ಸಂಪುಟ ಕಾರ್ಯಾಲಯ

ಮಾರ್ಚ್ 14, 2023ರಂದು ಕ್ಯಾಬಿನೆಟ್ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಮುಂಬರುವ ಬೇಸಿಗೆ ಮತ್ತು ಅದರ ಬಿಸಿಯ ಉಪಶಮನ ಮಾರ್ಗ-ಕ್ರಮಗಳ ಸಿದ್ಧತೆಯನ್ನು ಪರಿಶೀಲಿಸಲು ಸಭೆ ನಡೆಸಲಾಯಿತು

Posted On: 14 MAR 2023 7:07PM by PIB Bengaluru

ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರ ಅಧ್ಯಕ್ಷತೆಯಲ್ಲಿ ಇಂದು ಮುಂಬರುವ ಬೇಸಿಗೆಗೆ ಸನ್ನದ್ಧತೆ ಮತ್ತು ಬೇಸಿಗೆಯ ಬಿಸಿಯನ್ನು ತಗ್ಗಿಸುವ ಕ್ರಮಗಳ ಪರಾಮರ್ಶೆ ನಡೆಸಲಾಯಿತು. ಸಂಬಂಧಿತ ಕೇಂದ್ರ ಸಚಿವಾಲಯಗಳು / ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಶಾಖ ತರಂಗ ಪರಿಸ್ಥಿತಿಗಳಿಗೆ ಗುರಿಯಾಗುವ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) 2023ರ ಮಾರ್ಚ್ ನಿಂದ ಮೇ ವರೆಗಿನ ಅವಧಿಯ ಜಾಗತಿಕ ಹವಾಮಾನ ವಿದ್ಯಮಾನಗಳು ಮತ್ತು ತಾಪಮಾನದ ದೃಷ್ಟಿಕೋನದ ಬಗ್ಗೆ ಪ್ರಸ್ತುತಿಯನ್ನು ನೀಡಿತು. ಮಾರ್ಚ್ 2023ರ ಎರಡನೇ ಹದಿನೈದು ದಿನಗಳ ಮುನ್ಸೂಚನೆಯನ್ನು ಸಹ ಈ ಪ್ರಸ್ತುತಿಯಲ್ಲಿ ಒದಗಿಸಲಾಗಿದೆ.

ಈಶಾನ್ಯ, ಪೂರ್ವ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಮತ್ತು ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಬೇಸಿಗೆಯು ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ 2023ರ ಮಾರ್ಚ್ ನಿಂದ ಮೇ ಅವಧಿಯ ತಾಪಮಾನದ ಮುನ್ನೋಟದಲ್ಲಿ ತಿಳಿಸಿದೆ. ದಕ್ಷಿಣ ಪೆನಿನ್ಸುಲರ್ ಭಾರತವನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಮಾರ್ಚ್ 2023ರ ಉಳಿದ ಅವಧಿಯಲ್ಲಿ ಯಾವುದೇ ಗಮನಾರ್ಹ ಶಾಖ ತರಂಗಗಳನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ಐಎಂಡಿ ತಿಳಿಸಿದೆ. ಆದಾಗ್ಯೂ, ಮಾರ್ಚ್ ಕೊನೆಯ ವಾರದಲ್ಲಿ ಸಿಂಧೂ ಗಂಗಾ ಬಯಲು ಮತ್ತು ಪೂರ್ವ ಭಾರತದ ಕೆಲವು ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಬಹುದು ಎಂದು ಅದು ತಿಳಿಸಿದೆ.

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ (ಡಿಒಎ ಮತ್ತು ಎಫ್ ಡಬ್ಲ್ಯೂ) ಕಾರ್ಯದರ್ಶಿ, ಹಿಂಗಾರು ಬೆಳೆ ಸ್ಥಿತಿ ಸಾಮಾನ್ಯವಾಗಿದೆ ಮತ್ತು ಗೋಧಿಯ ಉತ್ಪಾದನೆಯು ಸುಮಾರು 112.18 ಮೆಟ್ರಿಕ್ ಟನ್ ಆಗುವ ನಿರೀಕ್ಷೆಯಿದೆ, ಇದು ಸಾರ್ವಕಾಲಿಕ ಗರಿಷ್ಠವಾಗಿದೆ ಎಂದು ಮಾಹಿತಿ ನೀಡಿದರು.  ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಗೋಧಿಯಲ್ಲಿನ ಟರ್ಮಿನಲ್ ಶಾಖದ ಒತ್ತಡವನ್ನು ಮೇಲ್ವಿಚಾರಣೆ ಮಾಡಲು ಮತ್ತು ಅದನ್ನು ತಗ್ಗಿಸಲು ಕೃಷಿ ಆಯುಕ್ತರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಅವರು ಮಾಹಿತಿ ನೀಡಿದರು. ಇದಲ್ಲದೆ, ಬೆಳೆ ಹವಾಮಾನ ಕಣ್ಗಾವಲು ಗುಂಪು (ಸಿಡಬ್ಲ್ಯೂಡಬ್ಲ್ಯೂಜಿ), ಅಂತರ ಸಚಿವಾಲಯದ ಸಮಿತಿಯು ಪ್ರತಿ ವಾರ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸುತ್ತದೆ ಎಂದು ಅವರು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜುಲೈ 2021ರಲ್ಲಿ ಬಿಡುಗಡೆ ಮಾಡಿದ ಶಾಖ ಸಂಬಂಧಿತ ಅನಾರೋಗ್ಯದ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್ಎಪಿ-ಎಚ್ಆರ್ಐ) ಬಿಸಿಗಾಳಿ, ಶಾಖ ಸಂಬಂಧಿತ ಕಾಯಿಲೆಗಳು ಮತ್ತು ಪ್ರಾಥಮಿಕದಿಂದ ತೃತೀಯ ಹಂತದವರೆಗೆ ಅವುಗಳ ನಿರ್ವಹಣೆಯ ಸವಾಲುಗಳನ್ನು ವಿವರಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಮಾಹಿತಿ ನೀಡಿದರು. ಅಗತ್ಯ ಔಷಧಿಗಳು, ರಕ್ತನಾಳ ದ್ರವಗಳು, ಐಸ್ ಪ್ಯಾಕ್ ಗಳು, ಒಆರ್ ಎಸ್ ಮತ್ತು ಕುಡಿಯುವ ನೀರಿನ ವಿಷಯದಲ್ಲಿ ಆರೋಗ್ಯ ಸೌಲಭ್ಯದ ಸನ್ನದ್ಧತೆಯನ್ನು ಪರಿಶೀಲಿಸುವಂತೆ ಅವರು ರಾಜ್ಯಗಳಿಗೆ ಸಲಹೆ ನೀಡಿದರು. ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಬೇಕಾದ ಅಗತ್ಯ ಐಇಸಿ / ಜಾಗೃತಿ ಸಾಮಗ್ರಿಗಳನ್ನು ಸಮಯೋಚಿತವಾಗಿ ಪ್ರಸಾರ ಮಾಡುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮಹಾನಿರ್ದೇಶಕರು (ಡಿಜಿ (ಎಫ್)) ಅರಣ್ಯ ಬೆಂಕಿ ನಿರ್ವಹಣೆಗೆ ಕ್ರಿಯಾ ಯೋಜನೆ ಮತ್ತು ಸನ್ನದ್ಧತೆಯನ್ನು ವಿವರಿಸಿದರು. ಇವುಗಳಲ್ಲಿ ಅಗ್ನಿಶಾಮಕಗಳು ಮತ್ತು ನೀರು ಕೊಯ್ಲು ರಚನೆಗಳ ರೂಪನೆ, ಸುಡುವಿಕೆಯನ್ನು ನಿಯಂತ್ರಿಸುವುದು ಮತ್ತು ರಾಜ್ಯ ಅರಣ್ಯ ಇಲಾಖೆಗಳಿಂದ ಹೆಚ್ಚಿನ ಬೆಂಕಿ ಪೀಡಿತ ಪ್ರದೇಶಗಳಲ್ಲಿ ಅಗ್ನಿಶಾಮಕ ವೀಕ್ಷಕರನ್ನು ನಿಯೋಜಿಸುವುದು ಸೇರಿವೆ. ಫಾರೆಸ್ಟ್ ಸರ್ವೇ ಆಫ್ ಇಂಡಿಯಾ (ಎಫ್ಎಸ್ಐ) ವ್ಯಾನ್ ಅಗ್ನಿ ಎಂಬ ಹೆಸರಿನ ಅರಣ್ಯ ಬೆಂಕಿ ಮುನ್ಸೂಚನಾ ವ್ಯವಸ್ಥೆಯ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಬೆಂಕಿ ಪೂರ್ವ ಮತ್ತು ನೈಜ ಸಮಯದ ಅರಣ್ಯ ಬೆಂಕಿ ಎಚ್ಚರಿಕೆಗಳನ್ನು ಒದಗಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.

ಗೃಹ ಕಾರ್ಯದರ್ಶಿಗಳು, ಎಂಎಚ್ಎ ಮತ್ತು ಎನ್ ಡಿ ಎಂಎ ಮಾಡಿದ ಪ್ರಯತ್ನಗಳನ್ನು ವಿವರಿಸಿದರು ಮತ್ತು ಶಾಖ ತರಂಗಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ರಾಷ್ಟ್ರೀಯ ಮಾರ್ಗಸೂಚಿಗಳನ್ನು 2016ರಲ್ಲಿ ಹೊರಡಿಸಲಾಗಿದ್ದು, ಅವುಗಳನ್ನು 2017 ಮತ್ತು 2019ರಲ್ಲಿ ಪರಿಷ್ಕರಿಸಲಾಗಿದೆ ಎಂಬ ಮಾಹಿತಿಯನ್ನು ಕೂಡಾ ನೀಡಿದರು. ಎಲ್ಲಾ ಹಂತಗಳಲ್ಲಿ ಶಾಖ ಕ್ರಿಯಾ ಯೋಜನೆಗಳನ್ನು (ಎಚ್ಎಪಿ) ಸಿದ್ಧಪಡಿಸಲು ಮತ್ತು ಕಾರ್ಯಗತಗೊಳಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಇದಲ್ಲದೆ, 2023ರ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಸಹ ಪ್ರಸಾರ ಮಾಡಲಾಗುವುದು. ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಎನ್ ಡಿ ಎಂ ಎ ಸಮುದಾಯ ಸಂವೇದನಾಶೀಲ ಪ್ರಯತ್ನವನ್ನು ಸಹ ಮುನ್ನಡೆಸಲಿದೆ.

ಮಾರ್ಚ್ 2023ರೊಳಗೆ ವಿದ್ಯುತ್ ಸ್ಥಾವರಗಳಲ್ಲಿನ ಎಲ್ಲಾ ನಿರ್ವಹಣಾ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಅಗತ್ಯವನ್ನು ಇಂಧನ ಸಚಿವಾಲಯದ ಕಾರ್ಯದರ್ಶಿ ಒತ್ತಿ ಹೇಳಿದರು. ಕ್ಯಾಪ್ಟಿವ್ ವಿದ್ಯುತ್ ಸ್ಥಾವರಗಳ ಮೂಲಕ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸುವಂತೆ ಅವರು ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಿಗೆ ಮನವಿ ಮಾಡಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕಾ ಇಲಾಖೆಗಳ ಕಾರ್ಯದರ್ಶಿಗಳು ಕುಡಿಯುವ ನೀರು, ನೀರಾವರಿ ಮತ್ತು ಮೇವಿಗೆ ಸಂಬಂಧಿಸಿದ ಸೂಚಿಸಿದ ಕ್ರಮಗಳ ಬಗ್ಗೆ ವಿವರಿಸಿದರು.

2023ರಲ್ಲಿ ಸಾಮಾನ್ಯ ಬೇಸಿಗೆಗಿಂತ ಹಚ್ಚಿನ ತಾಪಮಾನದ ನಿರೀಕ್ಷೆ ಇರುವುದರಿಂದ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಬಂಧಿತ ಸವಾಲುಗಳನ್ನು ಎದುರಿಸಲು ಸಾಕಷ್ಟು ಸಿದ್ಧರಾಗಿರಬೇಕು ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಸೂಚಿಸಿದರು. ಸೂಕ್ತ ಸನ್ನದ್ಧತೆಯ ಮಟ್ಟವನ್ನು ಖಚಿತಪಡಿಸಿಕೊಳ್ಳಲು ಮತ್ತು ಸಮಯೋಚಿತ ಉಪಶಮನ ಕ್ರಮಗಳನ್ನು ಜಾರಿಗೆ ತರಲು ಕೇಂದ್ರ ಸಚಿವಾಲಯಗಳು / ಇಲಾಖೆಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಕಟವಾಗಿ ತಮ್ಮನ್ನು ತೊಡಗಿಸಿಕೊಂಡಿವೆ ಎಂಬ ವಿವರಣೆಯನ್ನು ಅವರು ನೀಡಿದರು. ಸಂಬಂಧಿತ ಇಲಾಖಾ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಂಭವನೀಯ ಶಾಖ ತರಂಗದ ಸನ್ನದ್ಧತೆಯನ್ನು ಪರಿಶೀಲಿಸುವಂತೆ ಅವರು ಮುಖ್ಯ ಕಾರ್ಯದರ್ಶಿಗಳನ್ನು ವಿನಂತಿಸಿದರು. ಎಚ್ ಎಫ್ ಡಬ್ಲ್ಯೂ ಮತ್ತು ಎನ್ ಡಿ ಎಂ ಎ ಹೊರಡಿಸಿದ ಸಲಹೆಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಿ ವ್ಯಾಪಕವಾಗಿ ಪ್ರಸಾರ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಹ್ಯಾಂಡ್ ಪಂಪ್ ಗಳ ದುರಸ್ತಿ, ಅಗ್ನಿಶಾಮಕ ಪರಿಶೋಧನೆ ಮತ್ತು ಅಣಕು ಡ್ರಿಲ್ ಗಳಂತಹ ಮೂಲಭೂತ ಸಿದ್ಧತೆಗಳ ಮಹತ್ವವನ್ನು ಕ್ಯಾಬಿನೆಟ್ ಕಾರ್ಯದರ್ಶಿ ಒತ್ತಿ ಹೇಳಿದರು. ಕೇಂದ್ರ ಸಂಸ್ಥೆಗಳು ರಾಜ್ಯಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುವುದನ್ನು ಮುಂದುವರಿಸುತ್ತವೆ ಮತ್ತು ಅಗತ್ಯ ಸಹಾಯಕ್ಕಾಗಿ ಸದಾ ಲಭ್ಯವಿರುತ್ತವೆ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ರಾಜ್ಯಗಳಿಗೆ ಭರವಸೆ ನೀಡಿದರು.

****



(Release ID: 1906972) Visitor Counter : 236