ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿಂದು 'ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ'ಯ  ಪ್ರಾದೇಶಿಕ ಸಮ್ಮೇಳನ; ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆ


ದೇಶದ ವಿವಿಧೆಡೆ ವಶಪಡಿಸಿಕೊಂಡ 1.40 ಲಕ್ಷ ಕೆಜಿಗೂ ಅಧಿಕ ಮಾದಕ ದ್ರವ್ಯ;  ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ ನಾಶ, ಇದು ಒಂದೇ ದಿನದ ದಾಖಲೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 1 ವರ್ಷದಲ್ಲಿ ಸುಮಾರು 12,000 ಕೋಟಿ ರೂ.ಮೌಲ್ಯದ 10 ಲಕ್ಷ ಕಿಲೋಗ್ರಾಂ ಮಾದಕ ವಸ್ತುಗಳ ನಾಶ

ಒಬ್ಬ ಯುವಕ ಕೂಡ ಮಾದಕ ವ್ಯಸನಿಯಾಗದ ನವಭಾರತ ನಿರ್ಮಿಸುವುದು ಮೋದಿ ಸರ್ಕಾರದ ಗುರಿ

ಮಾದಕ ವಸ್ತುಗಳ ನಿರ್ಮೂಲನೆಗೆ ನಿರಂತರ ಜಾಗರೂಕತೆ ಅತ್ಯಗತ್ಯ, ಉತ್ತಮ ಸಮನ್ವಯಕ್ಕಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿರುವ ಎನ್‌ಸಿಒಆರ್‌ಡಿ ಸಭೆಗಳ ನಿರಂತರತೆ ಕಾಪಾಡಲು ಒತ್ತು ನೀಡುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ: ಅಮಿತ್ ಶ್ಹಾ

ಮಾದಕ ವ್ಯಸನ ಸಂಪೂರ್ಣ ತಡೆಗಟ್ಟಲು ನಾವು ಮಾದಕ ದ್ರವ್ಯ ಪತ್ತೆ, ಜಾಲ ನಾಶ, ಅಪರಾಧಿಗಳ ಬಂಧನ ಮತ್ತು ವ್ಯಸನಿಗಳ ಪುನರ್ವಸತಿ ವಿಷಯದಲ್ಲಿ ಸಮಾನ ಗಮನ ನೀಡುವುದನ್ನು ಮುಂದುವರಿಸಬೇಕು

ಮಾದಕ ವಸ್ತುಗಳ ವಿರುದ್ಧದ ನಮ್ಮ ಅಭಿಯಾನವು ಭವಿಷ್ಯದ ಪೀಳಿಗೆಯನ್ನು ಉಳಿಸುವ ಮತ್ತು ದೇಶವನ್ನು ಸುರಕ್ಷಿತವಾಗಿಡುವ ಪವಿತ್ರ ಅಭಿಯಾನವಾಗಿದೆ, ಇದು ನಮ್ಮೆಲ್ಲರ ಆದ್ಯತೆಯಾಗಬೇಕು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಡ್ರಗ್-ಮುಕ್ತ ಭಾರತದ ದೃಷ್ಟಿಕೋನ ಸಾಕಾರಗೊಳಿಸಲು, 'ಸಂಪೂರ್ಣ ಸರ್ಕಾರದ' ವಿಧಾನದ ಅಡಿ, ಎಲ್ಲಾ ಇಲಾಖೆಗಳು ಸಹಕಾರ, ಸಮನ್ವಯ ಮತ್ತು ಸಹಯೋಗದೊಂದಿಗೆ ಮುನ್ನಡೆಯಬೇಕು.

ಮಾದಕವಸ್ತು ಕಳ್ಳಸಾಗಣೆ ಮತ್ತು ಅವುಗಳ ಬಳಕೆಯು ಭವಿಷ್ಯದ ಪೀಳಿಗೆಯನ್ನು ಹಾಳು ಮಾಡುತ್ತದೆ, ಜತೆಗೆ ರಾಷ್ಟ್ರೀಯ ಭದ್ರತೆಯ ಮೇಲೂ ಪರಿಣಾಮ ಬೀರುತ್ತದೆ

Posted On: 17 JUL 2023 6:13PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿಂದು ಆಯೋಜಿಸಲಾದ 'ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ'ಯ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ದೇಶದ ವಿವಿಧೆಡೆ ವಶಪಡಿಸಿಕೊಳ್ಳಲಾದ 1.40 ಲಕ್ಷ ಕೆ.ಜಿ.ಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ ನಾಶಪಡಿಸಲಾಯಿತು. ಇದು ಒಂದೇ ದಿನದಲ್ಲಿ ಆಗಿರುವ ದಾಖಲೆಯಾಗಿದೆ. ಎಲ್ಲಾ ರಾಜ್ಯಗಳ ಆಂಟಿ ನಾರ್ಕೋಟಿಕ್ ಟಾಸ್ಕ್ ಫೋರ್ಸ್ (ANTF) ಜತೆಗಿನ ಸಮನ್ವಯದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದೇಶದ ವಿವಿಧ ಭಾಗಗಳಲ್ಲಿ 2,378 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿತ್ತು.  

ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಉತ್ತರಾಖಂಡದ ಮುಖ್ಯಮಂತ್ರಿಗಳು, ಪಂಜಾಬ್ ರಾಜ್ಯಪಾಲರು ಮತ್ತು ಚಂಡೀಗಢದ ಆಡಳಿತಾಧಿಕಾರಿಗಳು, ಜಮ್ಮು-ಕಾಶ್ಮೀರ, ಲಡಾಖ್ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಒಡಿಶಾದ ಗೃಹ ಖಾತೆ ರಾಜ್ಯ ಸಚಿವರು ಕೂಡ ಸಮಾವೇಶದಲ್ಲಿ ಭಾಗವಹಿಸಿದ್ದರು. ಕೇಂದ್ರ ಗೃಹ ಕಾರ್ಯದರ್ಶಿ, ಎನ್‌ಸಿಬಿಯ ಮಹಾನಿರ್ದೇಶಕರು ಮತ್ತು ವಿವಿಧ ಭದ್ರತಾ ಏಜೆನ್ಸಿಗಳು ಮತ್ತು ಸಂಬಂಧಿತ ಸಚಿವಾಲಯಗಳು ಮತ್ತು ಭಾರತ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಹ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ನಂತರ ಭಾಷಣ ಮಾಡಿದ ಸಚಿವ ಶ್ರೀ ಅಮಿತ್ ಶಾ, ಭಾರತದಂತಹ ದೇಶದಲ್ಲಿ, ಮಾದಕವಸ್ತು ಕಳ್ಳಸಾಗಣೆ ಮತ್ತು ಅವುಗಳ ಬಳಕೆಯು ಭವಿಷ್ಯದ ಪೀಳಿಗೆಯನ್ನು ಹಾಳು ಮಾಡುತ್ತದೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಯ ಮೇಲೂ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಗೃಹ ಸಚಿವಾಲಯವು ಪ್ರಾದೇಶಿಕ ಸಮ್ಮೇಳನ ಸಭೆಗಳ ಮೂಲಕ ನಿರಂತರವಾಗಿ ಮಾದಕ ದ್ರವ್ಯಗಳ ವಿರುದ್ಧ ಅಭಿಯಾನ ನಡೆಸುತ್ತಿದೆ. ಈ ಸಭೆಗಳಲ್ಲಿ ನಡೆಸುವ ಪರಿಶೀಲನೆ ಮತ್ತು ವ್ಯಕ್ತವಾಗುವ ಪ್ರತಿಕ್ರಿಯೆ ಆಧಾರದ ಮೇಲೆ ನಮ್ಮ ನೀತಿಗಳಲ್ಲಿ ಸಮಯೋಚಿತ ಬದಲಾವಣೆಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.

ದೇಶದ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಭಾರತ ಮತ್ತು ಈ ನೆಲದ ಯುವಕರು ಮಾದಕ ದ್ರವ್ಯಗಳ ವ್ಯಸನ ಮುಕ್ತರಾಗಬೇಕು ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಗುರಿ ಹಾಕಿದ್ದಾರೆ. ಒಬ್ಬ ಯುವಕ ಕೂಡ ಮಾದಕ ವ್ಯಸನಿಯಾಗದಂತಹ ನವಭಾರತವನ್ನು ನಿರ್ಮಿಸುವುದು ಮೋದಿ ಸರ್ಕಾರದ ಗುರಿಯಾಗಿದೆ. ಇದನ್ನು ಸಾಧಿಸಲು ರಾಜ್ಯಗಳು ಮತ್ತು ಕೇಂದ್ರ ಎರಡೂ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಇಂದು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ನಿರ್ಮಲಜಿತ್ ಸಿಂಗ್ ಸೆಖೋನ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ಸಚಿವರು ಇಡೀ ದೇಶ ಮತ್ತು ಭಾರತ ಸರ್ಕಾರದ ಪರವಾಗಿ ಸೆಖೋನ್ ಅವರಿಗೆ ಗೌರವ ನಮನ ಸಲ್ಲಿಸಿದರು.

ಎನ್‌ಸಿಬಿಯ ಅಮೃತಸರ ವಲಯ ಕಚೇರಿಗೆ 12 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಭುವನೇಶ್ವರ ಕಚೇರಿ ಉದ್ಘಾಟನೆ ಮತ್ತು ದೆಹಲಿಯಲ್ಲಿ ಹೊಸ ಕಚೇರಿ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಎನ್‌ಸಿಬಿ ಕಚೇರಿಗಳಿಗೆ ಭೂಮಿ ಒದಗಿಸುವ ಮೂಲಕ ಎನ್‌ಸಿಬಿ ಮತ್ತು ಭಾರತ ಸರ್ಕಾರದೊಂದಿಗೆ ಸಹಕರಿಸಿದ್ದಕ್ಕಾಗಿ ಒಡಿಶಾ ಸರ್ಕಾರ ಮತ್ತು ಪಂಜಾಬ್ ಸರ್ಕಾರಕ್ಕೆ ಅವರು ಧನ್ಯವಾದ ಅರ್ಪಿಸಿದರು. ಈ ಕಚೇರಿಗಳ ಮೂಲಕ ಎನ್‌ಸಿಬಿ ಈ 2  ರಾಜ್ಯಗಳಲ್ಲಿ ಡ್ರಗ್ಸ್ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸಲಿದೆ. ಮಾದಕ ವ್ಯಸನ ಮುಕ್ತ ಭಾರತ ಕುರಿತ ಸಂಕಲನವನ್ನೂ ಇಂದು ಬಿಡುಗಡೆ ಮಾಡಲಾಗಿದೆ. ನಾವು ಮಾದಕ ದ್ರವ್ಯ ಬಳಕೆ ವಿರುದ್ಧ ಜಾಗೃತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಜಿಲ್ಲಾಡಳಿತ, ಶಾಲೆಗಳು ಮತ್ತು ಎನ್‌ಜಿಒಗಳಿಗೆ ಪ್ರಸಾರ ಮಾಡಿದರೆ, ಮಾದಕ ದ್ರವ್ಯ ವ್ಯಸನ ವಿರುದ್ಧದ ಹೋರಾಟ ಇನ್ನಷ್ಟು ಬಲಗೊಳ್ಳುತ್ತದೆ. ಇದು ಕೇವಲ ಮಾದಕ ದ್ರವ್ಯಗಳನ್ನು ಹತ್ತಿಕ್ಕುವ ಅಥವಾ ಸಂಪೂರ್ಣ ವಿಜಯ ಸಾಧಿಸುವ ಹೋರಾಟವಲ್ಲ, ಆದರೆ ಈ ಹೋರಾಟದಲ್ಲಿ ಜಾಗೃತಿ ಮೂಡಿಸುವುದೇ ದೊಡ್ಡ ಗೆಲುವು ಎಂದು ಶ್ರೀ ಶಾ ಹೇಳಿದರು. ದೇಶದ ಯುವಕರು ಮತ್ತು ಪೋಷಕರ ಮನಸ್ಸಿನಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವವರೆಗೆ ನಾವು ಈ ಹೋರಾಟವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಇಂದು ಒಟ್ಟು 1,40,288 ಕೆ.ಜಿ.ಗೂ ಅಧಿಕ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದ್ದು, ಇದಕ್ಕಾಗಿ ಎಲ್ಲ ರಾಜ್ಯಗಳು, ವಿಶೇಷವಾಗಿ ಎನ್‌ಸಿಬಿ ಶ್ಲಾಘನೆಗೆ ಅರ್ಹವಾಗಿವೆ. ಈ ಅಭಿಯಾನದಡಿ ಇಂದು 2,378 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದ್ದು, ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಮಾಣದ ಡ್ರಗ್ಸ್ ಗಳನ್ನು  ನಾಶಪಡಿಸಿದ ದಾಖಲೆಯಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 1 ವರ್ಷದ ಅಮೃತ್ ಮಹೋತ್ಸವದಲ್ಲಿ 12,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 10 ಲಕ್ಷ ಕಿಲೋಗ್ರಾಂ ಮಾದಕ ದ್ರವ್ಯವನ್ನು ನಾಶಪಡಿಸಲಾಗಿದೆ ಮತ್ತು ಇದು ಸ್ವತಃ ದಾಖಲೆಯಾಗಿದೆ ಎಂದು ಶ್ರೀ ಶಾ ಹೇಳಿದರು.

ಮಾದಕ ವ್ಯಸನವನ್ನು ಸಂಪೂರ್ಣ ತಡೆಗಟ್ಟಲು ಮಾದಕ ದ್ರವ್ಯ ಪತ್ತೆ, ಜಾಲದ ನಾಶ, ಅಪರಾಧಿಗಳ ಬಂಧನ ಮತ್ತು ವ್ಯಸನಿಗಳ ಪುನರ್ವಸತಿ ವಿಷಯಕ್ಕೆ ಸಮಾನ ಗಮನದಿಂದ ಮುನ್ನಡೆಯಬೇಕು. ಪತ್ತೆ, ಧ್ವಂಸ, ಬಂಧಿಖಾನೆ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದೇವೆ, ಪುನರ್ವಸತಿಗೆ ಒತ್ತು ನೀಡದ ಹೊರತು ನಮ್ಮ ಹೋರಾಟ ಯಶಸ್ವಿಯಾಗುವುದಿಲ್ಲ. 'ಇಡೀ ಸರ್ಕಾರದ' ಧೋರಣೆಯೊಂದಿಗೆ ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ, ರಾಸಾಯನಿಕ ಮತ್ತು ಔಷಧ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಮತ್ತು ರಾಜ್ಯ ಗೃಹ ಇಲಾಖೆಗಳು ಒಗ್ಗೂಡಿ ಒಂದೇ ವೇದಿಕೆಯಲ್ಲಿ ಕೆಲಸ ಮಾಡಬೇಕು, ಆಗ ಮಾತ್ರ ಕನಸು ನನಸಾಗಲಿದೆ.  ಮಾದಕ ದ್ರವ್ಯ ವ್ಯಸನ ಮುಕ್ತ ಭಾರತವನ್ನು ಸಾಕಾರಗೊಳಿಸಬಹುದು ಮತ್ತು ನಾವು ಇದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ ಸಹಕಾರ, ಸಮನ್ವಯ, ಸಹಭಾಗಿತ್ವದೊಂದಿಗೆ ಎಲ್ಲ ಇಲಾಖೆಗಳು ‘ಸಂಪೂರ್ಣ ಸರ್ಕಾರ’ ಎಂಬ ಧೋರಣೆಯೊಂದಿಗೆ ಮುನ್ನಡೆಯಬೇಕಿದೆ ಎಂದರು.

2006ರಿಂದ 2013ರ ನಡುವೆ ಒಟ್ಟು 1,250 ಪ್ರಕರಣಗಳು ದಾಖಲಾಗಿದ್ದರೆ, 2014ರಿಂದ 2023ರ ವರೆಗಿನ 9 ವರ್ಷಗಳಲ್ಲಿ 3,700 ಪ್ರಕರಣಗಳು ದಾಖಲಾಗಿವೆ, ಇದು ಶೇಕಡ 200ರಷ್ಟು ಹೆಚ್ಚಳ ತೋರಿಸುತ್ತದೆ. ಹಿಂದಿನ ಅವಧಿಯಲ್ಲಿ ಒಟ್ಟು 1,360 ಬಂಧನಗಳನ್ನು ಮಾಡಲಾಗಿತ್ತು, ಅದು ಈಗ 5,650ಕ್ಕೆ ಏರಿದೆ, ಇದು ಶೇಕಡ 300ರಷ್ಟು ಹೆಚ್ಚಳ ತೋರಿಸುತ್ತದೆ. ಈ ಹಿಂದೆ 1.52 ಲಕ್ಷ ಕೆಜಿ ವಶಪಡಿಸಿಕೊಳ್ಳಲಾಗಿದ್ದ ಡ್ರಗ್ಸ್ ಪ್ರಮಾಣ ಈಗ ಶೇ.160ರಷ್ಟು ಏರಿಕೆಯಾಗಿದ್ದು, 3.94 ಲಕ್ಷ ಕೆಜಿಗೆ ಹೆಚ್ಚಳವಾಗಿದೆ. 2006ರಿಂದ 2013ರ ನಡುವೆ 5,900 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶವಾಗಿದ್ದರೆ, 2014ರಿಂದ 2023ರ ಅವಧಿಯಲ್ಲಿ 18,100 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ನಾಶಪಡಿಸಿರುವುದು ನಮ್ಮ ಅಭಿಯಾನದ ಯಶಸ್ಸನ್ನು ತೋರಿಸುತ್ತದೆ ಎಂದರು.

ಈಗ ಭಾರತದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ "ಗೋಲ್ಡನ್ ಟ್ರಯಾಂಗಲ್" ಮತ್ತು "ಗೋಲ್ಡನ್ ಕ್ರೆಸೆಂಟ್" ಪದಗಳನ್ನು "ಡೆತ್ ಟ್ರಯಾಂಗಲ್" ಮತ್ತು "ಡೆತ್ ಕ್ರೆಸೆಂಟ್" ಎಂದು ಬದಲಾಯಿಸಿದ್ದೇವೆ. ಮಾದಕವಸ್ತು ಕಳ್ಳಸಾಗಣೆದಾರರಿಗೆ ಗೋಲ್ಡನ್ ಟ್ರಯಾಂಗಲ್ ಎಂಬ ಹೆಸರು ಅನ್ವಯಿಸಬಹುದು, ಆದರೆ ಮಾದಕವಸ್ತು ಸೇವನೆ ನಿಯಂತ್ರಿಸುವ ಪರವಾಗಿ ಇರುವವರಿಗೆ "ಡೆತ್ ಟ್ರಯಾಂಗಲ್" ಮತ್ತು "ಡೆತ್ ಕ್ರೆಸೆಂಟ್" ಎಂಬ ಪದಗಳು ಸೂಕ್ತವಾಗಿವೆ. ಈ ವಿಧಾನವು ಕೇವಲ ಸಾಂಕೇತಿಕವಲ್ಲ, ಇದು ಮಾದಕ ದ್ರವ್ಯ ವ್ಯಸನ ವಿರುದ್ಧದ ನಮ್ಮ ಹೋರಾಟದ ತೀವ್ರತೆ ಮತ್ತು ದಿಕ್ಕನ್ನು ಪ್ರತಿನಿಧಿಸುತ್ತದೆ. ಮಾದಕ ವಸ್ತುಗಳ ನಿರ್ಮೂಲನೆಗೆ ನಿರಂತರ ನಿಗಾ ಅಗತ್ಯ. ಉತ್ತಮ ಸಮನ್ವಯಕ್ಕಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿರುವ ಎನ್‌ಸಿಒಆರ್‌ಡಿ ಸಭೆಗಳ ನಿರಂತರತೆ ಕಾಪಾಡಲು ಒತ್ತು ನೀಡುವಂತೆ ಅವರು ಎಲ್ಲರಿಗೂ ಮನವಿ ಮಾಡಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸರ್ಕಾರವು 2019 ರಲ್ಲಿ ನಾರ್ಕೋ ಸಮನ್ವಯ ಕೇಂದ್ರವನ್ನು (ಎನ್‌ಸಿಒಆರ್‌ಡಿ) ಸ್ಥಾಪಿಸಿದೆ. ಇದು ನಾಲ್ಕು ವಿಭಿನ್ನ ಹಂತಗಳಲ್ಲಿ ಸಭೆಗಳನ್ನು ನಡೆಸುತ್ತದೆ. ಜಿಲ್ಲಾ ಮಟ್ಟದ ಎನ್‌ಸಿಒಆರ್‌ಡಿ ಸಭೆಗಳು ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ. ಹಣಕಾಸು ತನಿಖೆಯಲ್ಲಿ ರಾಜ್ಯಗಳು ಜಾರಿ ನಿರ್ದೇಶನಾಲಯ(ಇಡಿ)ದೊಂದಿಗೆ ಸಹಕರಿಸಬೇಕು ಮತ್ತು ಪ್ರಕರಣಗಳನ್ನು ಇಡಿಗೆ ವರ್ಗಾಯಿಸಬೇಕು. ನಾವು ಮಾದಕವಸ್ತು ಕಳ್ಳಸಾಗಣೆದಾರರ ಆರ್ಥಿಕ ತನಿಖೆ ನಡೆಸುವವರೆಗೆ ಮತ್ತು ಅವರ ಆಸಕ್ತಿ ಸರಪಳಿ ಮುರಿಯುವವರೆಗೂ ನಮ್ಮ ಅಭಿಯಾನ ಯಶಸ್ವಿಯಾಗುವುದಿಲ್ಲ. ಮಾದಕ ದ್ರವ್ಯ ಸೇವಿಸುವವರನ್ನು ಸಂತ್ರಸ್ತರೆಂದು ಪರಿಗಣಿಸಿ, ದಂಧೆಯಲ್ಲಿ ತೊಡಗುವವರನ್ನು ಅಪರಾಧಿಗಳೆಂದು ಗುರುತಿಸುವ ರೀತಿಯಲ್ಲಿ ನಮ್ಮ ಧೋರಣೆ ಇರಬೇಕು ಎಂದು ಪ್ರತಿಪಾದಿಸಿದರು. ಮಾದಕ ದ್ರವ್ಯ ಸೇವಿಸುವವರು ಬಲಿಪಶುಗಳಾಗಿದ್ದು, ಅವರನ್ನು ಶಾಶ್ವತವಾಗಿ ವ್ಯಸನಿಗಳಾಗಲು ಬಿಡುವುದಕ್ಕಿಂತ ಅವರನ್ನು ಸರಿದಾರಿಗೆ ತರುವ ಪ್ರಯತ್ನವನ್ನು ನಮ್ಮ ವ್ಯವಸ್ಥೆಗಳು ಮಾಡಬೇಕು ಎಂದರು.

ನಾವು ಮಾದಕ ವಸ್ತುಗಳ ಮುಟ್ಟುಗೋಲು ಅಥವಾ ವಶ ಮಾಹಿತಿ ನಿರ್ವಹಣಾ ವ್ಯವಸ್ಥೆ (ಸಿಮ್ಸ್) ಇ-ಪೋರ್ಟಲ್ ಅನ್ನು ಸಹ ರೂಪಿಸಿದ್ದೇವೆ, ನಾವೆಲ್ಲರೂ ಅದನ್ನು ಬಳಸಿಕೊಳ್ಳಬೇಕು. ಕೇಂದ್ರೀಕೃತ NCORD ಪೋರ್ಟಲ್ ಮಾಹಿತಿಯನ್ನು ಪೊಲೀಸ್ ಠಾಣೆಗಳಿಗೆ ರವಾನಿಸಬೇಕು. ಬಂಧಿತ ನಾರ್ಕೋ ಅಪರಾಧಿಗಳ ರಾಷ್ಟ್ರೀಯ ಸಮಗ್ರ ಡೇಟಾಬೇಸ್ (NIDAAN) ಎಂಬ ಏಕೀಕೃತ ಡೇಟಾಬೇಸ್ ಮತ್ತು ರಾಷ್ಟ್ರೀಯ ಸ್ವಯಂಚಾಲಿತ ಫಿಂಗರ್‌ಪ್ರಿಂಟ್ ಐಡೆಂಟಿಫಿಕೇಶನ್ ಸಿಸ್ಟಮ್ (NAFIS) ಎಂದು ಕರೆಯಲ್ಪಡುವ ಫಿಂಗರ್‌ಪ್ರಿಂಟ್‌ಗಳಿಗಾಗಿ ಮತ್ತೊಂದು ಡೇಟಾಬೇಸ್ ಅನ್ನು ವ್ಯಾಪಕವಾಗಿ ಬಳಸಬೇಕು. 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಮರ್ಪಿತ ಮಾದಕವಸ್ತು ವಿರೋಧಿ ಕಾರ್ಯಪಡೆಗಳನ್ನು (ANTF) ಸ್ಥಾಪಿಸಿವೆ, ನಾವು ಅವುಗಳನ್ನು ಪ್ರಶಂಸಿಸಬೇಕು. ನಾವು ರಾಷ್ಟ್ರೀಯ ನಾರ್ಕೋಟಿಕ್ಸ್ ಕೆ9 ಪೂಲ್ ಅನ್ನು ಸಹ ಸ್ಥಾಪಿಸಿದ್ದೇವೆ. ರಾಜ್ಯಗಳು ಈ ಉಪಕ್ರಮವನ್ನು ಮುಂದಕ್ಕೆ ಕೊಂಡೊಯ್ದರೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅವರಿಗೆ ತರಬೇತಿ ನೀಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ರಾಜ್ಯಗಳು ಮಾದಕ ದ್ರವ್ಯಗಳ ವಿರುದ್ಧ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಮತ್ತು ತ್ವರಿತ ಕ್ರಮದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಕಠಿಣ ಶಿಕ್ಷೆಯು ಬಲವಾದ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಜತೆಗೆ, ಅದು ಬಲವಾದ ಸಂದೇಶವನ್ನು ನೀಡುತ್ತದೆ. ಅಕ್ರಮವೋಗಿ ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟ ದಂಧೆಯಲ್ಲಿ ತೊಡಗಿರುವವರ ಆಸ್ತಿ ಮುಟ್ಟುಗೋಲು ಹೆಚ್ಚಿಸಬೇಕು ಎಂದು ಶ್ರೀ ಶಾ ಹೇಳಿದರು. ಈ ವ್ಯಕ್ತಿಗಳ ಸಾರ್ವಜನಿಕ ಅವಮಾನ, ಬಹಿಷ್ಕಾರವು ಇತರರನ್ನು ಈ ವ್ಯಾಪಾರಕ್ಕೆ ಸೇರಿದಂತೆ ನಿರುತ್ಸಾಹಗೊಳಿಸುತ್ತದೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವತ್ತ ನಿರ್ದಾಕ್ಷಿಣ್ಯವಾಗಿ ಸಾಗಬೇಕಾಗಿದೆ. ನಾವು ವಿಧಿವಿಜ್ಞಾನ ಪ್ರಯೋಗಾಲಯಗಳನ್ನು (ಎಫ್‌ಎಸ್‌ಎಲ್) ಬಲಪಡಿಸುವವರೆಗೆ, ಪ್ರಾಸಿಕ್ಯೂಷನ್ ಪ್ರಗತಿಯಾಗುವುದಿಲ್ಲ. ಇದು ಉಪಕ್ರಮದ ಪ್ರಶ್ನೆಯೇ ಹೊರತು ಸಂಪನ್ಮೂಲಗಳಲ್ಲ ಎಂದು ಅವರು ಒತ್ತಿ ಹೇಳಿದರು. ಅದೇ ರೀತಿ ಅಕ್ರಮ ಸಾಗುವಳಿ ನಿರ್ಮೂಲನೆಗೆ ಅದರಲ್ಲೂ ಉತ್ತರ ಭಾಗದಲ್ಲಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ವಿಶೇಷ ಗಮನ ಹರಿಸಬೇಕಿದೆ. ಮಾದಕ ದ್ರವ್ಯ ಸೇವನೆ ವಿರುದ್ಧದ ನಮ್ಮ ಅಭಿಯಾನವು ದೇಶದ ಭವಿಷ್ಯದ ಪೀಳಿಗೆಯನ್ನು ಉಳಿಸಲು, ರಾಷ್ಟ್ರವನ್ನು ಸುರಕ್ಷಿತವಾಗಿಡುವ ಪವಿತ್ರ ಧ್ಯೇಯವಾಗಿದೆ. ಇದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

 

 

*****

 


(Release ID: 1940408) Visitor Counter : 244