ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

3ನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 25 MAY 2023 9:57PM by PIB Bengaluru

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಜಿ, ನನ್ನ ಸಂಪುಟ ಸಹೋದ್ಯೋಗಿ ನಿಸಿತ್ ಪ್ರಮಾಣಿಕ್ ಜಿ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಜಿ, ಇಲ್ಲಿರುವ ಇತರೆ ಗಣ್ಯರು, ಮತ್ತು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಅಭಿನಂದನೆಗಳು. ಇಂದು ಉತ್ತರ ಪ್ರದೇಶವು ದೇಶಾದ್ಯಂತ ಇರುವ ಯುವ ಕ್ರೀಡಾ ಪ್ರತಿಭೆಗಳ ಸಂಗಮ ಸ್ಥಳವಾಗಿದೆ. ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ 4,000 ಆಟಗಾರರಲ್ಲಿ ಹೆಚ್ಚಿನವರು ವಿವಿಧ ರಾಜ್ಯಗಳು ಮತ್ತು ಪ್ರದೇಶಗಳಿಂದ ಬಂದವರಾಗಿದ್ದಾರೆ. ನಾನು ಉತ್ತರ ಪ್ರದೇಶದ ಸಂಸದ. ನಾನು ಉತ್ತರ ಪ್ರದೇಶದ ಜನರ ಪ್ರತಿನಿಧಿ. ಹಾಗಾಗಿ, ಉತ್ತರ ಪ್ರದೇಶದ ಸಂಸತ್ ಸದಸ್ಯನಾಗಿ, 'ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್'ನಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿರುವ ಎಲ್ಲ ಕ್ರೀಡಾಪಟುಗಳಿಗೆ ನಾನು ವಿಶೇಷವಾಗಿ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ.

ಈ ಕ್ರೀಡಾಕೂಟದ ಸಮಾರೋಪ ಸಮಾರಂಭ ಕಾಶಿಯಲ್ಲಿ ನಡೆಯಲಿದೆ. ಕಾಶಿ ಸಂಸದನಾದ ನಾನು ಸಹ ಉತ್ಸುಕನಾಗಿದ್ದೇನೆ. ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ 3ನೇ ಆವೃತ್ತಿಯು, ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವಾಗ ತನ್ನದೇ ಆದ ವಿಶೇಷತೆ ಹೊಂದಿದೆ. ದೇಶದ ಯುವಕರಲ್ಲಿ ತಂಡ ಸ್ಫೂರ್ತಿಯ ಮನೋಭಾವ ಬೆಳೆಸಲು ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಮನೋಭಾವ ಮತ್ತಷ್ಟು ಬಲಪಡಿಸಲು ಇದು ಉತ್ತಮ ಮಾಧ್ಯಮವಾಗಿದೆ. ಈ ಕ್ರೀಡಾಕೂಟದ ಸಂದರ್ಭದಲ್ಲಿ ಯುವಕರನ್ನು ವಿವಿಧ ಪ್ರದೇಶಗಳಿಗೆ ಪರಿಚಯಿಸಲಾಗುತ್ತಿದೆ. ಪಂದ್ಯಗಳು ನಡೆಯುವ ಉತ್ತರ ಪ್ರದೇಶದ ವಿವಿಧ ನಗರಗಳಿಗೆ ಯುವಕರ ಸಂಪರ್ಕವೂ ಸಿಗುತ್ತದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಭಾಗವಹಿಸಲು ಬಂದಿರುವ ಯುವ ಕ್ರೀಡಾಪಟುಗಳು ಜೀವನಪರ್ಯಂತ ಪಾಲಿಸುವ ಅಗಾಧ ಅನುಭವದೊಂದಿಗೆ ಹಿಂದಿರುಗುತ್ತಾರೆ ಎಂಬುದು ನನಗೆ ಖಾತ್ರಿಯಿದೆ. ಮುಂಬರುವ ಸ್ಪರ್ಧೆಗಳಿಗೆ ನಾನು ನಿಮಗೆ ಶುಭ ಹಾರೈಸುತ್ತೇನೆ.

ಸ್ನೇಹಿತರೆ,

ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಕ್ರೀಡಾ ರಂಗದಲ್ಲಿ ಹೊಸ ಯುಗ ಆರಂಭವಾಗಿದೆ. ಈ ಹೊಸ ಯುಗವು ಭಾರತವನ್ನು ವಿಶ್ವದ ಪ್ರಮುಖ ಕ್ರೀಡಾಶಕ್ತಿಯನ್ನಾಗಿ ಮಾಡುವುದಷ್ಟೇ ಅಲ್ಲದೆ, ಇದು ಕ್ರೀಡೆಯ ಮೂಲಕ ಸಮಾಜದ ಸಬಲೀಕರಣದ ಹೊಸ ಯುಗವಾಗಿದೆ. ನಮ್ಮ ದೇಶದಲ್ಲಿ ಕ್ರೀಡೆಯ ಬಗ್ಗೆ ಅಸಡ್ಡೆ ಭಾವನೆ ಇದ್ದ ಕಾಲವೊಂದಿತ್ತು. ಕ್ರೀಡೆಯೂ ವೃತ್ತಿಯಾಗಬಹುದೆಂದು ಭಾವಿಸಿದವರು ಬಹಳ ಕಡಿಮೆ ಇದ್ದರು. ಕ್ರೀಡೆಗೆ ಸರಕಾರದಿಂದ ಸಿಗಬೇಕಾಗಿದ್ದ ಬೆಂಬಲ, ಸಹಕಾರ ಸಿಗದಿರುವುದೇ ಇದಕ್ಕೆ ಮುಖ್ಯ ಕಾರಣ. ಕ್ರೀಡಾ ಮೂಲಸೌಕರ್ಯಕ್ಕೆ ಯಾವುದೇ ಗಮನ ನೀಡಿರಲಿಲ್ಲ ಮತ್ತು ಆಟಗಾರರ ಅಗತ್ಯತೆಗಳನ್ನು ಸಹ ಗಮನಿಸಿರಲಿಲ್ಲ. ಹಾಗಾಗಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಹಾಗೂ ಹಳ್ಳಿ, ಕುಗ್ರಾಮಗಳ ಮಕ್ಕಳು ಕ್ರೀಡೆಯಲ್ಲಿ ಮುನ್ನಡೆಯುವುದು ತುಂಬಾ ಕಷ್ಟಕರವಾಗಿತ್ತು. ಕ್ರೀಡೆ ಎಂದರೆ ಬಿಡುವಿನ ಸಮಯ ಕಳೆಯುವುದಲ್ಲದೆ ಬೇರೇನೂ ಇಲ್ಲ ಎಂಬ ಭಾವನೆಯೂ ಸಮಾಜದಲ್ಲಿ ಮೂಡಿತ್ತು. ಮಗು ತನ್ನ ಜೀವನವನ್ನು 'ಸೆಟಲ್' ಆಗುವ ವೃತ್ತಿಗೆ ಸೇರಬೇಕು ಎಂದು ಹೆಚ್ಚಿನ ಪೋಷಕರು ಭಾವಿಸಿದ್ದಾರೆ. ಈ ಮನಸ್ಥಿತಿಯಿಂದಾಗಿ ದೇಶವು ಅನೇಕ ಶ್ರೇಷ್ಠ ಆಟಗಾರರನ್ನು ಕಳೆದುಕೊಂಡಿರಬಹುದು ಎಂದು ಕೆಲವೊಮ್ಮೆ ನನಗೆ ಅನಿಸಿರುವುದು ಇದೆ. ಆದರೆ ಇಂದು ಕ್ರೀಡೆಯ ಬಗ್ಗೆ ಪೋಷಕರು ಮತ್ತು ಸಮಾಜದ ಮನೋಭಾವದಲ್ಲಿ ದೊಡ್ಡ ಬದಲಾವಣೆಯಾಗಿದೆ ಎಂದು ನನಗೆ ಸಂತೋಷವಾಗಿದೆ. ಜೀವನದಲ್ಲಿ ಮುನ್ನಡೆಯಲು ಕ್ರೀಡೆಯನ್ನು ಆಕರ್ಷಕ ವೃತ್ತಿಯಾಗಿ ನೋಡಲಾಗುತ್ತಿದೆ. ಖೇಲೋ ಇಂಡಿಯಾ ಅಭಿಯಾನವು ಈ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ.

ಸ್ನೇಹಿತರೆ,

ಕಾಮನ್‌ವೆಲ್ತ್ ಕ್ರೀಡಾಕೂಟ ಸಂದರ್ಭದಲ್ಲಿ ನಡೆದ ಹಗರಣವು ಕ್ರೀಡೆಯ ಬಗ್ಗೆ ಹಿಂದಿನ ಸರ್ಕಾರಗಳು ಹೊಂದಿದ್ದ ಧೋರಣೆಗೆ ಜೀವಂತ ಉದಾಹರಣೆಯಾಗಿದೆ. ವಿಶ್ವದಲ್ಲಿ ಭಾರತದ ಪ್ರತಿಷ್ಠೆಯನ್ನು ಸ್ಥಾಪಿಸಲು ಉಪಯುಕ್ತವಾಗಬಹುದಾದ ಕ್ರೀಡಾ ಸ್ಪರ್ಧೆಯು ಭ್ರಷ್ಟಾಚಾರದಲ್ಲಿ ಮುಳುಗಿತು. ಈ ಹಿಂದೆ ನಮ್ಮ ಹಳ್ಳಿಗಳು ಮತ್ತು ಕುಗ್ರಾಮಗಳ ಮಕ್ಕಳಿಗೆ ಆಟವಾಡಲು ಅವಕಾಶ ಸಿಗುವ ಯೋಜನೆ ಇತ್ತು. ಅದನ್ನು 'ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ' ಎಂದು ಕರೆಯಲಾಯಿತು. ನಂತರ ಅದರ ಹೆಸರನ್ನು 'ರಾಜೀವ್ ಗಾಂಧಿ ಖೇಲ್ ಅಭಿಯಾನ' ಎಂದು ಬದಲಾಯಿಸಲಾಯಿತು. ಈ ಅಭಿಯಾನದಲ್ಲಿ ಹೆಸರು ಬದಲಾವಣೆಗೆ ಮಾತ್ರ ಒತ್ತು ನೀಡಲಾಗಿದ್ದು, ದೇಶದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿಲ್ಲ.

ಈ ಹಿಂದೆ, ಹಳ್ಳಿ ಅಥವಾ ನಗರದಿಂದ ಬಂದ ಪ್ರತಿಯೊಬ್ಬ ಆಟಗಾರನ ಮುಂದಿರುವ ದೊಡ್ಡ ಸವಾಲೆಂದರೆ, ಅಭ್ಯಾಸದ ಅವಧಿಗಳಿಗಾಗಿ ಅವನು ತನ್ನ ಮನೆಯಿಂದ ದೂರ ಹೋಗಬೇಕಾಗಿತ್ತು. ಪರಿಣಾಮವಾಗಿ, ಆಟಗಾರರು ಸಾಕಷ್ಟು ಸಮಯ ಕಳೆಯುತ್ತಿದ್ದರು.  ಅನೇಕ ಬಾರಿ ಅವರು ಇತರ ನಗರಗಳಲ್ಲಿ ವಾಸಿಸಬೇಕಾಯಿತು. ಈ ಸಮಸ್ಯೆಯಿಂದಾಗಿ ಅನೇಕ ಯುವಕರು ತಮ್ಮ ಉತ್ಸಾಹ ತ್ಯಜಿಸಬೇಕಾಯಿತು. ಇಂದು ನಮ್ಮ ಸರ್ಕಾರವು ಕ್ರೀಡಾಪಟುಗಳ ದಶಕಗಳ ಹಳೆಯ ಸವಾಲುಗಳನ್ನು ಸಹ ನೋಡಿಕೊಳ್ಳುತ್ತಿದೆ. ಹಿಂದಿನ ಸರ್ಕಾರವು ನಗರ ಕ್ರೀಡಾ ಮೂಲಸೌಕರ್ಯ ಯೋಜನೆಗೆ 6 ವರ್ಷಗಳಲ್ಲಿ ಕೇವಲ 300 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ನಮ್ಮ ಸರ್ಕಾರ ಖೇಲೋ ಇಂಡಿಯಾ ಅಭಿಯಾನದ ಅಡಿ, ಕ್ರೀಡಾ ಮೂಲಸೌಕರ್ಯಕ್ಕಾಗಿ ಸುಮಾರು 3,000 ಕೋಟಿ ರೂಪಾಯಿ ಖರ್ಚು ಮಾಡಿದೆ. ಬೆಳೆಯುತ್ತಿರುವ ಕ್ರೀಡಾ ಮೂಲಸೌಕರ್ಯದಿಂದಾಗಿ ಹೆಚ್ಚಿನ ಆಟಗಾರರು ಕ್ರೀಡೆಗೆ ಸೇರಲು ಈಗ ಸುಲಭವಾಗಿದೆ. ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೆ 30,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂಬ ತೃಪ್ತಿ ನನಗಿದೆ. ಮುಖ್ಯವಾಗಿ 1,500 ಖೇಲೋ ಇಂಡಿಯಾ ಅಥ್ಲೀಟ್ ಗಳನ್ನು ಪತ್ತೆ ಹಚ್ಚಿ ಅವರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಆಧುನಿಕ ಕ್ರೀಡಾ ಅಕಾಡೆಮಿಗಳಲ್ಲಿ ಅವರಿಗೆ ಉನ್ನತ ದರ್ಜೆಯ ತರಬೇತಿಯನ್ನೂ ನೀಡಲಾಗುತ್ತಿದೆ. 9 ವರ್ಷಗಳ ಹಿಂದೆ ಇದ್ದ ಕ್ರೀಡಾ ಬಜೆಟ್‌ಗೆ ಹೋಲಿಸಿದರೆ ಈ ವರ್ಷದ ಕೇಂದ್ರ ಕ್ರೀಡಾ ಬಜೆಟ್ ಅನ್ನು 3 ಪಟ್ಟು ಹೆಚ್ಚಿಸಲಾಗಿದೆ.

ಇಂದು ಗ್ರಾಮಗಳ ಬಳಿ ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತಮ ಮೈದಾನಗಳು, ಆಧುನಿಕ ಕ್ರೀಡಾಂಗಣಗಳು ಮತ್ತು ಆಧುನಿಕ ತರಬೇತಿ ಸೌಲಭ್ಯಗಳನ್ನು ಈಗ ದೇಶದ ದೂರದ ಪ್ರದೇಶಗಳಲ್ಲಿಯೂ ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತರ ಪ್ರದೇಶದಲ್ಲೂ ಕ್ರೀಡಾ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ವೆಚ್ಚ ಮಾಡಲಾಗಿದೆ. ಲಕ್ನೋದಲ್ಲಿ ಇದ್ದ ಸೌಲಭ್ಯಗಳನ್ನು ಸಹ ವಿಸ್ತರಿಸಲಾಗಿದೆ. ಇಂದು ವಾರಾಣಸಿಯ ಸಿಗ್ರಾ ಸ್ಟೇಡಿಯಂ ಆಧುನಿಕ ಅವತಾರದಲ್ಲಿ ಹೊರಬರುತ್ತಿದೆ. ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ಯುವಕರಿಗಾಗಿ ಇಲ್ಲಿ ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿ, ಲಾಲ್‌ಪುರದ ಸಿಂಥೆಟಿಕ್ ಹಾಕಿ ಮೈದಾನ, ಗೋರಖ್‌ಪುರದ ವೀರ್ ಬಹದ್ದೂರ್ ಸಿಂಗ್ ಕ್ರೀಡಾ ಕಾಲೇಜಿನಲ್ಲಿ ವಿವಿಧೋದ್ದೇಶ ಹಾಲ್, ಮೀರತ್‌ನ ಸಿಂಥೆಟಿಕ್ ಹಾಕಿ ಮೈದಾನ ಮತ್ತು ಸಹರಾನ್‌ಪುರದಲ್ಲಿ ಸಿಂಥೆಟಿಕ್ ರನ್ನಿಂಗ್ ಟ್ರ್ಯಾಕ್‌ಗೆ ನೆರವು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿ,ಇದೇ ರೀತಿಯ ಸೌಲಭ್ಯಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು.

ಸ್ನೇಹಿತರೆ,

ಆಟಗಾರರು ಗರಿಷ್ಠ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಪಡೆಯಲು ನಾವು ವಿಶೇಷ ಒತ್ತು ನೀಡುತ್ತಿದ್ದೇವೆ. ಒಬ್ಬ ಆಟಗಾರನು ಕ್ರೀಡಾ ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸಿದರೆ, ಅವನಿಗೆ ಹೆಚ್ಚು ಪ್ರಯೋಜನವಾಗುತ್ತದೆ, ಅವನ ಪ್ರತಿಭೆ ಹೆಚ್ಚಾಗುತ್ತದೆ. ಅವರು ತಮ್ಮ ಮಟ್ಟವನ್ನು ಅರಿತುಕೊಳ್ಳುತ್ತಾರೆ. ಅವರ ನ್ಯೂನತೆಗಳು, ತಪ್ಪುಗಳು ಮತ್ತು ಸವಾಲುಗಳು ಯಾವುವು? ಇತ್ಯಾದಿ ಸುಧಾರಣೆಯ ಕ್ಷೇತ್ರಗಳನ್ನು ಗುರುತಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ಪ್ರಾರಂಭಿಸಲು ಇದು ಒಂದು ಪ್ರಮುಖ ಕಾರಣವಾಯಿತು. ಇಂದು ಅದು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಮತ್ತು ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ಗೆ ವಿಸ್ತರಿಸಿದೆ. ಈ ಕಾರ್ಯಕ್ರಮದಡಿ ದೇಶದ ಸಾವಿರಾರು ಆಟಗಾರರು ಸ್ಪರ್ಧಿಸುತ್ತಿದ್ದು, ತಮ್ಮ ಪ್ರತಿಭೆಯ ಬಲದಿಂದ ಮುನ್ನಡೆಯುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ಅನೇಕ ಸಂಸದರು ಸಂಸದ್ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ನನಗೆ ಸಂತೋಷ ತಂದಿದೆ. ಪ್ರತಿ ಸಂಸದೀಯ ಕ್ಷೇತ್ರದಲ್ಲಿ ಸಾವಿರಾರು ಯುವಕರು, ಪುತ್ರರು ಮತ್ತು ಪುತ್ರಿಯರು ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ. ಇಂದು ದೇಶವು ಅದರ ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತಿದೆ. ವರ್ಷಗಳ ತರುವಾಯ ನಮ್ಮ ಆಟಗಾರರು ಅನೇಕ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದು ಇಂದಿನ ಭಾರತದ ಯುವ ಆಟಗಾರರ ಆತ್ಮವಿಶ್ವಾಸ ಎಷ್ಟು ಎತ್ತರದಲ್ಲಿದೆ ಎಂಬುದನ್ನು ತೋರಿಸುತ್ತಿದೆ.

ಸ್ನೇಹಿತರೆ,

ಕ್ರೀಡೆಗೆ ಸಂಬಂಧಿಸಿದ ಕೌಶಲ್ಯಗಳು ಅಥವಾ ಇತರ ವಿಭಾಗಗಳಲ್ಲಿ ಅವರನ್ನು ಉತ್ತಮ ಆಟಗಾರರನ್ನಾಗಿ ಮಾಡಲು ಸರ್ಕಾರವು ಪ್ರತಿ ಹಂತದಲ್ಲೂ ಆಟಗಾರರೊಂದಿಗೆ ನಿಂತಿದೆ. ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆಯನ್ನು ಒಂದು ವಿಷಯವಾಗಿ ಕಲಿಸಲು ಪ್ರಸ್ತಾಪಿಸಲಾಗಿದೆ. ಕ್ರೀಡೆ ಈಗ ಪಠ್ಯಕ್ರಮದ ಭಾಗವಾಗಲಿದೆ. ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವುದು ಈ ನಿಟ್ಟಿನಲ್ಲಿ ಮತ್ತಷ್ಟು ಸಹಾಯ ಮಾಡುತ್ತದೆ. ಈಗ ರಾಜ್ಯಗಳಲ್ಲೂ ಕ್ರೀಡಾ ವಿಶೇಷ ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಶ್ಲಾಘನೀಯ ಕೆಲಸ ಮಾಡುತ್ತಿದೆ. ಮೀರತ್‌ನಲ್ಲಿರುವ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯದ ಉದಾಹರಣೆ ನಮ್ಮ ಮುಂದಿದೆ. ಇದಲ್ಲದೆ, ಇಂದು ದೇಶಾದ್ಯಂತ 1,000 ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಸುಮಾರು 2 ಡಜನ್ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳನ್ನು ಸಹ ತೆರೆಯಲಾಗಿದೆ. ಕಾರ್ಯಕ್ಷಮತೆ ಸುಧಾರಿಸಲು ಈ ಕೇಂದ್ರಗಳಲ್ಲಿ ತರಬೇತಿ ಮತ್ತು ಕ್ರೀಡಾ ವಿಜ್ಞಾನದ ಬೆಂಬಲ ನೀಡಲಾಗುತ್ತಿದೆ. ಖೇಲೋ ಇಂಡಿಯಾ ಭಾರತದ ಸಾಂಪ್ರದಾಯಿಕ ಕ್ರೀಡೆಗಳ ಪ್ರತಿಷ್ಠೆಯನ್ನು ಮರುಸ್ಥಾಪಿಸಿದೆ. ಗಟ್ಕಾ, ಮಲ್ಲಖಂಬ್, ತಂಗ್-ಟ, ಕಳರಿಪಯಟ್ಟು ಮತ್ತು ಯೋಗಾಸನದಂತಹ ವಿವಿಧ ಕ್ರೀಡಾ ವಿಭಾಗಗಳನ್ನು ಪ್ರೋತ್ಸಾಹಿಸಲು ನಮ್ಮ ಸರ್ಕಾರವು ವಿದ್ಯಾರ್ಥಿವೇತನ ನೀಡುತ್ತಿದೆ.

ಸ್ನೇಹಿತರೆ,

ಖೇಲೋ ಇಂಡಿಯಾ ಕಾರ್ಯಕ್ರಮದ ಮತ್ತೊಂದು ಉತ್ತೇಜಕ ಫಲಿತಾಂಶವೆಂದರೆ ನಮ್ಮ ಹೆಣ್ಣು ಮಕ್ಕಳ ಭಾಗವಹಿಸುವಿಕೆ. ದೇಶದ ಹಲವು ನಗರಗಳಲ್ಲಿ ಖೇಲೋ ಇಂಡಿಯಾ ಮಹಿಳಾ ಲೀಗ್ ಆಯೋಜಿಸಲಾಗುತ್ತಿದೆ. ಇಲ್ಲಿಯವರೆಗೆ ವಿವಿಧ ವಯೋಮಾನದ ಸುಮಾರು 23,000 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದು ನನಗೆ ತಿಳಿದುಬಂದಿದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ವಿಶೇಷವಾಗಿ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಹೆಣ್ಣು ಮಕ್ಕಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೆ,

ನೀವೆಲ್ಲರೂ ನಿಶಅಚಿತವಾಗಿ ಭಾರತದ ಕಾಲಾವಧಿಯಲ್ಲೇ ಕ್ರೀಡೆಗಳ ಅಖಾಡ ಪ್ರವೇಶಿಸಿದ್ದೀರಿ. ನಿಮ್ಮ ಪ್ರತಿಭೆ ಮತ್ತು ಪ್ರಗತಿಯಲ್ಲಿ ಭಾರತದ ಪ್ರಗತಿ ಅಡಗಿದೆ. ನೀವು ಭವಿಷ್ಯದ ಚಾಂಪಿಯನ್‌ಗಳು. ತ್ರಿವರ್ಣ ಧ್ವಜದ ವೈಭವವನ್ನು ವಿಸ್ತರಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಆದ್ದರಿಂದ, ನಾವು ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಸಾಮಾನ್ಯವಾಗಿ ಕ್ರೀಡಾ ಮನೋಭಾವ ಮತ್ತು ತಂಡ ಮನೋಭಾವದ ಬಗ್ಗೆ ಮಾತನಾಡುತ್ತೇವೆ. ಅಷ್ಟಕ್ಕೂ ಈ ಕ್ರೀಡಾ ಸ್ಫೂರ್ತಿ ಎಂದರೇನು? ಇದು ಕೇವಲ ಸೋಲು ಗೆಲುವಿಗೆ ಸೀಮಿತವೇ? ಇದು ಟೀಮ್ ವರ್ಕ್ ಗೆ ಮಾತ್ರ ಸೀಮಿತವೇ? ಕ್ರೀಡಾಸ್ಫೂರ್ತಿಯ ಅರ್ಥ ಇದಕ್ಕಿಂತ ವಿಶಾಲವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳನ್ನು ಮೀರಿ, ಕ್ರೀಡೆಗಳು ಸಾಮೂಹಿಕ ಯಶಸ್ಸನ್ನು ಪ್ರೇರೇಪಿಸುತ್ತದೆ. ಘನತೆ ಮತ್ತು ನಿಯಮಗಳನ್ನು ಅನುಸರಿಸಲು ಕ್ರೀಡೆ ನಮಗೆ ಕಲಿಸುತ್ತದೆ. ಮೈದಾನದಲ್ಲಿ ಪರಿಸ್ಥಿತಿಗಳು ಹೆಚ್ಚಾಗಿ ನಿಮ್ಮ ವಿರುದ್ಧವಾಗಿರಬಹುದು, ಕೆಲವೊಮ್ಮೆ ನಿರ್ಧಾರಗಳು ನಿಮ್ಮ ವಿರುದ್ಧವಾಗಿ ಹೋಗಬಹುದು. ಆದರೆ ಆಟಗಾರನು ತನ್ನ ಹಿಡಿತ ಅಥವಾ ನಿಯಂತ್ರಣ ಕಳೆದುಕೊಳ್ಳುವುದಿಲ್ಲ. ಅವನು ಯಾವಾಗಲೂ ನಿಯಮಗಳಿಗೆ ಬದ್ಧನಾಗಿರುತ್ತಾನೆ. ನಿಯಮಗಳು ಮತ್ತು ನಿಬಂಧನೆಗಳ ಮಿತಿಯಲ್ಲಿ ಹೇಗೆ ಉಳಿಯಬೇಕು ಮತ್ತು ತಾಳ್ಮೆಯಿಂದ ತನ್ನ ಎದುರಾಳಿಯನ್ನು ಹೇಗೆ ಜಯಿಸಬೇಕು ಎಂಬುದು ಆಟಗಾರನ ಲಕ್ಷಣವಾಗಿದೆ. ವಿಜೇತರು ಯಾವಾಗಲೂ ಕ್ರೀಡಾ ಮನೋಭಾವ ಮತ್ತು ಘನತೆಯ ಮನೋಭಾವ ಅನುಸರಿಸಿದಾಗ ಮಾತ್ರ ಶ್ರೇಷ್ಠ ಆಟಗಾರರಾಗುತ್ತಾರೆ. ಸಮಾಜವು ಅವರ ನಡವಳಿಕೆಯಿಂದ ಸ್ಫೂರ್ತಿ ಪಡೆದಾಗ ಮಾತ್ರ ವಿಜೇತರು ಶ್ರೇಷ್ಠ ಆಟಗಾರರಾಗುತ್ತಾರೆ. ಆದ್ದರಿಂದ, ನನ್ನ ಯುವ ಸ್ನೇಹಿತರಾದ ನೀವೆಲ್ಲರೂ ಆಡುವಾಗ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ವಿಶ್ವವಿದ್ಯಾಲಯದ ಕ್ರೀಡಾಕೂಟಗಳಲ್ಲಿ ನೀವು ಆಡುತ್ತೀರಿ ಮತ್ತು ಅರಳುತ್ತೀರಿ ಎಂದು ನನಗೆ ಖಾತ್ರಿಯಿದೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು! ಚೆನ್ನಾಗಿ ಆಟವಾಡಿ ಮತ್ತು ಮುಂದುವರಿಯಿರಿ! ಧನ್ಯವಾದಗಳು!

***

 


(Release ID: 1928030) Visitor Counter : 164