ರಾಷ್ಟ್ರಪತಿಗಳ ಕಾರ್ಯಾಲಯ

ರಾಷ್ಟ್ರಪತಿ ಶ್ರೀಮತಿ ದ್ರೌಪತಿ ಮುರ್ಮು ಅವರೊಂದಿಗೆ ರಾಷ್ಟ್ರಪತಿ ಭವನದಲ್ಲಿಂದು ಮುಸ್ಲಿಂ ವರ್ಲ್ಡ್ ಲೀಗ್‌ನ ಮಹಾ ಪ್ರಧಾನ ಕಾರ್ಯದರ್ಶಿ ಮಾತುಕತೆ

Posted On: 12 JUL 2023 1:34PM by PIB Bengaluru

ಮುಸ್ಲಿಂ ವರ್ಲ್ಡ್ ಲೀಗ್‌ನ ಮಹಾ ಪ್ರಧಾನ ಕಾರ್ಯದರ್ಶಿ ಡಾ ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್-ಇಸ್ಸಾ ಅವರು (ಜುಲೈ 12, 2023) ರಾಷ್ಟ್ರಪತಿ ಭವನದಲ್ಲಿಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಭಾರತಕ್ಕೆ ಚೊಚ್ಚಲ ಅಧಿಕೃತ ಭೇಟಿ ನೀಡಿರುವ ಡಾ. ಅಲ್-ಇಸ್ಸಾ ಅವರನ್ನು ಸ್ವಾಗತಿಸಿದ ರಾಷ್ಟ್ರಪತಿ, ಸಹಿಷ್ಣುತಾ ಮೌಲ್ಯಗಳು, ಅರಿವು ಮೂಡಿಸುವುದು ಮತ್ತು ಅಂತರ-ಧರ್ಮದ ಸಂವಾದ, ಮಾತುಕತೆ ಉತ್ತೇಜಿಸುವಲ್ಲಿ ಮುಸ್ಲಿಂ ವರ್ಲ್ಡ್ ಲೀಗ್‌ನ ಪಾತ್ರ ಮತ್ತು ಉದ್ದೇಶಗಳನ್ನು ಭಾರತ ಶ್ಲಾಘಿಸುತ್ತದೆ ಎಂದು ಹೇಳಿದರು. ಭಾರತವು ಬಹು-ಸಾಂಸ್ಕೃತಿಕ, ಬಹು-ಭಾಷಿಕ, ಬಹು-ಜನಾಂಗೀಯ ಮತ್ತು ಬಹು-ಧಾರ್ಮಿಕ ಸಮಾಜವಾಗಿ, ವೈವಿಧತೆಯಲ್ಲಿ ಏಕತೆಯನ್ನು ಪಾಲಿಸಿಕೊಂಡು ಬಂದಿದೆ. ನಮ್ಮ 200 ದಶಲಕ್ಷಕ್ಕಿಂತ ಹೆಚ್ಚಿರುವ ಭಾರತೀಯ ಮುಸ್ಲಿಂ ಸಹೋದರರು ಮತ್ತು ಸಹೋದರಿಯರು ನಮ್ಮನ್ನು ವಿಶ್ವದ 2ನೇ ಅತಿದೊಡ್ಡ ಮುಸ್ಲಿಮರಿರುವ ದೇಶವನ್ನಾಗಿ ರೂಪಿಸಿದ್ದಾರೆ ಎಂದರು.

ಸೌದಿ ಅರೇಬಿಯಾದೊಂದಿಗಿನ ಬಾಂಧವ್ಯಕ್ಕೆ ಭಾರತ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಉಭಯ ದೇಶಗಳು ವ್ಯಾಪಾರ ಮತ್ತು ಜನರೊಂದಿಗೆ ಜನರ ಸಂಬಂಧಗಳಲ್ಲಿ ಬೇರೂರಿರುವ ಸೌಹಾರ್ದಯುತ ಸಂಬಂಧಗಳ ಸುದೀರ್ಘ ಇತಿಹಾಸ ಹೊಂದಿವೆ. ನಮ್ಮ ಎರಡೂ ದೇಶಗಳು ಇಡೀ ವಿಶ್ವದೊಂದಿಗೆ ಹಂಚಿಕೊಳ್ಳಲು ಅಮೂಲ್ಯವಾದ ಬೋಧನೆಗಳನ್ನು ಹೊಂದಿವೆ ಎಂದು ಅವರು ಹೇಳಿದರು.

ಭಾರತ ಮತ್ತು ಸೌದಿ ಅರೇಬಿಯಾ ಎರಡೂ ರಾಷ್ಟ್ರಗಳು ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ಖಂಡಿಸುತ್ತವೆ, ಭಯೋತ್ಪಾದನೆಯ ವಿರುದ್ಧ ‘ಶೂನ್ಯ ಸಹಿಷ್ಣುತೆ’ಗೆ ಕರೆ ನೀಡುತ್ತಿವೆ. ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದ ಎದುರಿಸಲು ಸಮಗ್ರ ಕಾರ್ಯವಿಧಾನದ ಅವಶ್ಯಕತೆಯಿದೆ ಎಂದು ಉಭಯ ನಾಯಕರು ಒಪ್ಪಿಕೊಂಡರು. ಇದು ಮಧ್ಯಮ ವಿಚಾರಧಾರೆಗಳು ಮತ್ತು ಚಿಂತನೆಗಳ ಮನಸ್ಥಿತಿಯೊಂದಿಗೆ ತೊಡಗಿಸಿಕೊಳ್ಳುವುದರಿಂದ ಮಾತ್ರ ಸಾಧ್ಯ. ಉಗ್ರವಾದ, ಭಯೋತ್ಪಾದನೆ ಮತ್ತು ಹಿಂಸಾಚಾರದ ವಿರುದ್ಧ ಡಾ. ಅಲ್-ಇಸ್ಸಾ ಅವರು ಹೊಂದಿರುವ ನಿಲುವನ್ನು ರಾಷ್ಟ್ರಪತಿ ಶ್ಲಾಘಿಸಿದರು. ಡಾ. ಅಲ್ ಇಸ್ಸಾ ಅವರ ಭಾರತ ಭೇಟಿಯು ಮುಸ್ಲಿಂ ವರ್ಲ್ಡ್ ಲೀಗ್‌ನ ಸಹಭಾಗಿತ್ವಕ್ಕೆ ಹೆಚ್ಚಿನ ಮಾರ್ಗೋಪಾಯಗಳನ್ನು ಒದಗಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

****



(Release ID: 1938933) Visitor Counter : 127