ಸಹಕಾರ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವು, 2000 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ (ಪಿಎಸಿಎಸ್) ದೇಶದಾದ್ಯಂತ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲು ನಿರ್ಧರಿಸಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಮನ್ಸುಖ್ ಎಸ್ ಮಾಂಡವೀಯ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆಯಲು ದೇಶಾದ್ಯಂತ 2000 ಪಿಎಸಿಎಸ್‌ಗಳನ್ನು ಗುರುತಿಸಲಾಗುವುದು, ಈ ವರ್ಷದ ಆಗಸ್ಟ್ ಹೊತ್ತಿಗೆ 1000 ಮತ್ತು ಡಿಸೆಂಬರ್‌ನೊಳಗೆ 1000 ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು.
ಈ ಮಹತ್ವದ ನಿರ್ಧಾರವು ಪಿಎಸಿಎಸ್‌ನ ಆದಾಯವನ್ನು ಹೆಚ್ಚಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮಾತ್ರವಲ್ಲದೆ ಜನರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುವಂತೆ ಮಾಡುತ್ತದೆ.
Posted On:
06 JUN 2023 6:53PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವು, 2000 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ (ಪಿಎಸಿಎಸ್) ದೇಶದಾದ್ಯಂತ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲು ನಿರ್ಧರಿಸಿದೆ. ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಮನ್ಸುಖ್ ಎಸ್. ಮಾಂಡವಿಯಾ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆಯಲು ದೇಶಾದ್ಯಂತ 2000 ಪಿಎಸಿಎಸ್ ಗಳನ್ನು ಗುರುತಿಸಲಾಗುತ್ತದೆ. ಈ ವರ್ಷದ ಆಗಸ್ಟ್ ಹೊತ್ತಿಗೆ 1000 ಮತ್ತು ಡಿಸೆಂಬರ್‌ನೊಳಗೆ 1000 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು. ಈ ಮಹತ್ವದ ನಿರ್ಧಾರವು ಪಿಎಸಿಎಸ್‌ನ ಆದಾಯವನ್ನು ಹೆಚ್ಚಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮಾತ್ರವಲ್ಲದೆ ಜನರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುವಂತೆ ಮಾಡುತ್ತದೆ. ಸಹಕಾರ ಸಚಿವಾಲಯದ ಕಾರ್ಯದರ್ಶಿ, ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಕಾರ್ಯದರ್ಶಿ ಮತ್ತು ಸಹಕಾರ ಸಚಿವಾಲಯ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದುವರೆಗೆ ದೇಶದಾದ್ಯಂತ 9400 ಕ್ಕೂ ಹೆಚ್ಚು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಜನೌಷಧಿ ಕೇಂದ್ರಗಳಲ್ಲಿ 1800 ವಿಧದ ಔಷಧಗಳು ಮತ್ತು 285 ಇತರ ವೈದ್ಯಕೀಯ ಸಾಧನಗಳು ಲಭ್ಯವಿವೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳು ಬ್ರ್ಯಾಂಡೆಡ್ ಔಷಧಿಗಳಿಗೆ ಹೋಲಿಸಿದರೆ ಶೇ.50 ರಿಂದ ಶೇ.90 ರಷ್ಟು ಕಡಿಮೆ ದರದಲ್ಲಿ ಲಭ್ಯವಿವೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ತೆರೆಯಲು ವೈಯಕ್ತಿಕ ಅರ್ಜಿದಾರರಿಗೆ ಅರ್ಹತೆಯ ಮಾನದಂಡಗಳಲ್ಲಿ ಅವರು ಡಿ. ಫಾರ್ಮಾ/ಬಿ. ಫಾರ್ಮಾ ಪದವಿ ಹೊಂದಿರಬೇಕು. ಯಾವುದೇ ಸಂಸ್ಥೆ, ಎನ್‌ಜಿಒ, ಚಾರಿಟಬಲ್ ಸಂಸ್ಥೆ ಮತ್ತು ಆಸ್ಪತ್ರೆಗಳು ಬಿ.ಫಾರ್ಮಾ / ಡಿ.ಫಾರ್ಮಾ ಪದವಿ ಹೊಂದಿರುವವರನ್ನು ನೇಮಿಸಿಕೊಳ್ಳುವ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ತೆರೆಯಲು ಕನಿಷ್ಠ 120 ಚದರ ಅಡಿ ಜಾಗವು ಖಾಸಗಿ ಒಡೆತನದಲ್ಲಿ ಅಥವಾ ಬಾಡಿಗೆಗೆ ಲಭ್ಯವಿರಬೇಕು. ಜನೌಷಧಿ ಕೇಂದ್ರಕ್ಕೆ ಅರ್ಜಿ ಶುಲ್ಕ 5000 ರೂ. ಮಹಿಳಾ ಉದ್ಯಮಿಗಳು, ದಿವ್ಯಾಂಗರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಮಾಜಿ ಸೈನಿಕರು ವಿಶೇಷ ವರ್ಗದ ಅಡಿಯಲ್ಲಿ ಬರುತ್ತಾರೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಹಿಮಾಲಯ ಪರ್ವತ ಪ್ರದೇಶಗಳು, ಈಶಾನ್ಯ ರಾಜ್ಯಗಳು ಮತ್ತು ದ್ವೀಪಗಳು ವಿಶೇಷ ಪ್ರದೇಶಗಳ ಅಡಿಯಲ್ಲಿವೆ. ವಿಶೇಷ ವರ್ಗಗಳು ಮತ್ತು ವಿಶೇಷ ಪ್ರದೇಶಗಳ ಅರ್ಜಿದಾರರಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇದೆ.
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಪ್ರೋತ್ಸಾಹಕ ಮೊತ್ತವು 5 ಲಕ್ಷ ರೂ.(ಮಾಸಿಕ ಖರೀದಿಯ ಶೇ.15 ಅಥವಾ ತಿಂಗಳಿಗೆ ಗರಿಷ್ಠ 15,000 ರೂ.) ಆಗಿದೆ. ವಿಶೇಷ ವರ್ಗಗಳು ಮತ್ತು ಪ್ರದೇಶಗಳಲ್ಲಿ ಐಟಿ ಮತ್ತು ಮೂಲಸೌಕರ್ಯ ವೆಚ್ಚಗಳಿಗೆ ಮರುಪಾವತಿಯಾಗಿ 2 ಲಕ್ಷ ರೂ.ಗಳ ಒಂದು ಬಾರಿ ಹೆಚ್ಚುವರಿ ಪ್ರೋತ್ಸಾಹವನ್ನು ಸಹ ಒದಗಿಸಲಾಗುತ್ತದೆ.
****
(Release ID: 1930398)
Visitor Counter : 137