ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತವು ವಿಶ್ವಾಸಾರ್ಹ ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪಾಲುದಾರನಾಗಿ ಹೊರಹೊಮ್ಮುತ್ತಿದೆ: ಸೆಮಿಕಾನ್ ಇಂಡಿಯಾ 2023ರ ಅಂತಿಮ ದಿನದಂದು ವಿದೇಶಾಂಗ ವ್ಯವಹಾರಗಳ ಸಚಿವ, ಡಾ. ಎಸ್. ಜೈಶಂಕರ್
ಭಾರತದ ಅರೆವಾಹಕ ವೃತ್ತಿಪರರು ಅರೆವಾಹಕ ಪರಿಸರ ವ್ಯವಸ್ಥೆಯ ಪ್ರಮುಖ ಸಶಕ್ತತೆಯಲ್ಲಿ ಜಾಗತಿಕ ಪಾಲುದಾರಿಕೆ, ಪ್ರತಿಭೆಯ ಅಭಿವೃದ್ಧಿ ಮತ್ತು ನಿಯಂತ್ರಕ ಚೌಕಟ್ಟುಗಳ ಪಾತ್ರದಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ
Posted On:
31 JUL 2023 9:12AM by PIB Bengaluru
ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಎಸ್. ಜೈಶಂಕರ್ ಅವರು ಮೂರು ದಿನಗಳ ಸೆಮಿಕಾನ್ ಇಂಡಿಯಾ 2023ರ ಮುಕ್ತಾಯದ ದಿನವನ್ನುದ್ದೇಶಿಸಿ ಮಾತನಾಡುತ್ತಾ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತದ ಪಾತ್ರ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ, ವಿಶೇಷವಾಗಿ ಅರೆವಾಹಕಗಳಲ್ಲಿ, ಭಾರತದ ಬೆಳವಣಿಗೆಯ ಮಹತ್ವವನ್ನು ಒತ್ತಿ ಹೇಳಿದರು. ವಿಶ್ವಾಸಾರ್ಹ ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದ ಪಾಲುದಾರನಾಗಿ ವ್ಯಾಪಿಸುತ್ತಿರುವ ಭಾರತದ ಉಪಸ್ಥಿತಿಯನ್ನು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗಿನ ಅಂತರರಾಷ್ಟ್ರೀಯ ಸಹಯೋಗಗಳು ಮತ್ತು ಇತರ ಸಮಾನ ಮನಸ್ಕ ದೇಶಗಳೊಂದಿಗೆ ಮುಂಬರುವ ಅವಕಾಶಗಳು ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ತಿಳಿಸಿದರು.
ಮೂರು ದಿನಗಳ ಸೆಮಿಕಾನ್ ಇಂಡಿಯಾ 2023ರ ಸಮ್ಮೇಳನದ ಅಂತಿಮ ದಿನವು ಉದ್ಯಮ, ನವೋದ್ಯಮ, ಶೈಕ್ಷಣಿಕ ಹಾಗೂ ಸರ್ಕಾರದ ವೈವಿಧ್ಯಮಯ ಭಾಗವಹಿಸುವಿಕೆಯ ಆಕರ್ಷಣೆಯನ್ನು ಕಂಡಿತು. ಪ್ರಮುಖ ಅಧಿವೇಶನಗಳು ಮತ್ತು ಆಕರ್ಷಕ ಮಾತುಕತೆಗಳು ಅರೆವಾಹಕ ಉತ್ಪಾದನೆಗೆ ಸಂಬಂಧಿಸಿದ ನಿರ್ಣಾಯಕ ಅಂಶಗಳ ಮಹತ್ವ ಮತ್ತು ದೃಢವಾದ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಅರೆವಾಹಕ ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ಮಹತ್ವ ಮತ್ತು ಕ್ರಮಗಳನ್ನು ಪ್ರದರ್ಶಿಸಿದವು.
ಭಾರತವು "ವಸುದೈವ ಕುಟುಂಬಕಂ" ಅಥವಾ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಅಂದರೆ ಎಲ್ಲರಿಗೂ ಸಮಾನ ಬೆಳವಣಿಗೆ ಮತ್ತು ಸಮಾನ ಹಂಚಿಕೆಯ ಭವಿಷ್ಯ ಎಂಬುದನ್ನು ದೃಢವಾಗಿ ನಂಬುತ್ತದೆ. ಇದರ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರಾದ ಶ್ರೀ ಅಂಶುಮಾನ್ ತ್ರಿಪಾಠಿಯವರ ನೇತೃತ್ವದಲ್ಲಿ "ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಅರೆವಾಹಕ ಪೂರೈಕೆ ಸರಪಳಿಯಲ್ಲಿ ಅಂತರರಾಷ್ಟ್ರೀಯ ಸಹಯೋಗ" ಎಂಬ ವಿಷಯ ಕುರಿತಾದ ಸಮಪ್ರಿತ ಸಮಿತಿ ಚರ್ಚೆ ನಡೆಯಿತು. ಈ ಸಮಿತಿಯ ಸದಸ್ಯರಾದ ಯುಎಸ್ ರಾಯಭಾರ ಕಚೇರಿಯ ಕಾನ್ಸುಲ್ ಜನರಲ್, ಶ್ರೀ ಮೈಕ್ ಹ್ಯಾಂಕಿ; ಜಪಾನ್ ನ ಆರ್ಥಿಕ ಮತ್ತು ಅಭಿವೃದ್ಧಿ ಸಚಿವೆ ಶ್ರೀಮತಿ ಕ್ಯೋಕೊ ಹೊಕುಗೊ; ಆಸ್ಟ್ರೇಲಿಯಾ ಹೈಕಮಿಷನ್ ನ ಪ್ರಥಮ ಕಾರ್ಯದರ್ಶಿ ಶ್ರೀಮತಿ ಜಾರ್ಜಿನಾ ರೋಸ್ ಮೆಕೆ; ಮತ್ತು ಜಾರ್ಜಿಯಾ ಟೆಕ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅರಿಜಿತ್ ರೇ ಚೌಧರಿ ಇವರೆಲ್ಲರೂ ಅರೆವಾಹಕ ಉತ್ಪಾದನೆ, ಸಂಶೋಧನೆ, ಪ್ರತಿಭಾ ವಿನಿಮಯ, ಶುದ್ಧ ಇಂಧನ ಪರಿವರ್ತಕಗಳು ಮತ್ತು ನಿರ್ಣಾಯಕ ಖನಿಜಗಳ ಪರಿಶೋಧನೆಯಲ್ಲಿ ಭಾರತದ ಪ್ರಮುಖ ಪಾತ್ರವನ್ನು ನಿರ್ದಿಷ್ಟ ಗಮನದಲ್ಲಿಟ್ಟುಕೊಂಡು ಅರೆವಾಹಕ ಉದ್ಯಮವನ್ನು ಹೆಚ್ಚಿಸುವಲ್ಲಿ ಜಾಗತಿಕ ಸಹಭಾಗಿತ್ವದ ಸಾಮರ್ಥ್ಯದ ಬಗ್ಗೆ ಚಚಿಸಿದ್ದಾರೆ.
ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಅವಕಾಶಗಳು ಮತ್ತು ಸವಾಲುಗಳ ಕುರಿತಾದ ಪ್ಯಾನಲ್ ಚರ್ಚೆಯಲ್ಲಿ ಟೆಕ್ಸಸ್ ಇನ್ಸ್ಟ್ರುಮೆಂಟ್ಸ್ನ ನ ಶ್ರೀ ಸಂತೋಷ್ ಕುಮಾರ್ ಸೇರಿದಂತೆ ಗಮನಾರ್ಹ ತಜ್ಞರು ಭಾಗವಹಿಸಿದ್ದರು. ಅವರಲ್ಲಿ ಎಎಂಡಿಯ ಶ್ರೀಮತಿ ಜಯ ಜಗದೀಶ್; ಎನ್ಎಕ್ಸ್ ಪಿ ಸೆಮಿಕಂಡಕ್ಟರ್ಸ್ನ ನ ಶ್ರೀ ಹಿತೇಶ್ ಗರ್ಗ್ ಮತ್ತು ಐಐಟಿ ಬಾಂಬೆಯ ಪ್ರೊಫೆಸರ್ ಉದಯನ್ ಗಂಗೂಲಿ ಸೇರಿದ್ದಾರೆ. ಸೆಮಿಕಂಡಕ್ಟರ್ ಗಳ ಪ್ರಮುಖ ಆವಿಷ್ಕಾರಗಳು, ಆಟೋಮೋಟಿವ್ ಅರೆವಾಹಕಗಳ ಭವಿಷ್ಯ, ಅರೆವಾಹಕ ತಂತ್ರಜ್ಞಾನವನ್ನು ಮುನ್ನಡೆಸುವಲ್ಲಿ ಶೈಕ್ಷಣಿಕ ಕ್ಷೇತ್ರದ ಪಾತ್ರ ಮತ್ತು ಅರೆವಾಹಕ ಪರಿಸರ ವ್ಯವಸ್ಥೆಯಲ್ಲಿ ಸುಸ್ಥಿರತೆಯ ಬಗ್ಗೆ ಚರ್ಚೆ ನಡೆಸಲಾಯಿತು.
ಹೆಚ್ಎಸ್ ಬಿಸಿ ಇಂಡಿಯಾದ ಎಂಡಿ ಶ್ರೀ ಅಮಿತಾಭ್ ಮಲ್ಹೋತ್ರಾ ಮತ್ತು ಮೋರ್ಗನ್ ಸ್ಟಾನ್ಲಿಯ ಎಂಡಿ ಶ್ರೀ ರಿಧಮ್ ದೇಸಾಯಿ ಅವರೊಂದಿಗೆ "ನವ ಭಾರತ ತಂತ್ರಜ್ಞಾನದ ವೇಗವರ್ಧನೆ" ಎಂಬ ವಿಷಯದ ಬಗ್ಗೆ ನಡೆದ ಆಕರ್ಷಕ ಚರ್ಚೆಯು ಭಾರತದಲ್ಲಿ ಅರೆವಾಹಕ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಅತ್ಯಾಕರ್ಷಕ ಸಾಧ್ಯತೆಗಳನ್ನು ಪ್ರತಿಬಿಂಬಿಸಿತು. ಈ ಚರ್ಚೆಯು ಬಹುರಾಷ್ಟ್ರೀಯ ಕಂಪನಿಗಳಿಗೆ ಆಕರ್ಷಕರೀತಿಯಲ್ಲಿ ಬಳಕೆ ಮತ್ತು ಉತ್ಪಾದನೆ ಎರಡನ್ನೂ ತಲುಪಿಸುವ ದೇಶದ ಸಾಮರ್ಥ್ಯವನ್ನು ಒತ್ತಿಹೇಳಿತು. ಈ ಚರ್ಚೆಯಲ್ಲಿ ಅರೆವಾಹಕ ಉದ್ಯಮದ ಬೆಳವಣಿಗೆಗೆ ಬಂಡವಾಳವು ನಿರ್ಣಾಯಕವೆಂದು ಚರ್ಚಿಸಲಾಯಿತು. ಈ ಬಂಡವಾಳದ ಆಕರ್ಷಣೆಗಾಗಿ ಬಾಹ್ಯ ವಾಣಿಜ್ಯ ಸಾಲ ಮತ್ತು ಈಕ್ವಿಟಿ ಹೂಡಿಕೆಗಳು ಸೇರಿದಂತೆ ವಿವಿಧ ಹಣಕಾಸು ಮಾರ್ಗಗಳನ್ನು ಚರ್ಚಿಸಲಾಯಿತು.
ಅರೆವಾಹಕ ಪರಿಸರ ವ್ಯವಸ್ಥೆಗೆ ಸನ್ನದ್ಧತೆಯ ಮೌಲ್ಯಮಾಪನದ ಬಗ್ಗೆ ಚರ್ಚೆಗಳನ್ನು ಆಯೋಜಿಸಲಾಯಿತು. ಐಸಿಇಎ ಅಧ್ಯಕ್ಷರಾದ ಶ್ರೀ ಪಂಕಜ್ ಮೊಹಿಂದ್ರೂ ಅವರು ಎಲೆಕ್ಟ್ರಾನಿಕ್ಸ್ ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಹೆಚ್ಚುತ್ತಿರುವ ಭಾರತದ ಉಪಸ್ಥಿತಿಯ ಕುರಿತಾದ ಗೋಷ್ಠಿಯನ್ನು ನಡೆಸಿದರು. ಸಮಿತಿಯ ಸದಸ್ಯರಾದ ಕಾರ್ನಿಂಗ್ ಇಂಡಿಯಾದ ಎಂಡಿ, ಶ್ರೀ ಸುಧೀರ್; ಬೋಟ್ ನ ಸಿಎಂಒ ಮತ್ತು ಸಹ ಸಂಸ್ಥಾಪಕರಾದ ಶ್ರೀ ಅಮನ್ ಗುಪ್ತಾ; ರೇಡಿಯಂಟ್ ನ ಅಧ್ಯಕ್ಷರಾದ ಶ್ರೀ ರಮೀಂದರ್ ಸಿಂಗ್; ವೆಂಚರ್ ಕ್ಯಾಪಿಟಲಿಸ್ಟ್ ನ ನಂದಿನಿ ಟಂಡನ್; ಮತ್ತು ಎಲಿಮೆಂಟ್ ಸೊಲ್ಯೂಷನ್ಸ್ ನ ಡಾ. ರವಿ ಭಟ್ಕಳ್ ಅವರು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಗಮನಾರ್ಹ ಬೆಳವಣಿಗೆ ಮತ್ತು ಸಾಮರ್ಥ್ಯದ ಬಗ್ಗೆ ಚರ್ಚಿಸಿದರು.
ಹಂತ ಹಂತದ ಉತ್ಪಾದನಾ ಕಾರ್ಯಕ್ರಮಗಳು ಸೇರಿದಂತೆ ಸರ್ಕಾರದ ಹಲವಾರು ನೀತಿಗಳು ಮತ್ತು ಯೋಜನೆಗಳ ಬೆಂಬಲದೊಂದಿಗೆ ದೇಶೀಯ ಬ್ರಾಂಡ್ ಅನ್ನು ನಿರ್ಮಿಸುವ ಹಾಗೂ ಆಮದಿನಿಂದ ದೇಶೀಯ ಉತ್ಪಾದನೆಯತ್ತ ಸಾಗಿದ ತಮ್ಮ ಪ್ರಯಾಣವನ್ನು ಭಾರತೀಯ ಚಾಂಪಿಯನ್ ಬೋಟ್ ಹಂಚಿಕೊಂಡಿತು. ಕಾರ್ನಿಂಗ್ ಇಂಡಿಯಾ 'ಮೇಕ್ ಇನ್ ಇಂಡಿಯಾ'ದ ಮೂಲಕ 'ಘೋಷಣೆ'ಯಿಂದ 'ನಂಬಿಕೆ'ಗೆ ಬದಲಾಗಬೇಕಾದ ಅವಶ್ಯಕತೆಯನ್ನು ಒತ್ತಿಹೇಳಿ, ದೃಢವಾದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಉತ್ಪಾದನಾ ಕಾರ್ಯತಂತ್ರಕ್ಕೆ ಕರೆ ನೀಡಿತು. ಸಮಗ್ರ ಉತ್ಪಾದನಾ ಕಾರ್ಯತಂತ್ರಗಳು, ಏಕರೂಪದ ಕಾರ್ಮಿಕ ಸಂಹಿತೆಗಳು ಮತ್ತು ವಿಮಾ ರಕ್ಷಣೆಯ ಅಗತ್ಯತೆ ಸೇರಿದಂತೆ ಈ ವಲಯದ ಸವಾಲುಗಳ ಬಗ್ಗೆ ಚರ್ಚಿಸಲಾಯಿತು.
ಐಇಎಸ್ಎ ಅಧ್ಯಕ್ಷರಾದ ಶ್ರೀ ಸಂಜಯ್ ಗುಪ್ತಾ ಮತ್ತು ಇತರ ಗೌರವಾನ್ವಿತ ಸದಸ್ಯರಾದ ಯುಪಿ ಸರ್ಕಾರದ ಶ್ರೀ ಅಕ್ಷಯ್ ತ್ರಿಪಾಠಿ; ಗುಜರಾತ್ ಸರ್ಕಾರದ ಶ್ರೀ ವಿಜಯ್ ನೆಹ್ರಾ; ಕರ್ನಾಟಕ ಸರ್ಕಾರದ ಡಾ. ಇ. ವಿ. ರಮಣ ರೆಡ್ಡಿ; ತೆಲಂಗಾಣ ಸರ್ಕಾರದ ಶ್ರೀ ಸುಜಯ್ ಕರಂಪುರಿ; ಮತ್ತು ತಮಿಳುನಾಡು ಸರ್ಕಾರದ ಪ್ರತಿನಿಧಿಗಳು ಹೂಡಿಕೆಗಳನ್ನು ಆಕರ್ಷಿಸಲು, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಅರೆವಾಹಕ ಕೈಗಾರಿಕೆಗಳಲ್ಲಿ ಪ್ರತಿಭೆಯನ್ನು ಪೋಷಿಸಲು ವಿವಿಧ ಭಾರತೀಯ ರಾಜ್ಯಗಳ ಸನ್ನದ್ಧತೆಯನ್ನು ಪ್ರದರ್ಶಿಸಿದರು. ಇದು ಈ ವಲಯದಲ್ಲಿ ಭಾರತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅರೆವಾಹಕ ಕಂಪನಿಗಳಿಗೆ ಹಣಕಾಸು ಮತ್ತು ಆರ್ಥಿಕೇತರ ಬೆಂಬಲದ ಪ್ರಾಮುಖ್ಯತೆ, ಸರಳ ಉದ್ಯಮಶೀಲತೆಯ ಅಗತ್ಯತೆ ಮತ್ತು ನವೋದ್ಯಮಗಳನ್ನು ಬೆಂಬಲಿಸಲು ರಾಜ್ಯ ನಿಧಿಗಳ ಸೃಷ್ಟಿಯ ಬಗ್ಗೆಯೂ ಸದಸ್ಯರು ಚರ್ಚಿಸಿದರು.
"ಗ್ಲೋಬಲ್ ಸೆಮಿಕಂಡಕ್ಟರ್ ಟ್ಯಾಲೆಂಟ್ ಕ್ಯಾಪಿಟಲ್" ಕುರಿತಾ ಚರ್ಚೆಗಳು ಭಾರತವನ್ನು ಅರೆವಾಹಕ ಪ್ರತಿಭಾ ರಾಷ್ಟ್ರವನ್ನಾಗಿ ಮಾಡಲು ಸೆಮಿಕಾನ್ ಇಂಡಿಯಾ ಫ್ಯೂಚರ್ ಸ್ಕಿಲ್ಸ್ ಟ್ಯಾಲೆಂಟ್ ಮಾರ್ಗಸೂಚಿಯ ಅನುಷ್ಠಾನವನ್ನು ಪ್ರೇರೇಪಿಸಿತು. ಎಎಂಡಿ ಇಂಡಿಯಾದ ಶ್ರೀಮತಿ ಜಯ ಜಗದೀಶ್; ಎಐಸಿಟಿಇ ಅಧ್ಯಕ್ಷರಾದ ಪ್ರೊ. ಟಿ. ಜಿ. ಸೀತಾರಾಮ್; ಗ್ಲೋಬಲ್ ಫೌಂಡರೀಸ್ ನ ಶ್ರೀ ಬಿನೋದ್ ನಾಯರ್; ಅಪ್ಲೈಡ್ ಮೆಟೀರಿಯಲ್ಸ್ ನ ಶ್ರೀ ಶ್ರೀನಿವಾಸ್ ಸತ್ಯ; ಲ್ಯಾಮ್ ರಿಸರ್ಚ್ ನ ಶ್ರೀ ರಂಗೇಶ್ ರಾಘವನ್; ಐಐಟಿ ಬಾಂಬೆಯ ಪ್ರೊಫೆಸರ್ ಉದಯನ್ ಗಂಗೂಲಿ; ಮತ್ತು ಪರ್ಡ್ಯೂ ವಿಶ್ವವಿದ್ಯಾಲಯದ ಡಾ. ವಿಜಯ್ ರಘುನಾಥನ್ ಅವರು ಕಾರ್ಯತಂತ್ರದ ಯೋಜನೆ, ಸಹಯೋಗ ಮತ್ತು ಕಾರ್ಯಪಡೆಯ ಹೂಡಿಕೆಯ ಮೂಲಕ ಅರೆವಾಹಕ ಪ್ರತಿಭಾ ರಾಷ್ಟ್ರವಾಗುವ ಭಾರತದ ಬದ್ಧತೆಯನ್ನು ಪ್ರದರ್ಶಿಸಿದರು.
ಡಿಪಿಐಐಟಿಯ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಅವರು ಜಾಗತಿಕವಾಗಿ ಸ್ಪರ್ಧಾತ್ಮಕ ಅನುಸರಣೆ ಮತ್ತು ನಿಯಂತ್ರಣ ಚೌಕಟ್ಟನ್ನು ರಚಿಸುವ ಕುರಿತಾದ ಗೋಷ್ಠಿಯನ್ನು ನಡೆಸಿದರು. ರಾಜ್ಯ ಮಟ್ಟದಲ್ಲಿ ಸುಗಮ ವ್ಯಾಪಾರ ನಡೆಸುವತ್ತ ಗಮನ ಹರಿಸಿ ಸುಗಮ ವ್ಯಾಪಾರ ಮತ್ತು ಎಫ್.ಡಿ.ಐ. ಪ್ರಕ್ರಿಯೆಗಳಲ್ಲಿನ ತ್ವರಿತ ಬದಲಾವಣೆಗಳನ್ನು ಅವರು ಎತ್ತಿ ತೋರಿಸಿದರು. ಎಂಇಐಟಿವೈ ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾರವರು ಜಾಗತಿಕ ಹೂಡಿಕೆದಾರರನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ, ತೆರಿಗೆ ಸುಧಾರಣೆಗಳು, ಸಂಪೂರ್ಣ ಸರ್ಕಾರದ ವಿಧಾನ ಮತ್ತು ಹೂಡಿಕೆದಾರರಿಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನೀತಿ ಸ್ಥಿರತೆಯ ಮಹತ್ವವನ್ನು ಒತ್ತಿ ಹೇಳಿದರು. ಸಿಬಿಡಿಟಿ ಸದಸ್ಯೆ ಶ್ರೀಮತಿ ಪ್ರಜ್ಞಾ ಸಹಾಯ್ ಸಕ್ಸೇನಾ ಅವರು ಉದ್ಯಮ ಸಮಾಲೋಚನೆಗಳು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ರಚನಾತ್ಮಕ ಬದಲಾವಣೆಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ಹೇಗೆ ಸಕ್ರಿಯವಾಗಿದೆ ಎಂಬುದನ್ನು ಎತ್ತಿ ಹಿಡಿದರು. ಸಿಬಿಐಸಿ ಸದಸ್ಯ ಶ್ರೀ ರಾಜೀವ್ ತಲ್ವಾರ್ ಅವರು ಅರೆವಾಹಕ ಪರಿಸರ ವ್ಯವಸ್ಥೆಯಲ್ಲಿ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ವೈಶಿಷ್ಟ್ಯಗಳನ್ನು ವಿವರಿಸಿದರು. ಅವರು ಸಂಪರ್ಕರಹಿತ, ಕಾಗದರಹಿತ ಮತ್ತು ಮುಖರಹಿತ ಕಸ್ಟಮ್ಸ್ ಪ್ರಕ್ರಿಯೆಗಳ ಮೇಲೆ ಹೆಚ್ಚು ಒತ್ತನ್ನು ನೀಡಿದರು. ಮೈಕ್ರಾನ್ ನ ಹಿರಿಯ ಉಪಾಧ್ಯಕ್ಷರಾದ ಶ್ರೀ ಗುರುಶರಣ್ ಸಿಂಗ್ ಅವರು ಮುಂಗಡ ಬೆಲೆ ಒಪ್ಪಂದದ ಬಗ್ಗೆ ಸರ್ಕಾರದ ತ್ವರಿತ ಕ್ರಿಯಾವಿಧಾನವನ್ನು ಶ್ಲಾಘಿಸಿದರು. ಲಾವಾದ ಎಂಡಿ, ಶ್ರೀ ಹರಿ ಓಂ ರಾಯ್ ಅವರು 2033ರ ವೇಳೆಗೆ ಭಾರತವು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಶೇ. 50ರಷ್ಟು ಉತ್ಪಾದನೆ ಮಾಡುವ ದೃಷ್ಟಿಕೋನವನ್ನು ಒತ್ತಿ ಹೇಳಿದರು.
ಎಎಂಡಿ ಇಂಡಿಯಾದ ಶ್ರೀಮತಿ ಜಯ ಜಗದೀಶ್ ಸೆಮಿಕಾನ್ ಇಂಡಿಯಾ 2023ರ ಸಮಾರೋಪ ಭಾಷಣ ಮಾಡಿದರು. ಸೆಮಿಕಾನ್ ಇಂಡಿಯಾದ ಎರಡನೇ ಆವೃತ್ತಿಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಶಯವಾದ, ಸೆಮಿಕಂಡಕ್ಟರ್ ಉದ್ಯಮದಲ್ಲಿ "ಭಾರತದಲ್ಲಿ ಏಕೆ ಹೂಡಿಕೆ ಮಾಡಬೇಕು?" ಎಂಬ ಪ್ರಶ್ನೆಯಿಂದ "ಭಾರತದಲ್ಲಿ ಏಕೆ ಹೂಡಿಕೆ ಮಾಡಬಾರದು?" ಎಂಬ ಪ್ರಶ್ನೆಯ ಮಹತ್ವವನ್ನು ಚರ್ಚಿಸಿತು. ಹೆಚ್ಚುತ್ತಿರುವ ಚಿಪ್ ಬೇಡಿಕೆಯನ್ನು ಪೂರೈಸಲು ಚಿಪ್ಲೆಟ್ ವಾಸ್ತುಶಿಲ್ಪ ಮತ್ತು ವಸ್ತು ವಿಜ್ಞಾನಗಳಂತಹ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಗಮನ ಹರಿಸುವುದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ನುರಿತ ಪ್ರತಿಭೆಗಳಿಗೆ ಸರ್ಕಾರದ ಉಪಕ್ರಮಗಳು ಮತ್ತು ನವೋದ್ಯಮಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲವು ಈ ವಲಯದಲ್ಲಿ ನಾವೀನ್ಯತೆಯನ್ನು ಸೃಷ್ಟಿಸುತ್ತದೆ.
ಸೆಮಿಕಾನ್ ಇಂಡಿಯಾದ ಎರಡನೇ ಆವೃತ್ತಿಯಲ್ಲಿ ಜಾಗತಿಕ ಕಂಪನಿಗಳನ್ನು ಉನ್ನತ ಮಟ್ಟದ ನಾಯಕತ್ವ ಮತ್ತು ಶೈಕ್ಷಣಿಕ ಮಟ್ಟದಲ್ಲಿ ತೊಡಗಿಸಿಕೊಳ್ಳುವ ಮೂಲಕ, ಸಾಮಾನ್ಯವಾಗಿ ತಂತ್ರಜ್ಞಾನದ ಭವಿಷ್ಯ ಮತ್ತು ನಿರ್ದಿಷ್ಟವಾಗಿ ಅರೆವಾಹಕಗಳ ಭವಿಷ್ಯದ ಬಗ್ಗೆ ಸಂಭಾಷಣೆಯು ಕೇಂದ್ರೀಕೃತವಾಗಿತ್ತು. ಇದು ಭಾರತವನ್ನು ಎಲೆಕ್ಟ್ರಾನಿಕ್ಸ್ ಮತ್ತು ಅರೆವಾಹಕಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ಭಾರತದ ಅರೆವಾಹಕ ಪ್ರಯಾಣದ ಔಪಚಾರಿಕ ಉಡಾವಣೆಯನ್ನು ಸೂಚಿಸುತ್ತದೆ.
****
(Release ID: 1944346)
Visitor Counter : 128