಞಾನದಲ್ಲಿ ಯುವ ಸಮೂಹ ಮಾಡಿರುವ ಪ್ರಗತಿಯು ಪುಣೆಗೆ ಪ್ರಯೋಜನ ನೀಡುತ್ತಿದೆ ಎಂದು ಅವರು ಹೇಳಿದರು.

ಕರ್ನಾಟಕ ಮತ್ತು ಬೆಂಗಳೂರಿನ ರಾಜಕೀಯ ಸ್ವಾರ್ಥದ ಬಗ್ಗೆ ಪ್ರಧಾನಮಂತ್ರಿಯವರು ಕಳವಳ ವ್ಯಕ್ತಪಡಿಸಿದರು ಮತ್ತು ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಅಭಿವೃದ್ಧಿ ಕುಂಠಿತಗೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

“ನೀತಿ, ನಿಷ್ಟೆ ಮತ್ತು ನಿಯಮಗಳು ದೇಶವನ್ನು [ನೀತಿ, ನಿಷ್ಟ ಮತ್ತು ನಿಯಮ್] ಮುಂದಕ್ಕೆ ಕೊಂಡೊಯ್ಯುಲಿದ್ದು, ಇವು ಸಮಾನವಾಗಿ ಮಹತ್ವ ಪಡೆಯುತ್ತವೆ” ಎಂದು ಶ್ರೀ ಮೋದಿಯವರು ಹೇಳಿದರು. 2014 ಕ್ಕೂ ಮುನ್ನ 10 ವರ್ಷಗಳಲ್ಲಿ ಎರಡು ಯೋಜನೆಗಳಲ್ಲಿ ಕೇವಲ 8 ಲಕ್ಷ ಮನೆಗಳನ್ನು ನಿರ್ಮಿಸಲಾಗಿತ್ತು. ಮಹಾರಾಷ್ಟ್ರದಲ್ಲಿ 50 ಸಾವಿರ ಸೇರಿದಂತೆ 2 ಲಕ್ಷಕ್ಕೂ ಅಧಿಕ ಮನೆಗಳನ್ನು ಕಳಪೆ ಗುಣಮಟ್ಟದ ಕಾರಣ ಫಲಾನುಭವಿಗಳು ತಿರಸ್ಕರಿಸಿದ್ದಾರೆ ಎಂದು ಮಾಹಿತಿ ನೀಡಿದರು.

2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ನೀತಿಯಲ್ಲಿ ಬದಲಾವಣೆ ಮಾಡಲಾಯಿತು ಮತ್ತು ಘನ ಉದ್ದೇಶದಿಂದ ಸರ್ಕಾರ ತನ್ನ ಕೆಲಸ ಆರಂಭಿಸಿತು. ಕಳೆದ 9 ವರ್ಷಗಳಲ್ಲಿ 4 ಕೋಟಿಗೂ ಅಧಿಕ ಪಕ್ಕಾ ಮನೆಗಳನ್ನು ಹಳ್ಳಿಗಳಲ್ಲಿ ಮತ್ತು 75 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಗರಗಳಲ್ಲಿ ನಿರ್ಮಿಸಲಾಗಿದೆ. ನಿರ್ಮಾಣದಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟದಲ್ಲಿ ಸುಧಾರಣೆ ತರಲಾಗಿದೆ ಎಂದು ಬೆಳಕು ಚೆಲ್ಲಿದರು. ದೇಶದಲ್ಲಿ ಮೊದಲ ಬಾರಿಗೆ, ಬಹುತೇಕ ಮನೆಗಳು ಮಹಿಳೆಯರ ಹೆಸರಿನಲ್ಲಿ ನೋಂದಣಿಯಾಗಿವೆ. ಈ ಮನೆಗಳ ನಿರ್ಮಾಣ ವೆಚ್ಚ ಹಲವಾರು ಲಕ್ಷಗಳಾಗಿದ್ದು, ಕೋಟ್ಯಂತರ ಮಹಿಳೆಯರು ಕಳೆದ 9 ವರ್ಷಗಳಲ್ಲಿ “ಲಕ್ಷಾಧಿಪತಿ”ಗಳಾಗಿದ್ದಾರೆ. ಹೊಸ ಮನೆಗಳನ್ನು ಪಡೆದುಕೊಂಡ ಎಲ್ಲರಿಗೂ ಪ್ರಧಾನಮಂತ್ರಿಯವರು ಇದೇ ಸಂದರ್ಭದಲ್ಲಿ ಶುಭಾಶಯಗಳು ಮತ್ತು ಅಭಿನಂದನೆ ಸಲ್ಲಿಸಿದರು.

“ಅದು ಬಡವರು ಅಥವಾ ಮಧ್ಯಮವರ್ಗದವರಿರಬಹುದು, ಪ್ರತಿಯೊಂದು ಕನಸನ್ನು ಈಡೇರಿಸುವುದು ಮೋದಿಯವರು ನೀಡುವ ವಾಗ್ದಾನವಾಗಿದೆ” ಎಂದು ಹೇಳಿದರು. ಒಂದು ಕನಸಿನ ಸಾಕ್ಷಾತ್ಕಾರ ಬಹುಸಂಕಲ್ಪದ ಆರಂಭವನ್ನು ನೀಡುತ್ತದೆ ಮತ್ತು ಅದು ಆ ವ್ಯಕ್ತಿಯ ಜೀವನದಲ್ಲಿ ಪ್ರೇರಕ ಶಕ್ತಿಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು. “ನಾವು ನಿಮ್ಮ ಮಕ್ಕಳು, ನಿಮ್ಮ ಇಂದಿನ ಮತ್ತು ನಿಮ್ಮ ಭವಿಷ್ಯದ ಪೀಳಿಗೆಯ ಬಗ್ಗೆ ಕಾಳಜಿ ವಹಿಸುತ್ತೇವೆ” ಎಂದರು.

ತಮ್ಮ ಭಾಷಣದ ಅಂತ್ಯದಲ್ಲಿ ಪ್ರಧಾನಮಂತ್ರಿಯವರು ಮರಾಠಿ ಮಾತನ್ನು ಉಲ್ಲೇಖಿಸಿದರು ಮತ್ತು ಇವತ್ತಿನ ದಿನವನ್ನು  ಉತ್ತಮ ಮಾಡುವುದರ ಜತೆಗೆ ನಾಳೆಯ‌ ದಿನಗಳನ್ನು ಉತ್ತಮ ಮಾಡವುದು ಸರ್ಕಾರದ ಪ್ರಯತ್ನವಾಗಿದೆ ಎಂದರು. ಇದು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಸಂಕಲ್ಪ ಭಾವನೆಯ ದ್ಯೋತಕವಾಗಿದೆ ಎಂದರು. ಮಹಾರಾಷ್ಟ್ರದಲ್ಲಿ ಒಂದೇ ಕಾರಣಕ್ಕಾಗಿ, ಹಲವು ಪಕ್ಷಗಳಂತೆಯೇ ಒಗ್ಗೂಡಿ, ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಶ್ರೀ ಮೋದಿ ಅವರು ಒತ್ತಿ ಹೇಳಿದರು. “ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯಿಂದ ಮಹಾರಾಷ್ಟ್ರದಲ್ಲಿ ಉತ್ತಮ ಕೆಲಸ ಮಾಡಬಹುದಾಗಿದ್ದು, ಇದರಿಂದ ಮಹರಾಷ್ಟ್ರ ಶರವೇಗದಲ್ಲಿ ಅಭಿವೃದ್ಧಿ ಹೊಂದಲಿದೆ” ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬಯಿಸ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಶ್ರೀ ಅಜಿತ್ ಪವಾರ್ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವರುಗಳು, ಮತ್ತಿತತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಿನ್ನೆಲೆ 

ಪುಣೆ ಮೆಟ್ರೋ ಮೊದಲ ಹಂತದ ಕಾರಿಡಾರ್ ನಲ್ಲಿ ಪೂರ್ಣಗೊಂಡ ಎರಡು ವಿಭಾಗಗಳಲ್ಲಿ ಮೆಟ್ರೋ ರೈಲು ಸೇವೆಗೆ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿದರು. ಇವು ಸಿವಿಲ್ ನ್ಯಾಯಾಲಯ ನಿಲ್ದಾಣದ ಪುಗೇವಾಡಿ ನಿಲ್ದಾಣ ಮತ್ತು ಗರ್ವಾವರೆ ಕಾಲೇಜಿನ ರೂಬಿ ಹಾಲ್ ಕ್ಲಿನಿಕ್ ನಿಲ್ದಾಣ. 2016 ರಲ್ಲಿ ಪ್ರಧಾನಮಂತ್ರಿಯವರು ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಪುಣೆ ನಗರದ ಶಿವಾಜಿ ನಗರ್, ಸಿವಿಲ್ ಕೋರ್ಟ್, ಪುಣೆ ನಗರ ಪಾಲಿಕೆ ಕಚೇರಿ, ಪುಣೆ ಆರ್.ಟಿ.ಒ  ಮತ್ತು ಪುಣೆ ರೈಲ್ವೆ ನಿಲ್ದಾಣದಂತಹ ಪ್ರಮುಖ ಸ್ಥಳಗಳನ್ನು ಇದು ಸಂಪರ್ಕಿಸಲಿದೆ. ನಾಗರಿಕರಿಗೆ ಆಧುನಿಕ ಮತ್ತು ಪರಿಸರ ಸ್ನೇಹಿ, ತ್ವರಿತ ನಗರ ಸಾರಿಗೆ ವ್ಯವಸ್ಥೆಯನ್ನು ದೇಶಾದ್ಯಂತ ಕಲ್ಪಿಸುವ ಪ್ರಧಾನಮಂತ್ರಿಯರ ದೃಷ್ಟಿಕೋನದ ಹಿನ್ನೆಲೆಯಲ್ಲಿ ಈ ಉದ್ಘಾಟನೆ ಮಹತ್ವದ ಹೆಜ್ಜೆಯಾಗಿದೆ.

ಈ ಮಾರ್ಗದಲ್ಲಿನ ಕೆಲವು ಮೆಟ್ರೋ ನಿಲ್ದಾಣಗಳ ವಿನ್ಯಾಸ ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಪೂರ್ತಿ ಪಡೆಯುತ್ತವೆ. ಛತ್ರಪತಿ ಶಂಭೂಜಿ ಉದ್ಯಾನ್ ಮೆಟ್ರೋ ನಿಲ್ದಾಣ ಮತ್ತು ಡೆಕ್ಕನ್ ಜಮ್ಖಾನ ಮೆಟ್ರೋ ನಿಲ್ದಾಣಗಳು ಛತ್ರಪತಿ ಶಿವಾಜಿ ಮಹಾರಾಜರ ಸೈನಿಕರು ಧರಿಸುವ ಶಿರಸ್ತ್ರಾಣವನ್ನು ಹೋಲುವ ವಿಶಿಷ್ಟ ವಿನ್ಯಾಸ ಹೊಂದಿವೆ. ಇದನ್ನು ‘ಮಾವಲ ಪಗಾಡಿ’ ಎಂದು ಕರೆಯುತ್ತಾರೆ. ಶಿವಾಜಿ ನಗರದ ಭೂಗರ್ಭದ ಮೆಟ್ರೋ ನಿಲ್ದಾಣ ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಕೋಟೆಗಳನ್ನು ನೆನಪಿಸುವ ವಿಶಿಷ್ಟ ವಿನ್ಯಾಸವನ್ನು ಹೊಂದಿವೆ.

ಸಿವಿಲ್ ನ್ಯಾಯಾಲಯದ ಮೆಟ್ರೋ ನಿಲ್ದಾಣ ದೇಶದಲ್ಲೇ ಅತ್ಯಂತ ಆಳವಾದ ನಿಲ್ದಾಣವಾಗಿದ್ದು, 33.1 ಮೀಟರ್ ಆಳದಲ್ಲಿದೆ. ನಿಲ್ದಾಣದ ಮೇಲ್ಚಾವಣಿಗೆ  ನೇರವಾಗಿ ಸೂರ್ಯನ ಬೆಳಕು ಬೀಳುವಂತೆ ಪ್ಲಾಟ್ ಫಾಮ್೯ ನಿರ್ಮಿಸಲಾಗಿದೆ.

ಸರ್ವರಿಗೂ ಸೂರು ಎಂಬ ಪರಿಕಲ್ಪನೆಯಡಿ ಪಿಂಪ್ರಿ ಚಿನ್ ಚನ್ ವಾಡ್ ನಗರ ಪಾಲಿಕೆ [ಪಿಸಿಎಂಸಿ] ವ್ಯಾಪ್ತಿಯಡಿ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 1280 ಮನೆಗಳನ್ನು ಅವರು ಹಸ್ತಾಂತರಿಸಿದರು ಮತ್ತು ಪುಣೆ ನಗರ ಪಾಲಿಕೆಯಿಂದ ಪಿಎಂಎವೈ ಯೋಜನೆಯಡಿ 2650ಕ್ಕೂ ಹೆಚ್ಚು ಮನೆಗಳನ್ನು ಫಲಾನುಭವಿಗಳಿಗಾಗಿ ನಿರ್ಮಿಸಲಾಗಿದೆ. ಪಿಸಿಎಂಸಿಯಿಂದ ಸುಮಾರು 1190 ಪಿಎಂಎವೈ ಮನೆಗಳ ನಿರ್ಮಾಣಕ್ಕೆ ಅವರು ಶಿಲಾನ್ಯಾಸ ನೆರವೇರಿಸಿದರು. ಪುಣೆ ಮೆಟ್ರೋಪಾಲಿಟಿನ್ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ 6400 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ.

ಪಿಂಪ್ರಿ ಚುನ್ ಚನ್ ವಾಡ್ ನಗರ ಪಾಲಿಕೆ [ಪಿಸಿಎಂಸಿ] ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ವಾರ್ಷಿಕ 2.5 ಮೆಟ್ರಿಕ್ ಟನ್ ತ್ಯಾಜ್ಯವನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಈ ಘಟಕವನ್ನು 300 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

***


(Release ID: 1944909) Visitor Counter : 152