ಪ್ರಧಾನ ಮಂತ್ರಿಯವರ ಕಛೇರಿ
ʻಜಿ20 ಅಭಿವೃದ್ಧಿ ಸಚಿವರ ಸಭೆ’ ಉದ್ದೇಶಿಸಿ ಪ್ರಧಾನಿ ಭಾಷಣ
"ಕಾಶಿಯು ಶತ-ಶತಮಾನಗಳಿಂದಲೂ ಜ್ಞಾನ, ಚರ್ಚೆ, ಸಮಾಲೋಚನೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ"
"ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ವಿಚಾರದಲ್ಲಿ ಹಿಂದುಳಿಯದಂತೆ ನೋಡಿಕೊಳ್ಳುವುದು ಜನರ ಸಾಮೂಹಿಕ ಜವಾಬ್ದಾರಿಯಾಗಿದೆ"
"ಅಭಿವೃದ್ಧಿವಂಚಿತವಾಗಿದ್ದ ನೂರಕ್ಕೂ ಹೆಚ್ಚು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಜನರ ಜೀವನವನ್ನು ಸುಧಾರಿಸುವ ಪ್ರಯತ್ನಗಳನ್ನು ನಾವು ಮಾಡಿದ್ದೇವೆ"
"ಡಿಜಿಟಲೀಕರಣವು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ, ಜನರನ್ನು ಸಬಲೀಕರಣಗೊಳಿಸಲು, ದತ್ತಾಂಶವನ್ನು ಜನರಿಗೆ ಲಭ್ಯವಾಗಿಸಲು ಮತ್ತು ಎಲ್ಲರ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಸಾಧನವಾಗಿ ಬಳಸಲಾಗುತ್ತಿದೆ"
"ಭಾರತದಲ್ಲಿ ನಾವು ನದಿಗಳು, ಮರಗಳು, ಪರ್ವತಗಳು ಮತ್ತು ಪ್ರಕೃತಿಯ ಎಲ್ಲಾ ಅಂಶಗಳ ಬಗ್ಗೆ ಅತ್ಯಂತ ಗೌರವದ ಭಾವನೆ ಹೊಂದಿದ್ದೇವೆ"
"ಭಾರತವು ಮಹಿಳಾ ಸಬಲೀಕರಣಕ್ಕೆ ಸೀಮಿತವಾಗಿಲ್ಲ, ಮಹಿಳಾ ನೇತೃತ್ವದ ಅಭಿವೃದ್ಧಿವರೆಗೂ ಅದು ವಿಸ್ತರಿಸಿದೆ"
Posted On:
12 JUN 2023 10:03AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ಜಿ20 ಅಭಿವೃದ್ಧಿ ಸಚಿವರ ಸಭೆ’ಯನ್ನುದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರಜಾಪ್ರಭುತ್ವದ ತಾಯಿಯ ಅತ್ಯಂತ ಹಳೆಯ ಜೀವಂತ ನಗರವೆನಿಸಿದ ವಾರಾಣಸಿಗೆ ಎಲ್ಲರನ್ನೂ ಸ್ವಾಗತಿಸಿದರು. ಕಾಶಿಯ ಮಹತ್ವವನ್ನು ಒತ್ತಿ ಹೇಳಿದ ಅವರು, ಇದು ಶತಮಾನಗಳಿಂದ ಜ್ಞಾನ, ಚರ್ಚೆ, ಸಮಾಲೋಚನೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ಇದು ಭಾರತದ ವೈವಿಧ್ಯಮಯ ಪರಂಪರೆಯ ಸಾರವನ್ನು ಹೊಂದಿದೆ. ಜೊತೆಗೆ, ದೇಶದ ಎಲ್ಲಾ ಭಾಗಗಳ ಜನರಿಗೆ ಸಮಾಗಮದ ಬಿಂದುವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ʻಜಿ20 ಅಭಿವೃದ್ಧಿ ಕಾರ್ಯಸೂಚಿʼ ಕಾಶಿಯವರೆಗೂ ತಲುಪಿರುವುದಕ್ಕೆ ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು.
“ಜಾಗತಿಕ ದಕ್ಷಿಣದ ದೇಶಗಳ ಪಾಲಿಗೆ ಅಭಿವೃದ್ಧಿಯು ಅತ್ಯಂತ ಆದ್ಯತೆಯ ವಿಷಯ,ʼʼ ಎಂದು ಹೇಳಿದ ಪ್ರಧಾನಿ, ಜಾಗತಿಕ ಕೋವಿಡ್ ಸಾಂಕ್ರಾಮಿಕದಿಂದಾಗಿ ಸೃಷ್ಟಿಯಾದ ಅಡೆತಡೆಗಳಿಂದ ಈ ದೇಶಗಳು ಎದುರಿಸಿದ ತೀವ್ರ ಪರಿಣಾಮಗಳ ಬಗ್ಗೆ ವಿವರಿಸಿದರು. ಇದೇ ವೇಳೆ, ಪ್ರಸ್ತುತ ಮುಂದುವರಿದಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿಗೆ ಕಾರಣವಾಗಿವೆ ಎಂದು ಪ್ರಧಾನಿ ಹೇಳಿದರು. ಇಂತಹ ಸಂದರ್ಭಗಳಲ್ಲಿ ನೀವು ಕೈಗೊಳ್ಳುವ ನಿರ್ಧಾರಗಳು ಒಟ್ಟಾರೆ ಮನುಕುಲದ ಪಾಲಿಗೆ ಮಹತ್ತರವಾದವಾಗಿವೆ ಎಂದು ಪ್ರಧಾನಿ ಹೇಳಿದರು. ಸುಸ್ಥಿರ ಅಭಿವೃದ್ಧಿ ಗುರಿಗಳು ಹಿಂದುಳಿಯದಂತೆ ನೋಡಿಕೊಳ್ಳುವುದು ಜನರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇದನ್ನು ಸಾಧಿಸಲು ಅಗತ್ಯವಿರುವ ಕ್ರಿಯಾ ಯೋಜನೆಯ ಬಗ್ಗೆ ಜಾಗತಿಕ ದಕ್ಷಿಣದ ದೇಶಗಳು ಜಗತ್ತಿಗೆ ಬಲವಾದ ಸಂದೇಶವನ್ನು ರವಾನಿಸಬೇಕು ಎಂದು ಅವರು ಹೇಳಿದರು.
ನಮ್ಮ ಪ್ರಯತ್ನಗಳು ಸಮಗ್ರ, ಎಲ್ಲರನ್ನೂ ಒಳಗೊಂಡ, ನ್ಯಾಯಸಮ್ಮತ ಮತ್ತು ಸುಸ್ಥಿರವಾಗಿರಬೇಕು. ಜೊತೆಗೆ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ನಿಟ್ಟಿನಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಅನೇಕ ದೇಶಗಳು ಎದುರಿಸುತ್ತಿರುವ ಸಾಲದ ಅಪಾಯಗಳಿಗೆ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಪ್ರಧಾನಿ ಕರೆ ನೀಡಿದರು. ಅಗತ್ಯವಿರುವವರಿಗೆ ಹಣಕಾಸು ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಅರ್ಹತಾ ಮಾನದಂಡಗಳನ್ನು ವಿಸ್ತರಿಸಲು ಬಹುಪಕ್ಷೀಯ ಹಣಕಾಸು ಸಂಸ್ಥೆಗಳನ್ನು ಸುಧಾರಿಸಬೇಕು ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಭಾರತದಲ್ಲಿ, ಅಭಿವೃದ್ಧಿಯಲ್ಲಿ ಹಿಂದುಳಿದ ನೂರಕ್ಕೂ ಹೆಚ್ಚು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಜನರ ಜೀವನವನ್ನು ಸುಧಾರಿಸುವ ಪ್ರಯತ್ನಗಳನ್ನು ನಾವು ಮಾಡಿದ್ದೇವೆ ಎಂದು ಪ್ರಧಾನಿ ತಿಳಿಸಿದರು. ಈ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಈಗ ದೇಶದ ಬೆಳವಣಿಗೆಯ ವೇಗವರ್ಧಕಗಳಾಗಿ ಹೊರಹೊಮ್ಮಿವೆ ಎಂದು ಒತ್ತಿಹೇಳಿದ ಅವರು, ಅಭಿವೃದ್ಧಿಯ ಈ ಮಾದರಿಯನ್ನು ಅಧ್ಯಯನ ಮಾಡುವಂತೆ ಜಿ20 ಅಭಿವೃದ್ಧಿ ಸಚಿವರನ್ನು ಒತ್ತಾಯಿಸಿದರು. "ಕಾರ್ಯಸೂಚಿ-2030 ಅನ್ನು ವೇಗಗೊಳಿಸುವ ನಿಟ್ಟಿನಲ್ಲಿ ನೀವು ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದು ಪ್ರಸ್ತುತವಾಗಬಹುದು," ಎಂದು ಅವರು ಹೇಳಿದರು.
ಹೆಚ್ಚುತ್ತಿರುವ ದತ್ತಾಂಶ ವಿಭಜನೆಯ ಸಮಸ್ಯೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಅರ್ಥಪೂರ್ಣ ನೀತಿ ನಿರೂಪಣೆ, ಸಮರ್ಥ ಸಂಪನ್ಮೂಲ ಹಂಚಿಕೆ ಹಾಗೂ ಪರಿಣಾಮಕಾರಿ ಸಾರ್ವಜನಿಕ ಸೇವೆ ವಿತರಣೆಗೆ ಉತ್ತಮ ಗುಣಮಟ್ಟದ ದತ್ತಾಂಶ ನಿರ್ಣಾಯಕವಾಗಿದೆ ಎಂದರು. ತಂತ್ರಜ್ಞಾನದ ಸಾರ್ವತ್ರೀಕರಣವು ಡೇಟಾ ವಿಭಜನೆಯನ್ನು ನಿವಾರಿಸಲು ಸಹಾಯ ಮಾಡುವ ನಿರ್ಣಾಯಕ ಸಾಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಭಾರತದಲ್ಲಿ, ಡಿಜಿಟಲೀಕರಣವು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಜನರನ್ನು ಸಬಲೀಕರಣಗೊಳಿಸಲು, ಡೇಟಾ ಲಭ್ಯತೆ ಹೆಚ್ಚಿಸಲು ಹಾಗೂ ಒಳಗೊಳ್ಳುವಿಕೆಯನ್ನು ಖಾತರಿಪಡಿಸಲು ತಂತ್ರಜ್ಞಾನವನ್ನು ಸಾಧನವಾಗಿ ಬಳಸಲಾಗುತ್ತಿದೆ ಎಂದು ಪ್ರಧಾನಿ ವಿವರಿಸಿದರು. ಭಾರತವು ತನ್ನ ಅನುಭವವನ್ನು ಪಾಲುದಾರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದರು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾಹಿತಿ ಹಂಚಿಕೆ, ಅಭಿವೃದ್ಧಿ ಹಾಗೂ ಸಾರ್ವಜನಿಕ ಸೇವಾ ವಿತರಣೆಗಾಗಿ ಡೇಟಾ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಲ್ಲಿ ನಡೆಯುವ ಚರ್ಚೆಗಳು ಸ್ಪಷ್ಟ ಕ್ರಮಗಳಿಗೆ ದಾರಿ ಮಾಡುತ್ತವೆ ಎಂಬ ಭರವಸೆಯನ್ನು ಪ್ರಧಾನಿ ವ್ಯಕ್ತಪಡಿಸಿದರು.
"ಭಾರತದಲ್ಲಿ, ನದಿಗಳು, ಮರಗಳು, ಪರ್ವತಗಳು ಮತ್ತು ಪ್ರಕೃತಿಯ ಎಲ್ಲಾ ಅಂಶಗಳ ಬಗ್ಗೆ ನಮಗೆ ಅಪಾರ ಗೌರವವಿದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಭೂಮಂಡಲದ ಪರವಾದ ಜೀವನಶೈಲಿಯನ್ನು ಉತ್ತೇಜಿಸುವ ಸಾಂಪ್ರದಾಯಿಕ ಭಾರತೀಯ ಚಿಂತನೆಯ ಮೇಲೆ ಬೆಳಕು ಚೆಲ್ಲಿದರು. ಕಳೆದ ವರ್ಷ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿವರೊಂದಿಗೆ ʻಪರಿಸರಕ್ಕಾಗಿ ಜೀವನಶೈಲಿ ಅಭಿಯಾನʼ (Mission LiFE) ಪ್ರಾರಂಭಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಉನ್ನತ ಮಟ್ಟದ ತತ್ವಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಕಾರ್ಯಪಡೆಯು ಕೆಲಸ ಮಾಡುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. "ಇದು ಹವಾಮಾನ ಉಪಕ್ರಮಕ್ಕೆ ಮಹತ್ವದ ಕೊಡುಗೆಯಾಗಿದೆ" ಎಂದು ಪ್ರಧಾನಿ ಹೇಳಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ಮಹಿಳಾ ಸಬಲೀಕರಣಕ್ಕೆ ಮಾತ್ರ ಸೀಮಿತವಾಗಿಲ್ಲ, ಮಹಿಳಾ ನೇತೃತ್ವದ ಅಭಿವೃದ್ಧಿಗೂ ಅದರ ವ್ಯಾಪ್ತಿ ವಿಸ್ತರಿಸಿದೆ ಎಂದರು. ಮಹಿಳೆಯರು ಅಭಿವೃದ್ಧಿಯ ಕಾರ್ಯಸೂಚಿಯನ್ನು ರೂಪಿಸುತ್ತಿದ್ದಾರೆ ಮತ್ತು ಬೆಳವಣಿಗೆ ಹಾಗೂ ಬದಲಾವಣೆಯ ಹರಿಕಾರರೂ ಆಗಿದ್ದಾರೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಮಹಿಳೆಯರ ನೇತೃತ್ವದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಕ್ರಾಂತಿಕಾರಿ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
“ಕಾಶಿಯ ಚೈತನ್ಯಕ್ಕೆ ಭಾರತದ ಕಾಲಾತೀತ ಸಂಪ್ರದಾಯಗಳು ಶಕ್ತಿ ತುಂಬಿವೆ,ʼʼ ಎಂದು ಹೇಳುವ ಮೂಲಕ ಪ್ರಧಾನಿಯವರು ತಮ್ಮ ಮಾತು ಮುಗಿಸಿದರು. ಗಣ್ಯರು ತಮ್ಮ ಎಲ್ಲಾ ಸಮಯವನ್ನು ಚರ್ಚಾ ಗೋಷ್ಠಿಗಳಲ್ಲೇ ಕಳೆಯಬಾರದು ಎಂದು ಒತ್ತಾಯಿಸಿದ ಶ್ರೀ ಮೋದಿ ಅವರು, ಕಾಶಿಯ ಸ್ಫೂರ್ತಿಯನ್ನು ಅನ್ವೇಷಿಸುವಂತೆ ಹಾಗೂ ಅನುಭವಿಸುವಂತೆ ಪ್ರೋತ್ಸಾಹಿಸಿದರು. "ಗಂಗಾ ಆರತಿಯನ್ನು ಅನುಭವಿಸುವುದು ಮತ್ತು ಸಾರನಾಥಕ್ಕೆ ಭೇಟಿ ನೀಡುವುದು ನಿಮ್ಮ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ ಎಂಬ ವಿಶ್ವಾಸ ನನಗಿದೆ", ಎಂದು ಪ್ರಧಾನಿ ಹೇಳಿದರು. ʻಕಾರ್ಯಸೂಚಿ-2030ʼ ಅನ್ನು ಉತ್ತೇಜಿಸುವ ಮತ್ತು ಜಾಗತಿಕ ದಕ್ಷಿಣದ ದೇಶಗಳ ಆಕಾಂಕ್ಷೆಗಳನ್ನು ಈಡೇರಿಸುವ ಚರ್ಚೆಗಳಲ್ಲಿ ಯಶಸ್ಸಿಗಾಗಿ ಶ್ರೀ ಮೋದಿ ಅವರು ಶುಭ ಹಾರೈಸಿದರು.
*****
(Release ID: 1931658)
Visitor Counter : 153
Read this release in:
Telugu
,
English
,
Urdu
,
Marathi
,
Hindi
,
Nepali
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam