ಪ್ರಧಾನ ಮಂತ್ರಿಯವರ ಕಛೇರಿ

ಮಾರ್ಚ್ 24ರಂದು ವಾರಣಾಸಿಗೆ ಪ್ರಧಾನ ಮಂತ್ರಿ ಭೇಟಿ


ಏಕ ವಿಶ್ವ ಕ್ಷಯರೋಗ(ಟಿಬಿ) ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

ಕ್ಷಯರೋಗ-ಮುಕ್ತ ಪಂಚಾಯಿತಿ ಉಪಕ್ರಮಕ್ಕೆ ಪ್ರಧಾನಿ ಚಾಲನೆ; ಕ್ಷಯ ರೋಗ ತಡೆಗಟ್ಟುವ ಕಡಿಮೆ ಚಿಕಿತ್ಸೆ ಮತ್ತು ಕುಟುಂಬ-ಕೇಂದ್ರಿತ ಆರೈಕೆ ಮಾದರಿಯ ಅಧಿಕೃತ ಪ್ಯಾನ್-ಇಂಡಿಯಾ ಅನಾವರಣ ನಿರೀಕ್ಷೆ

1,780 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನ ಮಂತ್ರಿ

ಈ ಯೋಜನೆಗಳು ವಾರಾಣಸಿಯ ಭೂಸದೃಶ್ಯವನ್ನು ಮತ್ತಷ್ಟು ಮಾರ್ಪಡಿಸುತ್ತದೆ; ನಗರದ ಜನರಿಗೆ ಜೀವನ ಸೌಕರ್ಯ ಹೆಚ್ಚಿಸಲಿವೆ

ವಾರಾಣಸಿ ದುಂಡು ನಿಲ್ದಾಣದಿಂದ ಗೋಡೋಲಿಯಾವರೆಗಿನ ಪ್ಯಾಸೆಂಜರ್ ರೋಪ್‌ವೇಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ; ಈ ಯೋಜನೆಯು ಪ್ರವಾಸಿಗರು, ಯಾತ್ರಿಕರು ಮತ್ತು ನಿವಾಸಿಗಳಿಗೆ ಸಂಚಾರ ಸುಗಮಗೊಳಿಸುತ್ತದೆ

Posted On: 22 MAR 2023 4:07PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 24ರಂದು ವಾರಾಣಸಿಗೆ ಭೇಟಿ ನೀಡಲಿದ್ದು, ಅಂದು ಬೆಳಗ್ಗೆ 10:30ಕ್ಕೆ ರುದ್ರಕಾಶ್ ಕನ್ವೆನ್ಷನ್ ಸೆಂಟರ್‌ನಲ್ಲಿ ಏಕ ವಿಶ್ವ(ಒನ್ ವರ್ಲ್ಡ್) ಕ್ಷಯರೋಗ(ಟಿಬಿ) ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿ ಅವರು  ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ ಮೈದಾನದಲ್ಲಿ 1,780 ಕೋಟಿ ರೂ.ಗಿಂತ ಅಧಿಕ ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ಏಕ ವಿಶ್ವ ಟಿಬಿ ಶೃಂಗಸಭೆ

ವಿಶ್ವ ಕ್ಷಯರೋಗ ದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು “ಒನ್ ವರ್ಲ್ಡ್ ಟಿಬಿ ಶೃಂಗಸಭೆ” ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಶೃಂಗಸಭೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು Stop TB Partnership ಜಂಟಿಯಾಗಿ ಆಯೋಜಿಸಿವೆ. 2001ರಲ್ಲಿ ಸ್ಥಾಪಿತವಾದ Stop TB Partnership ಸಂಸ್ಥೆಯನ್ನು  ವಿಶ್ವಸಂಸ್ಥೆ ಆರಂಭಿಸಿದ್ದು, ಇದು ಕ್ಷಯರೋಗ ಪೀಡಿತ ಜನರು, ಸಮುದಾಯಗಳು ಮತ್ತು ದೇಶಗಳಿಗೆ ಸೇವೆ ಸಲ್ಲಿಸುತ್ತಾ ಬಂದಿದೆ.

ಕಾರ್ಯಕ್ರಮದ ವೇಳೆ ಪ್ರಧಾನ ಮಂತ್ರಿ ಅವರು ಕ್ಷಯ ಮುಕ್ತ ಪಂಚಾಯಿತಿ ಉಪಕ್ರಮ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಕ್ಷಯರೋಗ ತಡೆಗಟ್ಟುವ ಕಡಿಮೆ ಚಿಕಿತ್ಸೆ(ಟಿಪಿಟಿ) ಮತ್ತು ಕುಟುಂಬ-ಕೇಂದ್ರಿತ ಆರೈಕೆ ಮಾದರಿಯ ಅಧಿಕೃತ ಪ್ಯಾನ್-ಇಂಡಿಯಾ ಕಾರ್ಯಕ್ರಮವನ್ನು ಶ್ರೀ ಮೋದಿ ಅವರು ಅನಾವರಣಗೊಳಿಸಲಿದ್ದಾರೆ. ಜತೆಗೆ,  ಭಾರತದ 2023ರ ವಾರ್ಷಿಕ ಟಿಬಿ ವರದಿ ಬಿಡುಗಡೆ ಮಾಡಲಿದ್ದಾರೆ. ಕ್ಷಯರೋಗವನ್ನು ಕೊನೆಗೊಳಿಸಲು ಪ್ರಗತಿ ಸಾಧಿಸಿರುವ ಆಯ್ದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಿಗೆ ಪ್ರಧಾನ ಮಂತ್ರಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

2018 ಮಾರ್ಚ್ ನಲ್ಲಿ ನವದೆಹಲಿಯಲ್ಲಿ ನಡೆದ “ಕ್ಷಯರೋಗ ಕೊನೆಗಾಣಿಸಿ  ಶೃಂಗಸಭೆ”ಯಲ್ಲಿ  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2025ರ ವೇಳೆಗೆ ಕ್ಷಯ ರೋಗ ಸಂಬಂಧಿತ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಭಾರತಕ್ಕೆ ಕರೆ ನೀಡಿದ್ದರು. ಆದರೆ ನಿಗದಿತ ಸಮಯಕ್ಕಿಂತ 5 ವರ್ಷಗಳ ಮುಂಚಿತವಾಗಿ “ಏಕ ವಿಶ್ವ ಟಿಬಿ ಶೃಂಗಸಭೆ”ಯು ತನ್ನ ಟಿಬಿ ನಿರ್ಮೂಲನಾ ಉದ್ದೇಶಗಳನ್ನು ಪೂರೈಸಲು ದೇಶವು ಮುಂದೆ ಸಾಗುತ್ತಿರುವಾಗ ಗುರಿಗಳ ಮೇಲೆ ಮತ್ತಷ್ಟು ಉದ್ದೇಶಪೂರ್ವಕವಾಗಿ ಚರ್ಚಿಸಲು ಅವಕಾಶ ಒದಗಿಸುತ್ತಿದೆ. ಇದು ರಾಷ್ಟ್ರೀಯ ಟಿಬಿ ನಿರ್ಮೂಲನಾ ಕಾರ್ಯಕ್ರಮಗಳ ಕಲಿಕೆಗಳನ್ನು ಪ್ರದರ್ಶಿಸಲು ಒಂದು ಅವಕಾಶವಾಗಿದೆ. ಶೃಂಗಸಭೆಯಲ್ಲಿ 30ಕ್ಕೂ ಹೆಚ್ಚು ದೇಶಗಳ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ವಾರಾಣಸಿಯಲ್ಲಿ ಅಭಿವೃದ್ಧಿ ಉಪಕ್ರಮಗಳು

ಕಳೆದ 9 ವರ್ಷಗಳಲ್ಲಿ, ವಾರಾಣಸಿಯ ಭೂಸದೃಶ್ಯ ಪರಿವರ್ತಿಸಲು, ನಗರ ಮತ್ತು ಸುತ್ತಮುತ್ತ ನೆಲೆಸಿರುವ ಜನರಿಗೆ ಜೀವನ ಸುಲಭವಾಗಿಸಲು ಪ್ರಧಾನಿ ಅವರು ವಿಶೇಷ ಗಮನ ನೀಡಿದ್ದಾರೆ. ಈ ದಿಸೆಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ಅವರು, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ ಮೈದಾನದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಅಂದಾಜು 1,780 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನ ಮಂತ್ರಿ ಅವರು ವಾರಾಸಿ ದಂಡು ನಿಲ್ದಾಣದಿಂದ ಗೋಡೋಲಿಯಾವರೆಗಿನ ಪ್ಯಾಸೆಂಜರ್ ರೋಪ್‌ವೇಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಯೋಜನೆಯ ವೆಚ್ಚ ಸುಮಾರು ರೂ. 645 ಕೋಟಿ ರೂ. ಆಗಿದೆ. ರೋಪ್‌ವೇ ವ್ಯವಸ್ಥೆಯು 5 ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಜತೆಗೆ 3.75 ಕಿ.ಮೀ. ಉದ್ದವಿದೆ. ಇದು ವಾರಾಣಸಿ ಪ್ರವಾಸಿಗರು, ಯಾತ್ರಿಕರು ಮತ್ತು ನಿವಾಸಿಗಳಿಗೆ ಸಂಚಾರ ಸುಲಭಗೊಳಿಸುತ್ತದೆ.

ನಮಾಮಿ ಗಂಗಾ ಯೋಜನೆಯಡಿ ಭಗವಾನ್‌ಪುರದಲ್ಲಿ 55 ಎಂಎಲ್‌ಡಿ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದನ್ನು 300 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಖೇಲೋ ಇಂಡಿಯಾ ಯೋಜನೆಯಡಿ, ಸಿಗ್ರಾ ಸ್ಟೇಡಿಯಂನ 2 ಮತ್ತು 3ನೇ ಹಂತದ ಮರುಅಭಿವೃದ್ಧಿ ಕಾಮಗಾರಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸೇವಾಪುರಿಯ ಇಸರ್ವಾರ್ ಗ್ರಾಮದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ ನಿರ್ಮಿಸಲಿರುವ ಎಲ್‌ಪಿಜಿ ಬಾಟ್ಲಿಂಗ್ ಘಟಕಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೆ, ಭರ್ತಾರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಶಂಕುಸ್ಥಾಪನೆ ಸೇರಿದಂತೆ ಹಲವಾರು ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ.

ಜಲಜೀವನ್ ಮಿಷನ್ ಅಡಿ, ಪ್ರಧಾನ ಮಂತ್ರಿ 19 ಕುಡಿಯುವ ನೀರಿನ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ, ಇದು 63 ಗ್ರಾಪಂಗಳ 3 ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಪ್ರಯೋಜನ ಒದಗಿಸಲಿದೆ. ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಜಲಜೀವನ ಮಿಷನ್ ಅಡಿ, 59 ಕುಡಿಯುವ ನೀರಿನ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ವಾರಣಸಿ ಮತ್ತು ಸುತ್ತಮುತ್ತಲ ರೈತರು, ರಫ್ತುದಾರರು ಮತ್ತು ವ್ಯಾಪಾರಿಗಳಿಗೆ, ಕಾರ್ಖಿಯಾನ್‌ನಲ್ಲಿ ನಿರ್ಮಿಸಲಾದ ಸಮಗ್ರ ಪ್ಯಾಕ್ ಹೌಸ್‌ನಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಶ್ರೇಣೀಕರಣ, ವಿಂಗಡಣೆ, ಸಂಸ್ಕರಣೆ ಸಾಧ್ಯವಾಗುತ್ತದೆ. ಸಮಾರಂಭದಲ್ಲಿ ಪ್ರಧಾನಿ ಅವರು ಈ ಮಹತ್ವದ ಯೋಜನೆಯನ್ನು ಸಹ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ವಾರಾಣಸಿ ಮತ್ತು ಸುತ್ತಮುತ್ತಲ ಪ್ರದೇಶದ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ವಾರಾಣಸಿ ಸ್ಮಾರ್ಟ್ ಸಿಟಿ ಮಿಷನ್ ಅಡಿ, ರಾಜ್‌ಘಾಟ್ ಮತ್ತು ಮಹಮೂರ್‌ಗಂಜ್ ಸರ್ಕಾರಿ ಶಾಲೆಗಳ ಮರುಅಭಿವೃದ್ಧಿ ನಗರದ ಆಂತರಿಕ ರಸ್ತೆಗಳ ಸುಂದರೀಕರಣ; ನಗರದ ಇತರೆ 6 ಉದ್ಯಾನವನಗಳು ಮತ್ತು ಕೊಳಗಳ ಮರುಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಧಾನ ಮಂತ್ರಿ ಲೋಕಾರ್ಪಣೆ ಮಾಡಲಿದ್ದಾರೆ;.

ಪ್ರಧಾನಮಂತ್ರಿ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಟಿಸಿ ಟವರ್ ಸೇರಿದಂತೆ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ, ಭೇಲುಪುರದ ವಾಟರ್ ಪಾರ್ಕ್ ಆವರಣದಲ್ಲಿ 2 ಮೆಗಾವ್ಯಾಟ್ ಸೌರವಿದ್ಯುತ್ ಸ್ಥಾವರ, ಕೋನಿಯಾ ಪಂಪಿಂಗ್ ಸ್ಟೇಷನ್‌ನಲ್ಲಿ 800 ಕಿಲೋ ವ್ಯಾಟ್ ಸೌರವಿದ್ಯುತ್ ಸ್ಥಾವರ; ಸಾರನಾಥದಲ್ಲಿ ಹೊಸ ಸಮುದಾಯ ಆರೋಗ್ಯ ಕೇಂದ್ರ; ಚಾಂದ್‌ಪುರದ ಕೈಗಾರಿಕಾ ಎಸ್ಟೇಟ್‌ನ ಮೂಲಸೌಕರ್ಯ ಸುಧಾರಣೆ, ಕೇದಾರೇಶ್ವರ, ವಿಶ್ವೇಶ್ವರ ಮತ್ತು ಓಂಕಾರೇಶ್ವರ ಖಂಡ್ ಪರಿಕ್ರಮ ದೇವಾಲಯಗಳ ಪುನರುಜ್ಜೀವನ ಯೋಜನೆಗಳಿಗೂ ಅವರು ಚಾಲನೆ ನೀಡಲಿದ್ದಾರೆ.

 

*****



(Release ID: 1909766) Visitor Counter : 120