ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಮೇ .10ರಂದು ರಾಜಸ್ಥಾನಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


5,500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಸಮರ್ಪಿಸಲಿರುವ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಸಂಪರ್ಕವನ್ನು ಹೆಚ್ಚಿಸಲು ಮತ್ತು ವ್ಯಾಪಾರ ಮತ್ತು ವಾಣಿಜ್ಯವನ್ನು ಸುಗಮಗೊಳಿಸಲು ಬಹು ರಸ್ತೆ ಮತ್ತು ರೈಲು ವಲಯದ ಯೋಜನೆಗಳು

ಉದಯಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಅಬು ರಸ್ತೆಯಲ್ಲಿರುವ ಬ್ರಹ್ಮಕುಮಾರಿಗಳ ಶಾಂತಿವನ ಸಂಕೀರ್ಣಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ ಅವರು ಸೂಪರ್ ಸ್ಪೆಷಾಲಿಟಿ ಚಾರಿಟಬಲ್ ಗ್ಲೋಬಲ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

Posted On: 09 MAY 2023 11:32AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 10ರಂದು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಪ್ರಧಾನಮಂತ್ರಿಯವರು ನಾಥದ್ವಾರದ ಶ್ರೀನಾಥ್ ಜೀ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11:45 ಕ್ಕೆ ಅವರು ನಾಥದ್ವಾರದಲ್ಲಿ ವಿವಿಧ ಅಭಿವೃದ್ಧಿ ಉಪಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಬಳಿಕ ಮಧ್ಯಾಹ್ನ 3.15ಕ್ಕೆ ಅಬು ರಸ್ತೆಯಲ್ಲಿರುವ ಬ್ರಹ್ಮಕುಮಾರಿಗಳ ಶಾಂತಿವನ ಸಂಕೀರ್ಣಕ್ಕೆ ಭೇಟಿ ನೀಡಲಿದ್ದಾರೆ.

ನಾಥದ್ವಾರದಲ್ಲಿ ಪ್ರಧಾನ ಮಂತ್ರಿ

ಪ್ರಧಾನಮಂತ್ರಿ ಅವರು 5,500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸುವರು, ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ಈ ಯೋಜನೆಗಳ ಗಮನವು ಈ ಪ್ರದೇಶದಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುವತ್ತ ಇರುತ್ತದೆ. ರಸ್ತೆ ಮತ್ತು ರೈಲ್ವೆ ವಲಯದ ಯೋಜನೆಗಳು ಸರಕು ಮತ್ತು ಸೇವೆಗಳ ಚಲನೆಯನ್ನು ಸುಗಮಗೊಳಿಸುತ್ತವೆ, ಆ ಮೂಲಕ ವ್ಯಾಪಾರ ಮತ್ತು ವಾಣಿಜ್ಯವನ್ನು ಹೆಚ್ಚಿಸುತ್ತವೆ.ಅಲ್ಲದೇ, ಈ ಪ್ರದೇಶದ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುತ್ತವೆ.

ರಾಜಸಮಂದ್ ಮತ್ತು ಉದಯಪುರದಲ್ಲಿ ದ್ವಿಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ರಸ್ತೆ ನಿರ್ಮಾಣ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಉದಯಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಗೇಜ್ ಪರಿವರ್ತನೆ ಯೋಜನೆಗೆ ಮತ್ತು ರಾಜ್ ಸಮಂದ್ ನ ನಾಥ್ದ್ವಾರಾ ಪಟ್ಟಣಕ್ಕೆ ನಾಥದ್ವಾರದಿಂದ ಹೊಸ ಮಾರ್ಗವನ್ನು ಸ್ಥಾಪಿಸಲು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದಲ್ಲದೆ, ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ 48ರ 114 ಕಿ.ಮೀ ಉದ್ದದ ಉದಯಪುರದಿಂದ ಶಾಮ್ಲಾಜಿ ವಿಭಾಗದವರೆಗೆ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ 25ರ ಬಾರ್-ಬಿಲಾರಾ-ಜೋಧಪುರ ವಿಭಾಗದ 110 ಕಿ.ಮೀ ಉದ್ದದ ಅಗಲೀಕರಣ ಮತ್ತು 4 ಪಥದ ರಸ್ತೆಯನ್ನಾಗಿ ಬಲಪಡಿಸುವುದು ಮತ್ತು 47 ಕಿ.ಮೀ ಉದ್ದದ ಎರಡು ಪಥಗಳು ರಾಷ್ಟ್ರೀಯ ಹೆದ್ದಾರಿ 58 ಇ ಯ ಸುಸಜ್ಜಿತ ಭುಜದ ವಿಭಾಗವನ್ನು ಹೊಂದಿವೆ.

ಬ್ರಹ್ಮಕುಮಾರಿಗಳ ಶಾಂತಿವನ ಸಂಕೀರ್ಣದಲ್ಲಿ ಪ್ರಧಾನಮಂತ್ರಿ

ದೇಶಾದ್ಯಂತ ಆಧ್ಯಾತ್ಮಿಕ ಪುನರುಜ್ಜೀವನಕ್ಕೆ ಪ್ರಚೋದನೆ ನೀಡುವುದರತ್ತ ಪ್ರಧಾನಮಂತ್ರಿಯವರು ವಿಶೇಷ ಗಮನ ಹರಿಸಿದ್ದಾರೆ. ಈ ಪ್ರಯತ್ನವನ್ನು ಮುಂದುವರಿಸಿರುವ ಪ್ರಧಾನಮಂತ್ರಿಯವರು, ಬ್ರಹ್ಮಕುಮಾರಿಗಳ ಶಾಂತಿವನ ಸಂಕೀರ್ಣಕ್ಕೆ ಭೇಟಿ ನೀಡಲಿದ್ದಾರೆ. ಸೂಪರ್ ಸ್ಪೆಷಾಲಿಟಿ ಚಾರಿಟಬಲ್ ಗ್ಲೋಬಲ್ ಆಸ್ಪತ್ರೆ, ಶಿವಮಣಿ ವೃದ್ಧಾಶ್ರಮದ ಎರಡನೇ ಹಂತ ಮತ್ತು ನರ್ಸಿಂಗ್ ಕಾಲೇಜಿನ ವಿಸ್ತರಣೆಗೆ ಅವರು ಶಂಕುಸ್ಥಾಪನೆ ನೆರವೇರಿಸುವರು. ಸೂಪರ್ ಸ್ಪೆಷಾಲಿಟಿ ಚಾರಿಟಬಲ್ ಗ್ಲೋಬಲ್ ಆಸ್ಪತ್ರೆಯನ್ನು ಅಬು ರಸ್ತೆಯಲ್ಲಿ 50 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುವುದು. ಇದು ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ ಮತ್ತು ಈ ಪ್ರದೇಶದ ಬಡವರು ಮತ್ತು ಬುಡಕಟ್ಟು ಜನರಿಗೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

*****



(Release ID: 1926222) Visitor Counter : 101