ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ನವದೆಹಲಿಯ ವಿಜ್ಞಾನ ಭವನದಲ್ಲಿಂದು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಸಚಿವರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನ @2047 ರ ಅಡಿಯಲ್ಲಿ, ಭಾರತವನ್ನು ವಿಪತ್ತು ತಾಳಿಕೊಳ್ಳುವ ದೇಶವಾಗಿ ಮಾಡಲು ವಿಪತ್ತಿನ ಅಪಾಯ ತಗ್ಗಿಸುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಸಭೆಯ ಮುಖ್ಯ ಉದ್ದೇಶವಾಗಿತ್ತು

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ದೇಶದಲ್ಲಿ ವಿಪತ್ತು ನಿರ್ವಹಣೆಗಾಗಿ 8000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಮೂರು ಪ್ರಮುಖ ಯೋಜನೆಗಳನ್ನು ಪ್ರಕಟಿಸಿದರು 

ರಾಜ್ಯಗಳಾದ್ಯಂತ ಅಗ್ನಿಶಾಮಕ ಸೇವೆಗಳನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು 5,000 ಕೋಟಿ ರೂ. ಯೋಜನೆ

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಏಳು ಮಹಾನಗರಗಳಾದ ಮುಂಬೈ, ಚೆನ್ನೈ, ಕೋಲ್ಕತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಗಳಲ್ಲಿ ನಗರಗಳಲ್ಲಿ ಪ್ರವಾಹದ ಅಪಾಯವನ್ನು ತಗ್ಗಿಸಲು 2,500 ಕೋಟಿ ರೂ. ಯೋಜನೆ

17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೂಕುಸಿತ ತಗ್ಗಿಸಲು 825 ಕೋಟಿ ರೂ.ಗಳ ರಾಷ್ಟ್ರೀಯ ಭೂಕುಸಿತ ಅಪಾಯ ತಗ್ಗಿಸುವ ಯೋಜನೆ

ವಿಪತ್ತಿನಿಂದ ಒಬ್ಬ ವ್ಯಕ್ತಿಯ ಜೀವವೂ ಹೋಗಬಾರದು ಎಂಬುದು ನಮ್ಮ ಪ್ರಯತ್ನವಾಗಬೇಕು, ಪ್ರಧಾನಮಂತ್ರಿ ಮೋದಿಯವರ ನಾಯಕತ್ವದಲ್ಲಿ, ಕಳೆದ 5 ವರ್ಷಗಳಲ್ಲಿ ಎಲ್ಲಾ ರಾಜ್ಯಗಳು ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿವೆ

ವಿಪತ್ತುಗಳ ಸ್ವರೂಪ ಬದಲಾಗಿದೆ, ಅವುಗಳ ಆವರ್ತನ ಮತ್ತು ತೀವ್ರತೆಯೂ ಹೆಚ್ಚಾಗಿದೆ, ಅದಕ್ಕಾಗಿಯೇ ನಾವು ನಮ್ಮ ಸಿದ್ಧತೆಗಳನ್ನು ತೀಕ್ಷ್ಣಗೊಳಿಸಬೇಕು ಮತ್ತು ವಿಸ್ತರಿಸಬೇಕು, ಈಗ ಅನೇಕ ಹೊಸ ಸ್ಥಳಗಳಲ್ಲಿ ಹೊಸ ವಿಪತ್ತುಗಳು ಬರುತ್ತಿವೆ, ಇದಕ್ಕಾಗಿ ನಾವು ನಮ್ಮನ್ನು ಸಜ್ಜು ಗೊಳಿಸಿಕೊಳ್ಳಬೇಕು

ಈ ಮೊದಲು, ವಿಪತ್ತಿನ ಬಗ್ಗೆ ನಮ್ಮ ವಿಧಾನವು ಪರಿಹಾರ ಕೇಂದ್ರಿತ ಮತ್ತು ಪ್ರತಿಗಾಮಿಯಾಗಿತ್ತು, ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸಾಮೂಹಿಕ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ, ನಾವು ತಳಮಟ್ಟದಲ್ಲಿ ಮುಂಚಿತವಾಗಿ ಎಚ್ಚರಿಕೆ ನೀಡುವ ವ್ಯವಸ್ಥೆ, ತಡೆಗಟ್ಟುವಿಕೆ, ತಗ್ಗಿಸುವಿಕೆ ಮತ್ತು ಸನ್ನದ್ಧತೆ ಆಧಾರಿತ ವಿಪತ್ತು ನಿರ್ವಹಣೆಯನ್ನು ಜಾರಿಗೆ ತಂದಿದ್ದೇವೆ

ಮೋದಿ ಸರ್ಕಾರವು ಹೆಚ್ಚಿನ ಅಪಾಯದ 350 ವಿಪತ್ತು ಪೀಡಿತ ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ಯುವ ಸ್ವಯಂಸೇವಕರನ್ನು ಸಿದ್ಧಪಡಿಸುವ ಗುರಿಯನ್ನು ನಿಗದಿಪಡಿಸಿದೆ, ವಿಪತ್ತುಗಳ ಸಮಯದಲ್ಲಿ ನಾವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ

Posted On: 13 JUN 2023 5:47PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಂದು ನವದೆಹಲಿಯ ವಿಜ್ಞಾನ ಭವನದಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಸಚಿವರೊಂದಿಗೆ ಸಭೆ ನಡೆಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನ (ವಿಷನ್) @ 2047 ರ ಅಡಿಯಲ್ಲಿ, ಭಾರತವನ್ನು ವಿಪತ್ತು ತಾಳಿಕೊಳ್ಳುವ ದೇಶವಾಗಿ ಮಾಡಲು, ವಿಪತ್ತು ಅಪಾಯ ತಗ್ಗಿಸುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದೊಂದಿಗೆ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸುವುದು ಸಭೆಯ ಮುಖ್ಯ ಉದ್ದೇಶವಾಗಿತ್ತು.

ತಮ್ಮ ಭಾಷಣದಲ್ಲಿ, ಶ್ರೀ ಅಮಿತ್ ಶಾ ಅವರು ದೇಶದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ 8,000 ಕೋಟಿ ರೂ.ಗಳ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸಿದರು:

1) ರಾಜ್ಯಗಳಾದ್ಯಂತ ಅಗ್ನಿಶಾಮಕ ಸೇವೆಗಳನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು 5,000 ಕೋಟಿ ರೂ.ಯೋಜನೆ

2) ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಏಳು ಮಹಾನಗರಗಳಾದ ಮುಂಬೈ, ಚೆನ್ನೈ, ಕೋಲ್ಕತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಗಳಲ್ಲಿ ನಗರ ಪ್ರವಾಹದ ಅಪಾಯವನ್ನು ತಗ್ಗಿಸಲು 2,500 ಕೋಟಿ ರೂ. ಯೋಜನೆ

3) 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೂಕುಸಿತ ತಗ್ಗಿಸಲು 825 ಕೋಟಿ ರೂ.ಗಳ ರಾಷ್ಟ್ರೀಯ ಭೂಕುಸಿತ ಅಪಾಯ ತಗ್ಗಿಸುವ ಯೋಜನೆ

ವಿಪತ್ತಿನಿಂದ ಒಬ್ಬ ವ್ಯಕ್ತಿಯೂ ಜೀವವನ್ನು ಕಳೆದುಕೊಳ್ಳಬಾರದು ಎಂಬುದು ನಮ್ಮ ಪ್ರಯತ್ನವಾಗಬೇಕು ಮತ್ತು ಪ್ರಧಾನಮಂತ್ರಿ ಮೋದಿಯವರ ನಾಯಕತ್ವದಲ್ಲಿ, ಕಳೆದ 5 ವರ್ಷಗಳಲ್ಲಿ ಎಲ್ಲಾ ರಾಜ್ಯಗಳು ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿವೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಮಟ್ಟದಲ್ಲಿ ನೀತಿಗಳನ್ನು ರೂಪಿಸಲು ಮತ್ತು ಪರಿಷ್ಕರಿಸಲು ಸಭೆಯಲ್ಲಿ ಚರ್ಚೆಗಳು ಅತ್ಯಗತ್ಯ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ಹಲವು ಮೈಲಿಗಲ್ಲುಗಳನ್ನು ಸಾಧಿಸಿವೆ, ಆದರೆ ನಾವು ಸಂತೃಪ್ತರಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ವಿಪತ್ತುಗಳ ಸ್ವರೂಪ ಬದಲಾಗಿದೆ ಮತ್ತು ಅವುಗಳ ಆವರ್ತನ ಮತ್ತು ತೀವ್ರತೆಯೂ ಹೆಚ್ಚಾಗಿದೆ, ಮತ್ತು ಈ ಕಾರಣಕ್ಕಾಗಿ ನಾವು ಅವುಗಳನ್ನು ಎದುರಿಸಲು ನಮ್ಮ ಸನ್ನದ್ಧತೆಯನ್ನು ತೀಕ್ಷ್ಣಗೊಳಿಸಬೇಕಾಗಿದೆ ಮತ್ತು ವಿಸ್ತರಿಸಬೇಕಾಗಿದೆ ಎಂದು ಅವರು ಹೇಳಿದರು. ವಿವಿಧ ಸ್ಥಳಗಳಲ್ಲಿ ಅನೇಕ ಹೊಸ ವಿಪತ್ತುಗಳು ಎದುರಾಗುತ್ತಿವೆ ಮತ್ತು ನಾವು ಅವುಗಳಿಗೆ ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.

2004 ರ ನಂತರ, ರಾಷ್ಟ್ರೀಯ ಮಟ್ಟದಲ್ಲಿ ವಿಪತ್ತು ನಿರ್ವಹಣೆಯ ಬಗ್ಗೆ ವ್ಯಾಪಕ ಚರ್ಚೆಯ ನಂತರ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಮೂಹಿಕ ಜವಾಬ್ದಾರಿ ಮತ್ತು ಸ್ಪಂದನೆ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕೋವಿಡ್ -19 ಸಾಂಕ್ರಾಮಿಕ ಅವಧಿಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯಗಳು ಶತಮಾನದ ಅತ್ಯಂತ ಕೆಟ್ಟ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿಭಾಯಿಸಿವೆ ಎಂದು ಅವರು ಹೇಳಿದರು. ಆ ಕಷ್ಟದ ಸಮಯದಲ್ಲಿ, ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಸಾರ್ವಜನಿಕರು ಪ್ರತಿಯೊಂದು ರಂಗದಲ್ಲೂ ಒಟ್ಟಾಗಿ ಹೋರಾಡುವ ಮೂಲಕ ಜಗತ್ತಿಗೆ ಅತ್ಯುತ್ತಮ ಉದಾಹರಣೆಯನ್ನು ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸರ್ಕಾರವು 220 ಕೋಟಿಗೂ ಹೆಚ್ಚು ಉಚಿತ ಕೊರೊನಾ ಲಸಿಕೆಗಳನ್ನು ಒದಗಿಸಿದೆ, ಕೋಟ್ಯಂತರ ಬಡ ಜನರಿಗೆ ಆಹಾರವನ್ನು ವ್ಯವಸ್ಥೆ ಮಾಡಿದೆ, ಲಕ್ಷಾಂತರ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕರೆತಂದಿದೆ ಮತ್ತು ಡಿಬಿಟಿ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸಲು ಕಾಳಜಿ ವಹಿಸಲಾಗಿದೆ ಎಂದು ಶ್ರೀ ಶಾ ಹೇಳಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಕೆಲವು ವರ್ಷಗಳ ಹಿಂದೆ, ವಿಪತ್ತಿನ ಬಗ್ಗೆ ನಮ್ಮ ವಿಧಾನವು ಪ್ರತಿಗಾಮಿ ಮತ್ತು ಪರಿಹಾರ ಕೇಂದ್ರಿತವಾಗಿತ್ತು ಎಂದು ಹೇಳಿದರು. ಕಳೆದ 9 ವರ್ಷಗಳಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸಾಮೂಹಿಕ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ನಾವು ಮುಂಚಿತವಾಗಿ ಎಚ್ಚರಿಕೆ ವ್ಯವಸ್ಥೆ, ತಡೆಗಟ್ಟುವಿಕೆ, ತಗ್ಗಿಸುವಿಕೆ ಮತ್ತು ಸನ್ನದ್ಧತೆ ಆಧಾರಿತ ವಿಪತ್ತು ನಿರ್ವಹಣೆಯ ಹೊಸ ವಿಧಾನವನ್ನು ಜಾರಿಗೆ ತಂದಿದ್ದೇವೆ ಎಂದು ಅವರು ಹೇಳಿದರು. ಹೆಚ್ಚಿನ ಅಪಾಯದ ವಿಪತ್ತು ಪೀಡಿತ 350 ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ಯುವ ಸ್ವಯಂಸೇವಕರನ್ನು ಸಿದ್ಧಪಡಿಸುವ ಗುರಿಯನ್ನು ಮೋದಿ ಸರ್ಕಾರ ನಿಗದಿಪಡಿಸಿದೆ ಮತ್ತು ವಿಪತ್ತುಗಳ ಸಮಯದಲ್ಲಿ ನಾವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಕೇಂದ್ರವು ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ 10 ದಿನಗಳ ಕಾಲಮಿತಿಯೊಳಗೆ 73 ಬಾರಿ ಐಎಂಸಿಟಿ ತಂಡಗಳನ್ನು ಕಳುಹಿಸುವ ಮೂಲಕ ರಾಜ್ಯಗಳಿಗೆ ಸಹಾಯ ಮಾಡಲು ಪೂರ್ವಭಾವಿ ಪ್ರಯತ್ನಗಳನ್ನು ಮಾಡಿದೆ ಎಂದು ಶ್ರೀ ಶಾ ಹೇಳಿದರು. 2005-06 ರಿಂದ 2013-14 ರವರೆಗಿನ 9 ವರ್ಷಗಳನ್ನು 2014-15 ರಿಂದ 2022-23 ರವರೆಗೆ ಹೋಲಿಸಿದಾಗ, ಎಸ್.ಡಿ.ಆರ್.ಎಫ್.ಗೆ ಬಿಡುಗಡೆಯಾಗಿದ್ದು 35,858 ಕೋಟಿ ರೂ.ಗಳ ನಿಧಿ. ಈಗ ಅದು ಸುಮಾರು ಮೂರು ಪಟ್ಟು ಹೆಚ್ಚಾಗಿ 1,04,704 ಕೋಟಿ ರೂ.ಗೆ ತಲುಪಿದೆ ಎಂದು ಅವರು ಹೇಳಿದರು. ಇದಲ್ಲದೆ, ಎನ್.ಡಿಆರ್.ಎಫ್ ನಿಂದ ಹಣ ಬಿಡುಗಡೆ 25,000 ಕೋಟಿ ರೂ.ಗಳಿಂದ 77,000 ಕೋಟಿ ರೂ.ಗೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಪೂರ್ವಭಾವಿ ವಿಧಾನದಿಂದಾಗಿ, ಕೇಂದ್ರ ಮತ್ತು ರಾಜ್ಯಗಳು ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ವಿಪತ್ತು ನಂತರದ ಪರಿಹಾರ ಮತ್ತು ಪುನರ್ವಸತಿ ಕ್ಷೇತ್ರಗಳಲ್ಲಿ ಬಜೆಟ್ ಹಂಚಿಕೆಯನ್ನು ಹೆಚ್ಚಿಸಿವೆ ಎಂದು ಅವರು ಹೇಳಿದರು. 2021ರಲ್ಲಿ, ರಾಷ್ಟ್ರೀಯ ವಿಪತ್ತು ತಗ್ಗಿಸುವ ನಿಧಿಯನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ 16,700 ಕೋಟಿ ರೂ.ಗಳೊಂದಿಗೆ ಮತ್ತು ಎಸ್.ಡಿ.ಎಂಎಫ್ ಅಡಿಯಲ್ಲಿ 32,000 ಕೋಟಿ ರೂ.ಗಳನ್ನು ತಗ್ಗಿಸುವ ಚಟುವಟಿಕೆಗಳಿಗಾಗಿ ಇರಿಸಲಾಗಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image002QLL4.jpg

ಭಾರತ ವಿಪತ್ತು ಸಂಪನ್ಮೂಲ ಜಾಲವನ್ನು ದೇಶಾದ್ಯಂತ ಪಟ್ಟಿ ಮಾಡಲಾಗಿದೆ ಮತ್ತು ಅದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೊಸ ದಾಖಲೆಗಳನ್ನು ದಾಖಲಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 354 ಕೋಟಿ ರೂ.ಗಳ ವೆಚ್ಚದಲ್ಲಿ ಎಸ್ಎಂಎಸ್ ಮೂಲಕ ಸಾಮಾನ್ಯ ಎಚ್ಚರಿಕೆ ಶಿಷ್ಟಾಚಾರವನ್ನು ಜಾರಿಗೆ ತರಲು ಅವಕಾಶ ಕಲ್ಪಿಸಲಾಗಿದೆ. ವಿಪತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆ ಪೋರ್ಟಲ್, 112 ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಯಂತಹ ಹಂತಗಳು ಉಪಯುಕ್ತ ಮತ್ತು ಬಹುಮುಖಿ ಉಪಕ್ರಮಗಳಾಗಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಕೊಡುಗೆ ನೀಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸುಭಾಷ್ ಚಂದ್ರ ಬೋಸ್ ಆಪ್ಡಾ ಪ್ರಬಂಧನ್ ಪುರಸ್ಕಾರ ನೀಡುವ ಸಂಪ್ರದಾಯಕ್ಕೆ ಚಾಲನೆ ನೀಡಿದ್ದಾರೆ ಎಂದರು. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಇದು ಭಾರಿ ಪ್ರೋತ್ಸಾಹ ನೀಡಿದೆ ಎಂದು ಶ್ರೀ ಶಾ ಹೇಳಿದರು.

ದೇಶದಲ್ಲಿ ಪ್ರವಾಹ ನಿರ್ವಹಣೆಗಾಗಿ ಇಸ್ರೋ ಈಶಾನ್ಯದಲ್ಲಿ 271 ಗದ್ದೆಗಳನ್ನು ಗುರುತಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಮೊದಲು, ಐಎಂಡಿ ಮಳೆ ಮತ್ತು ಪ್ರವಾಹದಿಂದ ಉಂಟಾಗುವ ಮೂರು ದಿನಗಳ ಮುಂಚಿತ ಮುನ್ಸೂಚನೆಯನ್ನು ನೀಡುತ್ತಿತ್ತು, ಈಗ ಅದನ್ನು 5 ದಿನಗಳ ಮುಂಚಿತವಾಗಿ ನೀಡಲಾಗುತ್ತಿದೆ, ಇದು ರಕ್ಷಣಾ ಪ್ರಯತ್ನಗಳಿಗೆ ಹೆಚ್ಚುವರಿ ಸಮಯವನ್ನು ಒದಗಿಸುತ್ತದೆ, ಮುಂದಿನ ವರ್ಷದ ವೇಳೆಗೆ 7 ದಿನಗಳ ಮುಂಚಿತವಾಗಿ ಅದನ್ನು ನೀಡಲು ನಿರ್ದೇಶನಗಳನ್ನು ನೀಡಲಾಗಿದೆ. ಪ್ರವಾಹಕ್ಕೆ ಗುರಿಯಾಗುವ 13 ಪ್ರಮುಖ ನದಿಗಳ ದಡದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪ್ರವಾಹವನ್ನು ನಿಯಂತ್ರಿಸಿದೆ ಎಂದು ಅವರು ಹೇಳಿದರು.

ಪರಮಾಣು ವಿದ್ಯುತ್ ಸ್ಥಾವರಗಳು ಇರುವ ರಾಜ್ಯಗಳಾದ್ಯಂತ 7 ವಿದ್ಯುತ್ ಸ್ಥಾವರ ಸ್ಥಳಗಳಿಗೆ ಎನ್ ಡಿಎಂಎ ಭೇಟಿ ನೀಡಿದೆ ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ಜನರನ್ನು ರಕ್ಷಿಸಲು ರಾಜ್ಯಗಳಿಗೆ ಕಟ್ಟುನಿಟ್ಟಿನ ಶಿಷ್ಟಾಚಾರಗಳನ್ನು ಕಳುಹಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದನ್ನು ತಮ್ಮ ಆದ್ಯತೆಯನ್ನಾಗಿ ಮಾಡಿಕೊಳ್ಳುವಂತೆ ಮತ್ತು ಅಣು ವಿದ್ಯುತ್ ಸ್ಥಾವರವು ಸಕ್ರಿಯವಾಗುವ ಮೊದಲು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಶ್ರೀ ಶಾ ಅವರು ರಾಜ್ಯಗಳ ಸಚಿವರಿಗೆ ತಿಳಿಸಿದರು. ಬಿಸಿ ಹವಾಮಾನ ಪರಿಸ್ಥಿತಿಗಳಿಗಾಗಿ 23 ರಾಜ್ಯಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ರೈತರಿಗೆ ಪರಿಹಾರ ನೀಡಲು ಕೆಲವು ರಾಜ್ಯಗಳು ಸಲಹೆಗಳನ್ನು ನೀಡಿವೆ, ಸರ್ಕಾರ ಇದನ್ನು ಖಂಡಿತವಾಗಿಯೂ ಪರಿಶೀಲಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಇದಕ್ಕಾಗಿ ರಾಜ್ಯಗಳು ತಮ್ಮ ಬಜೆಟ್ ಹಂಚಿಕೆಯನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು. ಮಾದರಿ ಅಗ್ನಿಶಾಮಕ ಮಸೂದೆಯನ್ನು ಅಳವಡಿಸಿಕೊಳ್ಳಲು ಮತ್ತು ರಾಜ್ಯಗಳಾದ್ಯಂತ ಏಕರೂಪದ ಕಾನೂನನ್ನು ತರಲು ಅವರು ಎಲ್ಲಾ ರಾಜ್ಯಗಳಿಗೆ ಸೂಚಿಸಿದರು. ಸಾಮಾನ್ಯ ಎಚ್ಚರಿಕೆ ಶಿಷ್ಟಾಚಾರಕ್ಕಾಗಿ ನಿರ್ಧರಿಸಲಾದ ಎಲ್ಲಾ ವಿಷಯಗಳು ಪೂರ್ಣಗೊಂಡಿವೆ ಎಂದು ಶ್ರೀ ಶಾ ಹೇಳಿದರು. 8 ರಾಜ್ಯಗಳ 87 ಜಿಲ್ಲೆಗಳಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಗಳ ಸಿದ್ಧತೆ ಇನ್ನೂ ಬಾಕಿ ಉಳಿದಿದೆ, ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು. ಗುಡುಗು ಮತ್ತು ಸಿಡಿಲಿನ ರಾಜ್ಯಮಟ್ಟದ ಕ್ರಿಯಾ ಯೋಜನೆಯನ್ನು ಕೇಂದ್ರವು ಕಳುಹಿಸಿದೆ ಮತ್ತು ಇಲ್ಲಿಯವರೆಗೆ, 25 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅದನ್ನು ಕೇಂದ್ರದೊಂದಿಗೆ ಹಂಚಿಕೊಂಡಿಲ್ಲ ಎಂದು ಅವರು ಹೇಳಿದರು. ಸಿಡಿಲಿನಿಂದ ಯಾವುದೇ ಪ್ರಾಣಹಾನಿಯಾಗದಂತೆ ನಾವು ಪ್ರಯತ್ನಗಳನ್ನು ಮಾಡಬೇಕು ಮತ್ತು ಆದ್ದರಿಂದ ಈ ಎಲ್ಲಾ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ದಿಕ್ಕಿನಲ್ಲಿ ಮುಂದುವರಿಯಬೇಕು ಎಂದು ಅವರು ಹೇಳಿದರು. ಶೀತಗಾಳಿ ಮತ್ತು ಮಂಜಿನ ಬಗ್ಗೆ ರಾಜ್ಯ ಮಟ್ಟದ ಕ್ರಿಯಾ ಯೋಜನೆಯನ್ನು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದೆ ಮತ್ತು 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದಕ್ಕಾಗಿ ತಮ್ಮ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಲ್ಲ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಬೇಗ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಘಟನೆ ಪ್ರತಿಕ್ರಿಯೆ ವ್ಯವಸ್ಥೆಯನ್ನು 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆ ಆದರೆ 16 ರಾಜ್ಯಗಳು ಇನ್ನೂ ಅದನ್ನು ಜಾರಿಗೆ ತರಬೇಕಿದೆ ಎಂದು ಶ್ರೀ ಶಾ ಹೇಳಿದರು.

ಸಭೆಯಲ್ಲಿ ವಿಪತ್ತು ಸನ್ನದ್ಧತೆ, ತಗ್ಗಿಸುವಿಕೆ, ಸ್ಪಂದನೆ, ಪರಮಾಣು ವಿದ್ಯುತ್ ಸ್ಥಾವರಗಳ ಸುರಕ್ಷತೆ, ಮುಂಚಿತ ಎಚ್ಚರಿಕೆ ಮತ್ತು ಪ್ರಸರಣ ವ್ಯವಸ್ಥೆಗಳು, ತಗ್ಗಿಸುವ ನಿಧಿಯ ಬಳಕೆ, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳ (ಎಸ್.ಡಿ. ಆರ್.ಎಫ್), ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು (ಎಸ್.ಡಿಎಂಎಗಳು), ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಮತ್ತು ವಿಪತ್ತು ಸನ್ನದ್ಧತೆ, ಪ್ರತಿಕ್ರಿಯೆ ಮತ್ತು ತಗ್ಗಿಸುವಿಕೆಯಲ್ಲಿ ಸಮುದಾಯದಿಂದ ಸ್ವಯಂಸೇವಕರನ್ನು ಪ್ರೋತ್ಸಾಹಿಸುವ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಎತ್ತಲಾದ ವಿಷಯಗಳ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರು ಮತ್ತು ಪ್ರತಿನಿಧಿಗಳು ಅಮೂಲ್ಯವಾದ ವಿಚಾರಗಳನ್ನು ಹಂಚಿಕೊಂಡರು. ಆಯಾ ರಾಜ್ಯಗಳು ಅನುಸರಿಸುತ್ತಿರುವ ಉತ್ತಮ ರೂಢಿಗಳು ಮತ್ತು ವಿಪತ್ತು ನಿರ್ವಹಣೆಯಲ್ಲಿ ಭವಿಷ್ಯದ ಸವಾಲುಗಳ ಬಗ್ಗೆ ಅಭಿಪ್ರಾಯಗಳನ್ನು ಅವರು ಹಂಚಿಕೊಂಡರು.

ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿವೆ ಎಂದು ಸಭೆಯಲ್ಲಿ ಗಮನಕ್ಕೆ ತರಲಾಯಿತು. ತಡೆರಹಿತ ಕಾರ್ಯಗತಗೊಳಿಸುವಿಕೆಯೊಂದಿಗೆ ತಂಡದ ಪ್ರಯತ್ನವು ಜೀವ, ಆಸ್ತಿ ಮತ್ತು ಜೀವನೋಪಾಯದ ಕನಿಷ್ಠ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಸಭೆಯಲ್ಲಿ ಮತ್ತೆ ಒತ್ತಿಹೇಳಲಾಯಿತು.

ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಚಿವರು, ಲೆಫ್ಟಿನೆಂಟ್ ಗವರ್ನರ್ಗಳು / ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳು, ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಇಲಾಖೆಯ ಹಿರಿಯ ಅಧಿಕಾರಿಗಳು, ಸದಸ್ಯ (ಎನ್.ಡಿಎಂಎ), ಮಹಾನಿರ್ದೇಶಕರು (ಎನ್.ಡಿ.ಆರ್.ಎಫ್), ಮಹಾನಿರ್ದೇಶಕರು (ಎಫ್ಎಸ್, ಸಿಡಿ ಮತ್ತು ಎಚ್.ಜಿ.), ಕಾರ್ಯನಿರ್ವಾಹಕ ನಿರ್ದೇಶಕರು (ಎನ್ಐಡಿಎಂ) ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

****

 


(Release ID: 1932136) Visitor Counter : 172