ಆಯುಷ್

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ʻಸಾಂಪ್ರದಾಯಿಕ ಔಷಧ ಕುರಿತ ಮೊದಲ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನ ಮೇಳʼ ಉದ್ಘಾಟಿಸಿದ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ 


ʻವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರʼವು ಸದಸ್ಯ ರಾಷ್ಟ್ರಗಳಿಗೆ ಆ ದೇಶಗಳಲ್ಲಿ ಸಾಂಪ್ರದಾಯಿಕ ಔಷಧದ ಶಿಕ್ಷಣ ಮತ್ತು ಅಭ್ಯಾಸಗಳನ್ನು ಬಲಪಡಿಸಲು ಅನುವು ಮಾಡಿಕೊಡುವ ಕ್ರಮಗಳನ್ನು ಕೈಗೊಳ್ಳಲು ನೆರವಾಗುತ್ತದೆ:  ಶ್ರೀ ಸರ್ಬಾನಂದ ಸೋನೊವಾಲ್  

Posted On: 02 MAR 2023 2:55PM by PIB Bengaluru

ಕೇಂದ್ರ ಆಯುಷ್  ಹಾಗೂ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ಅವರು ಇಂದು ಗುವಾಹಟಿಯಲ್ಲಿ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಅಡಿಯಲ್ಲಿ ಚೊಚ್ಚಲ ಸಾಂಪ್ರದಾಯಿಕ ಔಷಧದ ʻಬಿ2ಬಿʼ ಜಾಗತಿಕ ಸಮ್ಮೇಳನ ಮತ್ತು ಪ್ರದರ್ಶನ ಮೇಳವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ 17 ʻಎಸ್‌ಸಿಒʼ ಸದಸ್ಯ ದೇಶಗಳು ಮತ್ತು ಪಾಲುದಾರ ದೇಶಗಳಿಂದ 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಪೈಕಿ 4 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ವರ್ಚುವಲ್‌ ಮಾದರಿಯಲ್ಲಿ ಭಾಗವಹಿಸಿದರು. ಸಾಂಪ್ರದಾಯಿಕ ಔಷಧ ಕುರಿತ ನಾಲ್ಕು ದಿನಗಳ ಪ್ರದರ್ಶನವನ್ನೂ ಶ್ರೀ ಸೋನೊವಾಲ್ ಅವರು ಇಂದು ಇದೇ ಆವರಣದಲ್ಲಿ ಉದ್ಘಾಟಿಸಿದರು. 
 
ತಮ್ಮ ಉದ್ಘಾಟನಾ ಭಾಷಣದಲ್ಲಿ, ಕೇಂದ್ರ ಸಚಿವರು, "ಜನರಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸಲು ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಯನ್ನು ಸಾಧಿಸಲು ಭಾರತವು ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಮೂಲಕ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಂಡಿದೆ. ಭಾರತದ ಬೆಂಬಲದೊಂದಿಗೆ ಜಾಮ್‌ನಗರದಲ್ಲಿ ಸ್ಥಾಪಿಸಲಾಗುತ್ತಿರುವ ʻವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರʼವು (ಡಬ್ಲ್ಯುಎಚ್ಒ-ಜಿಸಿಟಿಎಂ) ಸಾಂಪ್ರದಾಯಿಕ ಔಷಧದ ಶಿಕ್ಷಣ ಮತ್ತು ಅಭ್ಯಾಸಗಳನ್ನು ಬಲಪಡಿಸಲು ಆಯಾ ದೇಶಗಳಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲು ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡುತ್ತದೆ,ʼʼ ಎಂದು ಹೇಳಿದರು.  
 
ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಆಯುಷ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಹಾಯಕ ಸಚಿವ ಡಾ. ಮಹೇಂದ್ರಭಾಯಿ ಮುಂಜಪಾರಾ; ಮ್ಯಾನ್ಮಾರ್ ಸರಕಾರದ ಗೌರವಾನ್ವಿತ ಕೇಂದ್ರ ಆರೋಗ್ಯ ಸಚಿವ ಡಾ. ಥೆಟ್ ಖೈಂಗ್ ವಿನ್; ಮಾಲ್ಡೀವ್ಸ್ ಸರಕಾರದ ಗೌರವಾನ್ವಿತ ಸಹಾಯಕ ಆರೋಗ್ಯ ಸಚಿವ ಸಫಿಯಾ ಮೊಹಮ್ಮದ್ ಸಯೀದ್ ಹಾಗೂ ಭಾರತದ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಮತ್ತಿತರರು ಭಾಗವಹಿಸಿದ್ದರು
 
ಕೇಂದ್ರ ಆಯುಷ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಹಾಯಕ ಸಚಿವ ಡಾ.ಮಹೇಂದ್ರಭಾಯಿ ಮುಂಜಪಾರಾ ಅವರು ಮಾತನಾಡಿ, "ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಸೋವಾ-ರಿಗ್ಪಾ ಮತ್ತು ಹೋಮಿಯೋಪತಿ (ಆಯುಷ್) ಶಿಕ್ಷಣ ಮತ್ತು ಅಭ್ಯಾಸಗಳ ಗುಣಮಟ್ಟದ ಭರವಸೆಗೆ ಭಾರತ ಸಾಕಷ್ಟು ಒತ್ತು ನೀಡುತ್ತದೆ,ʼʼ ಎಂದರು.  “ಆಯುಷ್ ಉತ್ಪನ್ನಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅನೇಕ ನಿಯಂತ್ರಕ ನಿಬಂಧನೆಗಳು ಮತ್ತು ಮಾನ್ಯತೆ ಕಾರ್ಯವಿಧಾನವು ಜಾರಿಯಲ್ಲಿದೆ. ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳು ಮತ್ತು ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿಗಳನ್ನು ಸಂಯೋಜಿಸುವ ನಿಟ್ಟಿನಲ್ಲಿ ʻಸಮಗ್ರ ಔಷಧ ನೀತಿʼ ಯನ್ನು ಅಭಿವೃದ್ಧಿಪಡಿಸಲು ಭಾರತವು ಮುಂದಾಳತ್ವ ವಹಿಸಿದೆ, ಜೊತೆಗೆ ಈ ವಿಭಾಗಗಳಲ್ಲಿ ತರಬೇತಿ, ಸಂಶೋಧನೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸಿದೆ,ʼʼ ಎಂದು ಹೇಳಿದರು. 
 
ಮ್ಯಾನ್ಮಾರ್‌ನ ಆರೋಗ್ಯ ಸಚಿವ ಡಾ. ಥೆಟ್ ಖೈಂಗ್ ವಿನ್ ಅವರು ಮಾತನಾಡಿ, "ಮ್ಯಾನ್ಮಾರ್‌ನಲ್ಲಿ ಸಾಂಪ್ರದಾಯಿಕ ಔಷಧಗಳನ್ನು ಅಮೂಲ್ಯವಾದ ರಾಷ್ಟ್ರೀಯ ಪರಂಪರೆ ಎಂದು ಪರಿಗಣಿಸಲಾಗಿದ್ದು, ಅದು ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಹೆಚ್ಚುತ್ತಿರುವ ಸಾಂಪ್ರದಾಯಿಕ ಔಷಧಗಳ ಬೇಡಿಕೆಯ ಹಿನ್ನೆಲೆಯಲ್ಲಿ, ನಾವು ಪ್ರತಿಯೊಂದು ಅಂಶದಲ್ಲೂ ಸಾಂಪ್ರದಾಯಿಕ ಔಷಧಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತಿದ್ದೇವೆ,ʼʼ ಎಂದರು. 
 
ಮಾಲ್ಡೀವ್ಸ್‌ನ ಸಹಾಯಕ ಆರೋಗ್ಯ ಸಚಿವ ಸಫಿಯಾ ಮೊಹಮ್ಮದ್ ಸಯೀದ್ ಅವರು ಮಾತನಾಡಿ, ಲಕ್ಷಾಂತರ ಜನರಿಗೆ, ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿನ ಗ್ರಾಮೀಣ ಪ್ರದೇಶಗಳಿಗೆ ಸಾಂಪ್ರದಾಯಿಕ ಔಷಧಗಳು ಹೇಗೆ ಮುಖ್ಯ ಆದಾಯದ ಮೂಲವಾಗಿದೆ ಎಂಬುದರ ಬಗ್ಗೆ ಹೇಳಿದರು. ಉದ್ಯಮಕ್ಕೆ ಸಹಾಯ ಮಾಡಲು ಪ್ರಸ್ತುತ ನಮ್ಮಲ್ಲಿ ಕಾನೂನು ಚೌಕಟ್ಟು ಮತ್ತು ಮಾರ್ಗಸೂಚಿಗಳಿಲ್ಲದ, ಕಾರಣ ಉತ್ತಮ ಕಾರ್ಯವಿಧಾನಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು. 
 
ಭಾರತ ಸೇರಿದಂತೆ 17 ದೇಶಗಳ 150 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಇದರಲ್ಲಿ ಆರೋಗ್ಯ ಸಚಿವರು, ಅಧಿಕೃತ ಪ್ರತಿನಿಧಿಗಳು ಹಾಗೂ ʻಎಸ್‌ಸಿಒʼ ಮತ್ತು ಪಾಲುದಾರ ರಾಷ್ಟ್ರಗಳ ವಿದೇಶಿ ಖರೀದಿದಾರರಂತಹ ಉನ್ನತ ಮಟ್ಟದ ಪ್ರತಿನಿಧಿಗಳು ಸೇರಿದ್ದಾರೆ. 13 ದೇಶಗಳ ಒಟ್ಟು 75 ವಿದೇಶಿ ಅಧಿಕಾರಿಗಳು ಮತ್ತು ವ್ಯಾಪಾರ ಪ್ರತಿನಿಧಿಗಳು ಭೌತಿಕ ವಿಧಾನದಲ್ಲಿ ಭಾಗವಹಿಸುತ್ತಿದ್ದಾರೆ. ಚೀನಾ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನದ ಅಧಿಕೃತ ಪ್ರತಿನಿಧಿಗಳು ವರ್ಚುವಲ್ ಮೂಲಕ ಪಾಲ್ಗೊಳ್ಳುತ್ತಿದ್ದಾರೆ. 
 
ಎರಡು ದಿನಗಳ ಈ ಸಮ್ಮೇಳನವು ʻಎಸ್‌ಸಿಒʼ ಮತ್ತು ಪಾಲುದಾರ ರಾಷ್ಟ್ರಗಳಿಂದ ʻಸಾಂಪ್ರದಾಯಿಕ ಔಷಧ ಉತ್ಪನ್ನಗಳʼ ನಿಯಂತ್ರಕ ನಿಯಮಗಳು ಹಾಗೂ ಅಭ್ಯಾಸಗಳ  ಕುರಿತಾದ ಚರ್ಚೆಗಳು ಮತ್ತು ಪ್ರಸ್ತುತಿಗಳಿಗೆ ಸಾಕ್ಷಿಯಾಗಲಿದೆ. ʻಫಾರ್ಮಾಕೊಪಿಯಾʼ, ಗುಣಮಟ್ಟ ಭರವಸೆ, ಸಂಶೋಧನೆ, ಗಿಡಮೂಲಿಕೆ ಸಾರಗಳು, ನ್ಯೂಟ್ರಾಸ್ಯುಟಿಕಲ್ಸ್ ಇತ್ಯಾದಿಗಳ ಬಗ್ಗೆ ಉತ್ಪಾದಕರು ಮತ್ತು ಪೂರೈಕೆದಾರರಿಂದ ವಿವರವಾದ ಪ್ರಸ್ತುತಿ ಮತ್ತು ಚರ್ಚೆಗಳು ಇರಲಿವೆ. ಇವುಗಳಲ್ಲಿ ಸಾಂಪ್ರದಾಯಿಕ ಔಷಧವನ್ನು ಉತ್ತೇಜಿಸಲು ಸರಕಾರದ ಮಧ್ಯಸ್ಥಿಕೆಗಳ ಬಗ್ಗೆಯೂ ಚರ್ಚೆಗಳು ನಡೆಯಲಿವೆ. 'ನಿಮ್ಮ ಖರೀದಿದಾರರನ್ನು ತಿಳಿದುಕೊಳ್ಳಿ' ಮತ್ತು 'ಬಿ2ಬಿʼ ಸಭೆಗಳು ಮುಂತಾದ ಪ್ರಮುಖ ಅಧಿವೇಶನಗಳನ್ನು ಸಹ ಯೋಜಿಸಲಾಗಿದೆ. ನಿರ್ದಿಷ್ಟ ಉತ್ಪನ್ನವಾರು ರಫ್ತು-ಆಮದು ಅವಕಾಶಗಳ ಬಗ್ಗೆ ಚರ್ಚಿಸುವುದು ಹಾಗೂ ʻಎಸ್‌ಸಿಒʼ ದೇಶಗಳ ವ್ಯಾಪ್ತಿಯಲ್ಲಿ ವಿಸ್ತೃತ ಮಾರುಕಟ್ಟೆ ಪ್ರವೇಶದೊಂದಿಗೆ ಆರ್ಥಿಕ ಪಾಲುದಾರಿಕೆಗೆ ಅನುವು ಮಾಡಿಕೊಡುವುದು ಈ ಮಹತ್ವದ ಅಧಿವೇಶನಗಳ ಉದ್ದೇಶವಾಗಿದೆ. 
 
ಸಾಂಪ್ರದಾಯಿಕ ಔಷಧ ಕುರಿತ ನಾಲ್ಕು ದಿನಗಳ ಪ್ರದರ್ಶನ ಮೇಳವನ್ನೂ ಸಹ ಉದ್ಘಾಟಿಸಲಾಯಿತು. ʻಆಯುಷ್ʼ ಉದ್ಯಮ ಮತ್ತು ವಿದೇಶಿ ಸಾಂಪ್ರದಾಯಿಕ ಔಷಧ ಕೈಗಾರಿಕೆಗಳು / ರಫ್ತುದಾರರು / ಆಮದುದಾರರು ಸಹ ಮೇಳದಲ್ಲಿ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ಮೇಳವು ಸಾಂಪ್ರದಾಯಿಕ ಔಷಧದಲ್ಲಿ ವ್ಯಾಪಾರ ಅವಕಾಶಗಳನ್ನು ತೆರೆಯುವ ಗುರಿಯನ್ನು ಹೊಂದಿದೆ. ಆಯುಷ್ ಸಚಿವಾಲಯ ಸಂಸ್ಥೆಗಳು / ಮಂಡಳಿಗಳು ತಮ್ಮ ಸಾಧನೆಗಳನ್ನು ಪ್ರದರ್ಶಿಸಲು ಈ ಮೇಳದಲ್ಲಿ ಮಳಿಗೆಗಳನ್ನು ತೆರೆದಿವೆ. 


** 



(Release ID: 1903820) Visitor Counter : 96