ರಾಷ್ಟ್ರಪತಿಗಳ ಕಾರ್ಯಾಲಯ
ಸೂರಿನಾಮೆಯಲ್ಲಿ ಭಾರತೀಯರು ನೆಲೆನಿಂತು 150 ವರ್ಷದ ಸಂಭ್ರಮ, ಸಾಂಸ್ಕೃತಿಕ ಹಬ್ಬಕ್ಕೆ ಭಾರತದ ರಾಷ್ಟ್ರಪತಿಗಳ ಸಾಕ್ಷಿ
ಭಾರತದ ಪ್ರಾಂತ್ಯಗಳಿಂದ ಸೂರಿನಾಮೆಗೆ ಬಂದಿದ್ದ ಮೂಲ ಭಾರತೀಯ ವಲಸಿಗರ ನಾಲ್ಕನೇ ಪೀಳಿಗೆಯಿಂದ ಆರನೇ ಪೀಳಿಗೆಗೂ ಒಸಿಐ ಕಾರ್ಡ್ ಅರ್ಹತೆ ವಿಸ್ತರಿಸುವ ಭಾರತದ ನಿರ್ಧಾರದ ಘೋಷಣೆ
ಭಾರತ ಮತ್ತು ಸೂರಿನಾಮೆ ನಡುವಣ ಪಾಲುದಾರಿಕೆ ಬಲವರ್ಧನೆಯಲ್ಲಿ ಸೂರಿನಾಮೆಯಲ್ಲಿನ ಭಾರತೀಯ ಸಮುದಾಯದ ಪಾತ್ರ ಪ್ರಮುಖ - ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೂರಿನಾಮೆ ಅತ್ಯುನ್ನತ ನಾಗರಿಕ ಗೌರವ “ ಗ್ರಾಂಡ್ ಆರ್ಡರ್ ಆಫ್ ದಿನ ಚೇನ್ ಆಫ್ ದಿ ಯೆಲ್ಲೋ ಸ್ಟಾರ್” ಪ್ರದಾನ
Posted On:
06 JUN 2023 11:07AM by PIB Bengaluru
ಸೂರಿನಾಮೆಗೆ ಭಾರತೀಯರು ಆಗಮಿಸಿ 150 ವರ್ಷಗಳಾದ ಹಿನ್ನೆಲೆಯಲ್ಲಿ ಪರಮಾರಿಬೋದಲ್ಲಿ ನಿನ್ನೆ (5 ಜೂನ್ 2023) ಆಯೋಜನೆಯಾಗಿದ್ದ ಸಾಂಸ್ಕೃತಿಕ ಉತ್ಸವಕ್ಕೆ ಭಾರತದ ರಾಷ್ಟ್ರಪತಿ ಶ್ರೀಮತಿ.ದ್ರೌಪದಿ ಮುರ್ಮು ಮತ್ತು ಸೂರಿನಾಮೆ ಅಧ್ಯಕ್ಷರಾದ ಚಂದ್ರಿಕಾಪೆರ್ಸಾದ್ ಸಂತೋಖಿ ಸಾಕ್ಷಿಯಾದರು.
ಪರಮಾರಿಬೋದ ಸ್ವಾತಂತ್ರ್ಯ ಚೌಕಿಯಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, ಸೂರಿನಾಮೆಗೆ ಭಾರತೀಯರು ಆಗಮಿಸಿ 150 ವರ್ಷಗಳಾಗಿರುವ ಸಂದರ್ಭವನ್ನು ಇಂದು ನಾವು ಆಚರಿಸುತ್ತಿದ್ದೇವೆ. ಇದು ಸೂರಿನಾಮೆಯ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಲಲ್ಲಾ ರೂಖ್ ಹಡಗಿನಲ್ಲಿ 1873 ರ ಇದೇ ದಿನದಂದು, ಭಾರತೀಯರ ಮೊದಲ ತಂಡ ಸೂರಿನಾಮೆಯ ಕಡಲನ್ನು ತಲುಪಿದ್ದು, ಇದು ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿಯಾಯಿತು. ಬಹು ಸಾಂಸ್ಕೃತಿಕ ಸಮಾಜವಾಗಿ ಮತ್ತು ಅವಕಾಶಗಳ ನಾಡಾಗಿ ಸೂರಿನಾಮೆ ಇಲ್ಲಿಗೆ ಆಗಮಿಸಿ ನೆಲೆ ನಿಂತ ಎಲ್ಲಾ ಬಗೆಯ ಸಮುದಾಯಗಳನ್ನು ಸ್ವಾಗತಿಸಿದೆ. ಇಷ್ಟೊಂದು ವರ್ಷಗಳಲ್ಲಿ ವೈವಿಧ್ಯಮಯ ಸಮುದಾಯಗಳು ಒಂದು ಕುಟುಂಬವಾಗಿ ಮತ್ತು ಒಂದು ದೇಶವಾಗಿ ವಿಕಸನಗೊಂಡಿವೆ ಎಂದು ರಾಷ್ಟ್ರಪತಿ ಹೇಳಿದರು. ಸೂರಿನಾಮೆ ಜನತೆಯ ಏಕತೆ ಮತ್ತು ಒಳಗೊಳ್ಳುವಿಕೆಯ ಬದ್ಧತೆಯನ್ನು ಅವರು ಇದೇ ವೇಳೆ ಶ್ಲಾಘಿಸಿದರು.
ಭೌಗೋಳಿಕವಾಗಿ ವಿಶಾಲ ಅಂತರಗಳಿದ್ದರೂ, ವಿವಿಧ ಸಮಯ ವಲಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳಿದ್ದರೂ, ಭಾರತೀಯ ಸಮುದಾಯ ತಮ್ಮ ಮೂಲದೊಂದಿಗೆ ಯಾವಾಗಲೂ ಹೊಂದಿಕೊಂಡಿದೆ ಎಂಬುದು ಹರ್ಷದ ಸಂಗತಿ ಎಂದು ರಾಷ್ಟ್ರಪತಿ ಸಂತಸ ವ್ಯಕ್ತಪಡಿಸಿದರು. ಕಳೆದ 150 ವರ್ಷಗಳಲ್ಲಿ ಭಾರತೀಯ ಸಮುದಾಯ, ಸೂರಿನಾಮೆ ಸಮಾಜದಲ್ಲಿನ ಸಮಗ್ರ ಭಾಗ ಮಾತ್ರವಾಗಿಲ್ಲ, ಭಾರತ ಮತ್ತು ಸೂರಿನಾಮೆ ನಡುವಣ ಪಾಲುದಾರಿಕೆ ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಪ್ರಮುಖ ಆಧಾರಸ್ತಂಭವೂ ಹೌದು ಎಂದು ಅವರು ಹೇಳಿದ್ದಾರೆ.
ಭಾರತದೊಂದಿಗೆ ಸೂರಿನಾಮೆ ತನ್ನ ಪೂರ್ವಜರ ಪರಂಪರೆ ಮತ್ತು ಸಂಪರ್ಕ ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಸೂರಿನಾಮೆಯ ಒಗ್ಗಟ್ಟು ಮತ್ತು ಗೌರವದೊಂದಿಗೆ ಭಾರತ ನಿಲ್ಲುತ್ತದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ. ಭಾರತದ ಪ್ರಾಂತ್ಯಗಳಿಂದ ಸೂರಿನಾಮೆ ತಲುಪಿರುವ ಮೂಲ ಭಾರತೀಯ ವಲಸಿಗರ ನಾಲ್ಕನೇ ಪೀಳಿಗೆಯಿಂದ ಆರನೇ ಪೀಳಿಗೆವರೆಗೂ ಒಸಿಐ ಕಾರ್ಡ್ ಅರ್ಹತಾ ಸೌಲಭ್ಯ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂಬ ವಿಷಯವನ್ನು ಅವರು ಇದೇ ವೇಳೆ ಘೋಷಿಸಿದರು. ಭಾರತದೊಂದಿನ 150 ವರ್ಷಗಳ ಬಾಂಧವ್ಯದಲ್ಲಿ ಒಸಿಐ ಪ್ರಮುಖ ಕೊಂಡಿಯಾಗಿರುವುದನ್ನು ಗಮನಿಸಬಹುದು ಎಂದು ಅವರು ಹೇಳಿದರು. ಭಾರತದೊಂದಿನ ಸಂಪರ್ಕಗಳನ್ನು ಭಾರತೀಯ ಸಮುದಾಯ ಯಥಾಸ್ಥಿತಿ ಮುಂದುವರಿಸುವಂತೆ ಅವರು ಹೇಳಿದರು.
ಸೂರಿನಾಮೆ ಮತ್ತು ಭಾರತ, ಎರಡೂ ದೇಶಗಳು ದೀರ್ಘಾವಧಿ ವಸಾಹತು ಆಡಳಿತದ ತಮ್ಮ ತಮ್ಮ ಆರ್ಥಿಕತೆಗಳನ್ನು ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಪುನರ್-ನಿರ್ಮಿಸಲು ಪ್ರಯತ್ನಿಸಿವೆ ಎಂದು ರಾಷ್ಟ್ರಪತಿ ಹೇಳಿದರು. ಈ ಅನುಭವ ಉಭಯ ದೇಶಗಳ ನಡುವೆ ಐಕ್ಯತೆಯ ಭಾವ ಉಂಟು ಮಾಡಿದೆ. ಅಭಿವೃದ್ಧಿಗಾಗಿ ಪರಸ್ಪರ ಆಕಾಂಕ್ಷೆಗಳನ್ನು ಹಂಚಿಕೊಂಡಿರುವ ಆಧಾರದ ಮೇಲೆ ಭಾರತ-ಸೂರಿನಾಮೆ ನಡುವಣ ದ್ವಿಪಕ್ಷೀಯ ಸಂಬಂಧವಿದೆ ಎಂದು ಅವರು ಹೇಳಿದರು.
ರಾಷ್ಟ್ರಪತಿ ಇದಕ್ಕೂ ಮುನ್ನ, ಸೂರಿನಾಮೆಗೆ ಮೊದಲು ಪದಾರ್ಪಣೆ ಮಾಡಿದ್ದ ಭಾರತದ ಪುರುಷ ಮತ್ತು ಮಹಿಳೆಯ ಸಂಕೇತವಾದ ಬಾಬಾ ಮತ್ತು ಮೈ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಿದರು. ಬಳಿಕ ಅವರು, ಮಾಮಾ ಸ್ರಣನ್ ಸ್ಮಾರಕದಲ್ಲೂ ಗೌರವ ನಮನ ಸಲ್ಲಿಸಿದರು. ಸೂರಿನಾಮೆಯ ಕಾಳಜಿ ಮತ್ತು ಪ್ರೀತಿಯ ಭಾವವನ್ನು ಪ್ರತಿನಿಧಿಸುವ ಐದು ಸಮುದಾಯಗಳು, ಐವರು ಮಕ್ಕಳನ್ನು ಹಿಡಿದಿರುವ ತಾಯಿ ಸೂರಿನಾಮೆಯೇ ಮಾಮಾ ಸ್ರಣನ್.
ಅಧ್ಯಕ್ಷೀಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೂರಿನಾಮೆಯ ಅತ್ಯುನ್ನತ ನಾಗರಿಕ ಗೌರವ “ಗ್ರಾಂಡ್ ಆರ್ಡರ್ ಆಫ್ ದಿ ಚೇನ್ ಆಫ್ ದಿ ಯೆಲ್ಲೋ ಸ್ಟಾರ್” ಅನ್ನು ಸೂರಿನಾಮೆ ಅಧ್ಯಕ್ಷರು ಪ್ರದಾನ ಮಾಡಿದರು. ಈ ಗೌರವ ಪ್ರದಾನ ಮಾಡಿದ ಅಧ್ಯಕ್ಷ ಸಂತೋಖಿ ಮತ್ತು ಸೂರಿನಾಮೆ ಸರ್ಕಾರಕ್ಕೆ ರಾಷ್ಟ್ರಪತಿ ವಂದನೆಗಳನ್ನು ತಿಳಿಸಿದ್ದಾರೆ. ಈ ಗೌರವ ತಮಗೆ ಮಾತ್ರವಲ್ಲದೇ 1.4 ಶತಕೋಟಿ ಭಾರತೀಯರಿಗೆ ಅಪಾರ ಮಹತ್ವ ನೀಡಿದೆ ಎಂದು ಹೇಳಿದ ಅವರು, ಈ ಗೌರವವನ್ನು ಭಾರತ-ಸೂರಿನಾಮೆಯ ಮುಂದಿನ ಪೀಳಿಗೆಗಳಿಗೆ ಅರ್ಪಿಸಿದರು. ಎರಡೂ ದೇಶಗಳ ನಡುವಿನ ಸಂಬಂಧ ಬಲವರ್ಧನೆಯಲ್ಲಿ ಈ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದು ಎಂದು ಅವರು ಬಣ್ಣಿಸಿದರು.
ಸೂರಿನಾಮೆ ಅಧ್ಯಕ್ಷರು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಎಲ್ಲರನ್ನೊಳಗೊಂಡ ವಿಶ್ವದ ಭಾರತದ ಆಶಯವನ್ನು ಒತ್ತಿ ಹೇಳಿದ ಅವರು ಪ್ರತಿಯೊಂದು ದೇಶ ಮತ್ತು ಪ್ರಾಂತ್ಯಗಳ ನ್ಯಾಯಸಮ್ಮತ ಹಿತಾಸಕ್ತಿಗಳನ್ನು ಭಾರತ ಸೂಕ್ಷ್ಮವಾಗಿ ಗ್ರಹಿಸಿದೆ ಎಂದರು. ಇದೇ ಒಗ್ಗಟ್ಟಿನ ಸ್ಫೂರ್ತಿಯಲ್ಲೇ ಕೋವಿಡ್-19 ಸಾಂಕ್ರಾಮಿಕದ ಸಂದರ್ಭಧಲ್ಲಿ ಭಾರತ 100 ಕ್ಕೂ ಹೆಚ್ಚು ದೇಶಗಳಿಗೆ ನೆರವಿನ ಹಸ್ತ ಚಾಚಿತ್ತು ಎಂದು ಅವರು ಹೇಳಿದರು.
ಭಾರತ, ಈಗ ಜಿ-20 ಅಧ್ಯಕ್ಷತೆಯನ್ನು ವಹಿಸುವ ಮೂಲಕ ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿರುವ ಆರ್ಥಿಕತೆಗಳ ನಡುವೆ ಸದೃಢ ಸೇತುವೆಗಳನ್ನು ರೂಪಿಸುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಮತ್ತು ಜಾಗತಿಕ ದಕ್ಷಿಣದ ರಾಷ್ಟ್ರಗಳ ಸಮಸ್ಯೆಗಳಿಗೆ ದನಿಯಾಗಲು ಈ ವರ್ಷದ ಜನವರಿಯಲಲಿ ವಾಯ್ಸ್ ಆಫ್ ಸೌತ್ ಕಾರ್ಯಕ್ರಮವನ್ನು ಭಾರತ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ 125 ದೇಶಗಳು ಭಾಗಿಯಾಗಿದ್ದು, ಸೂರಿನಾಮೆ ಕೂಡ ಈ ಉಪಕ್ರಮದ ಭಾಗವಾಗಿತ್ತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸೂರಿನಾಮೆಯಲ್ಲಿ ಭಾರತೀಯರ ಆಗಮನಕ್ಕೆ 150 ವರ್ಷದ ನಿಮಿತ್ತ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಸೂರಿನಾಮೆ ಅಧ್ಯಕ್ಷರು ಏರ್ಪಡಿಸಿದ್ದ ಔತಣಕೂಟದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ರಾಷ್ಟ್ರಪತಿಗಳ ಸ್ವೀಕಾರ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
****
(Release ID: 1930219)
Visitor Counter : 146