ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಪಂಜಾಬ್ ನ ಐಐಟಿ ರೋಪರ್ ನಿಂದ ದೇಶಾದ್ಯಂತ ಯುವ ಉತ್ಸವಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ 


ನಾವು ವಿಶ್ವದ ಅತಿದೊಡ್ಡ ಯುವ ಶಕ್ತಿಯಾಗಿದ್ದೇವೆ ಮತ್ತು ನಮ್ಮ ಅಪಾರ ಸಾಮರ್ಥ್ಯವನ್ನು ಸಾಧಿಸಲು ನಾವು ಶ್ರಮಿಸಬೇಕಾಗಿದೆ: ಶ್ರೀ ಅನುರಾಗ್ ಠಾಕೂರ್

ಇಂದು ದೇಶದ 12 ತಾಣಗಳಲ್ಲಿ ಸಹ ಯುವ ಉತ್ಸವ ಆಯೋಜನೆ

 2023ರ ಮಾರ್ಚ್ 31ರ ಹೊತ್ತಿಗೆ ಮೊದಲ ಹಂತದಲ್ಲಿ ದೇಶದ 150 ಜಿಲ್ಲೆಗಳಲ್ಲಿ ಯುವ ಉತ್ಸವವನ್ನು ಆಯೋಜಿಸಲಾಗುತ್ತದೆ

Posted On: 04 MAR 2023 1:28PM by PIB Bengaluru

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದು ಪಂಜಾಬಿನ ಐಐಟಿ ರೋಪರ್ ನಿಂದ ಅಖಿಲ ಭಾರತ ಯುವ ಉತ್ಸವ - India@2047 ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಅನುರಾಗ್ ಠಾಕೂರ್ ಅವರು ಯುವ ಉತ್ಸವದ ಡ್ಯಾಶ್ ಬೋರ್ಡ್ ಅನ್ನೂ ಉದ್ಘಾಟಿಸಿದರು.

ಪ್ರತಾಪಗಢ (ಉತ್ತರ ಪ್ರದೇಶ), ಹರಿದ್ವಾರ (ಉತ್ತರಾಖಂಡ), ಧಾರ್ ಮತ್ತು ಹೊಸಂಗಾಬಾದ್ (ಮಧ್ಯಪ್ರದೇಶ), ಹನುಮಾನಾಗಢ (ರಾಜಸ್ಥಾನ), ಸರೈಕೆಲಾ (ಜಾರ್ಖಂಡ್), ಕಪುರ್ತಲಾ (ಪಂಜಾಬ್), ಜಲ್ಗಾಂವ್ (ಮಹಾರಾಷ್ಟ್ರ), ವಿಜಯವಾಡ (ಆಂಧ್ರಪ್ರದೇಶ), ಕರೀಂನಗರ (ತೆಲಂಗಾಣ), ಪಾಲಕ್ಕಾಡ್ (ಕೇರಳ), ಕಡಲೂರು (ತಮಿಳುನಾಡು) ಗಳಲ್ಲಿ ಯುವ ಉತ್ಸವವನ್ನು ಏಕಕಾಲದಲ್ಲಿ ಆಯೋಜಿಸಲಾಗಿತ್ತು. 2023ರ ಮಾರ್ಚ್ 31ರೊಳಗೆ ಮೊದಲ ಹಂತದಲ್ಲಿ, ಯುವ ಶಕ್ತಿಯನ್ನು ಆಚರಿಸಲು ದೇಶಾದ್ಯಂತ 150 ಜಿಲ್ಲೆಗಳಲ್ಲಿ ಯುವ ಉತ್ಸವವನ್ನು ನಡೆಸಲಾಗುವುದು.

ಯುವಕರಿಂದ ತುಂಬಿದ ಸಭಾಂಗಣದಲ್ಲಿ ಮಾತನಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ಮಾತನಾಡಿ, ಯುವಕರು ಹೆಮ್ಮೆ ಪಡಬೇಕು ಎಂದು ,ಆಗ್ರಹಿಸಿದರು. "ನಾವು ವಿಶ್ವದ ಅತಿದೊಡ್ಡ ಯುವ ಶಕ್ತಿಯಾಗಿದ್ದೇವೆ ಮತ್ತು ನಮ್ಮ ಅಪಾರ ಸಾಮರ್ಥ್ಯವನ್ನು ಸಾಧಿಸಲು ನಾವು ಶ್ರಮಿಸಬೇಕು. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಹೃದಯಕ್ಕೆ ಹತ್ತಿರವಾದ ಒಂದು ಸಾಮಾಜಿಕ ಸಮಸ್ಯೆ ಆರಿಸಿಕೊಳ್ಳಬೇಕು ಮತ್ತು ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಶ್ರಮಿಸಬೇಕೆಂದು ಅವರು ಮನವಿ ಮಾಡಿದರು. "ಯುವಕರು ನಾಳೆಯ ನಿರ್ಮಾತೃಗಳು" ಎಂದೂ ಅವರು ಹೇಳಿದರು.
 

ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಸಿರಿಧಾನ್ಯಗಳ ಪ್ರಾಮುಖ್ಯತೆ ಮತ್ತು ಸಂಭಾವ್ಯತೆಯ ಬಗ್ಗೆ ಮಾತನಾಡಿ, ಇವು ರೈತರ ಆದಾಯವನ್ನು ಹೆಚ್ಚಿಸುತ್ತವೆ, ಅದೇ ವೇಳೆ ನೀರನ್ನು ಉಳಿಸಲು ಮತ್ತು ಮಣ್ಣಿಗೆ ಫಲವತ್ತತೆ ನೀಡಲು ನಮಗೆ ಅವಕಾಶ ಕಲ್ಪಿಸುತ್ತದೆ ಎಂದರು. ಫಿಟ್ ಇಂಡಿಯಾ ಸಹ ಅವರ  ಭಾಷಣದಲ್ಲಿ ಪ್ರಸ್ತಾಪವಾಯಿತು, "ಫಿಟ್ನೆಸ್ ಕಾ ಡೋಸ್, ಆಧಾ ಘಂಟಾ ರೋಜ್" ಎಂಬ ಘೋಷಣೆಯೂ ಪ್ರತಿಧ್ವನಿಸಿತು.

 "ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ. ನಮ್ಮಲ್ಲಿ 107 ಯುನಿಕಾರ್ನ್ ಗಳಿವೆ. ಯಾವುದೇ ದೇಶದಲ್ಲಿ ಒಂದು ದಿನದಲ್ಲಿ ಗರಿಷ್ಠ ಸಂಖ್ಯೆಯ ನವೋದ್ಯಮಗಳು ತಲೆಎತ್ತುತ್ತಿರುವುದರಲ್ಲಿ ಭಾರತವೇ ಗರಿಷ್ಠವಾಗಿದೆ. ನಮ್ಮ ಆರ್ಥಿಕತೆಯು ದುರ್ಬಲ ಐದರಿಂದ (Fragile Five) ಈಗ ಅಗ್ರ ಐದರಲ್ಲಿ ಒಂದಾಗಿದೆ. ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾದಂತಹ ಮೋದಿ ಅವರ ಪ್ರಯತ್ನಗಳು ಮತ್ತು ಉಪಕ್ರಮಗಳಿಂದಾಗಿ ಇದೆಲ್ಲವೂ ಸಾಧ್ಯವಾಗಿದೆ" ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಮಳಿಗೆಗಳಿಗೆ ಕೇಂದ್ರ ಸಚಿವರು ಭೇಟಿ ನೀಡಿದರು.

*ಹಿನ್ನೆಲೆ *

ಮೊದಲ ಹಂತದಲ್ಲಿ ಯುವ ಉತ್ಸವ ಕಾರ್ಯಕ್ರಮಗಳನ್ನು ಜಿಲ್ಲೆಗಳ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದ್ದು, ಯುವ ಸ್ವಯಂಸೇವಕರು ಮತ್ತು ಎನ್.ವೈ.ಕೆ.ಎಸ್.ನೊಂದಿಗೆ ಸಂಯೋಜಿತವಾಗಿರುವ ಯೂತ್ ಕ್ಲಬ್ ನ ಸದಸ್ಯರು ಸೇರಿದಂತೆ ನೆರೆಹೊರೆಯ ಶಿಕ್ಷಣ ಸಂಸ್ಥೆಗಳಿಂದ ಸ್ಪರ್ಧಿಗಳು / ಪ್ರೇಕ್ಷಕರು ಆಗಮಿಸುತ್ತಿದ್ದಾರೆ.

ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ತನ್ನ ಪ್ರಮುಖ ಯುವ ಸಂಘಟನೆ ನೆಹರು ಯುವ ಕೇಂದ್ರ ಸಂಘಟನೆ (ಎನ್.ವೈ.ಕೆಎಸ್) ಮೂಲಕ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ "ಯುವ ಉತ್ಸವ್- ಇಂಡಿಯಾ @ 2047" ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. 2023 ರ ಮಾರ್ಚ್ ನಿಂದ ಜೂನ್ ವರೆಗೆ ನಡೆಯಲಿರುವ ಒಂದು ದಿನದ ಜಿಲ್ಲಾ ಮಟ್ಟದ ಯುವ ಉತ್ಸವದೊಂದಿಗೆ ಪ್ರಾರಂಭವಾಗುವ ಯುವ ಶಕ್ತಿಯ ಈ ಇಡೀ ಭಾರತದಾದ್ಯಂತದ ಆಚರಣೆಯು 3 ಹಂತದ ಸ್ವರೂಪವನ್ನು ಅನುಸರಿಸುತ್ತದೆ. ಕಾರ್ಯಕ್ರಮದ ಮೊದಲ ಹಂತವನ್ನು 150 ಜಿಲ್ಲೆಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ, ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ 2023ರ ಮಾರ್ಚ್ 4 ರಿಂದ 31 ರವರೆಗೆ ನಡೆಯಲಿದೆ.

ಜಿಲ್ಲಾ ಮಟ್ಟದ ವಿಜೇತರು 2023ರ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ರಾಜ್ಯ ರಾಜಧಾನಿಗಳಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಎಲ್ಲಾ ರಾಜ್ಯ ಮಟ್ಟದ ಕಾರ್ಯಕ್ರಮಗಳ ವಿಜೇತರು 2023ರ ಅಕ್ಟೋಬರ್ 3 / 4 ನೇ ವಾರದಲ್ಲಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯುವ ಉತ್ಸವದಲ್ಲಿ ಭಾಗವಹಿಸುತ್ತಾರೆ.
ಮೂರು ಹಂತಗಳಲ್ಲಿ ಯುವ ಕಲಾವಿದರು, ಬರಹಗಾರರು, ಛಾಯಾಗ್ರಾಹಕರು, ವಾಗ್ಮಿಗಳು ಸ್ಪರ್ಧಿಸಲಿದ್ದು, ಸಾಂಪ್ರದಾಯಿಕ ಕಲಾವಿದರು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಿದ್ದಾರೆ. ಯುವ ಉತ್ಸವದ ವಿಷಯ -ಪಂಚ ಪ್ರಾಣ:

1.    ವಿಕಸಿತ ಭಾರತದ ಗುರಿ,

2.    ಗುಲಾಮಗಿರಿ ಅಥವಾ ವಸಾಹತುಶಾಹಿ ಮನಃಸ್ಥಿತಿಯ ಯಾವುದೇ ಕುರುಹುಗಳನ್ನು ತೆಗೆದುಹಾಕುವುದು,

3.    ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಪಡುವುದು.

4.    ಏಕತೆ ಮತ್ತು ಏಕಮತ್ಯ, ಮತ್ತು

5.    ನಾಗರಿಕರಲ್ಲಿ ಕರ್ತವ್ಯ ಪ್ರಜ್ಞೆ.

ಯುವ ಸ್ಪರ್ಧಿಗಳು 5 ಸಂಕಲ್ಪಗಳಲ್ಲಿ (ಪಂಚ ಪ್ರಾಣ್) ಬೇರೂರಿರುವ ಅಮೃತ ಕಾಲದ ದೃಷ್ಟಿಕೋನವನ್ನು ಸಾರ್ವಜನಿಕ ಸಂವಾದದ ಕೇಂದ್ರ ಹಂತಕ್ಕೆ ತರುತ್ತಾರೆ. India@2047 ವರೆಗೆ ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಈ ಭವ್ಯ ಆಚರಣೆಗೆ ಯುವ ಶಕ್ತಿಯಿಂದ ಜನರ ಪಾಲ್ಗೊಳ್ಳುವಿಕೆ (ಯುವ ಶಕ್ತಿ ಸೆ ಜನ್ ಭಾಗೀಧಾರಿ) ಪ್ರೇರಕ ಶಕ್ತಿಯಾಗಿದೆ.
15 ರಿಂದ 29 ವರ್ಷದೊಳಗಿನ ಯುವಕರು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮಗಳು / ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಮತ್ತು ಪ್ರತಿ ಹಂತದ ವಿಜೇತರು ಮುಂದಿನ ಹಂತಕ್ಕೆ ಸಾಗುತ್ತಾರೆ.

**


(Release ID: 1904203) Visitor Counter : 128