ಸಹಕಾರ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಇಂದು ಸಹಕಾರಿ ವಲಯದಲ್ಲಿ ʻವ್ಯವಸಾಯ ಉತ್ಪನ್ನ ಸಂಸ್ಥೆʼ(ಎಫ್‌ಪಿಒ) ಕುರಿತ ರಾಷ್ಟ್ರೀಯ ಮೆಗಾ ಸಮ್ಮೇಳನವನ್ನು ಉದ್ಘಾಟಿಸಿದರು, ಇದೇ ವೇಳೆ ʻಪ್ರಾಥಮಿಕ ಕೃಷಿ ಸಾಲ ಸಂಘʼಗಳಿಂದ(ಪಿಎಸಿಎಸ್‌) 1100 ಹೊಸ ʻಎಫ್‌ಪಿಒʼಗಳ ಸ್ಥಾಪನೆಯ ಬಗ್ಗೆ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಿದರು.


​​​​​​​ಮೋದಿ ಸರ್ಕಾರವು ʻಪಿಎಸಿಎಸ್ʼಗಳ ಮೂಲಕ ಸ್ಥಾಪಿಸಲಾದ ʻಎಫ್‌ಪಿಒʼಗಳಿಗೆ ಉತ್ಪಾದನೆಯಿಂದ ಮಾರುಕಟ್ಟೆವೆರೆಗೆ ಸಂಪೂರ್ಣ ವ್ಯವಸ್ಥೆಗಳನ್ನು ಕಲ್ಪಿಸಿದೆ

ʻಪಿಎಸಿಎಸ್ʼ ಮೂಲಕ ಸ್ಥಾಪಿಸಲಾದ ʻಎಫ್‌ಪಿಒʼಗಳು ರೈತರನ್ನು ಸಮೃದ್ಧರನ್ನಾಗಿ ಮಾಡುವ ಅತ್ಯುನ್ನತ ಸಾಮರ್ಥ್ಯವನ್ನು ಹೊಂದಿವೆ

ʻಪಿಎಸಿಎಸ್ʼ, ʻಎಫ್‌ಪಿಒʼಗಳು ಹಾಗೂ ʻಸ್ವಸಹಾಯ ಸಂಘಗಳʼ(ಎಸ್‌ಎಚ್‌ಜಿ) ಮೂಲಕ ಮೂರು ಹಂತದ ಗ್ರಾಮೀಣಾಭಿವೃದ್ಧಿ ಮತ್ತು ಸಮೃದ್ಧಿಯ ಮಂತ್ರದೊಂದಿಗೆ ಕೃಷಿ ಸಚಿವಾಲಯ ಮತ್ತು ಸಹಕಾರ ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡುತ್ತವೆ

ನಾವು ಸಾಂಪ್ರದಾಯಿಕ ವಿಧಾನಗಳಿಂದ ದೂರ ಸರಿಯಬೇಕು ಮತ್ತು ದೇಶದ ಅತಿಸಣ್ಣ ರೈತರನ್ನು ಸಮೃದ್ಧರನ್ನಾಗಿ ಮಾಡಲು ಕಾಲಕ್ಕೆ ತಕ್ಕಂತೆ ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ʻಪಿಎಸಿಗಳʼಗಳ ಮೂಲಕ ʻಎಫ್‌ಪಿಒʼ ಸ್ಥಾಪನೆಯು ಈ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಯಾಗಿದೆ

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರ ಚಳವಳಿಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡಬಹುದು, ಬಂಡವಾಳವಿಲ್ಲದ ಜನರನ್ನು ಶ್ರೀಮಂತರನ್ನಾಗಿ ಮಾಡಲು ಇದು ಉತ್ತಮ ಮಾಧ್ಯಮವಾಗಬಲ್ಲದು

ಸಹಕಾರಿ ಸಂಘಗಳ ಮೂಲಕ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆಯನ್ನು ಬಲಪಡಿಸಿದರೆ, ʻಜಿಡಿಪಿʼ ಜೊತೆಗೆ ಉದ್ಯೋಗಾವಕಾಶಗಳು ಸಹ ಹೆಚ್ಚಾಗುತ್ತವೆ.

ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಆಧಾರಿತ ಆರ್ಥಿಕ ಚಟುವಟಿಕೆಗಳು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿವೆ. ಈ 3 ವಲಯಗಳು ಒಟ್ಟಾಗಿ ಇಂದು ಭಾರತದ ಜಿಡಿಪಿಯ 18% ರಷ್ಟಿವೆ, ಅವುಗಳನ್ನು ಬಲಪಡಿಸುವುದು ಎಂದರೆ ದೇಶದ ಆರ್ಥಿಕತೆಯನ್ನು ಬಲಪಡಿಸುವುದು ಎಂದರ್ಥ.

ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, 10 ವರ್ಷಗಳಲ್ಲಿ ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ 55% ಮತ್ತು ಗೋಧಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ 51% ಹೆಚ್ಚಳವಾಗಿದೆ. ಸ್ವಾತಂತ್ರ್ಯದ ನಂತರ ರೈತರು ಕೃಷಿಗೆ ಮಾಡಿದ ವೆಚ್ಚಕ್ಕಿಂತ ಕನಿಷ್ಠ 50% ಹೆಚ್ಚಿನ ಲಾಭವನ್ನು ಬೆಂಬಲ ಬೆಲೆ ರೂಪದಲ್ಲಿ ನಿಗದಿಪಡಿಸಿದ ಮೊದಲ ಸರ್ಕಾರ ಮೋದಿ ಸರ್ಕಾರವಾಗಿದೆ.

Posted On: 14 JUL 2023 3:56PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಸಹಕಾರಿ ವಲಯದಲ್ಲಿ ʻವ್ಯವಸಾಯ ಉತ್ಪನ್ನ ಸಂಸ್ಥೆʼ(ಎಫ್‌ಪಿಒ) ಕುರಿತ ರಾಷ್ಟ್ರೀಯ ಮೆಗಾ ಸಮ್ಮೇಳನವನ್ನು ಉದ್ಘಾಟಿಸಿದರು. ಇದೇ ವೇಳೆ ʻಪ್ರಾಥಮಿಕ ಕೃಷಿ  ಸಾಲ ಸಂಘʼಗಳಿಂದ 1100 ಹೊಸ ʻಎಫ್‌ಪಿಒʼಗಳನ್ನು ಸ್ಥಾಪಿಸುವ ಕ್ರಿಯಾ ಯೋಜನೆಯನ್ನು ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ಸಹಕಾರ ಖಾತೆ ಸಹಾಯಕ ಸಚಿವ ಶ್ರೀ ಬಿ.ಎಲ್.ವರ್ಮಾ, ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಜ್ಞಾನೇಶ್ ಕುಮಾರ್ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು ಇತರೆ ನಾನಾ ಗಣ್ಯರೊಂದಿಗೆ ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಭಿನ್ನ ದೃಷ್ಟಿಕೋನದೊಂದಿಗೆ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಶ್ರೀ ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದರು. ನಮ್ಮ ದೇಶದಲ್ಲಿ ಸಹಕಾರ ಚಳವಳಿ ಬಹಳ ಹಳೆಯದು. ಆದರೆ ಸ್ವಾತಂತ್ರ್ಯದ 75 ವರ್ಷಗಳ ನಂತರ, ನಾವು ಹಿಂತಿರುಗಿ ನೋಡಿದರೆ, ದೇಶದಲ್ಲಿ ಸಹಕಾರಿ ಚಳುವಳಿಯು ಅನೇಕ ಭಾಗಗಳಾಗಿ ವಿಭಜನೆಗೊಂಡಿರುವುದು ಕಂಡುಬರುತ್ತದೆ ಎಂದು ಅವರು ಹೇಳಿದರು. ಸಹಕಾರಿ ಸಂಸ್ಥೆಗಳ ದೃಷ್ಟಿಕೋನದಿಂದ, ದೇಶವನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು - ಸಹಕಾರಿ ಆಂದೋಲನವು ತನ್ನನ್ನು ತಾನು ಮುನ್ನಡೆಸುವಲ್ಲಿ ಮತ್ತು ಬಲಪಡಿಸುವಲ್ಲಿ ಯಶಸ್ವಿಯಾಗಿರುವ ರಾಜ್ಯಗಳು; ಸಹಕಾರಿ ಚಳವಳಿ ಇನ್ನೂ ನಡೆಯುತ್ತಿರುವ ರಾಜ್ಯಗಳು; ಮತ್ತು ಸಹಕಾರಿ ಆಂದೋಲನವು ಬಹುತೇಕ ಅವಸಾನಗೊಂಡಿರುವ ರಾಜ್ಯಗಳು. ಸುಮಾರು 65 ಕೋಟಿ ಜನರು ಕೃಷಿಯಲ್ಲಿ ತೊಡಗಿರುವ ಇಷ್ಟು ದೊಡ್ಡ ದೇಶದಲ್ಲಿ, ಸಹಕಾರಿ ಚಳವಳಿಯನ್ನು ಪುನರುಜ್ಜೀವನಗೊಳಿಸುವುದು, ಅದನ್ನು ಆಧುನೀಕರಿಸುವುದು, ಅದರಲ್ಲಿ ಪಾರದರ್ಶಕತೆಯನ್ನು ತರುವುದು ಹಾಗೂ ಅದು ಹೊಸ ಎತ್ತರವನ್ನು ಸಾಧಿಸುವ ಗುರಿ ಹೊಂದಿರುವುದು ಅತ್ಯವಶ್ಯಕ ಎಂದು ಶ್ರೀ ಶಾ ಹೇಳಿದರು. ಸಹಕಾರಿ ಆಂದೋಲನದ ಮೂಲಕ ಮಾತ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಮಾಡಬಹುದು ಎಂದು ಅವರು ಹೇಳಿದರು. ಯಾರ ಬಳಿಯೇ ಆದರೂ ಬಂಡವಾಳವಿದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ, ಆದರೆ ಕಷ್ಟಪಟ್ಟು ಕೆಲಸ ಮಾಡುವ ಧೈರ್ಯ, ಉತ್ಸಾಹ ಮತ್ತು ತಮ್ಮನ್ನು ತಾವು ಮುಂದೆ ಕೊಂಡೊಯ್ಯುವ ಸಾಮರ್ಥ್ಯವನ್ನು ಅವರು ಹೊಂದಿದ್ದರೆ, ಬಂಡವಾಳದ ಕೊರತೆಯಿರುವ ಅಂತಹ ಜನರನ್ನು ಸಮೃದ್ಧರನ್ನಾಗಿಸಲು ಸಹಕಾರಿ ಆಂದೋಲನವು ಉತ್ತಮ ಮಾಧ್ಯಮವಾಗಿದೆ ಎಂದು ಶ್ರೀ ಶಾ ಹೇಳಿದರು. ಕೃಷಿಯಲ್ಲಿ ತೊಡಗಿರುವ ದೇಶದ 65 ಕೋಟಿ ಜನರನ್ನು ಬಲಪಡಿಸಲು ಸಹಕಾರಿ ಆಂದೋಲನವು ಮಹತ್ವದ ಕೊಡುಗೆ ನೀಡಬಲ್ಲದು. ಜೊತೆಗೆ ಸಹಕಾರಿಗಳ ಮೂಲಕ ಅವರ ಸಣ್ಣ ಬಂಡವಾಳವನ್ನು ಸಂಯೋಜಿಸಿ, ದೊಡ್ಡ ಬಂಡವಾಳವಾಗಿ ಪರಿವರ್ತಿಸುವ ಮೂಲಕ ಅವರನ್ನು ಸಮೃದ್ಧರನ್ನಾಗಿ ಮಾಡುವಲ್ಲೂ ಸಹಕಾರ ಕ್ಷೇತ್ರವು ಕೊಡುಗೆ ನೀಡಬಲ್ಲದು ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಹಕಾರ ಸಚಿವಾಲಯವು ಕಳೆದ ಎರಡು ವರ್ಷಗಳಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಸಹಕಾರ ಸಚಿವರು ಮಾಹಿತಿ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರ ನಾಯಕತ್ವದಲ್ಲಿ ದೇಶದಲ್ಲಿ ʻಎಫ್‌ಪಿಓʼಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು ಎಂದರು. ಪ್ರಧಾನಮಂತ್ರಿಯಾದ ನಂತರ ಶ್ರೀ ನರೇಂದ್ರ ಮೋದಿ ಅವರು ಕೃಷಿಯನ್ನು ಬಲಪಡಿಸಲು ಮತ್ತು ರೈತರನ್ನು ಶ್ರೀಮಂತರನ್ನಾಗಿ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡರು ಮತ್ತು ಅವುಗಳಲ್ಲಿ ʻಎಫ್‌ಪಿಒʼಗಳ ಸ್ಥಾಪನೆಯೂ ಒಂದಾಗಿದೆ ಎಂದು ಅವರು ಹೇಳಿದರು. ಇವುಗಳ ಮೂಲಕ ರೈತರು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ, ಆದರೆ ಸಹಕಾರಿ ಕ್ಷೇತ್ರದಲ್ಲಿ, ʻಎಫ್‌ಪಿಒʼ ಮತ್ತು ಅದರ ಪ್ರಯೋಜನಗಳು ಬಹಳ ಸೀಮಿತ ವ್ಯಾಪ್ತಿಯನ್ನು ತಲುಪಿವೆ, ನಾವು ಈ ನಿಟ್ಟಿನಲ್ಲಿ ಯಾವುದೇ ಗುರಿಯನ್ನು ನಿಗದಿಪಡಿಸದ ಕಾರಣ ಹೀಗಾಗಿದೆ ಎಂದರು. ʻಪಿಎಸಿಎಸ್‌ʼಗಳು ʻಎಫ್‌ಪಿಒʼ ಆಗಿ ಮಾರ್ಪಟ್ಟರೆ, ಆಗ ʻಎಫ್‌ಪಿಒʼನ ಪ್ರಯೋಜನಗಳು ʻಪಿಎಸಿಎಸ್‌ʼನ ಎಲ್ಲ ರೈತರಿಗೆ ತಲುಪುತ್ತವೆ ಎಂದು ಶ್ರೀ ಶಾ ವಿಶ್ವಾಸ ವ್ಯಕ್ತಪಡಿಸಿದರು. ʻಪಿಎಸಿಎಸ್ʼಗಳ ಮೂಲಕ ಸ್ಥಾಪನೆಗೊಂಡ ʻಎಫ್‌ಪಿಒʼಗಳು ರೈತರನ್ನು ಸಮೃದ್ಧರನ್ನಾಗಿ ಮಾಡುವ ಗರಿಷ್ಠ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಅಭಿಪ್ರಾಯಪಟ್ಟರು. ಮುಂಬರುವ ದಿನಗಳಲ್ಲಿ, ʻಪಿಎಸಿಎಸ್ʼ, ʻಎಫ್‌ಪಿಒʼಗಳು ಮತ್ತು ಸ್ವಸಹಾಯ ಸಂಘಗಳ (ʻಎಸ್‌ಎಚ್‌ಜಿʼ) ಮೂಲಕ ಮೂರು ಹಂತದ ಗ್ರಾಮೀಣಾಭಿವೃದ್ಧಿ ಮತ್ತು ಸಮೃದ್ಧಿಯ ಮಂತ್ರದೊಂದಿಗೆ ಕೃಷಿ ಸಚಿವಾಲಯ ಹಾಗೂ ಸಹಕಾರ ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡಲಿವೆ. ಯಾವುದೇ ʻಪಿಎಸಿಎಸ್ʼ, ʻಎಫ್‌ಪಿಒʼ ಆಗಲು ಬಯಸಿದರೆ ʻಎನ್‌ಸಿಡಿಸಿʼ ಅವರಿಗೆ ಸಹಾಯ ಮಾಡಲಿದೆ. ಇದಕ್ಕೆ ಯಾವುದೇ ಮಿತಿಯಿಲ್ಲ ಮತ್ತು ಈ ಸಮ್ಮೇಳನವು ದೇಶದಲ್ಲಿ ಸಹಕಾರಿ ಆಂದೋಲನವನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂದು ಸಚಿವರು ಹೇಳಿದರು.

ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಆಧಾರಿತ ಆರ್ಥಿಕ ಚಟುವಟಿಕೆಗಳು ಭಾರತೀಯ ಆರ್ಥಿಕತೆಯ ಶಕ್ತಿಯಾಗಿವೆ. ಆದರೆ ಅವುಗಳ ಬಗ್ಗೆ ದೇಶದಲ್ಲಿ ಎಂದಿಗೂ ಚರ್ಚಿಸಲಾಗಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು ಈ ಮೂರು ವಲಯಗಳು ಒಟ್ಟಾರೆಯಾಗಿ ಭಾರತದ ಜಿಡಿಪಿಯ ಶೇ.18 ರಷ್ಟಿವೆ ಎಂದು ಅವರು ಮಾಹಿತಿ ನೀಡಿದರು. ಒಂದು ರೀತಿಯಲ್ಲಿ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ದೇಶದ ಆರ್ಥಿಕತೆಯ ಬೆನ್ನೆಲುಬಾಗಿವೆ ಮತ್ತು ಅವುಗಳನ್ನು ಬಲಪಡಿಸುವುದು ಎಂದರೆ ದೇಶದ ಆರ್ಥಿಕತೆಯನ್ನು ಬಲಪಡಿಸಿದಂತೆ ಎಂದು ಶ್ರೀ ಶಾ ಹೇಳಿದರು. ಕೈಗಾರಿಕಾ ಉತ್ಪಾದನೆಯ ಮೂಲಕ ʻಜಿಡಿಪಿʼ ಹೆಚ್ಚಾದರೆ, ಉದ್ಯೋಗಗಳು ಅಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚಾಗುವುದಿಲ್ಲ. ಆದರೆ, ಸಹಕಾರಿ ಸಂಸ್ಥೆಗಳ ಮೂಲಕ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆಯನ್ನು ಬಲಪಡಿಸಿದರೆ, ʻಜಿಡಿಪಿʼ ಜೊತೆಗೆ ಉದ್ಯೋಗಾವಕಾಶಗಳು ಸಹ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತವೆ ಎಂದು ಅವರು ಹೇಳಿದರು.

ಭಾರತದಲ್ಲಿ ಸುಮಾರು 65 ಪ್ರತಿಶತದಷ್ಟು ಜನರು ನೇರವಾಗಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 55 ಪ್ರತಿಶತದಷ್ಟು ಉದ್ಯೋಗಿಗಳು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇತರ ಎಲ್ಲಾ ಸೇವೆಗಳು ಸಹ ಗ್ರಾಮೀಣ ಪ್ರದೇಶಗಳಲ್ಲಿ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತವಾಗಿವೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು ಹೇಳಿದರು. ಇಂದು ದೇಶದ ಶೇ.86ರಷ್ಟು ರೈತರು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದು, ಅವರು ಒಂದು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದಾರೆ. ಇಡೀ ವಿಶ್ವದಲ್ಲಿ ಸಣ್ಣ ರೈತರಿಗೆ ಕಾರ್ಮಿಕರಾಗಲು ಅವಕಾಶ ನೀಡದೆ, ಅವರನ್ನು ಭೂಮಿಯ ಮಾಲೀಕರನ್ನಾಗಿಸಿದ ಏಕೈಕ ದೇಶ ಭಾರತವಾಗಿದೆ ಎಂದು ಅವರು ಹೇಳಿದರು. ಕೃಷಿಯನ್ನು ಆಧುನೀಕರಿಸಲು, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಮತ್ತು ಕೃಷಿಯನ್ನು ಲಾಭದಾಯಕವಾಗಿಸಲು, ನಾವು ಸಾಂಪ್ರದಾಯಿಕ ವಿಧಾನಗಳಿಂದ ಹೊರಬಂದು ಇಂದಿನ ಸಮಕಾಲೀನ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ʻಪಿಎಸಿಎಸ್ʼಗಳನ್ನು ʻಎಫ್‌ಪಿಒʼಗಳಾಗಿ ಪರಿವರ್ತಿಸುವುದು ಈ ನಿಟ್ಟಿನಲ್ಲಿ ಹೊಸ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

ಸೇವಾ ಕ್ಷೇತ್ರದಲ್ಲಿ ತೊಡಗಿರುವ ಜನರಂತೆಯೇ ಕೃಷಿಗೆ ಸಂಬಂಧಿಸಿದ ಎಲ್ಲರ ಜೀವನವೂ ಆರಾಮದಾಯಕವಾಗಿರುವಂತೆ ಖಚಿತಪಡಿಸಿಕೊಳ್ಳುವುದು ಸರ್ಕಾರ ಮತ್ತು ಸಹಕಾರಿ ವಲಯದ ಸಂಪೂರ್ಣ ಜವಾಬ್ದಾರಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2003ರಲ್ಲಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಯೋಗೇಂದ್ರ ಅಲಗ್ ಸಮಿತಿಯು ʻಎಫ್‌ಪಿಒʼ ಪರಿಕಲ್ಪನೆಯನ್ನು ರೂಪಿಸಿತು. ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದಾಗ, ʻಎಫ್‌ಪಿಒʼ ಸಲಹೆಯನ್ನು ಜಾರಿಗೆ ತರಲು ನಿರ್ಧರಿಸಿದರು ಎಂದು ಅವರು ಹೇಳಿದರು. ಇಂದು ದೇಶದಲ್ಲಿ 11,770 ʻಎಫ್‌ಪಿಒʼಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ದೇಶದ ಲಕ್ಷಾಂತರ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ರೀ ಶಾ ಹೇಳಿದರು. 10,000 ʻಎಫ್‌ಪಿಒʼಗಳನ್ನು ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, 2027ರ ವೇಳೆಗೆ ಈ ಗುರಿಯನ್ನು ಸಾಧಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರವು ಈ ಗುರಿಯನ್ನು ಸಾಧಿಸಲು 6900 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ ಎಂದು ಅವರು ಮಾಹಿತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃಷಿಯ ಉತ್ಪಾದನೆಗೆ ಬಳಸುವ ಪದಾರ್ಥಗಳಿಂದ (ಇನ್‌ಪುಟ್‌), ಕೃಷಿಯ ಅಂತಿಮ ಉತ್ಪನ್ನದವರೆಗೆ (ಔಟ್‌ಪುಟ್‌), ಉತ್ಪಾದನೆಯಿಂದ ಸಂಸ್ಕರಣೆ ಮತ್ತು ಗ್ರೇಡಿಂಗ್‌ವರೆಗೆ ಮತ್ತು ಪ್ಯಾಕೇಜಿಂಗ್‌ನಿಂದ ಮಾರ್ಕೆಟಿಂಗ್ ಮತ್ತು ಸಂಗ್ರಹದವರೆಗೆ, ಅಂದರೆ ಕೃಷಿ ಉತ್ಪಾದನೆಯಿಂದ ಮಾರುಕಟ್ಟೆಯವರೆಗೆ ಸಂಪೂರ್ಣ ವ್ಯವಸ್ಥೆಯು ʻಎಫ್‌ಪಿಒʼ ಅಡಿಯಲ್ಲಿ ಇರಬೇಕು ಎಂಬ ಪರಿಕಲ್ಪನೆ ಹೊಂದಿದ್ದಾರೆ ಎಂದು ಶ್ರೀ ಶಾ ಹೇಳಿದರು. ಇನ್‌ಪುಟ್‌ ಸಂಗ್ರಹಣೆ, ಮಾರುಕಟ್ಟೆ ಮಾಹಿತಿ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಸರಣ, ಕೃಷಿ ಉತ್ಪಾದನೆಗಾಗಿ ಸಾಮಗ್ರಿಗಳ ಒಟ್ಟುಗೂಡಿಸುವಿಕೆ, ಸಂಗ್ರಹಣೆ, ಒಣಗಿಸುವಿಕೆ, ಶುಚಿಗೊಳಿಸುವಿಕೆ ಮತ್ತು ಶ್ರೇಣೀಕರಣದ ಸೌಲಭ್ಯಗಳನ್ನು ʻಎಫ್‌ಪಿಒʼಗಳು ಮಾಡುತ್ತಿವೆ ಎಂದು ಶ್ರೀ ಶಾ ಹೇಳಿದರು. ʻಎಫ್‌ಪಿಒʼಗಳು ಬ್ರಾಂಡ್ ನಿರ್ಮಾಣ ಮತ್ತು ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಪ್ರಮಾಣೀಕರಣ ಪ್ರಕ್ರಿಯೆಗಳು, ಗುಣಮಟ್ಟ ನಿಯಂತ್ರಣದ ಜೊತೆಗೆ ಸಾಂಸ್ಥಿಕ ಖರೀದಿದಾರರು ಮತ್ತು ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಸಹಯೋಗ ಹೊಂದುವ ಮೂಲಕ ರೈತರಿಗೆ ಹೆಚ್ಚಿನ ಬೆಲೆ ಪಡೆಯಲು ವ್ಯವಸ್ಥೆ ಮಾಡಿವೆ. ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಮೂಲಕ ʻಎಫ್‌ಪಿಒʼಗಳು ಯೋಜನೆಗಳ ಪ್ರಸಾರ ಮಾಧ್ಯಮವಾಗಿ ಮಾರ್ಪಟ್ಟಿವೆ ಎಂದರು.

ದೇಶದ ಎಲ್ಲಾ ʻಎಫ್‌ಪಿಒʼಗಳಿಗೆ ಇದೇ ರೀತಿಯಲ್ಲಿ ಕೆಲಸ ಮುಂದುವರಿಸುವಂತೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಕರೆ ನೀಡಿದರು. ಇದೇ ವೇಳೆ, ʻಪಿಎಸಿಎಸ್ʼ ಜತೆ ಸಂಯೋಜಿಸುವುದನ್ನು ಮುಂದುವರಿಸುವಂತೆಯೂ ಕೋರಿದರು. ʻಪಿಎಸಿಎಸ್ʼ ಮತ್ತು ʻಎಫ್‌ಪಿಒʼ ನಡುವೆ ಮಾಹಿತಿ ವಿನಿಮಯ, ಲಾಭ ಹಂಚಿಕೆ ಮತ್ತು ಮಾರ್ಕೆಟಿಂಗ್‌ಗಾಗಿ ಸಂಪೂರ್ಣ ವ್ಯವಸ್ಥೆಗಾಗಿ ರೂಪಿಸಲು ಹೊಸ ಹೈಬ್ರಿಡ್ ಮಾದರಿಯನ್ನು ವಿನ್ಯಾಸಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಈವರೆಗೆ ʻಎಫ್‌ಪಿಒʼಗಳಿಗೆ 127 ಕೋಟಿ ರೂ.ಗಳಿಗೂ ಅಧಿಕ ಸಾಲವನ್ನು ಒದಗಿಸಿದೆ. ಇದು 6,900 ಕೋಟಿ ರೂ. ಹೆಚ್ಚುವರಿ ಮೊತ್ತವಾಗಿದೆ ಎಂದು ಶ್ರೀ ಶಾ ಹೇಳಿದರು. ಬುಡಕಟ್ಟು ಜಿಲ್ಲೆಗಳಲ್ಲಿ, ಅರಣ್ಯ ಉತ್ಪನ್ನಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ 922 ʻಎಫ್‌ಪಿಒʼಗಳನ್ನು ಸ್ಥಾಪಿಸಲಾಗಿದೆ. ಇದು ಮೋದಿ ಸರ್ಕಾರ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಎಷ್ಟು ನಿಖರವಾಗಿ ಮುನ್ನಡೆದಿದ್ದಾರೆ ಎಂಬುದನ್ನು ತೋರಿಸುತ್ತದೆ. ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳು ʻಎಫ್‌ಪಿಒʼಗಳ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿವೆ ಎಂದು ಸಚಿವರು ಹೇಳಿದರು.

ಕೃಷಿಯು ಲಾಭದಾಯಕ ವ್ಯವಹಾರವಾಗಿದೆ ಎಂಬ ಅರಿವನ್ನು ನಾವು ಯುವಜನರಲ್ಲಿ ಮೂಡಿಸಬೇಕಾಗಿದೆ. ಕೃಷಿಯನ್ನು ಸರಿಯಾದ ಮಾರ್ಕೆಟಿಂಗ್‌ನೊಂದಿಗೆ ಆಧುನಿಕ ರೀತಿಯಲ್ಲಿ ಕೃಷಿ ಮಾಡಬೇಕಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ 12 ಕೋಟಿ ರೈತರಲ್ಲಿ ಇಂತಹ ವಿಶ್ವಾಸವನ್ನು ಮೂಡಿಸಿದರೆ, ಕೃಷಿ ಉತ್ಪಾದನೆ ಹೆಚ್ಚಾಗುವುದಷ್ಟೇ ಅಲ್ಲ, ಜಿಡಿಪಿಗೆ ಕೃಷಿಯ ಕೊಡುಗೆಯೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ಇದು ಈ 12 ಕೋಟಿ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೆ, ರಾಷ್ಟ್ರವೂ ಸ್ವಾವಲಂಬಿಗಳಾಗಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ತ್ತು ಈಗ ಸಹಕಾರಿ-ಎಫ್‌ಪಿಒ ಮೂಲಕ, ಮೋದಿ ಸರ್ಕಾರವು ರೈತರನ್ನು ವ್ಯಾಪಾರಿಗಳು ಮತ್ತು ಉದ್ಯಮಿಗಳನ್ನಾಗಿ ಮಾಡುವ ದಿಕ್ಕಿನಲ್ಲಿ ಮುಂದುವರಿಯುತ್ತದೆ ಎಂದು ಶ್ರೀ ಶಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ, ಕೃಷಿ ವಲಯಕ್ಕೆ ಬಜೆಟ್ ಹಂಚಿಕೆ 5.6 ಪಟ್ಟು ಹೆಚ್ಚಾಗಿದೆ ಎಂದು ಸಹಕಾರ ಸಚಿವರು ಹೇಳಿದರು. 2013-14ನೇ ಸಾಲಿನಲ್ಲಿ ಕೃಷಿ ಬಜೆಟ್ 21,000 ಕೋಟಿ ರೂ.ಗಳಾಗಿದ್ದರೆ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 2023-24ರಲ್ಲಿ ಅದು 1.15 ಲಕ್ಷ ಕೋಟಿ ರೂ.ಗೆ ಏರಿದೆ ಎಂದರು. ಈ ಮೊದಲು ಸಂಯೋಜಿತ ಬಜೆಟ್ 21,000 ಕೋಟಿ ರೂ.ಗಳಾಗಿತ್ತು, ಆದರೆ ಈಗ ಕೇವಲ ಕೃಷಿ ಸಚಿವಾಲಯದ ಬಜೆಟ್ ಒಂದೇ 1.15 ಲಕ್ಷ ಕೋಟಿ ರೂ. ಆಗಿದೆ. ಇದು ಪ್ರಧಾನ ಮಂತ್ರಿಗಳು ಮತ್ತು ಸರ್ಕಾರವು ಕೃಷಿಗೆ ನೀಡಿದ ಆದ್ಯತೆಯನ್ನು ತೋರಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ದೇಶವು 2013-14ರಲ್ಲಿ 265 ದಶಲಕ್ಷ ಟನ್ ಮತ್ತು 2022-23ರಲ್ಲಿ 324 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕೆಲವು ರೈತರು ʻಬೆಂಬಲ ಬೆಲೆʼ ಬಗ್ಗೆ ಮಾತನಾಡಲು ಬಯಸುತ್ತಾರೆ.  ಸರ್ಕಾರ ಸಹ ಅದರ ಬಗ್ಗೆ ಚರ್ಚಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು. 10 ವರ್ಷಗಳಲ್ಲಿ ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇ.55 ಮತ್ತು ಗೋಧಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇ.51ರಷ್ಟು ಹೆಚ್ಚಳವಾಗಿದೆ ಎಂದು ಶ್ರೀ ಶಾ ಮಾಹಿತಿ ನೀಡಿದರು. ಶ್ರೀ ಮೋದಿ ಅವರ ನೇತೃತ್ವದ ಹಾಲಿ ಸರ್ಕಾರವು, ಸ್ವಾತಂತ್ರ್ಯದ ನಂತರದ ರೈತರು ಮಾಡಿದ ವೆಚ್ಚಕ್ಕಿಂತ ಕನಿಷ್ಠ 50% ಹೆಚ್ಚಿನ ಲಾಭವನ್ನು ಬೆಂಬಲ ಬೆಲೆ ರೂಪದಲ್ಲಿ ನಿಗದಿಪಡಿಸಿದ ಮೊದಲ ಸರ್ಕಾರವಾಗಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರವು ಭತ್ತದ ಸಂಗ್ರಹವನ್ನು ಶೇಕಡಾ 88 ರಷ್ಟು ಹೆಚ್ಚಿಸಿದೆ, ಅಂದರೆ ಸುಮಾರು ದುಪ್ಪಟ್ಟು ಭತ್ತವನ್ನು ಸಂಗ್ರಹಿಸಲಾಗಿದೆ. ಗೋಧಿ ಸಂಗ್ರಹವೂ ಸುಮಾರು ಮೂರನೇ ಎರಡರಷ್ಟು ಅಂದರೆ 72% ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. 251 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ.  ಫಲಾನುಭವಿಗಳ ಸಂಖ್ಯೆ ಬಹುತೇಕ ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು. ರೈತರ ಕಲ್ಯಾಣಕ್ಕಾಗಿ ಮೋದಿ ಸರ್ಕಾರ ಎಷ್ಟು ಕೆಲಸ ಮಾಡಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದರು. ಇದರ ಜೊತೆಗೆ, ಸಾವಯವ ಕೃಷಿಯನ್ನೂ ಉತ್ತೇಜಿಸಲಾಗಿದೆ. 72 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 60 ಲಕ್ಷ ರೈತರನ್ನು ಸೂಕ್ಷ್ಮ ನೀರಾವರಿಯ ವ್ಯಾಪ್ತಿಗೆ ತರಲಾಗಿದೆ. ಸೂಕ್ಷ್ಮ ನೀರಾವರಿ ನಿಧಿಯನ್ನೂ ಸ್ಥಾಪಿಸಲಾಗಿದೆ.  ʻರಾಷ್ಟ್ರೀಯ ಖಾದ್ಯ ತೈಲ ಮಿಷನ್ʼ ಅನ್ನು ಸ್ಥಾಪಿಸಲಾಗಿದೆ. 24000 ಕೋಟಿ ರೂ.ಗಳ ಕೃಷಿ ಮೂಲಸೌಕರ್ಯ ನಿಧಿಯನ್ನು ಸ್ಥಾಪಿಸಲಾಗಿದೆ. ಕೃಷಿ ಯಾಂತ್ರೀಕರಣಕ್ಕಾಗಿಯೂ ವಿಶೇಷ ನಿಧಿಯನ್ನು ಸ್ಥಾಪಿಸಲಾಗಿದೆ. ಜೊತೆಗೆ, ʻಇ-ನ್ಯಾಮ್ʼ ಮೂಲಕ ಸುಮಾರು 1260 ಮಂಡಿಗಳನ್ನು ಸಂಪರ್ಕಿಸುವ ಕೆಲಸವನ್ನು ಸಹ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ಮಾಡಿದೆ ಎಂದು ಶ್ರೀ ಅಮಿತ್‌ ಶಾ ಅವರು ಮಾಹಿತಿ ನೀಡಿದರು.

ಮಾತು ಮುಂದುವರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಮೋದಿ ಸರ್ಕಾರದ ಅವಧಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ ಮತ್ತು ಈಗ ಸಹಕಾರ ಸಚಿವಾಲಯವನ್ನು ರಚಿಸಲಾಗಿದೆ. ಇದರಿಂದ ಅದರ ಪ್ರಯೋಜನಗಳು ರೈತರಿಗೆ ತಲುಪುತ್ತಿವೆ ಎಂದು ಹೇಳಿದರು. ಸಹಕಾರಿ ಮಂತ್ರದ ಪ್ರಕಾರ, ಹೊಲಗಳಲ್ಲಿ ಕಷ್ಟಪಟ್ಟು ದುಡಿಯುವವರಿಗೆ ಲಾಭ ತಲುಪಬೇಕು. ಸಹಕಾರ ಸಚಿವಾಲಯ ಇದನ್ನು ಖಚಿತಪಡಿಸಿದೆ ಎಂದು ಅವರು ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಮೋದಿ ಸರ್ಕಾರ ಅನೇಕ ಕೆಲಸಗಳನ್ನು ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ʻಪಿಎಸಿಎಸ್‌ʼಗಳ ಬೈಲಾಗಳನ್ನು ರೂಪಿಸಲಾಗಿದ್ದು, ಇದನ್ನು 26 ರಾಜ್ಯಗಳು ಒಪ್ಪಿಕೊಂಡಿವೆ. ಈಗ, ʻಪಿಎಸಿಎಸ್ʼ ಪಶು ಸಂಗೋಪನೆ ಮತ್ತು ಮೀನುಗಾರರ ಸಮಿತಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಪೆಟ್ರೋಲ್ ಪಂಪ್, ಗ್ಯಾಸ್ ಏಜೆನ್ಸಿ, ಸಿಎಸ್‌ಸಿ, ಅಗ್ಗದ ಔಷಧ ಮಳಿಗೆ ಮತ್ತು ಅಗ್ಗದ ಧಾನ್ಯ ಮಳಿಗೆಯನ್ನು ನಡೆಸಲು ಸಾಧ್ಯವಾಗಲಿದೆ. ಇದು ಮಾತ್ರವಲ್ಲದೆ, ಗ್ರಾಮದ ʻಹರ್ ಘರ್ ಜಲ ಸಮಿತಿʼಯ ಅಡಿಯಲ್ಲಿ ನೀರಿನ ನಿರ್ವಹಣೆಯಲ್ಲಿ ವಾಣಿಜ್ಯ ಕಾರ್ಯಗಳನ್ನು ನಿರ್ವಹಿಸಲು ʻಪಿಎಸಿಎಸ್ʼಗೆ ಸಾಧ್ಯವಾಗಲಿದೆ. 22 ವಿವಿಧ ಕಾಮಗಾರಿಗಳನ್ನು ʻಪಿಎಸಿಎಸ್ʼನೊಂದಿಗೆ ಜೋಡಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಶ್ರೀ ಶಾ ಹೇಳಿದರು. ʻಪಿಎಸಿಎಸ್ʼಗಳು ಪ್ರಬಲವಾಗದ ಹೊರತು, `ಎಪಿಎಸಿಎಸ್’ ಎಂದಿಗೂ ಪ್ರಬಲವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. `ಎಫ್‌ಪಿಒʼಗಳು, ʻಪಿಎಸಿಎಸ್ʼ ಮತ್ತು ಸ್ವಸಹಾಯ ಗುಂಪುಗಳು ಪರಸ್ಪರ ಪೂರಕವಾಗಿದ್ದರೆ, ಮುಂಬರುವ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಅಭಿವೃದ್ಧಿಯ ಹೊಸ ಯುಗ ಪ್ರಾರಂಭವಾಗುತ್ತದೆ ಎಂದು ಶ್ರೀ ಅಮಿತ್‌ ಶಾ ಅವರು ಹೇಳಿದರು.

****(Release ID: 1939843) Visitor Counter : 81