ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ಮೆಗಾ ವಾಕಥಾನ್ ಕಾರ್ಯಕ್ರಮ  "ವಾಕ್ ಫಾರ್ ಹೆಲ್ತ್" ಆಯೋಜಿಸಿದ ಕೇಂದ್ರ ಆರೋಗ್ಯ ಸಚಿವಾಲಯ


ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ 'ಆರೋಗ್ಯಕರ ಮಹಿಳೆಯರು ಆರೋಗ್ಯಕರ ಭಾರತ' ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಸೈಕ್ಲಾಥಾನ್ ಅನ್ನು ಆಯೋಜಿಸಲಾಗುತ್ತಿದೆ 

ದೈಹಿಕ ಚಟುವಟಿಕೆಯಿಂದಾಗುವ ಆರೋಗ್ಯ ಪ್ರಯೋಜನಗಳು ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ಅಪಾಯವನ್ನು ಕಡಿಮೆ ಮಾಡುವುದಕ್ಕಷ್ಟೇ ಸೀಮಿತವಾಗದೆ, ಮಾನಸಿಕ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ

ಆರೋಗ್ಯಕರ ಜೀವನದ ಬಗ್ಗೆ ಜಾಗೃತಿಯನ್ನು ಉತ್ತೇಜಿಸುವ ಮತ್ತು ಹೆಚ್ಚಿಸುವ ಗುರಿಯೊಂದಿಗೆ ಆರಂಭಿಸಲಾಗಿರುವ ಒಂದು ವರ್ಷದ ಅಭಿಯಾನ "ಸ್ವಸ್ಥ ಮನ್, ಸ್ವಸ್ಥ ಘರ್"ನ ಭಾಗವಾಗಿ ಈ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ

Posted On: 05 MAR 2023 9:47AM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು `ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ಅಂಗವಾಗಿ ನವದೆಹಲಿಯಲ್ಲಿ "ವಾಕ್ ಫಾರ್ ಹೆಲ್ತ್" ಮೆಗಾ ವಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಿತು. ದೊಡ್ಡ ಸಂಖ್ಯೆಯಲ್ಲಿ ಜನರು ಇದರಲ್ಲಿ ಪಾಲ್ಗೊಂಡರು ಮತ್ತು ಉತ್ತಮ ಆರೋಗ್ಯಕ್ಕಾಗಿ ಉತ್ಸಾಹಭರಿತವಾಗಿ ಹೆಜ್ಜೆ ಹಾಕಿದರು. ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಇಂತಹ ರ್ಯಾಲಿಗಳನ್ನು ರ್‍ಯಾಲಿಗಳನ್ನು ಆಯೋಜಿಸಲಾಗುತ್ತಿದೆ.

ಸದೃಢ ಭಾರತಕ್ಕಾಗಿ ಗೌರವಾನ್ವಿತ ಪ್ರಧಾನ ಮಂತ್ರಿಯವರ ಆಶದಂತೆ,  ನಾಗರಿಕರ  ನಡವಳಿಕೆಯಲ್ಲಿ ಬದಲಾವಣೆಗಳನ್ನು ತರುವ ಮತ್ತು ಹೆಚ್ಚು ದೈಹಿಕವಾಗಿ ಸಕ್ರಿಯ ಜೀವನಶೈಲಿಯ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವ ಗುರಿಯೊಂದಿಗೆ ವಾಕಥಾನ್ ಮತ್ತು ಅಂತಹುದೇ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸೈಕ್ಲಿಂಗ್ ಮೇಲಿನ ಉತ್ಸಾಹಕ್ಕಾಗಿ "ಹಸಿರು ಸಂಸದ" ಎಂದೇ ಕರೆಯಲ್ಪಡುವ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ದೈಹಿಕ ಚಟುವಟಿಕೆ ರೂಢಿಸಿಕೊಳ್ಳುವಂತೆ ಉತ್ತೇಜಿಸುವಲ್ಲಿ ಮಾದರಿಯಾಗಿದ್ದಾರೆ. ಸಾಂಕ್ರಾಮಿಕವಲ್ಲದ ರೋಗಗಳು (ಎನ್‌ಸಿಡಿ) ದೇಶದಲ್ಲಿ ಶೇ. 63ಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಗಿವೆ.  ತಂಬಾಕು ಬಳಕೆ (ಧೂಮಪಾನ ಮತ್ತು ಹೊಗೆರಹಿತ ರೀತಿಯಲ್ಲಿ), ಆಲ್ಕೋಹಾಲ್ ಬಳಕೆ, ಕಳಪೆ ಆಹಾರ ಪದ್ಧತಿ, ಅಸಮರ್ಪಕ ದೈಹಿಕ ಚಟುವಟಿಕೆ ಮತ್ತು ವಾಯುಮಾಲಿನ್ಯದಂತಹ ಪ್ರಮುಖ ನಡವಳಿಕೆ ಸಂಬಂಧಿತ ಅಪಾಯಗಳೊಂದಿಗೆ ಈ ಸಾವುಗಳು ಬಲವಾದ ಸಂಬಂಧ ಹೊಂದಿವೆ ಎಂದು ತಿಳಿದುಬಂದಿದೆ.  

ಸಾಂಕ್ರಾಮಿಕವಲ್ಲದ ರೋಗಗಳ ಬೆಳವಣಿಗೆಗೆ ಕಾರಣವಾಗುವ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ದೈಹಿಕ ನಿಷ್ಕ್ರಿಯತೆಯು ಒಂದೆನಿಸಿದೆ. ʻರಾಷ್ಟ್ರೀಯ ಎನ್‌ಸಿಡಿ ಮಾನಿಟರಿಂಗ್ ಸಮೀಕ್ಷೆʼ(ಎನ್ಎನ್ಎಂಎಸ್) (2017-18) ಪ್ರಕಾರ, 41.3% ಭಾರತೀಯರು ದೈಹಿಕವಾಗಿ ನಿಷ್ಕ್ರಿಯರಾಗಿದ್ದಾರೆ. ದೈಹಿಕ ಚಟುವಟಿಕೆಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳಲ್ಲಿ ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಇತ್ಯಾದಿಗಳ ಅಪಾಯದ ಸಂಭವನೀಯತೆ ಕಡಿಮೆಯಾಗುವುದೂ ಸೇರಿದೆ. ಜೊತೆಗೆ, ದೈಹಿಕ ಚಟುವಟಿಕೆಯು ಮಾನಸಿಕ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.  ಬುದ್ಧಿಮಾಂದ್ಯತೆಯ ಆರಂಭವನ್ನು ವಿಳಂಬಗೊಳಿಸುತ್ತದೆ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತದೆ.

ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಮತ್ತು ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು 2023ರ ಮಾರ್ಚ್ 5ರಂದು ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಸೈಕ್ಲಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 'ಆರೋಗ್ಯಕರ ಮಹಿಳೆಯರು ಆರೋಗ್ಯಕರ ಭಾರತ' ಎಂಬ ವಿಷಯಾಧಾರಿತವಾಗಿ ಸೈಕ್ಲಾಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸೈಕ್ಲಾಥಾನ್‌ನಲ್ಲಿ ಭಾಗವಹಿಸುವಂತೆ ಸಾಮಾನ್ಯ ಜನರನ್ನು ಆಕರ್ಷಿಸಲು ಜಿಲ್ಲಾ ಆರೋಗ್ಯ ಪ್ರಾಧಿಕಾರವು ಸಕಲ ವ್ಯವಸ್ಥೆಗಳನ್ನು ಮಾಡಿದೆ. ಈ ಕಾರ್ಯಕ್ರಮದ ಧ್ಯೇಯವಾಕ್ಯವೇ ಹೇಳುವಂತೆ, ಮಹಿಳೆಯರ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ. ಆರೋಗ್ಯವಂತ ಮಹಿಳೆಯರು ತಮ್ಮ ಕುಟುಂಬಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ಕೊಡುಗೆ ನೀಡುತ್ತಾರೆ ಮತ್ತು ಅಂತಿಮವಾಗಿ ಭಾರತವನ್ನು ಆರೋಗ್ಯಕರ ರಾಷ್ಟ್ರವನ್ನಾಗಿ ಮಾಡುತ್ತಾರೆ.

ಜಿಲ್ಲಾ ಕೇಂದ್ರದಲ್ಲಿ ಸೈಕ್ಲಿಂಗ್ ಕಾರ್ಯಕ್ರಮಕ್ಕೆ ಪೂರಕವಾಗಿ, ದೈಹಿಕ ಸಾಮರ್ಥ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ದೆಹಲಿಯಲ್ಲಿ "ವಾಕ್ ಫಾರ್ ಹೆಲ್ತ್" ಎಂಬ ಮತ್ತೊಂದು ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು. ʻವಿಜಯ್ ಚೌಕ್ʼನಿಂದ ಕರ್ಥವ್ಯ ಪಥದ ಮೂಲಕ ರಂಭವಾದ ಈ ವಾಕಥಾನ್‌, ಇಂಡಿಯಾ ಗೇಟ್ ಮೂಲಕ ನಿರ್ಮಾಣ ಭವನವದವರೆಗೂ ಸಾಗಿತು. 

ಇದಕ್ಕೂ ಮೊದಲು, 2023ರ ಫೆಬ್ರವರಿ ತಿಂಗಳಲ್ಲಿ, 'ಸ್ವಾತಂತ್ರ್ಯದ ಅಮೃತ ಮಹೋತ್ಸವʼದ ಸ್ಮರಣಾರ್ಥ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ 1.5 ಲಕ್ಷ ʻಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರʼಗಳಲ್ಲಿ (ಎಬಿ-ಎಚ್‌ಬ್ಲ್ಯೂಸಿ) ಇದೇ ರೀತಿಯ ಸೈಕ್ಲಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಜಂಟಿ ಕಾರ್ಯದರ್ಶಿ ಶ್ರೀ ವಿಶಾಲ್ ಚೌಹಾಣ್, ಸಚಿವಾಲಯದ ಹಿರಿಯ ಅಧಿಕಾರಿಗಳು, ಕೇಂದ್ರ ಸರಕಾರಿ ಆಸ್ಪತ್ರೆಗಳಾದ ಸಫ್ದರ್ಜಂಗ್ ಆಸ್ಪತ್ರೆ, ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆ ಮತ್ತು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ವೈದ್ಯರು, ದಾದಿಯರು ಮತ್ತು ಸಿಬ್ಬಂದಿ ಸಹ ವಾಕಥಾನ್ ನಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅಧಿಕ ರಕ್ತದೊತ್ತಡ, ಮಧುಮೇಹ, ಮಾನಸಿಕ ಕಾಯಿಲೆ ಮತ್ತು ಕ್ಯಾನ್ಸರ್ ನಂತಹ ಜೀವನಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆಗಳು/ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಆರೋಗ್ಯಕರ ಹಾಗೂ ಸಕ್ರಿಯ ಜೀವನವನ್ನು ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನು ಕೈಗೊಂಡರು. 


**



(Release ID: 1904422) Visitor Counter : 152