ಜಲ ಶಕ್ತಿ ಸಚಿವಾಲಯ

ನೈರ್ಮಲ್ಯದಲ್ಲಿ ಭಾರತವು ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ - ಸ್ವಚ್ಛ ಭಾರತ ಅಭಿಯಾನ ಗ್ರಾಮೀಣ ಹಂತ 2 ರ ಅಡಿಯಲ್ಲಿ ಶೇ.50ರಷ್ಟು ಗ್ರಾಮಗಳು ಈಗ ಓಡಿಎಫ್.ಪ್ಲಸ್


ಸುಮಾರು 3 ಲಕ್ಷ ಗ್ರಾಮಗಳು ತಮ್ಮನ್ನು ಓ.ಡಿ.ಎಫ್. ಪ್ಲಸ್ ಎಂದು ಘೋಷಿಸಿಕೊಂಡಿವೆ, ಇದು 2024-25ರ ವೇಳೆಗೆ ಎಸ್ ಬಿಎಂ-ಜಿ ಎರಡನೇ ಹಂತದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ


ಅತ್ಯುತ್ತಮ ಪ್ರದರ್ಶನ ನೀಡಿರುವ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ತೆಲಂಗಾಣ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ನಗರ್ ಹವೇಲಿ ಮತ್ತು ದಮನ್ ಡಿಯು ಮತ್ತು ಲಕ್ಷದ್ವೀಪ ಸೇರಿವೆ.

Posted On: 10 MAY 2023 12:57PM by PIB Bengaluru

ಸ್ವಚ್ಛ ಭಾರತ ಅಭಿಯಾನ ಗ್ರಾಮೀಣ (ಎಸ್ ಬಿಎಂ-ಜಿ) ಅಡಿಯಲ್ಲಿ ದೇಶವು ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ, ದೇಶದ ಒಟ್ಟು ಹಳ್ಳಿಗಳ ಅರ್ಧದಷ್ಟು ಅಂದರೆ ಶೇ.50ರಷ್ಟು ಗ್ರಾಮಗಳು ಅಭಿಯಾನದ ಎರಡನೇ ಹಂತದಲ್ಲಿ ಒಡಿಎಫ್ ಪ್ಲಸ್ ಸ್ಥಾನಮಾನವನ್ನು ಸಾಧಿಸಿವೆ. ಒಡಿಎಫ್ ಪ್ಲಸ್ ಗ್ರಾಮವು ಘನ ಅಥವಾ ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಜಾರಿಗೆ ತರುವುದರ ಜೊತೆಗೆ ಬಯಲು ಶೌಚ  ಮುಕ್ತ (ಒಡಿಎಫ್) ಸ್ಥಾನಮಾನವನ್ನು ಉಳಿಸಿಕೊಂಡಿವೆ. ಇಲ್ಲಿಯವರೆಗೆ, 2.96 ಲಕ್ಷಕ್ಕೂ ಹೆಚ್ಚು ಗ್ರಾಮಗಳು ತಮ್ಮನ್ನು ಒಡಿಎಫ್ ಪ್ಲಸ್ ಎಂದು ಘೋಷಿಸಿಕೊಂಡಿವೆ, ಇದು 2024-25 ರ ವೇಳೆಗೆ ಎಸ್.ಬಿ.ಎಂ-ಜಿ ಎರಡನೇ ಹಂತದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಓಡಿಎಫ್ ಪ್ಲಸ್ ಗ್ರಾಮಗಳ ಶೇಕಡಾವಾರಿನಲ್ಲಿ ಉತ್ತಮ ಪ್ರದರ್ಶನ ತೋರಿದ ರಾಜ್ಯಗಳೆಂದರೆ ತೆಲಂಗಾಣ (100%), ಕರ್ನಾಟಕ (99.5%), ತಮಿಳುನಾಡು (97.8%) ಮತ್ತು ಉತ್ತರ ಪ್ರದೇಶ (95.2%) ದೊಡ್ಡ ರಾಜ್ಯಗಳಲ್ಲಿ ಸೇರಿದ್ದರೆ, ಗೋವಾ (95.3%) ಮತ್ತು ಸಿಕ್ಕಿಂ (69.2%) ಸಣ್ಣ ರಾಜ್ಯಗಳ ಪೈಕಿ ಉತ್ತಮ ಸಾಧನೆ ಮಾಡಿವೆ. ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ, ದಾದ್ರಾ ನಗರ್ ಹವೇಲಿ ಮತ್ತು ದಮನ್ ಡಿಯು ಮತ್ತು ಲಕ್ಷದ್ವೀಪಗಳು ಶೇ.100ರಷ್ಟು ಒಡಿಎಫ್ ಪ್ಲಸ್ ಮಾದರಿ ಗ್ರಾಮಗಳನ್ನು ಹೊಂದಿವೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಡಿಎಫ್ ಪ್ಲಸ್ ಸ್ಥಾನಮಾನವನ್ನು ಸಾಧಿಸುವಲ್ಲಿ ಗಮನಾರ್ಹ ಪ್ರಗತಿ ತೋರಿಸಿವೆ ಮತ್ತು ಈ ಮೈಲಿಗಲ್ಲನ್ನು ತಲುಪುವಲ್ಲಿ ಅವರ ಪ್ರಯತ್ನಗಳು ಪ್ರಮುಖ ಪಾತ್ರ ವಹಿಸಿವೆ.

ಒಟ್ಟು 2,96,928 ಒಡಿಎಫ್ ಪ್ಲಸ್ ಗ್ರಾಮಗಳ ಪೈಕಿ 2,08,613 ಗ್ರಾಮಗಳು ಒಡಿಎಫ್ ಪ್ಲಸ್ ಮಹತ್ವಾಕಾಂಕ್ಷೆಯ ಗ್ರಾಮಗಳಾಗಿದ್ದು, 32,030 ಗ್ರಾಮಗಳು ಘನತ್ಯಾಜ್ಯ ನಿರ್ವಹಣೆ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ ಹೊಂದಿರುವ ಒಡಿಎಫ್ ಪ್ಲಸ್ ಉತ್ತುಂಗದ ಗ್ರಾಮಗಳಾಗಿವೆ ಮತ್ತು 56,285 ಗ್ರಾಮಗಳು ಒಡಿಎಫ್ ಪ್ಲಸ್ ಮಾದರಿ ಗ್ರಾಮಗಳಾಗಿವೆ.. ಒಡಿಎಫ್ ಪ್ಲಸ್ ಮಾದರಿ ಗ್ರಾಮವು ತನ್ನ ಒಡಿಎಫ್ ಸ್ಥಾನಮಾನವನ್ನು ಉಳಿಸಿಕೊಂಡಿದ್ದು, ಘನ ತ್ಯಾಜ್ಯ ನಿರ್ವಹಣೆ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಎರಡಕ್ಕೂ ವ್ಯವಸ್ಥೆಗಳನ್ನು ಹೊಂದಿರುತ್ತವೆ; ಗೋಚರ ಶುಚಿತ್ವವನ್ನು ನಿರ್ವಹಿಸುತ್ತದೆ, ಅಂದರೆ, ಕನಿಷ್ಠ ಕಸ, ಕನಿಷ್ಠ ನಿಂತ ತ್ಯಾಜ್ಯ ನೀರು, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಇಲ್ಲಿ ಇರುವುದಿಲ್ಲ; ಮತ್ತು ಒಡಿಎಫ್ ಪ್ಲಸ್ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಸಂದೇಶಗಳನ್ನು ಪ್ರದರ್ಶಿಸುತ್ತದೆ. ಈವರೆಗೆ 1,65,048 ಗ್ರಾಮಗಳಲ್ಲಿ ಘನತ್ಯಾಜ್ಯ ನಿರ್ವಹಣೆ, 2,39,063 ಗ್ರಾಮಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ, 4,57,060 ಗ್ರಾಮಗಳಲ್ಲಿ ಕನಿಷ್ಠ ನೀರು ಮತ್ತು 4,67,384 ಗ್ರಾಮಗಳಲ್ಲಿ ಕನಿಷ್ಠ ಕಸ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ.

2014-15 ಮತ್ತು 2021-22ರ ನಡುವೆ ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನ ಗ್ರಾಮೀಣಕ್ಕೆ ಒಟ್ಟು 83,938 ಕೋಟಿ ರೂ.ಗಳನ್ನು  ಹಂಚಿಕೆ ಮಾಡಿದೆ. ನೈರ್ಮಲ್ಯಕ್ಕಾಗಿ ಎಸ್ ಬಿಎಂ (ಜಿ) ನಿಧಿಯ ಜೊತೆಗೆ 15ನೇ ಎಫ್.ಸಿ ನಿಧಿಯ ಸ್ಪಷ್ಟ ಹಂಚಿಕೆ ಇದೆ. ನೈರ್ಮಲ್ಯ ಸ್ವತ್ತುಗಳನ್ನು ನಿರ್ಮಿಸಲು, ಸ್ವಭಾವದಲ್ಲಿ ಬದಲಾವಣೆಯನ್ನು ಉತ್ತೇಜಿಸಲು ಮತ್ತು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸಲು ಈ ಹಣವನ್ನು ಬಳಸಲಾಗುತ್ತದೆ.

ಈ ವರ್ಷ ಸ್ವಚ್ಛ ಭಾರತ ಅಭಿಯಾನದ 9 ವರ್ಷಗಳನ್ನು ಪೂರೈಸಲಿದೆ.  ಶೇ.50ರಷ್ಟು ಒಡಿಎಫ್ ಪ್ಲಸ್ ಗ್ರಾಮಗಳ ಸಾಧನೆಯು ಭಾರತಕ್ಕೆ ಮಹತ್ವದ ಮೈಲಿಗಲ್ಲಾಗಿದೆ, ಏಕೆಂದರೆ ಇದು ಕೇವಲ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆಯನ್ನು ಮೀರಿ ಪೂರ್ಣ ಮತ್ತು ಸಂಪೂರ್ಣ ಸ್ವಚ್ಚತೆಯತ್ತ ಅಂದರೆ ಒಡಿಎಫ್ ನಿಂದ ಒಡಿಎಫ್ ಪ್ಲಸ್ ನತ್ತ ಸಾಗುತ್ತಿದೆ. ಎಸ್ ಬಿಎಂ (ಜಿ) ಎರಡನೇ ಹಂತದ ಪ್ರಮುಖ ಅಂಶಗಳು ಬಯಲು ಶೌಚ ಮುಕ್ತ ಸ್ಥಿತಿ (ಒಡಿಎಫ್-ಎಸ್), ಘನ (ಜೈವಿಕ ವಿಘಟನೀಯ) ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ಪಿಡಬ್ಲ್ಯೂಎಂ), ದ್ರವ ತ್ಯಾಜ್ಯ ನಿರ್ವಹಣೆ (ಎಲ್ ಡಬ್ಲ್ಯುಎಂ), ಮಲ ತ್ಯಾಜ್ಯ ನಿರ್ವಹಣೆ (ಎಫ್ ಎಸ್ ಎಂ), ಗೋಬರ್ ಧನ್, ಮಾಹಿತಿ ಶಿಕ್ಷಣ ಮತ್ತು ಸಂವಹನ / ನಡವಳಿಕೆ ಬದಲಾವಣೆ ಸಂವಹನ (ಐಇಸಿ / ಬಿಸಿಸಿ) ಮತ್ತು ಸಾಮರ್ಥ್ಯ ವರ್ಧನೆ. ಎಸ್ಬಿಎಂ-ಜಿ ಕಾರ್ಯಕ್ರಮವು ದೇಶಾದ್ಯಂತ ಲಕ್ಷಾಂತರ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ವರದಿಗಳು ಎಸ್ ಬಿಎಂ-ಜಿ ಕಾರ್ಯಕ್ರಮದ ತಳಮಟ್ಟದ ಪರಿಣಾಮವನ್ನು ಎತ್ತಿ ತೋರಿಸಿವೆ.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ, 831 ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳು ಮತ್ತು 1,19,449 ತ್ಯಾಜ್ಯ ಸಂಗ್ರಹ ಮತ್ತು ವಿಂಗಡಣೆ ಶೆಡ್ ಗಳನ್ನು ಸ್ಥಾಪಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಮತ್ತು ಸಿಮೆಂಟ್ ಕಾರ್ಖಾನೆಗಳಲ್ಲಿ ಇಂಧನವಾಗಿ ಬಳಸಲು ಪ್ಲಾಸ್ಟಿಕ್ ಅನ್ನು ಸ್ವಚ್ಛಗೊಳಿಸಲಾಗುತ್ತದೆ, ಚೂರುಚೂರು ಮಾಡಿ, ಸುರುಳಿ ಮಾಡಲಾಗುತ್ತದೆ ಮತ್ತು ರಸ್ತೆ ನಿರ್ಮಾಣದಲ್ಲಿ ಬಳಸಲು ಸಾಗಿಸಲಾಗುತ್ತದೆ. 1 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಏಕ ಬಳಕೆಯ ಪ್ಲಾಸ್ಟಿಕ್ (ಎಸ್.ಯು.ಪಿ) ನಿಷೇಧದ ನಿರ್ಣಯವನ್ನು ಅಂಗೀಕರಿಸಿವೆ.

206 ಜಿಲ್ಲೆಗಳಲ್ಲಿ 683 ಕಾರ್ಯೋನ್ಮುಖ ಜೈವಿಕ ಅನಿಲ / ಸಿಬಿಜಿ ಘಟಕಗಳ ಸ್ಥಾಪನೆ

3,47,094 ಸಮುದಾಯ ಮಿಶ್ರಗೊಬ್ಬರ ಹೊಂಡಗಳ ನಿರ್ಮಾಣ

ಮನೆಗಳ ಮಟ್ಟದಲ್ಲಿ ಜೈವಿಕ ವಿಘಟನೀಯ ತ್ಯಾಜ್ಯ ನಿರ್ವಹಣೆಗಾಗಿ, ಸಮುದಾಯ ಮಟ್ಟದಲ್ಲಿ ಮಿಶ್ರಗೊಬ್ಬರ  ತಯಾರಿಕೆಗಾಗಿ ತಮ್ಮ ಒಣ ಮತ್ತು ಹಸಿ (ಸಾವಯವ) ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಲು ಜನರನ್ನು ಪ್ರೋತ್ಸಾಹಿಸಲಾಗುತ್ತಿದೆ. ಇಲ್ಲಿಯವರೆಗೆ 3,47,094 ಸಮುದಾಯ ಮಿಶ್ರಗೊಬ್ಬರ ಗುಂಡಿಗಳನ್ನು ನಿರ್ಮಿಸಲಾಗಿದೆ. ಇದು ಜೈವಿಕ ವಿಘಟನೀಯ ತ್ಯಾಜ್ಯ ಮರುಪಡೆಯುವಿಕೆ, ತ್ಯಾಜ್ಯವನ್ನು ಸಂಪನ್ಮೂಲಗಳಾಗಿ ಪರಿವರ್ತಿಸುವುದು ಮತ್ತು ಸ್ವಚ್ಛ ಮತ್ತು ಹಸಿರು ಗ್ರಾಮವನ್ನು ರಚಿಸಲು ಬೆಂಬಲಿಸುವ ಉಪಕ್ರಮವಾಗಿದೆ. ಇದು 'ತ್ಯಾಜ್ಯದಿಂದ ಸಂಪತ್ತು' ಉಪಕ್ರಮವಾಗಿದ್ದು, ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಜೈವಿಕ ಅನಿಲ / ಸಿಬಿಜಿ ಮತ್ತು ಜೈವಿಕ-ಮಿಶ್ರಣ / ಜೈವಿಕ ರಸಗೊಬ್ಬರವನ್ನು ಉತ್ಪಾದಿಸಲು ಬಳಸಲಾಗುತ್ತದೆ ಮತ್ತು ಇದು ಭಾರತ ಸರ್ಕಾರದ ವೃತ್ತಾಕಾರದ ಆರ್ಥಿಕತೆ ಮತ್ತು ಲೈಫ್ ಅಭಿಯಾನದ  ಉಪಕ್ರಮಗಳಿಗೆ ಅನುಗುಣವಾಗಿದೆ. 206 ಜಿಲ್ಲೆಗಳಲ್ಲಿ 683 ಕಾರ್ಯೋನ್ಮುಖ ಜೈವಿಕ ಅನಿಲ / ಸಿಬಿಜಿ ಘಟಕಗಳನ್ನು ಸ್ಥಾಪಿಸಲಾಗಿದೆ. ಇದು ಪರಿಸರ ಸ್ನೇಹಿ ಇಂಧನ ಮೂಲ, ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಪೋಷಕಾಂಶ ಭರಿತ ಮಿಶ್ರಣ, ಸ್ವಚ್ಛ ಪರಿಸರ ಮತ್ತು ರೋಗವಾಹಕಗಳಿಂದ ಹರಡುವ ರೋಗಗಳ ಸಂಭವವನ್ನು ಕಡಿಮೆ ಮಾಡಲು, ಕಳಪೆ ನೈರ್ಮಲ್ಯ ಮತ್ತು ಆರೋಗ್ಯ ಪರಿಸ್ಥಿತಿಗಳಿಂದ ಉಂಟಾಗುವ ಆರ್ಥಿಕ ವೆಚ್ಚಗಳಲ್ಲಿ ಉಳಿತಾಯ, ಹಸಿರು ಮನೆ ಅನಿಲಗಳ (ಜಿ.ಎಚ್.ಜಿ.) ಹೊರಸೂಸುವಿಕೆಯನ್ನು ತಗ್ಗಿಸುವ, ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡುವ (ವಿದೇಶೀ ವಿನಿಮಯ ಉಳಿತಾಯ), ಸ್ಥಳೀಯ ಸಮುದಾಯಕ್ಕೆ ಉದ್ಯೋಗಾವಕಾಶ, ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಹಸಿರು ಇಂಧನ ವಲಯದಲ್ಲಿ ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ, ಸಾವಯವ ತ್ಯಾಜ್ಯದಿಂದ ರೈತರು / ಸ್ಥಳೀಯ ಗ್ರಾಮ ಸಮುದಾಯದ ಆದಾಯವನ್ನು ಹೆಚ್ಚಿಸುವ ಮತ್ತು ಕೃಷಿ ತ್ಯಾಜ್ಯಗಳ ಬಗ್ಗೆ ಕಾಳಜಿ ವಹಿಸುವುದೂ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ.

ಬೂದು ನೀರಿನ ನಿರ್ವಹಣೆಗಾಗಿ 22 ಲಕ್ಷ ಇಂಗುಗುಂಡಿಗಳ (ಸಮುದಾಯ ಮತ್ತು ಮನೆ) ನಿರ್ಮಾಣ

ಒಳಚರಂಡಿ ವ್ಯವಸ್ಥೆಗಳಿಲ್ಲದ ಹಳ್ಳಿಗಳಲ್ಲಿ ದೈನಂದಿನ ಮನೆ ಬಳಕೆ, ಶುಚಿಗೊಳಿಸುವಿಕೆ, ಅಡುಗೆ, ಸ್ನಾನ ಇತ್ಯಾದಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ (ಬೂದು) ನೀರನ್ನು, ಮನೆ ಮತ್ತು ಸಮುದಾಯ ಮಟ್ಟದಲ್ಲಿ ಇಂಗು ಗುಂಡಿಗಳು / ಲೀಚ್ ಗುಂಡಿಗಳು ಅಥವಾ ಮ್ಯಾಜಿಕ್ ಹೊಂಡಗಳ ಮೂಲಕ ಪರಿಣಾಮಕಾರಿಯಾಗಿ ಸಂಸ್ಕರಿಸಬಹುದು. ಸುಜಲಾಂ ಎಂಬ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಬೂದು ನೀರನ್ನು ನಿರ್ವಹಿಸಲು ಸರಿಸುಮಾರು 2.2 ದಶಲಕ್ಷ (22 ಲಕ್ಷ) ಇಂಗು ಗುಂಡಿಗಳನ್ನು (ಸಮುದಾಯ ಮತ್ತು ಮನೆಯ ಹೊಂಡಗಳು) ಮಾಡಲಾಗಿದೆ. ಈಗ, ಸುಜಲಾಂ 3.0 ಅನ್ನು ಸಮಗ್ರ ಮತ್ತು ಏಕೀಕೃತ ಬೂದು ಜಲ ನಿರ್ವಹಣೆಗಾಗಿ ಪ್ರಾರಂಭಿಸಲಾಗಿದೆ.

ಶೌಚಾಲಯಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರಾದ ಮಲದ ಕೊಚ್ಚೆಗೆ, ಎಸ್ ಬಿಎಂ (ಜಿ) ಮಲದ ಕೊಚ್ಚೆಯ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸುತ್ತದೆ, ಸ್ಥಳದಲ್ಲಿ ನೈರ್ಮಲ್ಯ ವ್ಯವಸ್ಥೆಗಳ ಯಾಂತ್ರೀಕೃತ ಹೂಳೆತ್ತುವಿಕೆಯನ್ನು ಬಲಪಡಿಸಲು ಜಿಲ್ಲೆಗಳನ್ನು ಬೆಂಬಲಿಸುವ ಮೂಲಕ ಮತ್ತು ಮಲದ ರೊಚ್ಚನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಮೂಲಕ. ಶೌಚಾಲಯಗಳನ್ನು ಅವಳಿ ಗುಂಡಿ ಶೌಚಾಲಯಗಳಾಗಿ (ಅಥವಾ ಇದೇ ರೀತಿಯ ವ್ಯವಸ್ಥೆಗಳಾಗಿ) ಮರುಹೊಂದಿಸುವ ಮೂಲಕ ಎಫ್ಎಸ್ಎಂ ಅನ್ನು ಕುಟುಂಬ ಮಟ್ಟದಲ್ಲಿ ನಿರ್ವಹಿಸಲಾಗುತ್ತದೆ ಮತ್ತು ನಗರ ಪ್ರದೇಶಗಳಲ್ಲಿರುವ ಒಳಚರಂಡಿ ಸಂಸ್ಕರಣಾ ಘಟಕಗಳು (ಎಸ್.ಟಿ.ಪಿಗಳು) / ಮಲದ ಕೊಚ್ಚೆ ಸಂಸ್ಕರಣಾ ಘಟಕ (ಎಫ್ಎಸ್.ಟಿಪಿ) ಗಳಲ್ಲಿ ಸಂಸ್ಕರಿಸುವ ಮೂಲಕ ಗ್ರಾಮ ಮಟ್ಟದಲ್ಲಿ ನಿರ್ವಹಿಸಲಾಗುತ್ತದೆ  ಮತ್ತು ಹಳ್ಳಿಗಳ ಸಮೂಹಕ್ಕೆ ಅಥವಾ ಎಫ್ ಎಸ್ ಟಿಪಿ ಕಾರ್ಯಸಾಧ್ಯವಲ್ಲದ ದೊಡ್ಡ ಪ್ರತ್ಯೇಕ ಹಳ್ಳಿಗೆ ಆಳವಾದ ಸಾಲು ಬಲವರ್ಧನೆ ಮಾಡಲಾಗುತ್ತದೆ. ಪ್ರಸ್ತುತ, 591 ಎಫ್ಎಸ್.ಟಿ.ಪಿಗಳು ಕಾರ್ಯನಿರ್ವಹಿಸುತ್ತಿವೆ.

ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಸುಧಾರಿಸಲು ಸಂಘಟಿತ ಪ್ರಯತ್ನ ನಡೆದಾಗ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಎಸ್.ಬಿ.ಎಂ (ಜಿ) ಒಂದು ಜ್ವಲಂತ ಉದಾಹರಣೆಯಾಗಿದೆ. ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಈ ಹೆಮ್ಮೆಯ ಸಾಧನೆಗಾಗಿ ಎಲ್ಲಾ ಗ್ರಾಮಗಳು, ಗ್ರಾಮ ಪಂಚಾಯಿತಿಗಳು, ಜಿಲ್ಲೆಗಳು, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೊಡುಗೆಯನ್ನು ಅಭಿನಂದಿಸುತ್ತದೆ ಮತ್ತು ಶ್ಲಾಘಿಸುತ್ತದೆ.

ಸ್ವಚ್ಛ ಭಾರತ್ ಅಭಿಯಾನ - ಗ್ರಾಮೀಣ ಅಡಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೈಗೊಂಡ ಇತ್ತೀಚಿನ ಉಪಕ್ರಮಗಳ ಬಗ್ಗೆ ಓದಲು ಇಲ್ಲಿ ಕ್ಲಿಕ್ ಮಾಡಿ

 

*****

 



(Release ID: 1923128) Visitor Counter : 127