ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉತ್ತರ ಪ್ರದೇಶ ಉದ್ಯೋಗ ಮೇಳ ಉದ್ದೇಶಿಸಿ  ಪ್ರಧಾನಿ ಭಾಷಣ


"ಇಂದಿನ ನೇಮಕಾತಿಯು 9 ಸಾವಿರ ಕುಟುಂಬಗಳಿಗೆ ಸಂತೋಷ ತರಲಿದೆ ಮತ್ತು ಉತ್ತರ ಪ್ರದೇಶದಲ್ಲಿ ಭದ್ರತೆಯ ಭಾವವನ್ನು ಹೆಚ್ಚಿಸುತ್ತದೆ"

"ಭದ್ರತೆ ಮತ್ತು ಉದ್ಯೋಗ ಇವೆರಡರ ಸಂಯೋಜಿತ ಶಕ್ತಿಯು ಉತ್ತರ ಪ್ರದೇಶದ ಆರ್ಥಿಕತೆಗೆ ಹೊಸ ಉತ್ತೇಜನ ನೀಡಿದೆ"

"2017 ರಿಂದ ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯಲ್ಲಿ 1.5 ಲಕ್ಷಕ್ಕೂ ಅಧಿಕ ಹೊಸ ನೇಮಕಾತಿಗಳು ನಡೆದಿದ್ದು, ಉದ್ಯೋಗ ಮತ್ತು ಭದ್ರತೆ ಎರಡೂ ಸುಧಾರಿಸಿವೆ"

"ನೀವು ಪೊಲೀಸ್‌ ಸೇವೆಗೆ ಬಂದಾಗ, ನಿಮ್ಮ ಕೈಗೆ 'ದಂಡ' ಸಿಗುತ್ತದೆ, ಆದರೆ ದೇವರು ನಿಮಗೆ ಹೃದಯವನ್ನೂ ಕೊಟ್ಟಿದ್ದಾನೆ. ನೀವು ಸಂವೇದನಾಶೀಲರಾಗಿರಬೇಕು ಮತ್ತು ವ್ಯವಸ್ಥೆಯನ್ನು ಸಂವೇದನಾಶೀಲಗೊಳಿಸಬೇಕು" 

"ನೀವು ಜನರ ಸೇವೆ ಮತ್ತು ಶಕ್ತಿ ಎರಡರ ಪ್ರತಿಬಿಂಬವಾಗಬಹುದು"

Posted On: 26 FEB 2023 12:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶ ಸರ್ಕಾರದ ʻಉದ್ಯೋಗ ಮೇಳʼವನ್ನುದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯ ಸಬ್‌ ಇನ್ಸ್‌ಪೆಕ್ಟರ್‌, ನಾಗರಿಕ ಪೊಲೀಸ್ ಇಲಾಖೆಯಲ್ಲಿ ತತ್ಸಮಾನ ಹುದ್ದೆಗಳು, ʻಪ್ಲಾಟೂನ್ ಕಮಾಂಡರ್‌ಗಳುʼ ಹಾಗೂ ಅಗ್ನಿಶಾಮಕ ಇಲಾಖೆಯ ದ್ವಿತೀಯ ಅಧಿಕಾರಿಗಳ ಹುದ್ದೆಗಳಿಗೆ ನೇರ ನೇಮಕಾತಿಗೊಂಡವರಿಗೆ ನೇಮಕಾತಿ ಪತ್ರಗಳನ್ನು ಮೇಳದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪ್ರತಿ ವಾರ ಉದ್ಯೋಗ ಮೇಳವನ್ನುದ್ದೇಶಿಸಿ ಮಾತನಾಡುವ ಅವಕಾಶ ತಮಗೆ ದೊರೆತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಉದ್ಯೋಗ ಮೇಳಗಳಿಂದಾಗಿ ಸರಕಾರಿ ವ್ಯವಸ್ಥೆಯಲ್ಲಿ ಹೊಸ ಚಿಂತನೆ ಮತ್ತು ದಕ್ಷತೆಯನ್ನು ತರಬಲ್ಲ ಅನೇಕ ಪ್ರತಿಭಾವಂತ ಯುವಕರನ್ನು ದೇಶವು ನಿರಂತರವಾಗಿ ಪಡೆಯುತ್ತಿದೆ ಎಂದರು.

ಇಂದು ಉತ್ತರ ಪ್ರದೇಶ ಉದ್ಯೋಗ ಮೇಳದ ವಿಶೇಷ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು 9 ಸಾವಿರ ಕುಟುಂಬಗಳಿಗೆ ಸಂತೋಷವನ್ನು ತರುತ್ತದೆ ಮತ್ತು ಹೊಸ ನೇಮಕಾತಿಗಳು ರಾಜ್ಯದಲ್ಲಿ ಪೊಲೀಸ್ ಪಡೆಯನ್ನು ಬಲಪಡಿಸುವುದರಿಂದ ಉತ್ತರ ಪ್ರದೇಶದಲ್ಲಿ ಭದ್ರತೆಯ ಭಾವನೆ ಹೆಚ್ಚಾಗುತ್ತದೆ ಎಂದರು. 2017ರಿಂದ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ 1.5 ಲಕ್ಷಕ್ಕೂ ಅಧಿಕ ಹೊಸ ನೇಮಕಾತಿಗಳು ನಡೆದಿದ್ದು, ಪ್ರಸ್ತುತ ಆಡಳಿತದಲ್ಲಿ ಉದ್ಯೋಗ ಮತ್ತು ಭದ್ರತೆ ಎರಡೂ ಸುಧಾರಿಸಿವೆ ಎಂದು ಪ್ರಧಾನಿ ಹೇಳಿದರು.

ಉತ್ತರ ಪ್ರದೇಶವು ಇಂದು ತನ್ನ ಕಾನೂನು ಸುವ್ಯವಸ್ಥೆ ಮತ್ತು ಅಭಿವೃದ್ಧಿಯ ದೃಷ್ಟಿಕೋನಕ್ಕಾಗಿ ಗುರುತಿಸಲ್ಪಟ್ಟಿದೆ. ಹಿಂದೆ ಇದ್ದ ಮಾಫಿಯಾ ಮತ್ತು ಹದಗೆಟ್ಟ ಕಾನೂನು-ಸುವ್ಯವಸ್ಥೆಯ ಹಣೆಪಟ್ಟಿಗಳಿಂದ ರಾಜ್ಯವು ದೂರ ಸರಿದಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇದು ಉದ್ಯೋಗ, ವ್ಯವಹಾರ ಮತ್ತು ಹೂಡಿಕೆಯ ಹೊಸ ಅವಕಾಶಗಳಿಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅವಳಿ ಎಂಜಿನ್ ಸರಕಾರದ ಪ್ರಯತ್ನಗಳ ಬಗ್ಗೆ ವಿಶೇಷವಾಗಿ ಹೇಳಿದ ಪ್ರಧಾನಮಂತ್ರಿಯವರು, ಹೊಸ ವಿಮಾನ ನಿಲ್ದಾಣಗಳು, ವಿಶೇಷ ಸರಕು-ಸಾಗಣೆ ಕಾರಿಡಾರ್, ಹೊಸ ರಕ್ಷಣಾ ಕಾರಿಡಾರ್, ಹೊಸ ಮೊಬೈಲ್ ಉತ್ಪಾದನಾ ಘಟಕಗಳು, ಆಧುನಿಕ ಜಲಮಾರ್ಗಗಳು, ಅಭೂತಪೂರ್ವ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾದ ಹೊಸ ಮೂಲಸೌಕರ್ಯಗಳನ್ನು ಪಟ್ಟಿ ಮಾಡಿದರು. ಉತ್ತರ ಪ್ರದೇಶವು ಹೆಚ್ಚಿನ ಸಂಖ್ಯೆಯ ಎಕ್ಸ್‌ಪ್ರೆಸ್ ವೇಗಳನ್ನು ಹೊಂದಿದೆ ಮತ್ತು ರಾಜ್ಯದಲ್ಲಿ ನಿರಂತರವಾಗಿ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಇವುಗಳು ಉದ್ಯೋಗ ಸೃಷ್ಟಿಗೆ ಕಾರಣವಾಗುವುದಲ್ಲದೆ, ರಾಜ್ಯಗಳಲ್ಲಿ ಹೆಚ್ಚಿನ ಯೋಜನೆಗಳಿಗೂ ದಾರಿ ಮಾಡಿಕೊಡುತ್ತಿವೆ. ರಾಜ್ಯವು ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಸಹ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಕಂಡು ಬಂದ ಉತ್ಸಾಹಭರಿತ ಪ್ರತಿಕ್ರಿಯೆ ಮತ್ತು ಅದರಿಂದ ರಾಜ್ಯದಲ್ಲಿ ಉದ್ಯೋಗವನ್ನು ಹೇಗೆ ಹೆಚ್ಚಾಗಲಿದೆ ಎಂಬುದನ್ನು ಶ್ರೀ ಮೋದಿ ವಿವರಿಸಿದರು.

"ಭದ್ರತೆ ಮತ್ತು ಉದ್ಯೋಗದ ಸಂಯೋಜಿತ ಶಕ್ತಿಯು ಉತ್ತರ ಪ್ರದೇಶದ ಆರ್ಥಿಕತೆಗೆ ಹೊಸ ಉತ್ತೇಜನವನ್ನು ನೀಡಿದೆ," ಎಂದು ಪ್ರಧಾನಿ ಹೇಳಿದರು. ʻಮುದ್ರಾʼ ಯೋಜನೆ ಅಡಿಯಲ್ಲಿ 10 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ಸಾಲ ಸೌಲಭ್ಯ, ʻಒಂದು ಜಿಲ್ಲೆ ಒಂದು ಉತ್ಪನ್ನʼ ಯೋಜನೆ, ಅಭಿವೃದ್ಧಿ ಹೊಂದುತ್ತಿರುವ ʻಎಂಎಸ್ಎಂಇʼಗಳು ಮತ್ತು ಸದೃಢ ನವೋದ್ಯಮ ಪರಿಸರ ವ್ಯವಸ್ಥೆಯ ಬಗ್ಗೆ ಅವರು ಉಲ್ಲೇಖಿಸಿದರು.

ಹೊಸದಾಗಿ ನೇಮಕಗೊಂಡವರ ಹೊಸ ಸವಾಲುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡಿದರು. ಹೊಸ ಉದ್ಯೋಗಿಗಳು ತಮ್ಮಲ್ಲಿರುವ ಕಲಿಕೆ ಅಥವಾ ವಿದ್ಯಾರ್ಥಿಯನ್ನು ಜೀವಂತವಾಗಿಡುವಂತೆ ಪ್ರಧಾನಿ ಕೋರಿದರು. ವ್ಯಕ್ತಿತ್ವ ವಿಕಸನ, ಬೆಳವಣಿಗೆ ಮತ್ತು ಜ್ಞಾನಾರ್ಜನೆಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವಂತೆ ಅವರು ಸಲಹೆ ನೀಡಿದರು.

"ನೀವು ಈ ಸೇವೆಗೆ ಬಂದಾಗ, ನೀವು ಪೊಲೀಸರಿಂದ ಕೈಗೆ 'ದಂಡ'ವನ್ನು ಪಡೆಯುತ್ತೀರಿ, ಆದರೆ ದೇವರು ನಿಮಗೆ ಹೃದಯವನ್ನೂ ಕೊಟ್ಟಿದ್ದಾನೆ. ಅದಕ್ಕಾಗಿಯೇ ನೀವು ಸಂವೇದನಾಶೀಲರಾಗಿರಬೇಕು ಮತ್ತು ವ್ಯವಸ್ಥೆಯನ್ನು ಸಂವೇದನಾಶೀಲಗೊಳಿಸಬೇಕು," ಎಂದು ಪ್ರಧಾನಿ ಹೊಸ ನೇಮಕಾತಿಗೊಂಡವರಿಗೆ ಸಲಹೆ ನೀಡಿದರು. ʻಸ್ಮಾರ್ಟ್ ಪೋಲಿಸಿಂಗ್ʼ ಅನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೈಬರ್ ಅಪರಾಧಗಳು, ವಿಧಿವಿಜ್ಞಾನ ವಿಜ್ಞಾನದಂತಹ ಆಧುನಿಕ ಕ್ಷೇತ್ರಗಳಲ್ಲಿ ತರಬೇತಿ ಹಾಗೂ ಸಂವೇದನೆಯನ್ನು ಹೆಚ್ಚಸುವ ಬಗ್ಗೆ ಅವರು ಮಾತನಾಡಿದರು.

ಹೊಸದಾಗಿ ನೇಮಕಗೊಂಡ ಉದ್ಯೋಗಿಗಳು ಭದ್ರತೆ ಜೊತೆಗೆ ಸಮಾಜಕ್ಕೆ ನಿರ್ದೇಶನ ನೀಡುವ ಜವಾಬ್ದಾರಿಯನ್ನೂ ಹೊಂದಿರುತ್ತಾರೆ ಎಂದು ಪ್ರಧಾನಿ ಒತ್ತಿ ಹೇಳಿದರು. "ನೀವು ಜನರ ಸೇವೆ ಮತ್ತು ಶಕ್ತಿ ಎರಡರ ಪ್ರತಿಬಿಂಬವಾಗಬಹುದು," ಎಂದು ಹೇಳುವ ಮೂಲಕ ಪ್ರಧಾನಿ ಮಾತು ಮುಗಿಸಿದರು.


***


(Release ID: 1902599) Visitor Counter : 155