ಪ್ರಧಾನ ಮಂತ್ರಿಯವರ ಕಛೇರಿ

ʻಜಿ 20ʼ ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಪ್ರಧಾನ ಮಂತ್ರಿಯವರ ವೀಡಿಯೊ ಸಂದೇಶದ ಪಠ್ಯ

Posted On: 21 JUN 2023 2:44PM by PIB Bengaluru

ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ, ನಮಸ್ಕಾರ!

ನಾನು ನಿಮ್ಮೆಲ್ಲರನ್ನೂ ʻಇನ್‌ಕ್ರೆಡಿಬಲ್ ಇಂಡಿಯಾʼಗೆ ಸ್ವಾಗತಿಸುತ್ತೇನೆ! ಪ್ರವಾಸೋದ್ಯಮ ಸಚಿವರಾಗಿ, ಜಾಗತಿಕವಾಗಿ ಎರಡು ಟ್ರಿಲಿಯನ್ ಡಾಲರ್ ಮೌಲ್ಯದ ಕ್ಷೇತ್ರವನ್ನು ನಿರ್ವಹಿಸುತ್ತಿರುವ ನೀವೆಲ್ಲರೂ ಸ್ವತಃ ಪ್ರವಾಸಿಗರಾಗುವ ಅವಕಾಶ ಪಡೆಯುವುದು ಅಪರೂಪ. ಆದರೆ, ನೀವಿಗ ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆ ಸ್ಥಳವಾದ ಗೋವಾದಲ್ಲಿದ್ದೀರಿ. ಹಾಗಾಗಿ, ಗೋವಾದ ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಜಗತ್ತನ್ನೂ ಅನ್ವೇಷಿಸಲು ನಿಮ್ಮ ಗಂಭೀರ ಚರ್ಚೆಗಳಿಂದ ಸ್ವಲ್ಪ ಬಿಡುವು ಮಾಡಿಕೊಳ್ಳುವಂತೆ ನಾನು ನಿಮ್ಮನ್ನು ಕೋರುತ್ತೇನೆ!

ಗೌರವಾನ್ವಿತರೇ,

ನಮ್ಮ ಪ್ರಾಚೀನ ಧರ್ಮಗ್ರಂಥಗಳು ಒಂದು ಮಾತನ್ನು ಹೇಳುತ್ತವೆ - ʻಅತಿಥಿ ದೇವೋ ಭವʼ. ಇದರರ್ಥ, "ಅತಿಥಿಯೇ ದೇವರು". ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ನಮ್ಮ ದೃಷ್ಟಿಕೋನವೂ ಇದೇ ಆಗಿದೆ. ನಮ್ಮ ಪ್ರವಾಸೋದ್ಯಮವು ಕೇವಲ ದೃಶ್ಯ ವೀಕ್ಷಣೆಗೆ ಸಂಬಂಧಿಸಿದ್ದಲ್ಲ. ಅದೊಂದು ಆಳವಾದ ಅನುಭವ. ಅದು ಸಂಗೀತವಾಗಿರಲಿ ಅಥವಾ ಆಹಾರವಾಗಿರಲಿ, ಕಲೆ ಅಥವಾ ಸಂಸ್ಕೃತಿಯಾಗಿರಲಿ, ಭಾರತದ ವೈವಿಧ್ಯತೆ ನಿಜವಾಗಿಯೂ ಭವ್ಯವಾದುದು. ಉತ್ತುಂಗದ ಹಿಮಾಲಯದಿಂದ ಹಿಡಿದು ದಟ್ಟ ಕಾನನಗಳವರೆಗೆ, ಒಣ ಮರುಭೂಮಿಗಳಿಂದ ಹಿಡಿದು ಸುಂದರವಾದ ಕಡಲತೀರಗಳವರೆಗೆ, ಸಾಹಸ ಕ್ರೀಡೆಗಳಿಂದ ಹಿಡಿದು, ಧ್ಯಾನ ಕೇಂದ್ರಗಳವರೆಗೆ, ಭಾರತವು ಪ್ರತಿಯೊಬ್ಬರಿಗೂ ಅವರಿಗೆ ಬೇಕಾದ ಏನೋ ಒಂದನ್ನು ಹೊಂದಿದೆ. ನಮ್ಮ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ನಾವು ಭಾರತದಾದ್ಯಂತ 100 ವಿವಿಧ ಸ್ಥಳಗಳಲ್ಲಿ ಸುಮಾರು 200 ಸಭೆಗಳನ್ನು ಆಯೋಜಿಸುತ್ತಿದ್ದೇವೆ. ಈ ಸಭೆಗಳಿಗಾಗಿ ಈಗಾಗಲೇ ಭಾರತಕ್ಕೆ ಭೇಟಿ ನೀಡಿರುವ ನಿಮ್ಮ ಸ್ನೇಹಿತರನ್ನು ನೀವು ಕೇಳಿದರೆ, ಒಂದೇ ರೀತಿಯ ಎರಡು ಅನುಭವಗಳು ಅವರಿಗೆ ಆಗಿರಲು ಸಾಧ್ಯವೇ ಇಲ್ಲವೆಂಬ ಖಾತರಿ ನನಗಿದೆ.

ಗೌರವಾನ್ವಿತರೇ,

ಭಾರತದಲ್ಲಿ, ಈ ಕ್ಷೇತ್ರದಲ್ಲಿನ ನಮ್ಮ ಪ್ರಯತ್ನಗಳು ನಮ್ಮ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವುದಕ್ಕಷ್ಟೇ  ಸೀಮಿತವಾಗದೆ, ಪ್ರವಾಸೋದ್ಯಮಕ್ಕಾಗಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಸೃಷ್ಟಿಸುವುದರ ಮೇಲೂ ಕೇಂದ್ರೀಕೃತವಾಗಿವೆ. ನಾವು ಗಮನ ಹರಿಸುತ್ತಿರುವ ಕ್ಷೇತ್ರಗಳಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ಸಹ ಒಂದಾಗಿದೆ. ಹಾಗೆ ಹೇಳುವುದಾದರೆ, ಭಾರತವು ವಿಶ್ವದ ಪ್ರತಿಯೊಂದು ಪ್ರಮುಖ ಧರ್ಮದ ಯಾತ್ರಾರ್ಥಿಗಳನ್ನೂ ಆಕರ್ಷಿಸುತ್ತದೆ. ಮೂಲಸೌಕರ್ಯ ನವೀಕರಣದ ಬಳಿಕ ಭಾರತದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾದ, ವಾರಾಣಸಿಯು ಈಗ 70 ದಶಲಕ್ಷ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ - ಇದು ಮೊದಲಿಗಿಂತ ಹತ್ತು ಪಟ್ಟು ಹೆಚ್ಚು. ನಾವು ʻಏಕತೆಯ ಪ್ರತಿಮೆʼಯಂತಹ ಹೊಸ ಪ್ರವಾಸಿ ಆಕರ್ಷಣೆಗಳನ್ನು ಸಹ ನಿರ್ಮಿಸುತ್ತಿದ್ದೇವೆ. ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿ, ಇದನ್ನು ನಿರ್ಮಿಸಿದ ಒಂದು ವರ್ಷದೊಳಗೆ ಸುಮಾರು 2.7 ದಶಲಕ್ಷ ಜನರನ್ನು ಆಕರ್ಷಿಸಿತು. ಕಳೆದ ಒಂಬತ್ತು ವರ್ಷಗಳಲ್ಲಿ, ನಾವು ದೇಶದ ಪ್ರವಾಸೋದ್ಯಮದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ವಿಶೇಷ ಒತ್ತು ನೀಡಿದ್ದೇವೆ. ಸಾರಿಗೆ ಮೂಲಸೌಕರ್ಯ, ಆತಿಥ್ಯ ವಲಯ, ಕೌಶಲ್ಯ ಅಭಿವೃದ್ಧಿ ಮತ್ತು ನಮ್ಮ ವೀಸಾ ವ್ಯವಸ್ಥೆಗಳವರೆಗೆ, ನಾವು ಪ್ರವಾಸೋದ್ಯಮ ಕ್ಷೇತ್ರವನ್ನು ನಮ್ಮ ಸುಧಾರಣೆಗಳ ಕೇಂದ್ರಬಿಂದುವಾಗಿ ಇರಿಸಿಕೊಂಡಿದ್ದೇವೆ. ಆತಿಥ್ಯ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಆರ್ಥಿಕ ಪ್ರಗತಿಯ ಸಾಮರ್ಥ್ಯ ಅಧಿಕವಾಗಿದೆ. ಇತರ ಅನೇಕ ಕ್ಷೇತ್ರಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಯುವಕರನ್ನು ನೇಮಿಸಿಕೊಳ್ಳಲಾಗುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತ್ವರಿತವಾಗಿ ಸಾಧಿಸಲು ಪ್ರವಾಸೋದ್ಯಮ ಕ್ಷೇತ್ರದ ಪ್ರಸ್ತುತತೆಯನ್ನು ನಾವು ಗುರುತಿಸುತ್ತಿರುವುದು ನನಗೆ ಸಂತೋಷ ತಂದಿದೆ.

ಗೌರವಾನ್ವಿತರೇ,

ಹಸಿರು ಪ್ರವಾಸೋದ್ಯಮ, ಡಿಜಿಟಲೀಕರಣ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಎಂಎಸ್ಎಂಇಗಳು ಮತ್ತು ಗಮ್ಯಸ್ಥಾನ ನಿರ್ವಹಣೆ ಎಂಬ ಐದು ಅಂತರ-ಸಂಪರ್ಕಿತ ಆದ್ಯತೆಯ ಕ್ಷೇತ್ರಗಳಲ್ಲಿ ನೀವು ಕೆಲಸ ಮಾಡುತ್ತಿದ್ದೀರಿ. ಈ ಆದ್ಯತೆಗಳು ಭಾರತೀಯ ಮತ್ತು ಜಾಗತಿಕ ದಕ್ಷಿಣದ ದೇಶಗಳ ಆದ್ಯತೆಗಳನ್ನು ಪ್ರತಿಬಿಂಬಿಸುತ್ತವೆ. ನಾವೀನ್ಯತೆಯನ್ನು ಹೆಚ್ಚಿಸಲು ʻಕೃತಕ ಬುದ್ಧಿಮತ್ತೆʼ(ಎಐ) ಮತ್ತು ವರ್ಧಿತ ರಿಯಾಲಿಟಿಯಂತಹ (ಆಆರ್‌) ಉದಯೋನ್ಮುಖ ತಂತ್ರಜ್ಞಾನಗಳನ್ನು ನಾವು ಹೆಚ್ಚು-ಹೆಚ್ಚು ಬಳಸಬೇಕು. ಉದಾಹರಣೆಗೆ, ಭಾರತದಲ್ಲಿ ಮಾತನಾಡುವ ವ್ಯಾಪಕ ಶ್ರೇಣಿಯ ಭಾಷೆಗಳ ನೈಜ-ಸಮಯದ ಅನುವಾದವನ್ನು ಸಕ್ರಿಯಗೊಳಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುವ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ. ಸರ್ಕಾರಗಳು, ಉದ್ಯಮಿಗಳು, ಹೂಡಿಕೆದಾರರು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗವು ಪ್ರವಾಸೋದ್ಯಮದಲ್ಲಿ ಅಂತಹ ತಂತ್ರಜ್ಞಾನ ಅನುಷ್ಠಾನಕ್ಕೆ ವೇಗ ನೀಡುತ್ತದೆ  ಎಂಬುದು ನನ್ನ ವಿಶ್ವಾಸ. ನಮ್ಮ ಪ್ರವಾಸೋದ್ಯಮ ಕಂಪನಿಗಳಿಗೆ ಹಣಕಾಸು ಲಭ್ಯತೆಯನ್ನು ಹೆಚ್ಚಿಸಲು, ವ್ಯವಹಾರ ನಿಯಮಗಳನ್ನು ಸರಾಗಗೊಳಿಸಲು ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.

ಗೌರವಾನ್ವಿತರೇ,

ಭಯೋತ್ಪಾದನೆ ವಿಭಜನೆ ಮಾಡುತ್ತದೆ ಎಂದು ಹೇಳಲಾಗುತ್ತದೆ, ಆದರೆ ಪ್ರವಾಸೋದ್ಯಮವು ಒಟ್ಟು ಗೂಡಿಸುತ್ತದೆ. ವಾಸ್ತವವಾಗಿ, ಪ್ರವಾಸೋದ್ಯಮವು ಎಲ್ಲಾ ವರ್ಗದ ಜನರನ್ನು ಒಂದುಗೂಡಿಸುವ ಸಾಮರ್ಥ್ಯವನ್ನು ಹೊಂದಿದೆ, ಅದು ಸಾಮರಸ್ಯದ ಸಮಾಜವನ್ನು ಸೃಷ್ಟಿಸುತ್ತದೆ. ʻಯುಎನ್‌ಡಬ್ಲ್ಯುಟಿಒʼ ಸಹಭಾಗಿತ್ವದಲ್ಲಿ ʻಜಿ 20 ಪ್ರವಾಸೋದ್ಯಮ ಡ್ಯಾಶ್ ಬೋರ್ಡ್ʼ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಇದು ಉತ್ತಮ ಕಾರ್ಯವಿಧಾನಗಳು, ಅಧ್ಯಯನಗಳು ಮತ್ತು ಸ್ಫೂರ್ತಿದಾಯಕ ಕಥಾನಕಗಳನ್ನು ಒಟ್ಟುಗೂಡಿಸುತ್ತದೆ. ಇದು ಇಂತಹ ಮೊದಲ ವೇದಿಕೆಯಾಗಲಿದೆ, ಜೊತೆಗೆ ನಿಮ್ಮ ಶಾಶ್ವತ ಪರಂಪರೆಯಾಗಿದೆ. ನಿಮ್ಮ ಚರ್ಚೆಗಳು ಮತ್ತು ʻಗೋವಾ ಮಾರ್ಗಸೂಚಿʼಯು ಪ್ರವಾಸೋದ್ಯಮದ ಪರಿವರ್ತಕ ಶಕ್ತಿಯನ್ನು ಸಾಕಾರಗೊಳಿಸುವ ನಮ್ಮ ಸಾಮೂಹಿಕ ಪ್ರಯತ್ನಗಳನ್ನು ದ್ವಿಗುಣಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಭಾರತದ ʻಜಿ 20ʼ ಅಧ್ಯಕ್ಷತೆಯ ಧ್ಯೇಯವಾಕ್ಯವಾದ "ವಸುದೈವ ಕುಟುಂಬಕಂ" - "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಸ್ವತಃ ಜಾಗತಿಕ ಪ್ರವಾಸೋದ್ಯಮದ ಧ್ಯೇಯವಾಕ್ಯವಾಗಿದೆ.

ಗೌರವಾನ್ವಿತರೇ,

ಭಾರತವು ಹಬ್ಬಗಳ ನಾಡು. ನಾವು ವರ್ಷಪೂರ್ತಿ, ದೇಶಾದ್ಯಂತ ಹಬ್ಬಗಳನ್ನು ಆಚರಿಸುತ್ತೇವೆ. ಗೋವಾದಲ್ಲಿ, ʻಸಾವೊ ಜೊವಾವೊʼ ಉತ್ಸವವು ಶೀಘ್ರದಲ್ಲೇ ಬರಲಿದೆ. ನೀವು ಭೇಟಿ ನೀಡಲೇಬೇಕಾದ ಮತ್ತೊಂದು ಉತ್ಸವವೂ ಇದೆ. ಅದು ಪ್ರಜಾಪ್ರಭುತ್ವದ ತಾಯಿಯಾದ ಭಾರತದಲ್ಲಿ ʻಪ್ರಜಾಪ್ರಭುತ್ವದ ಹಬ್ಬʼ. ಮುಂದಿನ ವರ್ಷ, ಭಾರತವು ತನ್ನ ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಗಲಿದೆ. ಒಂದು ತಿಂಗಳಿಗೂ ಹೆಚ್ಚು ಕಾಲ, ಸುಮಾರು ಒಂದು ಶತಕೋಟಿ ಮತದಾರರು ಈ ಹಬ್ಬವನ್ನು ಆಚರಿಸಲಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ತಮ್ಮ ಶಾಶ್ವತ ನಂಬಿಕೆಯನ್ನು ಪುನರುಚ್ಚರಿಸಲಿದ್ದಾರೆ. ಒಂದು ದಶಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳೊಂದಿಗೆ, ಈ ಹಬ್ಬಕ್ಕೆ ಸಾಕ್ಷಿಯಾಗಲು ಸ್ಥಳಗಳ ಕೊರತೆಯಿಲ್ಲ, ಆದರೆ ಪ್ರತಿಯೊಂದು ಸ್ಥಳವೂ ವೈವಿಧ್ಯತೆಯಿಂದ ಕೂಡಿರುತ್ತದೆ. ಜಾಗತಿಕ ಉತ್ಸವಗಳಲ್ಲಿ ಅತ್ಯಂತ ಪ್ರಮುಖವಾದ ಈ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಭೇಟಿ ನೀಡುವಂತೆ ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ. ಜೊತೆಗೆ, ನಿಮ್ಮ ಚರ್ಚೆಗಳಲ್ಲಿ ಯಶಸ್ಸು ಕೋರುತ್ತೇನೆ.

ಧನ್ಯವಾದಗಳು!

***



(Release ID: 1934120) Visitor Counter : 116