ಪ್ರಧಾನ ಮಂತ್ರಿಯವರ ಕಛೇರಿ
23ನೇ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
Posted On:
04 JUL 2023 7:45PM by PIB Bengaluru
ಗೌರವಾನ್ವಿತ ಗಣ್ಯರೆ,
ನಮಸ್ಕಾರ!
23ನೇ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗಸಭೆಗೆ ನಿಮ್ಮೆಲ್ಲರನ್ನು ಇಂದು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಕಳೆದ 2 ದಶಕಗಳಲ್ಲಿ ಎಸ್‌ಸಿಒ ಸಂಘಟನೆಯು ಇಡೀ ಏಷ್ಯಾ ವಲಯದಲ್ಲಿ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗೆ ಮಹತ್ವದ ವೇದಿಕೆಯಾಗಿ ಹೊರಹೊಮ್ಮಿದೆ. ಭಾರತ ಮತ್ತು ಏಷ್ಯಾ ಭಾಗದ ನಡುವೆ ಇರುವ ಸಾವಿರಾರು ವರ್ಷಗಳ ಸಾಂಸ್ಕೃತಿಕ ಮತ್ತು ಜನರಿಂದ ಜನರ ಸಂಬಂಧಗಳು ನಮ್ಮ ಹಂಚಿಕೆಯ ಪರಂಪರೆಗೆ ಜೀವಂತ ಸಾಕ್ಷಿಯಾಗಿವೆ. ನಾವು ಈ ಪ್ರದೇಶವನ್ನು "ವಿಸ್ತೃತ ನೆರೆಹೊರೆ" ಎಂದು ನೋಡುವುದಿಲ್ಲ, ಆದರೆ "ವಿಶಾಲ ಕುಟುಂಬ" ಎಂದು ನೋಡುತ್ತೇವೆ.
ಗೌರವಾನ್ವಿತ ಗಣ್ಯರೆ,
ಶಾಂಘೈ ಸಹಕಾರ ಸಂಘಟನೆಯ ಅಧ್ಯಕ್ಷತೆ ವಹಿಸಿರುವ ಭಾರತವು, ನಮ್ಮ ಬಹು ಆಯಾಮದ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರಂತರ ಪ್ರಯತ್ನಗಳನ್ನು ಮಾಡಿದೆ. ನಾವು ಈ ಎಲ್ಲಾ ಪ್ರಯತ್ನಗಳು 2 ಮೂಲಭೂತ ತತ್ವಗಳನ್ನು ಆಧರಿಸಿವೆ. ಮೊದಲನೆಯದಾಗಿ, "ವಸುಧೈವ ಕುಟುಂಬಕಂ" ಅಂದರೆ ಇಡೀ ಜಗತ್ತು ಒಂದೇ ಕುಟುಂಬ. ಈ ತತ್ವವು ಪ್ರಾಚೀನ ಕಾಲದಿಂದಲೂ ನಮ್ಮ ಸಾಮಾಜಿಕ ನಡವಳಿಕೆಯ ಅವಿಭಾಜ್ಯ ಅಂಗವಾಗಿದೆ. ಇದು ಆಧುನಿಕ ಕಾಲದಲ್ಲಿ ನಮಗೆ ಸ್ಫೂರ್ತಿ ಮತ್ತು ಶಕ್ತಿಯ ಸೆಲೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಎರಡನೆಯ ತತ್ವವೆಂದರೆ ಅದು ಭದ್ರತೆ. ಆರ್ಥಿಕ ಅಭಿವೃದ್ಧಿ, ಸಂಪರ್ಕ, ಏಕತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಪರಿಸರ ಸಂರಕ್ಷಣೆಗಾಗಿ ನಿಂತಿದೆ. ಇದು ನಮ್ಮ ಅಧ್ಯಕ್ಷತೆಯ ವಸ್ತು ವಿಷಯವೂ ಆಗಿದೆ, ನಮ್ಮ ಎಸ್‌ಸಿಒದ ದೃಷ್ಟಿಕೋನವನ್ನು ಸಹ ಪ್ರತಿಬಿಂಬಿಸುತ್ತದೆ.
ಈ ದೃಷ್ಟಿಕೋನದಲ್ಲೇ, ಭಾರತವು ಎಸ್‌ಸಿಒ ಸಹಕಾರದ 5 ಹೊಸ ಆಧಾರಸ್ತಂಭಗಳನ್ನು ಸ್ಥಾಪಿಸಿದೆ:
• ನವೋದ್ಯಮ ಮತ್ತು ನಾವೀನ್ಯತೆ(ಆವಿಷ್ಕಾರ)
• ಸಾಂಪ್ರದಾಯಿಕ ಔಷಧ
• ಯುವ ಸಮುದಾಯದ ಸಬಲೀಕರಣ
• ಡಿಜಿಟಲ್ ಸೇರ್ಪಡೆ ಮತ್ತು
• ಹಂಚಿತ ಬೌದ್ಧ ಪರಂಪರೆ
ಗಣ್ಯರೆ,
ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಭಾರತವು 140ಕ್ಕೂ ಹೆಚ್ಚು ಕಾರ್ಯಕ್ರಮಗಳು, ಸಮ್ಮೇಳನಗಳು ಮತ್ತು ಸಭೆಗಳನ್ನು ಆಯೋಜಿಸಿದೆ. ನಾವು 14 ವಿಭಿನ್ನ ಕಾರ್ಯಕ್ರಮಗಳಲ್ಲಿ ಎಸ್‌ಸಿಒದ ಎಲ್ಲಾ ವೀಕ್ಷಕರು ಮತ್ತು ಸಂವಾದ ಪಾಲುದಾರರನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಹಾಗೆಯೇ, ಎಸ್‌ಸಿಒದ 14 ಸಚಿವರ ಮಟ್ಟದ ಸಭೆಗಳಿಗೆ ನಾವು ಒಟ್ಟಾಗಿ ಹಲವಾರು ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿದ್ದೇವೆ. ಇವುಗಳೊಂದಿಗೆ ನಾವು ನಮ್ಮ ಸಹಕಾರಕ್ಕೆ ಹೊಸ ಮತ್ತು ಆಧುನಿಕ ಆಯಾಮಗಳನ್ನು ಸೇರಿಸುತ್ತಿದ್ದೇವೆ –
• ಇಂಧನ ವಲಯದಲ್ಲಿ ಉದಯೋನ್ಮುಖ ಇಂಧನಗಳ ಮೇಲೆ ಸಹಕಾರ
• ಸಾರಿಗೆ ವಲಯದಲ್ಲಿ ಇಂಗಾಲ ಮುಕ್ತ ಇಂಧನ ಬಳಕೆ ಮತ್ತು ಡಿಜಿಟಲ್ ರೂಪಾಂತರದಲ್ಲಿ ಸಹಭಾಗಿತ್ವ
• ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಸಹಕಾರ
ಎಸ್‌ಸಿಒ ಸಹಕಾರವು ಕೇವಲ ಸರ್ಕಾರಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಖಚಿತಪಡಿಸಲು ಭಾರತವು ಪ್ರಯತ್ನಗಳನ್ನು ಮಾಡಿದೆ. ಭಾರತದ ಅಧ್ಯಕ್ಷತೆಯಲ್ಲಿ, ಜನರ ನಡುವೆ ಸಂಪರ್ಕ ಮತ್ತು ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲ ಬಾರಿಗೆ ಎಸ್‌ಸಿಒ ಸಿರಿಧಾನ್ಯಗಳ ಆಹಾರ ಉತ್ಸವ, ಚಲನಚಿತ್ರೋತ್ಸವ, ಸೂರಜ್‌ಕುಂಡ್ ಕ್ರಾಫ್ಟ್ ಮೇಳ, ಚಿಂತಕರ ಸಮ್ಮೇಳನ ಮತ್ತು ಹಂಚಿತ ಬೌದ್ಧ ಪರಂಪರೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ಎಸ್‌ಸಿಒ ಶೃಂಗಸಭೆಯ ಮೊದಲ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿ, ಸನಾತನ ನಗರ ವಾರಣಾಸಿಯು ವಿವಿಧ ಕಾರ್ಯಕ್ರಮಗಳಿಗೆ ಆಕರ್ಷಣೆಯ ಕೇಂದ್ರವಾಗಿದೆ. ಎಸ್‌ಸಿಒ ದೇಶಗಳ ಯುವಕರ ಶಕ್ತಿ, ಸಾಮರ್ಥ್ಯ ಮತ್ತು ಪ್ರತಿಭೆ ಬಳಸಿಕೊಳ್ಳಲು ನಾವು ಯುವ ವಿಜ್ಞಾನಿಗಳ ಸಮಾವೇಶ, ಯುವ ಲೇಖಕರ ಸಮಾವೇಶ, ಯುವ ಸ್ಥಾನಿಕ ವಿದ್ವಾಂಸರ ಕಾರ್ಯಕ್ರಮ, ನವೋದ್ಯಮ ವೇದಿಕೆ ಮತ್ತು ಯುವ ಮಂಡಳಿಯಂತಹ ಹೊಸ ವಿನೂತನ ವೇದಿಕೆಗಳನ್ನು ಆಯೋಜಿಸಿದ್ದೇವೆ.
ಗಣ್ಯರೆ,
ಪ್ರಸ್ತುತ ಸಮಯವು ಜಾಗತಿಕ ವ್ಯವಹಾರ ವಿಷಯಗಳಲ್ಲಿ ನಿರ್ಣಾಯಕ ಹಂತವನ್ನು ಗುರುತಿಸುತ್ತದೆ. ಸಂಘರ್ಷಗಳು, ಉದ್ವಿಗ್ನತೆ ಮತ್ತು ಸಾಂಕ್ರಾಮಿಕ ರೋಗಗಳಿಂದ ಸುತ್ತುವರಿದ ಜಗತ್ತಿನಲ್ಲಿ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟುಗಳು ಎಲ್ಲಾ ರಾಷ್ಟ್ರಗಳಿಗೆ ಗಮನಾರ್ಹ ಸವಾಲಾಗಿದೆ. ನಮ್ಮ ಜನರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳನ್ನು ಪೂರೈಸಲು ನಾವು ಒಂದು ಸಂಘಟನೆಯಾಗಿ ಸಮರ್ಥರಾಗಿದ್ದೇವೆಯೇ ಎಂಬುದನ್ನು ನಾವು ಒಟ್ಟಾಗಿ ಯೋಚಿಸಬೇಕು? ಆಧುನಿಕ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆಯೇ? ಎಸ್‌ಸಿಒ ಭವಿಷ್ಯಕ್ಕಾಗಿ ಸಂಪೂರ್ಣ ಸಜ್ಜಾಗಿರುವ ಸಂಸ್ಥೆಯಾಗಿ ವಿಕಸನಗೊಳ್ಳುತ್ತಿದೆಯೇ? ಈ ನಿಟ್ಟಿನಲ್ಲಿ, ಎಸ್‌ಸಿಒನಲ್ಲಿ ಸುಧಾರಣೆಗಳು ಮತ್ತು ಆಧುನೀಕರಣದ ಪ್ರಸ್ತಾಪಗಳನ್ನು ರೂಪಿಸಲು ಭಾರತ ಬೆಂಬಲ ನೀಡುತ್ತದೆ. ಎಸ್‌ಸಿಒದಲ್ಲಿ ಭಾಷಾ ಅಡೆತಡೆಗಳನ್ನು ತೆಗೆದುಹಾಕಲು ಭಾರತದ ಕೃತಕ ಬುದ್ಧಿಮತ್ತೆ ಆಧರಿತ ಭಾಷಾ ವೇದಿಕೆಯಾದ “ಭಾಷಿಣಿ”ಯನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಇದು ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ಡಿಜಿಟಲ್ ತಂತ್ರಜ್ಞಾನದ ಉದಾಹರಣೆಯಾಗಿ ಕಾರ್ಯ ನಿರ್ವಹಿಸುತ್ತದೆ. ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿನ ಸುಧಾರಣೆಗಳಿಗೆ ಎಸ್‌ಸಿಒ ಪ್ರಮುಖ ಧ್ವನಿಯಾಗಬೇಕು.
ಎಸ್‌ಸಿಒ ಕುಟುಂಬದಲ್ಲಿ ಇಂದು ಇರಾನ್ ಹೊಸ ಸದಸ್ಯನಾಗಿ ಸೇರ್ಪಡೆಯಾಗುತ್ತಿರುವುದು ನನಗೆ ಖುಷಿ ತಂದಿದೆ. ಈ ಸಂದರ್ಭದಲ್ಲಿ ಅಧ್ಯಕ್ಷ ರೈಸಿ ಮತ್ತು ಇರಾನ್ ಜನತೆಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಸ್‌ಸಿಒ ಸದಸ್ಯತ್ವಕ್ಕಾಗಿ ಬೆಲಾರಸ್ ದೇಶವು ಬಾಧ್ಯತೆಯ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವುದನ್ನು ನಾವು ಸ್ವಾಗತಿಸುತ್ತೇವೆ.
ಇಂದು ಎಸ್‌ಸಿಒಗೆ ಸೇರಲು ಇತರ ದೇಶಗಳು ತೋರುತ್ತಿರುವ ಆಸಕ್ತಿಯು ಈ ಸಂಸ್ಥೆ ಹೊಂದಿರುವ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ. ಈ ಪ್ರಕ್ರಿಯೆಯಲ್ಲಿ, ಮಧ್ಯ ಏಷ್ಯಾ ರಾಷ್ಟ್ರಗಳ ಆಸಕ್ತಿಗಳು ಮತ್ತು ಆಕಾಂಕ್ಷೆಗಳ ಮೇಲೆ ತನ್ನ ಪ್ರಾಥಮಿಕ ಗಮನವನ್ನು ಕಾಪಾಡಿಕೊಳ್ಳಲು ಎಸ್‌ಸಿಒಗೆ ಇದು ಅತ್ಯಗತ್ಯ.
ಗಣ್ಯರೆ,
ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಭಯೋತ್ಪಾದನೆ ದೊಡ್ಡ ಬೆದರಿಕೆಯಾಗಿದೆ. ಈ ಸವಾಲನ್ನು ಎದುರಿಸಲು ನಿರ್ಣಾಯಕ ಕ್ರಮದ ಅಗತ್ಯವಿದೆ. ಅದರ ರೂಪ ಅಥವಾ ಅಭಿವ್ಯಕ್ತಿ ಏನೇ ಇರಲಿ, ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಒಂದಾಗಬೇಕು. ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ತಮ್ಮ ನೀತಿಗಳ ಸಾಧನವಾಗಿ ಬಳಸುತ್ತಿವೆ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿವೆ. ಅಂತಹ ರಾಷ್ಟ್ರಗಳನ್ನು ಟೀಕಿಸಲು ಎಸ್‌ಸಿಒ ಹಿಂಜರಿಯಬಾರದು. ಇಂತಹ ಗಂಭೀರ ವಿಷಯಗಳಲ್ಲಿ ದ್ವಂದ್ವ ನೀತಿಗೆ ಅವಕಾಶ ಇರಬಾರದು. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವಲ್ಲಿ ನಾವು ಪರಸ್ಪರ ಸಹಕಾರ ಹೆಚ್ಚಿಸಬೇಕಾಗಿದೆ. ಶಾಂಘೈ ಸಹಕಾರ ಸಂಘಟನೆಯ ಪ್ರಾದೇಶಿಕ ಭಯೋತ್ಪಾದನೆ ವಿರೋಧಿ ಸ್ವರೂಪ(SCO RATS) ಕಾರ್ಯವಿಧಾನವು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ನಮ್ಮ ಯುವಕರಲ್ಲಿ ಆಮೂಲಾಗ್ರವಾಗಿ ಭಯೋತ್ಪಾದನೆ ಹರಡುವುದನ್ನು ತಡೆಗಟ್ಟಲು ನಾವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಮೂಲಾಗ್ರ ಭಯೋತ್ಪಾದನೆ ಹರಡುವ ವಿಷಯ ಕುರಿತು ಇಂದು ಹೊರಡಿಸಿದ ಜಂಟಿ ಹೇಳಿಕೆಯು ನಮ್ಮ ಹಂಚಿಕೆಯ ಬದ್ಧತೆಯನ್ನು ಸಂಕೇತಿಸುತ್ತದೆ.
ಗಣ್ಯರೆ,
ಅಫ್ಘಾನಿಸ್ತಾನದ ಪರಿಸ್ಥಿತಿಯು ನಮ್ಮೆಲ್ಲರ ಭದ್ರತೆಯ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಅಫ್ಘಾನಿಸ್ತಾನದ ಬಗ್ಗೆ ಭಾರತದ ಕಾಳಜಿ ಮತ್ತು ನಿರೀಕ್ಷೆಗಳು ಹೆಚ್ಚಿನ ಎಸ್‌ಸಿಒ ದೇಶಗಳಂತೆಯೇ ಇವೆ. ಅಫ್ಘಾನಿಸ್ತಾನದ ಜನರ ಯೋಗಕ್ಷೇಮಕ್ಕಾಗಿ ಶ್ರಮಿಸಲು ನಾವು ಒಗ್ಗೂಡಬೇಕು. ಅಫ್ಘಾನ್ ನಾಗರಿಕರಿಗೆ ಮಾನವೀಯ ನೆರವು, ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆ; ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಹೋರಾಟ; ಮತ್ತು ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಖಾತ್ರಿಪಡಿಸುವುದು ನಮ್ಮ ಹಂಚಿಕೆ ಮೌಲ್ಯದ ಆದ್ಯತೆಗಳಾಗಿವೆ. ಭಾರತ ಮತ್ತು ಅಫ್ಘಾನಿಸ್ತಾನ ಜನರ ನಡುವೆ ಶತಮಾನಗಳಷ್ಟು ಹಳೆಯ ಸೌಹಾರ್ದ ಸಂಬಂಧವಿದೆ. ಕಳೆದ 2 ದಶಕಗಳಲ್ಲಿ, ನಾವು ಅಫ್ಘಾನಿಸ್ತಾನದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇವೆ. 2021ರ ಘಟನೆಗಳ ನಂತರವೂ ನಾವು ಮಾನವೀಯ ನೆರವು ನೀಡುವುದನ್ನು ಮುಂದುವರಿಸಿದ್ದೇವೆ. ನೆರೆಯ ದೇಶಗಳಲ್ಲಿ ಅಸ್ಥಿರತೆ ಹರಡಲು ಅಥವಾ ಉಗ್ರಗಾಮಿ ಸಿದ್ಧಾಂತಗಳನ್ನು ಪ್ರೋತ್ಸಾಹಿಸಲು ಅಫ್ಘಾನಿಸ್ತಾನ ಭೂಪ್ರದೇಶವನ್ನು ಬಳಸದಂತೆ ನಾವೆಲ್ಲಾ ನೋಡಿಕೊಳ್ಳುವುದು ಮುಖ್ಯವಾಗಿದೆ.
ಗಣ್ಯರೆ,
ಯಾವುದೇ ಪ್ರದೇಶದ ಪ್ರಗತಿಗೆ ಬಲಿಷ್ಠವಾದ ಸಂಪರ್ಕ ನಿರ್ಣಾಯಕವಾಗಿದೆ. ಉತ್ತಮ ಸಂಪರ್ಕವು ಪರಸ್ಪರ ವ್ಯಾಪಾರ ಹೆಚ್ಚಿಸುವುದು ಮಾತ್ರವಲ್ಲದೆ, ಪರಸ್ಪರ ನಂಬಿಕೆಯನ್ನು ಬೆಳೆಸುತ್ತದೆ. ಆದಾಗ್ಯೂ, ಈ ಪ್ರಯತ್ನಗಳಲ್ಲಿ, ಎಸ್‌ಸಿಒ ನಾಗರಿಕ ಸನ್ನದಿನ ಮೂಲಭೂತ ತತ್ವಗಳನ್ನು ಎತ್ತಿಹಿಡಿಯುವುದು ಅತ್ಯಗತ್ಯ. ಇದು ವಿಶೇಷವಾಗಿ ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತದೆ. ಎಸ್‌ಸಿಒದಲ್ಲಿ ಇರಾನ್ ಸದಸ್ಯತ್ವ ಪಡೆಯುತ್ತಿರುವುದನ್ನು ಬಳಸಿಕೊಂಡು, ಚಬಹಾರ್ ಬಂದರು ಬಳಕೆಯನ್ನು ಗರಿಷ್ಠಗೊಳಿಸಲು ನಾವು ಕೆಲಸ ಮಾಡಬೇಕು. ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ಮಧ್ಯ ಏಷ್ಯಾದ ಭೂಕುಸಿತ ದೇಶಗಳಿಗೆ ಹಿಂದೂ ಮಹಾಸಾಗರ ಪ್ರವೇಶಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿ ಕಾರ್ಯ ನಿರ್ವಹಿಸುತ್ತದೆ. ಅದರ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ನಾವು ಶ್ರಮಿಸಬೇಕು.
ಗಣ್ಯರೆ,
ಎಸ್‌ಸಿಒ ವಿಶ್ವದ ಜನಸಂಖ್ಯೆಯ ಸರಿಸುಮಾರು 40% ಮತ್ತು ಜಾಗತಿಕ ಆರ್ಥಿಕತೆಯ ಸುಮಾರು 3ನೇ 1 ಭಾಗವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ಪರಸ್ಪರರ ಅಗತ್ಯತೆಗಳು ಮತ್ತು ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಹಂಚಿಕೆಯ ಜವಾಬ್ದಾರಿಯಾಗಿದೆ. ಉತ್ತಮ ಸಹಕಾರ ಮತ್ತು ಸಮನ್ವಯದ ಮೂಲಕ ಎಲ್ಲಾ ಸವಾಲುಗಳನ್ನು ಪರಿಹರಿಸಲು ಮತ್ತು ನಮ್ಮ ಜನರ ಯೋಗಕ್ಷೇಮಕ್ಕಾಗಿ ನಿರಂತರ ಪ್ರಯತ್ನಗಳನ್ನು ಮಾಡಲು, ಭಾರತದ ಅಧ್ಯಕ್ಷ ಸ್ಥಾನವನ್ನು ಯಶಸ್ವಿಗೊಳಿಸುವಲ್ಲಿ ನಾವು ನಿಮ್ಮೆಲ್ಲರಿಂದ ನಿರಂತರ ಬೆಂಬಲ ಪಡೆದಿದ್ದೇವೆ. ಇದಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇಡೀ ಭಾರತದ ಪರವಾಗಿ, ಎಸ್‌ಸಿಒ ಮುಂದಿನ ಅಧ್ಯಕ್ಷತೆ ವಹಿಸಲಿರುವ ಕಝಾಕಿಸ್ತಾನ್ ಅಧ್ಯಕ್ಷ ಮತ್ತು ನನ್ನ ಸ್ನೇಹಿತ ಟೊಕೇವ್ ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಎಸ್‌ಸಿಒ ಯಶಸ್ಸಿಗೆ ಎಲ್ಲರೊಂದಿಗೆ ಸೇರಿ ಸಕ್ರಿಯವಾಗಿ ಕೊಡುಗೆ ನೀಡಲು ಭಾರತ ಸದಾ ಬದ್ಧವಾಗಿದೆ.
ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
****
(Release ID: 1937511)
Visitor Counter : 232
Read this release in:
Hindi
,
Marathi
,
Manipuri
,
Punjabi
,
Gujarati
,
Tamil
,
Malayalam
,
Assamese
,
Odia
,
English
,
Urdu
,
Bengali
,
Telugu