ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಮೂಲಸೌಕರ್ಯವನ್ನು ಮೀರಿ ರಾಷ್ಟ್ರಕ್ಕೆ ಪ್ರಯೋಜನಗಳನ್ನು ನೀಡಲು ಪ್ರದೇಶಾಭಿವೃದ್ಧಿ ವಿಧಾನದೊಂದಿಗೆ ಪ್ರಧಾನಮಂತ್ರಿ ಗತಿಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು: ಶ್ರೀ ಪಿಯೂಷ್ ಗೋಯಲ್


ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಡಿಪಿಐಐಟಿ ಮತ್ತು ಎಂಟು ಸಚಿವಾಲಯಗಳೊಂದಿಗೆ ಪ್ರಧಾನಮಂತ್ರಿ ಗತಿಶಕ್ತಿ ಕುರಿತು ಸಭೆ ನಡೆಸಿದರು

ಪ್ರಧಾನಮಂತ್ರಿ ಗತಿಶಕ್ತಿಯ ಸಮಗ್ರ ಚೌಕಟ್ಟನ್ನು ಬಳಸಿಕೊಂಡು ಸಹಕಾರಿ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಂದ ಸಾಮಾನ್ಯ ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ಕೃಷಿ ಕ್ಷೇತ್ರವನ್ನು ಬೆಂಬಲಿಸಲಾಗುವುದು: ಶ್ರೀ ಪಿಯೂಷ್ ಗೋಯಲ್

Posted On: 15 JUN 2023 1:17PM by PIB Bengaluru

ಮೂಲಸೌಕರ್ಯ ಕ್ಷೇತ್ರವನ್ನು ಮೀರಿ ರಾಷ್ಟ್ರಕ್ಕೆ ಪ್ರಯೋಜನಗಳನ್ನು ನೀಡಲು ಪ್ರದೇಶಾಭಿವೃದ್ಧಿ ವಿಧಾನವನ್ನು ಬಳಸಿಕೊಂಡು ಪ್ರಧಾನಮಂತ್ರಿ ಗತಿಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಹೇಳಿದರು. ಶ್ರೀ ಗೋಯಲ್ ಅವರು ನಿನ್ನೆ ಸಂಜೆ ನವದೆಹಲಿಯಲ್ಲಿ ಡಿಪಿಐಐಟಿ ಮತ್ತು ಎಂಟು ಸಂಬಂಧಿತ ಸಚಿವಾಲಯಗಳೊಂದಿಗೆ ಪ್ರಧಾನ ಮಂತ್ರಿ ಗತಿಶಕ್ತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತದ ಮೂಲಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲು ಸಮಗ್ರ ವೇದಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಭಾಗವಹಿಸುವ ಸಚಿವಾಲಯಗಳು/ಇಲಾಖೆಗಳಿಗೆ ಸಚಿವರು ಕರೆ ನೀಡಿದರು.

ಪ್ರಧಾನಮಂತ್ರಿ ಗತಿಶಕ್ತಿಯ ಸಮಗ್ರ ಚೌಕಟ್ಟು ಮತ್ತು ರಾಷ್ಟ್ರೀಯ ಮಾಸ್ಟರ್ ಪ್ಲಾನ್ (ಎನ್‌ಎಂಪಿ) ದತ್ತಾಂಶವನ್ನು ಬಳಸಿಕೊಂಡು ಸಹಕಾರಿ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳು ಕೃಷಿ ಭೂಮಿಯಲ್ಲಿ ಸಾಮಾನ್ಯ ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ಕೃಷಿ ಕ್ಷೇತ್ರವನ್ನು ಬೆಂಬಲಿಸಬಹುದು ಎಂದು ಶ್ರೀ ಗೋಯಲ್ ಹೇಳಿದರು. ನೀತಿ ಆಯೋಗದ ಮಹತ್ವಾಕಾಂಕ್ಷೆಯ ಜಿಲ್ಲೆಗಳೊಂದಿಗೆ ತೊಡಗಿಸಿಕೊಳ್ಳಲು ಪ್ರಧಾನಮಂತ್ರಿ ಗತಿಶಕ್ತಿ ಅಡಿಯಲ್ಲಿ ಪ್ರದೇಶಾಭಿವೃದ್ಧಿ ವಿಧಾನವನ್ನು ಬಳಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಹಿರಿಯ ಅಧಿಕಾರಿಗಳಲ್ಲದೆ, ಸಭೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೆ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು, ನಾಗರಿಕ ವಿಮಾನಯಾನ, ಇಂಧನ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳು, ದೂರಸಂಪರ್ಕ ಇಲಾಖೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಭಾಸ್ಕರಾಚಾರ್ಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ಅಪ್ಲಿಕೇಶನ್ಸ್ ಮತ್ತು ಜಿಯೋ-ಇನ್ಫರ್ಮ್ಯಾಟಿಕ್ಸ್ (BISAG-N) ಮತ್ತು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ ( NICDC) ದ ಪ್ರನಿಧಿಗಳು ಸಭೆಯಲ್ಲಿ ಬಾಗವಹಿಸಿದರು.

ಡಿಪಿಐಐಟಿ ವಿಶೇಷ ಕಾರ್ಯದರ್ಶಿ,  ಶ್ರೀಮತಿ ಸುಮಿತಾ ದಾವ್ರಾ ಅವರು ಎನ್‌ಎಂಪಿಯ ಡೇಟಾ ಗುಣಮಟ್ಟವನ್ನು ಸುಧಾರಿಸುವುದು, ಡೇಟಾ ಲೇಯರ್‌ಗಳನ್ನು ಪ್ರಮಾಣೀಕರಿಸುವುದು ಮತ್ತು ಉತ್ತಮ ಯೋಜನೆಗಾಗಿ ಗುಣಮಟ್ಟ ಸುಧಾರಣಾ ಯೋಜನೆ (ಕ್ಯೂಐಪಿ) ಕಾರ್ಯವಿಧಾನವನ್ನು ಸ್ಥಾಪಿಸುವ ವಿಷಯದಲ್ಲಿ ಪ್ರಧಾನಮಂತ್ರಿ ಗತಿಶಕ್ತಿಯ ಪ್ರಗತಿಯನ್ನು ಪ್ರಸ್ತುತಪಡಿಸಿದರು. ಸಾಮಾಜಿಕ ವಲಯದ ಯೋಜನೆಗಾಗಿ ಎನ್‌ಎಂಪಿ ಬಳಕೆಯನ್ನು ಉತ್ತೇಜಿಸಲು, ದೇಶದಲ್ಲಿ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಈಗಾಗಲೇ ಹದಿನಾಲ್ಕು ಸಾಮಾಜಿಕ ವಲಯದ ಇಲಾಖೆಗಳು/ಸಚಿವಾಲಯಗಳ ಜೊತೆಗೆ ಐದು ಹೊಸ ಸಚಿವಾಲಯಗಳನ್ನು ಪ್ರಧಾನಮಂತ್ರಿ ಗತಿಶಕ್ತಿಯಲ್ಲಿ ಅಳವಡಿಸಲು ಪ್ರಸ್ತಾಪಿಸಲಾಗಿದೆ. ದೇಶೀಯ ಲಾಜಿಸ್ಟಿಕ್ಸ್ ಪೂರಕ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ, ಎಕ್ಸಿಂ ಲಾಜಿಸ್ಟಿಕ್ಸ್ ಅನ್ನು ಸುಧಾರಿಸಲು ಡಿಪಿಐಐಟಿ ಹಂತಹಂತವಾಗಿ ಕೆಲಸ ಮಾಡುತ್ತಿದೆ. ಇತರ ಸಂಬಂಧಪಟ್ಟ ಇಲಾಖೆಗಳು/ಸಚಿವಾಲಯಗಳೊಂದಿಗೆ ಎಕ್ಸಿಂ ಲಾಜಿಸ್ಟಿಕ್ಸ್ ಗುಂಪನ್ನು ರಚಿಸಲಾಗಿದೆ. ವಿಶ್ವ ಬ್ಯಾಂಕ್ ವರದಿಯ ಪ್ರತಿಯೊಂದು ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕ (ಎಲ್‌ ಪಿ ಐ) ನಿಯತಾಂಕಗಳ ಮೇಲೆ ದೇಶದ ಕಾರ್ಯಕ್ಷಮತೆಯನ್ನು ಸುಧಾರಿಸಲು ಕ್ರಿಯಾ ಯೋಜನೆಯನ್ನು ಶೀಘ್ರದಲ್ಲೇ ರೂಪಿಸಲಾಗುವುದು ಮತ್ತು ಕಾರ್ಯಗತಗೊಳಿಸಲಾಗುವುದು. ಜಿ ಎಸ್‌ ಟಿ ಎನ್‌ ಡೇಟಾದೊಂದಿಗೆ ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ (ಯು ಎಲ್‌ ಐ ಪಿ) ಅನ್ನು ಸಂಯೋಜಿಸುವ ಮೂಲಕ ಸರಕುಗಳ ಕೊನೆಯ ಹಂತದವರೆಗಿನ ಮಲ್ಟಿ-ಮೋಡಲ್ ಟ್ರ್ಯಾಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವ್ಯಾಪಕ ತಿಳುವಳಿಕೆ ಮತ್ತು ಅಳವಡಿಕೆಗಾಗಿ, ಕೇಂದ್ರೀಯ ತರಬೇತಿ ಸಂಸ್ಥೆಗಳಲ್ಲಿ ಪ್ರಧಾನಮಂತ್ರಿ ಗತಿಶಕ್ತಿ ಕುರಿತು ತರಬೇತಿ ಮಾಡ್ಯೂಲ್‌ಗಳ ಮೂಲಕ ರಾಜ್ಯ ಮಟ್ಟದಲ್ಲಿ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಯನ್ನು ಸಹ ಯೋಜಿಸಲಾಗಿದೆ.

ಮೂಲಸೌಕರ್ಯವನ್ನು ಬೆಳವಣಿಗೆಯ ಎಂಜಿನ್ ಎಂದು ಪರಿಗಣಿಸಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ 'ಸಂಪೂರ್ಣ ಸರ್ಕಾರದ' ವಿಧಾನದ ಅಗತ್ಯವನ್ನು ಪರಿಗಣಿಸಿ, ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (ಎನ್‌ಎಂಪಿ) ಅನ್ನು ಅಕ್ಟೋಬರ್ 2021 ರಲ್ಲಿ ಆರಂಭಿಸಲಾಯಿತು.

****

 

 



(Release ID: 1932601) Visitor Counter : 106