ಪ್ರಧಾನ ಮಂತ್ರಿಯವರ ಕಛೇರಿ

"ಮಹಿಳೆಯರ ಆರ್ಥಿಕ ಸಬಲೀಕರಣ" ಕುರಿತ ಬಜೆಟ್ ನಂತರದ ವೆಬಿನಾರ್‌ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 10 MAR 2023 11:19AM by PIB Bengaluru

ನಮಸ್ಕಾರ್!

2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ಭಾರತ ಕಟ್ಟುವ ಗುರಿ ಈಡೇರಿಸುವ ನಿಟ್ಟಿನಲ್ಲಿ ಈ ವರ್ಷದ ಬಜೆಟ್ ಅನ್ನು ರಾಷ್ಟ್ರವು ನೋಡಿರುವುದು ನಮಗೆಲ್ಲರಿಗೂ ಬಹಳ ಸಂತೋಷದ ವಿಷಯವಾಗಿದೆ. ಭವಿಷ್ಯದ 'ಅಮೃತಕಾಲ'ದ ದೃಷ್ಟಿಯಿಂದ ಬಜೆಟ್ ನೋಡಲಾಗಿದೆ ಮತ್ತು ಪರಿಶೀಲಿಸಲಾಗಿದೆ. ದೇಶದ ನಾಗರಿಕರು ಮುಂದಿನ 25 ವರ್ಷಗಳನ್ನು ಸ್ಫಟಿಕದ ಮೂಲಕ ಈ ಗುರಿಗಳನ್ನು ನೋಡುತ್ತಿರುವುದು ದೇಶಕ್ಕೆ ಶುಭ ಸಂಕೇತವಾಗಿದೆ.

ಸ್ನೇಹಿತರೆ,

ಕಳೆದ 9 ವರ್ಷಗಳಲ್ಲಿ ದೇಶವು ಮಹಿಳಾ ನೇತೃತ್ವದ ಅಭಿವೃದ್ಧಿಯ ದೃಷ್ಟಿಯಲ್ಲಿ ಮುನ್ನಡೆದಿದೆ. ತನ್ನ ಹಿಂದಿನ ವರ್ಷಗಳ ಅನುಭವವನ್ನು ನೋಡಿದರೆ, ಭಾರತವು ಜಾಗತಿಕ ರಂಗದಲ್ಲಿ 'ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿ'ಯ ಪ್ರಯತ್ನಗಳನ್ನು ಮುಂದುವರಿಸಲು ಪ್ರಯತ್ನಿಸಿದೆ. ಈ ಬಾರಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಈ ವಿಷಯವು ಪ್ರಮುಖವಾಗಿ ಕಾಣಿಸಿಕೊಂಡಿದೆ. ಮಹಿಳಾ ನೇತೃತ್ವದ ಅಭಿವೃದ್ಧಿಯ ಈ ಪ್ರಯತ್ನಗಳಿಗೆ ಈ ವರ್ಷದ ಬಜೆಟ್ ಹೊಸ ಉತ್ತೇಜನ ನೀಡುತ್ತಿದೆ. ನೀವೆಲ್ಲರೂ ಅದರಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದೀರಿ. ಈ ಬಜೆಟ್ ವೆಬಿನಾರ್‌ಗೆ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಸ್ನೇಹಿತರೆ,

ಮಹಿಳೆಯರಲ್ಲಿರುವ ಗಾಢ ನಂಬಿಕೆ ಅಥನಾ ಮನೋನಿಶ್ಚಯವೇ ಅವರ ಇಚ್ಛಾಶಕ್ತಿಯಾಗಿದೆ. ಅವರ ಕಲ್ಪನಾ ಶಕ್ತಿ, ಅವರು ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ನಿಖರ ಗುರಿಗಳನ್ನು ಸಾಧಿಸುವ ಅವರ ಪರಿಶ್ರಮ, ಅವರ ಕಠಿಣ ಪರಿಶ್ರಮದ ಫಲಿತಾಂಶಗಳು ಮಹಿಳಾ ಶಕ್ತಿಯ ನೈಜ ಗುರುತು ಮತ್ತು ಪ್ರತಿಬಿಂಬವಾಗಿದೆ. ನಾವು ಮಹಿಳಾ ನೇತೃತ್ವದ ಅಭಿವೃದ್ಧಿ ಎಂದು ಹೇಳಿದಾಗ, ಅದರ ಅಡಿಪಾಯವೇ ಈ ಶಕ್ತಿಗಳಾಗಿವೆ. ಭಾರತ ಮಾತೆಯ ಉಜ್ವಲ ಭವಿಷ್ಯ ಖಾತ್ರಿಪಡಿಸುವಲ್ಲಿ ಮಹಿಳೆಯರ ಈ ಶಕ್ತಿಯು ದೇಶದ ಅತ್ಯಮೂಲ್ಯ ಶಕ್ತಿಯಾಗಿದೆ. ಈ ಶತಮಾನದಲ್ಲಿ ಭಾರತದ ಪ್ರಮಾಣ ಮತ್ತು ವೇಗ ಹೆಚ್ಚಿಸುವಲ್ಲಿ ಈ ಶಕ್ತಿಯ ಗುಂಪು ಬೃಹತ್ ಪಾತ್ರ ವಹಿಸುತ್ತಿದೆ.

ಸ್ನೇಹಿತರೆ,

ಇಂದು ನಾವು ಭಾರತದ ಸಾಮಾಜಿಕ ಜೀವನದಲ್ಲಿ ಒಂದು ದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನು ನೋಡುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡಿದ ವಿಧಾನಗಳ ಫಲಿತಾಂಶಗಳು ಇದೀಗ ಗೋಚರಿಸುತ್ತಿವೆ. ಇಂದು ನಾವು ಭಾರತದಲ್ಲೂ ಅದನ್ನೇ ನೋಡುತ್ತಿದ್ದೇವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 9-10 ವರ್ಷಗಳಲ್ಲಿ ಪ್ರೌಢಶಾಲೆ ಅಥವಾ ನಂತರದ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ರಂಗದಲ್ಲಿ ಹೆಣ್ಣು ಮಕ್ಕಳ ದಾಖಲಾತಿ 43% ತಲುಪಿದೆ. ಇದು ಈಗ ಅಮೆರಿಕ, ಯುಕೆ ಅಥವಾ ಜರ್ಮನಿಯ ಎಲ್ಲಾ ಶ್ರೀಮಂತ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ. ಅದೇ ರೀತಿ, ವೈದ್ಯಕೀಯ ಕ್ಷೇತ್ರವಾಗಲಿ, ಕ್ರೀಡಾ ಕ್ಷೇತ್ರವಾಗಲಿ, ವ್ಯಾಪಾರ ಅಥವಾ ರಾಜಕೀಯ ಚಟುವಟಿಕೆಯಾಗಲಿ, ಭಾರತದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿರುವುದು ಮಾತ್ರವಲ್ಲದೆ, ಪ್ರತಿಯೊಂದು ಕ್ಷೇತ್ರದಲ್ಲೂ ಅವರು ಮುಂಚೂಣಿಯಿಂದ ಮುನ್ನಡೆಯುತ್ತಿದ್ದಾರೆ. ಇಂದು ಭಾರತದಲ್ಲಿ ಮಹಿಳಾ ಶಕ್ತಿ ಸಾಮರ್ಥ್ಯ ಗೋಚರಿಸುವ ಅನೇಕ ಕ್ಷೇತ್ರಗಳಿವೆ. ಮುದ್ರಾ ಸಾಲ ನೀಡಿದ ಕೋಟ್ಯಂತರ ಜನರ ಪೈಕಿ ಶೇ.70ರಷ್ಟು ಫಲಾನುಭವಿಗಳು ದೇಶದ ಮಹಿಳೆಯರೇ ಆಗಿದ್ದಾರೆ. ಈ ಕೋಟಿಗಟ್ಟಲೆ ಮಹಿಳೆಯರು ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಆರ್ಥಿಕತೆಯ ಹೊಸ ಆಯಾಮಗಳನ್ನು ತೆರೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಮೂಲಕ ಖಾತರಿ ರಹಿತ ಆರ್ಥಿಕ ನೆರವು, ಪಶುಸಂಗೋಪನೆ, ಮೀನುಗಾರಿಕೆಗೆ ಉತ್ತೇಜನ, ಗ್ರಾಮೋದ್ಯೋಗ ಉತ್ತೇಜನ, ಎಫ್‌ಪಿಒಗಳು, ಕ್ರೀಡೆಗಳಂತಹ ವಿವಿಧ ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ. ಇದರ ಗರಿಷ್ಠ ಪ್ರಯೋಜನಗಳನ್ನು ಮಹಿಳೆಯರು ಪಡೆಯುತ್ತಿದ್ದಾರೆ, ಉತ್ತಮ ಫಲಿತಾಂಶಗಳು ಮಹಿಳೆಯರಿಂದಲೇ ಬರುತ್ತಿವೆ. ದೇಶದ ಅರ್ಧದಷ್ಟು ಜನಸಂಖ್ಯೆಯ ನೆರವಿನಿಂದ ನಾವು ದೇಶವನ್ನು ಹೇಗೆ ಪ್ರಗತಿಯತ್ತ ಕೊಂಡೊಯ್ಯಬಹುದು ಮತ್ತು ಮಹಿಳಾ ಶಕ್ತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ಇದು ಪ್ರತಿಬಿಂಬವಾಗಿದೆ. ಈ ವರ್ಷದ ಬಜೆಟ್ ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ ಮಹಿಳೆಯರಿಗೆ 7.5% ಬಡ್ಡಿದರ ನೀಡಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸುಮಾರು 80 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಈ ಮೊತ್ತವನ್ನು ದೇಶದ ಲಕ್ಷಾಂತರ ಮಹಿಳೆಯರಿಗೆ ಮನೆ ನಿರ್ಮಿಸಲು ಬಳಸಲಾಗುತ್ತದೆ. ಭಾರತದಲ್ಲಿ ಹಿಂದಿನ ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ನಿರ್ಮಿಸಲಾದ 3 ಕೋಟಿಗಿಂತ ಹೆಚ್ಚಿನ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಹೆಸರಿನಲ್ಲಿವೆ. ಹೆಂಗಸರು ತಮ್ಮ ಹೆಸರಿನಲ್ಲಿ ಹೊಲ, ಗದ್ದೆ, ಅಂಗಡಿ ಅಥವಾ ಮನೆಗಳನ್ನು ಹೊಂದಿರದ ಕಾಲವೂ ಇತ್ತು ಎಂಬುದನ್ನು ನೀವೆಲ್ಲಾ ಊಹಿಸಬಹುದು. ಆದರೆ ಇಂದು ಈ ವ್ಯವಸ್ಥೆಯಿಂದ ಅವರಿಗೆ ಅಂತಹ ದೊಡ್ಡ ಬೆಂಬಲ ಸಿಕ್ಕಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರಿಗೆ ಹೊಸ ಧ್ವನಿಯನ್ನು ನೀಡಿದೆ.

ಸ್ನೇಹಿತರೆ,

ಈಗ ನಾವು ಸ್ಟಾರ್ಟಪ್‌ಗಳ ಕ್ಷೇತ್ರದಲ್ಲಿ 'ಯೂನಿಕಾರ್ನ್'ಗಳ ಬಗ್ಗೆ ಕೇಳುತ್ತಿದ್ದೇವ. ಅದರ ಜತೆಗೆ, ಸ್ವಸಹಾಯ ಗುಂಪುಗಳಲ್ಲೂ ಯುನಿಕಾರ್ನ್‌ಗಳನ್ನು ರಚಿಸುವುದು ಸಾಧ್ಯವೇ? ಆ ಕನಸನ್ನು ನನಸು ಮಾಡಲು ಪೂರಕ ಘೋಷಣೆಯೊಂದಿಗೆ ಈ ಬಜೆಟ್ ತರಲಾಗಿದೆ. ಕಳೆದ ವರ್ಷಗಳ ಬೆಳವಣಿಗೆಯ ಕಥೆಯಿಂದ ದೇಶದ ಈ ದೃಷ್ಟಿಯ ವ್ಯಾಪ್ತಿಯನ್ನು ನೀವು ನೋಡಬಹುದು. ಇಂದು ದೇಶದ 5 ಕೃಷಿಯೇತರ ವ್ಯವಹಾರಗಳಲ್ಲಿ ಒಂದನ್ನು ಮಹಿಳೆ ನಿರ್ವಹಿಸುತ್ತಿದ್ದಾರೆ. ಕಳೆದ 9 ವರ್ಷಗಳಲ್ಲಿ 7 ಕೋಟಿಗೂ ಹೆಚ್ಚು ಮಹಿಳೆಯರು ಸ್ವಸಹಾಯ ಗುಂಪುಗಳಿಗೆ ಸೇರಿದ್ದಾರೆ, ಅವರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕೋಟಿಗಟ್ಟಲೆ ಮಹಿಳೆಯರು ಎಷ್ಟು ಮೌಲ್ಯವನ್ನು ಸೃಷ್ಟಿಸುತ್ತಿದ್ದಾರೆ ನೋಡಿ! ನೀವು ಅವರ ಬಂಡವಾಳದ ಅಗತ್ಯದಿಂದ ಅದನ್ನು ಅಂದಾಜು ಮಾಡಬಹುದು. 9 ವರ್ಷಗಳಲ್ಲಿ ಈ ಸ್ವಸಹಾಯ ಗುಂಪುಗಳು 6.25 ಲಕ್ಷ ಕೋಟಿ ರೂ. ಸಾಲ ಪಡೆದಿವೆ. ಈ ಮಹಿಳೆಯರು ಕೇವಲ ಸಣ್ಣ ಉದ್ಯಮಿಗಳಲ್ಲ, ಆದರೆ ಅವರು ಈ ಫವತ್ತಾದ ನೆಲದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಬ್ಯಾಂಕ್ ಸಖಿ, ಕೃಷಿ ಸಖಿ, ಪಶು ಸಖಿ ರೂಪದಲ್ಲಿ ಈ ಮಹಿಳೆಯರು ಗ್ರಾಮಗಳಲ್ಲಿ ಅಭಿವೃದ್ಧಿಯ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿದ್ದಾರೆ.

ಸ್ನೇಹಿತರೆ,

ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರು ಯಾವಾಗಲೂ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇಂದು ಸಹಕಾರಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಿವಿಧೋದ್ದೇಶ ಸಹಕಾರ ಸಂಘಗಳು, ಡೇರಿ ಸಹಕಾರ ಸಂಘಗಳು ಮತ್ತು ಮೀನುಗಾರಿಕಾ ಸಹಕಾರ ಸಂಘಗಳು ರಚನೆಯಾಗಲಿವೆ. 1 ಕೋಟಿ ರೈತರಿಗೆ ಸಾವಯವ ಕೃಷಿಯೊಂದಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ರೈತ ಮಹಿಳೆಯರು ಮತ್ತು ಉತ್ಪಾದಕ ಗುಂಪುಗಳು ಅದರಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಪ್ರಸ್ತುತ ದೇಶದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ, ಸಿರಿಧಾನ್ಯಗಳ ಬಗ್ಗೆ ಜಾಗೃತಿ ಬೆಳೆಯುತ್ತಿದೆ, ಅಂದರೆ ಶ್ರೀ ಅನ್ನ. ಅವರ ಬೇಡಿಕೆ ಹೆಚ್ಚುತ್ತಿದೆ. ಭಾರತಕ್ಕೆ ಇದೊಂದು ದೊಡ್ಡ ಅವಕಾಶವಾಗಲಿದೆ. ಇದರಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಪಾತ್ರವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನೀವು ಕೆಲಸ ಮಾಡಬೇಕಾಗಿದೆ. ನೀವು ಇನ್ನೂ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ನಮ್ಮ ದೇಶದಲ್ಲಿ 1 ಕೋಟಿ ಬುಡಕಟ್ಟು ಮಹಿಳೆಯರು ಸ್ವ-ಸಹಾಯ ಗುಂಪುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬುಡಕಟ್ಟು ಪ್ರದೇಶಗಳಲ್ಲಿ ಬೆಳೆಯುವ 'ಶ್ರೀ ಅನ್ನ'ದ ಸಾಂಪ್ರದಾಯಿಕ ಅನುಭವವನ್ನು ಅವರು ಹೊಂದಿದ್ದಾರೆ. ‘ಶ್ರೀ ಅನ್ನ’ ಹಾಗೂ ಅದರಿಂದ ತಯಾರಿಸಿದ ಸಂಸ್ಕರಿತ ಆಹಾರಗಳ ಮಾರುಕಟ್ಟೆಗೆ ಸಂಬಂಧಿಸಿದ ಅವಕಾಶಗಳನ್ನು ನಾವು ಬಳಸಿಕೊಳ್ಳಬೇಕು. ಹಲವೆಡೆ ಸರ್ಕಾರಿ ಸಂಸ್ಥೆಗಳು ಕಿರು ಅರಣ್ಯ ಉತ್ಪನ್ನವನ್ನು ಸಂಸ್ಕರಿಸಿ ಮಾರುಕಟ್ಟೆಗೆ ತರಲು ಸಹಾಯ ಮಾಡುತ್ತಿವೆ. ಇಂದು ಇಂತಹ ಹಲವಾರು ಸ್ವ-ಸಹಾಯ ಗುಂಪುಗಳನ್ನು ದೂರದ ಪ್ರದೇಶಗಳಲ್ಲಿ ರಚಿಸಲಾಗಿದೆ. ನಾವು ಅದನ್ನು ವಿಶಾಲ ಮಟ್ಟಕ್ಕೆ ಕೊಂಡೊಯ್ಯಬೇಕು.

ಸ್ನೇಹಿತರೆ,

ಈ ಎಲ್ಲಾ ಪ್ರಯತ್ನಗಳಲ್ಲಿ ಯುವಕರು ಮತ್ತು ಹೆಣ್ಣು ಮಕ್ಕಳ ಕೌಶಲ್ಯ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವಕರ್ಮ ಯೋಜನೆಯು ಪ್ರಬಲ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ. ವಿಶ್ವಕರ್ಮ ಯೋಜನೆಯಲ್ಲಿ ಮಹಿಳೆಯರಿಗೆ ಇರುವ ವಿಶೇಷ ಅವಕಾಶಗಳನ್ನು ಗುರುತಿಸಿ ಮುಂದೆ ಕೊಂಡೊಯ್ಯಬೇಕು. ಜಿಇಎಂ ಪೋರ್ಟಲ್ ಮತ್ತು ಇ-ಕಾಮರ್ಸ್ ಕೂಡ ಮಹಿಳೆಯರ ವ್ಯಾಪಾರ ವಿಸ್ತರಿಸುವ ಪ್ರಮುಖ ಮಾಧ್ಯಮವಾಗುತ್ತಿದೆ. ಇಂದು ಪ್ರತಿಯೊಂದು ಕ್ಷೇತ್ರವೂ ಹೊಸ ತಂತ್ರಜ್ಞಾನಗಳ ಲಾಭ ಪಡೆಯುತ್ತಿದೆ. ಸ್ವ-ಸಹಾಯ ಗುಂಪುಗಳಿಗೆ ನೀಡುವ ತರಬೇತಿಯಲ್ಲಿ ನಾವು ಹೊಸ ತಂತ್ರಜ್ಞಾನಗಳ ಬಳಕೆಗೆ ಒತ್ತು ನೀಡಬೇಕು.

ಸ್ನೇಹಿತರೆ,

ಇಂದು ದೇಶವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್' ಎಂಬ ಮನೋಭಾವದಿಂದ ಮುನ್ನಡೆಯುತ್ತಿದೆ. ನಮ್ಮ ಹೆಣ್ಣು ಮಕ್ಕಳು ಸೈನ್ಯಕ್ಕೆ ಸೇರಿ, ರಫೇಲ್ ಹಾರಿಸಿ ದೇಶ ರಕ್ಷಿಸುತ್ತಿರುವುದನ್ನು ನೋಡಿದರೆ, ಅವರ ಬಗೆಗಿನ ದೃಷ್ಟಿಕೋನವೂ ಬದಲಾಗುತ್ತದೆ. ಮಹಿಳೆಯರು ಉದ್ಯಮಿಗಳಾದಾಗ, ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಎದುರಾಗುವ ಅಪಾಯಗಳನ್ನು ಸಹ ಸ್ವೀಕರಿಸುತ್ತಾರೆ. ನಂತರ ಅವರ ದೃಷ್ಟಿಕೋನವೇ ಬದಲಾಗುತ್ತದೆ. ಕೆಲವು ದಿನಗಳ ಹಿಂದಷ್ಟೇ ನಾಗಾಲ್ಯಾಂಡ್ ನಲ್ಲಿ ಪ್ರಥಮ ಬಾರಿಗೆ ಇಬ್ಬರು ಮಹಿಳೆಯರು ಶಾಸಕರಾಗಿದ್ದಾರೆ. ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನವೂ ಸಿಕ್ಕಿದೆ. ಮಹಿಳೆಯರ ಮೇಲಿನ ಗೌರವ ಹೆಚ್ಚಿಸುವ ಮೂಲಕ ಮತ್ತು ಸಮಾನತೆಯ ಮನೋಭಾವ ಹೆಚ್ಚಿಸುವ ಮೂಲಕ ಮಾತ್ರ ಭಾರತವು ವೇಗವಾಗಿ ಮುನ್ನಡೆಯಬಹುದು. ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ಮಹಿಳೆಯರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಮುಂದೆ ಇರುವ ಪ್ರತಿಯೊಂದು ಅಡೆತಡೆಗಳನ್ನು ನಿವಾರಿಸುವ ಸಂಕಲ್ಪದೊಂದಿಗೆ ನೀವೆಲ್ಲರೂ ಮುನ್ನಡೆಯಬೇಕು.

ಸ್ನೇಹಿತರೆ,

ಮಾರ್ಚ್ 8ರಂದು ನಾವು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಿದ್ದೇವೆ. ರಾಷ್ಟ್ರಪತಿ  ದ್ರೌಪದಿ ಮುರ್ಮು ಜಿ ಅವರು ಮಹಿಳಾ ಸಬಲೀಕರಣದ ಬಗ್ಗೆ ಬಹಳ ಭಾವೋದ್ರಿಕ್ತ ಲೇಖನ ಬರೆದಿದ್ದಾರೆ. ರಾಷ್ಟ್ರಪತಿ ಮುರ್ಮು ಜಿ ಅವರು ಈ ಲೇಖನವನ್ನು ಯಾವ ಮನೋಭಾವದಿಂದ ಬರೆದಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ನಾನು ಈ ಲೇಖನದಿಂದ ಅವರನ್ನು ಉಲ್ಲೇಖಿಸುತ್ತಿದ್ದೇನೆ. ಅವರು ಹೀಗೆ ಹೇಳಿದ್ದಾರೆ - "ದೇಶದ ಈ ಪ್ರಗತಿಯನ್ನು ವೇಗಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ, ಬದಲಿಗೆ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ." ಆದ್ದರಿಂದ ಇಂದು ನಾನು ನಿಮ್ಮ ಕುಟುಂಬ, ನೆರೆಹೊರೆ ಅಥವಾ ಕೆಲಸದ ಸ್ಥಳದಲ್ಲಿ ಬದಲಾವಣೆ ಮಾಡಲು ನಿಮ್ಮನ್ನು ಸಮರ್ಪಿಸಿಕೊಳ್ಳುವಂತೆ ಪ್ರತಿಯೊಬ್ಬರನ್ನು ಒತ್ತಾಯಿಸಲು ಬಯಸುತ್ತೇನೆ. ಮಗಳ ಮುಖದಲ್ಲಿ ಮಂದಹಾಸ ಮೂಡಿಸುವ ಯಾವುದೇ ಬದಲಾವಣೆ, ಜೀವನದಲ್ಲಿ ಮುಂದೆ ಬರುವ ಅವಕಾಶಗಳನ್ನು ಹೆಚ್ಚಿಸುವ ಯಾವುದೇ ಬದಲಾವಣೆ. ನಿಮ್ಮಲ್ಲಿ ನನ್ನ ಈ ವಿನಂತಿಯು ನನ್ನ ಹೃದಯದಾಳದಿಂದ ಹೊರಬಂದಿದೆ". ರಾಷ್ಟ್ರಪತಿ ಅವರ ಈ ಮಾತುಗಳೊಂದಿಗೆ ನನ್ನ ಭಾಷಣ ಮುಗಿಸುತ್ತೇನೆ. ನಾನು ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ. ತುಂಬು ಧನ್ಯವಾದಗಳು!

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

****



(Release ID: 1906285) Visitor Counter : 739