ಸಂಸ್ಕೃತಿ ಸಚಿವಾಲಯ

2021 ರ ಗಾಂಧಿ ಶಾಂತಿ ಪ್ರಶಸ್ತಿಯ ಘೋಷಣೆ 


ಗೋರಖ್‌ ಪುರದ ಗೀತಾ ಪ್ರೆಸ್‌ ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Posted On: 18 JUN 2023 4:02PM by PIB Bengaluru

ಈ ಗಾಂಧಿ ಶಾಂತಿ ಪ್ರಶಸ್ತಿಯು, ಮಹಾತ್ಮ ಗಾಂಧಿಯವರ ತತ್ವಾದರ್ಶಗಳನ್ನು ಪ್ರತಿಪಾದಿಸಿದ ಆದರ್ಶ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಗೌರವವಾಗಿ ಮಹಾತ್ಮ ಗಾಂಧಿಯವರ 125ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ , 1995 ರಲ್ಲಿ ಭಾರತ ಸರ್ಕಾರವು ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿದೆ.

ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಈ ಗಾಂಧಿ ಶಾಂತಿ ಪ್ರಶಸ್ತಿಯು ಮುಕ್ತವಾಗಿದೆ.

ಪ್ರಶಸ್ತಿಯು ರೂ. 1 ಕೋಟಿ ನಗದು, ಅಭಿನಂದನಾ ಪತ್ರ, ಸನ್ಮಾನ ಫಲಕ ಮತ್ತು ಸೊಗಸಾದ ಸಾಂಪ್ರದಾಯಿಕ ಕರಕುಶಲ/ಕೈಮಗ್ಗ ವಸ್ತುಗಳನ್ನು ಒಳಗೊಂಡಿರುತ್ತದೆ.

ಹಿಂದಿನ ಪ್ರಶಸ್ತಿ ಪುರಸ್ಕೃತರಲ್ಲಿ ಇಸ್ರೋ, ರಾಮಕೃಷ್ಣ ಮಿಷನ್, ಗ್ರಾಮೀಣ ಬ್ಯಾಂಕ್ ಆಫ್ ಬಾಂಗ್ಲಾದೇಶ, ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ, ಬೆಂಗಳೂರಿನ ಅಕ್ಷಯ ಪಾತ್ರೆ, , ಏಕಲ್ ಅಭಿಯಾನ್ ಟ್ರಸ್ಟ್, ಭಾರತ ಮತ್ತು ನವದೆಹಲಿಯ ಸುಲಭ್ ಇಂಟರ್‌ನ್ಯಾಶನಲ್ ಮುಂತಾದ ಸಂಸ್ಥೆಗಳು ಸೇರಿವೆ. ಇದಲ್ಲದೆ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ದಿವಂಗತ ಡಾ. ನೆಲ್ಸನ್ ಮಂಡೇಲಾ, ತಾಂಜಾನಿಯಾದ ಮಾಜಿ ಅಧ್ಯಕ್ಷ ಡಾ. ಜೂಲಿಯಸ್ ನೈರೆರೆ, ಶ್ರೀಲಂಕಾದ ಸರ್ವೋದಯ ಶ್ರಮದಾನ ಆಂದೋಲನದ ಸಂಸ್ಥಾಪಕ ಅಧ್ಯಕ್ಷ ಡಾ. ಎ.ಟಿ. ಅರಿಯರತ್ನೆ,  ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಡಾ. ಗೆರ್ಹಾರ್ಡ್ ಫಿಶರ್, ಶ್ರೀ ಬಾಬಾ ಆಮ್ಟೆ, ಐರ್ಲೆಂಡ್ ದೇಶದ ಡಾ. ಜಾನ್ ಹ್ಯೂಮ್, ಜೆಕೊಸ್ಲೊವಾಕಿಯಾದ ಮಾಜಿ ಅಧ್ಯಕ್ಷ ಶ್ರೀ ವಾಕ್ಲಾವ್ ಹ್ಯಾವೆಲ್, ದಕ್ಷಿಣ ಆಫ್ರಿಕಾದ ಆರ್ಚ್ ಬಿಷಪ್ ಶ್ರೀ ಡೆಸ್ಮಂಡ್ ಟುಟು, ಶ್ರೀ ಚಂಡಿ ಪ್ರಸಾದ್ ಭಟ್ ಮತ್ತು ಜಪಾನ್ ದೇಶದ ಶ್ರೀ ಯೋಹೆ ಸಸಕಾವಾ ಮುಂತಾದ ಗಣ್ಯರು ಈ ಮೊದಲು ಗಾಂಧಿ ಶಾಂತಿ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿ ಒಮಾನ್ ದೇಶದ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ (2019) ಮತ್ತು ಬಾಂಗ್ಲಾದೇಶದ ಬಂಗಬಂಧು ಶ್ರೀ ಶೇಖ್ ಮುಜಿಬುರ್ ರೆಹಮಾನ್ (2020) ಅವರು ಸೇರಿದ್ದಾರೆ.

ಸಾಮಾಜಿಕ, ಆರ್ಥಿಕ ಮತ್ತು ಅಹಿಂಸಾತ್ಮಕ ಮತ್ತು  ಗಾಂಧಿ ತತ್ವಗಳ ಮೂಲಕ ರಾಜಕೀಯ ಪರಿವರ್ತನೆಗಾಗಿ ಗೀತಾ ಮುದ್ರಣಾಲಯ (ಪ್ರೆಸ್) ಮಾಡಿರುವ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ 2021 ರ ಗಾಂಧಿ ಶಾಂತಿ ಪ್ರಶಸ್ತಿಗಾಗಿ 18 ಜೂನ್, 2023 ರಂದು ಗೀತಾ ಮುದ್ರಣಾಲಯ (ಪ್ರೆಸ್) ಸಂಸ್ಥೆಯನ್ನು ಆಯ್ಕೆ ಮಾಡಲು ಗೌರವಾನ್ವಿತ ಪ್ರಧಾನ ಮಂತ್ರಿಯವರ ನೇತೃತ್ವದ ತೀರ್ಪುಗಾರರ ಸಮಿತಿಯು ಸರ್ವಾನುಮತದಿಂದ ನಿರ್ಧರಿಸಿದೆ.  

1923 ರಲ್ಲಿ ಸ್ಥಾಪನೆಯಾದ ಗೀತಾ ಮುದ್ರಣಾಲಯ (ಪ್ರೆಸ್) ವಿಶ್ವದ ಅತಿದೊಡ್ಡ ಪ್ರಕಾಶಕ ಸಂಸ್ಥೆಗಳಲ್ಲಿ ಒಂದಾಗಿದೆ. 16.21 ಕೋಟಿ ಶ್ರೀಮದ್ ಭಗವದ್ಗೀತೆ ಸೇರಿದಂತೆ 41.7 ಕೋಟಿ ಪುಸ್ತಕಗಳನ್ನು 14 ಭಾಷೆಗಳಲ್ಲಿ ಗೀತಾ ಮುದ್ರಣಾಲಯ (ಪ್ರೆಸ್) ಪ್ರಕಟಿಸಿದೆ. ಸಂಸ್ಥೆಯು  ಆದಾಯಕ್ಕಾಗಿ ತನ್ನ ಪುಸ್ತಕ/ ಗ್ರಂಥ/ಪ್ರಕಟಣೆಗಳಲ್ಲಿ ಈ ತನಕ ಸಾರ್ವಜನಿಕ ಜಾಹೀರಾತಗಳನ್ನು ಎಂದಿಗೂ ಪ್ರಕಟಿಸಲಿಲ್ಲ ಹಾಗೂ ಅವುಗಳನ್ನು ಅವಲಂಬಿಸಿಲ್ಲ. ಗೀತಾ ಮುದ್ರಣಾಲಯ (ಪ್ರೆಸ್ ) ತನ್ನ ಸಂಯೋಜಿತ ಸಹ ಸಂಸ್ಥೆಗಳೊಂದಿಗೆ, ಜೀವನದ ಸುಧಾರಣೆ, ಸಾಮಾಜಿಕ ಕಾಳಜಿ ಮುಂತಾದ ಕ್ಷೇತ್ರಗಳಲ್ಲಿ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ವಿವಿಧ ರೀತಿಯಲ್ಲಿ ಸದಾ ಶ್ರಮಿಸುತ್ತಿದೆ.

****

ಈ ಸಂದರ್ಭದಲ್ಲಿ,  ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಗಾಂಧಿ ಆದರ್ಶಗಳನ್ನು ಪ್ರಚಾರ ಮಾಡುವಲ್ಲಿ ಗೀತಾ ಮುದ್ರಣಾಲಯ (ಪ್ರೆಸ್) ಇದರ ಕೊಡುಗೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದರು.  ಗೀತಾ ಮುದ್ರಣಾಲಯ (ಪ್ರೆಸ್) ಸ್ಥಾಪನೆಯಾಗಿ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗಾಂಧಿ ಶಾಂತಿ ಪ್ರಶಸ್ತಿ ಪ್ರದಾನ ಮಾಡಿರುವುದು ಸಂಸ್ಥೆಯು ಸಮಾಜ ಸೇವೆಯಲ್ಲಿ ಮಾಡಿರುವ ಕಾರ್ಯವನ್ನು ಗುರುತಿಸಿದಂತಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

"ಗಾಂಧಿ ಶಾಂತಿ ಪ್ರಶಸ್ತಿ 2021"ಯು ಮಾನವೀಯತೆಯ ನೆಲೆಯಲ್ಲಿ ಸಾಮಾಜಿಕ ಹಾಗೂ ಸಾಮೂಹಿಕ ಉನ್ನತಿಗೆ ಕೊಡುಗೆ ನೀಡುವಲ್ಲಿ ಗೀತಾ ಮುದ್ರಣಾಲಯದ ( ಪ್ರೆಸ್‌ ) ಪ್ರಮುಖ ಮತ್ತು ಸಾಟಿಯಿಲ್ಲದ ಕೊಡುಗೆಗಳನ್ನು ಗುರುತಿಸುತ್ತದೆ, ಮತ್ತು ಗಾಂಧಿವಾದಿ ಜೀವನವನ್ನು ನಿಜವಾದ ಅರ್ಥದಲ್ಲಿ ನಿರೂಪಿಸುತ್ತದೆ.

 **



(Release ID: 1933289) Visitor Counter : 195